ವಿಜಯ್ ರಾಘವೇಂದ್ರ ನಟನೆಯ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರವು, ಮಲೆನಾಡಿನ ಹಿನ್ನೆಲೆಯ ಸರಣಿ ಕೊಲೆಗಳ ಸಸ್ಪೆನ್ಸ್ ಕಥೆಯನ್ನು ಹೊಂದಿದ್ದು, ಇನ್ಸ್‌ಪೆಕ್ಟರ್ ಸೀತಾರಾಮ್ ಅವರ ಬುದ್ಧಿವಂತಿಕೆ ಮತ್ತು ತನಿಖಾ ಶೈಲಿಯನ್ನು ತೋರಿಸುತ್ತದೆ. ದೇವಿಪ್ರಸಾದ್ ಶೆಟ್ಟಿ ಅವರ ನಿರ್ದೇಶನದಲ್ಲಿ, ಚಿತ್ರವು ಪ್ರೇಕ್ಷಕರಿಗೆ ರೋಚಕ ಅನುಭವವನ್ನು ನೀಡುತ್ತದೆ. ಚಿತ್ರಕಥೆಯು ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ವಿಜಯ ರಾಘವೇಂದ್ರ ನಟಸಿರುವ ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಬಿಡುಗಡೆಯಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನೊಳಗೊಂಡ ಕಥೆಯಾಗಿದೆ.
ಮಲೆನಾಡಿನ ಆನೆಗದ್ದೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ‍್ರಕರಣಗಳ ಕುರಿತಾದ ಕಥೆ ಹೊಂದಿರುವ ಚಿತ್ರ ‘ಸೀತಾರಾಮ್ ಬಿನೋಯ್’ 2021ರಲ್ಲಿ ತೆರೆ ಕಂಡಿತ್ತು. ಅದೇ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ ಚಿತ್ರ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’. ಆದರೆ ಆ ಸಿನಿಮಾಗೂ ಈ ಕಥೆಗೂ ಸಂಬಂಧವಿಲ್ಲ. ʻಸೆಕೆಂಡ್ ಕೇಸ್ ಆಫ್ ಸೀತಾರಾಮ್, ಮೊದಲ ಭಾಗಕ್ಕಿಂತಲೂ ಹೆಚ್ಚು ರೋಚಕವಾಗಿದೆ. ಮಲೆನಾಡಿನ ಹಿನ್ನೆಲೆಯಲ್ಲಿ ನಡೆಯುವ ಸರಣಿ ಕೊಲೆಗಳ ತನಿಖೆಯನ್ನು ಇನ್ಸ್‌ಪೆಕ್ಟರ್ ಸೀತಾರಾಮ್ ಹೇಗೆ ಮಾಡುತ್ತಾರೆ ಎಂಬುದು ಸಿನಿಮಾದ ಕಥೆ.
ವಿಜಯ್ ರಾಘವೇಂದ್ರ ನಿರ್ವಹಿಸಿದ ಇನ್ಸ್‌ಪೆಕ್ಟರ್ ಸೀತಾರಾಮ್ ಪಾತ್ರದಲ್ಲಿ ಎಲ್ಲೂ ವಿಜೃಂಭಣೆಯಿಲ್ಲ, ಪ್ರಕರಣವನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ. ಯಾವುದೇ ನಾಟಕೀಯ ಶಾರ್ಟ್‌ಕಟ್‌ಗಳಿಲ್ಲ, ಆನೆಗದ್ದೆ ಸಮೀಪದ ಊರಿನ ವ್ಯಕ್ತಿಯ ಭೀಕರ ಕೊಲೆಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಕೊಲೆಗಾರ ಆತನಿಗೆ 55 ಬಾರಿ ಇರಿದು ಕೊಂದಿರುತ್ತಾನೆ. ನಂತರ ಸರಣಿ ಕೊಲೆಗಳಾಗುತ್ತವೆ.
ಈ ಕೊಲೆಗಾರ ಒಬ್ಬ ಸೈಕೋಪಾತ್ ಇರಬಹುದೆಂದು ಎಂಬ ಅಭಿಪ್ರಾಯಕ್ಕೆ ಬರಲಾಗುತ್ತದೆ. ಸೀತಾರಾಮ್ ಗಂಭೀರವಾಗಿ ತನಿಖೆಯಲ್ಲಿ ತೊಡಗುತ್ತಾನೆ. ಪ್ರತಿ ಬಾರಿ ಕೊಲೆಗಾರನನ್ನು ಹಿಡಿದುಬಿಟ್ಟೆ ಎಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ, ಮತ್ತೊಂದು ಹೆಣ ಪತ್ತೆಯಾಗುತ್ತದೆ. ಇದರಿಂದ ಕೊಲೆಗಾರ ಯಾರಿರಬಹುದು ಎಂಬ ರಹಸ್ಯ ಮತ್ತಷ್ಟು ಜಟಿಲವಾಗುತ್ತದೆ. ಇದೇ ಈ ಸಿನಿಮಾ ಮೇಜರ್ ಪ್ಲಸ್ ಪಾಯಿಂಟ್. ಪ್ರೇಕ್ಷಕ ಊಹಿಸಿದ್ದನ್ನು ತಲೆಕೆಳಗಾಗಿಸಿ, ಮತ್ತೇನೋ ಹೊಸದೊಂದು ಟ್ವಿಸ್ಟ್ ನೀಡುವ ದೇವಿಪ್ರಸಾದ್ ಶೆಟ್ಟಿ, ಈ ಬಾರಿ ಸ್ಕ್ರಿಪ್ಟ್ ವರ್ಕ್ ಚೆನ್ನಾಗಿ ಮಾಡಿದ್ದಾರೆ.
ಚಿತ್ರಕಥೆಯು ಪೊಲೀಸ್ರ ಬದುಕಿನ ವಾಸ್ತವಗಳನ್ನು ತೆರೆದಿಡುತ್ತದೆ. ಯಾವುದೇ ರೀತಿಯ ಅನುಮಾನ ಸಾಕ್ಷಿಯಾಗುವುದಿಲ್ಲ. ಒಂದು ಸಣ್ಣ ರಶೀದಿ ಕೂಡ ತನಿಖೆಗಳಲ್ಲಿ ಮಹತ್ವದ್ದಾಗಿದೆ. ಮರೆತುಹೋದ ಕಾಗದದ ಚೀಟಿ ಕೂಡ ಪ್ರಮುಖ ತಿರುವು ನೀಡಬಹುದಾಗಿದೆ. ಒಬ್ಬ ಅಧಿಕಾರಿ ತನ್ನ ನೆಲೆಯನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡಿದಾಗ, ರಕ್ಷಣೆ ಎಂದರೆ ನಿಜವಾಗಿಯೂ ಏನು? ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ.
ಮಾನಸಿಕ ಅಸ್ವಸ್ಥನಾಗಿ ಬರುವ ಸಬಾಸ್ಟೀನ್ ಊರಿನಲ್ಲಿ ನಡೆಯುವ ಎಲ್ಲ ಕೊಲೆಗಳಿಗೂ ಕಾರಣವೆಂಬಂತೆ ಬಿಂಬಿಸಿ, ಆತನನ್ನು ಬಂಧಿಸಲಾಗುತ್ತದೆ. ನೋಡುಗನಿಗೆ ಆತನೇ ಕೊಲೆಗಾರ ಎನ್ನಿಸುವ ದೃಶ್ಯಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಕೆಲವೊಂದು ನೆಗೆಟಿವ್ ಅಂಶಗಳನ್ನು ಹೊರತು ಪಡಿಸಿದರೇ ಮನಸ್ಸಿಗೆ ಹಿತವಾದ ಅನುಭವ ನೀಡುವ, ಅಚ್ಚುಕಟ್ಟಾದ ಸಿನಿಮಾವಿದು. ಕಥೆಯ ಜತೆಗೆ ಮಲೆನಾಡಿನ ಊರುಗಳನ್ನು, ಅಲ್ಲಿಯ ಬದುಕನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ
ವಿಜಯ್ ರಾಘವೇಂದ್ರ ಅವರು ದಿನ ಕಳೆದಂತೆ ಪೊಲೀಸ್ ಅಧಿಕಾರಿ ಪಾತ್ರಗಳಿಗೆ ಬಹಳ ಆಪ್ತವಾಗುತ್ತಿದ್ದಾರೆ. ಇಲ್ಲಿಯೂ ಕೂಡ ಅವರು ಸೀತಾರಾಮ್ ಪಾತ್ರವನ್ನು ಜೀವಿಸಿದ್ದಾರೆ. ಪೊಲೀಸರ ಟೆನ್ಷನ್, ಮೇಲಾಧಿಕಾರಿಗಳ ಒತ್ತಡ, ಅಪರಾಧಿಯನ್ನು ಹುಡುಕಾಟದ ಶೈಲಿ ನೋಡಿದರೇ ಪೊಲೀಸ್ ಪಾತ್ರದಲ್ಲಿ ಲೀನವಾಗಿದ್ದಾರೆ ಎನಿಸುತ್ತದೆ.
ನಟ ಗೋಪಾಲ್ ಕೃಷ್ಣ ದೇಶಪಾಂಡೆ. ಸೆಬಾಸ್ಟಿಯನ್ ಪಾತ್ರವನ್ನು ನೀರು ಕುಡಿದಷ್ಟೇ ಸುಲಭವಾಗಿ ನಿಭಾಯಿಸಿದ್ದಾರೆ. ಜೊತೆಗೆ ಚಿತ್ರದಲ್ಲಿ ಬರುವ ಇನ್ನೂ ಅನೇಕ ಪಾತ್ರಗಳನ್ನು ಕಥೆಗೆ ತಕ್ಕಂತೆ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಕಲಾವಿದರು. ಸಿನಿಮಾದ ಮೊದಲಾರ್ಧಕ್ಕಿಂತ ಸೆಕೆಂಡ್ ಆಪ್ ರೋಚಕ ಎನಿಸುತ್ತದೆ. ನವನೀತ್ ಶಾಮ್ ಅಚ್ಚು ಕಟ್ಟಾದ ಹಿನ್ನೆಲೆ ಸಂಗಿತ ನೀಡಿದ್ದಾರೆ, ಮಲೆನಾಡಿನ ದೃಶ್ಯಗಳನ್ನು ಮತ್ತಷ್ಟು ಸೊಗಸಾಗಿ ತೋರಿಸಬಹುದಿತ್ತು ಎನಿಸುತ್ತದೆ.
ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ತಮ್ಮ ಹಿಂದಿನ ಎರಡು ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಈ ಬಾರಿ ಅವರ ಕೆಲಸ ಅತ್ಯುತ್ತಮ. ಒಂದು ಕ್ರೈಮ್ ಸ್ಟೋರಿಯಲ್ಲೂ ಅದಕ್ಕೊಂದು ಭಾವನಾತ್ಮಕ ಎಳೆ ಜೊತೆಗೆ ಫ್ಯಾಮಿಲಿ ಎಮೋಷನ್ಸ್ ಕೂಡ ಮಿಕ್ಸ್ ಮಾಡಿದ್ದಾರೆ.
ಸಿನಿಮಾ: ಸೆಕೆಂಡ್ ಕೇಸ್ ಆಫ್ ಸೀತಾರಾಮ್
ನಿರ್ದೇಶಕ: ದೇವಿಪ್ರಸಾದ್ ಶೆಟ್ಟಿ
ಕಲಾವಿದರು: ವಿಜಯ್ ರಾಘವೇಂದ್ರ, ಗೋಪಾಲ ಕೃಷ್ಣ ದೇಶಪಾಂಡೆ