'ವಲವಾರ' ಚಿತ್ರವು ಒಂದು ಕುಟುಂಬದಲ್ಲಿ ಒಂದೇ ದಿನದಲ್ಲಿ ನಡೆಯುವ ಕಥೆಯನ್ನು, ಗೌರ ಎಂಬ ಹಸುವಿನ ಸುತ್ತ ಹೆಣೆದು, ಕುಂಡೇಸಿ ಎಂಬ ಪಾತ್ರದ ಮೂಲಕ ಜೀವನಾನುಭವವನ್ನು ರೋಚಕವಾಗಿ ತೋರಿಸುತ್ತದೆ. ಈ ಚಿತ್ರವು ಎಲ್ಲಾ ವರ್ಗದವರಿಗೂ ಇಷ್ಟವಾಗುವಂತೆ, ಜೀವನದ ಸಂದೇಶವನ್ನು ನೀಡುತ್ತದೆ.
ಸುತಾನ್ ಗೌಡ ನಿರ್ದೇಶನದ ವಲವಾರ ಸಿನಿಮಾ ತೆರೆ ಕಂಡಿದೆ. ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ಚಿನ್ನಹಳ್ಳಿ ಎಂಬ ಊರು, ತನದೊಂದು ಪುಟ್ಟ ಮನೆಯಲ್ಲಿ ಕೊಂಚ ಜಮೀನಿನ ಆಸರೆಯಲ್ಲಿ ಬದುಕು ಕಟ್ಟಿಕೊಂಡಿರುವ ಬಡಕುಟುಂಬದ ಕಥೆಯನ್ನು ನಿರ್ದೇಶಕ ಸುತಾನ್ ಗೌಡ ನವೀರಾಗಿ ಹೆಣೆದುಕೊಟ್ಟಿದ್ದಾರೆ. ಮಕ್ಕಳ ಬಗ್ಗೆ ಪೋಷಕರು ತೋರುವ ತಾರತಮ್ಯ ಆದ್ಯತೆ ಮುಗ್ದ ಮನಸ್ಸುಗಳ ಮೇಲೆ ಹೆೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಿನಿಮಾದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ಭಾವನಾತ್ಮಕ ಅಂಶಗಳನ್ನೊಳಗೊಂಡ ಚಿತ್ರವಾಗಿ ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ.
ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ವಲವಾರ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಒಂದು ಕುಟುಂಬದಲ್ಲಿ ಒಂದೇ ದಿನದಲ್ಲಿ ನಡೆಯುವ ಕಥೆ ಇದಾಗಿದ್ದು ಗೌರ ಎನ್ನುವ ಹಸು ಕೂಡ ಇಲ್ಲಿ ಮುಖ್ಯ ಪಾತ್ರಧಾರಿ. "ಮಾರ್ಫ್ ಪ್ರೊಡಕ್ಷನ್ಸ್' ಅಡಿಯಲ್ಲಿ ತಯಾರಾಗಿರುವ ವಲವಾರ ಚಿತ್ರಕ್ಕೆ ಸುತನ್ ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ತಂದೆಯನ್ನೇ ಮರಕ್ಕೆ ಕಟ್ಟಿಹಾಕಿ, ಚಚ್ಚಿ ಹಾಕುವಂತಹ ಕನಸಿನ ಮೂಲಕ ಸಿನಿಮಾ ಆರಂಭವಾಗುತ್ತದೆ.
ಕುಂಡೇಸಿ (ಮಾಸ್ಟರ್ ವೇದಿಕ್ ಕುಶಾಲ್) ಹಾಗೂ ಕೊಸುಡಿ (ಮಾಸ್ಟರ್ ಶಯನ್) ಅಣ್ಣ-ತಮ್ಮಂದಿರು. ಇವರ ತಂದೆ (ಮಾಲತೇಶ್ ಎಚ್ವಿ) ಕಡು ಬಡವ. ತೋಟದ ದಾಖಲೆಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಬೇಕು ಎಂಬ ಒದ್ದಾಟ ಅವನಿಗೆ, ತಂದೆಗೆ ಚಿಕ್ಕ ಮಗ ಎಂದರೆ ಎಲ್ಲಿಲ್ಲದ ಪ್ರೀತಿ. ಕುಂಡೇಸಿ ಕಂಡರೆ ಆತನಿಗೆ ಸ್ವಲ್ಪವೂ ಇಷ್ಟ ಇಲ್ಲ. ಆದರೆ ತಾಯಿಗೆ (ಹರ್ಷಿತಾ ಗೌಡ) ತನ್ನ ಪತಿಯ ನಡವಳಿಕೆಯಿಂದ ಎಲ್ಲಿಲ್ಲದ ಕೋಪ. ತಾಯಿಗೆ ಮಕ್ಕಳು ಎರಡು ಕಣ್ಣು ಇದ್ದಂತೆ ಇವರ ಕುಂಟುಂಬದಲ್ಲಿ ಗೌರಿ (ಹಸು), ಜಡೇಜಾ (ಹುಂಜ) ಕೂಡ ಸದಸ್ಯರೇ, ಇವರ ಜೀವನದಲ್ಲಿ ಆ ಒಂದು ದಿನ ಎಲ್ಲವನ್ನೂ ಬದಲಾಯಿಸುತ್ತದೆ. ನಂತರ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ಕಥೆ.
ಕುಂಡೇಸಿ ಮನೆಯಲ್ಲಿರುವ ಗೌರ ಎಂಬ ಹಸುವಿನ ಸುತ್ತವೇ ಇಡೀ ಕಥೆ ಸಾಗುತ್ತದೆ. ಇನ್ನೇನು ಕರು ಹಾಕುವ ಸ್ಥಿತಿಯಲ್ಲಿರುವ ಗೌರ ಕಾಣೆಯಾದಾಗ, ಕುಂಡೇಸಿ ಎಷ್ಟೆಲ್ಲಾ ಪರಿಪಾಟಲು ಪಡುತ್ತಾನೆ? ಅದನ್ನು ಪುನಃ ಹೇಗೆ ಮನೆಗೆ ಕರೆತರುತ್ತಾನೆ. ಒಂದು ರಾತ್ರಿ ಕಳೆಯುವುದರೊಳಗೆ ಕುಂಡೇಸಿ ಕಾಣುವ ಜೀವನಾನುಭವನ್ನು ಬಹಳ ರೋಚಕವಾಗಿ ತೆರೆಮೇಲೆ ತೋರಿಸಿದ್ದಾರೆ.
ಇಡೀ ಸಿನಿಮಾದಲ್ಲಿ ಕುಂಡೇಸಿ ಪಾತ್ರ ನಿಮಗೆ ತುಂಬಾನೇ ಆಪ್ತವಾಗುತ್ತದೆ. ಸಿನಿಮಾ ಸಾಗಿದಂತೆ ಆತನ ನೋವು ನಿಮ್ಮದು ಎನಿಸಲು ಆರಂಭ ಆಗುತ್ತದೆ. ನೀವು ಕೂಡ ಆತನ ಪ್ರಯಾಣದಲ್ಲಿ ಸಹ ಪಯಣಿಗ ಆಗುತ್ತದೆ. "ಬೈಯ್ಯೋರು ಬದುಕೋಕೆ ಹೇಳ್ತಾರೆ... ಹೋಗಳೋರು ಹಾಳಾಗೋಕೆ ಹೇಳ್ತಾರೆ..." ಎಂಬ ಮಾತು, ಜೀವಿಸಬೇಕು, ಜೀವಿಸಿ ತೋರಿಸಬೇಕು ಎಂಬ ಸಂದೇಶ ಕೂಡ ಸಿನಿಮಾದಲ್ಲಿ ಇದೆ. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲದೆ, ಎಲ್ಲಾ ವರ್ಗದವರಿಗೂ ಇಷ್ಟ ಆಗುವ ಸಿನಿಮಾ.
ಇಡೀ ಸಿನಿಮಾದ ಜೀವಾಳವಾಗಿರುವ ಕುಂಡೇಸಿ ಪಾತ್ರವನ್ನು ವೇದಿಕ್ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತನ್ನೊಳಗಿನ ಸಿಟ್ಟು, ಆಕ್ರೋಶ, ಅಸಹಾಯಕತೆ, ದೈನ್ಯತೆ ಎಲ್ಲವನ್ನೂ ಅಭಿವ್ಯಕ್ತಿಸುತ್ತಾ ಪ್ರೇಕ್ಷಕರಿಂದ ಪೂರ್ಣಾಂಕ ಪಡೆಯುತ್ತಾರೆ. ಕುಂಡೇಶಿಯ ಪೋಷಕರಾಗಿ ಕಾಣಿಸಿಕೊಂಡಿರುವ ಮಾಲತೇಶ್ ಮತ್ತು ಹರ್ಷಿತಾ ಗೌಡ ಅಭಿನಯ ನೈಜವಾಗಿದೆ. ಕದ್ರಿ ಮಣಿಕಾಂತರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ. ಬಾಲರಾಜ್ ಗೌಡ ಛಾಯಾಗ್ರಹಣ ಅದ್ಭುತವಾಗಿದೆ.
ಸಿನಿಮಾ: ವಲವಾರ
ನಿರ್ದೇಶಕ: ಸುತಮ್ ಗೌಡ
ಪಾತ್ರವರ್ಗ: ವೇದಿಕ್ ಕೌಶಲ್, ಸಾಯನ್, ಮಾಲತೀಶ್ ಮುಂತಾದವರು