ಇತಿಹಾಸ ಹೇಗೆ ಬೇರೆಯೇ ದಾರಿ ಹಿಡಿಯಬಹುದಿತ್ತು ಎಂಬುದನ್ನು ವಿಶ್ಲೇಷಿಸುತ್ತ ಇತಿಹಾಸಕಾರರು ಆಗಾಗ ಕೆಲ ಪ್ರಶ್ನೆಗಳನ್ನು ಸೃಷ್ಟಿಸುತ್ತಾರೆ. ರಾಮಚಂದ್ರ ಗುಹಾ ಅವರು ತಮ್ಮ 'ಪೆಟ್ರಿಯಾಟ್ ಆ್ಯಂಡ್ ಪಾರ್ಟಿಸಾನ್ಸ್' ಎಂಬ ಕೃತಿಯಲ್ಲಿ- ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಇನ್ನೂ ಸ್ವಲ್ಪಕಾಲ ಬದುಕಿದ್ದರೆ ಘಟನಾವಳಿಗಳು ಹೇಗಿರುತ್ತಿದ್ದವು ಎಂಬುದರತ್ತ ಚಿತ್ತ ಹರಿಸಿದ್ದಾರೆ. 1966ರ ಜನವರಿ 11ರಂದು ಶಾಸ್ತ್ರಿಯವರು ತೀರಿಕೊಂಡರು.
ಗುಹಾ ಅವರು ದಾಖಲಿಸುವಂತೆ ಶಾಸ್ತ್ರಿಯವರು ಬದುಕಿದ್ದರೆ ಭಾರತದ ರಾಜಕೀಯ ಭವಿಷ್ಯ ಬೇರೆಯದೇ ಆಗಿರುತ್ತಿತ್ತು. 'ಇಂದಿರಾ ಗಾಂಧಿಯವರು ಲಂಡನ್‌ಗೆ ಹೋಗುತ್ತಿರಲಿಲ್ಲ. ಭಾರತದಲ್ಲೇ ಇದ್ದಿದ್ದರೂ ಅವರು ಪ್ರಧಾನಿಯಾಗುವ ಸಾಧ್ಯತೆ ಕ್ಷೀಣವಿತ್ತು. ಆಗ ಅವರ ಮಗನೂ ಪ್ರಧಾನಿಯಾಗುವ, ಪ್ರಧಾನಿ ಆಕಾಂಕ್ಷೆ ವ್ಯಕ್ತಪಡಿಸುವ ಸಂದರ್ಭವೇ ಬರುತ್ತಿರಲಿಲ್ಲ. ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ನಮ್ಮ ನಡುವೆಯೇ ಇರುತ್ತಿದ್ದರು, ಆದರೆ ಅವರ ಖಾಸಗಿ ಬದುಕಿನಲ್ಲಿ ವ್ಯಸ್ತವಾಗಿ. ಸಂಜಯ್ ಗಾಂಧಿ ವಿಫಲ ಉದ್ಯಮಿಯಾಗಿ, ರಾಜೀವ್ ಈ ಹೊತ್ತಿಗೆ ನಿವೃತ್ತ ವಾಯುಯಾನ ಪೈಲಟ್ ಆಗಿ, ಫೋಟೊಗ್ರಫಿಯಲ್ಲಿ ತಮ್ಮ ಅಭಿರುಚಿ ತೋರಿಸುತ್ತ ಇರುತ್ತಿದ್ದರೇನೊ. ಶಾಸ್ತ್ರಿಯವರು ಹೆಚ್ಚಿನ ಕಾಲ ಬದುಕಿದ್ದರೆ, ಬಹಳ ಮುಖ್ಯವಾಗಿ ಸೋನಿಯಾ ಗಾಂಧಿ ನಿಷ್ಠ ಮನೆಸೊಸೆಯಾಗಿಯೇ ಇರುತ್ತಿದ್ದರು ಹಾಗೂ ರಾಹುಲ್ ಗಾಂಧಿ ಖಾಸಗಿ ಕಂಪನಿಯೊಂದರಲ್ಲಿ ಮಧ್ಯಮ ಮಟ್ಟದಲ್ಲಿ ಮ್ಯಾನೇಜರ್ ಆಗಿ ಇರುತ್ತಿದ್ದರು.'
ಹಾಗಾಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಸೋನಿಯಾ ಗಾಂಧಿ ಅವರ ಆಪ್ತ ಯೋಜನೆಯಾದ ಆಹಾರ ಭದ್ರತೆಯ ಮಸೂದೆ ಪಾಸು ಮಾಡುವುದಕ್ಕೆ ಲೋಕಸಭೆ ತಡರಾತ್ರಿವರೆಗೆ ಕೆಲಸ ಮಾಡಿದ್ದನ್ನು ನೋಡಿದಾಗ ಇದೆಲ್ಲ ನೆನಪಾಯಿತು. ಸ್ವಾತಂತ್ರ್ಯ ದೊರೆತು 66 ವರ್ಷಗಳಲ್ಲಿ ಆರ್ಥಿಕ ರಂಗದಲ್ಲಿ ಭಾರತ ಹಲವು ತಪ್ಪುಗಳನ್ನು ಮಾಡಿದೆ. ಆದರೆ ಆಹಾರ ಭದ್ರತೆ ಕಾಯ್ದೆ ಈವರೆಗೆ ಮಾಡಿದ ಪ್ರಮಾದಗಳಲ್ಲಿ ಅತಿ ಹಿರಿದಾದ್ದು. ಶೇ.67ರಷ್ಟು ಜನಸಂಖ್ಯೆಯ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕಿಲೋ ಅಕ್ಕಿ, ಗೋಧಿ ಮತ್ತು ಧಾನ್ಯಗಳನ್ನು ಕ್ರಮವಾಗಿ 3,2,1 ರುಪಾಯಿಗಳಿಗೆ ಒದಗಿಸಲಾಗುತ್ತದೆ. ಸರ್ಕಾರಿ ಅಂದಾಜಿನ ಪ್ರಕಾರ ಆಹಾರ ಭದ್ರತೆಗೆ ಪ್ರತಿ ವರ್ಷ 1,24,723 ಕೋಟಿ ರುಪಾಯಿಗಳು ಬೇಕು. ಇದು ಒಂದು ಅಂದಾಜಷ್ಟೆ. ಕೃಷಿ ಸಚಿವಾಲಯದ 'ಕೃಷಿ ಖರ್ಚು ಮತ್ತು ಬೆಲೆಗಳ ಆಯೋಗ'ವು (ಸಿಎಸಿಪಿ) ತನ್ನ ಅಧ್ಯಯನ ವರದಿಯಲ್ಲಿ ಮೂರು ವರ್ಷಗಳ ಅವಧಿಗೆ ಆಹಾರ ಭದ್ರತೆ ಒದಗಿಸುವುದಕ್ಕೆ 6,82,163 ಕೋಟಿ ರುಪಾಯಿಗಳು ಬೇಕು ಎಂದು ಹೇಳಿದೆ. ಮೊದಲನೆಯ ವರ್ಷಕ್ಕೆ ತಗಲಬಹುದಾದ ಖರ್ಚನ್ನು ಅದು 2,41,263 ಕೋಟಿ ರುಪಾಯಿಗಳು ಎಂದು ಅಂದಾಜಿಸಿದೆ. ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ 'ಇಂಡಿಯನ್ ಎಕ್ಸ್‌ಪ್ರೆಸ್'ನ ತಮ್ಮ ಅಂಕಣದಲ್ಲಿ ಇದರ ವೆಚ್ಚವನ್ನು 3,14,000 ಕೋಟಿ ರುಪಾಯಿಗಳು ಹಾಗೂ ಜಿಡಿಪಿಯ ಶೇ.3ರಷ್ಟು ಎಂದು ಅಂದಾಜಿಸಿದ್ದಾರೆ.
ಇಂಥ ಶೇಕಡಾವಾರುಗಳಿಂದ ಸ್ಪಷ್ಟ ಚಿತ್ರಣ ಲಭಿಸದಿದ್ದರೆ ಅದನ್ನು ಸರ್ಕಾರದ ಒಟ್ಟಾರೆ ನಿರೀಕ್ಷಿತ ಆದಾಯದೊಂದಿಗೆ ತುಲನೆ ಮಾಡಬೇಕು. 2013-14ನೇ ಸಾಲಿನಲ್ಲಿ ಇದರ ಅಂದಾಜು 11,22,799 ಕೋಟಿ ರುಪಾಯಿಗಳು. ಇದರಲ್ಲಿ ಆಹಾರ ಭದ್ರತೆ 11.10 ಶೇಕಡವನ್ನು ತೆಗೆದುಕೊಳ್ಳುತ್ತದೆ. ಕೃಷಿ ಆಯೋಗದ ಅಂದಾಜಿನೊಂದಿಗೆ ಹೋಲಿಸಿದರೆ ಆಹಾರ ಭದ್ರತೆ ಶೇ. 21.5ನ್ನು ತೆಗೆದುಕೊಳ್ಳುತ್ತದೆ. ಭಲ್ಲಾ ಅವರ ಅಂದಾಜಿನಂತೆ ಈ ಪ್ರಮಾಣ ಶೇ. 28ರಷ್ಟಾಗುತ್ತದೆ.
ಈ ಮೇಲಿನ ಲೆಕ್ಕಾಚಾರಕ್ಕಿಂತಲೂ ಆಹಾರ ಭದ್ರತೆ ತುಟ್ಟಿಯಾಗುವ ಸಾಧ್ಯತೆ ಇದೆ. ಏಕೆಂದರೆ ಸರ್ಕಾರದ ಅಂದಾಜು ಆದಾಯದ ಲೆಕ್ಕಾಚಾರ ಕೈಕೊಡುವುದೇ ಹೆಚ್ಚು. ಏಕೆಂದರೆ ಈ ವರ್ಷ ಸರ್ಕಾರದ ತೆರಿಗೆ ವಸೂಲಿಯೂ ನಿರೀಕ್ಷೆಗಿಂತ ನಿಧಾನಗತಿಯಲ್ಲಿದೆ. ಅದರೆ ಸರ್ಕಾರದ ಆದಾಯದಲ್ಲಿ ದೊಡ್ಡಪಾಲನ್ನು ಆಹಾರ ಭದ್ರತೆಯೇ ನುಂಗಿಬಿಡಲಿದೆ. ಇದು ಒಂದು ಸಮಸ್ಯೆ.
ಗಮನಿಸಬೇಕಾದ ಸಂಗತಿ ಎಂದರೆ ಆಹಾರ ಭದ್ರತೆಗೆ ಸರ್ಕಾರ ಅಂದಾಜಿಸಿರುವ 1,24,723 ಕೋಟಿ ರುಪಾಯಿಗಳ ಹಣ ಆಶಾದಾಯಕತೆಯಿಂದ ಕೂಡಿದ್ದು. ಸಿಎಸಿಪಿ ಬೊಟ್ಟು ಮಾಡುವಂತೆ ಈ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಬೇಕಾಗುವ ಆಡಳಿತಾತ್ಮಕ ರೂಪುರೇಷೆಗಳಿಗೆ ತಗಲುವ ವೆಚ್ಚವನ್ನು ಇಲ್ಲಿ ಅಂದಾಜು ಮಾಡಲಾಗಿಲ್ಲ. ವಿತರಣಾ ವ್ಯವಸ್ಥೆ, ಶೈತ್ಯಾಗಾರಗಳ ನಿರ್ಮಾಣ, ದಾಸ್ತಾನು, ಸಂಸ್ಕರಣೆ, ಮಾರುಕಟ್ಟೆ ಸೌಕರ್ಯ ಇವೆಲ್ಲವಕ್ಕೂ ಹಣ ಹಾಕಬೇಕಾಗುತ್ತದೆ. ಆಹಾರ ಭದ್ರತೆ ಮುಂಬರುವ ದಿನಗಳಲ್ಲಿ ಸರ್ಕಾರವು ಹೆಚ್ಚು ವ್ಯಯಿಸುವಂತೆ ಮಾಡಲಿದ್ದು ಇದು ವಿತ್ತೀಯ ಕೊರತೆ ಹೆಚ್ಚಿಸುವ ಸಾಧ್ಯತೆಯನ್ನು ದಟ್ಟವಾಗಿಸಿದೆ. ಈ ಹೆಚ್ಚಿನ ಖರ್ಚಿಗೆ ಹಣ ಒದಗಿಸುವುದು ಎಲ್ಲಿಂದ ಎಂಬುದು ಈಗಿರುವ ಪ್ರಶ್ನೆ. ಆರ್ಥಿಕ ಸ್ಥಿತಿ ಕುಸಿದು ಕುಳಿತಿರುವ ಈ ಹಂತದಲ್ಲಿ ತೆರಿಗೆ ಹೆಚ್ಚಳವಂತೂ ಸಾಧ್ಯವಿಲ್ಲದ ಮಾತು. ಹೀಗಾಗಿ ಆಹಾರ ಭದ್ರತೆಗೆ ಸಾಲ ಪಡೆಯುವ ಮೂಲಕವಷ್ಟೇ ಸರ್ಕಾರ ಚೈತನ್ಯ ತುಂಬಬಲ್ಲದು.
ಸರ್ಕಾರ ಸಾಲ ಕೇಳಲು ಆರಂಭಿಸಿದಾಗ ಖಾಸಗಿ ವಲಯವು ಉಳಿತಾಯಕ್ಕೆ ಕೈಹಾಕಬೇಕಾಗುತ್ತದೆ. ಈ ಸ್ಪರ್ಧೆಯಲ್ಲಿ ಅವು ಉಳಿದುಕೊಳ್ಳುವುದಕ್ಕೆ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದೇ ಮಾರ್ಗ. ಅಲ್ಲಿಗೆ ದುಬಾರಿ ಸಾಲದ ಯುಗ ಮುಂದುವರಿದುಕೊಂಡಿರುತ್ತದೆ ಎಂದಾಯಿತು. ಇದು ಆರ್ಥಿಕ ಬೆಳವಣಿಗೆಗೆ ಮಾರಕ.
ಹಲವು ವಿಶ್ಲೇಷಕರು ಹೇಳಿದಂತೆ ಈ ಆಹಾರ ಭದ್ರತೆ ಎಂಬುದು ಅವಧಿಗೆ ಬದ್ಧ ಯೋಜನೆಯಲ್ಲ. ಅಂದರೆ ಮುಕ್ತಾಯದ ದಿನಾಂಕವೇನೂ ನಮೂದಾಗಿಲ್ಲ. ದೊಡ್ಡ ಪ್ರಮಾಣದ ಜನಸಂಖ್ಯೆಗೆ ಇದನ್ನು ಜಾರಿಯಲ್ಲಿಟ್ಟಾಗ ಅಗತ್ಯವಿಲ್ಲದವರೂ ಇದರ ಫಲಾನುಭವಿಗಳಾಗಿರುತ್ತಾರೆ. ಇದನ್ನು ನಿರ್ವಹಿಸುವುದಕ್ಕೆ ಸಾಲ ಎತ್ತುವುದಕ್ಕಿಂತ ಸುಲಭದ ಮಾರ್ಗ ಎಂದರೆ ಕರೆನ್ಸಿ ಮುದ್ರಿಸುವುದು. ಅರ್ಥಶಾಸ್ತ್ರ ತಿಳಿದವರಿಗೆ ಗೊತ್ತಿರುವ ಸಂಗತಿ ಎಂದರೆ ಹೀಗೆ ನೋಟುಗಳನ್ನು ಮುದ್ರಿಸುವುದು ಹಣದುಬ್ಬರಕ್ಕೆ ಕಾರಣವಾಗುತ್ತದೆ. ಅದಾಗಲೇ ಬೇರೆ ಬೇರೆ ಕಾರಣಗಳಿಂದ ಹಣದುಬ್ಬರದ ಬಿಸಿ ತಾಗುತ್ತಿದೆ. ಜತೆಗೆ ಇದೂ ಸೇರಿಕೊಳ್ಳುತ್ತದೆ. ಯಾವಾಗ ಆಹಾರ ಭದ್ರತೆಗೆ ಬೇಕಾದ ಧಾನ್ಯಗಳನ್ನು ಬೆಂಬಲ ಬೆಲೆ ಮೂಲಕ ಸರ್ಕಾರ ರೈತರಿಂದ ಖರೀದಿಸುವುದು ಅನಿವಾರ್ಯವಾಗುತ್ತದೊ, ಆಗ ಆ ಬೆಳೆಗಳನ್ನು ಮಾತ್ರವೇ ಬೆಳೆಯುವ ವಾತಾವರಣ ಏರ್ಪಟ್ಟು ತರಕಾರಿ ಉತ್ಪನ್ನಗಳು ಸಿಗದಂತಾಗುತ್ತವೆ ಎಂಬ ಆತಂಕ ಸಿಎಸಿಪಿ ವರದಿಯದ್ದು. ಇದು ಆಹಾರ ಹಣದುಬ್ಬರ ಇನ್ನಷ್ಟು ಏರುವುದಕ್ಕೆ ಕಾರಣವಾಗುತ್ತದೆ.
ಯಾವ ಆಹಾರ ಭದ್ರತೆಯನ್ನು ಸರ್ಕಾರ ಕೊಡುವುದಕ್ಕೆ ಹೊರಟಿದೆಯೋ ಆ ಉದ್ದೇಶದ ಮೇಲೆಯೇ ಮರ್ಮಾಘಾತವಾಗುವ ಸಾಧ್ಯತೆ ಇಲ್ಲಿದೆ. ಭಾರತದ ನೀತಿ ನಿರೂಪಕರಿಗೆ ಸಮಸ್ಯೆಯಾಗಿರುವುದೇ ಆಹಾರ ಉತ್ಪನ್ನಗಳ ಹಣದುಬ್ಬರ. ಆಹಾರಕ್ಕೆ ಹೆಚ್ಚಿನ ಹಣ ವ್ಯಯಿಸಬೇಕಾಗಿ ಬಂದಾಗ ಜನರ ಉಳಿತಾಯ ಕಡಿಮೆಯಾಗುತ್ತದೆ. ಇತರ ವಸ್ತುಗಳು ಮತ್ತು ಸೇವೆಗಳನ್ನು ಪಡೆಯುವುದಕ್ಕೆ ಜನರ ಬಳಿ ಹಣ ಉಳಿಯುವುದಿಲ್ಲ. ಇದು ಆರ್ಥಿಕ ಬೆಳವಣಿಗೆಯನ್ನು ಇನ್ನಷ್ಟು ಕುಂಠಿತವಾಗಿಸುತ್ತದೆ.
ಆಯಾತ-ನಿರ್ಯಾತದ ಕಂದಕ ಹೆಚ್ಚುವುದಕ್ಕೂ ಇದು ಪರೋಕ್ಷವಾಗಿ ಕಾರಣವಾಗುತ್ತದೆ ಎಂಬುದನ್ನು ಐಎಮ್‌ಎಫ್ ವೆಬ್‌ಸೈಟ್‌ನಲ್ಲಿ ಅತೀಶ್ ಘೋಷ್ ಹಾಗೂ ಉಮಾ ರಾಮಕೃಷ್ಣನ್ ವಿವರಿಸುತ್ತಾರೆ. ಭಾರತದಲ್ಲಿ ಉಳಿತಾಯ ಪ್ರಮಾಣ ಕಡಿಮೆಯಾಯಿತೆಂದರೆ ಅದರರ್ಥ ವಿದೇಶಗಳಿಂದ ಹೂಡಿಕೆ ಬರಬೇಕು. ನಂತರ ಆ ಸಾಲವನ್ನು ಡಾಲರ್‌ಗಳ ಲೆಕ್ಕದಲ್ಲಿ ಹಿಂತಿರುಗಿಸಬೇಕಲ್ಲ? ರುಪಾಯಿ ಮತ್ತಷ್ಟು ಪತನ ಕಾಣುತ್ತದೆ.
ಯಾವುದೋ ಒಂದು ವರ್ಷ ಆಹಾರ ಭದ್ರತೆಗೆ ಬೇಕಾದಷ್ಟು ಧಾನ್ಯಗಳನ್ನು ದೇಶೀಯವಾಗಿ ಸಂಗ್ರಹಿಸುವುದಕ್ಕೆ ಆಗದಿದ್ದಾಗ ಅವನ್ನು ಆಮದು ಮಾಡಿಕೊಳ್ಳಬೇಕಾದ ಸ್ಥಿತಿಗೆ ಸರ್ಕಾರ ತಲುಪುತ್ತದೆ. ಅಕ್ಕಿಯನ್ನಂತೂ ಕೆಲವೇ ರಾಷ್ಟ್ರಗಳು ಬೆಳೆಯುತ್ತಿವೆ. ಗೋದಿ ಮತ್ತು ಅಕ್ಕಿಯನ್ನು ಡಾಲರ್‌ಗಳ ಲೆಕ್ಕದಲ್ಲಿ ಆಮದು ಮಾಡಿ ತರುವುದೆಂದರೆ ರುಪಾಯಿ ಇನ್ನಷ್ಟು ಬಡಪಾಯಿ ಆದಂತೆ.
ಆಹಾರ ಭದ್ರತೆಯ ಅತಿ ದುರ್ಬಲ ಆಯಾಮ ಎಂದರೆ ಇದು ಆಹಾರ ವಿತರಣೆಗೆ ಅವಲಂಬಿಸಿರುವುದು ಈಗಿನ ಸಾರ್ವಜನಿಕ ವಿತರಣೆಯ ಸೋರಿಕೆ ವ್ಯವಸ್ಥೆಯನ್ನು. ಜಗದೀಶ್ ಭಾಗ್ವತಿ ಹಾಗೂ ಅರವಿಂದ ಪನಗಾರಿಯ ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ- 'ಝಾ ಮತ್ತು ರಾಮಸ್ವಾಮಿ ಎಂಬುವವರು 2004-05ದಲ್ಲಿ ಮಾಡಿದ ಅಧ್ಯಯನದಂತೆ ಶೇ. 70ರಷ್ಟು ಬಡವರು ಧಾನ್ಯವನ್ನು ಪಡೆಯಲೇ ಇಲ್ಲ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಧಾನ್ಯ ಪಡೆದುಕೊಂಡ ಶೇ. 70 ಮಂದಿ ಬಡವರಾಗಿರಲಿಲ್ಲ. ಈ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ವಿತರಣೆಯಾದ ಪ್ರಮಾಣ ಶೇ.45ರಷ್ಟು ಮಾತ್ರ.'
ಇಷ್ಟೆಲ್ಲ ಗೋಜಲುಗಳ ನಡುವೆ, ಸೋನಿಯಾ ಗಾಂಧಿಗೆ ಈ ಬಗ್ಗೆ ನಂಬಿಕೆ ಇದೆ ಎಂಬ ಕಾರಣಕ್ಕೆ ಆಹಾರ ಭದ್ರತೆ ಮಸೂದೆ ಪಾಸಾಗಿದೆ. ಈ ಮೂಲಕ ಇಂದಿರಾ ಗಾಂಧಿಯವರ ಗರೀಬಿ ಪಟಾವೊ ದಿನಗಳಿಗೆ ಸೋನಿಯಾ ಮರಳಿದ್ದಾರೆ. ಸೋನಿಯಾ ತಮ್ಮ ಅತ್ತೆಯಿಂದ ಭಾರಿ ಪ್ರಭಾವಿತರಾಗಿರುವುದನ್ನು ಗಮನಿಸಿದರೆ ಈ ನಡೆಯೇನೂ ಅಚ್ಚರಿಯದ್ದಲ್ಲ.
ಲಾಲ್ ಬಹದ್ದೂರ್ ಶಾಸ್ತ್ರಿಯವರು ತುಸು ಹೆಚ್ಚುಕಾಲ ಬದುಕಿದ್ದರೆ ಅಂತ ಆಶಿಸುವ ಸರದಿ ನಮ್ಮದು.
- ವಿವೇಕ್ ಕೌಲ್
ಫಸ್ಟ್ ಪೋಸ್ಟ್ ಡಾಟ್ ಕಾಂ