ಅಂಕಣಗಳು

ನವ ಧಾರ್ಮಿಕ ನಾಯಕತ್ವಕ್ಕೆ ದಕ್ಕಲಿ ಪ್ರಜ್ಞಾವಂತರ ಬೆಂಬಲ

ಶ್ರೀ ನಿರ್ಮಲಾನಂದನಾಥರು ಭಾವೋದ್ವೇಗಕ್ಕೊಳಗಾಗಿದ್ದರು. ಕಣ್ಣುಗಳು ಒದ್ದೆಯಾಗಿದ್ದವು. ಆದರೂ ಕಣ್ಣಂಚಿನಿಂದ ನೀರು ಹೊರಬರಲು ಅವಕಾಶ ನೀಡುತ್ತಿರಲಿಲ್ಲ. ಆರಾಧ್ಯ ಗುರುದೈವ ಬಿಟ್ಟು ಹೋದ ಆ ಸ್ಥಾನ ಅಲಂಕರಿಸುವ ಸುಸಂದರ್ಭ ಅದಾಗಿತ್ತು. ಕಳೆದ 28 ರಂದು ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆದ ಜಗದ್ಗುರು ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮಿಗಳ ಪುಣ್ಯಾರಾಧನೆ ಮತ್ತು ಸಂತ ಸಂಗಮ ಮದ್ಯಾಹ್ನದ ವೇಳೆಗೆ ಮುಕ್ತಾಯಗೊಂಡಿತು. ವೇದಿಕೆಯಿಂದ ಸೀದಾ ದಾಸೋಹ ಭವನಕ್ಕೆ ಆಗಮಿಸಿದ ಶ್ರೀಗಳು ಸುಮಾರು 300 ಯತಿವರ್ಯರೊಂದಿಗೆ ಸಮಾನ ಪಂಕ್ತಿ ಭೋಜನದಲ್ಲಿ ಪಾಲ್ಗೊಂಡರು. ಪಕ್ಕದಲ್ಲಿ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳವರ ಉಪಸ್ಥಿತಿ ಇತ್ತು. ಹಾಗೆಯೇ ಅಷ್ಟು ಸಂಖ್ಯೆಯಲ್ಲಿ ಸೇರಿದ್ದ ಪೂಜ್ಯರುಗಳಿಗೆ ಮಠದ ಗೌರವಾರ್ಪಣೆ ಸಲ್ಲಿಸಲಾಯಿತು. ಇನ್ನು ಇಡೀ ಕ್ಷೇತ್ರವೇ ಭಕ್ತಸಾಗರದಿಂದ ತುಂಬಿತ್ತು. ಪ್ರಸಾದ ಮುಗಿದ ಮೇಲೆ ಅಲ್ಲಿಂದ ಹೊರಡಲು ಶ್ರೀ ನಿರ್ಮಲಾನಂದರ ಅನುಮತಿ ಕೋರಿದೆ. ಅದಕ್ಕವರು ಇನ್ನೂ ಸ್ವಲ್ಪ ವೇಳೆ ಇರಲು ಸೂಚಿಸಿದರು. ಸರಿ ಎಂದು ಅವರೊಟ್ಟಿಗೆ ನಡೆದೆ. ಲಿಂಗೈಕ್ಯ ಶ್ರೀ ಬಾಲಗಂಗಾಧರನಾಥ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದ ಮತ್ತು ಅಲ್ಲಿ ಗಣ್ಯರ ಭೇಟಿ ಕೊಡುತ್ತಿದ್ದ ಕೊಠಡಿಗೆ ತರಳಬಾಳು ಜಗದ್ಗುರುಗಳೊಂದಿಗೆ ನಡೆದರು. ಆದಿಚುಂಚನಗಿರಿಯ ಮೇಲಿರುವ ಕಾಲ ಭೈರವೇಶ್ವರನ ಎದುರಿಗೆ ಶ್ರೀಗಳ ವಾಸ್ತವ್ಯಕ್ಕೆ ವಿಶ್ರಾಂತಿ ಗೃಹ. ಇಲ್ಲಿ ಲಿಂಗೈಕ್ಯ ಜಗದ್ಗುರುಗಳು ಬೆಳ್ಳಿಯ ಸಿಂಹಾಸನದ ಮೇಲೆ ಪವಡಿಸುತ್ತಿದ್ದರು. ಈಗ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥಶ್ರೀಗಳೇ ಆ ಸ್ಥಾನ ಅಲಂಕರಿಸಬೇಕಿತ್ತು. ತಮ್ಮ ಗುರುವರ್ಯರು ಆಸೀನರಾಗುತ್ತಿದ್ದ ಸಿಂಹಾಸನವನ್ನೇರಲು ನಿರ್ಮಲಾನಂದನಾಥರಿಗೆ ಏನೋ ಒಂದು ಬಗೆಯ ಹಿಂಜರಿಕೆ. ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಿಂಹಾಸನದ ಪಕ್ಕದ ಸಾಮಾನ್ಯ ಕುರ್ಚಿಯಲ್ಲಿ ಕುಳಿತಿದ್ದ ಶ್ರೀ ನಿರ್ಮಲಾನಂದನಾಥ ಶ್ರೀಗಳನ್ನು ಕೈಹಿಡಿದು ಸಿಂಹಾಸನದ ಮೇಲೆ ಕೂರಿಸಿದರು. ಆ ಸಂದರ್ಭ ಶ್ರೀ ನಿರ್ಮಲಾನಂದರು ಭಾವಪರವಶರಾದರು. ತಕ್ಷಣವೇ ತರಳಬಾಳು ಜಗದ್ಗುರುಗಳು ಅವರ ಕೈ ಹಿಡಿದು ಗುರುಗಳ ಆಶೀರ್ವಾದ, ನಮ್ಮೆಲ್ಲರ ಸಹಕಾರ, ಸಮಾಜದ ಬೆಂಬಲವಿದೆ ಎನ್ನುವ ಧೈರ್ಯದ ಮಾತುಗಳನ್ನು ಹೇಳಿ ಆಶೀರ್ವದಿಸಿದರು. ಮಠದ ಟ್ರಸ್ಟಿಗಳೊಬ್ಬರು ನೀವು ಈ ಪೀಠದ ಮೇಲೆ ಕೂರುವುದನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ ಎಂದರು. ಅದು ನನಗೂ ಕೂಡಾ ಅಮೂಲ್ಯ ಘಳಿಗೆ. ಗೃಹಮಂತ್ರಿಗಳಾದ ಅಶೋಕ್, ಸಂಸದರಾದ ಚೆಲುವರಾಯಸ್ವಾಮಿ ಇನ್ನಿತರರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.
ತಮ್ಮ ಪರಮಾರಾಧ್ಯ ಗುರುಗಳಾಗಿದ್ದ ಡಾ.ಶ್ರೀ ಬಾಲಗಂಗಾಧರನಾಥ ಶ್ರೀಗಳು ಇವರ ಮೇಲೆ ಬಹುದೊಡ್ಡ ಸಮಾಜ ಮತ್ತು ದೇಶದ ಪ್ರಭಾವಿ ಸಂಸ್ಥಾನವೊಂದನ್ನು ಮುನ್ನಡೆಸುವ ಜವಾಬ್ದಾರಿ ಹೊರಿಸಿದ್ದಾರೆ. ಸುಮಾರು 40 ವರ್ಷಗಳ ಕಾಲ ಹಿರಿಯ ಶ್ರೀಗಳು ನಿರ್ವಹಿಸಿದ ಈ ಹೊರೆ ಅಷ್ಟೇ ಸಮರ್ಥವಾಗಿ ನಿರ್ವಹಿಸಬಲ್ಲೆನೇ ಎನ್ನುವ ಆತಂಕ ಕಾಡಿದಂತಿತ್ತು. ಆದರೆ ನಾನು ಬಲ್ಲಂತೆ ಅಂತಹ ಅದ್ಭುತ ಬುದ್ದಿಶಕ್ತಿ, ತಾಳ್ಮೆ ಎಲ್ಲವೂ ಶ್ರೀ ನಿರ್ಮಲಾನಂದರಿಗೆ ಉಂಟು. ಅವರೆಂದೂ ಅಧಿಕಾರ, ಸ್ಥಾನಗಳನ್ನು ಕನಸಿನಲ್ಲಿಯೂ ನಿರೀಕ್ಷಿಸಿದವರಲ್ಲ. ಗುರುಗಳೇ ತನ್ನೆಲ್ಲಾ ಸರ್ವಸ್ವ ಎಂದುಕೊಂಡವರು. ಮಾತೃ ಹೃದಯಿ ಗುರುಗಳು ತಮ್ಮ ಪರಮ ಶಿಷ್ಯರಲ್ಲಿ ಕಂಡ ಅದಮ್ಯ ಚೇತನವನ್ನು ಗುರುತಿಸಿ, ಮಹಾಸಂಸ್ಥಾನ ಮುನ್ನಡೆಸುವ ಕುರುಹುಗಳನ್ನು ಕಂಡಿದ್ದರು. ಹಾಗಾಗಿಯೇ ಕಳೆದೆರಡು ವರ್ಷಗಳ ಹಿಂದೆ ಶ್ರೀ ನಿರ್ಮಲಾನಂದನಾಥ ಶ್ರೀಗಳನ್ನು ಕಾರ್ಯದರ್ಶಿಗಳನ್ನಾಗಿ ಮಾಡಿ ಆದೇಶ ಹೊರಡಿಸಿದರು. ಅಲ್ಲಿಯವರೆಗೂ ಎಲ್ಲಾ ಶಿಷ್ಯರಲ್ಲೊಬ್ಬರಾಗಿದ್ದು ಕಾರ್ಯದರ್ಶಿಗಳಾಗಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದರು.
ಕಾವಿಯೊಳಗಣ ಸಂಶೋಧನಾ ವಿಜ್ಞಾನಿ: ಪೀಠಾರೋಹಣದ ಸುತ್ತಲಿನ ಸಂಭ್ರಮದ ಘಳಿಗೆ ಸಾಕ್ಷಿಯಾಗಿದ್ದ ನನಗೆ ಶ್ರೀ ನಿರ್ಮಲಾನಂದನಾಥ ಶ್ರೀಗಳ ಭೇಟಿಯ ಆರಂಭಿಕ ದಿನಗಳು ನೆನಪಾಗುತ್ತಿವೆ. ಸುಮಾರು ಆರು ವರ್ಷಗಳ ಹಿಂದೆ 2007 ಮಾರ್ಚ್ ಕೊನೆಯವಾರ ಇರಬಹುದು. ಆ ವರ್ಷ ಡಾ.ಬಾಲಗಂಗಾಧರನಾಥ ಶ್ರೀಗಳು ಶ್ರೀಮಠದ ಶಾಖಾ ಮಠಗಳು ಸೇರಿದಂತೆ ಹಿಂದುಳಿದ ವರ್ಗದ ಮಠಾಧಿಪತಿಗಳನ್ನೊಳಗೊಂಡು ಅಮೆರಿಕ ಮತ್ತು ಯುರೋಪ್ ದೇಶಗಳ ಪ್ರವಾಸಕ್ಕೆ ಕಳುಹಿಸಲು ಯೋಜಿಸಿದ್ದರು. ಸುಮಾರು 30 ಜನ ಸ್ವಾಮೀಜಿಗಳ ಆ ಗುಂಪಿನಲ್ಲಿ ನಾನೂ ಕೂಡಾ ಒಬ್ಬ ಸದಸ್ಯ. ಆದಿ ಚುಂಚನಗಿರಿ ಶ್ರೀಗಳು ಭಾರತದಲ್ಲಿ ಎಲ್ಲಿಯೇ ಪ್ರವಾಸ ಕಾರ್ಯಕ್ರಮ ನಡೆದರೂ ಅಲ್ಲಿ ನನ್ನ ಹೆಸರು ಸೇರ್ಪಡೆ ಮಾಡುತ್ತಿದ್ದರು. ಇದು ನನ್ನ ಭಾಗ್ಯವೇ ಸರಿ.
ಹೀಗೆ ಹೊರಡಬೇಕಿದ್ದ ಪ್ರವಾಸದ ತಂಡಕ್ಕೆ ಶ್ರೀ ನಿರ್ಮಲಾನಂದ ಶ್ರೀಗಳವರದೇ ಉಸ್ತುವಾರಿ. ಚೆನ್ನೈಗೆ ವೀಸಾ ಪಡೆಯಲು ಹೋದಾಗಿನ ಒಂದು ಸಂದರ್ಭ ನೆನಪಾಗುತ್ತದೆ. ಚೆನ್ನೈ ಮಧ್ಯಭಾಗದಲ್ಲಿರುವ ಅಮೆರಿಕ ಎಂಬೆಸಿಯಲ್ಲಿ ಎಲ್ಲಾ ಸ್ವಾಮೀಜಿಗಳು ಕ್ಯೂ ನಿಂತಿದ್ದೆವು. ನಮ್ಮೆಲ್ಲರ ಮುಂದೆ ಸ್ಪಷ್ಟವಾಗಿ ಇಂಗ್ಲಿಷ್ ಬಲ್ಲ ಶ್ರೀ ನಿರ್ಮಲಾನಂದನಾಥರು, ಅವರ ಹಿಂದೆಯೇ ನಾನು, ನನ್ನ ಹಿಂದೆ ಶ್ರೀ ಪುಣ್ಯಾನಂದಾಪುರಿ ಶ್ರೀಗಳು ನಿಂತಿದ್ದರು. ಎಂಬೆಸಿ ಅಧಿಕಾರಿಗಳು ನಿರ್ಮಲಾನಂದನಾಥ ಶ್ರೀಗಳ ಸಂದರ್ಶಿಸುವಾಗ ಬಯೋಡಾಟ ನೋಡಿದರು. ಅವರ ಸಂದರ್ಶನ ಮುಗಿಯುತ್ತಲೇ ಅಕ್ಕಪಕ್ಕದಲ್ಲಿದ್ದ ಅಧಿಕಾರಿಗಳನ್ನು ಕರೆದು ಇವರನ್ನು ತೋರಿಸಿ ಆಶ್ಚರ್ಯ ಚಕಿತರಾಗಿ ಚರ್ಚಿಸುತ್ತಿದ್ದರು. ಬಯೋಡಾಟ ನೋಡಿ ಚರ್ಚಿಸುವುದಾದರೂ ಏನಿರಬಹುದು ಎನ್ನುವ ಕುತೂಹಲ ನಮಗೆ. ನಿರ್ಮಲಾನಂದ ನಾಥ ಶ್ರೀಗಳು ಚೆನ್ನೈನ ಐಐಟಿ ಕಾಲೇಜಿನಲ್ಲಿ ಎಂ.ಟೆಕ್ ಪದವಿ ಪಡೆದು ಭಾರತ ಸರ್ಕಾರದ ಸಂಶೋಧನಾ ಕೇಂದ್ರಕ್ಕೆ ಸಂಶೋಧನಾ ವಿಜ್ಞಾನಿಯಾಗಿ ಪುಣೆಯಲ್ಲಿ ಆಯ್ಕೆಯಾಗಿದ್ದುದೇ ಚರ್ಚೆಗೆ ಗ್ರಾಸವಾಗಿತ್ತು ಎಂಬ ವಿಷಯ ತಿಳಿದುಬಂತು. ಇಂತಹ ಉನ್ನತ ವ್ಯಾಸಂಗ ಮಾಡಿದ ವ್ಯಕ್ತಿಯೊಬ್ಬರು ಸನ್ಯಾಸ ಸ್ವೀಕರಿಸಿದ್ದಾರೆಂಬುದು ಅಲ್ಲಿನ ಅಧಿಕಾರಿಗಳ ಹುಬ್ಬೇರಲು ಕಾರಣವಾಗಿತ್ತು. ಪಾಲಿಟೆಕ್ನಿಕ್ ಡಿಪ್ಲಮೋ ವಿಭಾಗದಲ್ಲಿ 7 ನೇ ರ್ಯಾಂಕ್ ಪಡೆದ ವಿದ್ಯಾರ್ಥಿಯಾಗಿದ್ದರೂ ಎಂದಿಗೂ ಸಹಾ ಅಂತರ ಕಾಪಾಡಿದವರಲ್ಲ. ನಮ್ಮ ಗುರುಪೀಠದ ಅನೇಕ ಕಾರ್ಯಕ್ರಮಗಳಿಗೆ ಗುರುಗಳೊಂದಿಗೆ ಅವರೇ ಆಗಮಿಸಿದ್ದಾರೆ. ಗುರುಗಳ ಅನಾರೋಗ್ಯದ ಸಂದರ್ಭಗಳಲ್ಲೂ ಶ್ರೀ ನಿರ್ಮಲಾನಂದನಾಥರೇ ಆಗಮಿಸುತ್ತಿದ್ದರು. ಹೀಗೆ ಶ್ರೀ ಆದಿ ಚುಂಚನಗಿರಿ ಮಠದ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಂತಹ ಒಬ್ಬ ಮೇರು ವ್ಯಕ್ತಿತ್ವದ ಸರಳ ಸಜ್ಜನಿಕೆಯ ಶ್ರೀ ನಿರ್ಮಲಾನಂದನಾಥರು, ಶ್ರೀ ಬಾಲಗಂಗಾಧರನಾಥರ ಕೃಪೆಗೊಳಗಾಗಿ ನಾಡಿನ ಅತ್ಯಂತ ಪ್ರಭಾವಿ ಧಾರ್ಮಿಕ ಕ್ಷೇತ್ರವಾದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ 72 ನೇ ಪೀಠಾಧ್ಯಕ್ಷರಾಗಿ ನೇತೃತ್ವ ವಹಿಸಿಕೊಂಡಿದ್ದಾರೆ. ಅವರ ಧಾರ್ಮಿಕ ನಾಯಕತ್ವ ಎಲ್ಲರಿಗೂ ಲೇಸನ್ನೇ ತರಲಿದೆ ಎನ್ನುವ ಅದಮ್ಯ ವಿಶ್ವಾಸ ನನ್ನದು. ಅವರಿಗೆ ಬಸವಾದಿ ಪ್ರಮಥರ, ನಾಡಿನ ಪ್ರಜ್ಞಾವಂತರ ಬೆಂಬಲ ಒತ್ತಾಸೆ ಇರಲಿ.

- ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ
anisikeprabha@gmail.com


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ebola ಭೀತಿ: ಏರ್ ಲೈನ್ ಗಳಿಗೆ ಡಿಜಿಸಿಎ SOP ಬಿಡುಗಡೆ

ಭಾರತ ಇರಾನ್ ನ IRGC ಯನ್ನು ಉಗ್ರ ಸಂಘಟನೆಯೆಂದು ಘೋಷಿಸಲಿ: ಇಸ್ರೇಲ್ ಒತ್ತಾಯ

ಟ್ರಂಪ್ ಭಾರತವನ್ನ ನರಕದ ಕೂಪ ಅಂದಿದ್ರಲ್ಲಾ ಆ ಬಗ್ಗೆ ಏನ್ ಹೇಳ್ತಿರಾ?; ಪತ್ರಕರ್ತನ ಪ್ರಶ್ನೆಗೆ ರುಬಿಯೊ ಗಲಿಬಿಲಿ!

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಗುಲ್ಮಾರ್ಗ್: ಕೈಕೊಟ್ಟ ವಿಶ್ವದ 2ನೇ ಅತಿ ಎತ್ತರದ ಕೇಬಲ್ ಕಾರ್; ಆಕಾಶದಲ್ಲೇ ಸಿಲುಕಿದ 300 ಪ್ರವಾಸಿಗರು! Video ನೋಡಿ

SCROLL FOR NEXT