

ಗುಲ್ಮಾರ್ಗ್: ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಲ್ಲಿರುವ ವಿಶ್ವದ 2ನೇ ಅತಿ ಎತ್ತರದ ಗೊಂಡೊಲಾ ಕೇಬಲ್ ಕಾರ್ ಸೇವೆಯಲ್ಲಿ ಸೋಮವಾರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸುಮಾರು 300 ಪ್ರವಾಸಿಗರು ಆಕಾಶದಲ್ಲಿಯೇ ಸಿಲುಕಿದ್ದರು.
ಗೊಂಡೋಲಾದ ಸ್ಕೀ ರೆಸಾರ್ಟ್‌ನ ಕೇಬಲ್ ಕಾರ್ ವ್ಯವಸ್ಥೆಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ನಂತರ, ಪೊಲೀಸರು, ಸೇನೆ ಮತ್ತು ಎಸ್‌ಡಿಆರ್‌ಎಫ್ ತಂಡ ಜಂಟಿಯಾಗಿ ಸುಮಾರು 8 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲಾ ಪ್ರವಾಸಿಗರನ್ನು ರಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿಬಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಲ್ಮಾರ್ಗ್ ಗೊಂಡೋಲಾ ಯೋಜನೆಯ 65 ಕೇಬಲ್ ಕಾರುಗಳು ವ್ಯವಸ್ಥೆಯಲ್ಲಿ ಅಡಚಣೆ ಉಂಟಾಗಿ ಇಂದು ಮಧ್ಯಾಹ್ನ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ನಂತರ ಅವುಗಳನ್ನು ಆಕಾಶದಲ್ಲಿಯೇ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಠಾತ್ ನಿಲುಗಡೆಯು ಪ್ರವಾಸಿಗರಲ್ಲಿ ಭೀತಿಯನ್ನು ಉಂಟುಮಾಡಿತು. ಅವರಲ್ಲಿ ಅನೇಕರು ಮಕ್ಕಳಿರುವ ಕುಟುಂಬಗಳು, ವೃದ್ಧ ಪ್ರವಾಸಿಗರು ಮತ್ತು ಎತ್ತರದ ರಕ್ಷಣಾ ಪರಿಸ್ಥಿತಿಗಳ ಪರಿಚಯವಿಲ್ಲದ ಪ್ರವಾಸಿಗರಿದ್ದರು.
ಆಕಾಶದಲ್ಲಿ ಪ್ರವಾಸಿಗರುವ ಸಿಲುಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಆತಂಕಕ್ಕೊಳಗಾದ ಪ್ರಯಾಣಿಕರು ದೀರ್ಘಕಾಲದವರೆಗೆ ಕ್ಯಾಬಿನ್‌ಗಳ ಒಳಗೆ ಸಿಲುಕಿಕೊಂಡಿರುವುದನ್ನು ನೋಡಬಹುದು.
8 ಗಂಟೆ ಕಾರ್ಯಾಚರಣೆ
ಮಾಹಿತಿ ಪಡೆದ ತಕ್ಷಣ ಪೊಲೀಸ್, ಸಿಆರ್‌ಪಿಎಫ್, ಬಿಎಸ್‌ಎಫ್, ಸೇನೆ, ಎಸ್‌ಡಿಆರ್‌ಎಫ್ ಮತ್ತು ಪೋನಿವಾಲಾಗಳು ಸೇರಿದಂತೆ ಸ್ಥಳೀಯ ಪ್ರವಾಸೋದ್ಯಮ ಪಾಲುದಾರರ ತಂಡಗಳನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಯಿತು.
ಎಂಟು ಗಂಟೆಗಳಿಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆ ಮುಂದುವರೆಯಿತು. ಈ ಸಮಯದಲ್ಲಿ ರಕ್ಷಣಾ ತಂಡಗಳು ಸಿಕ್ಕಿಬಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾದವು. ನಂತರ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಗೊಂಡೊಲಾ ಕೇಬಲ್ ಕಾರ್ ವ್ಯವಸ್ಥೆಯು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸೇನೆಗೆ ಮಾಹಿತಿ ಸಿಕ್ಕಿತು ಎಂದು ಮೇಜರ್ ಜನರಲ್ ಮನೋಜ್ ಜೋಶಿ ಅವರು ಹೇಳಿದ್ದಾರೆ.
Advertisement