ಅಂಕಣಗಳು

ಇಂಥ ತೀರ್ಪುಗಳ ಪರಾಮರ್ಶೆಗೆ ಸಮಾಜವೂ ಧ್ವನಿಗೂಡಿಸಲಿ (ಆಗೀಗ)

ಸುಪ್ರೀಂ ಕೋರ್ಟನ್ನೂ ಕೂಡ ಮನುಷ್ಯರೇ ಸ್ಥಾಪಿಸಿರುವುದರಿಂದ ಅದರಿಂದಲೂ ತಪ್ಪುಗಳಾಗುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಅದು ವಿವೇಕದ, ನಿಪುಣತೆಯ, ಸಮಗ್ರತೆಯ ಮತ್ತು ನ್ಯಾಯಪೂರ್ಣ ವ್ಯವಹಾರಗಳ ಆಗರ. ಅದು ನೀಡುವ ಆದೇಶ ನಮ್ಮ ಬದುಕಿನ ನಿಯಮಗಳಾಗಿ ಬದಲಾಗುತ್ತವೆ. ದೆಹಲಿ ಗ್ಯಾಂಗ್‌ರೇಪ್ ನಡೆಯುವುದಕ್ಕೂ ಮೂರು ದಿನ ಮುನ್ನ ಸುಪ್ರೀಂ ಕೋರ್ಟ್‌ನಿಂದ ಒಂದು ಮಹತ್ವಪೂರ್ಣ ತೀರ್ಪು ಹೊರಬಿತ್ತು.
ಸ್ವತಂತ್ರ ಕುಮಾರ್ ಮತ್ತು ಮದನ್ ಲೋಕೂರ್ ಎಂಬ ಇಬ್ಬರು ನ್ಯಾಯಾಧೀಶರು, ಸಂದೇಶ್ ಅಭಂಗ್ ಎನ್ನುವ ಯುವಕನ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗಿಳಿಸಿ ತೀರ್ಪಿತ್ತರು. ಸೆಪ್ಟೆಂಬರ್ 2007ರಂದು ಪುಣೆಯ ಮೇಲ್ವರ್ಗದ ಕಾಲೋನಿಯೊಂದಕ್ಕೆ ನುಗ್ಗಿದ ಈ ವ್ಯಕ್ತಿ 65 ವರ್ಷದ ವೃದ್ಧೆಯನ್ನು ಕೊಂದು ನಂತರ ಆಕೆಯ 25 ವರ್ಷದ ಸೊಸೆಯ ಮೇಲೆ ಅತ್ಯಾಚಾರವೆಸಗಿ, ಚಾಕುವಿನಿಂದ ಇರಿದು ಗಾಯಗೊಳಿಸಿದ್ದ.
ಈ ಅಪರಾಧ ಮತ್ತು ಆ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.
ಸಂದೇಶ್ ಅಭಂಗ್, ಆ ವೃದ್ಧೆಯನ್ನು 21 ಬಾರಿ ಚಾಕುವಿನಿಂದ ಇರಿದು ನಂತರ ಆಕೆಯ ಒಂದು ಹಸ್ತದ ನಾಲ್ಕು ಬೆರಳನ್ನು ಕತ್ತರಿಸಿದ. ನಂತರ ಗರ್ಭಿಣಿ ಯುವತಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು 19 ಬಾರಿ ಇರಿದ. ಅದೃಷ್ಟವಶಾತ್ ಆ ಯುವತಿ ಬದುಕುಳಿದಳು. ಇಷ್ಟು ಮಾಡಿದ ಮೇಲೂ ಆ ವ್ಯಕ್ತಿಗೆ ಪಶ್ಚಾತ್ತಾಪ ಕಾಡಲೇ ಇಲ್ಲ. ತಾನು ಇಬ್ಬರು ಹೆಂಗಸರನ್ನು ಭೀಕರವಾಗಿ ಕೊಂದಿದ್ದಾಗಿ, ಆ ಬಗ್ಗೆ ತನಗೊಂಚೂರು ಬೇಸರವಿಲ್ಲ ಎಂಬುದಾಗಿ ಗೆಳೆಯರೊಂದಿಗೆ ಹೇಳಿಕೊಂಡಿದ್ದ.
ದೋಷಿಗೆ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತು. ಮಾರ್ಚ್ 2011ರಂದು ಬಾಂಬೆ ಹೈಕೋರ್ಟ್ ಕೂಡ ಈ ತೀರ್ಪಿಗೆ ಸಮ್ಮತಿ ಸೂಚಿಸಿತು. 'ಈ ವ್ಯಕ್ತಿಗೆ ತಾನು ಎಸಗಿದ ಕೃತ್ಯದ ಬಗ್ಗೆ ಒಂದಿನಿತೂ ಪಶ್ಚಾತಾಪವಿಲ್ಲ, ಸುಧಾರಣೆಯಾಗುವ ಯಾವ ಕುರುಹನ್ನೂ ಈತ ತೋರಿಸುತ್ತಿಲ್ಲ, ಹಾಗಾಗೆ ಆತ ಕ್ಷಮಗೆ ಅರ್ಹನಲ್ಲ' ಎಂದಿತ್ತು ಹೈಕೋರ್ಟ್.
ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಂದೇಶ್ ಅಭಂಗ್,  ಒಂದು ಮದ್ಯಾಹ್ನ 'ಸಾಹಿಬ್ ನೆ ಭೇಜಾ ಹೈ'(ಸಾಹೇಬರು ಕಳಿಸಿದ್ದಾರೆ) ಎಂದು ಹೇಳಿ ಆ ಮನೆಗೆ ಹೊಕ್ಕ. ಆ ವೃದ್ಧೆ ಹಾಕಿಕೊಂಡಿರುವ ಬಳೆಗಳು ಬಂಗಾರದ್ದಲ್ಲವೆಂದು ತಿಳಿದು, ಆಕೆಯ ಬೆರಳುಗಳನ್ನೇ ತುಂಡು ಮಾಡಿದ. ಆ ಗರ್ಭಿಣಿ ಯುವತಿ, ಮನೆಯಲ್ಲಿರುವ ಆಭರಣಗಳನ್ನೆಲ್ಲ ಆತನಿಗೆ ಕೊಡಲು ಮುಂದಾದರೆ, ಆಕೆಯ ಮೇಲೆ ಅತ್ಯಾಚಾರವೆಸಗಿ ನಂತರ ಆಕೆಯನ್ನು ಇರಿಯತೊಡಗಿದ. ತನ್ನ ಮಗುವಿನ ರಕ್ಷಣೆಗಾಗಿ ಆಕೆ ಎಲ್ಲಾ ಇರಿತಗಳನ್ನು ಬೆನ್ನಿಗೇ ತೆಗೆದುಕೊಂಡಳು. ನಂತರ ಸತ್ತಂತೆ ನಟಿಸಿ ಆತನಿಂದ ಬಚಾವಾದಳು.
ಇಬ್ಬರೂ ಸತ್ತರು ಎಂದುಕೊಂಡ ಸಂದೇಶ್, ಚಾಕುವಿಗಂಟಿದ ರಕ್ತದ ಕಲೆಯನ್ನೆಲ್ಲ ತೊಳೆದು, ಅಪಾರ್ಟ್‌ಮೆಂಟ್‌ನ ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿ ಏನೂ ಆಗೇ ಇಲ್ಲವೇನೋ ಎನ್ನುವ ರೀತಿಯಲ್ಲಿ ನಡೆದುಕೊಂಡು ಹೋದ. ಮೂರು ತಿಂಗಳು ತುರ್ತು ನಿಗಾಘಟಕದಲ್ಲಿದ್ದ ನಂತರ ಆ ಯುವತಿ ಚೇತರಿಸಿಕೊಂಡಳು.
ಇಷ್ಟೊಂದು ವಿವರವಾಗಿ ಈ ಘಟನೆಯ ಕುರಿತು ಏಕೆ ಹೇಳುತ್ತಿದ್ದೇನೆಂದರೆ, ಸಂದೇಶ್‌ನ ಶಿಕ್ಷೆಯನ್ನು ಜೀವಾವಧಿಗೆ ಇಳಿಸುವ ಮುನ್ನ ಸುಪ್ರೀಂ ಕೋರ್ಟ್‌ನ ಎದುರು ಈ ವಿವರಗಳೇ ಇದ್ದವು. ಆದರೆ ಇದನ್ನೆಲ್ಲ ಅರಿತ ಮೇಲೆ ಅವರು ನೀಡಿದ ತೀರ್ಪು ಹೇಗಿತ್ತು ಎನ್ನುವುದನ್ನು ನೋಡಿ! 'ಇದೊಂದು ಹೇಯ ಮತ್ತು ಅಮಾನವೀಯ ಅಪರಾಧ' ಎಂದ ಸ್ವತಂತ್ರ ಕುಮಾರ್ ಮತ್ತು ಮದನ್ ಲೋಕೂರ್ ನಂತರ, 'ಸಂದೇಶ್ ಮದ್ಯಪಾನ ಮಾಡಿದ್ದರಿಂದ ತಾನೇನು ಮಾಡುತ್ತಿದ್ದೇನೆ ಎನ್ನುವುದರ ಅರಿವು ಆತನಿಗಿರಲಿಲ್ಲ. ಒಂದು ವೇಳೆ ಸಾಯಿಸುವುದೇ ಆತನ ಉದ್ದೇಶವಾಗಿದ್ದರೆ, ದೇಹದ ಯಾವುದಾದರೂ ಪ್ರಮುಖ ಅಂಗಕ್ಕೆ ಹಾನಿ ಮಾಡಿ ಅವರನ್ನು ಕೊಂದು ಬಿಡಬಹುದಾಗಿತ್ತು. ಅಷ್ಟೊಂದು ಬಾರಿ ಚಾಕುವಿನಿಂದ ಇರಿದದ್ದು ಮತ್ತು ಬೆರಳುಗಳನ್ನು ತುಂಡು ಮಾಡಿದ್ದು 'ಅಸ್ವಾಭಾವಿಕ ವರ್ತನೆ'ಯನ್ನು ತೋರಿಸುತ್ತದೆ. ಅಪರಾಧದ ಸಮಯದಲ್ಲಿ ಸಹಜ ವರ್ತನೆಯ ಅನುಪಸ್ಥಿತಿಯನ್ನೂ ತೀರ್ಪು ನೀಡುವ ಮುನ್ನ ಪರಿಗಣಿಸಬೇಕಾಗುತ್ತದೆ. ಹಾಗಾಗಿ ಆತನಿಗೆ ಮರಣ ದಂಡನೆ ವಿಧಿಸುವುದು ಸೂಕ್ತವಲ್ಲ' ಎಂದು ತೀರ್ಪಿತ್ತರು. ಸಂದೇಶ್ ಈಗ ಬದುಕುಳಿದಿದ್ದಾನೆ. ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಅಪರಾಧಗಳು ಪ್ರತಿ ನಿತ್ಯ, ಪ್ರತಿ ಸ್ಥಳಗಳಲ್ಲಿಯೂ ನಡೆಯುತ್ತವೆ. ಹೆಂಡತಿಯನ್ನು, ಪೋಷಕರನ್ನು, ಮಕ್ಕಳನ್ನು, ಸಹೋದರರನ್ನು, ಸಂಬಂಧಿಕರನ್ನು, ಅಪರಿಚಿತರನ್ನು ಕೊಂದ ಸುದ್ದಿ ಸಾಮಾನ್ಯವೆನ್ನಿಸುವಷ್ಟು ನಮ್ಮ ಕಿವಿಗೆ ಬೀಳುತ್ತವೆ. ಇಂತಹ ಹೀನ ಕೃತ್ಯಕ್ಕಿಳಿಯುವ ವ್ಯಕ್ತಿಗಳು ಅಪರೂಪಕ್ಕೆಂಬಂತೆ ತಮ್ಮ ಮನೆಯಲ್ಲೇ ಕಳ್ಳತನ ಮಾಡುತ್ತಾರೆ. ಅಪರಾಧಗಳು ಅಚಾನಕ್ಕಾಗಿ ನಡೆಯಬಹುದು ಅಥವಾ ಒಂದು ಉದ್ದೇಶದಿಂದ ನಡೆದಿರಬಹುದು(ವ್ಯಕ್ತಿಯ ಮನಸ್ಸಿನಲ್ಲಿ ರೂಪುಗೊಂಡು). ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳು ಮದ್ಯಪಾನ ಮಾಡಿರುತ್ತಾರೆ ಎನ್ನುವುದೂ ಸತ್ಯ.
ಆದರೆ ಮದ್ಯವೇ ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಅಸ್ವಾಭಾವಿಕಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಜಡ್ಜ್‌ಗಳು ಭಾವಿಸಿದಂತಿದೆ. ಅಂದರೆ, ಕುಡಿಯದಿದ್ದರೆ ಅವರುಗಳು ಸ್ವಲ್ಪ ವಿವೇಚನೆಯಿಂದ ವರ್ತಿಸುತ್ತಿದ್ದರು ಎಂಬಂತೆ!
ಆದರೆ ಒಂದು ವಿಷಯ ನ್ಯಾಯಾಧೀಶರುಗಳಿಗೆ ತಿಳಿದಂತಿಲ್ಲ. ಮದ್ಯ ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಬದಲಾಯಿಸಿಬಿಡುವುದಿಲ್ಲ. ಆಲ್ಕೋಹಾಲ್ ಸೇವನೆಗೂ ಮುನ್ನವೇ ವ್ಯಕ್ತಿ ತನ್ನ ಯೋಜನೆಯನ್ನು ಸಿದ್ಧಪಡಿಸಿಟ್ಟುಕೊಂಡಿರುತ್ತಾನೆ. ಕುಡಿತದ ನಂತರ ಆತನ ಹಿಂಜರಿಕೆ ಸ್ವಲ್ಪ ದೂರವಾಗುತ್ತದಷ್ಟೆ. ಆಪ್ತಸಲಹಾಕಾರನಾಗಿ ಕೆಲಸ ಮಾಡುತ್ತಿರುವ ನನ್ನೆದುರು, ಪ್ರತಿದಿನವೂ ಇಂತಹ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ನನ್ನ ಬಳಿ ಬರುವ ಬಹುತೇಕ ಕುಟುಂಬಗಳು ತಮ್ಮ ಸಮಸ್ಯೆಗಳಿಗೆ ಮದ್ಯಪಾನ/ಡ್ರಗ್ಸ್ ಮೂಲ ಕಾರಣ ಎಂದು ಭಾವಿಸುತ್ತಾರೆ.
ಪುಣೆಯಲ್ಲಿ ನಡೆದ ಹತ್ಯೆಯಲ್ಲಿ ಮದ್ಯ ಕೂಡ ಕೊಂಚ ಮಟ್ಟಿಗೆ ಪಾತ್ರವಹಿಸಿರಬಹುದು. ಆದರೆ ಮದ್ಯವಾಗಲಿ, ಹೆರಾಯಿನ್/ಮೆರಿಜುವಾನಾದಂತಹ ಮಾದಕ ವಸ್ತುಗಳೇ ಆಗಲಿ, ಅಪರಾಧಕ್ಕೆ ಮೂಲ ಕಾರಣವಾಗಿರುವುದಿಲ್ಲ. ಅಪರಾಧ ನಡೆಸುವ ಮುನ್ನವೇ ಸಂದೇಶ್ ತನ್ನ ಯೋಜನೆ ಸಿದ್ಧಪಡಿಸಿಕೊಂಡಿದ್ದ. ಬಹುತೇಕ ಬಾರಿ ಅಪರಾಧಿಗೆ ಕೊನೆ ಕ್ಷಣದಲ್ಲಿ ಭಯ, ಒತ್ತಡ ಕಾಡುವುದಕ್ಕೆ ಶುರುವಾಗುತ್ತದೆ. ಹಾಗಾಗೇ ಕೊನೆಯ ಕ್ಷಣದಲ್ಲಿ ಒತ್ತಡದಿಂದ ಮುಕ್ತಿಪಡೆಯಲು ಸಂದೇಶ್ ಮದ್ಯದ ಮೊರೆ ಹೋಗಿರಬಹುದು.
ತಾನು ಏನು ಯೋಜಿಸಿದ್ದನೋ ಅದನ್ನೆಲ್ಲ ಕರಾರುವಕ್ಕಾಗಿ ಆತ ಮಾಡಿ ಮುಗಿಸಿದ. ಕೊನೆಗೆ ಅತ್ಯಾಚಾರವೆಸಗುವ ಮೂಲಕ ಆ ಕ್ಷಣದಲ್ಲಿ ಪ್ರಭುತ್ವ ಸಾಧಿಸಿದ.  
ಆ ಯುವತಿಯ ಮೇಲೆ ಆತ ದಾಳಿ ಮಾಡಿದ್ದು 19 ಬಾರಿ. ಅಂದರೆ ಆ ವೇಳೆಗಾಗಲೇ, ಆತನಿಗೆ ತನ್ನ ಕ್ರೌರ್ಯ ಅತಿಯಾಯಿತು ಎಂದೆನಿಸಿರಬೇಕು ಅಥವಾ ನಶೆ ಇಳಿದ ಮೇಲಾದರೂ ಆತನಿಗೆ ತನ್ನ ತಪ್ಪಿನ ಅರಿವಾಗಬೇಕಿತ್ತಲ್ಲವೇ? ಇಲ್ಲೇ ಎಲ್ಲವೂ ಸ್ಪಷ್ಟವಾಗುತ್ತದೆ. ಕುಡಿದ ನಂತರ ಸಂದೇಶ್ ಬದಲಾಗಲಿಲ್ಲ, ಆತ ಇದ್ದದ್ದೇ ಹಾಗೆ. ಆತನಲ್ಲಿ ರಾಕ್ಷಸೀ ಗುಣ ಮೊದಲಿನಿಂದಲೂ ಇತ್ತು. ಮದ್ಯ ಆತನ ಭಯವನ್ನು ತಗ್ಗಿಸಲು ಸಹಾಯ ಮಾಡಿತಷ್ಟೆ.
ಆ ಮನೆಯ ಕಾಲಿಂಗ್ ಬೆಲ್ ಒತ್ತುವಾಗಲೂ, ತಾನು ಮುಂದೆ ಏನು ಮಾಡಲಿದ್ದೇನೆ ಎನ್ನುವುದು ಆತನಿಗೆ ಗೊತ್ತಿತ್ತು. 'ಸಾಹೇಬರು ಕಳಿಸಿದ್ದಾರೆ' ಎಂದು ಹೇಳಿ ತಾನೆ ಆತ ಆ ಮನೆಗೆ ಹೊಕ್ಕದ್ದು?
ಅವು ಅರಿವಿಲ್ಲದ ವ್ಯಕ್ತಿಯ ಪದಗಳಾಗುವುದಕ್ಕೆ ಸಾಧ್ಯವೇ ಇಲ್ಲ. ತಾನು ಅಲ್ಲೇಕಿದ್ದೇನೆ ಎನ್ನುವುದು ಆತನಿಗೆ ಖಚಿತವಾಗಿ ತಿಳಿದಿತ್ತು. ಒಂದು ವೇಳೆ ಅಪರಾಧಿ, ನಿಜಕ್ಕೂ ಅಮಲಿನಿಂದ ತನ್ನಿಚ್ಛೆಗೆ ವಿರುದ್ಧವಾಗಿ ನಡೆದಿದ್ದಾನೆ ಎಂದು ಸಾಬೀತಾದರೆ ಮಾತ್ರ ಆತನಿಗೆ ರಿಯಾಯತಿ ಕೊಡಬಹುದು. ಆದರೆ ಈ ಪ್ರಕರಣದಲ್ಲಿ ಹಾಗಾಗಿರಲಿಲ್ಲ.
ಇನ್ನು ಸುಧಾರಣೆಯ ವಿಷಯಕ್ಕೆ ಬರೋಣ. 'ಸಂದೇಶ್ ಅಭಾಂಗ್‌ಗೆ ಇನ್ನೂ 23 ವರ್ಷವಾಗಿದ್ದು, ಹಿಂದೆ ಈತ ಇಂತಹ ಅಪರಾಧಗಳನ್ನೆಸಗಿದ ಉದಾಹರಣೆಗಳೂ ಇಲ್ಲ' ಎಂದು ಸುಪ್ರೀಂ ಕೋರ್ಟ್ ಜಡ್ಜ್‌ಗಳು ಹೇಳಿದ್ದಾರೆ. ಹಿಂದೆ ಅಪರಾಧವೆಸಗಿಲ್ಲ ಎನ್ನುವುದು ಈಗಿನ ಅಪರಾಧದ ತೀವ್ರತೆಯನ್ನು ಕುಗ್ಗಿಸುವ ಮಾನದಂಡವಾಗಬಾರದಲ್ಲವೇ?
ಸಂದೇಶ್ ಮುಗ್ಧ ವ್ಯಕ್ತಿ, ಮದ್ಯಪಾನದಿಂದಾಗಿ ಆತ ರಕ್ಕಸನಾಗಿ ಬದಲಾದ ಎನ್ನುವುದನ್ನು ಸಾಬೀತು ಮಾಡಲು ಸುಪ್ರಿಂಕೋರ್ಟ್ ಬಳಿ ಸಾಕ್ಷಿಯಿದೆಯೇ? ಅದೂ ಇಲ್ಲ!  ತಪ್ಪಿತಸ್ಥ ಆ ವ್ಯಕ್ತಿಯಲ್ಲ, ಬದಲಾಗಿ ಆತನೊಳಗಿದ್ದ ಮದ್ಯ ಎನ್ನುವ ತೀರ್ಪು ನಿಜಕ್ಕೂ ಆಘಾತಕಾರಿಯಾದದ್ದು.  
ಈ ತೀರ್ಪನ್ನು ಪ್ರಶ್ನಿಸಲೇಬೇಕಾದ ಅನಿವಾರ್ಯತೆ ಇಂದು ಉದ್ಭವವಾಗಿದೆ. ಆಹುತಿಯಾದವರ ಕುಟುಂಬ ಈ ಬಗ್ಗೆ ತಾನು ಹೋರಾಟ ನಡೆಸುವುದಾಗಿ ಹೇಳಿದೆ. ಅವರನ್ನು ನಾವು ಬೆಂಬಲಿಸಲೇಬೇಕು.
(ಮೂಲತಃ sify.comನಲ್ಲಿ ಪ್ರಕಟವಾದ ಲೇಖನ)

- ವಿಜಯ್ ಸಿಂಹ
anisikeprabha@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ebola ಭೀತಿ: ಏರ್ ಲೈನ್ ಗಳಿಗೆ ಡಿಜಿಸಿಎ SOP ಬಿಡುಗಡೆ

ಭಾರತ ಇರಾನ್ ನ IRGC ಯನ್ನು ಉಗ್ರ ಸಂಘಟನೆಯೆಂದು ಘೋಷಿಸಲಿ: ಇಸ್ರೇಲ್ ಒತ್ತಾಯ

ಟ್ರಂಪ್ ಭಾರತವನ್ನ ನರಕದ ಕೂಪ ಅಂದಿದ್ರಲ್ಲಾ ಆ ಬಗ್ಗೆ ಏನ್ ಹೇಳ್ತಿರಾ?; ಪತ್ರಕರ್ತನ ಪ್ರಶ್ನೆಗೆ ರುಬಿಯೊ ಗಲಿಬಿಲಿ!

CM ಬದಲಾವಣೆ ಚರ್ಚೆ ಮಧ್ಯೆ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ

ಗುಲ್ಮಾರ್ಗ್: ಕೈಕೊಟ್ಟ ವಿಶ್ವದ 2ನೇ ಅತಿ ಎತ್ತರದ ಕೇಬಲ್ ಕಾರ್; ಆಕಾಶದಲ್ಲೇ ಸಿಲುಕಿದ 300 ಪ್ರವಾಸಿಗರು! Video ನೋಡಿ

SCROLL FOR NEXT