ಅಂಕಣಗಳು

ಹತ್ತು ವರ್ಷಗಳ ಯುಪಿಎ ಝಂಡಾ, ಮಾಸಿದ ವಿತ್ತ ಅಜೆಂಡಾ

ಯುಪಿಎ ಸರ್ಕಾರ 10ನೇ ಹಾಗೂ ಕಡೆಯ ಬಜೆಟ್ಟನ್ನು ವಿತ್ತ ಸಚಿವ ಪಿ. ಚಿದಂಬರಂ ...

ಯುಪಿಎ ಸರ್ಕಾರ 10ನೇ ಹಾಗೂ ಕಡೆಯ ಬಜೆಟ್ಟನ್ನು ವಿತ್ತ ಸಚಿವ ಪಿ. ಚಿದಂಬರಂ ಸೋಮವಾರ ಮಂಡಿಸಿದ್ದಾರೆ. ಈ 10 ವರ್ಷಗಳ ಪೈಕಿ 7 ವರ್ಷ ಸ್ವತಃ ಚಿದಂಬರಂ ಅವರೇ ಈ ಮಹತ್ವದ ಇಲಾಖೆಯ ಉಸ್ತುವಾರಿ ವಹಿಸಿದ್ದರು. ಹಾಗಾಗಿ ಯುಪಿಎ ಆಡಳಿತದ ದಶಕದ ಆರ್ಥಿಕ ಗೊತ್ತುಗುರಿ, ನಿಲುವು ಮತ್ತು ಸಾಧನೆ, ವೈಫಲ್ಯಗಳೆಲ್ಲವಕ್ಕೂ ಬಹುಪಾಲು ಚಿದಂಬರಂ ಅವರೇ ಹೊಣೆ ಹೊರಬೇಕು. ಯಾವುದೇ ದೇಶದ ಇತಿಹಾಸದಲ್ಲಿ ಒಂದು ದಶಕ ಎಂದರೆ ಅದು ದೊಡ್ಡ ಅವಧಿಯೇ ಸರಿ. ಅಭಿವೃದ್ಧಿಯ ಪಥದಲ್ಲಿ ಪ್ರತಿದಿನ, ಪ್ರತಿ ಕ್ಷಣವೂ ಪ್ರಮುಖವಾಗಿರುವಾಗ 10 ವರ್ಷಗಳೆಂದರೆ ಅದು ದೇಶದ ಅಭಿವೃದ್ಧಿಯ ವಿಷಯದಲ್ಲಿ ಅತ್ಯಂತ ಮಹತ್ವಪೂರ್ಣವಾದ ಕಾಲಘಟ್ಟವೇ ಸರಿ. 2004ರ ಮಹಾ ಚುನಾವಣೆಯಲ್ಲಿ ಇಂಡಿಯಾ ಶೈನಿಂಗ್-ಭಾರತ ಪ್ರಕಾಶಿಸುತ್ತಿದೆ ಎಂದು ಎನ್‌ಡಿಎ ಸರ್ಕಾರ ತನ್ನ ಸುತ್ತ ತಾನೇ ನಿರ್ಮಿಸಿಕೊಂಡಿದ್ದ ಪ್ರಭಾವಳಿಯನ್ನು ಭೇದಿಸಿ ಕಾಂಗ್ರೆಸ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅತಿ ಉದ್ಧದ ಬಾಲಂಗೋಚಿಯ ನೆರವಿನಿಂದ ಸರ್ಕಾರ ರಚಿಸಿದ ಸಂದರ್ಭದಲ್ಲಿ ಆರ್ಥಿಕ ಉದಾರೀಕರಣ ಜಾರಿಗೆ ಬಂದು ಡಜನ್ ವರ್ಷವಾಗಿತ್ತು. ಅದರ ಮಧ್ಯೆ ಒಂದೆರಡು ವರ್ಷ ರಾಜಕೀಯ ಅಸ್ಥಿರತೆಯೂ ಉಂಟಾಗಿತ್ತು. ಆದರೂ ಉದಾರೀಕರಣದ ಹಾದಿಯಲ್ಲಿ ಇಡಬೇಕಾದ ಹೆಜ್ಜೆಗಳ ವಿಷಯದಲ್ಲಿ ಯಾವುದೇ ಸರ್ಕಾರ ಗೊಂದಲಕ್ಕೆ ಬೀಳಲಿಲ್ಲ. ಅದೊಂದು ರೀತಿಯ ಅನಿವಾರ್ಯತೆ ಎಂದೇ ಎಲ್ಲರೂ ಒಪ್ಪಿಕೊಂಡಂತಾಗಿತ್ತು. ಅದರ ಫಲವಾಗಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಯುಪಿಎ ಮೊದಲ ಅವತಾರದ ಸರ್ಕಾರ ರಚನೆಯಾದಾಗ ಆರ್ಥಿಕ ಕೃಷಿ ಫಲಭರಿತ ಸ್ಥಿತಿಯಲ್ಲಿತ್ತು. ಯಾರು ಬೇಕಾದರೂ ಹಣ್ಣುಕೊಯ್ದು ತಿನ್ನಬಹುದಾಗಿತ್ತು. ಆದರೆ ಹಾಗೆ ತಿನ್ನುವ ಮೊದಲು ಫಲವತ್ತತೆ ಉಳಿಸಿಕೊಂಡು ಅದರಿಂದ ಇನ್ನಷ್ಟು ಹೆಚ್ಚು ಹಣ್ಣು ಬೆಳೆಸುವ ಗುರುತರ ಜವಾಬ್ದಾರಿಯೊಂದು ಅವರ ಹೆಗಲಿಗಿತ್ತು.
ಆಕ್ಸ್‌ಫರ್ಡ್, ಕೇಂಬ್ರಿಡ್ಜ್‌ನ ಶಾಲಾ ಕೊಠಡಿಗಳಲ್ಲಿ ಬೀದಿ ಬೀದಿಗಳಲ್ಲಿ, ಚಿಂತನ ಶಿಬಿರಗಳಲ್ಲಿ, ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಸೈ ಎನಿಸಿಕೊಂಡು ವಿತ್ತಶಾಸ್ತ್ರದ ಪಾಂಡಿತ್ಯ ಪಾರಂಗತರಾಗಿದ್ದ ಮನಮೋಹನ್ ಸಿಂಗ್, ಚಿದಂಬರಂ, ಅವರ ಬೆನ್ನಿಗೆ ಸಲಹೆ ನೀಡಲು ಮಾಂಟೆಕ್ ಸಿಂಗ್ ಅಹ್ಲುವಾಲಿಯಾರಂತಹ ಮೇಧಾವಿಯ ನೆರವು ಇದ್ದಾಗ ಆರ್ಥಿಕ ಸಂಕಷ್ಟ ಎಂಬ ಪದ ದೇಶದ ಅಭಿವೃದ್ಧಿಯ ಅರ್ಥಕೋಶದಿಂದಲೇ ಮಾಯವಾಗಬೇಕಾಗಿತ್ತು. ಬದುಕು ಸುಲಭವಾಗಬೇಕಿತ್ತು. ದೇಶವಾಸಿಗಳ ಮನೆ-ಮನದಲ್ಲಿ ನೆಮ್ಮದಿ ತಾಂಡವವಾಡಬೇಕಿತ್ತು. ದೇಶದ ಖಜಾನೆ ತುಂಬಿತುಳುಕಬೇಕಿತ್ತು. ಇದೇ ಯುಪಿಎ ಸರ್ಕಾರ ಟಿವಿಗಳಲ್ಲಿ ನೀಡುತ್ತಿರುವ ಜಾಹೀರಾತನ್ನು ಎಲ್ಲರೂ ಗಮನಿಸಿರಬೇಕು. ಭಾರತ ನಿರ್ಮಾಣದಡಿ ಸರ್ಕಾರ ಹೇಳಿಕೊಳ್ಳುವಂತೆ ಈ ಹತ್ತು ವರ್ಷಗಳ ಅವಧಿಯಲ್ಲಿ ಮೆಟ್ರೊ ರೈಲುಗಳು ಬಂದಿವೆ, ಎಟಿಎಂಗಳು ನಾಯಿಕೊಡೆಗಳಂತೆ ಬೆಳೆದಿವೆ, ಪಟ್ಟಣಗಳಲ್ಲೂ ಆಧುನಿಕ ವಿಮಾನ ನಿಲ್ದಾಣಗಳು ತಲೆ ಎತ್ತಿವೆ. ಆದರೂ ಚಿದಂಬರಂ ಹೇಳುತ್ತಾರೆ Let history be the judge of the last ten years!ಈಗ್ಗೆ ತಿಂಗಳ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಸಹ ತಮ್ಮ ಅಧಿಕಾರಾವಧಿಯ ಬಗ್ಗೆ ಕೇಳಿದ ಪ್ರಶ್ನೆಗೆ ಇದೇ ರೀತಿಯ ಉತ್ತರ ನೀಡಿದ್ದರು. ತೀರಾ ಮೇಲ್ನೋಟಕ್ಕೆ ನೋಡಿದರೆ ಚಿದಂಬರಂ ಹತ್ತು ವರ್ಷಗಳ ಹಿಂದೆ ಯುಪಿಎ ಮೊದಲ ಅವತಾರದ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಬಜೆಟ್ ಮಂಡಿಸಿದಾಗ ದೇಶದ ಆರ್ಥಿಕ ಬೆಳವಣಿಗೆ ದರ 6ರ ಆಸುಪಾಸಿನಲ್ಲಿತ್ತು. ವಿದೇಶಿ ಬಂಡವಾಳ ಮತ್ತು ವಿತ್ತೀಯ ಕೊರತೆ ಸಹ ಬೆರಗು ಅಥವಾ ವ್ಯಥೆ ಹುಟ್ಟಿಸದೆ ಸುಸ್ಥಿತಿಯಲ್ಲಿತ್ತು. ಹತ್ತು ವರ್ಷಗಳ ನಂತರ ಅದೇ ಚಿದಂಬರಂ ಅವರು ಯುಪಿಎ ಸರ್ಕಾರದ  ಕಡೆಯ ಬಜೆಟ್ ಮಂಡಿಸುವಾಗ ದೇಶದ ಆರ್ಥಿಕ ಬೆಳವಣಿಗೆ ದರ 4.9ಕ್ಕೆ ಇಳಿದಿದೆ. ವಿತ್ತೀಯ ಕೊರತೆ 4.6ರ ಮಟ್ಟಕ್ಕೆ ಬೆಳೆದಿದೆ. ನಿಜ, ವಿದೇಶಿ ಬಂಡವಾಳ ಹೆಚ್ಚಿದೆ ಆದರೆ ವಿಸ್ಮಯ ಅಥವಾ ಇಷ್ಟು ಸಾಕು ಎನ್ನುವ ಮಟ್ಟಕ್ಕಂತೂ ಅಲ್ಲ. ಇನ್ನು ಆಮದು ರಫ್ತು ಕೊರತೆ 45 ಸಾವಿರ ಕೋಟಿಗಳಷ್ಟಿದೆ. ವರ್ಷದ ಹಿಂದೆ ಅದು 70 ಸಾವಿರ ಕೋಟಿ ಮಟ್ಟ ಮುಟ್ಟಿತ್ತು. ಅದನ್ನು ಈ ಹಂತಕ್ಕೆ ತಹಬದಿಗೆ ತಂದಿರುವುದೇ ಚಿದಂಬರಂ ಅವರ ಹೆಗ್ಗಳಿಕೆ. ಇನ್ನು ಹಣದುಬ್ಬರ ಪ್ರಮಾಣ ಕಳೆದ ನಾಲ್ಕು ವರ್ಷಗಳಿಂದ ಗಾಳಿ ತುಂಬಿದ ಬಲೂನಿನಂತೆ ಗಗನದಲ್ಲಿ ಹಾರುತ್ತಿದೆಯೇ ಹೊರತು ಅದನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಅಭಿವೃದ್ಧಿ ದರ ಮತ್ತು ವಿತ್ತೀಯ ಕೊರತೆ ಇವೆರಡೂ ಸರಿಸಮಾನ ಮಟ್ಟಕ್ಕೆ ಬಂದ ನಿದರ್ಶನಗಳಿಲ್ಲ. ಈ ಬಾರಿ ವಿತ್ತ ಸಚಿವರು ಬಜೆಟ್ಟಿನಲ್ಲಿ ಹೇಳಿರುವುದನ್ನು ಗಮನಿಸಿದರೆ ಮತ್ತು ರಾಜ್ಯ ಸರ್ಕಾರಗಳ ಕೊರತೆಯನ್ನು ಒಟ್ಟು ಮಾಡಿ ನೋಡಿದರೆ ಈ ವಿತ್ತೀಯ ಕೊರತೆ ಒಂದು ಪೆಡಂಭೂತವಾಗಿ ಬೆಳೆದು ನಿಂತಿದೆ. ಈ ಪ್ರಮಾಣದ ಕೊರತೆಯನ್ನು ಬೆನ್ನಿಗೆ ಕಟ್ಟಿಕೊಂಡು ಯಾವ ಸರ್ಕಾರವೂ ಅಭಿವೃದ್ಧಿಯ ಗುರಿಗಳನ್ನು ನೆಟ್ಟು ಅದನ್ನು ದಾಟಿ ಹೋಗಲು ಸಾಧ್ಯವಿಲ್ಲ. ಕಾಲಿಗೆ ಮಣಭಾರದ ಮಣ್ಣಿನ ಮೂಟೆ ಕಟ್ಟಿಕೊಂಡು ಮಾರುದ್ಧದ ರೇಸನ್ನು ಎಲ್ಲರಿಗಿಂತ ಮುಂಚೆ ಓಡಿ ಗೆಲ್ಲಲು ಎಷ್ಟು ಮಾತ್ರ ಸಾಧ್ಯವೋ ಅದೇ ರೀತಿ ಭಾರೀ ಪ್ರಮಾಣದ ಕೊರತೆಯ ಭಾರ ಹೊತ್ತುಕೊಂಡು ಯಾವುದೇ ದೇಶ ಅಭಿವೃದ್ಧಿಯ ಮಾತಾಡುವುದಿರಲಿ ಅಂತಹ ಕನಸು ಕಾಣುವುದೂ ಅಸಾಧ್ಯ. ಇದು ಯುಪಿಎ ಸರ್ಕಾರದ ಮುಖಕ್ಕೆ ರಾಚುವ ಕಹಿ ಸತ್ಯ.
The best source of revenue is taxes and for that we need modern tax laws. (ತೆರಿಗೆ ಆದಾಯದ ಮೂಲ. ಆದಾಯ ಹೆಚ್ಚಿಸಲು ಆಧುನಿಕ ತೆರಿಗೆ ನಿಯಮಗಳು ಅತ್ಯಗತ್ಯ). ಚಿದಂಬರಂ ಈ ವಿಷಯ ಪ್ರಸ್ತಾಪಿಸಲು ಕಾರಣ ಎಂದು ಸರಕು ಸೇವಾ ತೆರಿಗೆ  (GST) ಹಾಗೂ ನೇರ ತೆರಿಗೆ ಸಂಹಿತೆ (DTC) ಯನ್ನು ಈವರೆಗೆ ಜಾರಿಗೆ ತರಲು ಸಾಧ್ಯವಾಗದಿರುವುದಕ್ಕೆ. ಅವೈಜ್ಞಾಕ ತೆರಿಗೆಗಳಿಂದ ತೆರಿಗೆಗಳ್ಳತನ ಹೆಚ್ಚುತ್ತದೆಯೇ ಹೊರತು ತೆರಿಗೆದಾರರ ಬಲೆಯಲ್ಲಿ ಬರುವವರ ಸಂಖ್ಯೆ ಹೆಚ್ಚುವುದಿಲ್ಲ. ಇದರ ನೇರ ಹೊಡೆತ ಆದಾಯದ ಮೇಲೆ ಬೀಳುತ್ತದೆ. ಭಾರತದ ತೆರಿಗೆ ನಿಯಮಗಳು ದಶಕಗಳಷ್ಟು ಹಳೆಯದಾಗಿದ್ದು, ಅದಕ್ಕೆ ಕಾಯಕಲ್ಪದ ಅಗತ್ಯವಿರುವ ಅಂಶ ಎಲ್ಲರಿಗೂ ತಿಳಿದ ವಿಚಾರವೆ. ಆರ್ಥಿಕ ಉದಾರೀಕರಣದ ಮೊದಲ ಕಂತಿನಲ್ಲಿ ಪರ್ಮಿಟ್ ರಾಜ್ ಕಟ್ಟಳೆಗಳಿಂದ ಔದ್ಯಮಿಕ ವಲಯಗಳನ್ನು ಮುಕ್ತಗೊಳಿಸಿ ಸಹಜ ಅಭಿವೃದ್ಧಿಗೆ ಅವುಗಳಿಗೆ ಅನುವು ಮಾಡಿಕೊಡುವುದು ಪ್ರಥಮ ಆದ್ಯತೆಯಾಗಿದ್ದರೆ ಎರಡನೇ ಕಂತಿನಲ್ಲಿ ತೆರಿಗೆ ಸುಧಾರಣೆ, ವಿದೇಶಿ ಬಂಡವಾಳಕ್ಕೆ ಪ್ರಶಸ್ತ ವಾತಾವರಣ ಕಲ್ಪಿಸುವುದು, ಜಾಗತಿಕ ಪೈಪೋಟಿಗೆ ನಮ್ಮ ಮಾರುಕಟ್ಟೆ ತೆರೆಯುವುದು ಮತ್ತು ಅದಕ್ಕೆ ನಮ್ಮ ಪೇಟೆಯನ್ನು ಅಣಿಗೊಳಿಸುವುದು ಆದ್ಯತೆಯ ವಿಷಯಗಳಾಗಿದ್ದವು. 2004ರ ವೇಳೆಗೆ ಆರ್ಥಿಕ ಉದಾರೀಕರಣದ ಮೊದಲ ಕಂತು ಯಶಸ್ವಿಯಾಗಿ ಎರಡನೇ ಕಂತಿನ ಕ್ಷಿಪ್ರ ಕ್ರಮಗಳಿಗೆ ಪೇಟೆ ಹಾತೊರೆಯುತ್ತಿತ್ತು. ಅದರಲ್ಲಿಯೂ ಮನಮೋಹನ್ ಸಿಂಗ್ ಪ್ರಧಾನಿ ಮತ್ತು ಚಿದಂಬರಂ ವಿತ್ತ ಸಚಿವ ಎಂಬುದು ತಿಳಿದ ಮೇಲಂತೂ ಪೇಟೆ ಕೇಕೆ ಹಾಕಿ ಕುಣಿಯಿತು. 1997ರಷ್ಟು ಹಿಂದೆಯೇ ಅದೂ ಸಮಾಜವಾದಿ ಚಿಂತನೆಯ ಮೂಸೆಯಿಂದಲೇ ಅಧಿಕಾರಕ್ಕೇರಿದ್ದ ತೃತೀಯ ರಂಗದ ಸರ್ಕಾರದಲ್ಲೇ ಅತ್ಯಂತ ವ್ಯಾಪಕ, ದೂರಗಾಮಿ ಚಿಂತನೆಯ, ಸುಧಾರಣಾ ಬಜೆಟ್ ಮಂಡಿಸಿ ಎಲ್ಲರಿಂದ ಅಪಾರ ಮೆಚ್ಚುಗೆ ಪಡೆದಿದ್ದ ಚಿದಂಬರಂ ಅವರಿಂದ ಯಾವುದೇ ಹಿನ್ನಡೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಅಲ್ಲದೆ ಅದು ಹಣದ ಹರಿವಿದ್ದ ಕಾಲ. ಜಾಗತಿಕ ಮಟ್ಟದಲ್ಲಿ ಉಬ್ಬರ ಇದ್ದ ಕಾಲ. ಯಾರು ಬೇಕಾದರೂ ಯಾವುದೇ ಅಪಾಯ ಮೈಮೇಲೆ ಎಳೆದುಕೊಳ್ಳದೆ ದಿಟ್ಟ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಪ್ರಶಸ್ತವಾಗಿದ್ದ ಸಮಯ. ಮೌಲ್ಯವರ್ಧಿತ ತೆರಿಗೆಯ ಒಂದು ಹಂತದ ಫಲ ಉಂಟು ನಂತರ ವ್ಯಾಪಕ ಆದಾಯಕ್ಕೆ ಅನುವು ಮಾಡಿಕೊಡಬಹುದಾದ ಸರಕು ಸೇವಾ ತೆರಿಗೆಯ ಹೊಸ ಶಕೆಯ ಉದಯಕ್ಕೆ ನಾಂದಿ ಹಾಡಲು ಯಾರೂ ಅಡ್ಡಿಯಾಗಿರಲಿಲ್ಲ. ಪ್ರಾಯಶಃ ಈ ಒಂದು ಕ್ರಮಕ್ಕೆ ಸರ್ಕಾರದ ಊರುಗೋಲಾಗಿದ್ದ ಎಡಪಕ್ಷಗಳೂ ತಂಟೆ-ತಕರಾರು ಎತ್ತುವ ಆತಂಕವೂ ಇರಲಿಲ್ಲ. ಅಧಿಕಾರ ವಹಿಸಿಕೊಂಡ ಆರಂಭದ ಎರಡು ವರ್ಷಗಳಲ್ಲಿ ಕೆಲವೊಂದು ಅಲ್ಪಸ್ವಲ್ಪದ ಮಾರ್ಪಾಡುಗಳನ್ನು ಮಾಡಿ ಎಲ್ಲರನ್ನೂ ಸಂತುಷ್ಠಿಗೊಳಿಸಿದ್ದು ಬಿಟ್ಟರೆ ಚಿದಂಬರಂ ಮತ್ತು ಅವರ ಪಟಾಲಂ ಯಾವುದೇ ದಿಟ್ಟ ಕ್ರಮಗಳಿಗೆ ಮುಂದಾಗಲಿಲ್ಲ. 2007ರ ಬಜೆಟ್‌ನಲ್ಲಿ ಸರಕು ಸೇವಾ ತೆರಿಗೆ ಬಗ್ಗೆ ಪ್ರಸ್ತಾಪಿಸಿ ಅದನ್ನು 2010ರ ವೇಳೆಗೆ ಜಾರಿಗೆ ತರುವ ಬಗ್ಗೆ ಹೇಳಿದ್ದೇ ದೊಡ್ಡ ಸುದ್ದಿಯಾಯಿತು. ಇದರ ಜೊತೆಜೊತೆಯಲ್ಲಿಯೇ ತೆರಿಗೆ ಸುಧಾರಣೆಯ ಹೊಸ ಉಪಕ್ರಮವಾಗಿ ನೇರ ತೆರಿಗೆ ಸಂಹಿತೆಯ ಮಾತಾಡಿದಾಗ ಸರ್ಕಾರ ಎರಡನೇ ಹಂತದ ಸುಧಾರಣೆಗಳ ಹಳಿಗೆ ಬರುವ ಭರವಸೆ ಇತ್ತು. ಆದರೆ 2009ರ ಚುನಾವಣೆಯ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತವರ ಸಲಹಾ ಕೂಟದ ಪಟ್ಟಿಗೆ ಮಣಿದು 60 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಹಾಗೂ ನರೇಗಾದಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ತುರ್ತು ಆದ್ಯತೆಯಾಗಿದ್ದ ಸುಧಾರಣಾ ಕ್ರಮಗಳು ಡೆಡ್‌ಲೈನ್ ತಪ್ಪುವಂತಾಯಿತು. ಇದರ ಮಧ್ಯೆ ಬಂದ ಜಾಗತಿಕ ಆರ್ಥಿಕ ಕುಸಿತ ಮತ್ತು ಅದರ ಹೊಡೆತದಿಂದ ಪೇಟೆಯನ್ನು ರಕ್ಷಿಸುವ ಸಲುವಾಗಿ ತೆಗೆದುಕೊಂಡ ನಿರ್ಧಾರಗಳು ಸರ್ಕಾರದ ಆರ್ಥಿಕ ಹೊರೆ ಹೆಚ್ಚಿಸಿತು.
2009ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲಾದರೂ ಯುಪಿಎ ಸರ್ಕಾರ ಶೀಘ್ರವಾಗಿ ಸುಧಾರಣಾ ಹಳಿಗೆ ಮರಳಬಹುದಿತ್ತು. ಆದರೆ ಆಗ ವಿತ್ತ ಮಂತ್ರಿಯಾಗಿದ್ದ ಪ್ರಣಬ್‌ಮುಖರ್ಜಿ ಉತ್ತೇಜನಾ ಕ್ರಮಗಳನ್ನು ಹಿಂಪಡೆಯಲು ಮೀನಾಮೇಷ ಎಣಿಸಿದ್ದು ಮತ್ತು ಉದ್ಯಮಿಗಳಲ್ಲಿ ಭಯ ಹುಟ್ಟಿಸುವಂತಹ ಕಾನೂನುಗಳನ್ನು ತಂದರೇ ಹೊರತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಟಿಸಿ, ಜಿಎಸ್‌ಟಿಯಂತಹ ಕಾಯಿದೆಗಳನ್ನು ಜಾರಿಗೆ ತರಲು ಮುತುವರ್ಜಿ ವಹಿಸಲೇ ಇಲ್ಲ. ಇನ್ನು ಪ್ರಣಬ್ ರಾಷ್ಟ್ರಪತಿ ಹುದ್ದೆಗೇರಿದ ನಂತರ ಮತ್ತೆ ವಿತ್ತ ಸಚಿವಾಲಯಕ್ಕೆ ಮರಳಿದ ಚಿದಂಬರಂ ಅವರ ಬಳಿ ಇಲಾಖೆಯಲ್ಲಿ ತಾವಿಲ್ಲದಿದ್ದ ಮೂರು ವರ್ಷಗಳಲ್ಲಿ ಆದ ಅವಾಂತರಗಳನ್ನು ಸರಿ ಮಾಡುವುದರಲ್ಲೇ ಸಮಯ ಕಳೆದು ಹೋಯಿತು. ಜೊತೆಗೆ ಬಯಲಿಗೆ ಬಂದ ಹಗರಣಗಳ ಸರಮಾಲೆ, ಪ್ರತಿ ಪಕ್ಷಗಳ ವಿಶ್ವಾಸ ಗಳಿಕೆಯಲ್ಲಿ ಆದ ಸೋಲು ಮತ್ತು ಸಂಸತ್ ಕಲಾಪ ನಿರ್ವಹಣೆಯಲ್ಲಿನ ವೈಫಲ್ಯ ಯಾವ ಸುಧಾರಣಾ ಕ್ರಮಗಳಿಗೂ ಆಸ್ಪದ ನೀಡಲೇ ಲ್ಲ. ಸಂಸತ್‌ನಲ್ಲಿನ ಗದ್ದಲ, ಸರ್ಕಾರದ ಗೊಂದಲಗಳಲ್ಲಿ ಬಡವಾಗಿದ್ದು ಮಾತ್ರ ದೇಶದ ಅರ್ಥ ವ್ಯವಸ್ಥೆ. ನಿಜ ಇತಿಹಾಸ ಯಾರನ್ನೂ ಬಿಡುವುದಿಲ್ಲ. ಎಲ್ಲರನ್ನೂ ಅಳೆದು ತೂಗಿ ಎಲ್ಲರಿಗೂ ಒಂದು ಸ್ಥಾನ ನೀಡುತ್ತದೆ. ಯುಪಿಎ ಆಡಳಿತದ ಹತ್ತು ವರ್ಷಗಳಲ್ಲಿ ಆದದ್ದೆಷ್ಟು ಎನ್ನುವುದಕ್ಕಿಂತ ಆಗದಿದ್ದದ್ದು ಎಷ್ಟು ಎಂಬ ಪಟ್ಟಿಯೇ ದೊಡ್ಡದಿರುವಂತಿದೆ. ಗತಿಸಿದ ಕ್ಷಣ ಮತ್ತೆ ಬಾರದು. ಹಾಗೆಯೇ ಕೈ ಚೆಲ್ಲಿದ ಅವಕಾಶವೂ ಸಹ ಮರಳದು, ಚಾಣಾಕ್ಷ ರಾಜಕಾರಣಿ ಚಿದಂಬರಂಗೆ ಇದು ತಿಳಿಯದ್ದೇನಲ್ಲ.




- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

Ganesh Chaturthi ಎಫೆಕ್ಟ್; ಮತ್ತೆ ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ, ಇಂದಿನ ದರ ಪಟ್ಟಿ ಇಂತಿದೆ!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

SCROLL FOR NEXT