2005-06ರಲ್ಲಿ ಆದ ಬೆಳವಣಿಗೆ. ಗ್ರೆಗ್ ಚಾಪೆಲ್ ಎಂಬ ತಿರ್ಸಟ್ ಕೋಚ್ ಭಾರತೀಯ ಕ್ರಿಕೆಟ್ನ ಮುಖಚರ್ಯೆಯನ್ನೇ ಬದಲಾಸಿಬಿಡುತ್ತೇನೆ ಎಂಬ ಉಮೇದಿನಲ್ಲಿ ಸಾಕಷ್ಟು ಎಡವಟ್ಟಿನ ನಿರ್ಧಾರಗಳನ್ನು ಕೈಗೊಂಡರು. ಆತ ಒಬ್ಬ ಅಪ್ರತಿಮ ಆಟಗಾರ. ಹಾಗಾಗಿ ಮೇಧಾವಿ ಎಂಬ ಭ್ರಮೆಗೆ ಬಿದ್ದೋ, ಇಲ್ಲ ಆತನೊಂದಿಗೆ ಮಾಡಿಕೊಂಡಿದ್ದ ಗುತ್ತಿಗೆ ಒಪ್ಪಂದದ ಭಾರಕ್ಕೆ ನಲುಗಿಯೋ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಅದಕ್ಕೂ ಮುಖ್ಯವಾಗಿ ಕಿರಣ್ ಮೋರೆ ನೇತೃತ್ವದ ಆಯ್ಕೆ ಸಮಿತಿ ಚಾಪೆಲ್ ತಾಳಕ್ಕೆ ಎಗ್ಗಿಲ್ಲದೆ ಕುಣಿಯಿತು. ತಂಡದಲ್ಲಿ ಸಾಕಷ್ಟು ಬದಲಾವಣೆಗಳಾದವು. ಹಿರಿ-ಕಿರಿಯರ ನಡುವೆ ಸಂದೇಹಗಳು ಮೂಡುವಂತಹ ವಾತಾವರಣ ಸೃಷ್ಟಿಯಾಯಿತು. ಇದೆಲ್ಲದರ ನಡುವೆಯೇ 2005ರ ಅಂತ್ಯಕ್ಕೆ ಶ್ರೀಲಂಕಾ ವಿರುದ್ಧದ ಸರಣಿಗೆ ರಾಹುಲ್ ದ್ರಾವಿಡ್ರನ್ನು ನಾಯಕನನ್ನಾಗಿ ನೇಮಿಸಲಾಯಿತು. ಆ ಮೂಲಕ ಚಾಪೆಲ್ ತಮ್ಮ ಯೋಜನೆಗಳಿಗೆ ಅಡ್ಡವಾಗಿದ್ದ ಸೌರವ್ ಗಂಗೂಲಿ ಅವರನ್ನು ಮಟ್ಟ ಹಾಕಿದ್ದರು. ಈ ಸರಣಿಯ ಬಳಿಕ ರಾಹುಲ್ ದ್ರಾವಿಡ್ಗೆ ಟೆಸ್ಟ್ ಹಾಗೂ ಏಕದಿನ ಮಾದರಿಗಳೆರಡರಲ್ಲಿಯೂ ದೀರ್ಘಾವಧಿಗೆ ನಾಯಕ ಪಟ್ಟ ನೀಡಲಾಯಿತು. 2007ರ ವಿಶ್ವಕಪ್ಗೆ ಕೇವಲ 12 ತಿಂಗಳು ಇರುವಾಗ ತಂಡದಲ್ಲಿ ಈ ದೊಡ್ಡ ಪ್ರಮಾಣದ ಬದಲಾವಣೆ ಮಾಡಲಾಯಿತು. ಹಾಗೆಂದು ದ್ರಾವಿಡ್ ಅದಕ್ಕೆ ಮುಂಚೆ ಹೊಣೆ ಹೊತ್ತಿರಲಿಲ್ಲ ಎಂದಲ್ಲ. ಕಾಯಂ ನಾಯಕನಾಗಿದ್ದ ಗಂಗೂಲಿ ಅಲಭ್ಯರಾದಾಗಲೆಲ್ಲ ದ್ರಾವಿಡ್ ನಾಯಕನ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಪೂರ್ಣ ಪ್ರಮಾಣದ ನಾಯಕತ್ವಕ್ಕೂ, ಅರೆಕಾಲಿಕ ಜವಾಬ್ದಾರಿಗೂ ವ್ಯತ್ಯಾಸ ಇದ್ದೇ ಇದೆ. ದ್ರಾವಿಡ್ ಪೂರ್ಣ ಪ್ರಮಾಣದ ನಾಯಕನಾದ ನಂತರ ತವರಿನಲ್ಲಿ ಸರಣಿ ಮೇಲೆ ಸರಣಿ ಆಯೋಜಿಸಲಾಯಿತು. ಭಾರತದ ತವರಿನ ಪ್ರಭುತ್ವದ ಮುಂದೆ ಶ್ರೀಲಂಕಾ, ವೆಸ್ಟ್ಇಂಡಿಸ್ ತಂಡಗಳು ಮಕಾಡೆ ಮಲಗಿದ್ದೂ ಆಯಿತು. ಭಾರತದ ಈ ಪ್ರಬಲ ಪ್ರದರ್ಶನ ಎಂತಹ ಪರಿಸ್ಥಿತಿ ಸೃಷ್ಟಿಸಿತ್ತು ಎಂದರೆ 2007ರ ವಿಶ್ವಕಪ್ ಗೆಲ್ಲುವುದು ಗ್ಯಾರಂಟಿ ಎಂಬ ಭ್ರಮೆ ಆವರಿಸಿಕೊಂಡಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಮೊದಲ ಸುತ್ತಿನಲ್ಲಿ ಭಾರತದ ಮುಂದಿದ್ದ ಸವಾಲೂ ಅಂತಹ ಗಂಭೀರ ಸ್ವರೂಪದ್ದಾಗಿರಲಿಲ್ಲ. ಶ್ರೀಲಂಕಾ ಹೊರತುಪಡಿಸಿದರೆ ಬಾಂಗ್ಲಾದೇಶ ಮತ್ತು ಬರ್ಮುಡ ತಂಡಗಳನ್ನು ಭಾರತ ಎದುರಿಸಬೇಕಿತ್ತು. ತವರಿನಲ್ಲಿ ಶ್ರೀಲಂಕಾ ವಿರುದ್ಧ ಸಾಧಿಸಿದ್ದ ಗೆಲುವಿನ ಹಿನ್ನೆಲೆಯಲ್ಲಿ ಈ ಗುಂಪಿನ ಹಂತ ದಾಟುವುದು ನೀರು ಕುಡಿದಷ್ಟೇ ಸಲೀಸು ಎಂದೇ ಭಾವಿಸಲಾಗಿತ್ತು. ಆದರೆ, ಭರವಸೆಯ ಬಲೂನಿಗೆ ವಾಸ್ತವದ ಸೂಜಿ ನಾಟಿತು. ಬರ್ಮುಡಾ ವಿರುದ್ಧ ಗೆದ್ದ ಸಮಾಧಾನ ಮಾತ್ರ ಉಳಿಯಿತು. ಬಾಂಗ್ಲಾ ಮತ್ತು ಲಂಕಾ ತಂಡಗಳೆರಡೂ ಭಾರತವನ್ನು ಮಣಿಸಿ ಮುಂದಿನ ಸುತ್ತಿಗೆ ತೆರಳಿದರೆ ಒಂದೇ ವಾರದಲ್ಲಿ ಚಾಪೆಲ್ ಕಟ್ಟಿದ ಭ್ರಮೆಯ ಸೌಧ ಮಣ್ಣಾಗಿತ್ತು. ಅದು ಕುಂಬ್ಳೆಯಂತಹ ಹಿರಿಯ ಆಟಗಾರರನ್ನು ನಿವೃತ್ತಿಗೆ (ಏಕದಿನ) ಅಟ್ಟಿದರೆ ಚಾಪೆಲ್ರನ್ನು ಆಸ್ಟ್ರೇಲಿಯಾ ದಡ ಸೇರಿಸಿತು.
1992 ಹಾಗೂ 1999ರಲ್ಲೂ ಇದೇ ಪರಿಸ್ಥಿತಿ. 1992ರಲ್ಲಿ ಹಿರಿಯರ ನಡುವೆ ನಾಯಕತ್ವಕ್ಕೆ ನಡೆದ ಕಿತ್ತಾಟದ ಪರಿಣಾಮ ವಿಶ್ವಕಪ್ಗೆ ಕೆಲವೇ ತಿಂಗಳ ಮುನ್ನ ಅಜರುದ್ದೀನ್ ನಾಯಕರಾದರು. ಮತ್ತೆ 1999ರ ವಿಶ್ವಕಪ್ಗೂ ಮುನ್ನ ಸಚಿನ್ ಬದಲಾಯಿಸಿ ಅಜರ್ಗೆ ನಾಯಕತ್ವ ಕೊಡಲಾಯಿತು. ಈ ಎರಡೂ ಆವೃತ್ತಿಗಳಲ್ಲಿ ಭಾರತದ ಸಾಧನೆ ಅಷ್ಟಕ್ಕಷ್ಟೇ. ಆದರೆ, 1987ರಲ್ಲಾಗಲಿ, 1996 ಮತ್ತು 2003ರಲ್ಲಾಗಲೀ ಆ ಪರಿಸ್ಥಿತಿ ಇರಲಿಲ್ಲ. 87 ಮತ್ತು 96ರಲ್ಲಿ ಭಾರತ ಸೆಮಿಫೈನಲ್ ತಲುಪಿದರೆ 2003ರಲ್ಲಿ ಫೈನಲ್ವರೆಗೆ ಸೋಲಿಲ್ಲದೆ ಸಾಗಿತು. 2011ರಲ್ಲಂತೂ ಸ್ಥಿರ ನಾಯಕತ್ವದ ಪೂರ್ಣ ಲಾಭ ಪಡೆದ ಭಾರತ ಎರಡು ದಶಕಗಳ ನಂತರ ವಿಶ್ವಕಪ್ ಅನ್ನೇ ಗೆದ್ದುಕೊಂಡಿತು.
ನಮಗೆ ಬೇಕೆಂದಾಗ ಬಾಂಗ್ಲಾ, ವಿಂಡೀಸ್ನಂತಹ ತಂಡಗಳನ್ನು ಕರೆಸಿಕೊಂಡು ಅವರ ಮೇಲೆ ವಿಜಯ ಪತಾಕೆ ಹಾರಿಸುವುದಕ್ಕೂ, ನಾಲ್ಕು ವರ್ಷಗಳಿಗೊಮ್ಮೆ ಬರುವ ವಿಶ್ವಕಪ್ನಂತಹ ಅತಿ ಮಹತ್ವದ ಟೂರ್ನಿಗಳಲ್ಲಿ ಗೆಲ್ಲುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಇಲ್ಲಿ ನಮಗೆ ಬೇಕಾದ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳಲು ಖಂಡಿತ ಅವಕಾಶ ಇಲ್ಲ. ಜೊತೆಗೆ ಇಡೀ ತಂಡ ಒಂದಾಗಿ ನಿಂತರೆ ಮಾತ್ರ ಯಶ ಸಾಧ್ಯ. ಇದಕ್ಕೆ ತಂಡದ ಅಷ್ಟೂ ಸದಸ್ಯರ ವಿಶ್ವಾಸ ಗಿಟ್ಟಿಸುವ ನಾಯಕ ಬಹುಮುಖ್ಯ. ಮೊನ್ನೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಅವಳಿ ಪ್ರವಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ತಂಡ ಟೆಸ್ಟ್ ಮತ್ತು ಏಕದಿನ ಸರಣಿಗಳೆರಡರಲ್ಲೂ ಸೋತು ಸುಣ್ಣವಾಗಿ ವಾಪಸಾಗುತ್ತಿದ್ದಂತೆಯೇ ಬಹುತೇಕ ಮಾಧ್ಯಮಗಳು ಮತ್ತು ಮಾಜಿ ಆಟಗಾರರೆಂಬ ಅತೃಪ್ತ ಆತ್ಮಗಳು ಧೋನಿ ಬೆನ್ನಿಗೆ ಬಿದ್ದಿವೆ. ಈ ಪಂದ್ಯಗಳಲ್ಲಿ ಧೋನಿ ಯಾವ ಸಂದರ್ಭದಲ್ಲಿ ಯಾವ ರೀತಿಯ ಕ್ಷೇತ್ರ ರಕ್ಷಣೆ ಆಯೋಜಿಸಿದ್ದ? ಹೊಸ ಚೆಂಡನ್ನು ತೆಗೆದುಕೊಳ್ಳಲು ಏಕೆ ಹಿಂದೇಟು ಹಾಕಿದ? ಯಾರಿಗೆ ಯಾವಾಗ ಬೌಲಿಂಗ್ ಕೊಟ್ಟ ಅಥವಾ ಕೊಡಲಿಲ್ಲ? ಯಾರನ್ನು ತಂಡದಿಂದ ಕೈಬಿಟ್ಟ? ಯಾರನ್ನು ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಳುಹಿಸಿದ? ಹೀಗೆಲ್ಲ ಆತನ ಪ್ರತಿಯೊಂದು ನಡೆಯನ್ನೂ ಪರೀಕ್ಷೆಯ ಎರಕಕ್ಕೆ ಹೊಯ್ದು ಆ ಅಚ್ಚಿನಿಂದ ಮೂಡುವ ರೂಪಕಗಳನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುತ್ತ ಅನಿಷ್ಟಕ್ಕೆಲ್ಲ ಶನೇಶ್ವರ ಕಾರಣ ಎಂಬಂತೆ ಸೋಲಿನ ಅಷ್ಟೂ ಹೊಣೆಯನ್ನು ಧೋನಿ ಹೆಗಲಿಗೆ ಕಟ್ಟುವ ಕಾರ್ಯದಲ್ಲಿ ವ್ಯವಸ್ಥಿತವಾಗಿ ನಿರತರಾಗಿದ್ದಾರೆ. ಯಾವುದೇ ತಂಡದ ಯಶಸ್ಸು ಸೋಲಿಗೆ ನಾಯಕ ಹೊಣೆ ಹೊರಲೇಬೇಕು. ಆದರೆ ಇಲ್ಲಿಯೂ ಸೋಲಿಗೆ ಕಾರಣಗಳನ್ನು ಹುಡುಕಿ, ವಿಶ್ಲೇಷಿಸಿ ಅದನ್ನು ನಾಯಕನಿಗೆ ಮನವರಿಕೆ ಮಾಡಿಕೊಟ್ಟು ಮುಂದೆ ಹಾಗಾಗದಂತೆ ಎಚ್ಚರ ವಹಿಸಬೇಕೆಂಬ ತಿಳಿವಳಿಕೆ ನೀಡುವುದಷ್ಟೇ ಈ ಕಾರ್ಯದ ಉದ್ದೇಶವಾಗಿದ್ದರೆ ಅದಕ್ಕೆ ಯಾರ ಅಡ್ಡಿಯೂ ಇರುತ್ತಿರಲಿಲ್ಲ. ಆದರೆ, ಇಲ್ಲಿ ಸೋಲಿಗೆ ಧೋನಿಯನ್ನು ಬಲಿಪಶು ಮಾಡುವ ಉದ್ದೇಶ ಸ್ಪಷ್ಟ. ಈಗಾಗಲೇ ಕೆಲ ಮಾಜಿ ಆಟಗಾರರು, ನಾಯಕರು ಧೋನಿ ತಲೆದಂಡಕ್ಕೆ ಪ್ರಬಲವಾಗಿಯೇ ವಕಾಲತ್ತು ವಹಿಸಿದ್ದಾರೆ.
A captain is as good as his team.. ಹೇಳಿ ಕೇಳಿ ಕ್ರಿಕೆಟ್ ಏಕವ್ಯಕ್ತಿ ಆಟ ಅಲ್ಲ. ಇಲ್ಲಿ 11 ಜನರೂ ಒಂದೇ ಸ್ಫೂರ್ತಿಯಿಂದ, ಹಂಬಲದಿಂದ, ಉದ್ದೇಶದಿಂದ ಆಡಿದರಷ್ಟೇ ಯಶಸ್ಸು ಸಾಧ್ಯ. ನಾಯಕ ಎನಿಸಿಕೊಂಡವನು ತಂಡದ ಸದಸ್ಯರಲ್ಲಿ ಏಕತೆಯ ಉದ್ದೇಶ, ಗುರಿ ಸಾಧನೆಯ ಛಲ ಮೂಡಿಸಬಹುದೇ ಹೊರತು ಅವರ ಪರವಾಗಿ ತಾನು ಬ್ಯಾಟ್, ಬೌಲ್ ಅಥವಾ ಫೀಲ್ಡಿಂಗ್ ಮಾಡಲು ಸಾಧ್ಯವಿಲ್ಲ. ಬ್ಯಾಟ್ಸ್ಮನ್ನ ಬಲಭಾಗದಲ್ಲಿ (ಆಫ್ಸೈಡ್) ಮೂರು ಸ್ಲಿಪ್ ಸೇರಿದಂತೆ ಆರು ಕ್ಷೇತ್ರ ರಕ್ಷಕರನ್ನು ನಿಲ್ಲಿಸಿ ಬೌಲ್ ಮಾಡಲು ಹೇಳಿದರೆ ಇಶಾಂತ್ ಶರ್ಮಾ ಚೆಂಡನ್ನು ದಾಂಡಿಗನ ಎಡಬದಿಗೆ ಎಸೆದರೆ ಆತ ಬೌಂಡರಿ ಮೇಲೆ ಬೌಂಡರಿ ಗಿಟ್ಟಿಸುತ್ತಾನೆಯೇ ಹೊರತು ಔಟಾಗುವುದಿಲ್ಲ. ಸರಿ ಹಾಗಿದ್ದರೆ, ನಾಯಕನಾದವನು ಇಶಾಂತ್ನನ್ನು ದಾಳಿಯಿಂದ ವಾಪಸ್ ಪಡೆಯಬೇಕು. ಆದರೆ ಆತನಿಗೆ ಪರ್ಯಾಯ ಬೌಲರ್ ಇಲ್ಲ ಎಂದಾದರೆ ಅಥವಾ ಪರ್ಯಾಯ ದಾಳಿಕಾರ ಈತನಿಗಿಂತ ಕೆಟ್ಟದಾಗಿ ದಾಳಿ ನಡೆಸುತ್ತಿದ್ದಾನೆ ಎಂದಾದರೆ ನಾಯಕ ಆಕಾಶ ನೋಡದೇ ಮತ್ತೇನು ಮಾಡಲು ಸಾಧ್ಯ? ರೋಹಿತ್ ಶರ್ಮಾನಂತಹ ಸ್ವಘೋಷಿತ ಪ್ರತಿಭೆಗಳು, ಮುರಳಿ ವಿಜಯ್ನಂತಹ ಕೋಟಾ ಆಟಗಾರರು ಶೂನ್ಯ ಸಂಪಾದನೆಯಲ್ಲಿಯೇ ಸಾರ್ಥಕತೆ ಕಂಡುಕೊಳ್ಳುವುದಾದರೆ ಯಾವ ನಾಯಕ ತಾನೆ ಏನು ಮಾಡಲು ಸಾಧ್ಯ? ನಿಜ, ಹಾಗೆಂದು ಧೋನಿ ಎಡವಿದ್ದೇ ಇಲ್ಲ, ಆತನ ಪ್ರತಿಯೊಂದು ನಡೆಯೂ ಚಾಣಕ್ಷತನದ ಪರಮಾವಧಿ, ಅದಾವುದರಲ್ಲಿಯೂ ತಪ್ಪೇ ಇಲ್ಲ ಎಂದೇನಿಲ್ಲ. ಎರಡು ವರ್ಷಗಳ ಹಿಂದೆ ಇಂಗ್ಲೆಂಡ್ ಪ್ರವಾಸದಲ್ಲಿ ಕ್ರಿಕೆಟ್ನ ಸ್ಫೂರ್ತಿ ಎತ್ತಿ ಹಿಡಿದು ಉದಾತ್ತ ಮೌಲ್ಯ ಮೆರೆಯುವ ಹುಮ್ಮಸ್ಸಿನಲ್ಲಿ ತಾಂತ್ರಿಕವಾಗಿ ಔಟಾಗಿದ್ದ ಇಯಾನ್ ಬೆಲ್ ವಿರುದ್ಧದ ಮನವಿಯನ್ನು ಹಿಂಪಡೆದದ್ದು ಮತ್ತು ಅದರ ಫಲವಾಗಿ ಕೊನೆಗೆ ಪಂದ್ಯ ಸೋಲಬೇಕಾಗಿ ಬಂದದ್ದು, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿಕೆಟ್ ಕೀಳುವುದಕ್ಕಿಂತ ರನ್ ನಿಯಂತ್ರಿಸಲೇ ಆದ್ಯತೆ ನೀಡಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 146 ಓವರ್ವರೆಗೂ ಹೊಸ ಚೆಂಡಿನ ಬಳಕೆಗೆ ಮುಂದಾಗದೆ ಕೊನೆಗೆ ಅಂಪೈರ್ ಆದೇಶಕ್ಕೆ ಮಣಿದು ಬಲವಂತವಾಗಿ ಹೊಸ ಚೆಂಡಿನಿಂದ ದಾಳಿ ನಡೆಸಲು ಒಪ್ಪಿದ್ದು ಖಂಡಿತ ಪಲಾಯನವಾದದ ಸೂಚನೆ ನೀಡಿದ್ದವು. ಆದರೆ ಬೆಲ್ ಪ್ರಕರಣ ಹೊರತುಪಡಿಸಿದರೆ ಉಳಿದೆರಡು ಸಂದರ್ಭಗಳಲ್ಲಿ ಧೋನಿ ಮುಂದೆ ಇದ್ದ ಆಯ್ಕೆಗಳೂ ದುರ್ಬಲವೆ. ರನ್ಗಳಿಗೆ ಕಡಿವಾಣ ಹಾಕಿ ದಾಂಡಿಗರು ತಾವಾಗಿಯೇ ತಪ್ಪು ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಬಹುದು ಎಂಬ ಆಶಾವಾದದ ಹಿಂದೆ ಇದ್ದದ್ದು ವಿಕೆಟ್ ಕೀಳಲು ಅಥವಾ ಕೀಳುತ್ತೇವೆ ಎಂಬ ಭರವಸೆ ಮೂಡಿಸಬಲ್ಲ ದಾಳಿಕಾರರು ಇಲ್ಲದಿದ್ದ ಕಾರಣಕ್ಕೇ ಅಲ್ಲವೆ? ಹಾಗೆಯೇ ಮೆಕಲಂ ಗೂಳಿಯಂತೆ ಮುನ್ನುಗ್ಗುತ್ತಿದ್ದಾಗ ಹೊಸ ಚೆಂಡು ತೆಗೆದುಕೊಂಡು ಇಶಾಂತ್ ಕೈಗಿತ್ತು ರನ್ ಹೊಳೆ ಹರಿಯುವುದಕ್ಕೆ ಅವಕಾಶ ನೀಡುವ ಬದಲು ಹಳೆಯ ಚೆಂಡಿನಲ್ಲಿ ಜಹೀರ್ ಅಥವಾ ಶಮಿ ರಿವರ್ಸ್ ಸ್ವಿಂಗ್ ಮಾಡುವ ಮೂಲಕ ವಿಕೆಟ್ ಪಡೆಯಬಹುದು ಎಂಬ ಆಶಾವಾದ ಧೋನಿಗಿದ್ದಿದ್ದರೆ ಅದರಲ್ಲಿ ತಪ್ಪು ಹುಡುಕುವುದು ಕಷ್ಟ.
ಈ ಸಂದರ್ಭಗಳಲ್ಲಿಯೂ ನಿಜವಾಗಲೂ ಧೋನಿ ತಪ್ಪು ಮಾಡುತ್ತಿದ್ದಾರೆ ಎಂದೇ ಆದರೆ ಅದನ್ನು ಅವರ ಗಮನಕ್ಕೆ ತಂದು ಸರಿದಾರಿ ತೋರಬೇಕಾದ ಕರ್ತವ್ಯ ಕೋಚ್ಗಿದೆ. ಏಕೆಂದರೆ ಈಗ ಕೋಚ್ಗಳಿಗಿರುವ ಮೌಲ್ಯವೇ ಬೇರೆ. ಎರಡು ದಶಕಗಳ ಹಿಂದಾದರೆ ಮಾಜಿ ಆಟಗಾರರು ಮೆನೇಜರ್ಗಳಾಗಿ ತೆರಳುತ್ತಿದ್ದರು. ಒಂದೊಂದು ಸರಣಿಗೆ ಒಬ್ಬೊಬ್ಬ ಮೆನೇಜರ್. ಹೀಗಾಗಿ ಯಾವುದೇ ತಾಳಮೇಳ ಇರುತ್ತಿರಲಿಲ್ಲ. ಆದರೆ ಈಗೀಗ ಕೋಚ್ಗಳೆಂದರೆ ಒಂದು ನಿರ್ದಿಷ್ಟ ಅವಧಿಗೆ ಗುತ್ತಿಗೆ ಇರುತ್ತದೆ. ಕೋಚ್ ಆಗಲು ಕೆಲವು ಹಂತದ ತರಬೇತಿಯನ್ನೂ ಪಡೆದಿರುತ್ತಾರೆ. ಅವರು ಕೇಳಿದೆಷ್ಟು ವೇತನ ನೀಡಿ ಅವರಿಗೆ ಮಣೆ ಹಾಕಲಾಗುತ್ತದೆ. ಭಾರತ ಸಹ ಜಾನ್ರೈಟ್, ಗ್ಯಾರಿ ಕರ್ಸ್ಟನ್ ರೂಪದಲ್ಲಿ ಅತ್ಯಂತ ಯಶಸ್ವಿ ಕೋಚ್ಗಳನ್ನು ಕಂಡಿದೆ. 21ನೇ ಶತಮಾನದ ಆರಂಭದಲ್ಲಿ ಬಾಜಿ ಅವಾಂತರಗಳಿಂದ ಹೊರತಾಗಿ ಅಪ್ಪಟ ಪ್ರತಿಭೆಗಳ ತಂಡ ರೂಪಿಸುವಲ್ಲಿ ರೈಟ್ ಯಶ ಕಂಡರೆ, ಆ ದಂಡಿಗೆ ಯುವ ಪ್ರತಿಭೆಗಳನ್ನು ಗುರುತಿಸಿ, ಸೇರಿಸಿ ವಿಶ್ವಕಪ್ ಗೆಲ್ಲಲು ಮತ್ತು ವಿಶ್ವದ ನಂ.1 ಟೆಸ್ಟ್ ತಂಡವನ್ನಾಗಿ ರೂಪಿಸುವಲ್ಲಿ ಕರ್ಸ್ಟನ್ ಯಶಸ್ವಿಯಾದರು. ಈ ಎರಡೂ ಸಂದರ್ಭಗಳಲ್ಲಿ ನಾಯಕತ್ವದ ವಿಚಾರದಲ್ಲಿ ಕಂಟಿನ್ಯೂಯಿಟಿ ಇತ್ತು ಎಂಬುದನ್ನು ಮರೆಯುವಂತಿಲ್ಲ.
ಈ ಬಾರಿ ಭಾರತ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ವಿಶ್ವಕಪ್ಗೆ ಅಣಿಯಾಗುತ್ತಿದೆ. ಅದೂ ಇನ್ನು ಕೇವಲ 12 ತಿಂಗಳಲ್ಲಿ ಸೆಣಸಾಟ ಶುರುವಾಗಲಿದೆ. ಎಲ್ಲ ತಂಡಗಳೂ ತಮ್ಮ ಕೋರ್ ಸದಸ್ಯರನ್ನು ಗುರುತಿಸಿವೆ. ಶ್ರೀಲಂಕಾ ವಿಶ್ವಕಪ್ಗೆ ಎರಡು ವರ್ಷಗಳ ಮುನ್ನವೇ ಮ್ಯಾಥ್ಯೂಸ್ರನ್ನು ನಾಯಕನನ್ನಾಗಿ ನೇಮಿಸಿ ಅವರ ಸುತ್ತ ತಂಡ ಕಟ್ಟಿದೆ. ಇಂಗ್ಲೆಂಡ್ಗೆ ಕುಕ್, ಆಸ್ಟ್ರೇಲಿಯಾಕ್ಕೆ ಕ್ಲಾರ್ಕ್, ಆಫ್ರಿಕೆಗೆ ಡಿವಿಲಿಯರ್ಸ್, ವಿಂಡೀಸ್ಗೆ ಬ್ರಾವೊ ಹೀಗೆ ನಾಯಕನ ಸ್ಥಾನ ಸ್ಥಿರವಾಗಿದೆ. ಒಂದೆರಡು ಸರಣಿಗಳ ಸೋಲು ಅವರ ಸ್ಥಾನಕ್ಕೆ ಧಕ್ಕೆ ತರುವ ಸೂಚನೆಗಳಂತೂ ಇಲ್ಲ. ಹೀಗಿರುವಾಗ ಧೋನಿ ನಾಯಕತ್ವದ ಬದಲಾವಣೆ ಕೇಳುವುದು ಮೂರ್ಖ ಮನಸ್ಸುಗಳು ಮಾತ್ರ. ಆಯ್ಕೆಯಲ್ಲಿ ಕೊಂಚ ಹಿಡಿತ, ಕೋಟಾ ಒತ್ತಡಗಳಿಗೆ ಮಣಿಯದೆ ಸಮರ್ಥರನ್ನಷ್ಟೇ ಆಯ್ಕೆ ಮಾಡಲು ಅಯ್ಕೆದಾರರಿಗೆ ಸ್ವಾತಂತ್ರ್ಯ ಮತ್ತು ಧೋನಿಗೆ ತಂತ್ರಗಾರಿಕೆಯಲ್ಲಿ ನೆರವಾಗಬಲ್ಲ ಒಬ್ಬ ಕುಶಾಗ್ರಮತಿ ಕೋಚ್ನನ್ನು ನೇಮಿಸುವುದು ತುರ್ತು ಅಗತ್ಯ. 2005ರ ಆ್ಯಷಸ್ ಗೆಲುವಿನೊಂದಿಗೆ ಬತ್ತಳಿಕೆ ಖಾಲಿ ಮಾಡಿಕೊಂಡಿರುವ ಫ್ಲೆಚರ್ ತಲೆದಂಡದಿಂದ ತಂಡಕ್ಕೆ ಒಳಿತೇ ಹೊರತು ಈ ಹಂತದಲ್ಲಿ ಧೋನಿಯನ್ನು ಕೆಳಗಿಳಿಸುವುದರಿಂದ ಅಪಾಯವೇ ಹೆಚ್ಚು. ಇಷ್ಟಕ್ಕೂ ಧೋನಿ ವಿರುದ್ಧದ ಕೂಗಿನಲ್ಲಿ ರಾಜಕೀಯದ ಎಳೆಯೂ ಇದೆ. ಧೋನಿ ಪ್ರತಿನಿಧಿಸುವ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡದ ಮಾಲಿಕರೂ ಆಗಿರುವ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ವಿರುದ್ಧದ ಹೋರಾಟಕ್ಕೆ ಧೋನಿಯನ್ನು ಬಲಿಪಶು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಈ ಮಾಜಿಗಳಿಗೆ ಇದು ಅರ್ಥವಾದರೆ ಸಾಕು!
- ಕೆ.ಎಸ್.ಜಗನ್ನಾಥ್
jagannath.kudinoor@gmail.com