ಅಂಕಣಗಳು

ನಭಕ್ಕೆ ಹಾರಿದ್ದು ಉಪಗ್ರಹವಲ್ಲ, ಭವಿಷ್ಯದ ಕನಸಿನ ಗುಚ್ಛ

ಮಜಗಾವಾ ಕರಣ್ ಎಂಬುದು ಉತ್ತರ ಪ್ರದೇಶದ ಒಂದು ಸಾಧಾರಣ ಹಳ್ಳಿ...

ಮಜಗಾವಾ ಕರಣ್ ಎಂಬುದು ಉತ್ತರ ಪ್ರದೇಶದ ಒಂದು ಸಾಧಾರಣ ಹಳ್ಳಿ. ಆ ಹಳ್ಳಿಯ ಬಹುತೇಕ ರೈತರಿಗೆ ನೆಮ್ಮದಿ, ಸುಖ, ಸಮೃದ್ಧಿ ದೂರದ ಬೆಟ್ಟ. ಕಣ್ಣಗಲಕ್ಕೆ ಮೈಚಾಚಿಕೊಂಡಿದ್ದ ಭೂಮಿ ಬಂಜೆ. ಅಲ್ಲಿ ಹುಲ್ಲುಕಡ್ಡಿಯೂ ಬೆಳೆಯಲಾಗುತ್ತಿರಲಿಲ್ಲ. ಹೀಗಿರುವಾಗ ಉಳುಮೆ ಎಂಬುದು ಕೇವಲ ಕನಸು. ಕೂಲಿನಾಲಿಯೇ ಅನ್ನಕ್ಕೆ ದಾರಿ. ಭೂಮಿಯ ಒಳ ಮೈ ಹೇಗಿದೆ, ಏನು ಮಾಡಿದರೆ ಅದನ್ನು ಫಲವತ್ತಾಗಿಸಬಹುದು ಎಂಬ ಪ್ರಶ್ನೆಗಳಿಗೆ ಅಲ್ಲಿ ಯಾರ ಬಳಿಯೂ ಉತ್ತರ ಇರಲಿಲ್ಲ. ಕೃಷಿ, ತೋಟಗಾರಿಕಾ ವಿಜ್ಞಾನಿಗಳು ಏನೆಲ್ಲ ಕಸರತ್ತು ಮಾಡಿದರೂ ಬಂಜರು ಹಸಿರಾಗಲಿಲ್ಲ. ದೂರ ಸಂವೇದಿ ಅನ್ವಯಿಕ ಕೇಂದ್ರದ ಅಧಿಕಾರಿಗಳು ಒಂದು ಸಣ್ಣ ಪವಾಡ ಸಾಧಿಸಲು ಈ ಹಳ್ಳಿಯನ್ನು ಆಯ್ಕೆ ಮಾಡಿದರು. ಎಕರೆಗಟ್ಟಲೆ ಪ್ರದೇಶದಲ್ಲಿ ಜಿಪ್ಸಮ್ ಲವಣವನ್ನು ರಾಶಿಗಟ್ಟಲೆ ತಂದು ಸುರಿದರು. ನೋಡ ನೋಡುತ್ತಿದ್ದಂತೆಯೇ ಕೆಲವೇ ದಿನಗಳಲ್ಲಿ ನಶಿಸಿದ್ದ ಭೂಮಿ ಮತ್ತೆ ಜೀವಂತಿಕೆಯಿಂದ ನಳನಳಿಸಿದವು. ಆಗದು ಎಂದು ಕೈಕಟ್ಟಿ ಕುಳಿತಿದ್ದ ರೈತನ ಕಣ್ಣಲ್ಲಿ ಆಸೆಯ ಗೊಂಚಲು ಜೀಕಾಡಿದವು. ಎಷ್ಟೊ ವರ್ಷಗಳಿಂದ ಬಂಜರು ಎಂದು ನಿರ್ಲಕ್ಷ್ಯಕ್ಕೊಳಗಾಗಿದ್ದ ಭೂಮಿ ಭತ್ತ, ಗೋದಿಯ ಕಣಜವಾಯಿತು. ಪರಾವಲಂಬಿ ಜೀವನ ದೂರವಾಗಿ ಅಲ್ಲಿನ ರೈತರು ಸ್ವಾವಲಂಬಿಗಳಾದರೆ ಆಕಾಶದಲ್ಲಿ ಗೋಚರಿಸುವ ನಕ್ಷತ್ರಗಳು ನಮ್ಮನ್ನು ನೋಡುತ್ತವಷ್ಟೆ. ಆದರೆ ಅದಕ್ಕೂ ಆಚೆ, ಕಣ್ಣಿಗೆ ಕಾಣದ ದೂರದಲ್ಲಿ ನಾವೇ ಹಾರಿಸಿರುವ ದೂರ ಸಂವೇದಿ ಉಪಗ್ರಹಗಳು ನಮ್ಮ ನಿತ್ಯದ ಬದುಕನ್ನು ಹೇಗೆ ಹಸನಾಗಿಸಲು ನೆರವಾಗುತ್ತವೆ ಎಂಬುದಕ್ಕೆ ಮಜಗಾವಾ ಕರಣ್ ಗ್ರಾಮದಲ್ಲಾದ ಬದಲಾವಣೆ ಒಂದು ಸಣ್ಣ ಉದಾಹರಣೆಯಷ್ಟೆ. ಭೂಮಿಯ ಪದರ ರಚನೆಯ ಬಗ್ಗೆ ಅವು ಕಳುಹಿಸುವ ಮಾಹಿತಿಯ ಜಾಡು ಹಿಡಿದು ಮಣ್ಣಿನ ಫಲವತ್ತತೆ ಹೆಚ್ಚಿಸಲು ಹೇಗೆ ಸಾಧ್ಯ ಎಂಬುದನ್ನು ಈ ಪ್ರಯೋಗ ನಿರೂಪಿಸಿದೆ. ಇಂದು ಭಾರತದಲ್ಲಿ ಲಕ್ಷಾಂತರ ಎಕರೆ ಬಂಜರು ಭೂಮಿ ಹಸನಾಗಿದ್ದರೆ, ಲಕ್ಷಾಂತರ ರೈತ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದ್ದರೆ ಅದಕ್ಕೆ ಅವರು ಈ ಉಪಗ್ರಹಗಳಿಗೆ ಉಪಕೃತರಾಗಬೇಕಿದೆ. ಭಾರತ ಪ್ರತಿ ಬಾರಿ ಉಪಗ್ರಹ ಉಡಾಯಿಸಿದಾಗಲೂ ಅದನ್ನು ದುಂದುವೆಚ್ಚ ಎಂದು ಜರೆಯುವ, ಮಾಡಬಾರದ್ದನ್ನು ಮಾಡುತ್ತಿದ್ದಾರೆ ಎಂದು ಗೊಣಗುವ, ಅದಕ್ಕೆ ತಗುಲುವ ವೆಚ್ಚದಲ್ಲಿ ಎಷ್ಟು ಹಸಿದ ಹೊಟ್ಟೆಗಳಿಗೆ ಅನ್ನವಿಕ್ಕಬಹುದು ಎಂದು ವೃಥಾ ಲೆಕ್ಕ ಹಾಕುವ, ಸಮಾಜ 'ವ್ಯಾಧಿ'ಯಿಂದ ಹೊರಬರಲಾರದೆ ಒದ್ದಾಡುವ ಮನಸ್ಸುಗಳಿಗೆ, ಮನುಷ್ಯರಿಗೆ ಈ ಪ್ರಯತ್ನಗಳಿಂದ ಆಗುತ್ತಿರುವ ದೀರ್ಘಕಾಲೀನ ಲಾಭದ ಅರಿವೇ ಇದ್ದಂತಿಲ್ಲ. ಇದ್ದರೂ ಅದನ್ನು ಸ್ವೀಕರಿಸುವ ಮನಸ್ಥಿತಿಯಂತೂ ಇಲ್ಲವೇ ಇಲ್ಲ ಎನಿಸುತ್ತದೆ. ಇಂದು ದೂರದ ದೆಹಲಿಯಲ್ಲಿರುವ ರೋಗಿಗೆ ಬೆಂಗಳೂರಿನಲ್ಲಿ ಕುಳಿತ ವೈದ್ಯ ಚಿಕಿತ್ಸೆ ನೀಡುವುದು ಸಾಧ್ಯವಾಗಿದ್ದರೆ, ಕಾನ್ಫರೆನ್ಸ್ ಕಾಲ್ಗಳ ಮೂಲಕ ಜಗತ್ತನ್ನೇ ಆಫಿಸ್ ರೂಮಿನಲ್ಲಿ ಹರಡಿಕೊಳ್ಳಲು ಸಾಧ್ಯವಾಗಿದ್ದರೆ, ಅಷ್ಟೇಕೆ ದಾರಿ ತಿಳಿಯಲೆಂದು ಮೊಬೈಲ್ನಲ್ಲಿರುವ ಜಿಪಿಎಸ್ ಆನ್ ಮಾಡಿಕೊಂಡು ಸರಾಗವಾಗಿ ತಲುಪಬೇಕಾದ ಸ್ಥಳಕ್ಕೆ ತಲುಪಲು ಅನುಕೂಲ ಆಗಿದ್ದರೆ ಅದಕ್ಕೆಲ್ಲ ನಾವು  ಉಡಾಯಿಸಿರುವ, ಉಡಾಯಿಸಲು ಉದ್ದೇಶಿಸಿರುವ ಈ ಉಪಗ್ರಹಗಳ ನೆರವು ಕಾರಣ ಎಂಬುದನ್ನು ಮರೆಯುವಂತಿಲ್ಲ. 45 ವರ್ಷಗಳಿಂದ ಇದೇ ಕಾಯಕದಲ್ಲಿ ನಿರತವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ಮತ್ತು ಅದರ ವಿಜ್ಞಾನಿಗಳು ಹೊಸ ವರ್ಷದ ಸಂಭ್ರಮಕ್ಕೆ ಕಿಚ್ಚು ಹಚ್ಚುವಂತಹ ಮತ್ತೊಂದು ಸಾಹಸ ಮೆರೆದಿದ್ದಾರೆ. ಅದುವೇ ಜಿಎಸ್ಎಲ್ವಿ ಭೂಸ್ಥಿರ ರಕ್ಷೆ ಉಪಗ್ರಹ ಉಡಾವಕ.
ಸುಮಾರು ಕಾಲು ಶತಮಾನದ ಹಿಂದಿನ ಮಾತು. ಮಿಖಾಯಿಲ್ ಗೋರ್ಬಚೆವ್ ರಷ್ಯ ಅಧ್ಯಕ್ಷರಾಗಿದ್ದರೂ ಶೀತಲ ಸಮರ ಸಂಪೂರ್ಣ ನಿಂತಿರಲಿಲ್ಲ. ಕೊನೆಯ ದಿನಗಳನ್ನು ಎಣಿಸುತ್ತಿತ್ತು. ಆಗಲೇ ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ದೂರ ಗಗನಕ್ಕೆ ಕೈ ಚಾಚಿದ್ದರು. ಸ್ವತಂತ್ರವಾಗಿ ಉಪಗ್ರಹ ಉಡಾಯಿಸುವ ಕನಸು ಕಂಡಿದ್ದರು. ನಮ್ಮ ಉಪಗ್ರಹಗಳನ್ನು ನಾವೇ ಉಡಾಯಿಸುವ ರೋಮಾಂಚನಕ್ಕೆ, ಸಾಹಸಕ್ಕೆ, ಅನುಭವಕ್ಕೆ ತೆರೆದುಕೊಳ್ಳಲು ಸಜ್ಜಾಗಿದ್ದರು. ಆ ನಿಟ್ಟಿನಲ್ಲಿ ಭಾರೀ ತೂಕದ ಉಪಗ್ರಹಗಳನ್ನು ಭೂಮಿಯಿಂದ 36 ಸಾವಿರ ಕಿ.ಮೀ. ದೂರ ಸ್ಥಿರ ಕಕ್ಷೆಗೆ ರವಾನಿಸಬಲ್ಲ ಉಡಾವಕ ಮತ್ತು ಅದಕ್ಕೆ ಬೇಕಾದ ಎಂಜಿನ್ಗಳ ಅಭಿವೃದ್ಧಿಪಡಿಸುವ ತುಡಿತ ಅವರಲ್ಲಿ ಪ್ರಬಲವಾಗಿತ್ತು. ಆದರೆ ಅದು ದುಬಾರಿ ಮತ್ತು ಹೆಚ್ಚು ಸಮಯ ಹಿಡಿಯುವ ಪ್ರಕ್ರಿಯೆ ಎಂಬುದನ್ನು ಮನಗಂಡು ಅಂತಹ ಲಭ್ಯ ಎಂಜಿನ್ ಮತ್ತು ತಂತ್ರಜ್ಞಾನವನ್ನು ಕೊಳ್ಳಲು ಬಯಸಿದರು. ಕಸವನ್ನೇ ಆದರೂ ಸರಿ, ಮಾರಾಟ ಮಾಡಲು ಮೊದಲು ತಾಮುಂದು ಎಂದು ಕೈಚಾಚುವ ಅಮೆರಿಕ ಒಂದಷ್ಟು ನಮೂನೆಗಳನ್ನು ಒದಗಿಸಿತು. ಆದರೆ ಅದು ಇಸ್ರೊದ ವಿಜ್ಞಾನಿಗಳಿಗೆ ಸರಿ ಕಾಣಲಿಲ್ಲ. ಕೊನೆಗೆ ಅತ್ಯಂತ ಕ್ಲಿಷ್ಟ, ಆದರೆ ಅಷ್ಟೇ ಪ್ರಭಾವಿ ಕ್ರಯೋಜೆನಿಕ್ ಎಂಜಿನ್ಗಳನ್ನು ಮಾರಾಟ ಮಾಡುವ ಪ್ರಸ್ತಾಪ ರಷ್ಯದಿಂದ ಬಂತು. ಅದಕ್ಕೆ ಒಪ್ಪಿದ ಭಾರತ ಆ ಸಂಬಂಧ ಕೇವಲ ಎಂಜಿನ್ಗಳಷ್ಟೇ ಅಲ್ಲ, ಅದರ ಹಿಂದಿರುವ ತಂತ್ರಜ್ಞಾನ ಆಮದಿಗೂ ರಷ್ಯದ ಗ್ಲಾಸ್ಕೋವ್ನಾಸ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 1992ರ ವೇಳೆಗೆ ಈ ಒಪ್ಪಂದ ಕಾರ್ಯರೂಪಕ್ಕೆ ಬರಬೇಕಿತ್ತು. ಆದರೆ ಸೋವಿಯತ್ ಒಕ್ಕೂಟದ ಪತನ, ಶೀತಲ ಸಮರದ ಅಂತ್ಯ ಅಮೆರಿಕ ಹಪಾಹಪಿಗೆ ಹಾಲೆರೆಯಿತು. ಯಾವುದೇ ಕಾರಣಕ್ಕೂ ಭಾರತಕ್ಕೆ ಕ್ರಯೊಎಂಜಿನ್ ಹಾಗೂ ತಂತ್ರಜ್ಞಾನ ಹಸ್ತಾಂತರ ಮಾಡದಂತೆ ರಷ್ಯದ ಮೇಲೆ ಪ್ರಬಲ ಒತ್ತಡ ಹೇರಿತು. ಇದಕ್ಕೆ ಅದು ಕೊಟ್ಟ ಕಾರಣವಾದರೂ ಏನು? ಈ ಒಪ್ಪಂದ ಎಂಟಿಸಿಆರ್ (ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಸಂಧಾನ) ಉಲ್ಲಂಘನೆ ಆಗುತ್ತದೆ ಎಂಬ ಕುಂಟು ನೆಪ ಒಡ್ಡಿತು. ಅಸಲಿಗೆ ಈ ಒಪ್ಪಂದ ಮುಂದುವರಿದ ದೇಶಗಳು ಮಾಡಿಕೊಂಡ ಅನೌಪಚಾರಿಕ ನಿಬಂಧನೆಯಷ್ಟೇ ಹೊರತು ಅದಕ್ಕೆ ಹೆಚ್ಚಿನ ಮಾನ್ಯತೆ ಇರಲಿಲ್ಲ. ಆದರೂ ಅಮೆರಿಕ ಕ್ಯಾತೆ ತೆಗೆಯಿತು.
ಈ ತಂತ್ರಜ್ಞಾನ ಹಸ್ತಾಂತರವಾದರೆ ಭಾರತ ಅದನ್ನು ಕ್ಷಿಪಣಿಗಳ ಅಭಿವೃದ್ಧಿಗೆ ಬಳಸುತ್ತದೆ. ಅದಕ್ಕೆ ಅವಕಾಶ ನೀಡಬಾರದೆಂದು ಹುಯಿಲೆಬ್ಬಿಸಿತು. ಕ್ರಯೋ ತಂತ್ರಜ್ಞಾನವನ್ನು ಕ್ಷಿಪಣಿಗಳಿಗೆ ಬಳಸುವುದು ಕಾರ್ಯಸಾಧುವಲ್ಲ ಎಂಬುದು ಅಮೆರಿಕಕ್ಕೂ ಗೊತ್ತಿತ್ತು. ಜಲಜನಕ ಮತ್ತು ಆಮ್ಲಜನಕವನ್ನು ದ್ರವರೂಪಕ್ಕೆ ತಂದು (ಕ್ರಮವಾಗಿ-253 ಹಾಗೂ-180 ಡಿಗ್ರಿ) ಅದನ್ನು ಉರಿಕೊಳವೆಗೆ ಸರಬರಾಜು ಮಾಡಿ ಅದರಿಂದ ವೇಗವೃದ್ಧಿ ಮಾಡಿಕೊಳ್ಳುವ ಈ ತಂತ್ರಜ್ಞಾನ ರಾಕೆಟ್ಗಳಿಗಷ್ಟೇ ಸೂಕ್ತ. ಒಂದು ವೇಳೆ ಅಮೆರಿಕ ಹೇಳಿದಂತೆ ಈ ತಂತ್ರಜ್ಞಾನವನ್ನು ಖಂಡಾಂತರ ಕ್ಷಿಪಣಿಗೆ ಬಳಸುವುದಾದರೆ ಅದಕ್ಕೆ ಇಂಧನ ತುಂಬಲಿಕ್ಕೆ ಎಂಟು ತಾಸು ಬೇಕಾಗುತ್ತದೆ. ಇದೆಲ್ಲ ತಿಳಿದಿದ್ದರೂ ಅಮೆರಿಕ ತೋರಿದ ಡಾಲರ್ ಆಸೆಗೆ ಮರುಳಾಗಿ ರಷ್ಯದ ಆಗಿನ ಅಧ್ಯಕ್ಷ ಬೋರಿಸ್ ಯೆಲ್ಸಿನ್ ಕ್ರಯೊತಂತ್ರಜ್ಞಾನ ಹಸ್ತಾಂತರಕ್ಕೆ ತಡೆ ಹಾಕಿದರು. ಆದರೆ ಈ ಒಪ್ಪಂದದ ಹಿಂದಿದ್ದ ದೂರದೃಷ್ಟಿಯ ವಿಜ್ಞಾನಿ ಯು.ಆರ್. ರಾವ್ ಮತ್ತು ಅವರ ಸಹವರ್ತಿಗಳು ಇದರಿಂದ ಅಧೀರರಾಗಲಿಲ್ಲ. ಬದಲಿಗೆ ಕ್ರಯೊ ಎಂಜಿನ್ಗಳನ್ನು ಅಭ್ಯಸಿಸಿ ದೇಶೀಯವಾಗಿಯೇ ಅದನ್ನು ನಿರ್ಮಿಸುವ ಪಣ ತೊಟ್ಟರು. ಆ ಪಣ ಈಡೇರಲು 22 ವರ್ಷಗಳೇ ಕಳೆದಿವೆ. ಮೊನ್ನೆ ನಭವನ್ನು ಸೀಳಿಹೋದ ಜಿಎಸ್ಎಲ್ವಿಯನ್ನು ಚಿಮ್ಮಿಸಿದ್ದು ಸಂಪೂರ್ಣ ದೇಶೀಯ ನಿರ್ಮಿತ ಕ್ರಯೊ ಎಂಜಿನ್. ಇಷ್ಟಕ್ಕೂ ಈ ಜಿಎಸ್ಎಲ್ವಿಗೇಕೆ ಇಷ್ಟೊಂದು ಮಹತ್ವ? ಇದಲ್ಲದೆಯೇ ಭಾರತ ಈವರೆಗೆ ಉಪಗ್ರಹಗಳನ್ನು ಉಡಾಯಿಸಿಲ್ಲವೆ? ಇಲ್ಲಿ ಒಂದು ವಿಷಯ ತೀರಾ ಗಮನಾರ್ಹ. ಜಾಗತಿಕ ಮಟ್ಟದಲ್ಲಿ ಈ ಉಪಗ್ರಹ ಉಡಾವಣೆ ಎಂಬುದು 300 ರಿಂದ 400 ಕೋಟಿ ಡಾಲರ್ಗಳ ದಂಧೆ. ಐರೋಪ್ಯ ಒಕ್ಕೂಟದ ದೇಶಗಳು, ಅಮೆರಿಕ ಈ ವಹಿವಾಟಿನ ವಾರಸುದಾರರು. ಜಿಎಸ್ಎಲ್ವಿ ಉಡಾವಕದ ಈ ಯಶಸ್ಸಿನ ಬೆನ್ನೇರಿ ಭಾರತವೂ ಈ ಮಾರುಕಟ್ಟೆಗೆ ಕನ್ನ ಹಾಕಬಹುದು. ಅಷ್ಟೇ ಅಲ್ಲ ಭಾರೀ ಗಾತ್ರದ ಉಪಗ್ರಹಗಳ (3500ರಿಂದ 5500 ಕೆ.ಜಿ.) ಉಡಾವಣೆಗೆ ಈವರೆಗೆ ಭಾರತ ವಿದೇಶಿ ಉಡಾವಕಗಳ ಮೊರೆ ಹೋಗಬೇಕಿತ್ತು. ಇದಕ್ಕೆ ಏನಿಲ್ಲವೆಂದರೂ 500 ಕೋಟಿ ರೂ. ತಗುಲುತ್ತಿತ್ತು. ಆದರೆ ಈಗ ಇದೇ ಜಿಎಸ್ಎಲ್ವಿ ಮಡಿಲಿನಿಂದ ಚಿಮ್ಮಿ ಕಕ್ಷೆಗೆ ಹಾರಿದ ಜಿಸ್ಯಾಟ್ ಉಪಗ್ರಹ ಉಡಾವಣೆಗೆ ತಗುಲಿದ ವೆಚ್ಚ 145 ಕೋಟಿ ರೂ. ಅಂದರೆ ಸುಮಾರು 350 ಕೋಟಿ ರೂ.ಗಳ ಉಳಿತಾಯ! ಈ ಯಶಸ್ಸನ್ನು ಕೇವಲ ವಹಿವಾಟು-ಉಳಿತಾಯದ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ಏಕೆಂದರೆ ಒಟ್ಟಾರೆ ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಆಯಕಟ್ಟಿನ ಬೆಳವಣಿಗೆ.
1999ರಲ್ಲಿ ಅತಿ ಭೀಕರ ಚಂಡಮಾರುತ ದೇಶದ ಕರಾವಳಿಗೆ ಅಪ್ಪಳಿಸಿತ್ತು. ಆಂಧ್ರ, ಒರಿಸ್ಸಾದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಪ್ರಾಣ ತೆತ್ತರು. ಅದೇ ತೀವ್ರತೆಯ ಚಂಡಮಾರುತ ಕಳೆದ ವರ್ಷವೂ ಕಾಣಿಸಿಕೊಂಡಿತು. ಈ ಬಾರಿ ಆದ ಪ್ರಾಣ ಹಾನಿ 50. ಇದು ಸಾಧ್ಯವಾಗಿದ್ದು ಭಾರತ 2000ದ ಇಸವಿಯ ಆದಿ ಭಾಗದಲ್ಲಿ ಉಡಾಯಿಸಿದ್ದ ಇನ್ಸ್ಯಾಟ್ ಸರಣಿ ಉಪಗ್ರಹಗಳಿಂದ. ಈಗ ಉಡಾವಣೆಯಾಗಿರುವ ಜಿಸ್ಯಾಟ್-14 ಭಾರತದ ಸುತ್ತಮುತ್ತ 1500 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಉಂಟಾಗುವ ಹವಾಮಾನ ಬದಲಾವಣೆ ಮೇಲೆ ನಿಗಾ ಇಡುವ ಸಾಮರ್ಥ್ಯ ಹೊಂದಿದೆ. ಅಂದರೆ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದಂತೆ ಪೂರ್ವಭಾವಿ, ನಿಖರ ಮಾಹಿತಿ ಕಲೆ ಹಾಕಿ ಜನರನ್ನು ರಕ್ಷಿಸುವ ಕೆಲಸದಲ್ಲಿ ಇದು ಅತ್ಯುಪಯುಕ್ತವಾಗಲಿದೆ.
2008ರ ನವೆಂಬರ್ 26. ದೇಶ ಎಂದೂ ಮರೆಯಲಾಗದ ದಿನ. ಪಾಕಿಸ್ತಾನಿ ಭಯೋತ್ಪಾದಕರು ಭಾರತದ ಹೃದಯಕ್ಕೇ (ಮುಂಬೈ) ಬಾಂಬಿಟ್ಟು 167 ಜನರನ್ನು ಬಲಿ ತೆಗೆದುಕೊಂಡರು. ಈ ಹೇಯ ಕೃತ್ಯಕ್ಕೆ ಇವರು ಬಳಸಿದ್ದು ಸ್ಯಾಟಲೈಟ್ ಫೋನ್ಗಳನ್ನು. ಆದರೆ ಇದನ್ನು ಕದ್ದಾಲಿಸುವ ಸಾಧನ, ಸಾಮರ್ಥ್ಯ ಭಾರತಕ್ಕಿರಲಿಲ್ಲ. ಈ ಘಟನೆ ನಡೆದ ನಂತರ ಭಾರತವು ಇಸ್ರೇಲಿನಿಂದ RISAT2 ಉಪಗ್ರಹವನ್ನು ಖರೀದಿಸಿ ಉಡಾಯಿಸಿತು. ಮಾಹಿತಿ ಕಲೆ ಹಾಕುವಲ್ಲಿ ಸೇನೆಗೆ ನೆರವು ನೀಡುವ ಉದ್ದೇಶದಿಂದ ಸ್ಥಾಪನೆಯಾದ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಕೇಂದ್ರ (NTRO) ಈ ಉಪಗ್ರಹದಿಂದ ಬರುವ ಮಾಹಿತಿಯನ್ನು ಕಲೆ ಹಾಕಿ ಸೇನಾ ಪಡೆಗಳ ತುರ್ತು ಗಮನಕ್ಕೆ ತರುತ್ತದೆ. ಇದರಿಂದ ದೇಶ ವಿರೋಧಿ ಶಕ್ತಿಗಳ ಹುನ್ನಾರ ಬಯಲು ಮಾಡಲು ರಕ್ಷಣಾ ಪಡೆಗಳಿಗೆ ಅನೂಕೂಲವಾಗುತ್ತದೆ. ಇಂದು ಅಮೆರಿಕ ತನ್ನ ವಾಯುಕ್ಷೇತ್ರದ ಸುತ್ತ ಕ್ಷಿಪಣಿ ನಿರೋಧಕ ಕವಚ ನಿರ್ಮಿಸಿಕೊಂಡಿದೆ. ಚೀನಾ ಅದೇ ನಿಟ್ಟಿನಲ್ಲಿದೆ. ಇದೆಲ್ಲ ಸಾಧ್ಯವಾಗಿರುವುದು ಅವು ಉಡಾಯಿಸಿರುವ ಸೂಕ್ಷ್ಮ ಉಪಗ್ರಹ ಜಾಲದ ಮೂಲಕವೇ. ಇಂತಹುದೇ ಉದ್ದೇಶದಿಂದ ಭಾರತ ತನ್ನ ಭೂ ಪ್ರದೇಶದಲ್ಲಿನ ಸೂಕ್ಷ್ಮ ಚಲನವಲನಗಳ ಮೇಲೆ ಕಣ್ಣಿಡಲು, ಮುಖ್ಯವಾಗಿ ಗಡಿಗಳಲ್ಲಿ ವಿರೋಧಿ ಸೇನಾ ಜಮಾವಣೆಗಳನ್ನು ಪತ್ತೆ ಹಚ್ಚಲು 11 ಉಪಗ್ರಹಗಳ ಜಾಲ ಸ್ಥಾಪಿಸಲು ಉದ್ದೇಶಿಸಿದೆ. ಇದು ಈ ವೇಳೆಗೆ ಕಾರ್ಯಗತವಾಗಬೇಕಿತ್ತು. ಆದರೆ ಜಿಎಸ್ಎಲ್ವಿ ಅಲಭ್ಯತೆಯಿಂದ ಕಾರ್ಯಸಾಧ್ಯವಾಗಿಲ್ಲ. ಜೊತೆಗೆ ಭಾರತೀಯ ಸೇನೆಗೆ ತನ್ನದೇಯಾದ ಪ್ರತ್ಯೇಕ ಸಂವಹನ ಮತ್ತು ನಿಗಾ ಉಪಗ್ರಹಗಳನ್ನು ಹೊಂದಲು ಸಾಧ್ಯವಾಗಿಲ್ಲ. ನಾಗರಿಕ ಉದ್ದೇಶಗಳಿಗೆ ಬಳಸಲಾಗುವ ತರಂಗಾಂತರಗಳಲ್ಲಿಯೇ ಅದು ಕಾರ್ಯಾಚರಿಸಬೇಕಿದೆ. ದಿನೇ ದಿನೇ ಸುತ್ತುವರಿಯುತ್ತಿರುವ, ಸದಾ ತಂಟೆಕೋರನಂತೆಯೇ ವರ್ತಿಸುತ್ತಿರುವ ಚೀನಾ, ಅದರ ಬೆನ್ನಿಗಂಟಿಕೊಂಡು ಭಾರತವನ್ನು ಅಸ್ಥಿರಗೊಳಿಸಲು ಹೊಂಚು ಹಾಕುತ್ತಿರುವ ಪಾಕಿಸ್ತಾನಗಳ ಪ್ರತಿ ನಡೆಯ ಮೇಲೂ ಮೈಯೆಲ್ಲ ಕಣ್ಣಾಗಿ ನಿಗಾ ವಹಿಸುವ ತುರ್ತು ಭಾರತಕ್ಕಿದೆ.
ಎರಡು ದಶಕಗಳಿಂದ ಗಗನಕುಸುಮವಾಗಿದ್ದ ಜಿಎಸ್ಎಲ್ವಿಯಿಂದಾಗಿ ಕುಂಠಿತಗೊಂಡಿದ್ದ ನಿಗಾ ಜಾಲಕ್ಕೆ ಕಾಯಕಲ್ಪ ನೀಡಲು ಇನ್ನು ಯಾವ ತಡೆಯೂ ಇಲ್ಲ. ಇಷ್ಟಕ್ಕೂ ಮೊನ್ನೆ ಶ್ರೀಹರಿಕೋಟಾದಿಂದ ಹಾರಿದ್ದು ಕೇವಲ ಒಂದು ರಾಕೆಟ್ ಅಥವಾ ಉಪಗ್ರಹವಲ್ಲ, ಬದಲಿಗೆ ಭಾರತದ ನೆಮ್ಮದಿಯ ನಾಳೆಗಳ ಕನಸಿನ ಗುಚ್ಛ. ಸರ್ಕಾರಿ ಬಂಗಲೆ, ಕೆಂಪು ಗೂಟದ ಕಾರುಗಳನ್ನು ಬೇಡ ಎನ್ನುವುದೇ ಜನ ಸೇವೆ ಎಂದುಕೊಳ್ಳುವ ಮಂತ್ರಿ, ಮುಖ್ಯಮಂತ್ರಿಗಳು, ಇಂದು ಮಾಡಿದ ಕೆಲಸ ಏನೆಂದರೆ ಹತ್ತು ವರ್ಷ ಬಿಟ್ಟು ಇತಿಹಾಸದಲ್ಲಿ ನೋಡಿ ಎನ್ನುವ ಪ್ರಧಾನಿಗಳ ನಡುವೆ ಸದ್ದಿಲ್ಲದೆ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕಿರುವ ವಿಜ್ಞಾನಿ ಸಮುದಾಯದ ಸಾಧನೆ ಸಾರ್ಥಕ ಎನಿಸುತ್ತದೆ. ಹೆಮ್ಮೆ ತರುತ್ತದೆ.


-ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

Ganesh Chaturthi ಎಫೆಕ್ಟ್; ಮತ್ತೆ ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ, ಇಂದಿನ ದರ ಪಟ್ಟಿ ಇಂತಿದೆ!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

SCROLL FOR NEXT