ಕ್ರಿಕೆಟ್, ಹಾಕಿ, ಚೆಸ್, ಟೆನಿಸ್, ಕಬಡ್ಡಿ... ಹೀಗೆ ಯಾವುದೇ ಕ್ರೀಡೆಯಿರಲಿ, ಅಲ್ಲೆಲ್ಲ ಗೋಚರಿಸುವ ಸಂಗತಿ ಏನೆಂದರೆ- ಕಟ್ಟಾ ಎದುರಾಳಿಗಳು ಅನ್ನಿಸಿಕೊಂಡ ತಂಡಗಳ ಆಟಗಾರರು, ಮೈದಾನದ ಹೊರಗೆ ಕೂಡ ಹೆಚ್ಚಿನ ಸಂದರ್ಭಗಳಲ್ಲಿ ಶತ್ರುಗಳಂತೆಯೇ ಬದುಕುತ್ತಾರೆ. ಆಟ ಶುರುವಾಗಲು ನಾಲ್ಕೈದು ದಿನ ಇರುವಾಗಲೇ ಈ ಬಾರಿ ಅವರಿಗೆ ಸರಿಯಾದ ಪಾಠ ಕಲಿಸ್ತೇವೆ. ನಮ್ಮ ಮುಂದೆ ಅವರ ಆಟ ನಡೆಯುವುದಿಲ್ಲ' ಎಂದೆಲ್ಲಾ ಪತ್ರಿಕಾ ಹೇಳಿಕೆ ನೀಡಿ ಪ್ರತಿಸ್ಪರ್ಧಿಗಳನ್ನು ಕೆರಳಿಸುತ್ತಾರೆ. ಎರಡೂ ಕಡೆಯವರು ಮೈ-ಮನದ ತುಂಬಾ ರೊಚ್ಚು ಮತ್ತು ಅಹಮಿಕೆಯನ್ನೇ ತುಂಬಿಕೊಂಡು ಬರುವುದರಿಂದ ಕ್ರೀಡಾಂಗಣದಲ್ಲಿ ಆಟ ನರಳುತ್ತದೆ. ದ್ವೇಷ ಮೆರೆಯುತ್ತದೆ. ಅದರ ಪರಿಣಾಮವಾಗಿಯೇ ಪರಸ್ಪರರು ಆಶ್ಲೀಲವಾಗಿ ಸಂಜ್ಞೆ ಮಾಡುವ, ಕರಿಯ-ಬಿಳಿಯ ಎಂದು ಬೈದುಕೊಳ್ಳುವ, ವೈಯಕ್ತಿಕ ನಿಂದನೆಗೆ ಮುಂದಾಗುವ, ಕೈ -ಕೈ ಮಿಲಾಯಿಸುವ, ಭುಜ ಕಚ್ಚುವಂಥ ಅಪಸವ್ಯಗಳು ನಡೆದು ಬಿಡುತ್ತವೆ. ವಾಸ್ತವ ಹೀಗಿರುವಾಗ, ಕ್ರೀಡಾಂಗಣದಲ್ಲಿ ಭೇಟಿಯಾದ ಪ್ರತಿಸ್ಪರ್ಧಿಗಳಿಬ್ಬರು, ಆನಂತರದಲ್ಲಿ, ಒಡಹುಟ್ಟಿದವರಿಗಿಂತ ಹೆಚ್ಚು ಅನ್ಯೋನ್ಯವಾಗಿ ಬದುಕಿದ ಹೃದಯಂಗಮ ಕಥನವೊಂದರ ವಿವರಣೆ ಇಲ್ಲಿದೆ.
ಈ ಕಥೆಗೆ ಇಬ್ಬರು ನಾಯಕರು: ಒಬ್ಬನ ಹೆಸರು, ಜೆಸ್ಸಿ ಓವೆನ್ಸ್. ಮತ್ತೊಬ್ಬ ಲುಜ್‌ಲಾಂಗ್. ಓವೆನ್ಸ್ ಕರಿಯ. ಲುಜ್‌ಲಾಂಗ್ ಬಿಳಿಯ. ಪರಸ್ಪರ ವಿರುದ್ಧ ದಿಕ್ಕುಗಳಂತೆ ಇದ್ದ ಆಟಗಾರರು. ಒಂದೇ ಜೀವ, ಎರಡು ದೇಹ ಅನ್ನುವಂತೆ ಆಗಿ ಹೋದ ಸಂದರ್ಭವನ್ನು ತಿಳಿಯುವ ಮೊದಲು, ಇವರಿಬ್ಬರ ಹಿನ್ನೆಲೆ ತಿಳಿಯೋಣ.
ಅಮೆರಿಕದ ಅಲಬಾಮಾ ರಾಜ್ಯದಲ್ಲಿ, 1914ರಲ್ಲಿ ಜನಿಸಿದ್ದ ಓವೆನ್ಸ್‌ನ ಪೂರ್ಣ ಹೆಸರು ಜಾನ್ ಕ್ಲೀವ್‌ಲ್ಯಾಂಡ್ ಓವೆನ್ಸ್. ಹನ್ನೊಂದು ಮಕ್ಕಳ ಬಡ ಕುಟುಂಬದಲ್ಲಿ ಇವನು ಹತ್ತನೇ ಕೂಸು. ಅವನ ತಂದೆ ಬಡ ರೈತ. ಕಿತ್ತು ತಿನ್ನುವ ಬಡತನದಲ್ಲೂ, ಓವೆನ್ಸ್‌ಗೆ ಓಡುವ ಛಲವಿತ್ತು. 19 ವರ್ಷದವನಿದ್ದಾಗಲೇ 100 ಮೀಟರ್ ಓಟದಲ್ಲಿ ಈತ ವಿಶ್ವದಾಖಲೆಯನ್ನು ಸರಿಗಟ್ಟಿದ್ದ. ಮುಂದೆ, ಅಂತರಕಾಲೇಜು ಪಂದ್ಯಾಟದ ಬಳಿಕ ಓವೆನ್ಸ್‌ನ ಸಾಧನೆಯನ್ನು ಗಮನಿಸಿದ 29 ವಿಶ್ವವಿದ್ಯಾಲಯಗಳು, ಅವನಿಗೆ ಶಿಷ್ಯವೇತನ ನೀಡಲು ಮುಂದೆ ಬಂದಿದ್ದವು!
ಜಾನ್‌ಕ್ಲೀವ್ ಲ್ಯಾಂಡ್ ಓವೆನ್ಸ್ ಎಂಬುದು, ನಂತರದಲ್ಲಿ ಜೆ.ಸಿ. ಓವೆನ್ಸ್ ಎಂದು ಸಂಕ್ಷಿಪ್ತಗೊಂಡರೂ, ಅಮೆರಿಕದ ಜನ ಅದನ್ನು ಜೆಸ್ಸಿ ಓವೆನ್ಸ್ ಎಂದೇ ಕರೆದರು. ದಿನಕ್ಕೆ ಆರೂವರೆ ಗಂಟೆ ಪಾಠ ಹೇಳಿಸಿಕೊಂಡು, ಲಿಫ್ಟ್ ಚಾಲಕನಾಗಿ ಕೆಲಸ ಮಾಡುತ್ತಾ ಅಥ್ಲೆಟಿಕ್ಸ್‌ನ ಅಭ್ಯಾಸಕ್ಕೂ ಸಮಯ ಹೊಂದಿಸಿಕೊಳ್ಳುತ್ತಿದ್ದ ಓವೆನ್ಸ್‌ಗೆ ಬೆನ್ನು ನೋವು ಬಾಲ್ಯದಿಂದಲೇ ಶಾಪದಂತೆ ಅಂಟಿಕೊಂಡಿತ್ತು. ಆದರೆ, ಮೈದಾನಕ್ಕೆ ಇಳಿದ ತಕ್ಷಣವೇ ಓವೆನ್ಸ್, ಬೆನ್ನುನೋವು ಮರೆಯುತ್ತಿದ್ದ. ಬಿಲ್ಲಿನಿಂದ ಹೊರಟ ಬಾಣವಾಗುತ್ತಿದ್ದ. ತನ್ನ ವೇಗದಲ್ಲಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ಚಂಡಮಾರುತವಾಗುತ್ತಿದ್ದ. ಕ್ಲೀವ್‌ಲ್ಯಾಂಡ್‌ನ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗಲೇ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ, ಒಂದೇ ಗಂಟೆಯ ಅವಧಿಯಲ್ಲಿ 100 ಮೀಟರ್, 200 ಮೀಟರ್ ಓಟದ ಸ್ಪರ್ಧೆ, 220 ಮೀಟರ್‌ನ ಹರ್ಡಲ್ಸ್ ಹಾಗೂ ಲಾಂಗ್‌ಜಂಪ್‌ನಲ್ಲಿ ವಿಶ್ವದಾಖಲೆ ಮಾಡಿದ. ಈ ಅದ್ಭುತ ದಾಖಲೆಯನ್ನು ಎಡಗೈಲಿ ಹಿಡಿದುಕೊಂಡೇ 1936ರ ಬರ್ಲಿನ್ ಓಲಿಂಪಿಕ್ಸ್‌ಗೆ ಚಿನ್ನದ ಪದಕ ಗೆಲ್ಲಬಲ್ಲ ಅಮೆರಿಕದ ಆಟಗಾರ ಎಂಬ ವಿಶೇಷಣದೊಂದಿಗೆ ಓವೆನ್ಸ್ ಬಂದು ಬಿಟ್ಟ.
ಅವು, ಸರ್ವಾಧಿಕಾರಿ ಹಿಟ್ಲರ್‌ನ ವೈಭವದ ದಿನಗಳು. ಈ ಜಗತ್ತಿನಲ್ಲಿ ಬಿಳಿಯರೇ ಶ್ರೇಷ್ಠ ಜನ. ಕರಿಯರು ಸೇವೆ ಮಾಡಲೆಂದೇ ಹುಟ್ಟಿದವರು ಎಂಬುದು ಹಿಟ್ಲರ್‌ನ ವಾದವಾಗಿತ್ತು. ಜರ್ಮನ್ನರೇ ವಿಶ್ವ ಶ್ರೇಷ್ಠರು ಎಂದು ಜಗತ್ತಿನ ಎಲ್ಲರಿಗೂ ತೋರಿಸಿಕೊಡಬೇಕು ಎಂಬ ಸದಾಶಯದಿಂದಲೇ ಆತ ಬರ್ಲಿನ್ ಒಲಂಪಿಕ್ಸ್ ಆಯೋಜಿಸಿದ್ದ. ತನ್ನ ರಾಷ್ಟ್ರದ ಕ್ರೀಡಾಪಟುಗಳಿಗೆ ರಹಸ್ಯವಾಗಿ ತರಬೇತಿ ಕೊಡಿಸಿದ್ದ. ಕರಿಯರು ನಮ್ಮ ಕಡುವೈರಿಗಳು, ಅವರನ್ನು ನಿರ್ದಯವಾಗಿ ಹೊಸಕಿ ಹಾಕಿ ಎಂದು ಕಿವಿಮಾತು ಹೇಳಿದ್ದ. ಜರ್ಮನ್ ಆಟಗಾರರ ಕೌಶಲದ ಬಗ್ಗೆ ಎದುರಾಳಿ ತಂಡಕ್ಕೆ ಯಾವುದೇ ಮಾಹಿತಿಯೂ ಸಿಗದಂತೆ ಎಚ್ಚರಿಕೆ ವಹಿಸಿದ್ದ. ಇಷ್ಟೆಲ್ಲ ಎಚ್ಚರ ವಹಿಸಿದರೂ, ಓವೆನ್ಸ್‌ನ ಬಿರುಗಾಳಿ ವೇಗದ ಮುಂದೆ ಜರ್ಮನ್ ಆಟಗಾರರು ನಿತ್ರಾಣರಾದರು. ಓವೆನ್ಸ್ 100 ಹಾಗೂ 200 ಮೀಟರ್ ಓಟದಲ್ಲಿ ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದ.
ಮುಂದೆ ನಡೆಯಲಿದ್ದುದು ಲಾಂಗ್‌ಜಂಪ್ ಸ್ಪರ್ಧೆ. ಇಲ್ಲಿ, ಓವೆನ್ಸ್‌ಗೆ ಎದುರಾಳಿಯಾಗಿದ್ದವನು ಜಂಪಿಂಗ್ ಸ್ಪೆಶಲಿಸ್ಟ್ ಎಂದೇ ಹೆಸರಾಗಿದ್ದ ಲುಜ್‌ಲಾಂಗ್. ಓಟದ ಸ್ಪರ್ಧೆಯಲ್ಲಿ ಅಮೆರಿಕದ ಆಟಗಾರನಿಂದ (ಅದರಲ್ಲೂ ಕರಿಯನಿಂದ) ಮುಖಭಂಗ ಅನುಭವಿಸಿದ್ದ ಜರ್ಮನ್ನರು, ಲಾಂಗ್‌ಜಂಪ್‌ನಲ್ಲಿ ಮಾತ್ರ ಲುಜ್‌ಲಾಂಗ್ ಗೆದ್ದೇ ತೀರುವನೆಂದು ನಂಬಿದ್ದರು. ಇಂಥದೊಂದು ನಂಬಿಕೆ ಜರ್ಮನ್ನರಿಗೆ ಮಾತ್ರವಲ್ಲ, ಹಿಟ್ಲರ್‌ಗೆ ಕೂಡ ಇತ್ತು.
ಕಡೆಗೊಮ್ಮೆ ಸ್ಪರ್ಧೆಯ ದಿನ ಬಂದೇ ಬಿಟ್ಟಿತು. ಅವತ್ತು ಸಮಾನ ಬಲದ ಅಸಾಮಾನ್ಯ ಆಟಗಾರರಿಬ್ಬರು ಲಾಂಗ್‌ಜಂಪ್‌ನ ಅಂಗಳಕ್ಕೆ ಬಂದಾಗ ವಾತಾವರಣದಲ್ಲಿ ಬಿಸಿಯೇರಿತು. ಎರಡೂ ರಾಷ್ಟ್ರಗಳಿಗೆ ಸೋಲು ಎಂಬುದು ಅಪಮಾನದ, ಗೆಲುವೆಂಬುದು ಪ್ರತಿಷ್ಠೆಯ ಸಂಕೇತವಾಗಿತ್ತು. ಆನಂತರ ಏನೇನಾಯಿತು ಎಂಬುದನ್ನು ತನ್ನ ಆತ್ಮಕತೆಯಲ್ಲಿ ಓವೆನ್ಸ್ ಹೀಗೆ ವಿವರಿಸಿದ್ದಾನೆ: 'ಲಾಂಗ್‌ಜಂಪ್ ಸ್ಪರ್ಧೆಯಲ್ಲಿ, ಮೊದಲು ಅರ್ಹತಾ ಸುತ್ತಿನ ಪಂದ್ಯಗಳನ್ನು ನಡೆಸಲಾಗುತ್ತದೆ. ಅದರಲ್ಲಿ ಯಶಸ್ವಿಯಾದರೆ ಮಾತ್ರ ಮುಂದಿನ ಸುತ್ತಿಗೆ ಪ್ರವೇಶ ದೊರೆಯುತ್ತದೆ. ಸ್ಪರ್ಧೆ ಆರಂಭವಾಯಿತು. ಎಲ್ಲರಿಗೂ ಶಾಕ್ ಆಗುವಂತೆ ಮೊದಲ ಎರಡು ಪ್ರಯತ್ನಗಳಲ್ಲಿ ನಾನು ಫೌಲ್ ಮಾಡಿದ್ದೆ. ಉಳಿದದ್ದು ಕಡೆಯ ಪ್ರಯತ್ನ. ಅಲ್ಲಿ ಯಶಸ್ವಿಯಾದರೆ ಮಾತ್ರ ಅಂತಿಮ ಸುತ್ತಿಗೆ ಹೋಗಲು ಅರ್ಹತೆ ದೊರೆಯುತ್ತಿತ್ತು. ಒಂದು ವೇಳೆ ಮತ್ತೆ ಫೌಲ್ ಮಾಡಿದ್ದರೆ ಸ್ಪರ್ಧೆಯಿಂದಲೇ ಹೊರಬೀಳಬೇಕಾಗುತ್ತಿತ್ತು. ಮುಂದೇನು ಮಾಡಲಿ ಎಂಬ ಚಡಪಡಿಕೆಯಲ್ಲೇ ಕಡೆಯ ಬಾರಿಗೆ ನೆಗೆಯಲು ಹೊರಟಾಗಲೇ, ಯಾರೋ ಗಟ್ಟಿಯಾಗಿ-'ಜೆಸ್ಸಿ ಓವೆನ್ಸ್...' ಎಂದು ಕೂಗಿ, ಮೆಲ್ಲಗೆ ಭುಜ ತಟ್ಟಿದರು. ತಕ್ಷಣ ಹಿಂತಿರುಗಿದರೆ, ಎದುರಿಗೆ ಲುಜ್‌ಲಾಂಗ್ ನಿಂತಿದ್ದ. ಜಗತ್ತಿನ ಅಷ್ಟೂ ಅಕ್ಕರೆಯನ್ನು ದನಿಯಲ್ಲಿ ತುಂಬಿಕೊಂಡಿದ್ದ ಆತ ಹೇಳಿದ: 'ಗೆಳೆಯಾ, ಓಟ ಶುರು ಮಾಡಲು ನೀನು ಹಾಕಿಕೊಂಡಿರುವ ಚೆಕ್ ಮಾರ್ಕ್‌ನಿಂದ ಒಂದು ಅಡಿ ಹಿಂದಕ್ಕೆ ಹೋಗು. ಅಲ್ಲಿಂದ ಓಟ ಆರಂಭಿಸು. ನಂತರ, ಟೇಕ್ ಆಫ್ ಬೋರ್ಡ್ ಮುಟ್ಟದೇ ಜಂಪ್ ಮಾಡು. ನಿನಗೆ ಜಯವಾಗುತ್ತದೆ' ಅಂದ. ಅಷ್ಟಕ್ಕೇ ಸುಮ್ಮನಾಗದೆ, ನಾನು ಎಲ್ಲಿಂದ ಓಟ ಆರಂಭಿಸಬೇಕು ಎಂಬುದನ್ನೂ ಮಾರ್ಕ್ ಮಾಡಿ ತೋರಿಸಿದ. ಅವನ ಸರಳ ಮಾತುಗಳಲ್ಲಿ ಸಂಚು, ವಂಚನೆ ಯಾವುದೂ ಕಾಣಲಿಲ್ಲ. ಆ ಕ್ಷಣಕ್ಕೆ ಲುಜ್‌ಲಾಂಗ್ ನನ್ನ ಪ್ರತಿಸ್ಪರ್ಧಿಯಲ್ಲ, ಆತ ನನ್ನ ಗೆಳೆಯ, ಗುರು, ಹಿತೈಷಿ, ಅನ್ನಿಸಿತು. ಅವನ ಸಲಹೆ ಪಾಲಿಸಿದೆ. ಅಂತಿಮ ಸುತ್ತಿನ ಜಂಪಿಂಗ್‌ನಲ್ಲಿ ಯಶಸ್ಸು ಕಂಡೆ.
ಮರುದಿನ ಲಾಂಗ್‌ಜಂಪ್‌ನ ಫೈನಲ್. ಆಗಲೂ ಲುಜ್‌ಲಾಂಗ್‌ನ ಸಲಹೆಯನ್ನೇ ಪಾಲಿಸಿದೆ. 26 ಅಡಿ ಐದೂಕಾಲು ಅಂಗುಲದಷ್ಟು ದೂರ ಜಿಗಿದು ಚಿನ್ನದ ಪದಕ ಪಡೆದೆ. ನನಗೆ ಸಹೃದಯ ಸಲಹೆ ನೀಡಿದ್ದ ಲುಜ್‌ಲಾಂಗ್ ಎರಡನೇ ಸ್ಥಾನ ಪಡೆದ. ನನ್ನ ಮತ್ತೊಂದು ಸಾಧನೆ ಕಂಡು ಹಿಟ್ಲರ್ ಮುಖ ಕಿವುಚಿಕೊಂಡ. ಒಬ್ಬ ಕ್ರೀಡಾಪಟುವಿನ ಸಾಧನೆಯನ್ನು ಮೆಚ್ಚುವ ಸೌಜನ್ಯವನ್ನು ಆತ ತೋರಲಿಲ್ಲ. ಗೆದ್ದವನ ಕೈ ಕುಲುಕುವ ಸಂಪ್ರದಾಯವನ್ನೂ ಪಾಲಿಸದೆ ಎದ್ದು ಹೋದ.
ಆದರೆ, ಮಾನವ ಸಂಬಂಧಗಳನ್ನು ಬೆಸೆಯುವ ಹೃದಯಂಗಮ ಘಟನೆ ಅಲ್ಲೇ ನಡೆಯಿತು. ಹಿಟ್ಲರ್‌ನ ಕೋಪವನ್ನು ಲೆಕ್ಕಿಸದ ಲುಜ್‌ಲಾಂಗ್, ಸ್ಪರ್ಧೆ ಮುಗಿಯುತ್ತಿದ್ದಂತೆಯೇ ಓಡೋಡಿ ಬಂದು ನನ್ನನ್ನು ಅಪ್ಪಿಕೊಂಡ. ಬಿಳಿಯರೇ ಮೇಲು. ಕರಿಯನ್ನು ಮುಟ್ಟಿಸಿಕೊಳ್ಳುವುದೇ ಮಹಾಪರಾಧ ಎಂದು ನಂಬಿದ್ದ ಜರ್ಮನ್ನರೆದುರು, ನೀಲಿ ಕಣ್ಣಿನ, ಹೊಂಗೂದಲಿನ ಚೆಲುವ ಲುಜ್‌ಲಾಂಗ್ ನನ್ನನ್ನು ಎತ್ತಿ ಹಿಡಿದು ಸಂಭ್ರಮದಿಂದ-'ಜೆಸ್ಸಿ ಓವೆನ್ಸ್...' ಎಂದು 3 ಬಾರಿ ಕರೆದ. ಕ್ರೀಡಾಂಗಣದಲ್ಲಿದ್ದ ಲಕ್ಷಕ್ಕೂ ಹೆಚ್ಚು ಮಂದಿ, ಅವನ ಮಾತುಗಳನ್ನು ರಿಪೀಟ್ ಮಾಡಿದ್ದರು. ಬರ್ಲಿನ್ ಒಲಿಂಪಿಕ್ಸ್ ಶುರುವಾದಾಗ ಕಟ್ಟಾ ಎದುರಾಳಿ ಅನ್ನಿಸಿಕೊಂಡಿದ್ದ ಲುಜ್‌ಲಾಂಗ್, ಕ್ರೀಡಾಕೂಟ ಮುಗಿಯುವಷ್ಟರಲ್ಲಿ ನನ್ನ ಆತ್ಮಬಂಧುವೇ ಆಗಿ ಹೋಗಿದ್ದ...'
ಒಲಿಂಪಿಕ್ಸ್‌ನ ನಂತರವೂ ಅವರಿಬ್ಬರ ಮಧ್ಯೆ ಪತ್ರಗಳು ವಿನಿಮಯವಾಗುತ್ತಿದ್ದವು. ಎರಡನೇ ಮಹಾಯುದ್ಧ ಆರಂಭವಾದಾಗ ಲಾಂಗ್, ಜರ್ಮನ್ ಸೈನ್ಯದೊಂದಿಗೆ ಯುದ್ಧಕ್ಕೆ ಹೋದ. ಯುದ್ಧರಂಗದಿಂದ ಓವೆನ್ಸ್‌ಗೆ ಬರೆದ ಕಡೆಯ ಪತ್ರದಲ್ಲಿ ಹೀಗೆ ವಿವರಿಸಿದ: 'ಗೆಳೆಯಾ, ಇದೇ ನನ್ನ ಕೊನೆಯ ಪತ್ರವಾದರೆ ನೀನೊಂದು ಕೆಲಸ ಮಾಡಬೇಕು. ಯುದ್ಧ ಮುಗಿದ ನಂತರ ಜರ್ಮನಿಗೆ ಹೋಗಿ ನನ್ನ ಮಗ ಕಾರ್ಲ್‌ನನ್ನು ಹುಡುಕು. ಯುದ್ಧ ಮನುಷ್ಯರನ್ನು ಪ್ರತ್ಯೇಕಿಸದಿದ್ದಾಗ ನಮ್ಮ ಬದುಕು ಎಷ್ಟು ಚೆಂದವಿತ್ತು. ಮಾನವ ಸಂಬಂಧಗಳು ಎಷ್ಟೊಂದು ಚೈತನ್ಯದಿಂದ ಕೂಡಿದ್ದವು ಎಂಬುದನ್ನು ವಿವರಿಸು...'
ಈ ಪತ್ರ ಬರೆದ ಕೆಲವೇ ದಿನಗಳಲ್ಲಿ ಲುಜ್‌ಲಾಂಗ್ ರಣರಂಗದಲ್ಲೇ ಮಡಿದ. ಸ್ನೇಹಿತನ ಕೋರಿಕೆಯನ್ನು ಈಡೇರಿಸಲು ಜರ್ಮನಿಗೆ ಹೋದ ಜೆಸ್ಸಿ ಓವೆನ್ಸ್, ಕಡೆಗೂ ಕಾರ್ಲ್‌ನನ್ನು ಹುಡುಕಿದ. 1936ರ ಓಲಿಂಪಿಕ್ಸ್‌ನ ಸಂದರ್ಭ, ಲುಜ್‌ಲಾಂಗ್ ತನ್ನ ಹೃದಯಗೆದ್ದ ಹೃದಯಂಗಮ ಸನ್ನಿವೇಶ ಹಾಗೂ ಓಲಿಂಪಿಕ್ಸ್‌ನ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ತಾನು ಚಿನ್ನದ ಪದಕ ಗೆಲ್ಲಲು ಆತ ಮಾಡಿದ ಸಹಾಯವನ್ನು ನೆನಪಿಸಿಕೊಂಡ. ಆಟದ ಅಂಗಳವನ್ನು ಮಾತ್ರವಲ್ಲ, ವರ್ಣಬೇಧ ನೀತಿಯ ಕಂದಕವನ್ನು ದಾಟಿ ತಮ್ಮ ಸಂಬಂಧ ಬೆಳೆದಿದ್ದನ್ನು ವಿವರಿಸುತ್ತಾ ಕಣ್ಣೀರಾದ.
ಇದಾಗಿ ಕೆಲವು ವರ್ಷಗಳ ನಂತರ, ಕಾರ್ಲ್‌ನ ಮದುವೆಗೆ ಸಿದ್ಧತೆ ನಡೆಯಿತು. (ವಿದೇಶಗಳಲ್ಲಿ ಮದುವೆಯ ದಿನ ತನ್ನ ಪಕ್ಕದಲ್ಲಿ ನಿಲ್ಲಲು ಗೆಳೆಯನನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಮದುಮಗನಿಗಿರುತ್ತದೆ. ಮದುವೆ ಗಂಡಿನ ಪಕ್ಕ ನಿಲ್ಲುವವನನ್ನು ಬೆಸ್ಟ್ ಮ್ಯಾನ್ ಎಂದು ಕರೆಯುತ್ತಾರೆ.) ಮದುವೆಯಲ್ಲಿ ಬೆಸ್ಟ್ ಮ್ಯಾನ್ ಪಟ್ಟಕ್ಕೆ ಗೆಳೆಯರು ಅಥವಾ ಬಂಧುಗಳನ್ನು ಕಾರ್ಲ್ ಆಯ್ಕೆ ಮಾಡಲಿಲ್ಲ. ಬದಲಿಗೆ, ಅಮೆರಿಕದಲ್ಲಿದ್ದ ಬಡ ರೈತನ ಮಗ, ಕರಿಯ, ಜೆಸ್ಸಿ ಓವೆನ್ಸ್‌ನನ್ನು ಆಯ್ಕೆ ಮಾಡಿಕೊಂಡ. ಜೆಸ್ಸಿ ಓವೆನ್ಸ್ ಹಾಗೂ ಲುಜ್‌ಲಾಂಗ್ ನಡುವಣ ಗಾಢ ಸಂಬಂಧಕ್ಕೆ ಅಂದು ಹೊಸ ಅರ್ಥ ದೊರಕಿತು. ಒಲಿಂಪಿಕ್ಸ್ ಎಂಬುದು ವಿಶ್ವದ ಜನರನ್ನು ಒಂದುಗೂಡಿಸುವ ಮಹಾನ್ ವೇದಿಕೆ ಎಂಬ ಮಾತು ಆ ಕ್ಷಣದಲ್ಲಿ ನಿಜವಾಗಿ ಹೋಯಿತು...
----
ಆಟದ ಅಂಗಳದಲ್ಲಿ ಕಟ್ಟಾ ಎದುರಾಳಿಗಳಾಗಿದ್ದ, ಎರಡು ಭಿನ್ನ ಸಮುದಾಯಕ್ಕೆ ಸೇರಿದ್ದ ಮಹಾನ್ ಆಟಗಾರರು, ಆನಂತರದಲ್ಲಿ ಒಡಹುಟ್ಟಿದವರಿಗಿಂತ ಹೆಚ್ಚು ಅನ್ಯೋನ್ಯವಾಗಿ ಬದುಕಿನ ಇಂಥ ಉದಾಹರಣೆ ಕ್ರೀಡಾ ಜಗತ್ತಿನಲ್ಲಿ ಮತ್ತೊಂದು ಇಲ್ಲವೇನೋ. ಈ ಹೃದ್ಯ ಘಟನೆಯ ವಿವರವನ್ನು ಕನ್ನಡದಲ್ಲಿ ಮೊದಲು ಬರೆದವರು ಹಿರಿಯ ಲೇಖಕ ಕೆ. ಪುಟ್ಟಸ್ವಾಮಿ. ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಟಗಾರನೊಬ್ಬ ಎದುರಾಳಿಯ ಭುಜ ಕಚ್ಚಿದಾಗ, ಓವೆನ್ಸ್ -ಲುಜ್‌ಲಾಂಗ್‌ರ ಮಧುರ ಬಾಂಧವ್ಯದ ಬಗ್ಗೆ ತಿಳಿಸಿ, ಈ ಬಗ್ಗೆ ಬರೆಯುವಂತೆ ಹುರಿದುಂಬಿಸಿದ್ದೂ ಪುಟ್ಟಸ್ವಾಮಿಯವರೇ. ಅವರಿಗೆ ಧನ್ಯವಾದ. ಮಾನವ ಸಂಬಂಧಕ್ಕೆ ಹೊಸ ಅರ್ಥ ನೀಡಿದ ಜೆಸ್ಸಿ ಓವೆನ್ಸ್-ಲುಜ್‌ಲಾಂಗ್ ಎಂಬ ಸ್ಮರಣೀಯ ಚೇತನಗಳಿಗೆ ನಮಸ್ಕಾರ.
-ಎ.ಆರ್. ಮಣಿಕಾಂತ್
armanikanth@gmail.com