ಸರ್ಕಾರದ ಬೊಕ್ಕಸಕ್ಕೆ ಕಿಕ್ ಕೊಟ್ಟ ಮದ್ಯ ಪ್ರಿಯರು: ಮಾರಾಟ ಶೇ.41ರಷ್ಟು ಹೆಚ್ಚಳ, ಅಬಕಾರಿ ಆದಾಯ ಭಾರೀ ಏರಿಕೆ..!

ಒಟ್ಟಾರೆ ಅಬಕಾರಿ ಆದಾಯ ಸಂಗ್ರಹದಲ್ಲೂ ಶೇ.13.39ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ರೂ.19,570.23 ಕೋಟಿ ಆದಾಯ ಸಂಗ್ರಹವಾಗಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ ರೂ.22,191.63 ಕೋಟಿ ಸಂಗ್ರಹವಾಗಿದೆ.
liquor  (File photo)
ಮದ್ಯ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ರಾಜ್ಯದಲ್ಲಿ ಆಲ್ಕೋಹಾಲ್ ಇನ್ ಬೆವರೇಜ್ (ಎಐಬಿ) ನೀತಿಯ ಪರಿಣಾಮ ಬಿಯರ್ ಮಾರಾಟದಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮೊದಲ ಆರು ತಿಂಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಿಯರ್ ಮಾರಾಟದ ಪ್ರಮಾಣ ಶೇ.41.32ರಷ್ಟು ಹೆಚ್ಚಾಗಿದೆ.

ಈ ವರ್ಷದ ಮೊದಲಾರ್ಧದಲ್ಲಿ ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆ ರೂ.3,377.88 ಕೋಟಿ ಆದಾಯ ಸಂಗ್ರಹಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ.2,836.64 ಕೋಟಿ ಆದಾಯ ಬಂದಿತ್ತು. ಅಂದರೆ ಈ ಬಾರಿ ರೂ.541.24 ಕೋಟಿ ಹೆಚ್ಚುವರಿ ಆದಾಯ ದಾಖಲಾಗಿದೆ.

ಒಟ್ಟಾರೆ ಅಬಕಾರಿ ಆದಾಯ ಸಂಗ್ರಹದಲ್ಲೂ ಶೇ.13.39ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ರೂ.19,570.23 ಕೋಟಿ ಆದಾಯ ಸಂಗ್ರಹವಾಗಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ ರೂ.22,191.63 ಕೋಟಿ ಸಂಗ್ರಹವಾಗಿದೆ. ಇದರಲ್ಲಿ ಭಾರತೀಯ ನಿರ್ಮಿತ ಮದ್ಯ, ಬಿಯರ್ ಮಾರಾಟ, ಪರವಾನಗಿ ಶುಲ್ಕ, ದಂಡ ಸೇರಿದಂತೆ ವಿವಿಧ ಮೂಲಗಳಿಂದ ಬಂದ ಆದಾಯ ಸೇರಿದೆ.

2026-27ನೇ ಸಾಲಿಗೆ ಅಬಕಾರಿ ಇಲಾಖೆಗೆ ರೂ.45,000 ಕೋಟಿ ಆದಾಯ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ. ಮೊದಲ ಆರು ತಿಂಗಳಲ್ಲೇ ಇಲಾಖೆ ಗುರಿಯ ಅರ್ಧದಷ್ಟು ಮೊತ್ತದ ಸಮೀಪ ತಲುಪಿದ್ದು, ಮುಂಬರುವ ಹಬ್ಬಗಳ ಋತುವಿನಲ್ಲಿ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಮೇ 11ರಂದು ಜಾರಿಗೆ ಬಂದ ಎಐಬಿ ನೀತಿಯಡಿ ಶೇ.5ರಷ್ಟು ಆಲ್ಕೋಹಾಲ್ ಅಂಶ ಹೊಂದಿರುವ ಲಾಗರ್ ಬಿಯರ್‌ಗಳು ಹಾಗೂ ಸ್ಕಾಚ್ ವಿಸ್ಕಿ ಸೇರಿದಂತೆ ಕೆಲವು ಪ್ರೀಮಿಯಂ ಭಾರತೀಯ ನಿರ್ಮಿತ ಮದ್ಯಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಇದರ ಬಳಿಕ ಬಿಯರ್ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

liquor  (File photo)
ವೈನ್‌ ಶಾಪ್‌ಗೆ ನುಗ್ಗಿ ಕೈಗೆ ಸಿಕ್ಕ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ! Video

ಏಪ್ರಿಲ್‌ನಿಂದ ಜೂನ್‌ವರೆಗೆ ಬಿಯರ್ ಮಾರಾಟ ಶೇ.34.92ರಷ್ಟು ಹೆಚ್ಚಾಗಿದ್ದರೆ, ಜುಲೈನಿಂದ ಸೆಪ್ಟೆಂಬರ್‌ವರೆಗೆ ಶೇ.49.69ರಷ್ಟು ಏರಿಕೆಯಾಗಿದೆ. ಇದರ ಪರಿಣಾಮ ಮೊದಲ ಆರು ತಿಂಗಳ ಒಟ್ಟಾರೆ ಬೆಳವಣಿಗೆ ಶೇ.41.32ಕ್ಕೆ ತಲುಪಿದೆ.

ಇದಕ್ಕೆ ಹೋಲಿಸಿದರೆ ಭಾರತೀಯ ನಿರ್ಮಿತ ಮದ್ಯದ ಮಾರಾಟದಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಶೇ.1.14ರಷ್ಟು ಮಾತ್ರ ಏರಿಕೆಯಾಗಿದೆ. ಈ ಅವಧಿಯಲ್ಲಿ ಭಾರತೀಯ ನಿರ್ಮಿತ ಮದ್ಯದಿಂದ ರೂ.17,424.57 ಕೋಟಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ರೂ.15,376.22 ಕೋಟಿ ಆದಾಯ ಬಂದಿತ್ತು.

ಬಿಯರ್‌ಗೆ ಹೋಲಿಸಿದರೆ ಭಾರತೀಯ ನಿರ್ಮಿತ ಮದ್ಯದಿಂದ ಬಂದ ಆದಾಯದ ಹೆಚ್ಚಳ ಕಡಿಮೆಯಾಗಿದೆ. ಆದರೆ ರೂ.90ರಿಂದ ಆರಂಭವಾಗಿ 180 ಮಿಲಿಗೆ ರೂ.165ರವರೆಗೆ ಬೆಲೆ ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳಿಂದ ಆದಾಯದಲ್ಲಿ ಹೆಚ್ಚಳವಾಗಿದೆ.

ಈ ವಿಭಾಗವೊಂದೇ ಒಟ್ಟು ಅಬಕಾರಿ ಆದಾಯದ ಶೇ.70ಕ್ಕೂ ಹೆಚ್ಚು ಪಾಲು ನೀಡುತ್ತದೆ” ಎಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಭಾರತೀಯ ನಿರ್ಮಿತ ಮದ್ಯದ ಬೆಲೆ ಹಾಗೂ ತೆರಿಗೆ ಸ್ಲ್ಯಾಬ್ ಆಧಾರದಲ್ಲಿ ನಿಗದಿಯಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com