ಅಂಕಣಗಳು

ಹೇಳಿ ಸ್ವಾಮೀ, ನಾನು ಹೆಣ್ಣಾಗಿ ಹುಟ್ಟಿದ್ದೇ ಅಪರಾಧವಾ?

'ಪ್ರಾಮಾಣಿಕವಾಗಿ ಹೇಳಿ ಬಿಡ್ತೇನೆ. ಬದುಕಲ್ಲಿ ನನಗೆ ಅಂಥಾ ಮಹತ್ವಾಕಾಂಕ್ಷೆಗಳು...

'ಪ್ರಾಮಾಣಿಕವಾಗಿ ಹೇಳಿ ಬಿಡ್ತೇನೆ. ಬದುಕಲ್ಲಿ ನನಗೆ ಅಂಥಾ ಮಹತ್ವಾಕಾಂಕ್ಷೆಗಳು ಇರಲಿಲ್ಲ. ಡಿಗ್ರಿ ಮಾಡಬೇಕು ಅಂತ ಆಸೆಯಿತ್ತೇ ವಿನಾ ಆನಂತರ ನೌಕರಿಗೆ ಸೇರಬೇಕೆಂದು ನಾನು ಬಯಸಿದವಳೇ ಅಲ್ಲ. ಪದವಿಯ ನಂತರ ಹೇಗಿದ್ದರೂ ಮದುವೆಯ ತಯಾರಿ ನಡೆಯುತ್ತದೆ. ಆಗ, ಅಪ್ಪ-ಅಮ್ಮ ಒಪ್ಪಿದ ಹುಡುಗನನ್ನು ಮದುವೆಯಾಗುವುದು. ಆನಂತರದಲ್ಲಿ, ದುಡಿದು ಹಾಕುವ ಹೊಣೆ ಅವನದು, ಮನೆಯ ನಿರ್ವಹಣೆ ನನ್ನದು.'
ವೈವಾಹಿಕ ಬದುಕಿನ ಬಗ್ಗೆ ನನಗಿದ್ದ ನಿರೀಕ್ಷೆಗಳು ಇಷ್ಟೇ. ಮುಂದೆ ಎಲ್ಲವೂ ಅಂದುಕೊಂಡಂತೆಯೇ ಆಯಿತು. ಕೋಲ್ಕತ್ತಾ ಮಹಾನಗರದ ಒಂದು ಏರಿಯಾದ ಬಾಡಿಗೆ ಮನೆಯೊಂದರಲ್ಲಿ ನಮ್ಮ ಹೊಸ ಬದುಕು ಆರಂಭವಾಯಿತು. ಪ್ರೈವೇಟ್ ಕಂಪನಿಯೊಂದರಲ್ಲಿ ನೌಕರಿಗಿದ್ದ ಅವನು, ಮಲ್ಲಿಗೆಯ ದಂಡೆಯೊಂದಿಗೇ ಮನೆಗೆ ಬರುತ್ತಿದ್ದ. ಇಡೀ ಮನೆಯಲ್ಲಿ ನಾವಿಬ್ಬರೇ. ಅಂದ ಮೇಲೆ ವಿವರಿಸಿ ಹೇಳಬೇಕಿಲ್ಲ ತಾನೆ? ಅವನು ಬಳಿ ಬರುತ್ತಿದ್ದಂತೆಯೇ ಆಸೆಯ ಮಿಂಚೊಂದು ಮೈಯಲ್ಲಿ ಹರಿದಂತೆ ಆಗುತ್ತಿತ್ತು. ಕೊಟ್ಟು-ಪಡೆಯುವ ಸಡಗರದಲ್ಲಿ ನಾವು ಮೈ ಮರೆತಿದ್ದಾಗಲೇ ಹೆಣ್ಣು ಮಗುವೊಂದು ನಮ್ಮ ಬಾಳಲ್ಲಿ ಬಂತು. ಅಮ್ಮನಾದ ಖುಷಿಯಲ್ಲಿ ನಾನು ತೇಲುತ್ತಿದ್ದಾಗಲೇ ಅದೊಂದು ರಾತ್ರಿ ನನ್ನ ಗಂಡ ಒರಟಾಗಿ ಹೇಳಿಬಿಟ್ಟ: 'ನನಗೆ ಹೆಣ್ಣು ಮಗು ಅಂದ್ರೆ ಇಷ್ಟವಿಲ್ಲ. ಹೆಣ್ಣು ಮಗು ಯಾವತ್ರಿದ್ರೂ ಹೆತ್ತವರಿಗೆ ಹೊರೇನೇ. ಮುಂದಿನ ಸಲ ನೀನು ಗಂಡು ಮಗುವನ್ನೇ ಹೆರಬೇಕು...'
ಮೊದಲೇ ಹೇಳಿದಂತೆ ನಾನು ಆಯ್ಕೆ ಮಾಡಿಕೊಂಡದ್ದು ವಿಧೇಯ ಹೆಂಡತಿಯ ಪಾತ್ರವನ್ನು. ಹಾಗಾಗಿ, ಗಂಡನಿಗೆ ತಿರುಗಿ ಬೀಳಲು ಸಾಧ್ಯವಿರಲಿಲ್ಲ. ಎರಡನೇ ಹೆರಿಗೆಯಲ್ಲಿ ಗಂಡು ಮಗುವೇ ಆಗಲಿ ಎಂದು ಪೂಜೆಗೆ ಕುಳಿತೆ. ಪ್ರಾರ್ಥನೆ ಸಲ್ಲಿಸಿದೆ. ಹರಕೆ ಕಟ್ಟಿಕೊಂಡೆ. ಬ್ಯಾಡ್ಲಕ್. ಎರಡನೇ ಮಗುವೂ ಹೆಣ್ಣೇ ಆಯಿತು. ಆನಂತರದಲ್ಲಿ ನನ್ನ ಗಂಡ ದಿಢೀರ್ ಬದಲಾದ. ವಿನಾಕಾರಣ ಜಗಳಕ್ಕೆ ಬರುತ್ತಿದ್ದ. ಎರಡೂ ಹೆಣ್ಣೇ ಆದುವಲ್ಲ ಎಂದು ಹಂಗಿಸುತ್ತಿದ್ದ. ತಿರುಗಿ ಮಾತಾಡಿದರೆ ಹೊಡೆಯುತ್ತಿದ್ದ. ಅವನ ಹಿಂಸೆ ಅತಿಯಾದಾಗ, ಅದೊಂದು ದಿನ ಮಕ್ಕಳೊಂದಿಗೆ ತವರಿಗೆ ಹೋಗಿಬಿಟ್ಟೆ. ಗಂಡ ಅನ್ನಿಸಿಕೊಂಡವನು ಅಲ್ಲಿಗೂ ಬಂದ. ಎಲ್ಲರೆದುರೇ ಜಗಳ ತೆಗೆದ. ಇಂಥದೊಂದು ಸಂದರ್ಭವನ್ನು ಕನಸಲ್ಲೂ ನಿರೀಕ್ಷಿಸಿರದಿದ್ದ ನನ್ನ ತಂದೆ ಕುಸಿದು ಬಿದ್ದರು. ಅದುವರೆಗೂ ಹುಚ್ಚನಂತೆ ಹಾರಾಡುತ್ತಿದ್ದ 'ಇವನು' ಮೆಲ್ಲಗೆ ಜಾಗ ಖಾಲಿ ಮಾಡಿದ. ತಂದೆಯವರನ್ನು ಆಸ್ಪತ್ರೆಗೆ ಸೇರಿಸಿದ್ದಾಯಿತು. ಮುಂದಿನ ಎರಡೇ ತಿಂಗಳಲ್ಲಿ ಅವರು ತೀರಿಕೊಂಡರು. ಆನಂತರದಲ್ಲಿ, ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನನ್ನ ಹೆಗಲೇರಿತು. ಬೇರೆ ದಾರಿಯಿಲ್ಲದೆ ಗಂಡನ ಮನೆಗೆ ಬಂದೆ. ಮತ್ತೆ ಅವನ ಕಿರಿಕಿರಿ ಶುರುವಾಯಿತು. ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡೆ. ಹೀಗಿದ್ದಾಗಲೇ, ಅದೊಂದು ಮುಂಜಾನೆ ಜಗಳವಾಡಿಕೊಂಡು ಅವನು ಎದ್ದು ಹೋದ. ಸಂಜೆಗೆ ವಾಪಸ್ ಬರಲಿಲ್ಲ. ಹೀಗೇ ದಿನಗಳು, ವಾರಗಳು ಕಳೆದವು. ಅವನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಗೆ ಹೋಗಿ ವಿಚಾರಿಸಿದಾಗ, ಆತ ಬೇರೊಂದು ಕಡೆಯಲ್ಲಿ ಕೆಲಸಕ್ಕೆ ಸೇರಿದ್ದಾನೆ ಮತ್ತು ಎರಡನೇ ಮದುವೆಯಾಗಿದ್ದಾನೆ ಎಂದು ತಿಳಿದು ಬಂತು.
ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಮ್ಮನನ್ನು ಮುಪ್ಪು ಆವರಿಸಿಕೊಳ್ಳುತ್ತಿತ್ತು. ಇಂಥ ಸಂದರ್ಭದಲ್ಲಿ 'ನಮ್ಮನ್ನೆಲ್ಲ' ನಡು ನೀರಿನಲ್ಲಿ ಬಿಟ್ಟು 'ಅವನು' ಹೊರಟು ಹೋಗಿದ್ದ. ಅದು ಅಳುತ್ತಾ ಕೂರುವ ಸಮಯವಾಗಿರಲಿಲ್ಲ. ಅಮ್ಮ, ಮಕ್ಕಳು ಹಾಗೂ ನನ್ನ ಹೊಟ್ಟೆಪಾಡಿನ ಕಾರಣಕ್ಕೆ ನಾನು ದುಡಿಯಲೇಬೇಕಿತ್ತು. ಸಂದರ್ಭ ಮತ್ತು ಸನ್ನಿವೇಶಗಳು ಎಲ್ಲವನ್ನೂ ಕಲಿಸುತ್ತವೆ ಎಂಬ ಮಾತು ನನ್ನ ಪಾಲಿಗೂ ಸತ್ಯವಾಯಿತು. ಅದುವರೆಗೂ ಮನೆಯಿಂದ ಹೊರಗೆ ಕಾಲಿಡದಿದ್ದ ನಾನು ಈಗ ಹೊಸ ಪಾತ್ರ ವಹಿಸಲು ಸಿದ್ಧಳಾದೆ. ಕಾಲ್ ಸೆಂಟರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ.
ಕಾಲ್ಸೆಂಟರ್ನ ನೌಕರಿ ಅಂದ ಮೇಲೆ ವಿವರಿಸಬೇಕಿಲ್ಲ ತಾನೆ? ಅಲ್ಲಿ ಇಡೀ ರಾತ್ರಿ ಕೆಲಸವಿರುತ್ತಿತ್ತು. ನೆರೆಹೊರೆಯವರೆಲ್ಲ ರಾತ್ರಿ ಊಟ ಮುಗಿಸಿ ಮಲಗಲು ಅಣಿಯಾಗುವ ವೇಳೆಗೆ ನಾನು ಕೆಲಸಕ್ಕೆ ಹೊರಡುತ್ತಿದ್ದೆ. ಇಡೀ ರಾತ್ರಿ ವಿದೇಶಿ ಗ್ರಾಹಕರ ಆದೇಶಗಳನ್ನು ಪಾಲಿಸುವುದು, ಕೆಲವೊಮ್ಮೆ ಅವರ ಬೈಗುಳಕ್ಕೆ ಬಲಿಯಾಗುವುದು, ಕಾಲ್ಸೆಂಟರಿನಲ್ಲೇ ಇರುವ ಪುರುಷರ 'ಕಾಕದೃಷ್ಟಿ'ಗೆ ಈಡಾಗುವುದು ನನ್ನ ಪಾಲಿನ ಕರ್ಮವೇ ಆಯಿತು. ಮಕ್ಕಳು ಮನೆಯಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಅಮ್ಮನೊಂದಿಗೆ ಎಲ್ಲವನ್ನೂ ಹೇಳಿಕೊಂಡು ಅಳುತ್ತಿದ್ದೆ. ದಿಕ್ಕು ತೋಚದಂತಾಗಿದ್ದ ಅಮ್ಮ, ತಾನೂ ಆಳುತ್ತಿದ್ದಳು.
ನನ್ನ ಸಂಕಟ ಗಮನಿಸಿದ ಗೆಳೆತಿಯೊಬ್ಬಳು, ವೀಕೆಂಡ್ನ ರಜೆಯಲ್ಲಿ ಗೆಳತಿಯರು ಅಥವಾ ಕುಟುಂಬದೊಂದಿಗೆ ದೇವಸ್ಥಾನ, ಸಿನಿಮಾ ಅಥವಾ ಹೋಟೆಲ್... ಹೀಗೆ ಎಲ್ಲಿಗಾದ್ರೂ ಹೋಗಿ ಬಾ. ಮನಸ್ಸಿಗೆ ಸ್ವಲ್ಪ ಚೇಂಜ್ ಸಿಗುತ್ತೆ. ಆಗ ಮನಸ್ಸು ಫ್ರೆಶ್ ಆಗುತ್ತೆ ಅಂದಳು. ಆನಂತರದಲ್ಲಿ ವೀಕೆಂಡ್ಗಳಲ್ಲಿ ಹೊರಗೆ ಹೋಗುವುದು ನನಗೂ ಅಭ್ಯಾಸವಾಯಿತು. ಕೆಲವೊಮ್ಮೆ ಅಮ್ಮ-ಮಕ್ಕಳು, ಕೆಲವೊಮ್ಮೆ ಆಫೀಸಿನ ಗೆಳತಿಯರು ಕಂಪನಿ ಕೊಡುತ್ತಿದ್ದರು. ಒಂದೊಂದು ಸಂದರ್ಭದಲ್ಲಿ ಗೆಳತಿಯರೊಂದಿಗೆ ಹರಟೆಗೆ ಕೂತರೆ ರಾತ್ರಿ ಹತ್ತು ಗಂಟೆಯಾದದ್ದೂ ತತಿಳಿಯುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ, ಬಾಡಿಗೆ ಕಾರ್ನಲ್ಲಿ ಮನೆಗೆ ಬರುವುದೂ ಅಭ್ಯಾಸವಾಯಿತು.
ಅವತ್ತು ಭಾನುವಾರ. ಬೆಳಗ್ಗೆಯಿಂದಲೇ ಯಾಕೋ ಬೋರ್ ಅನ್ನಿಸತೊಡಗಿತು. ಸಂಜೆ ಹೋಟೆಲಿಗೆ ಹೋಗೋಣ ಎಂದರೆ, ಮಕ್ಕಳು ಟೆಸ್ಟ್ನ ನೆಪ ಹೇಳಿ 'ಬರಲ್ಲ' ಅಂದವು. ಮಕ್ಕಳಿರುವ ಕಡೆಯಲ್ಲಿ ನಾನು ಎಂಂದಳು. ಆಫೀಸಿನ ಗೆಳತಿಯರು ಹೋಟೆಲಿಗೇ ಬರುತ್ತೇವೆ ಅಂದಿದ್ದರಿಂದ ನಾನು ಹೊರಟು ನಿಂತೆ. ಅವತ್ತು ನಾವು ಹೋಗಿದ್ದು ಒಂದು ಮಾಲ್ಗೆ. ಅಲ್ಲಿ ಹೋಟೆಲು ಮಾತ್ರವಲ್ಲ, ಒಂದು ನೈಟ್ ಕ್ಲಬ್ಬೂ ಇತ್ತು. ಇವತ್ತು ಕ್ಲಬ್ಗೆ ಹೋಗೋಣ. ಒಂದು ಗಂಟೆ ಮಾತ್ರ ಅಲ್ಲಿದ್ದು ಬಂದು ಬಿಡೋಣ ಎಂದು ಗೆಳತಿಯರು ಒತ್ತಾಯಿಸಿದರು. ಮನಸ್ಸಿಗೆ ಚೇಂಜ್ ಬೇಕಿತ್ತಲ್ಲ, ಹಾಗಾಗಿ ಒಪ್ಪಿಕೊಂಡೆ. ನಾವು ಕ್ಲಬ್ನ ಒಳಹೊಕ್ಕು ಅರ್ಧಗಂಟೆಯಾಗಿರಬಹುದು. ಆಗಲೇ ಟಿಪ್ಟಾಪ್ ಆಗಿ ಡ್ರೆಸ್ ಮಾಡಿಕೊಂಡಿದ್ದ ಆಸಾಮಿಯೊಬ್ಬ ಬಂದ. ಎಲ್ಲರನ್ನೂ ಪರಿಚಯಿಸಿಕೊಂಡ. ಬಹುರಾಷ್ಟ್ರೀಯ ಕಂಪನಿಯ ಎಚ್ಆರ್ ವಿಭಾಗದಲ್ಲಿ ಮೆನೇಜರ್ ಎಂದು ತನ್ನ ಬಗ್ಗೆ ಹೇಳಿಕೊಂಡ. ನಂತರ ಅರ್ಧ ಗಂಟೆಯಲ್ಲಿ ಗೆಳತಿಯರೆಲ್ಲ ಎದ್ದು ನಿಂತರು. ಟೈಂ ಆಯ್ತು ಹೊರಡೋಣ ಎಂದು ಅವಸರಿಸಿದರು. ಅವತ್ತು ಯಾಕಾದರೂ ಹಾಗೆಂದೆನೋ ಕಾಣೆ. ನೀವು ಹೋಗಿ. ಸ್ವಲ್ಪ ಲೇಟಾಗಿ ಬರ್ತೇನೆ. ಮನಸ್ಸಿಗೆ ಸ್ವಲ್ಪ ಏಕಾಂತ ಬೇಕಿದೆ ಅಂದುಬಿಟ್ಟೆ. ಗೆಳತಿಯರು -ಹುಷಾರು, ಗುಡ್ನೈಟ್, ಸೀಯೂ ಹೇಳಿ ಎದ್ದು ಹೋದರು. ಅವರೆಲ್ಲಾ ಹೋಗಿ ಹತ್ತು ನಿಮಿಷವಾಗಿಲ್ಲ; ಆ ಟಿಪ್ಟಾಪ್ ಮನುಷ್ಯ ಮತ್ತೆ ಬಂದ. ತುಂಬ ಗೌರವದಿಂದ ಮಾತಾಡಿದ. ನಮ್ಮ ಕಂಪನೀಲಿ ಕೆಲಸ ಕೊಡಿಸ್ತೇನೆ ಅಂದ. ಸೌಜನ್ಯದಿಂದಲೇ ನಿರಾಕರಿಸಿದೆ. ಆನಂತರ, ಯಾವ ಏರಿಯಾದಲ್ಲಿ ಮನೆ? ಇಲ್ಲಿಂದ ಹೇಗೆ ಹೋಗ್ತೀರ ಅಂದ. ಟ್ರಾವಲ್ಸ್ಗೆ ಫೋನ್ ಮಾಡ್ತೇನೆ ಅಂದೆ.
ಅಯ್ಯೋ, ಅಷ್ಟೊಂದು ರಿಸ್ಕ್ ಯಾಕೆ ಮೇಡಂ? ನಮ್ಮ ಕಂಪನಿ ವೆಹಿಕಲ್ಲಿ ಬಂದಿದೀವಿ. ನಿಮ್ಮ ಏರಿಯಾದ ರೂಟ್ನಲ್ಲೇ ಹೋಗ್ತೇವೆ. ನಿಮ್ಮನ್ನು ಹುಷಾರಾಗಿ ಮನೆ ತಲುಪಿಸ್ತೇವೆ. ನಾವು ನಿಮ್ಮ ಹಿತೈಷಿಗಳು ಅಂದ. ನಂತರ, ಅಷ್ಟು ದೂರದಲ್ಲಿದ್ದ ನಾಲ್ಕು ಜನರ ಬಳಿಗೆ ಹೋಗಿ, ಅವರೊಂದಿಗೆ ಏನೇನೋ ಮಾತಾಡಿದ. ಎಲ್ಲರೂ ಅವನ ಹಿಂದೆಯೇ ಬಂದರು. ನೀವು ನಮ್ಮ ಹೊಸಾ ಫ್ರೆಂಡು ಮೇಡಂ. ನಿಮಗೆ ಹೆಲ್ಪ್ ಮಾಡೋದು ನಮ್ಮ ಧರ್ಮ. ಇನ್ನು ಇಪ್ಪತ್ತು ನಿಮಿಷದಲ್ಲಿ ಹೊರಡ್ತೇವೆ. ಅರ್ಧ ಗಂಟೇಲಿ ನಿಮ್ಮನ್ನು ನೆಗೆ ಬಿಡ್ತೇವೆ. ಶಾಪಿಂಗ್ ಹೋಗುವುದಿದ್ರೆ ಮುಗಿಸ್ಕೊಂಡು ಬನ್ನಿ ಅಂದರು. ತಮ್ಮ ಕಂಪನಿಯ ವಾಹನದ ಸಂಖ್ಯೆಯನ್ನೂ ಹೇಳಿದರು.
ನಾವು ಹೊರಟಾಗ ರಾತ್ರಿ 9 ಗಂಟೆ. ಮೊದಲ  20 ನಿಮಿಷ ಎಲ್ಲವೂ ಸರಿಯಾಗಿತ್ತು. ಆನಂತರದಲ್ಲಿ ಪಕ್ಕದಲ್ಲಿ ಕುಳಿತವನೊಬ್ಬ ಹೆಗಲ ಮೇಲೆ ಕೈ ಹಾಕಿದ. ಭಯದಿಂದ ಹಿಂದೆ ತಿರುಗಿದರೆ, ಟಿಪ್ಟಾಪ್ ಆಸಾಮಿ, ಕೀಚಕನಂತೆ ನಕ್ಕ. ಅದೇ ವೇಳೆಗೆ ವಾಹನದಲ್ಲಿದ್ದ ರೇಡಿಯೋದ ಸದ್ದು ಹೆಚ್ಚಿತು. ಏನೋ ಅನಾಹುತವಾಗಲಿದೆ ಎಂದು ಗೊತ್ತಾದ ತಕ್ಷಣ, ಮನೇಲಿ ಮಕ್ಕಳಿವೆ. ವಯಸ್ಸಾದ ಅಮ್ಮ ಇದ್ದಾಳೆ. ನೀವೆಲ್ಲಾ ನನ್ನ ಸೋದರರು. ಪ್ಲೀಸ್. ನನಗೆ ಏನೂ ತೊಂದರೆ ಮಾಡಬೇಡಿ. ಇಲ್ಲೇ ಇಳಿಸಿಬಿಡಿ. ಹೇಗಾದ್ರೂ ಮನೆ ಸೇರ್ಕೋತೇನೆ. ನಿಮ್ಮ ದಮ್ಯಯ್ಯ ಎಂದೆಲ್ಲಾ ಬೇಡಿಕೊಂಡೆ. ಉಹುಂ, ಆ ಧೂರ್ತರಿಗೆ ನನ್ನ ಮಾತುಗಳು ಕೇಳಿಸಲೇ ಇಲ್ಲ. ಒಬ್ಬ ನನ್ನ ಬಾಯಿ ಮುಚ್ಚಿದ. ಮತ್ತೊಬ್ಬ ಬಟ್ಟೆ ಹರಿದ. ಇನ್ನೊಬ್ಬ ಕರಡಿಯಂತೆ ತಬ್ಬಿಕೊಂಡ...ಒಂದು ಗಂಟೆಯ ನಂತರ ಅಪರಿಚಿತ ಪ್ರದೇಶದಲ್ಲಿ ವ್ಯಾನ್ ನಿಲ್ಲಿಸಿದ ಅವರು, ಯಾರಿಗಾದ್ರೂ ಹೇಳಿದ್ರೆ ಕೊಂದು ಬಿಡ್ತೀವಿ ಎಂದು ಎಚ್ಚರಿಸಿ, ನನ್ನನ್ನು ಕಾರ್ನಿಂದ ಹೊರಗೆ ನೂಕಿ ಹೋಗಿ ಬಿಟ್ಟರು.
ಹೌದು. ನಾನು ಎಂದೆಂದೂ ನಿರೀಕ್ಷಿಸದ ಅನಾಹುತ ನಡೆದು ಹೋಗಿತ್ತು. ನನ್ನ ಮೇಲೆ ಅತ್ಯಾಚಾರವಾಗಿತ್ತು. ಪುಣ್ಯಕ್ಕೆ ಅವರು ನನ್ನ ಮೊಬೈಲ್ ಕಿತ್ಕೊಂಡಿರಲಿಲ್ಲ. ತಕ್ಷಣವೇ ಪರಿಚಯದ ಗೆಳೆಯನಿಗೆ ಫೋನ್ ಮಾಡಿದೆ. ಬಸ್ ಸಿಗಲಿಲ್ಲ ಎಂದು ಸುಳ್ಳು ಹೇಳಿ, ಅವರ ಬೈಕ್ನಲ್ಲಿ ಮನೆ ತಲುಪಿಕೊಂಡೆ. ಅಮ್ಮ -ಮಕ್ಕಳು ಗಾಬರಿಯಿಂದ ಕಾಯುತ್ತಿದ್ದರು. ಅವರನ್ನು ಕಂಡಾಕ್ಷಣ ಗಂಟಲುಬ್ಬಿ ಬಂತು. ಅಮ್ಮನನ್ನು ಬಾಚಿ ತಬ್ಬಿಕೊಂಡು, ಬಿಕ್ಕಳಿಸತೊಡಗಿದೆ. ತಕ್ಷಣವೇ ಬಾಗಿಲು ಹಾಕಿದ ಅಮ್ಮ-ಯಾಕೆ ಇಷ್ಟೊಂದು ಲೇಟು? ಎಲ್ಲಿಗೆ ಹೋಗಿದ್ದೆ? ಕೆನ್ನೆಯ ಮೇಲೆ ತರಚಿದಂತಾಗಿದೆಯಲ್ಲ ಯಾಕೆ ಅಂದಳು. ಅಮ್ಮನ ಬಳಿ ವಿಷಯ ಮುಚ್ಚಿಡಲು ಮನಸ್ಸಾಗಲಿಲ್ಲ. ಎಲ್ಲವನ್ನೂ ಹೇಳಿಕೊಂಡೆ. ಮಕ್ಕಳು, ಗರಬಡಿದವರಂತೆ ನಿಂತು ಬಿಟ್ಟಿದ್ದರು.
ಈ ಶಾಕ್ನಿಂದ ಮೊದಲು ಚೇತರಿಸಿಕೊಂಡಾಕೆ ಅಮ್ಮ. ನೆರೆಹೊರೆಯವರಿಗೆ ವಿಷಯ ಗೊತ್ತಾದರೆ ಮರ್ಯಾದೆ ಬೀದಿ ಪಾಲಾಗುತ್ತೆ. ಆಫೀಸಲ್ಲಿ ಗೊತ್ತಾದ್ರೆ ಕೆಲಸ ಹೋಗುತ್ತೆ. ಹಾಗಾಗಿ ಸ್ವಲ್ಪ ದಿನ ಸೈಲೆಂಟ್ ಆಗಿ ಇದ್ದು ಬಿಡು ಅಂದಳು. ಹಾಗೇ ಮಾಡಿದೆ. ಇಡೀ ವಾರ, ನಾನು ತುಟಿ ಬಿಚ್ಚಲಿಲ್ಲ. ವಾರ ಕಳೆಯುತ್ತಿದ್ದಂತೆಯೇ, ಸ್ವಲ್ಪ ಮಟ್ಟಿಗೆ ಟೆನ್ಶನ್ ಕಡಿಮೆಯಾಯಿತು. ಅದೆಲ್ಲ ಎರಡೇ ದಿನ. ಮರುದಿನವೇ ಟಿಪ್ಟಾಪ್ ಕೀಚಕ ಆಕಸ್ಮಿಕವಾಗಿ ಎದುರಾದ. ಅವನಿಂದ ಪಾರಾಗಬೇಕಲ್ಲ; ಆ ಉದ್ದೇಶದಿಂದ, ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. ನಂತರದ ನಾಲ್ಕು ದಿನ ಏನೂ ಆಗಲಿಲ್ಲ. ಆರನೇ ದಿನ ಆರೋಪಿಗಳ ವಿರುದ್ಧ ಐಫ್ಐಆರ್ ದಾಖಲಾಗಿದೆಯೇ ಎಂದು ತಿಳಿಯಲು ಸ್ಟೇಷನ್ಗೆ ಹೋದರೆ, ಅಲ್ಲಿದ್ದ ಪೊಲೀಸರೆಲ್ಲ ತಲೆಗೊಂದು ಮಾತಾಡಿದರು. ಸಾಹೇಬ್ರ, ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಿ. ನಿಮಗೆ ಒಳ್ಳೆಯದಾಗುತ್ತೆ ಎಂದು ನಕ್ಕರು. ಆನಂತರದಲ್ಲಿ ಹೇಳಿಕೆ ಪಡೆವ ನೆಪದಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ಸ್ಟೇಷನ್ನಿಂದ ಕರೆ ಬರತೊಡಗಿತು. ಹಿಂದೆಯೇ-ಅಡ್ಜೆಸ್ಟ್ ಮಾಡ್ಕೋ ಎಂಬ ಒತ್ತಾಯವೂ. ಅತ್ಯಾಚಾರಿಗಳು ಹಾಗೂ ಪೊಲೀಸರ ಕಾಟದಿಂದ ಪಾರಾಗಲೆಂದು ಒಂದು ಚಾನೆಲ್ಗೆ ಹೋಗಿ ಎಲ್ಲವನ್ನೂ ಹೇಳಿಕೊಂಡೆ. ಅದು, ನಾನು ಮಾಡಿದ ಬಹುದೊಡ್ಡ ತಪ್ಪು!
ಮೊದಲು ಸುದ್ದಿ ಪ್ರಕಟಿಸಿದ ಚಾನೆಲ್ಗಳು, ನಂತರ ತಮ್ಮ ಮೂಗಿನ ನೇರಕ್ಕೇ ಚರ್ಚೆ ಆರಂಭಿಸಿದವು. ಯಾರ್ಯಾರೋ ಮಾತಿಗೆ ಕೂತರು. ಅತ್ಯಾಚಾರಕ್ಕೆ ಒಳಗಾದ ಹೆಂಗಸು, ರಾತ್ರಿ ಏಕೆ ಹೊರಗೆ ಹೋಗಿದ್ದಳು? ಅವಳು ಪ್ರಚೋದನಕಾರಿ ಡ್ರೆಸ್ ಹಾಕಿದ್ದಳೇ? ಕುಡಿಯಲು ಹೋಗಿದ್ದಳೆ ಎಂದೆಲ್ಲಾ ತಮಗೆ ತಾವೇ ಕೇಳಿಕೊಂಡರು. ಹತ್ತೇ ನಿಮಿಷದಲ್ಲಿ, ನಾನು ಡೈವೋರ್ಸಿ ಎಂಬ ವಿಷಯವೂ ಅವರಿಗೆ ತಿಳಿದು ಹೋಯಿತು. ಅವರಲ್ಲೊಬ್ಬ ಅತ್ಯಾಚಾರಿಗಳಲ್ಲಿ ಒಬ್ಬನೊಂದಿಗೆ ಗೆಳೆತನವಿತ್ತೆಂದೂ ಹೇಳಿಬಿಟ್ಟ. ಇಷ್ಟೆಲ್ಲಾ ಆಗುತ್ತಿದ್ದಂತೆ, ಚಾನೆಲ್ನವರ 'ಕೃಪೆ(?) ಯಿಂದ ಟಿ.ವಿ. ಪರದೆಯ ಮೇಲೆ ಕೆಲವು ಅಂಕಿಗಳು ಕಾಣಿಸಿಕೊಂಡವು. ಅದು ನನ್ನ ಮೊಬೈಲ್ ನಂಬರ್!
ಆನಂತರ, ನನ್ನ ಬದುಕಲ್ಲಿ ನೆಮ್ಮದಿಯೇ ಉಳಿಯಲಿಲ್ಲ. ಪರಿಚಯದವರು 'ಛೀ, ಥೂ ಅಂದರು. ಕೆಲವರು ಫೋನ್ ಮಾಡಿ -ಹೋಟೆಲಿಗೆ ಬರ್ತೀಯಾ, ಎಷ್ಟು ರೇಟು ಅಂದರು!ಕ್ಯಾರೆಕ್ಟರ್ ಸರಿಯಿಲ್ಲ ಎಂಬ ಷರಾ ಬರೆದು, ಫ್ಯಾಕ್ಟರಿಯಲ್ಲಿ ಕೆಲಸದಿಂದ ತೆಗೆದರು. ನಿಜ ಹೇಳಬೇಕೆಂದರೆ, ಸಮಾಜದ ಹಲವು ನೆಲೆಯ ಜನ ನಿರಂತರವಾಗಿ ನನ್ನ ಮೇಲೆ ಆಕ್ರಮಣ ನಡೆಸಿದರು. ಅವರಿಗೆಲ್ಲಾ ಯಾವುದೇ ಶಿಕ್ಷೆಯಾಗಲಿಲ್ಲ. ಆದರೆ ನಿರಪರಾಧಿಯಾದ ನನಗೆ ಪ್ರತಿಕ್ಷಣವೂ ಶಿಕ್ಷೆಯಾಗುತ್ತಿದೆ. ಇದು ನ್ಯಾಯವಾ? ನಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ...?'
******************
ಕೋಲ್ಕತ್ತಾದಲ್ಲಿ ಎರಡು ತಿಂಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಚಿತ್ರಾ ಎಂಬಾಕೆಯ ನೋವಿನ ಮಾತುಗಳಿವು. ಇದನ್ನೆಲ್ಲ ಓದಿದ ಮೇಲೆ ಮಾತೇ ಹೊರಡದಂಥ ವಿಷಾದವೊಂದು ಜೊತೆಯಾಗಿದೆ. ಕ್ಷಮಿಸಿ...


- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಟ್ಟುಹೋದ ಲಾರಿಯಂತಿರುವ ಸರ್ಕಾರ ನಡೆಸಲು ಆಗದೆ ಸಿದ್ದರಾಮಯ್ಯ ಸೈಲೆಂಟ್ ಆಗಿ ರಾಜೀನಾಮೆ ಕೊಟ್ಟಿದ್ದಾರೆ!

ನಾನೂ ಮಂತ್ರಿಯಾಗುತ್ತೇನೆ, ರಾಹುಲ್ ಗಾಂಧಿ ಮಾತು ಕೊಟ್ಟಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

IPL 2026: 2ನೇ ಬಾರಿ ಚಾಂಪಿಯನ್ ಆದ ಬೆನ್ನಲ್ಲೇ RCBಗೆ ಬಿಗ್ ಶಾಕ್; ಸ್ಫೋಟಕ ಬ್ಯಾಟರ್​​ಗೆ ನಿಷೇಧದ ಶಿಕ್ಷೆ!

ಜೂನ್ 6ರಂದು ಭಾರತಕ್ಕೆ CJP ಸಂಸ್ಥಾಪಕ ದೀಪ್ಕೆ: ಶಿಕ್ಷಣ ಸಚಿವರ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಯೋಜನೆ!

ಬಿಜೆಪಿ ತೊರೆಯುತ್ತಾರೆ ಎಂಬ ವರದಿಗಳ ಬೆನ್ನಲ್ಲೇ ದೆಹಲಿಗೆ ಹಾರಿದ ಅಣ್ಣಾಮಲೈ; ಕುತೂಹಲ ಮೂಡಿಸಿದ ಸಿಂಗಂ ನಡೆ

SCROLL FOR NEXT