ಅಂಕಣಗಳು

ಭಾರತದಲ್ಲಿ ಇಂಟರ್‌ನೆಟ್ ಕ್ರಾಂತಿಯಾಗಿದೆಯಾ?

Vishweshwara Bhat

ಆಗ ಕನ್ನಡ ಪತ್ರಕರ್ತರು ಸಿಕ್ಕಾಗೆಲ್ಲ 'ನಿಮ್ಮ ಇಮೇಲ್ ಐಡಿಯೇನು?' ಎಂದು ಕೇಳಿದರೆ, ಮುಖ ಮುಖ ನೋಡುತ್ತಿದ್ದರು. ಆದಾಗಿ ಮೂರ್ನಾಲ್ಕು ವರ್ಷಗಳ ಬಳಿಕ ನಾನು 'ವಿಜಯ ಕರ್ನಾಟಕ' ಸೇರಿದಾಗ ನನ್ನೆಲ್ಲ ಸಹೋದ್ಯೋಗಿಗಳಿಗೆ ಕಡ್ಡಾಯವಾಗಿ ಇಮೇಲ್ ಐಡಿ ಹೊಂದುವಂತೆ ತಾಕೀತು ಮಾಡಿದ್ದೆ. ಕೆಲವರಿಗೆ ನಾನು overacting ಮಾಡುತ್ತಿದ್ದೇನೆಂದು ಅನಿಸಿತ್ತು.

ನಾನು 1997ರಲ್ಲಿ ಪತ್ರಿಕೋದ್ಯಮ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ಹೋಗುವ ಸಂದರ್ಭದಲ್ಲಿ ಕನ್ನಡ ಪತ್ರಕರ್ತರ ಪೈಕಿ ನಾಲ್ಕಾರು ಮಂದಿ ಮಾತ್ರ ಇಮೇಲ್ ಐಡಿ ಹೊಂದಿದ್ದರು. ಆ ಪೈಕಿ ನಾನೂ ಒಬ್ಬನಾಗಿದ್ದೆ. ತಾಸುಗಟ್ಟಲೆ ಡೈಲು ಮಾಡಿದರೆ ಇಂಟರ್‌ನೆಟ್ ಸಂಪರ್ಕ ಸಿಗುತ್ತಿತ್ತು. ಅದು ಇದ್ದಕ್ಕಿದ್ದಂತೆ ಸಂಪರ್ಕ ಕಟ್ ಆಗಿಬಿಡುತ್ತಿತ್ತು. ಪುನಃ ಗಂಟೆಗಟ್ಟಲೆ ಸಂಪರ್ಕಕ್ಕಾಗಿ ಕಾಯಬೇಕಾದ ಸ್ಥಿತಿಯಿತ್ತು. ಆದರೂ ಸ್ವಲ್ಪವೂ ಬೇಸರಿಸದೇ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುತ್ತಿದ್ದೆವು.
ಆಗ ಕನ್ನಡ ಪತ್ರಕರ್ತರು ಸಿಕ್ಕಾಗೆಲ್ಲ 'ನಿಮ್ಮ ಇಮೇಲ್ ಐಡಿಯೇನು?' ಎಂದು ಕೇಳಿದರೆ, ಮುಖ ಮುಖ ನೋಡುತ್ತಿದ್ದರು. ಆದಾಗಿ ಮೂರ್ನಾಲ್ಕು ವರ್ಷಗಳ ಬಳಿಕ ನಾನು 'ವಿಜಯ ಕರ್ನಾಟಕ' ಸೇರಿದಾಗ ನನ್ನೆಲ್ಲ ಸಹೋದ್ಯೋಗಿಗಳಿಗೆ ಕಡ್ಡಾಯವಾಗಿ ಇಮೇಲ್ ಐಡಿ ಹೊಂದುವಂತೆ ತಾಕೀತು ಮಾಡಿದ್ದೆ. ಕೆಲವರಿಗೆ ನಾನು ್ಟಢಜ್ಠಛ್ಛಡ್ಝಿಟ್ಜಿ ಮಾಡುತ್ತಿದ್ದೇನೆಂದು ಅನಿಸಿತ್ತು.
ಈಗ ಕಾಲ ಬದಲಾಗಿದೆ. ಬಹುತೇಕ ಎಲ್ಲ ಪತ್ರಕರ್ತರೂ ಇಮೇಲ್‌ನಲ್ಲಿ ವ್ಯವಹರಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿರುವ ಪತ್ರಕರ್ತರೂ ಸುದ್ದಿಯನ್ನು ಇಮೇಲ್ ಮೂಲಕ ಕಳಿಸುತ್ತಾರೆ. ಪ್ರಾಯಶಃ ಇಮೇಲ್ ಐಡಿ ಇಲ್ಲದ ಪತ್ರಕರ್ತರು ಇರಲಿಕ್ಕಿಲ್ಲ. (ಅಥವಾ ಅಂಥ ಜೀವಿಗಳು ಈ ಗ್ರಹದಲ್ಲಿ ಇದ್ದಿರಬಹುದಾ?)
ವಿಷಯ ಇದಲ್ಲ. ಮೂರು ವರ್ಷಗಳ ಹಿಂದೆ ಟಿವಿ ಚಾನೆಲ್‌ನಲ್ಲಿ ಪ್ರಮುಖ ಹುದ್ದೆಯಲ್ಲಿರುವವರೊಬ್ಬರನ್ನು ಭೇಟಿ ಮಾಡಿದ್ದೆ. ಪರಸ್ಪರ ಮಾತುಕತೆ ನಂತರ ಅವರಿಗೊಂದು ಕಡತ ಕಳಿಸಬೇಕಾಗಿತ್ತು. ಅವರ ಬಳಿ ಇಮೇಲ್ ಐಡಿ ಕೇಳಿದೆ. ಅವರು ತಮ್ಮ ಇಮೇಲ್ ಐಡಿ ಹೇಳಿದ್ದೊಂದೇ ಅಲ್ಲ, ಜತೆಯಲ್ಲಿ ಪಾಸ್‌ವರ್ಡ್‌ನೂ ಹೇಳಿದಾಗ ನಾನು ಒತ್ತರಿಸಿ ಬಂದ ನಗುವನು ಹಿಡಿದಿಟ್ಟುಕೊಳ್ಳಲು ಪಟ್ಟ ಪ್ರಯಾಸ ಅಷ್ಟಿಷ್ಟಲ್ಲ. ಈಗ ಆ ಪ್ರಸಂಗವನು ನೆನೆದರೆ ನಗುವನು ತಡೆಯಲಾಗುವುದಿಲ್ಲ. ಅಮೆರಿಕದಲ್ಲಿರುವ ಅನೇಕ ಸೇಹಿತರಿಗೆ 'ನಿಮ್ಮ ದೇಶದಲ್ಲಿ ಇಮೇಲ್ ಕಳಿಸಿದ ಕ್ಷಣಾರ್ಧದಲ್ಲಿ ಉತ್ತರ ಬರೆಯುತ್ತಾರೆ. ಅದೇ ಇಂಡಿಯಾದಲ್ಲಿ ಇಮೇಲ್ ಕಳಿಸಿದ ಬಳಿಕ ಫೋನ್ ಮಾಡಿ ಇಮೇಲ್ ಕಳಿಸಿದ್ದೇನೆ ಎಂದು ಎಚ್ಚರಿಸಿದಾಗಲೇ ಅದನ್ನು ಓದುತ್ತಾರೆ ಎಂದು ನೀವು ಟೀಕಿಸುತ್ತೀರಾ. ನಾವು ಇಮೇಲ್ ವಿಷಯದಲ್ಲಿ ನಿಮಗಿಂತ ಮುಂದೆ. ಕಾರಣ ನಮ್ಮಲ್ಲಿ ಇಮೇಲ್ ಐಡಿ ಹೇಳಿದರೆ ಪಾಸ್‌ವರ್ಡ್‌ನ್ನೂ ಕೊಡುತ್ತಾರೆ' ಎಂದು ಹೇಳಿ ನಕ್ಕಿದ್ದುಂಟು.
ಹಿಂದಿನ ವಾರ ತುಮಕೂರಿನ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರೊಬ್ಬರು ನಮ್ಮ ಆಫೀಸಿಗೆ ಬಂದಿದ್ದರು. ಅವರು ತಮ್ಮ ಪರಿಚಯ ಮಾಡಿಕೊಳ್ಳುತ್ತಾ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟರು. ಅದನ್ನು ಲಕ್ಷ್ಯವಿಟ್ಟು ನೋಡದೇ ಪಕ್ಕಕ್ಕಿಟ್ಟಿದ್ದೆ. ಅವರು ಹೋದ ನಂತರ ಅವರ ವಿಸಿಟಿಂಗ್ ಕಾರ್ಡ್‌ನ್ನು ನೋಡಿದೆ. ಅವರು ತಮ್ಮ ಇಮೇಲ್ ಬರೆದು ಬ್ರಾಕೆಟ್‌ನಲ್ಲಿ ಪಾಸ್‌ವರ್ಡ್‌ನ್ನೂ ಅಚ್ಚು ಹಾಕಿಸಿದ್ದರು! ಅವರ ಮುಖವನ್ನು ಮತ್ತೊಮ್ಮೆ ನೋಡುವ ಇರಾದೆಯಾಯಿತು. ಆದರೆ ಅಷ್ಟರೊಳಗೆ ಅವರು ಹೊರಟು ಹೋಗಿದ್ದರು.
ಹೇಳಿ, ಭಾರತದಲ್ಲಿ ಇಂಟರ್‌ನೆಟ್ ಕ್ರಾಂತಿಯಾಗಿದೆ ಅಲ್ಲವಾ?

ಯಾರಿಗೂ ಕೊಡಬಾರದ್ದು ಇದೊಂದೇ
ಇಲ್ಲಿ ನಿಮಗೆ ಮತ್ತೊಂದು ಪ್ರಸಂಗ ಹೇಳಬೇಕು. ಸುಮಾರು ಎರಡು ವರ್ಷಗಳ ಹಿಂದೆ ನಡೆದದ್ದು. ನಮ್ಮ ಅರೆಕಾಲಿಕ ವರದಿಗಾರರೊಬ್ಬರಿಗೆ ಸುದ್ದಿಯನ್ನು ಸರಿಯಾಗಿ ಬರೆಯಲು ಬರುತ್ತಿರಲಿಲ್ಲ. ಹಾಗೆಂದು ಸುದ್ದಿ ಸಂಗ್ರಹಿಸುವುದರಲ್ಲಿ ಅವರು ದಡ್ಡರೇನಲ್ಲ. ಸಂಗ್ರಹಿಸಿದ ಸುದ್ದಿಯನ್ನು ಸರಿಯಾಗಿ ಬರೆಯಲು ಬರದೇ ಪರದಾಡುತ್ತಿದ್ದರು. ಇದಕ್ಕಾಗಿ ಅವರು ತಮ್ಮ ಊರಿನಲ್ಲಿರುವ ಬೇರೆ ಪತ್ರಿಕೆಗಳ, ತಮಗೆ ಆಪ್ತರಾದ ವರದಿಗಾರರ ಸಹಾಯ ಪಡೆಯುತ್ತಿದ್ದರು. ಇವರು ಸುದ್ದಿ ಸಂಗ್ರಹಿಸಿ ಬರುವುದು, ಬೇರೆಯವರು ಬರೆಯುವುದು, ಬರೆದಿದ್ದನ್ನು ಇವರೇ ಇಮೇಲ್ ಮೂಲಕ ಕಳಿಸುವುದು- ಈ ಸಂಪ್ರದಾಯ ಒಂದೆರಡು ವರ್ಷಗಳಿಂದ ಅನೂಚಾನವಾಗಿ ನಡೆದಿತ್ತು. ಹೀಗಾಗಿ ನಮ್ಮ ವರದಿಗಾರರು ತಮ್ಮ ಇಮೇಲ್ ಹಾಗೂ ಪಾಸ್‌ವರ್ಡ್‌ನ್ನು ತಮಗೆ ಆಪ್ತರಾದ ಆ ಮೂರ್ನಾಲ್ಕು ವರದಿಗಾರರೊಂದಿಗೆ ಝಛ್ಠಜ ಮಾಡಿಕೊಂಡಿದ್ದರು. ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು.
ಈ ಮಧ್ಯೆ ಅವರವರಲ್ಲಿ ಅದೇನ್ನು ಕಿರಿಕ್ ಆಯಿತೋ ಗೊತ್ತಿಲ್ಲ. ಊರಿನ ಪ್ರಮುಖರೊಬ್ಬರು ನಿಧನರಾಗಿದ್ದಾರೆಂಬ ಸುದ್ದಿ ನಮ್ಮ ವರದಿಗಾರರ ಇಮೇಲ್ ಮೂಲಕ ಬಂತು. ಮರುದಿನ ಪತ್ರಿಕೆಯಲ್ಲಿ ಪ್ರಕಟವಾಯಿತು.
ಬೆಳಗಿನಿಂದಲೇ ನನಗೆ ಒಂದೇ ಸಮನೆ ಫೋನ್‌ಗಳ ಸುರಿಮಳೆ, ಬೈಗುಳಗಳ ಧಾರಾಕಾರ ಜಡಿಮಳೆ. ನಮ್ಮ ವರದಿಗಾರರನು ಸಂಪರ್ಕಿಸಲು ಪ್ರಯತಿಸಿದರೆ ಅವರ ಮೊಬೈಲ್ ಸ್ವಿಚ್ಡ್ ಆಫ್. ನಾನು ಪಕ್ಕದ ಊರಿನ ವರದಿಗಾರನಿಗೆ ಫೋನ್ ಮಾಡಿ, ಈ ವರದಿಗಾರನಿಗೆ ನನಗೆ ಫೋನ್ ಮಾಡುವಂತೆ ಹೇಳಿದೆ. ಮೂರ್ನಾಲ್ಕು ತಾಸಿನ ನಂತರ ಈ 'ಮಹಾಶಯ'ನ ಫೋನ್ ಬಂತು.
ನಾನು ಏಕಾಏಕಿ ದಬಾಯಿಸಿದೆ. 'ಬದುಕಿರುವವರನ್ನು ಸತ್ತಿದ್ದಾರೆ ಎಂದು ಬರೆದು ಕಳಿಸಿದ್ದೀರಲ್ಲ, ನಿಮಗೆ ಬುದ್ಧಿ ಇದೆಯೇನ್ರಿ?' ಎಂದು ಗದರಿದೆ. ಅವರು ಮಾತ್ರ 'ನಾನು ಆ ಸುದ್ದಿಯನ್ನು ಬರೆದೇ ಇಲ್ಲ' ಎಂದು ವಾದಿಸಿದರು. ಹಾಗಾದರೆ ಆ ಸುದ್ದಿ ಹೇಗೆ ಬಂತು ಎಂದು ನಮ್ಮ ಡೆಸ್ಕ್‌ನಲ್ಲಿರುವವರನ್ನು ಕೇಳಿದೆ. ಅವರು ಆ ವರದಿಗಾರರ ಇಮೇಲ್‌ನಲ್ಲಿ ಬಂದಿದೆ ನೋಡಿ ಎಂದು ಪ್ರಿಂಟೌಟ್ ಕೊಟ್ಟರು. ನಾನು ಪುನಃ ಆ ವರದಿಗಾರನಿಗೆ ಫೋನ್ ಮಾಡಿ, 'ಏನ್ರೀ? ಸುಳ್ಳು ಹೇಳ್ತೀರಾ? ನಿಮ್ಮ ಇಮೇಲ್‌ನಿಂದ ಆ ಸುದ್ದಿ ಬಂದಿದೆ. ನನ್ನ ಮುಂದೆ ಪ್ರಿಂಟೌಟ್ ಇದೆ' ಎಂದೆ. ಆದರೂ ಅವರು ಆ ಸುದ್ದಿಯನ್ನು ತಾನು ಕಳಿಸಿಲ್ಲ ಎಂದೇ ವಾದಿಸಿದರು. ನನಗೆ ತಲೆ 'ಧಿಂ' ಎಂದಿತು. ನಮ್ಮ ವರದಿಗಾರರನ್ನು ಮತ್ತಷ್ಟು ತಲಾಶ್ ಮಾಡಲಾಗಿ, ವಿಷಯ ಹೊರಬಿತ್ತು.
'ನನ್ನಇಮೇಲ್ ಪಾಸ್‌ವರ್ಡ್ ನಾಲ್ಕೈದು ಜನರಿಗೆ ಗೊತ್ತಿದೆ. ಆ ಪೈಕಿ ಯಾರೋ ಈ ಸುದ್ದಿ ಕಳಿಸಿದ್ದಾರೆ. ನಾನು ಕಳಿಸಿಲ್ಲ. ನಂಬಿ ಸಾರ್‌' ಎಂದರು. ನನಗೆ ನಗಬೇಕೋ ಅಳಬೇಕೋ ಗೊತ್ತಾಗದೇ ಕೆಲಕಾಲ ತಲೆಮೇಲೆ ಕೈ ಹೊತ್ತು ಕುಳಿತಿದ್ದೆ.
ಈ ಪ್ರಸಂಗವನು ಬರೆಯುವಾಗ, ತಮಾಷೆಗೆಂದು ಅವರಿಗೆ ಫೋನ್ ಮಾಡಿ, 'ಅಂದ ಹಾಗೆ ನಿಮ್ಮ ಇಮೇಲ್ ಐಡಿ ಏನು?' ಎಂದು ಕೇಳಿದೆ. ಹೇಳಿದರು. 'ಅದ್ಸರಿ, ಪಾಸ್‌ವರ್ಡ್ ಏನು?' ಎಂದು ಕೇಳಿದೆ. ನಗುತ್ತಲೇ ಅವರು ಹೇಳಿಬಿಟ್ಟರು. ನನಗೆ ನಗು ತಡೆದುಕೊಳ್ಳಲಾಗದೇ ಫೋನ್ ಕಟ್ ಮಾಡಿದೆ.
ಹತ್ತು ನಿಮಿಷ ಸಾವರಿಸಿಕೊಂಡು ಪುನಃ ಅವರಿಗೆ ಫೋನ್ ಮಾಡಿದೆ. 'ಏನ್ರೀ, ಹಿಂದೆ ಆದ ಆವಾಂತರವನ್ನು ಮರೆತು ಬಿಟ್ರಾ? ಪಾಸ್‌ವರ್ಡ್ ಕೇಳಿದರೆ ಹೇಳ್ತೀರಲ್ಲಾ ನಿಮಗೆ ಬುದ್ಧಿ ಇದೆಯೇನ್ರೀ?' ಎಂದು ಕೇಳಿದೆ. ಅದಕ್ಕೆ ಅವರು 'ಯಾಕ್ ಸಾರ್ ಹೀಗಂತೀರಾ? ಸ್ವತಃ ಬಾಸ್ ಕೇಳಿದರೆ, ಹೇಳದೇ ಇರುವುದಾದರೂ ಹೇಗೆ?' ಎಂದರು. ಫೋನ್ ಕಟ್ ಮಾಡಿ ಐದಾರು ನಿಮಿಷ ಬಿದ್ದೂ ಬಿದ್ದೂ ನ್ನಕ್ಕೆ.
ಮತ್ತೆ ಅವರಿಗೆ ಫೋನ್ ಮಾಡಿ ಹೇಳಿದೆ-'ಪಾಸ್‌ವರ್ಡ್‌ನ್ನು ಮಾತ್ರ ಬಾಸ್ ಕೇಳಿದರೊಂದೇ ಅಲ್ಲ. ಸ್ವತಃ ಕಟ್ಟಿಕೊಂಡ ಹೆಂಡತಿ, ಇಟ್ಟುಕೊಂಡ ಹೆಂಡತಿ ಕೇಳಿದರೂ ಕೊಡಬಾರದು. ಉಳಿದುದೇನನ್ನು ಬೇಕಾದರೂ ಕೊಡಿ ಪರವಾಗಿಲ್ಲ. ಆದರೆ ಪಾಸ್‌ವರ್ಡ್‌ನ್ನು ಮಾತ್ರ ಕೊಡಬಾರದು. ಯಾರಿಗೂ ಕೊಡಬಾರದ್ದು ಅಂದ್ರೆ ಇದೊಂದೇ.'

ಗಂಡಂದಿರ ಬುದ್ಧಿ
ಗಂಡಂದಿರು ಗಂಡಂದಿರೇ. ಅವರು ಕನ್ನಡಿಗರಿರಲಿ, ಕರ್ನಾಟಕದವರಲಿ, ಅಮೆರಿಕದವರಿರಲಿ, ಬ್ರಿಟನ್‌ದವರಲಿ, ಎಲ್ಲ ಗಂಡಂದಿರೂ ಒಂದೇ ರೀತಿ ಯೋಚಿಸುತ್ತಾರೆ. ಹೆಂಡತಿ ವಿಷಯಕ್ಕೆ ಬಂದರೆ ಎಲ್ಲ ಗಂಡಂದಿರೂ ಒಂದೇ.
ಒಮ್ಮೆ ಗಂಡ-ಹೆಂಡತಿ ಜೆರುಸಲೆಮ್‌ಗೆ ಹೋಗಿದ್ದರು. ಹಠಾತ್ತನೆ ಹೆಂಡತಿ ಅಲ್ಲಿ ತೀರಿ ಹೋದಳು. ಗಂಡ ಗಲಿಬಿಲಿಗೆ ಬಿದ್ದ. ಏನು ಮಾಡಬೇಕೆಂದು ತೋಚದಾದ. ಹೆಂಡತಿಯ ಮೃತದೇಹವನ್ನು ಸಾಗಿಸುವುದು ಹೇಗೆ ಎಂಬ ಯೋಚನೆಯಲ್ಲಿ ಮಗನಾದ.
ಪ್ರೀಸ್ಟ್-'ನಿಮ್ಮ ಹೆಂಡತಿಯ ಮೃತದೇಹವನ್ನು ಸ್ವದೇಶಕ್ಕೆ ಕಳಿಸಲು ಐದು ಸಾವಿರ ಡಾಲರ್ ತಗಲುತ್ತದೆ. ಆದರೆ ಈ ಪವಿತ್ರ ಕ್ಷೇತ್ರದಲ್ಲಿ ಹೂಳಲು ಎರಡು ನೂರು ಡಾಲರ್ ಖರ್ಚಾಗುತ್ತದೆ.
ಗಂಡ-'ಹೌದಾ!? ಪರವಾಗಿಲ್ಲ. ಖರ್ಚು ಜಾಸ್ತಿಯಾದರೂ ಪರವಾಗಿಲ್ಲ. ನಾನು ಹೆಂಡತಿಯ ಪಾರ್ಥೀವ ಶರೀರವನು ಸ್ವದೇಶಕ್ಕೇ ತೆಗೆದುಕೊಂಡು ಹೋಗುತ್ತೇನೆ.
ಪ್ರೀಸ್ಟ್-'ಯಾಕೆ?' ಅಷ್ಟು ದುಬಾರಿ ಆಯ್ಕೆಯನ್ನು ತಾವು ಒಪ್ಪಿದ್ದೇಕೆ?'
ಗಂಡ-'ಏಸುಕ್ರಿಸ್ತನನ್ನು ಜೆರುಸಲೆಮ್‌ನಲ್ಲಿಯೇ ಸಮಾಧಿ ಮಾಡಲಾಯಿತು ತಾನೆ? ಮುಂದೆ ಏನಾಯ್ತು ಎಂಬುದು ನನಗೆ ಗೊತ್ತಿಲ್ವಾ? ಮೂರನೆ ದಿನಕ್ಕೆ ಏಸು ಭಗವಾನ್ ಜೀವಂತವಾಗಿ ಸಮಾಧಿಯಿಂದ ಎದ್ದು ಬಂದ. ನಾನು ಅಂಥ ರಿಸ್ಕನು ಮಾತ್ರ ತೆಗೆದುಕೊಳ್ಳುವುದಿಲ್ಲ.'
ಅದಕ್ಕೆ ಹೇಳಿದ್ದು ಗಂಡಂದಿರು ಮಾತ್ರ ಗಂಡಂದಿರೇ!

ಭಾರತೀಯ ರೈಲ್ವೆ
ಭಾರತೀಯ ರೈಲ್ವೆಯನ್ನು ರೈಲ್ವೆ ಸಚಿವಾಲಯವಾಗಲಿ, ರೈಲು ಸಚಿವರಾಗಲಿ, ಭಾರತ ಸರ್ಕಾರವಾಗಲಿ ನಿಯಂತ್ರಿಸುತ್ತಿದೆ ಅಂದ್ರೆ ನಂಬುವುದು ಕಷ್ಟ. ಭಗವಂತನ ಕೃಪೆಯಿಂದ ಅದು ಕಾರ್ಯನಿರ್ವಹಿಸುತ್ತಿದೆ. ಭಾರತೀಯ ರೈಲ್ವೆಯಂಥ ಸಂಕೀರ್ಣ, ಕಷ್ಟಕರ, ಅಗಾಧವಾದ ಮತ್ತೊಂದು ವ್ಯವಸ್ಥೆಯಿಲ್ಲ. ಒಂದು ರೈಲು ಸುರಕ್ಷಿತವಾಗಿ ಮತ್ತೊಂದು ಊರು ತಲುಪಿದರೆ, ಅದು ಪವಾಡವೇ.
ಈ ಮಧ್ಯೆ ದೇಶದ ಯಾವುದೋ ಕಡೆ, ಸಣ್ಣ, ಪುಟ್ಟ ಅಪಘಾತ ಸಂಭವಿಸಿದರೆ, ಹತ್ತಾರು ಜನ ಸತ್ತರೆ, ರೈಲ್ವೆ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತೇವೆ. ಆದರೆ ಜಗತ್ತಿನಲ್ಲಿಯೇ ಅತಿ ಬೃಹತ್ ವ್ಯವಸ್ಥೆ ಎಂದು ಕರೆಯಿಸಿಕೊಳ್ಳುವ ಭಾರತೀಯ ರೈಲಿನ ಅಗಾಧತೆಯನು ಯಾರೂ ಯೋಚಿಸುವುದಿಲ್ಲ. ಒಂದು ಲಕ್ಷದ ಹದಿನೈದು ಸಾವಿರ ಕಿ.ಮಿ. ದೂರದ ರೈಲು ಹಳಿಯಲ್ಲಿ ಒಂದೆಡೆ ಸಣ್ಣಲೋಪ-ದೋಷಗಳಾದರೂ ದೊಡ್ಡ ದುರಂತವೇ ಸಂಭವಿಸುತ್ತದೆ. ಹಗಲು-ರಾತ್ರಿ ಇಷ್ಟು ಉದ್ದದ ಹಳಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವುದು ಸಣ್ಣ ಮಾತೇನು? ಭಯೋತ್ಪಾದಕರಿಗೆ ರೈಲು ಹಳಿಯಷ್ಟು ಸುಲಭದ ಟಾರ್ಗೆಟ್ ಮತ್ತೊಂದಿಲ್ಲ. ದೇಶಾದ್ಯಂತ ಏಳೂವರೆ ಸಾವಿರ ರೈಲು ನಿಲ್ದಾಣಗಳಿವೆ. ಪ್ರತಿದಿನ 24 ದಶಲಕ್ಷ ಜನ ಪ್ರಯಾಣಿಸುತ್ತಾರೆ. 2.8 ದಶಲಕ್ಷ ಟನ್ ಸರಕುಗಳನ್ನು ಸಾಗಿಸಲಾಗುತ್ತದೆ. ಇವೆಲ್ಲವನ್ನೂ ಹದಿಮೂರು ಲಕ್ಷ ಸಿಬ್ಬಂದಿ ನೆರವಿನಿಂದ ನೆರವೇರಿಸಲಾಗುತ್ತದೆ. ಇವೆಲ್ಲವನ್ನೂ ನಿಯಂತ್ರಿಸುವುದು, ನಿಭಾಯಿಸುವುದು ತಮಾಷೆಯೇನು?
ಭಾರತದಲ್ಲಿ ಪ್ರತಿದಿನ ಎಷ್ಟು ಜನ ರೈಲಿನಲ್ಲಿ ಓಡಾಡುತ್ತಾರಲ್ಲ, ಅದು ಹೆಚ್ಚುಕಮ್ಮಿ ಆಸ್ಟ್ರೇಲಿಯಾದ ಒಟ್ಟೂ ಜನಸಂಖ್ಯೆಗೆ ಸಮ. ಇಂಥ ವ್ಯವಸ್ಥೆಯನ್ನು ನಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆ ವರ್ಷದ ಹಿಂದೆ ನಿಭಾಯಿಸಿದ್ದರು. ಈಗ ಸದಾನಂದಗೌಡರು ಆ ಕೆಲಸ ಮಾಡುತ್ತಿದ್ದಾರೆ.

ಒಂದು ಪದಕ್ಕಾಗಿ...
ನಮ್ಮ ಪತ್ರಿಕೆಯಲ್ಲಿ ಕಳೆದ ಒಂದು ವರ್ಷದಿಂದ 'ಹತ್ಯಾಚಾರ' ಎಂಬ ಪದವನು ಬಳಸುತ್ತಿದ್ದೇವೆ. ನೀವೂ ಗಮನಿಸಿದ್ದೀರಿ. ಅನೇಕರು ಈ ಪದ ಬಳಕೆ ನೋಡಿ, 'ಅದು ಹತ್ಯಾಚಾರ ಅಲ್ಲ. ಅತ್ಯಾಚಾರ ಎಂದಾಗಬೇಕಿತ್ತು. ಇಂಥ ಪ್ರಮಾದವಾದರೆ ಹೇಗೆ?' ಎಂದು ನನ್ನನು ಕೇಳಿದ್ದುಂಟು. 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಈ ಬಗ್ಗೆ ನಾವು ಸಮಜಾಯಿಷಿಯನ್ನೂ ಕೊಟ್ಟಿದ್ದೇವೆ. ಅತ್ಯಾಚಾರವೆಸಗಿ ಆನಂತರ ಹತ್ಯೆ ಮಾಡಿದಾಗ ನಾವು 'ಹತ್ಯಾಚಾರ' ಎಂಬ ಪದವನ್ನು ಪ್ರಯೋಗಾರ್ಥ ಬಳಸಿದ್ದು. ಇಂಥ ಮೂರ್ನಾಲ್ಕು ಪ್ರಕರಣಗಳು ಜರುಗಿದ ಬಳಿಕ ಈ ಪದವನ್ನು ಪದೇ ಪದೆ ಬಳಸುತ್ತಿರುವುದರಿಂದ, ಓದುಗರೂ ಈ ಪದವನ್ನು ಜೀರ್ಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಸೇಹಿತರೊಬ್ಬರು ಫೋನ್ ಮಾಡಿ 'ಹೊಸ ಪದಗಳ ಕೋಶ' ಎಂಬ ಪುಸ್ತಕಕ್ಕೆ 'ಹತ್ಯಾಚಾರ' ಎಂಬ ಪದವನ್ನು ಸೇರಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಟರ್ಕಿಶ್ ಭಾಷೆಯಲ್ಲಿ ಒಂದು ಗಾದೆಯಿದೆ-If you can teach me a new word, I will walk all the way to China to get it.

ಏರಿದ ಸಿಗ'ರೇಟು'
ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಅವರಿಗೆ ಸಿಗರೇಟು ಸೇದುವವರನ್ನುಕಂಡರೆ ಅದೆಂಥ ಕೋಪವಿತ್ತೋ ಗೊತ್ತಿಲ್ಲ. ಈ ಸಲದ ಬಜೆಟ್‌ನಲ್ಲಿ ಸಿಗರೇಟ್ ಮೇಲೆ ಅಬಕಾರಿ ಸುಂಕವನ್ನು ಶೇ. 72ಕ್ಕೇರಿಸಿದ್ದಾರೆ. ಇದರಿಂದ ಸಿಗರೇಟು ಸೇದುವುದು ನಿಜಕ್ಕೂ 'ಸ್ಟೇಟಸ್ ಸಿಂಬಲ್‌' ಎಂದು ಪರಿಗಣಿಸುವಂತಾಗಿದೆ. ಈ ಮೊದಲು ಬಜೆಟ್‌ನಲ್ಲಿ ಸಿಗರೇಟು ದರ ಜಾಸ್ತಿಯಾದಾಗ 'ಕೈಸುಡುವ ಸಿಗರೇಟು' ಎಂದು ಶೀರ್ಷಿಕೆ ಕೊಡುತ್ತಿದ್ದೆವು. ಈಗ ಕೈಯೊಂದೇ ಅಲ್ಲ, ಪಾಕೀಟು, ಜೋಬು, ಬಾಯಿ ಸುಡುವ ಸಿಗರೇಟು ಎಂದು ಹೇಳಬೇಕಾಗಿದೆ.
ಇಲ್ಲಿ ತನಕ ಸಿಗರೇಟು ಸೇದುವ ವರನಿಗೆ ಹೆಣ್ಣು ಕೊಡುತ್ತಿರಲಿಲ್ಲ. ಇನ್ನು ಮುಂದೆ 'ಹುಡುಗ ಒಳ್ಳೆಯ ನೌಕರಿಯಲ್ಲಿದ್ದಾನೆ. ಸಿಗರೇಟು ಸೇದುವಷ್ಟು ಆರ್ಥಿಕವಾಗಿ ಸಬಲನಾಗಿದ್ದಾನೆ. ನಿಶ್ಚಿತವಾಗಿಯೂ ಹುಡುಗಿಯನ್ನು ಕೊಡಬಹುದು' ಎಂದು ಹೇಳುವ ಕಾಲ ಬಂದಂತಾಗಿದೆ.

-ವಿಶ್ವೇಶ್ವರ ಭಟ್

SCROLL FOR NEXT