"ಅತ್ಯಾಚಾರಗಳ ಈ ಕಾಲದಲ್ಲಿ..."
ಅಯ್ಯೋ, ಲೇಖನವೊಂದನ್ನು ಶುರುಮಾಡಲು ಎಷ್ಟು ಶೋಚನೀಯ ದಾರಿಯಿದು! ಇದರ ಬದಲು ಪ್ರಾರಂಭದ ಸಾಲುಗಳು ಹೀಗಿದ್ದರೆ ಹೇಗೆ?- "ಹಾಲು ಮತ್ತು ಜೇನಿನ ಈ ನೆಲದಲ್ಲಿ, ಸೂರ್ಯನ ಸೌಮ್ಯ ರಶ್ಮಿ ಸಕಲ ಚರಾಚರಗಳನ್ನೂ ಸಮಾನವಾಗಿ ಸೋಕುತ್ತದೆ..."
ಆದರೆ ಹೀಗೆ ಹೇಳುವುದು ಖಂಡಿತ ತಪ್ಪಾದೀತು. ನಮ್ಮ ದೇಶದಲ್ಲಿ ಮಳೆ ಸುರಿಯುವ ರೀತಿಯಲ್ಲೇ ಸೂರ್ಯನೂ ವರ್ತಿಸುತ್ತಾನೆ. "ಮಳೆ ದುರ್ಬಲರ ಮೇಲೂ ಸುರಿಯುತ್ತದೆ, ಬಲಿಷ್ಠರ ಮೇಲೂ...ಆದರೆ ಹೆಚ್ಚಾಗಿ ನೆನೆಯುವುದು ದುರ್ಬಲರೇ, ಏಕೆಂದರೆ ದುರ್ಬಲರ ಛತ್ರಿಯನ್ನು ಬಲಿಷ್ಠರು ಕದ್ದಿರುತ್ತಾರೆ!"(ಆಂಗ್ಲ ಪದ್ಯವೊಂದರ ಭಾವಾರ್ಥ).
ಅಂತೆಯೇ ಕ್ರೌರ್ಯವನ್ನು ಮಹಿಳೆಯರಂತೆ ಪುರುಷರೂ ಎದುರಿಸುತ್ತಾರೆ. ಆದರೆ ಕಾನೂನು ಮತ್ತು ಸಂಪ್ರದಾಯದ ಬಲ ಪುರುಷರ ಬೆನ್ನಿಗಿರುವುದರಿಂದ ಹೆಚ್ಚು ಸಂಕಷ್ಟ ಅನುಭವಿಸುವವರು ಮಹಿಳೆಯರೇ.
ಅತ್ಯಾಚಾರವೆಂದರೆ "ಮಹಿಳೆ/ ಪುರುಷನ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ" ಎಂದು ಹೇಳುತ್ತದೆ ನಿಘಂಟು. ಆದರೆ ಆ ವ್ಯಾಖ್ಯಾನವನ್ನೂ ಮೀರಿದ ಸತ್ಯವೊಂದು ನಮ್ಮಲ್ಲಿ ಜಾರಿಯಲ್ಲಿದೆ. ಅತ್ಯಾಚಾರವೆಂದರೆ, ಕೇವಲ ಲೈಂಗಿಕ ತೃಷೆಗಾಗಿ ಮಾಡುವ ಕೃತ್ಯವಲ್ಲ, ಜೊತೆಗೆ ಅದು ಪುರುಷರ ಅಹಂ ಮತ್ತು ಅವರ ಶಕ್ತಿಯ ಪ್ರದರ್ಶನವಾಗಿ ಬದಲಾಗಿದೆ. ಮಾರ್ಕೆ ದು ಸಾಹ್ದ್‌ನ ಕ್ರೌರ್ಯದ ಕುರಿತ ಸಿದ್ಧಾಂತಗಳಿಗೂ ಮೀರಿ, ಅದು "ಪರಪೀಡನೆಯಿಂದ ಸಂತಸ ಪಡುವ ಮನೋವಿಕಾರವಾಗಿ" ಬದಲಾಗಿದೆ. ಶತಶತಮಾನಗಳಿಂದ ನಾವು ಪೂಜಿಸುತ್ತಾ ಬಂದಿರುವ ಫ್ಯೂಡಲಿಸಂ ಮತ್ತು ಜಾತಿಯತೆಯಲ್ಲಿ ಈ ಮನಸ್ಥಿತಿ ಅಂತರ್ಗತವಾಗಿದೆ.
ಉದಾಹರಣೆಗೆ ಡಿಸೆಂಬರ್ 2012ರಲ್ಲಿ ದೆಹಲಿಯ ಬಸ್ಸೊಂದರಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ. ಆ ಪಾಪಿಗಳು ಕೇವಲ ತಮ್ಮ ಕಾಮ ತೃಷೆ ತೀರಿಸಿಕೊಳ್ಳುವುದಕ್ಕೆ ಅತ್ಯಾಚಾರ ನಡೆಸಲಿಲ್ಲ. ಅತ್ಯಾಚಾರದ ನಂತರ ಆಕೆಯನ್ನು ಬಡಿದು, ಜನನಾಂಗದಲ್ಲಿ ರಾಡ್ ತೂರಿಸಿ ಚಿತ್ರಹಿಂಸೆ ನೀಡಿದರು. ಅಪರಾಧಿಗಳಲ್ಲಿ ಚಿಕ್ಕವ(ಬಾಲಾಪರಾಧಿ ಕಾನೂನಿನಡಿಯಲ್ಲಿ ಈಗ ಬೆಚ್ಚಗೆ ಭದ್ರವಾಗಿ ಕುಳಿತಿದ್ದಾನೆ) ತನ್ನ ಕೈಗಳಿಂದ ಆಕೆಯ ಕರುಳನ್ನು ಹೊರತೆಗೆಯಲು ಪ್ರಯತ್ನಿಸಿದ್ದ.
ಬದೌನ್ ಪ್ರಕರಣದಲ್ಲಿ ಅಪರಾಧಿಗಳು, ಇಬ್ಬರು ಹದಿಹರೆಯದ ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲದೆ, ಅವರು ಜೀವಂತವಾಗಿರುವಾಗಲೇ ನೇಣಿಗೇರಿಸಿದ್ದರು. ಭಾರತದಲ್ಲಿ ಲೈಂಗಿಕ ಕ್ರಿಯೆಯ ನಿಗ್ರಹವೇ ಅತ್ಯಾಚಾರದ ರೂಪದಲ್ಲಿ ವ್ಯಕ್ತವಾಗುತ್ತಿದೆ ಎನ್ನುವುದು ಶುದ್ಧಸುಳ್ಳು. ಅದರಂತೆಯೇ, ಕೆಲವು ಮುಂದುವರಿದ ಪಾಶ್ಚಾತ್ಯ ರಾಷ್ಟ್ರಗಳಲ್ಲಿನಂತೆ ಅದು ಸ್ವಚ್ಛಂದ ಜೀವನ ಶೈಲಿಯ ಉತ್ಪನ್ನವೂ ಅಲ್ಲ. ಅತ್ಯಾಚಾರವೆನ್ನುವುದು ಒಳಗೆ ಅಡಗಿಕೊಂಡ ಸಿಟ್ಟು ಮತ್ತು ತಾವೇ ಸಾಮಾಜಿಕವಾಗಿ ಶ್ರೇಷ್ಠರು ಎಂಬುದನ್ನು ಅಭಿವ್ಯಕ್ತಿಗೊಳಿಸಲು ಕ್ರೌರ್ಯದ ಮೂಲಕ ನೆರವೇರಿಸಿಕೊಳ್ಳುವ ಹೀನ ಕಾರ್ಯ. ಬದೌನ್ ಅತ್ಯಾಚಾರ ಪ್ರಕರಣದಲ್ಲಿನ ತಪ್ಪಿತಸ್ಥರ ಮೇಲೆ ಪೊಲೀಸರು ಮೊದಮೊದಲು ಕೇಸು ದಾಖಲಿಸಲು ಹಿಂಜರಿದದ್ದಕ್ಕೆ ಕಾರಣ ಅವರೆಲ್ಲ ಸಂತ್ರಸ್ತರಿಗಿಂತ ಮೇಲ್ಜಾತಿಯವರೆನ್ನುವುದೇ ಅಲ್ಲವೇ?
ಅತ್ಯಾಚಾರದಂತೆಯೇ ಪೊಲೀಸ್ ಇಲಾಖೆಗಳಲ್ಲಿರುವ ಸಂವೇದನಾ ಶೂನ್ಯತೆ ಮತ್ತು ಪಕ್ಷಪಾತವೂ ನಾಚಿಕೆಗೇಡಿನ ಸಂಗತಿ. ಬೆಂಗಳೂರಿನಲ್ಲಿ ಕೆಲವು ಗೂಂಡಾಗಳು ಯುವತಿಯೊಬ್ಬಳ ಮೇಲೆ ಚಲಿಸುವ ಕಾರಿನೊಳಗೆ ಅತ್ಯಾಚಾರವೆಸಗಿದಾಗ ಇಡೀ ನಗರವೇ ಬೆಚ್ಚಿಬಿದ್ದು ಬೆವರಿತು. ಆ ಯುವತಿ ದೂರು ಕೊಡಲು ಹೋದರೆ, ಪೊಲೀಸ್ ಇನ್ಸ್‌ಪೆಕ್ಟರ್ ಅಪರಾಧಿಗಳ ಮೇಲೆ ಚಿಕ್ಕ ಮಟ್ಟದ ಆರೋಪಗಳನ್ನು ದಾಖಲಿಸುವಂತೆ ಒತ್ತಡ ತರಲು ಪ್ರಯತ್ನಿಸಿದರಂತೆ. ಆ ಇನ್ಸ್‌ಪೆಕ್ಟರ್ ಮತ್ತು ಆ ಅಪರಾಧಿಗಳೂ ಒಂದೇ ಕೋಮಿನವರು ಎನ್ನುವುದನ್ನು ನೀವು ಗಮನಿಸಬೇಕು. ಈಗ ಇನ್ಸ್‌ಪೆಕ್ಟರ್ ಮಹಾಶಯ ಕೆಲಸ ಕಳೆದುಕೊಂಡಿದ್ದಾನೆ.
ಬೆಂಗಳೂರು ತನ್ನ ಅಮಾಯಕತೆಯನ್ನು ಕಳೆದುಕೊಂಡಿದೆ. ಮತ್ತೊಂದು ವ್ಯಾಕುಲಗೊಳಿಸುವ ಘಟನೆ ನಡೆದಿದೆ. ಆರು ವರ್ಷದ ಬಾಲಕಿಯೊಬ್ಬಳ ಮೇಲೆ ಶಾಲೆಯ ಸಿಬ್ಬಂದಿಯೊಬ್ಬ ಅಥವಾ ಇಬ್ಬರು ದೌರ್ಜನ್ಯವೆಸಗಿದ್ದಾರೆ. ಇದಷ್ಟೇ ಅಲ್ಲ, ಘಟನೆಯ ನಂತರ ಆ ಶಾಲೆ ಆಡಳಿತ ಮಂಡಳಿ ಘಟನೆಯನ್ನೇ ಮುಚ್ಚಿಹಾಕುವ ಪ್ರಯತ್ನವನ್ನೂ ಮಾಡಿತ್ತು. ಅಷ್ಟಕ್ಕೇ ಸುಮ್ಮನಾಗದೆ, ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ರಕ್ಷಣೆಯ ಹೊಣೆ ತನ್ನದಲ್ಲ ಎಂಬ ಪುಂಡ ಮಾತನಾಡಿತ್ತು. ದೆಹಲಿ ಗ್ಯಾಂಗ್‌ರೇಪ್ ವಿರುದ್ಧದ ಪ್ರತಿಭಟನೆಯ ರೀತಿಯಲ್ಲೇ ಬೆಂಗಳೂರಿನಲ್ಲೂ ಪೋಷಕರು ಬೀದಿಗಿಳಿದು ಧಿಕ್ಕಾರ ಕೂಗಿದರು. ಕೊನೆಗೂ ಎದ್ದು ಕುಳಿತ ಸರ್ಕಾರ ಆ ಶಾಲೆಯ ವಿರುದ್ಧ ಕ್ರಮ ಜರುಗಿಸಿತು ಮತ್ತು ನಗರ ಪೊಲೀಸ್ ಕಮೀಷನರ್‌ರನ್ನು ವರ್ಗಾವಣೆ ಮಾಡಿತು. ದುರದೃಷ್ಟವಶಾತ್ ಬಿಜೆಪಿಯ ಕೆಲವು ಸಂಘಟನೆಗಳು ಈ ಸಾರ್ವಜನಿಕ ಆಕ್ರೋಶದ ಲಾಭ ಪಡೆದು, ಪೋಷಕರ ವಿರೋಧದ ನಡುವೆಯೂ ಈ ಪ್ರತಿಭಟನೆಗಳಿಗೆ ರಾಜಕೀಯ ಬಣ್ಣ ಲೇಪಿಸಿಬಿಟ್ಟವು.
ವಿರೋಧ ಪಕ್ಷದಲ್ಲಿರುವವರು ಅತ್ಯಂತ ಕ್ರೂರ ಅಪರಾಧಗಳನ್ನೂ ತಮ್ಮ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಾರೆ. ಆಡಳಿತ ಪಕ್ಷದವರು ಸಂತ್ರಸ್ತರಿಗೆ ಕೇವಲ ಬಾಯ್ಮಾತಿನ ಸಂತಾಪ ಸೂಚಿಸಿ ಸುಮ್ಮನಾಗುತ್ತಾರೆ. ದೆಹಲಿ ಗ್ಯಾಂಗ್‌ರೇಪ್ ನಂತರದಲ್ಲಿ ಜಸ್ಟಿಸ್ ವರ್ಮಾ ಸಮಿತಿ ಮಾಡಿದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ನಮ್ಮ ದೇಶದ ಯಾವ ನಾಯಕರಲ್ಲೂ ಕಾಣಿಸಲಿಲ್ಲ. ಸಂತ್ರಸ್ತರ ಹೇಳಿಕೆಯನ್ನು ಕಡ್ಡಾಯವಾಗಿ ವೀಡಿಯೋ ರೆಕಾರ್ಡ್ ಮಾಡಿಕೊಳ್ಳಬೇಕು ಎಂದು ಸಮಿತಿ ಆಶಿಸಿತ್ತು. ಆದರೆ ಸರ್ಕಾರ ಇದನ್ನು ಕಡ್ಡಾಯವಾಗಿಸಲಿಲ್ಲ!
ಇದು ಸಾಲದೆಂಬಂತೆ, ಇವರೆಲ್ಲರ ಹೊಲಸು ಹೇಳಿಕೆಗಳು ಬೇರೆ. "ಹುಡುಗರುಖಖಖ... ತಪ್ಪು ಮಾಡುತ್ತಾರೆ" ಎನ್ನುತ್ತಾ ಅತ್ಯಾಚಾರ ತಪ್ಪಲ್ಲ ಎನ್ನುವ ಧಾಟಿಯಲ್ಲಿ ಮಾತನಾಡುತ್ತಾರೆ ಮುಲಾಯಂ ಸಿಂಗ್ ಯಾದವ್. ಛತ್ತೀಸ್‌ಗಢದ ಗೃಹಸಚಿವ ರಾಮ್‌ಸೇವಕ್ ಪೈಕರ್ ಅವರ ಪ್ರಕಾರ, "ಯಾರೂ ಉದ್ದೇಶಪೂರ್ವಕವಾಗಿ ಅತ್ಯಾಚಾರ ಮಾಡುವುದಿಲ್ಲ. ಇದೆಲ್ಲ ಅಚಾನಕ್ಕಾಗಿ ನಡೆಯುವಂಥದ್ದು". ಮಧ್ಯಪ್ರದೇಶದ ಸಚಿವ ಬಾಬುಲಾಲ್ ಗೌರ್‌ಗೆ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಕೇಳಿದಾಗ "ಅದು ಕೆಲವೊಮ್ಮೆ ಸರಿ, ಕೆಲವೊಮ್ಮೆ ತಪ್ಪು" ಎಂಬ ತತ್ವಜ್ಞಾನ ಉದುರಿಸುತ್ತಾರೆ. ಮಹಿಳೆಯೊಬ್ಬಳ ಸಾರಥ್ಯವಿರುವ ತೃಣಮೂಲ ಕಾಂಗ್ರೆಸ್‌ನ ತಪನ್ ಪೌಲ್ ಅಂತೂ, "ಸಿಪಿಎಮ್‌ನ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ತಮ್ಮ ಹುಡುಗರನ್ನು ಕಳುಹಿಸುವುದಾಗಿ" ಎಚ್ಚರಿಕೆ ನೀಡಿ ಉಳಿದ ಎಲ್ಲಾ ಹೇಳಿಕೆಗಳ ರೆಕಾರ್ಡ್ ಮುರಿದರು. ಇಂಥವರನ್ನೆಲ್ಲ ಜೈಲಿಗೆ ತಳ್ಳಲಾಗುತ್ತಿಲ್ಲ ಎನ್ನುವುದೇ ಈ ನೆಲದ ದುರ್ದೈವ. ಅತ್ಯಾಚಾರವನ್ನು ಸಾರ್ವಜನಿಕ ವ್ಯಕ್ತಿಗಳು ಮುಕ್ತವಾಗೇ ಬೆಂಬಲಿಸುವ ಏಕೈಕ ರಾಷ್ಟ್ರವಾಗಿ ಭಾರತ ಮುಂದುವರಿಯುತ್ತದೆಂದರೆ, ಅದಕ್ಕೆ ದೇಶದ ಇಂಥ ಧೋರಣೆಯೇ ಕಾರಣ.
ನಾವೆಲ್ಲರೂ ನಾಚಿಕೆಪಡಲೇಬೇಕಿದೆ.
-ಟಿಜೆಎಸ್ ಜಾರ್ಜ್