ಹೆಣ್ಣು ಸಂಸಾರದ ಕಣ್ಣು ಎಂಬ ಮಾತಿದೆಯಲ್ಲ; ಅದನ್ನು ನಿಜ ಮಾಡಿರುವ ದಿಟ್ಟೆಯೊಬ್ಬಳ ಕಥೆಯಿದು. ಈಕೆಯ ಹೆಸರು ಚಾಮಿದೇವಿ ಮರ್ಮು. ಜಾರ್ಖಂಡ್‌ನ ಲೇಡಿ ಟಾರ್ಜಾನ್ ಎಂದೇ ಈಕೆಯನ್ನು ಕರೆಯಲಾಗುತ್ತದೆ. ಕೇಳಿ: ಚಾಮಿ ದೇವಿ ಕೈಗೊಂಡ ದಿಟ್ಟ ನಿರ್ಧಾರಗಳಿಂದಾಗಿ, ಒಂದೆರಡಲ್ಲ, ನೂರಾರು ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿವೆ. ಈಕೆಯಿಂದಾಗಿ ಊರು ಉಳಿದಿದೆ, ಕಾಡು ಬೆಳೆದಿದೆ. ಮರಗಳ್ಳರ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿದೆ. ಕಾಡು ಬೆಳೆಸಿ, ಕೆರೆ ಉಳಿಸಿ ಎಂಬ ಆಂದೋಲನ ಜಾರ್ಖಂಡ್ ರಾಜ್ಯಾದ್ಯಂತ ಆರಂಭವಾಗಿದೆ. ಜಾರ್ಖಂಡ್ ರಾಜ್ಯದ ಉದ್ದಕ್ಕೂ ಕೆರೆಗಳು ಸೃಷ್ಟಿಯಾಗಿವೆ. ವಿಶೇಷವೇನು ಗೊತ್ತೆ? ಚಾಮಿದೇವಿಯ ಜೊತೆಗೆ ನಿಂತು ಒಂದು ಸಾಮಾಜಿಕ ಆಂದೋಲನಕ್ಕೆ ಕಾರಣವಾಗಿರುವವರೆಲ್ಲ ಹೆಂಗಸರು. ಅವರ ಪೈಕಿ ಹೆಚ್ಚಿನವರು ಅನಕ್ಷರಸ್ಥೆಯರು. ಇಂಥ ಅವಿದ್ಯಾವಂತ ಮಹಿಳೆಯರನ್ನು ಸಂಘಟಿಸಿ ಒಂದು ಅಪೂರ್ವ ಬದಲಾವಣೆಗೆ ಕಾರಣವಾಗಿರುವುದು ಚಾಮಿದೇವಿಯ ನಿಜವಾದ ಸಾಧನೆ.
ಜಾರ್ಖಂಡ್‌ನ ರಾಜ್‌ನಗರ್ ಜಿಲ್ಲೆಯ ಬರಿಸೈ ಗ್ರಾಮವೇ ಚಾಮಿದೇವಿಯ ಹುಟ್ಟೂರು. ಬರಿಸೈನಿಂದ ಸ್ವಲ್ಪ ದೂರದಲ್ಲಿ ಒಂದು ಕಾಲಕ್ಕೆ ರಕ್ಷಿತಾರಣ್ಯವಿತ್ತು. ಆನೆ, ತೋಳ, ಚಿರತೆಯಂಥ ಪ್ರಾಣಿಗಳು ವಿಹರಿಸುತ್ತಿದ್ದ ಕಾಲ ಅದು. 'ಸಮುದ್ರದ ನಂಟು, ಉಪ್ಪಿಗೆ ಬಡತನ' ಎಂಬ ಮಾತಿದೆಯಲ್ಲ; ಅದು ಬರಿಸೈ ಗ್ರಾಮವನ್ನು ನೋಡಿಯೇ ಸೃಷ್ಟಿಸಿದಂಥ ಮಾತೇನೋ ಎಂಬಂಥ ಪರಿಸ್ಥಿತಿಯಿತ್ತು. ಏಕೆಂದರೆ-ನಿತ್ಯ ಹರಿದ್ವರ್ಣದಂಥ ಕಾಡಿಗೆ ಹತ್ತಿರವಿದ್ದರೂ ಬರಿಸೈ ಗ್ರಾಮದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರಲಿಲ್ಲ. ಹಾಗಾಗಿ, ವ್ಯವಸಾಯವನ್ನೇ ನಂಬಿ ಬದುಕುತ್ತಿದ್ದ ರೈತಾಪಿ ಜನರ ಸ್ಥಿತಿ ಶೋಚನೀಯವಾಗಿತ್ತು.
ಹೇಳಲೇಬೇಕಿರುವ ಅತಿ ಮುಖ್ಯ ಮಾತೇನೆಂದರೆ-ರಾಜನಗರ್ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಬುಡಕಟ್ಟು ಜನಾಂಗದವರು. ಈ ಜಿಲ್ಲೆ ಮೇಲಿಂದ ಮೇಲೆ ಬರಗಾಲದ ಬೇಗೆಗೆ ಸಿಕ್ಕಿ ಬೀಳುತ್ತಿದೆ ಎಂಬ ಸಂಗತಿ ವರ್ಷ ವರ್ಷವೂ ಸರ್ಕಾರಕ್ಕೆ ವರದಿಯಾಗುತ್ತಿತ್ತು. 'ಬುಡಕಟ್ಟು ಜನಾಂಗದವರ ಏಳಿಗೆಗೆ' ಎಂಬ ಹೆಸರಿನಲ್ಲಿ ಪ್ರತಿ ವರ್ಷವೂ ಲಕ್ಷಾಂತರ ರೂಪಾಯಿ ಹಣವೂ ಬಿಡುಗಡೆಯಾಗುತ್ತಿತ್ತು. ಆದರೆ, ಹೀಗೆ ಬಿಡುಗಡೆಯಾದ ಹಣದಲ್ಲಿ ಶೇಕಡಾ 20ರಷ್ಟು ಹಣ ಮಾತ್ರ ಬುಡಕಟ್ಟು ಜನಾಂಗದವರನ್ನು ತಲುಪುತ್ತಿತ್ತು. ಉಳಿದ ಹಣವನ್ನು ಅಧಿಕಾರಿಗಳು ಮತ್ತು ಅದೇ ಜಿಲ್ಲೆಯ ಶ್ರೀಮಂತರು ಹಂಚಿಕೊಳ್ಳುತ್ತಿದ್ದರು. ಬೈಛಾನ್ಸ್, ಯಾರಾದರೂ ಬುಡಕಟ್ಟು ಜನಾಂಗದವರು ನ್ಯಾಯ ಕೇಳಿದರೆ, ಕೆಲವೇ ದಿನಗಳಲ್ಲಿ ಯಾವುದಾದರೂ ಸುಳ್ಳು ಕೇಸ್ ದಾಖಲಿಸಿ ಅವರನ್ನು ಪೊಲೀಸ್ ಠಾಣೆಗೆ ಎಳೆದೊಯ್ಯಲಾಗುತ್ತಿತ್ತು.
ಈ ಅನ್ಯಾಯದ ವಿರುದ್ಧ ಸಿಡಿದು ನಿಂತಿದ್ದು ಮಾವೋವಾದಿ ಸಂಘಟನೆ. ಮುಂದಿನ ಕೆಲವೇ ದಿನಗಳಲ್ಲಿ ಜಾರ್ಖಂಡ್‌ನ ಕಾಡುಗಳಲ್ಲಿ ಮಾವೋವಾದಿ ಸಂಘಟನೆಯ ಕಾರ್ಯಕರ್ತರು ಕಾಣಿಸಿಕೊಂಡರು. ಮುಂದೆ ನಕ್ಸಲ್ ನಾಯಕರೂ ಬಂದರು. ಆಮೇಲೆ ಏನಾಯಿತೆಂದರೆ- ರಾಜನಗರ್ ಜಿಲ್ಲೆಯ ಬುಡಕಟ್ಟು ಜನಾಂಗದ ಗಂಡಸರೆಲ್ಲ ಮಾವೋ/ನಕ್ಸಲ್ ಚಳವಳಿಯ ಬೆಂಬಲಿಗರಾದರು. ಕಾರ್ಯಕರ್ತರಾದರು. ಹೋರಾಟವೇ ಬದುಕು ಎಂದು ಘೋಷಿಸಿ, ಬಂದೂಕು ಎತ್ತಿಕೊಂಡು ಕಾಡಿನೊಳಗೆ ಕಣ್ಮರೆಯಾದರು. ಪರಿಣಾಮವಾಗಿ, ವೃದ್ಧರು ಮತ್ತು ಮಕ್ಕಳು... ಹೀಗೆ ಬೆರಳೆಣಿಕೆಯಷ್ಟು ಗಂಡಸರು ಮಾತ್ರ ರಾಜನಗರ್ ಜಿಲ್ಲೆಯ ಹಳ್ಳಿಗಳಲ್ಲಿ ಗೋಚರಿಸತೊಡಗಿದರು.
ಅಡುಗೆ ಮಾಡಲು ಹಾಗೂ ಇತರೆ ಅಗತ್ಯಗಳಿಗೆ ಮರ ಅಥವಾ ಉರುವಲು ಬೇಕು ಅನ್ನಿಸಿದಾಗ, ಬುಡಕಟ್ಟು ಜನಾಂಗದವರು ನೇರವಾಗಿ ಕಾಡಿಗೆ ಬರುತ್ತಿದ್ದರು. ಯಾರೊಬ್ಬರಿಗೂ ದುರಾಸೆ ಇರದಿದ್ದುದರಿಂದ, ತಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಕಡಿದು ಒಯ್ಯುತ್ತಿದ್ದರು. ಮನೆ ಕಟ್ಟಲು ತೀರಾ ಅಗತ್ಯವಿರುವ, ತುಂಬ ಗಟ್ಟಿಮುಟ್ಟಾದ ಮರಗಳು ರಾಜನಗರ್ ಜಿಲ್ಲೆಯ ಕಾಡುಗಳಲ್ಲಿ ಇವೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ, ಅವುಗಳನ್ನು ಕಳ್ಳಸಾಗಣೆ ಮಾಡುವಂಥ ಸಾಹಸಕ್ಕೆ ಯಾರೂ ಮುಂದಾಗಿರಲಿಲ್ಲ. ಕಾಡಿನ ದತ್ತು ಪುತ್ರರಂತಿದ್ದ ಬುಡಕಟ್ಟು ಜನಾಂಗದ ಗಂಡಸರೆಲ್ಲ ಕ್ರಾಂತಿ ಮಾಡುವ ನೆಪದಲ್ಲಿ ನಕ್ಸಲರೊಂದಿಗೆ ಹೋಗಿಬಿಟ್ಟರಲ್ಲ; ಅದೇ ಸಂದರ್ಭದಲ್ಲಿ ಟಿಂಬರ್ ಮಾಫಿಯಾದವರ ಕಣ್ಣು ರಾಜನಗರ್ ಜಿಲ್ಲೆಯ ಕಾಡುಗಳ ಮೇಲೆ ಬಿತ್ತು. ಆ ಜನ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭಾರಿ ಲಂಚದ ಆಮಿಷ ಒಡ್ಡಿದರು. ಪರಿಣಾಮವಾಗಿ, ಕಾಡಿನ ಹಾದಿಯಲ್ಲಿ ದಿನವೂ ನೂರರ ಸಂಖ್ಯೆಯಲ್ಲಿ ಲಾರಿಗಳು ಓಡಾಡತೊಡಗಿದವು. ಭಾರೀ ಮರಗಳು ರಾತ್ರೋರಾತ್ರಿ ಕಣ್ಮರೆಯಾದವು. 'ಮರಗಳ್ಳರನ್ನು ಹಿಡಿಯಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ. ಆದರೆ ಯಶಸ್ಸು ಕಾಣಲು ಸಾಧ್ಯವಾಗಿಲ್ಲ' ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿ ತೆಪ್ಪಗಾದರು. ಆನಂತರವೂ ಮರಗಳ ಲೂಟಿ ಎಗ್ಗಿಲ್ಲದೇ ನಡೆದಿದ್ದರಿಂದ 24 ಲಕ್ಷ ಹೆಕ್ಟೇರ್ ವಿಸ್ತೀರ್ಣಕ್ಕೆ ಹಬ್ಬಿಕೊಂಡಿದ್ದ ರಾಜನಗರ್ ಜಿಲ್ಲೆಯ ರಕ್ಷಿತಾರಣ್ಯ ಕೇವಲ 20 ವರ್ಷದ ಅವಧಿಯಲ್ಲಿ ಅರ್ಧಕ್ಕರ್ಧ ಖಾಲಿಯಾಗಿ ಹೋಯಿತು. ಕಾಡು ಕಣ್ಮರೆಯಾಗುತ್ತಿದ್ದಂತೆಯೇ ಕಾಡು ಪ್ರಾಣಿಗಳು ಅದೆಲ್ಲಿಗೋ ಹೋಗಿ ಬಿಟ್ಟವು. ಇದೆಲ್ಲಾ ಆಗಿದ್ದು 1990ರಲ್ಲಿ.
ಹೈಸ್ಕೂಲಿನವರೆಗೆ ಓದಿದ್ದ ಚಾಮಿದೇವಿ, ಎದ್ದು ನಿಂತಿದ್ದೇ ಈ ಸಂದರ್ಭದಲ್ಲಿ. ಈಗ ಸುಮ್ಮನೆ ಉಳಿದುಬಿಟ್ಟರೆ, ಮುಂದಿನ ಕೆಲವೇ ದಿನಗಳಲ್ಲಿ ಕಾಡು ಬರಿದಾಗುತ್ತದೆ ಎಂಬ ಸತ್ಯ ಆಕೆಗೆ ತಿಳಿದು ಹೋಯಿತು. ಆಕೆ ತಡ ಮಾಡಲಿಲ್ಲ. ತನ್ನದೇ ವಾರಿಗೆಯ ಹೆಂಗಸರನ್ನು ಸಂಪರ್ಕಿಸಿದಳು. ಅವರಿಗೆ ಕಾಡಿನ ಮಹತ್ವದ ಬಗ್ಗೆ, ಮರಗಳ ಕಳ್ಳಸಾಗಣೆಯ ಬಗ್ಗೆ ವಿವರಿಸಿದಳು. ನಾವೀಗ ಪ್ರಶ್ನಿಸದೇ ಹೋದರೆ, ಮುಂದೆ ಒಲೆ ಉರಿಸಲು ಸೌದೆಗೂ ಪರದಾಡಬೇಕಾಗುತ್ತದೆ ಎಂದು ಎಚ್ಚರಿಸಿದಳು. ನ್ಯಾಯ ಕೇಳೋಣ ಬನ್ನಿ ಎಂದು ಒತ್ತಾಯಿಸಿದಳು. ಮುಂದೆ ಏನಾಗಲಿದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ ಚಾಮಿದೇವಿಯೊಂದಿಗೆ ನಾಲ್ಕೈದು ಹೆಂಗಸರು ಸೇರಿಕೊಂಡರು.
ಅದೊಮ್ಮೆ ಮರಗಳನ್ನು ತುಂಬಿಕೊಂಡ ಲಾರಿಯೊಂದು ಕಾಡಿನಿಂದ ಹೊರಬಂದದ್ದೇ ತಡ; ತನ್ನ ಬಳಗದವರೊಂದಿಗೆ ಅಲ್ಲಿಗೆ ಹೋದ ಚಾಮಿದೇವಿ ಲಾರಿಯನ್ನು ತಡೆದಳು. ಮರ ಕಡಿಯಲು ಅರಣ್ಯ ಇಲಾಖೆಯವರ ಅನುಮತಿ ಪಡೆದಿದ್ದೀರಾ? ಹೌದು ಎಂದಾದರೆ ಆ ಪತ್ರ ತೋರಿಸಿ ಎಂದಳು. ಲಾರಿಯಿಂದ ಇಳಿದವನೊಬ್ಬ ಪತ್ರ ತೋರಿಸಲಿಲ್ಲ. ಬದಲಿಗೆ, ಚಾಮಿದೇವಿಗೆ ಒಂದೇಟು ಹಾಕಿ 'ದಾರಿ ಬಿಡಮ್ಮಾ, ನೀನ್ಯಾರು ಲೆಕ್ಕ ಕೇಳೋಕೆ?' ಅಂದ. ಮುಂದೆ ಏನಾದೀತೋ ಎಂದು ಬುಡಕಟ್ಟು ಜನಾಂಗದ ಹೆಂಗಸರು ಭಯದಿಂದ ನೋಡುತ್ತಿದ್ದರು. ಆಗ, ಅನಿರೀಕ್ಷಿತವೊಂದು ನಡೆದುಹೋಯಿತು. ಏನಂತ ತಿಳ್ದಿದೀಯೋ ಭಡವಾ ಎಂದು ಅಬ್ಬರಿಸಿ, ತನಗೆ ಹೊಡೆದ ಖದೀಮನಿಗೆ ಒಂದು ಪಂಚ್ ಕೊಟ್ಟಳು ಚಾಮಿದೇವಿ.
ಅಪರಿಚಿತ ಹೆಂಗಸಿನಿಂದ ಇಂಥದೊಂದು ಆಕ್ರಮಣವನ್ನು ಮರಗಳ್ಳ ನಿರೀಕ್ಷಿಸಿರಲಿಲ್ಲ. ಆತ ಚೇತರಿಸಿಕೊಳ್ಳುವ ಮೊದಲೇ ಇನ್ನೆರಡು ಏಟು ಹಾಕಿದಳು ಚಾಮಿದೇವಿ. ಅದನ್ನು ಕಂಡಿದ್ದೇ ಚಾಮಿದೇವಿಯ ಗೆಳತಿಯರಿಗೂ ಧೈರ್ಯ ಬಂತು. ಲಾರಿಯಲ್ಲಿದ್ದವರತ್ತ ಅವರೂ ನುಗ್ಗಿದರು. ಮರಗಳ್ಳರಿಗೆ ಲತ್ತೆ ಕೊಟ್ಟರು. ಈ ದಿಢೀರ್ ದಾಳಿಯಿಂದ ಕಂಗಾಲಾದ ಮರಗಳ್ಳರು ಲಾರಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿಯಾದ ಚಾಮಿದೇವಿ, ನಡೆದದ್ದನ್ನು ವಿವರಿಸಿ ದೂರು ದಾಖಲಿಸಿದಳು.
ಚಾಮಿದೇವಿಯ ಈ ಸಾಹಸ ಕೆಲವೇ ದಿನಗಳಲ್ಲಿ ಜಾರ್ಖಂಡ್‌ನ ಮನೆಮನೆಯನ್ನೂ ತಲುಪಿತು. ಎಲ್ಲರೂ ಚಾಮಿದೇವಿಯನ್ನು ಬೆರಗು, ಅಭಿಮಾನ, ಮೆಚ್ಚುಗೆಯಿಂದ ನೋಡ ತೊಡಗಿದರು. ಈ ಸಂದರ್ಭದಲ್ಲಿ ರಾಜನಗರ್ ಜಿಲ್ಲೆಯ ಪ್ರತಿ ಹಳ್ಳಿಗೂ ಭೇಟಿ ನೀಡಿದ ಚಾಮಿದೇವಿ, ಕಾಡಿನ ಮಹತ್ವದ ಬಗ್ಗೆ ಎಲ್ಲರಿಗೂ ವಿವರಿಸಿದಳು. 'ಮನುಷ್ಯನಿಲ್ಲದಿದ್ದರೂ ಮರಗಳು ಜೀವಿಸಬಲ್ಲವು. ಆದರೆ, ಮರಗಳಿಲ್ಲದೇ ಮನುಷ್ಯ ಬದುಕಲಾರ ಎಂದು ಮನವರಿಕೆ ಮಾಡಿಕೊಟ್ಟಳು. ನ್ಯಾಯಕ್ಕಾಗಿ ಹೋರಾಡುವ ಉದ್ದೇಶದಿಂದ 'ಸಹಯೋಗಿ ಮಹಿಳಾ ಸಂಘ' ಕಟ್ಟಿದಳು. ಬೇಸಾಯ ನಡೆಯುತ್ತಿಲ್ಲ ಎಂದು ಜಮೀನನ್ನು ಖಾಲಿ ಬಿಡಬೇಡಿ. ಅಲ್ಲಿ ಜಾಲಿ, ಹಲಸು, ಬೇವಿನ ಮರ ಬೆಳೆಯೋಣ. ಅದರಿಂದ ಒಲೆಗೆ ಸೌದೆ ಹಾಗೂ ಖರ್ಚಿಗೆ ಕಾಸು ಸಿಗುತ್ತದೆ ಎಂದು ಸಲಹೆ ಮಾಡಿದಳು. ಎಲ್ಲಕ್ಕಿಂತ ಮುಖ್ಯವಾಗಿ, ಮರಗಳ ಕಳ್ಳಸಾಗಣೆಯ ಬಗ್ಗೆ ಎಲ್ಲರಿಗೂ ತಕ್ಷಣವೇ ತಿಳಿಸುವಂಥ ಬುಡಕಟ್ಟು ಜನಾಂಗದವರ ನೆಟ್‌ವರ್ಕ್ ಒಂದನ್ನು ಸೃಷ್ಟಿಸಿಕೊಂಡಳು.
ಪರಿಣಾಮವಾಗಿ, ಮರಗಳ್ಳರು ಒಂದು ಊರಲ್ಲಿ ತಪ್ಪಿಸಿಕೊಂಡರೂ, ಅವರು ಮತ್ತೊಂದು ಊರು ತಲುಪುವ ಮೊದಲೇ ಅಲ್ಲಿಗೆ ಸುದ್ದಿ ತಲುಪಿರುತ್ತಿತ್ತು. ಮರಗಳ್ಳರನ್ನು ಹಿಡಿಯಲು ಊರ ಜನ, ರಸ್ತೆಗೆ ಅಡ್ಡಲಾಗಿ ನಿಂತಿರುತ್ತಿದ್ದರು. ಈ ಜಾಗೃತಿಯ ಒಟ್ಟು ಪರಿಣಾಮವೆಂಬಂತೆ, ಅರಣ್ಯ ಲೂಟಿಯಾಗುವುದು ತಪ್ಪಿತು. ಆಗಲೇ ಮರೆಯಾದ ಕಾಡನ್ನೂ ಮತ್ತೆ ಬೆಳೆಸೋಣ ಎಂದು ಘೋಷಿಸಿದ ಚಾಮಿದೇವಿ, ಕಾಡಿನಲ್ಲಿ ಗಿಡ ನೆಡುವ ಅಭಿಯಾನವನ್ನು ಆರಂಭಿಸಿದಳು. ಪರಿಣಾಮ, ನೋಡ ನೋಡುತ್ತಲೇ ಕಾಡು ಬೆಳೆಯಿತು. ಆನೆ, ಚಿರತೆ, ತೋಳ, ನರಿಗಳ ಹಿಂಡು ಮತ್ತೆ ಪ್ರತ್ಯಕ್ಷವಾಯಿತು.
ಇಷ್ಟಾದ ಮೇಲೆ, ನನ್ನ ಜವಾಬ್ದಾರಿ ಮುಗೀತು ಎಂದು ಚಾಮಿದೇವಿ ಸುಮ್ಮನಾಗಲಿಲ್ಲ. ಎಲ್ಲ ಊರುಗಳಲ್ಲೂ 'ಸಹಯೋಗಿ ಸಹಕಾರ ಸಂಘದ' ಬ್ರಾಂಚ್ ಆರಂಭಿಸಿದಳು. ಸದಸ್ಯರ ಸಂಖ್ಯೆಯನ್ನು 3000ಕ್ಕೆ ಹೆಚ್ಚಿಸಿಕೊಂಡಳು. ಜಮೀನುಗಳ ಆಸುಪಾಸಿನಲ್ಲಿ ಪುಟ್ಟ ಕೆರೆಗಳನ್ನು ಕಟ್ಟಿಕೊಂಡರೆ ಅದರಿಂದ ವ್ಯವಸಾಯಕ್ಕೆ ಅನುಕೂಲವಾಗುತ್ತದೆ ಎಂದು ಪತ್ರಿಕೆಯಲ್ಲಿ ಸುದ್ದಿ ಬಂದಾಗ, ಆ ಪ್ರಯೋಗಕ್ಕೂ ಮುಂದಾದಳು. ಪರಿಣಾಮವಾಗಿ 'ಸಹಯೋಗಿ ಮಹಿಳಾ ಸಹಕಾರ ಸಂಘದ' ನೇತೃತ್ವದಲ್ಲಿ ಹಲವು ಗ್ರಾಮಗಳಲ್ಲಿ ಕೆರೆಗಳು ಸೃಷ್ಟಿಯಾದವು. ವರ್ಷದ ನಂತರ ಮಳೆ ಬಂದಾಗ, ಕೆರೆಯಲ್ಲಿ ನೀರು ತುಂಬಿದ್ದರಿಂದ ವ್ಯವಸಾಯಕ್ಕೆ ಅನುಕೂಲವಾಯಿತು. ಇದನ್ನು ಗಮನಿಸಿದ ಜನ, ಕೆರೆಗಳ ಸಂಖ್ಯೆಯನ್ನು ಹೆಚ್ಚಿಸಿದರು. ಪ್ರತಿ ಸಂದರ್ಭದಲ್ಲೂ ತಾನೇ ಮುಂದೆ ನಿಂತು ಕೆಲಸ ಆರಂಭಿಸುತ್ತಿದ್ದ ಚಾಮಿದೇವಿ, ಒಂದು ವಿಶಿಷ್ಟ ಆಂದೋಲನಕ್ಕೆ ಕಾರಣಳಾದಳು.
ಹೀಗೆ, ಒಂದು ಸಾಮಾಜಿಕ ಜಾಗೃತಿಗೆ ಕಾರಣಳಾದ ಚಾಮಿದೇವಿಗೆ ಟೈಂಸ್ ನೌ ಚಾನೆಲ್‌ನ ರಿಯಲ್ ಹೀರೋ ಪ್ರಶಸ್ತಿ ಸಿಕ್ಕಿದೆ. ಆಟಛಣ್ಝಟ್ಜಿ ಐಟಿಜ್ಝಛಟಿ ಎಂಬ ಹೊಗಳಿಕೆ ಸಂದಾಯವಾಗಿದೆ. 'ಕಾಡಿನಲ್ಲಿರುವ ಪ್ರಾಣಿಗಳೆಲ್ಲ ಚಾಮಿದೇವಿಯೊಂದಿಗೆ ಮಾತಾಡುತ್ತವೆ. ಚಾಮಿಗೆ ಪ್ರಾಣಿಗಳ ಭಾಷೆ ಅರ್ಥವಾಗುತ್ತದೆ. ಆಕೆ ಜಾರ್ಖಂಡ್‌ನ ಲೇಡಿ ಟಾರ್ಜಾನ್' ಎಂದು ಜಾರ್ಖಂಡ್‌ನ ಬುಡಕಟ್ಟು ಜನಾಂಗದ ಹಿರಿಯರು ಅಭಿಮಾನದಿಂದ ಹೇಳುತ್ತಾರೆ. ಪ್ರತಿಯೊಂದು ಊರಿನಲ್ಲಿಯೂ ಈಗ ಕೆರೆಗಳು ಇರುವುದರಿಂದ, ಬೇಸಾಯ ಮಾಡಿಯೇ ಬದುಕಬಹುದು ಎಂಬ ವಿಶ್ವಾಸ ಮರಳಿರುವುದರಿಂದ, ನಕ್ಸಲ್ ಚಳವಳಿಯನ್ನು ಮರೆತು, ಜನ ವಾಪಸು ಬಂದಿದ್ದಾರೆ.
ಕಾಡು ಬೆಳೆಸಿ, ನಾಡು ಉಳಿಸುವ ಕೈಂಕರ್ಯಕ್ಕೆ ತನ್ನ ಬದುಕಿನ ಅಮೂಲ್ಯ 24 ವರ್ಷಗಳನ್ನು ಮೀಸಲಾಗಿಟ್ಟ ಚಾಮಿದೇವಿಗೆ ಜೈ ಅನ್ನೋಣ... ಇಂಥವರ ಸಂತತಿ ಸಾವಿರವಾಗಲಿ ಎಂದು ಪ್ರಾರ್ಥಿಸೋಣ.
- ಎ.ಆರ್. ಮಣಿಕಾಂತ್
armanikanth@gmail.com