ಹೆತ್ತವರಿಗೆ ಬೇಡವಾದ ಮಕ್ಕಳನ್ನು ನಮ್ಮ ಸಮಾಜ 'ಅನಾಥ ಮಕ್ಕಳು' ಎಂದು ಕರೆಯುತ್ತದೆ. ಇಂಥ ಮಕ್ಕಳು ಹೆಚ್ಚಿನ ಸಂದರ್ಭಗಳಲ್ಲಿ ಅನಾಥಾಶ್ರಮದಲ್ಲಿ ಬಾಲ್ಯ ಕಳೆಯುತ್ತಾರೆ. ಆನಂತರದಲ್ಲಿ ಅವರೆಲ್ಲಾ ಏನಾದರು/ಏನಾಗುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ವಿವರಣೆ ಲಭ್ಯವಾಗುವುದಿಲ್ಲ. ಈ ಮಾತಿಗೆ ಅಪವಾದ ಎಂಬಂಥ ಕಥಾನಕವೊಂದು ಇಲ್ಲಿದೆ. ಏನೆಂದರೆ-20 ವರ್ಷಗಳ ಹಿಂದೆ, ಚೆನ್ನೈ ಮಹಾನಗರದ ಪ್ರಮುಖ ಏರಿಯಾದಲ್ಲಿ ಒಂದಾದ ಅಣ್ಣಾನಗರ್‌ನ ಕಸದ ರಾಶಿಯ ಬದಿಯಲ್ಲಿ ಸಿಕ್ಕ ಮಗುವೊಂದು, ಇವತ್ತು ಐಎಎಸ್ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದೆ! ಆ ಮಗುವನ್ನು ಜೋಪಾನ ಮಾಡಿದ ವಿದ್ಯಾಕರ್ ಎಂಬ ಕರ್ನಾಟಕ ಮೂಲದ ವ್ಯಕ್ತಿ, ಈಗ ಹಳೆಯದನ್ನೆಲ್ಲ ನೆನಪಿಸಿಕೊಂಡು ಆನಂದಭಾಷ್ಪ ಸುರಿಸುತ್ತಿದ್ದಾರೆ.
ಅಂದ ಹಾಗೆ, ಈಗ ಐಎಎಸ್ ಪರೀಕ್ಷೆಗೆ ಸಿದ್ಧವಾಗುತ್ತಿರುವ ಹುಡುಗನ ಹೆಸರು ಅಭಿಲಾಷ್ ವಿದ್ಯಾಕರ್. ಈ ಹುಡುಗ ತನ್ನ ಸುಪರ್ದಿಗೆ ಬಂದ ಬಗೆ ಹಾಗೂ ಬೆಳೆದ ರೀತಿಯ ಜೊತೆಜೊತೆಗೆ, ಅನಾಥ ಮಕ್ಕಳನ್ನು ಸಾಕಿದ ನಂತರ ಎದುರಾಗುವ ಕರುಳು ಹಿಂಡುವಂಥ ಸಂದರ್ಭಗಳ ಬಗ್ಗೆಯೂ ವಿದ್ಯಾಕರ್ ಮಾತಾಡಿದ್ದಾರೆ. ಮೊದಲಿಗೆ ಅವರ ಮಾತುಗಳನ್ನೂ, ಆನಂತರದಲ್ಲಿ ಅಭಿಲಾಷ್‌ನ ಮಾತುಗಳನ್ನೂ ಆಲಿಸೋಣ. ಈಗ, ಓವರ್ ಟು ವಿದ್ಯಾಕರ್.
'20 ವರ್ಷಗಳ ಹಿಂದಿನ ಮಾತು. ಆ ಹೊತ್ತಿಗಾಗಲೇ ಚೆನ್ನೈನಲ್ಲಿ ನಾನು ಉದವುಂ ಕರಂಗಳ್ ಹೆಸರಿನ ಸಂಸ್ಥೆ ಆರಂಭಿಸಿದ್ದೆ. ಅನಾಥ ಮಕ್ಕಳು, ನಿರ್ಗತಿಕರು ಹಾಗೂ ವೃದ್ಧರನ್ನು ಸಾಕುವುದು ನನ್ನ ಉದ್ದೇಶವಾಗಿತ್ತು. 1994ರ ಮಾರ್ಚ್ 7ನೇ ತಾರೀಖು, ಸೋಮವಾರದ ಮುಂಜಾನೆಯೇ ನಮ್ಮ ಆಫೀಸಿನ ಫೋನ್ ರಿಂಗಣಿಸಿತು. 'ಹಲೋ' ಎಂದೆ. ಆ ತುದಿಯಲ್ಲಿದ್ದ ವ್ಯಕ್ತಿ ಅವಸರದ ದನಿಯಲ್ಲಿ ಹೇಳಿದ: 'ಸಾರ್, ಅಣ್ಣಾನಗರ್‌ನ ಮುಖ್ಯ ಬೀದಿಯಲ್ಲಿ ಒಂದು ಕಸದ ತೊಟ್ಟಿ ಇದೆ. ಅದರ ಸಮೀಪದಲ್ಲೇ ಒಂದು ಬ್ಯಾಗ್‌ನಲ್ಲಿ ಮಗುವೊಂದನ್ನು ಯಾರೋ ಬಿಟ್ಟು ಹೋಗಿದ್ದಾರೆ ಸಾರ್. ಪ್ಲೀಸ್, ನೀವು ಆ ಮಗುವನ್ನು ರಕ್ಷಿಸಬೇಕು ಸಾರ್. ಪ್ಲೀಸ್...'
ಅವತ್ತಿನ ವೇಳೆಗೆ, ಅನಾಥ ಮಕ್ಕಳಿಗೆ ಆಶ್ರಯ ನೀಡುವ ವಿಷಯಕ್ಕೆ ನಮ್ಮ ಉದವುಂಕರಂಗಳ್ ಸಂಸ್ಥೆ ಹೆಸರಾಗಿತ್ತು. ಅಣ್ಣಾನಗರ್‌ಗೆ ನಮ್ಮ ಆಫೀಸಿನಿಂದ 8 ಕಿ.ಮೀ. ದೂರವಿತ್ತು. ಅವತ್ತಿಗೆ ನನ್ನ ಬಳಿ ಕಾರ್ ಇರಲಿಲ್ಲ. ಬಜಾಜ್ ಚೇತಕ್ ಸ್ಕೂಟರ್ ಇತ್ತು. ತಕ್ಷಣವೇ ಸ್ಕೂಟರ್ ಹತ್ತಿ ಹೊರಟೆ. ಫೋನ್‌ನಲ್ಲಿ ದೊರೆತ ಮಾಹಿತಿ ಆಧರಿಸಿಯೇ ಹುಡುಕಾಟ ನಡೆಸಿದೆ. ಆದರೆ, ಕಸದ ರಾಶಿಯ ಬಳಿಯಲ್ಲಿ ಬ್ಯಾಗ್ ಕಾಣಿಸಲಿಲ್ಲ. ಮಗುವಿನ ಚೀರಾಟ ಕೇಳಿಸಲಿಲ್ಲ. ಯಾರೋ ನನ್ನನ್ನು ಫೂಲ್ ಮಾಡಲು ಹೀಗೆಲ್ಲಾ ಫೋನ್ ಮಾಡಿರಬೇಕು ಎಂದುಕೊಂಡು ವಾಪಸ್ ಬಂದೆ. ಆಫೀಸ್ ತಲುಪುತ್ತಿದ್ದಂತೆಯೇ ಮತ್ತೆ ಫೋನ್ ರಿಂಗ್ ಆಯಿತು. 'ಹಲೋ' ಎನ್ನುತ್ತಿದ್ದಂತೆಯೇ, ಈ ಮೊದಲು ಮಾತನಾಡಿದ್ದ ವ್ಯಕ್ತಿಯೇ ಮತ್ತೆ ಮಾತಾಡಿದ: 'ಸಾರ್, ನೀವು ಕಸದ ತೊಟ್ಟಿ ಹತ್ರ ಬಂದಿದ್ರಿ ನಿಜ. ಅಲ್ಲಿಂದ ಹತ್ತು ಹೆಜ್ಜೆ ಮುಂದೆ ಹೋಗಬೇಕಿತ್ತು. ಅಲ್ಲಿ ಒಂದು ಬ್ಯಾಗ್ ಇದೆ. ಆ ಬ್ಯಾಗ್‌ನ ಜಿಪ್ ಹಾಕಿದೆ. ಆ ಬ್ಯಾಗ್ ಒಳಗೆ ಮಗು ಇದೆ ಸಾರ್. ಪ್ಲೀಸ್, ಲೇಟ್ ಮಾಡಬೇಡಿ. ತಕ್ಷಣ ಹೊರಡಿ ಸಾರ್. ನೀವು ತಡ ಮಾಡಿದರೆ ಮಗುವಿನ ಜೀವಕ್ಕೆ ಅಪಾಯ ಆಗಬಹುದು ಸಾರ್' ಎಂದ. 'ಹಲೋ, ನೀವು ಯಾರು? ನಾನು ಈ ಮೊದಲು ಬಂದಾಗ ನೀವು ಎಲ್ಲಿ ನಿಂತಿದ್ರಿ?' ಎಂದು ಪ್ರಶ್ನಿಸಿದೆ. ಮರುಕ್ಷಣವೇ ಫೋನು ಡಿಸ್‌ಕನೆಕ್ಟ್ ಆಯಿತು.
ತಕ್ಷಣವೇ ಸ್ಕೂಟರ್ ಏರಿ ಮತ್ತೆ ಹೊರಟೆ. ಫೋನ್‌ನಲ್ಲಿ ಬಂದ ಮಾಹಿತಿಯನ್ನು ನೆನಪಿಟ್ಟುಕೊಂಡೇ ನಡೆದು ಹೋದೆ. ಕಸದ ತೊಟ್ಟಿಯಿಂದ ಮಾರು ದೂರದಲ್ಲಿ ಬಟ್ಟೆ ತುಂಬುವಂಥ ಒಂದು ಬ್ಯಾಗ್ ಬಿದ್ದಿತ್ತು. ಕುತೂಹಲದಿಂದಲೇ ಹತ್ತಿರ ಹೋಗಿ ನೋಡಿದೆ. ಅದರ ಜಿಪ್ ಹಾಕಿತ್ತು. ಕ್ಯೂರಿಯಾಸಿಟಿಯಿಂದಲೇ ಜಿಪ್ ತೆಗೆದರೆ, ಅದರೊಳಗೆ ನವಜಾತ ಶಿಶುವೊಂದು ಗೋಚರಿಸಿತು. ಬ್ಯಾಗ್‌ನ ಜಿಪ್ ಹಾಕಿದ್ದರಿಂದ, ಉಸಿರಾಟದ ತೊಂದರೆ ಕಾಣಿಸಿಕೊಂಡು ಆ ಮಗುವಿನ ಬಾಯಿಂದ ನೊರೆ ಬಂದಿತ್ತು. ಆ ಮಗುವಿನ ಮೈ ತುಂಬಾ ಇರುವೆಗಳು ಮುತ್ತಿಕೊಂಡಿದ್ದವು. ಆ ಸಂದರ್ಭದಲ್ಲಿ, ಅಳುವ ಶಕ್ತಿ ಕೂಡ ಆ ಮಗುವಿಗೆ ಇರಲಿಲ್ಲ. ತಕ್ಷಣವೇ ಆ ಮಗುವನ್ನು ಬ್ಯಾಗ್‌ನಿಂದ ಹೊರತೆಗೆದೆ. ಆಗ ಗೊತ್ತಾಗಿದ್ದೇನೆಂದರೆ, ಅದು ಗಂಡು ಮಗು! ಯಾರಾದರೂ ಗಮನಿಸುತ್ತಿದ್ದಾರಾ ಎಂದು ಸುತ್ತಲೂ ನೋಡಿದೆ. ಉಹುಂ, ಯಾರೂ ಕಾಣಿಸಲಿಲ್ಲ. ಆ ಮಗುವನ್ನು ಟವಲ್‌ನಿಂದ ಕ್ಲೀನ್ ಮಾಡಿ, ಸ್ಕೂಟರ್‌ನಲ್ಲಿ ಕಾಲಿಡಲಿಕ್ಕೆ ಇದ್ದ ಜಾಗದಲ್ಲಿ ಹುಷಾರಾಗಿ ಮಲಗಿಸಿಕೊಂಡು ಸಮೀಪದ ಆಸ್ಪತ್ರೆಗೆ ಹೋಗಿ, ಸೂಕ್ತ ಚಿಕಿತ್ಸೆಗಾಗಿ ವಿನಂತಿಸಿಕೊಂಡೆ. ಎರಡು ದಿನಗಳ ನಂತರ ಡಾಕ್ಟರ್ ಹೇಳಿದರು: ' ನಿಮ್ಮ ಮಗು ಹುಷಾರಾಗಿದೆ. ಈಗ ಮನೆಗೆ ಕರ್ಕೊಂಡು ಹೋಗಬಹುದು!'
ಹೊಸದೊಂದು ಮುದ್ದುಕಂದ ನಮ್ಮ ಸಂಸ್ಥೆಯ ಸದಸ್ಯನಾದದ್ದು ಹೀಗೆ. ಈ ಮಗುವಿಗೆ ಹೆಸರಿಡಬೇಕು ಅನ್ನಿಸಿದಾಗ 'ಅಭಿಲಾಷ್' ಎಂಬ ಹೆಸರು ನೆನಪಾಯಿತು. ಅಭಿಲಾಷ್ ಎಂಬ ಪದಕ್ಕೆ ಭರವಸೆ, ನಂಬಿಕೆ ಎಂದೆಲ್ಲಾ ಅರ್ಥಗಳಿವೆ. ಈ ಮಗು, ಇಡೀ ಸಂಸ್ಥೆಗೆ ಹೊಸ ಭರವಸೆಯಂತೆ ಬದುಕಲಿ ಎಂಬ ಸದಾಶಯದಿಂದಲೇ ಅವನಿಗೆ ಅಭಿಲಾಷ್ ಎಂದು ನಾಮಕರಣ ಮಾಡಿದೆ. ಉದವುಂ ಕರಂಗಳ್‌ನಲ್ಲಿ ಇರುವವರೆಲ್ಲ ಅನಾಥ ಮಕ್ಕಳೇ. ಅವರಿಗೆ ಐಡೆಂಟಿಟಿ ಕ್ರೈಸಿಸ್ ಕಾಡದಿರಲಿ ಎಂಬ ಉದ್ದೇಶದಿಂದ ಅವರ ಹೆಸರಿನ ಮುಂದೆ ನನ್ನ ಹೆಸರನ್ನೂ ಸೇರಿಸುತ್ತೇನೆ. ಹಾಗಾಗಿ, ಉದವುಂ ಕರಂಗಳ್‌ನ ಎಲ್ಲ ಮಕ್ಕಳ ಹೆಸರಿನ ಜೊತೆಗೂ ವಿದ್ಯಾಕರ್ ಎಂಬ ಹೆಸರೂ ಅಂಟಿಕೊಂಡಿರುತ್ತದೆ. ಈ ಕಾರಣದಿಂದಲೇ ಅಭಿಲಾಷ್‌ನ ಪೂರ್ಣ ಹೆಸರು ಅಭಿಲಾಷ್ ವಿದ್ಯಾಕರ್ ಎಂದಾಯಿತು.
ಚಿಕ್ಕಂದಿನಿಂದಲೂ ಅಷ್ಟೆ: ಅಭಿಲಾಷ್ ತುಂಬಾ ಚೂಟಿಯಾಗಿದ್ದ. ತರಗತಿಯಲ್ಲಿ ಪ್ರತಿ ವರ್ಷವೂ ಅವನಿಗೇ ಮೊದಲ ಸ್ಥಾನ. ನಮ್ಮ ಸಂಸ್ಥೆಯಲ್ಲಿರುವ ಮಕ್ಕಳೆಲ್ಲಾ ನನ್ನನ್ನು ಪಪ್ಪ ಅನ್ನುತ್ತಾರೆ. ಒಂದೊಂದು ಹೊಸ ಪ್ರೈಜ್ ಸಿಕ್ಕಾಗಲೂ ಈ ಅಭಿಲಾಷ್, ಪಪ್ಪಾ ಎಂದು ಕೂಗು ಹಾಕುತ್ತಾ ಓಡಿ ಬರುತ್ತಿದ್ದ. ಕುತ್ತಿಗೆಗೆ ಜೋತು ಬೀಳುತ್ತಿದ್ದ. ಇವತ್ತೊಂದು ಬಹುಮಾನ ಸಿಕ್ತು ಎಂದು ಪಿಸುಗುಡುತ್ತಿದ್ದ. ಆದರೆ, ಹೈಸ್ಕೂಲು ತಲುಪುತ್ತಿದ್ದಂತೆಯೇ ಅವನ ವರ್ತನೆಯಲ್ಲಿ ವ್ಯತ್ಯಾಸ ಕಾಣಿಸಿತು. ಅದೊಂದು ಸಂಜೆ ಶಾಲೆಯಿಂದ ಬಂದವನೇ- 'ಪಪ್ಪಾ, ಸ್ವಲ್ಪ ಮಾತನಾಡಲಿಕ್ಕಿದೆ' ಅಂದ. ಏನು ಹೇಳಲಿಕ್ಕಿದೆ? ಹೇಳು ಮಗೂ ಅಂದೆ. 'ಪಪ್ಪಾ, ನನಗೆ ಅಮ್ಮ ಇಲ್ವಲ್ಲ ಯಾಕೆ? ಸ್ಕೂಲ್‌ನಲ್ಲಿ ಮಧ್ಯಾಹ್ನದ ಹೊತ್ತು ಉಳಿದೆಲ್ಲ ಮಕ್ಕಳ ಅಮ್ಮಂದಿರೂ ಬರ್ತಾರೆ. ಮಕ್ಕಳಿಗೆ ಊಟ ಬಡಿಸ್ತಾರೆ. ನಂತರ ಮಕ್ಕಳ ಕೈ ತೊಳೆದು, ಬಾಯಿ ಒರೆಸಿ, ದೃಷ್ಟಿ ನಿವಾಳಿಸಿ ಹೋಗ್ತಾರೆ. ನನಗೆ ಮಾತ್ರ ಹಾಗೆ ಮಾಡುವವರೇ ಇಲ್ಲ. ಯಾಕೆ ಪಪ್ಪಾ? ನಂಗೆ ಅಮ್ಮನೇ ಇಲ್ವ? ನನ್ನ ಅಮ್ಮ ಯಾರು ಅಂತ ನಿಮಗೂ ಗೊತ್ತಿಲ್ವ? ಹೋಗ್ಲಿ, ನಾನು ಯಾರು? ನಿಮಗೆ ಹೇಗೆ ಸಿಕ್ಕಿದೆ ಅಂತ ಹೇಳ್ತೀರಾ?' ಅಂದ. ಈ ಸಂದರ್ಭದಲ್ಲಿ ಅವನಿಗೆ ಎಲ್ಲ ಕಥೆಯನ್ನು ಹೇಳುವುದೇ ಒಳ್ಳೆಯದು ಅನ್ನಿಸಿತು. ಮುಚ್ಚುಮರೆಯಿಲ್ಲದೆ ಹೇಳಿಬಿಟ್ಟೆ.
ತನ್ನ 'ಜನ್ಮರಹಸ್ಯ' ತಿಳಿದ ಮೇಲೆ ಅಭಿಲಾಷ್ ಖಿನ್ನನಾದ. ತಕ್ಷಣವೇ ಅವನನ್ನು ಉತ್ತರ ಭಾರತ ಪ್ರವಾಸಕ್ಕೆ ಕಳಿಸಿದೆ. ಪ್ರವಾಸದ ನೆಪದಲ್ಲಿ ಅವನು ನೋವನ್ನೆಲ್ಲ ಮರೆಯಲಿ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಅಲ್ಲಿಂದ ಹಿಂದಿರುಗಿದ ನಂತರವೂ, ಆತ ಸಂಕಟದ ಮುಖದೊಂದಿಗೇ ಎದುರಾಗುತ್ತಿದ್ದ. ಆಗಲೇ ಅವನನ್ನು ಎದುರಲ್ಲಿ ಕೂರಿಸಿಕೊಂಡು ಹೇಳಿದೆ: ನಿನಗೆ ಹೆತ್ತವರು ಏನೇನು ಸೌಲಭ್ಯ ಒದಗಿಸುತ್ತಿದ್ದರೋ, ಅದನ್ನೆಲ್ಲ ಒದಗಿಸಿದ್ದೇನೆ. ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ಹೇಳಿಕೊಂಡಿದ್ದೇನೆ. ನೀನು ಪಪ್ಪಾ ಎಂದಾಗೆಲ್ಲ ಖುಷಿಪಟ್ಟಿದ್ದೇನೆ. ಗೆದ್ದು ಬಂದಾಗ ಬೀಗಿದ್ದೇನೆ. ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಬಿಕ್ಕಳಿಸಿದ್ದೇನೆ. ಈ ಮಗು ಬೇಗ ಹುಷಾರಾಗಲಿ ದೇವರೇ ಎಂದು ಪ್ರಾರ್ಥಿಸಿದ್ದೇನೆ. ಇದನ್ನೆಲ್ಲಾ ನೀನು ಅರ್ಥ ಮಾಡಿಕೊಳ್ಳಬೇಕು. ನಿನ್ನ ಸಾಮರ್ಥ್ಯ ಏನೆಂದು ಈ ಜಗತ್ತಿಗೆ ತೋರಿಸಬೇಕು ಎಂದೆ. ಅವತ್ತು ಏನೊಂದೂ ಮಾತಾಡದೆ ಎದ್ದು ಹೋದ. ಮರುದಿನ ಬೆಳಗ್ಗೆ ಎದುರು ನಿಂತವನ ಕಂಗಳಲ್ಲಿ ಹೊಸ ಬೆಳಕಿತ್ತು. 'ಪಪ್ಪಾ, ಹಳೆಯ ಬದುಕಿನ ಬಗ್ಗೆ ಮತ್ತೆಂದೂ ಯೋಚಿಸಲಾರೆ. ನಿಮ್ಮ ಥರಾನೇ ಹತ್ತು ಮಂದಿಗೆ ಉಪಕಾರ ಮಾಡಿಕೊಂಡು ಬದುಕಬೇಕು ಅಂತ ನಿರ್ಧಾರ ಮಾಡಿದ್ದೀನಿ. ಆಲ್ ದಿ ಬೆಸ್ಟ್ ಹೇಳಿ' ಎಂದ.
ಉದವುಂ ಕರಂಗಳ್‌ನಲ್ಲಿ ಆಶ್ರಯ ಪಡೆದಿರುವ ಎಲ್ಲ ಮಕ್ಕಳೂ ಅಭಿಲಾಷ್‌ನಂತೆಯೇ ವರ್ತಿಸುತ್ತಾರೆ ಎನ್ನಲು ಸಾಧ್ಯವಿಲ್ಲ. ತಾವು ಹೆತ್ತವರಿಗೆ ಬೇಡವಾದವರು ಎಂಬ ಸಂಗತಿ ಕಡೆಗೊಂದು ದಿನ ತಿಳಿದಾಗ ಎಷ್ಟೋ ಮಕ್ಕಳು-'ಪಪ್ಪಾ, ನೀನು ನಮ್ಮನ್ನು ಯಾಕೆ ರಕ್ಷಿಸಿದೆ? ನಮ್ಮನ್ನು ಹಾಗೇ ಬಿಟ್ಟು ಬಿಡಬೇಕಿತ್ತು. ನಾವು ಅವತ್ತೇ ಸತ್ತು ಹೋಗಿದ್ರೆ ಚೆನ್ನಾಗಿರ್ತಿತ್ತು. ಈಗ ನೋಡು, ಉಳಿದೆಲ್ಲ ಮಕ್ಕಳೂ ಅಪ್ಪ-ಅಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ-ಮಾವ, ಬಂಧು-ಬಳಗ ಎಂದು ಖುಷಿಪಡುವಾಗ ನಾವು ಅನಾಥ ಮಕ್ಕಳು ಎಂಬ ಹಣೆಪಟ್ಟಿಯೊಂದಿಗೆ ಸಂಕಟದ ಮಧ್ಯೆಯೇ ಬದುಕಬೇಕಾಗಿದೆ. ನಮ್ಮ ಈ ಸ್ಥಿತಿಗೆ ನೀನೇ ಕಾರಣ. ನೀನು ನಮ್ಮನ್ನು ಯಾಕೆ ಕಾಪಾಡಬೇಕಿತ್ತು ಎಂದು ಪ್ರಶ್ನೆ ಕೇಳುತ್ತಾರೆ. ಮತ್ತೆ ಕೆಲವರು -ಅಮ್ಮ ಎಂದರೆ ದೇವತೆ, ಆಕೆ ಕರುಣಾಮಯಿ, ತಾಯಂದಿರ ಮನಸ್ಸು ತುಂಬಾ ಒಳ್ಳೆಯದು ಎಂದೆಲ್ಲಾ ಹೇಳ್ತೀರ. ಆದ್ರೆ ನಮ್ಮ ತಾಯಂದಿರು ಅದೇಕೆ ಕಲ್ಲು ಹೃದಯದವರಾಗಿ ವರ್ತಿಸಿದರು? ತಂದೆ ಅನ್ನಿಸಿಕೊಂಡವನು ನಮ್ಮನ್ನು ಎಸೆದು ಹೋಗಿಬಿಟ್ಟ ಸರಿ. ಆದರೆ ತಾಯಿಯಾದವಳಾದ್ರೂ ನಮ್ಮನ್ನು ಸಾಕಬಹುದಿತ್ತು ತಾನೆ ಎಂದು ಪ್ರಶ್ನೆ ಹಾಕಿದ್ದಾರೆ. ತಾವು ಅನಾಥರು, ಅನೈತಿಕ ಸಂಬಂಧಕ್ಕೆ ಹುಟ್ಟಿದವರು ಎಂಬುದನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟದಿಂದ ನರಳಿದವರಿದ್ದಾರೆ. ಹೆತ್ತಮ್ಮನೇ ನಮ್ಮನ್ನು ಬಿಟ್ಟು ಹೋದಳು ಎಂಬ ಕಾರಣಕ್ಕಾಗಿ ಇಡೀ ಸ್ತ್ರೀ ಸಂಕುಲದ ಬಗ್ಗೆಯೇ ಜಿಗುಪ್ಸೆ ಹೊಂದಿದ ಮಕ್ಕಳೂ ಇದ್ದಾರೆ.
ಅಂಥವರಿಗೆಲ್ಲ ನಾನು ಹೇಳಿರುವುದು ಒಂದೇ ಮಾತು: ಅಮ್ಮಂದಿರು ಯಾವತ್ತೂ ಕರುಣಾಮಯಿಗಳೇ. ಪರಿಸ್ಥಿತಿಯ ಕಾರಣದಿಂದಾಗಿ ಅವರು ತಪ್ಪು ಮಾಡಿರಬಹುದು. ಹಾಗಂತ ಅವರನ್ನು ದ್ವೇಷಿಸುವುದು ಸರಿಯಲ್ಲ. ಹಾಗೆಯೇ, ಹೆತ್ತವರ ಪ್ರೀತಿ ಅನೈತಿಕವಾಗಿರಬಹುದು. ಅದು ಅವರ ತಪ್ಪು. ಐಡೆಂಟಿಟಿ ಇಲ್ಲದೆ ಹುಟ್ಟಿದ್ದರಲ್ಲಿ ನಿಮ್ಮ ತಪ್ಪಿಲ್ಲ. ಇನ್ನು ನಿಮ್ಮನ್ನು ರಕ್ಷಿಸಿದ ವಿಷಯಕ್ಕೆ ಬರುವುದಾದರೆ- ಅನಾಥ ಮಗುವಿನ ರೂಪದಲ್ಲಿ ನಿಮ್ಮನ್ನು ಕಂಡಾಗ, ನನಗೆ ವಿಪರೀತ ಸಂಕಟವಾಯಿತು. ನಿಮ್ಮನ್ನು ಕಾಪಾಡದೇ ಹೋಗಲು ನನ್ನ ಮನಸ್ಸು ಒಪ್ಪಲಿಲ್ಲ. ಈ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವುದೇ ನನ್ನ ಕಾಯಕವಾಗಲಿ ಎಂದುಕೊಂಡೇ ನಿಮ್ಮನ್ನು ಉದವುಂ ಕರಂಗಳ್‌ನ ಅಂಗಳಕ್ಕೆ ಕರೆತಂದೆ ಎಂದು ಉತ್ತರಿಸಿದ್ದೇನೆ. ಈ ಉತ್ತರದಿಂದ ಕೆಲವು ಮಕ್ಕಳು ಖುಷಿಯಾಗಿದ್ದಾರೆ. ವಿ ಆರ್ ಪ್ರೌಡ್ ಆಫ್ ಯೂ ಪಪ್ಪಾ ಎನ್ನುತ್ತಾ ಬಿಕ್ಕಳಿಸಿದ್ದಾರೆ. ಮತ್ತೆ ಕೆಲವರು ಏನೊಂದೂ ಮಾತಾಡದೆ ಎದ್ದು ಹೋಗಿದ್ದಾರೆ. ಮೊದಲೇ ಹೇಳಿದಂತೆ ನಮ್ಮ ಸಂಸ್ಥೆಯಲ್ಲಿ ಇರುವವರೆಲ್ಲಾ ನನ್ನ ಮುದ್ದಿನ ಮಕ್ಕಳೇ. ಅವರು ಹೇಗೆ ಪ್ರತಿಕ್ರಿಯಿಸಿದರೂ ನಾನಂತೂ ಅವರ ಮೇಲೆ ಸಿಟ್ಟಾಗಲಾರೆ. ಉಳಿದೆಲ್ಲ ಮಕ್ಕಳಿಗಿಂತ ಸ್ವಲ್ಪ ಜಾಸ್ತಿ ಎಂಬಂಥ ಅಕ್ಕರೆ ಅಭಿಲಾಷ್‌ನ ಮೇಲಿದೆ. ಏಕೆಂದರೆ, ನಮ್ಮ ಸಂಸ್ಥೆಯಲ್ಲಿ ಓದಿದ ಇತರ ಮಕ್ಕಳೆಲ್ಲ ಡಾಕ್ಟರ್, ಎಂಜಿನಿಯರ್, ಟೀಚರ್, ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ. ಆದರೆ ಅಭಿಲಾಷ್ ಐಎಎಸ್ ಪರೀಕ್ಷೆ ಬರೆಯುವ ಹುಮ್ಮಸ್ಸಿನಲ್ಲಿದ್ದಾನೆ. ಐಎಎಸ್ ನಂತರ ನಾನೂ ನಿನ್ನ ಥರಾನೇ ಅನಾಥರಿಗೆ ಆಶ್ರಯ ಒದಗಿಸ್ತೀನಿ ಪಪ್ಪಾ ಎಂದು ಪ್ರಾಮಿಸ್ ಮಾಡಿದ್ದಾನೆ. ಅವನಂಥ ಮಕ್ಕಳ ಕಾರಣದಿಂದಲೇ ನನ್ನ ಬದುಕಿಗೆ ಹೊಸ ಅರ್ಥ ಬಂದಿದೆ ಎನ್ನುತ್ತಾ ಮಾತು ಮುಗಿಸುತ್ತಾರೆ ವಿದ್ಯಾಕರ್.
ಇವತ್ತಿನ ಸಂದರ್ಭದಲ್ಲಿ, ಗಂಡ-ಹೆಂಡತಿ ಇಬ್ಬರೂ ದುಡಿದರೂ ಎರಡು ಮಕ್ಕಳನ್ನು ಸಾಕುವುದು ಕಷ್ಟ. ವಾಸ್ತವ ಹೀಗಿರುವಾಗ, ಬ್ರಹ್ಮಚಾರಿಯಾಗಿದ್ದುಕೊಂಡೂ 300ಕ್ಕೂ ಹೆಚ್ಚು ಮಕ್ಕಳನ್ನು ಸಾಕುತ್ತಾ, ಅವರ ಏಳಿಗೆಯಲ್ಲೇ ಸಂತೋಷ ಕಾಣುತ್ತಿರುವ ವಿದ್ಯಾಕರ್‌ಗೆ ಲಾಲ್ ಸಲಾಂ ಎಂದು ಮನಸ್ಸು ಪಿಸುಗುಟ್ಟಿದ ಮರುಕ್ಷಣವೇ, ಫುಟ್‌ಪಾತಿನಿಂದ ಐಎಎಸ್ ಅಂಗಳಕ್ಕೆ ಜಿಗಿಯಲು ಹೊರಟಿರುವ ಅಭಿಲಾಷ್‌ನ ಮಾತುಗಳೂ ಆರಂಭವಾದವು. ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ-
'ನನ್ನ ನಿಜ ಜೀವನದ ಕಥೆಯನ್ನು ಪಪ್ಪನಿಂದ ತಿಳಿದಾಗ ಬಹಳ ಸಂಕಟವಾಯಿತು. ಹೆತ್ತವರಿಗೇ ಹೊರೆಯಾದೆ ಅಂದಮೇಲೆ ನನ್ನದೂ ಒಂದು ಬದುಕಾ ಅನ್ನಿಸಿತು. ನಾನು ಅನಾಥ ಶಿಶು ಎಂದು ಗೊತ್ತಾದರೆ, ಗೆಳೆಯರೆಲ್ಲ ನನ್ನನ್ನು ತಾತ್ಸಾರದಿಂದ ನೋಡಬಹುದು ಅನ್ನಿಸಿತು. ಹಾಗಾಗಿ, ಹಾಸ್ಟೆಲ್‌ನಿಂದ ಬರ್ತಾ ಇದೀನಿ ಎಂದು ಯಾರಿಗೂ ಹೇಳಲಿಲ್ಲ. ನಮ್ಮ ಹೆತ್ತವರು ದೂರದ ಹಳ್ಳಿಯಲ್ಲಿದ್ದಾರೆ ಎಂದೆಲ್ಲಾ ಸುಳ್ಳು ಹೇಳುತ್ತಿದ್ದೆ. ಶಾಲೆಯ ಅಂಗಳದಲ್ಲಿ ಅಮ್ಮಂದಿರು ಮಕ್ಕಳಿಗೆ ಊಟ ಮಾಡಿಸುವಾಗ ಹೀಗೆ ಕೈ ತುತ್ತು ತಿನ್ನುವ ಅದೃಷ್ಟ ನನಗಿಲ್ಲವಲ್ಲ ಎಂದುಕೊಂಡು ಕಣ್ಣೀರಾಗುತ್ತಿದ್ದೆ. ದಸರಾ, ಬೇಸಿಗೆಯ ರಜಾ ದಿನಗಳಲ್ಲಿ ಊರಿಗೆ ಹೋಗಿ ಬಂದ ಸಹಪಾಠಿಗಳು, ಅಜ್ಜಿ ಮನೇಲಿ ಹೀಗಾಯ್ತು, ನಮ್ ತಾತ ಹೊಸ ಬಟ್ಟೆ ಕೊಡಿಸಿದ್ರು ಎಂದೆಲ್ಲಾ ಹೇಳುವಾಗ, ಇಂಥ ಯಾವುದೇ ಅದೃಷ್ಟವೂ ಇಲ್ಲದಿರುವಾಗ ನನ್ನಂಥವರು ಬದುಕಿದ್ದು ಏನು ಪ್ರಯೋಜನ ಅನ್ನಿಸ್ತು. ಅದನ್ನೇ ಒಂದು ದಿನ ಪಪ್ಪಾ ವಿದ್ಯಾಕರ್ ಜೊತೆ ಹೇಳಿಕೊಂಡೆ. ಆಗ ಪಪ್ಪ ಹೇಳಿದ್ರು: 'ದೇವರು ಪ್ರತಿ ಮನುಷ್ಯನಿಗೂ 100 ವರ್ಷ ಆಯಸ್ಸು ಕೊಟ್ಟಿರ್ತಾನೆ. ಅಂಥಾ ಜೀವಿಗಳಲ್ಲಿ ನೀನೂ ಒಬ್ಬ. ನಾನು ಕಾಪಾಡದೇ ಹೋಗಿದ್ರೆ ಹುಟ್ಟಿದ ಮೂರೇ ದಿನಕ್ಕೆ ನೀನು ಸತ್ತು ಹೋಗ್ತಾ ಇದ್ದೆ. ಮಗುವಿನ ರೂಪದಲ್ಲಿ ನಿನ್ನನ್ನು ಕಂಡಾಗ ಕಾಪಾಡದೇ ಇರಲು ಮನಸ್ಸಾಗಲಿಲ್ಲ...' ಅವರ ಮಾತಿಗೆ ಪ್ರತಿಕ್ರಿಯಿಸದೆ ಸುಮ್ಮನೆ ನಿಂತಿದ್ದೆ. ಆಗ ಪಪ್ಪ ಒಂದು ಫೋಟೋ ತೋರಿಸಿದರು. ಅದು ಸೂಪರ್ ಸ್ಟಾರ್ ರಜನೀಕಾಂತ್ ಅವರೊಂದಿಗೆ ನಾನಿದ್ದ ಫೋಟೋ. ಅದೊಮ್ಮೆ ಹೊಸ ವರ್ಷಕ್ಕೆ ಕ್ಯಾಲೆಂಡರ್ ರೂಪಿಸಬೇಕು ಅನ್ನಿಸಿದಾಗ, ಪಪ್ಪಾ ವಿದ್ಯಾಕರ್‌ಗೆ ಫೋನ್ ಮಾಡಿದ ರಜನಿಯವರು-ನಿಮ್ಮ ಸಂಸ್ಥೆಯಲ್ಲಿರುವ ಮಕ್ಕಳನ್ನು ಎತ್ತಿಕೊಂಡು ಬನ್ನಿ ಸಾರ್. ಹೊಸಾ ಕ್ಯಾಲೆಂಡರ್ ರೂಪಿಸೋಣ' ಅಂದರಂತೆ. ಮನೆಗೆ ಹೋದಾಗ, ರಜನಿಕಾಂತ್ ದಂಪತಿ, ಗಂಟೆಗಳ ಕಾಲ ನನ್ನನ್ನು ಮುದ್ದಿಸಿದರಂತೆ. ಈ ಘಟನೆಯನ್ನು ನೆನಪಿಸಿದ ಪಪ್ಪ- ಇಂಥ ಅದೃಷ್ಟ ಎಷ್ಟು ಮಕ್ಕಳಿಗಿದೆ ಯೋಚಿಸು. ಮಾನವ ಜನ್ಮ ದೊಡ್ಡದು ಮಗೂ. ಅದನ್ನು ಲೋಕೋಪಕಾರಕ್ಕೆ ಬಳಸಿಕೊ' ಎಂದರು.
ಅವತ್ತಿನವರೆಗೂ ಚಾರ್ಟೆಡ್ ಅಕೌಂಟೆಂಟ್ ಆಗಬೇಕು ಎಂದುಕೊಂಡಿದ್ದವ ನಾನು. ಆದರೆ, ಪಪ್ಪನ ಮಾತು ಕೇಳುತ್ತಿದ್ದಂತೆಯೇ ಐಎಎಸ್ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಕಾರಣವಿಷ್ಟೆ: ಐಎಎಸ್ ಮಾಡಿದರೆ, ಸಮಾಜ ಸೇವೆ ಮಾಡಲು ದೊಡ್ಡ ಅವಕಾಶಗಳಿವೆ. ಪಪ್ಪಾ ವಿದ್ಯಾಕರ್ ಅವರಂತೆಯೇ ನೊಂದವರು, ಅನಾಥರು ಹಾಗೂ ಅಸಹಾಯಕರ ಸೇವೆ ಮಾಡಬೇಕು ಎಂಬುದು ನನ್ನ ಆಸೆ-ಕನಸು. ಅದನ್ನು ಎದೆಯೊಳಗೆ ಇಟ್ಟುಕೊಂಡೇ ಐಐಎಸ್ ಬರೆಯಲು ಸಿದ್ಧತೆ ನಡೆಸಿದ್ದೇನೆ. ನನಗೆ ಒಂದು ಬೆಸ್ಟ್ ಆಫ್ ಲಕ್ ಹೇಳಿಬಿಡಿ. ನನ್ನಂಥ ನೂರಾರು ಮಕ್ಕಳಿಗೆ ಹೊಸ ಬದುಕು ಕೊಟ್ಟಿರುವ ಪಪ್ಪಾ ವಿದ್ಯಾಕರ್‌ಗೂ ಥ್ಯಾಂಕ್ಸ್ ಅಂದುಬಿಡಿ. ನನಗೆ ಅಷ್ಟೇ ಸಾಕು' ಎನ್ನುತ್ತಾ ಮಾತು ಮುಗಿಸುತ್ತಾನೆ ಅಭಿಲಾಷ್.
ಅಪರೂಪದಲ್ಲಿ ಅಪರೂಪದವರು ಎಂಬಂಥ ಈ ತಂದೆ-ಮಗನಿಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ udavum@vsnl.com
-ಎ.ಆರ್. ಮಣಿಕಾಂತ್
armanikanth@gmail.com