ಜವಾಹರ್ ಲಾಲ್ ನೆಹರು ಅವರ 50ನೇ ಪುಣ್ಯ ತಿಥಿಯಂದು ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಅವರನ್ನು ಚೆನ್ನಾಗಿಯೇ ನೆನಪಿಸಿಕೊಂಡವು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೆಹರು ಅವರ ಪುಣ್ಯತಿಥಿಯಂದು ಟ್ವೀಟ್ ಮೂಲಕ ನೆಹರು ಅವರಿಗೆ ಗೌರವ ಅರ್ಪಿಸಿದರು. ಇತಿಹಾಸವನ್ನು ಮರೆಯದಿರುವುದು ಒಳ್ಳೆಯ ನಡೆಯೇ. ಆದರೆ ನಿಷ್ಠುರ ಸತ್ಯವೊಂದು ಈಗ ಗಿರಕಿ ಹೊಡೆಯುತ್ತಿದೆ. ಆ ಸತ್ಯವೇನೆಂದರೆ, ಮೋಹನ್ ದಾಸ್ ಗಾಂಧಿ ಮತ್ತು ಭೀಮರಾವ್ ಅಂಬೇಡ್ಕರ್ ಅವರ ಬಗೆಗಿನ ಆಸಕ್ತಿಯ ಮುಂದೆ ನೆಹರು ಅವರ ನೆನಪು ಮರೆಯಾಗುತ್ತಿದೆ.
1940ರಿಂದ 1960ರ ವರೆಗೆ ನೆಹರು ಅವರ ಗ್ಲಾಮರ್ ಭಾರೀ ಸದ್ದು ಮಾಡಿತ್ತು. ಆ ಸಮಯದಲ್ಲಿ ಗಾಂಧಿ ಅರೆಬೆತ್ತಲೆ ಫಕೀರರಾಗಿ ಅಥವಾ ಭಾರತದಿಂದ ಉದ್ಯಮಗಳನ್ನು ಓಡಿಸಿ, ಅದನ್ನು ಗ್ರಾಮಗಳ ನಾಡಾಗಿಯೇ ಉಳಿಸುವ ಕನಸು ಕಾಣುವ ವ್ಯಕ್ತಿಯಾಗಿ ಜಗತ್ತಿಗೆ ಗೋಚರವಾಗುತ್ತಿದ್ದರು. ಅಂಬೇಡ್ಕರ್ ಅವರ ಹೆಸರು ಸಂವಿಧಾನ ಸಭೆಯ ಹೊರಗೆ ಅಷ್ಟೇನೂ ದಾಟಿರಲಿಲ್ಲ. ಆದರೆ ಕೆಲವೇ ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ಈಗ ಒಂದಾದ ನಂತರ ಒಂದರಂತೆ ಗಾಂಧಿ ಮತ್ತು ಅಂಬೇಡ್ಕರ್ ಅವರ ಕುರಿತು ಪುಸ್ತಕಗಳು ಹೊರಬರುತ್ತಿವೆ, ಆದರೆ ನೆಹರು ಮಾತ್ರ ಮನದಾಳದಿಂದ ಮರೆಯಾಗುತ್ತಿದ್ದಾರೆ. ಅಕಾಡೆಮಿಕ್ ಆಸಕ್ತಿ ಮತ್ತು ಪ್ರಖ್ಯಾತಿಯ ಹಿನ್ನೆಲೆಯಲ್ಲಿ ನೋಡಿದಾಗ ನೆಹರು ಇಲ್ಲವಾಗಿದ್ದಾರೆ ಎಂದು ಹೇಳಬಹುದು. ಆದರೆ ಗಾಂಧಿ ಮತ್ತು ಅಂಬೇಡ್ಕರ್ ಕುರಿತು ಹೀಗೆ ಹೇಳಲು ಸಾಧ್ಯವಿಲ್ಲ. ಅವರು ಜೀವಂತವಾಗಷ್ಟೇ ಅಲ್ಲದೆ, ಚಟುವಟಿಕೆಯಿಂದಲೂ ಇದ್ದಾರೆ.
ವ್ಯಂಗ್ಯವೆಂದರೆ ಈ ಇಬ್ಬರೂ ಮಹಾನ್ ಪುರುಷರು, ಪರಸ್ಪರ ಸೈದ್ಧಾಂತಿಕ ವಿರೋಧಿಗಳಾಗಿದ್ದರು. ಪರಸ್ಪರರ ಸಾಮಾಜಿಕ- ರಾಜಕೀಯ ಸಿದ್ಧಾಂತವನ್ನು ತಿರಸ್ಕರಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರ ಕುರಿತು ಇತ್ತೀಚೆಗೆ ಹೊರಬಂದಿರುವ ಎರಡು ಹೊಸ ಪುಸ್ತಕಗಳಲ್ಲಿ ಗಾಂಧಿ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ನರೇಂದ್ರ ಜಾಧವ್ ಅವರ "ಅಂಬೇಡ್ಕರ್: ಅವೇಕನಿಂಗ್ ಆಫ್ ಇಂಡಿಯಾಸ್ ಸೋಶಿಯಲ್ ಕನ್ಸೈನ್ಸ್' ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳ ಸಂಗ್ರಹವಾಗಿದೆ. 'ಅನ್‌ಹಿಲೇಶನ್ ಆಫ್ ಕ್ಯಾಸ್ಟ್' ಎನ್ನುವ ಕುರಿತು ಅಂಬೇಡ್ಕರ್ ಅವರು 1936ರಲ್ಲಿ ಲಾಹೋರ್‌ನ ಸಭೆಯೊಂದರಲ್ಲಿ ಭಾಷಣ ಮಾಡುವವರಿದ್ದರು. ಆದರೆ ಅವರ ಭಾಷಣದ ಬರಹದಲ್ಲಿದ್ದ ಕೆಲ ಅಂಶಗಳು 'ಸಹಿಸಲಸಾಧ್ಯ' ಎಂದು ಕೆಲವರು ಭಾವಿಸಿದರು. ಈ ಕಾರಣಕ್ಕಾಗಿಯೇ ಅಲ್ಲಿ ಭಾಷಣ ಮಾಡದ ಅಂಬೇಡ್ಕರ್ ಮುಂದೆ ಅದಕ್ಕಾಗಿ ಬರೆದಿಟ್ಟುಕೊಂಡಿದ್ದ ಬರಹವನ್ನು ತಾವೇ ಪ್ರಕಟಿಸಿದರು. ಈಗ ಅದು ಮರುಮುದ್ರಣ ಕಂಡಿದ್ದು, ಅರುಂಧತಿ ರಾಯ್ ಅವರು ಮುನ್ನುಡಿಯನ್ನೂ ಬರೆದಿದ್ದಾರೆ.
ಗಾಂಧಿ ಭಾರತವನ್ನು ಬ್ರಿಟಿಷ್ ಮುಕ್ತವಾಗಿಸಬೇಕು ಎನ್ನುವ ವಿಷಯಕ್ಕೇ ಹೆಚ್ಚು ಒತ್ತು ಕೊಟ್ಟರೆ, ಅಂಬೇಡ್ಕರ್ ಸಾಮಾಜಿಕ ಸುಧಾರಣೆಯನ್ನೇ ತಮ್ಮ ಪ್ರಮುಖ ಅಜೆಂಡಾ ಆಗಿಸಿಕೊಂಡಿದ್ದರು. "ಕ್ಯಾಸ್ಟ್ ರೆಪ್ರೆಸೆಂಟೆಡ್ ದಿ ಜೀನಿಯಸ್ ಆಫ್ ಇಂಡಿಯಾ" ಎನ್ನುವ ಗಾಂಧಿ ಅವರ ಮಾತನ್ನು ಅಂಬೇಡ್ಕರ್ ಪ್ರಬಲವಾಗಿ ವಿರೋಧಿಸಿದರು. ತಮ್ಮ 1945ರ ಕೃತಿ "ವಾಟ್ ಕಾಂಗ್ರೆಸ್ ಆ್ಯಂಡ್ ಗಾಂಧಿ ಹ್ಯಾವ್ ಡನ್ ಟು ದಿ ಅನ್‌ಟಚಬಲ್ಸ್" ನಲ್ಲಿ ಅವರು ಗಾಂಧಿಯ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಬರೆದರು. ಅಂಬೇಡ್ಕರ್ ಅವರಲ್ಲಿದ್ದ ಸಂವಿಧಾನ ಪರಿಣತ ಅವರ ವಾದಗಳಲ್ಲಿ ತೀಕ್ಷ್ಣತೆ ಸಾಧಿಸಿದ. "ಭಾರತೀಯರು ತಮ್ಮ ಪ್ರಸಕ್ತ ಮನಸ್ಥಿತಿಯಿಂದ ಮುಕ್ತಿ ಪಡೆದಾಗ ಮಾತ್ರ ಅವರು ರಾಜಕೀಯವಾಗಿಯೂ ವಿಸ್ತರಿಸಬಲ್ಲರು" ಎಂದು ಅವರು ಅಭಿಪ್ರಾಯಪಟ್ಟಿದ್ದರು.
ನರೇಂದ್ರ ಜಾಧವ್ ಅವರು ಈ ಪುಸ್ತಕವನ್ನು ಅಂಬೇಡ್ಕರ್ ಅವರ "ಬೌದ್ಧಿಕ ಆತ್ಮಕಥೆ" ಎಂದು ವರ್ಣಿಸುತ್ತಾರೆ. ಇನ್ನು ಈ ಪುಸ್ತಕದಲ್ಲಿ ಅರುಂಧತಿ ರಾಯ್ ಅಂಬೇಡ್ಕರ್ ಅವರಿಗಿಂತ ಹೆಚ್ಚು ಜಾಗ ತೆಗೆದುಕೊಂಡಿರುವುದನ್ನು ಯಾರೂ ವಿರೋಧಿಸರು ಎಂದೆನಿಸುತ್ತಿದೆ. ಉತ್ತಮ ಉದಾಹರಣೆಗಳೊಂದಿಗೆ, ವಾದಗಳೊಂದಿಗೆ ಅವರು ತಮ್ಮ ನಿಲುವನ್ನು ಮುಂದಿಟ್ಟಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿನ ಗಾಂಧೀಜಿಯ ರಾಜಕೀಯವನ್ನೂ ಧೈರ್ಯವಾಗಿ ಪ್ರಶ್ನಿಸಿದ್ದಾರೆ. ಅವರು ಹೇಳುತ್ತಾರೆ "ಒಬ್ಬ ಬರಹಗಾರ್ತಿಯಾಗಿ, ಅಸ್ಪೃಶ್ಯ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಇತರೆ ಹಿಂದುಳಿದ ವರ್ಗ ಎನ್ನುತ್ತಾ ಸಹ ಮನುಷ್ಯರನ್ನು ಕರೆಯುವುದು ನಿಜಕ್ಕೂ ಹಿಂಸೆಯಾಗುವಂಥ ಸಂಗತಿ".
ಸತ್ಯವೇನೆಂದರೆ ಸ್ವಾತಂತ್ರ್ಯ ಲಭಿಸಿ ಇಷ್ಟು ವರ್ಷಗಳಾದರೂ ಜಾತಿ ಭೂತ ಭಾರತದಿಂದ ನಾಶವಾಗಿಲ್ಲ. ಕೆಲವು ರಾಜಕಾರಣಿಗಳು ಮತ್ತು ಪಕ್ಷಗಳು ತಮ್ಮ ಸಾಮ್ರಾಜ್ಯವನ್ನು ಜಾತಿ ರಾಜಕಾರಣದ ಬುನಾದಿಯ ಮೇಲೆಯೇ ನಿರ್ಮಿಸಿಕೊಂಡಿದ್ದಾರೆ. ಇನ್ನೊಂದೆಡೆ ತಮ್ಮ ಜಾತಿ ಪ್ರಾಬಲ್ಯವನ್ನು ತೋರಿಸಲು ಅಮಾಯಕರ ಮೇಲೆ ಅತ್ಯಾಚಾರ ಮಾಡುವ ವ್ಯಕ್ತಿಗಳು, ಹಾಗೆ ಮಾಡುವಂತೆ ಆದೇಶ ಹೊರಡಿಸುವ ಖಾಪ್ ಪಂಚಾಯತ್‌ಗಳೂ ಕಡಿಮೆಯಾಗಿಲ್ಲ. ಇದು ಸಾಲದೆಂಬಂತೆ 'ಬ್ರಾಹ್ಮಣತ್ವದ' ಬಗ್ಗೆ ಮಾತನಾಡುತ್ತಿದ್ದ ಸಂಘ ಪರಿವಾರದ ಮಾತುಗಳಲ್ಲೀಗ ಇತರೆ ಹಿಂದುಳಿದ ವರ್ಗಗಳನ್ನೂ ಒಳಗೊಳ್ಳುವ ಪದಗಳು ಇಣುಕುತ್ತಿವೆ. ಯಾವ ಬಿಜೆಪಿಯ ಬುದ್ಧಿಜೀವಿಗಳು ಅಂಬೇಡ್ಕರ್ ಅವರನ್ನು 'ಹುಸಿ ದೇವರು' ಎಂದು ಕರೆಯುತ್ತಿದ್ದರೋ, ಅವರೇ ಈಗ ಅಂಬೇಡ್ಕರ್ ಅವರನ್ನು ಆರಾಧ್ಯ ವ್ಯಕ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಅನಿಸುತ್ತಿದೆ, ಬಹುಶಃ ಅಂಬೇಡ್ಕರ್ ಬದುಕಿರಬಹುದು, ಆದರೆ ಅವರ ವಿಚಾರಗಳು ಸತ್ತು ಹೋಗಿರಬೇಕು!
ಟಿಜೆಎಸ್ ಜಾರ್ಜ್