ಕೋಟ್ಯಧಿಪತಿ ಅನ್ನಿಸಿಕೊಳ್ಳುವುದು ಸುಲಭವಲ್ಲ. ಅಂಥದೊಂದು ಲೆವೆಲ್‌ಗೆ ತಲುಪಬೇಕಾದರೆ, ಬಹಳ ಕಷ್ಟಪಡಬೇಕು. ಹಗಲಿರುಳು ದುಡಿಯಬೇಕು. ವ್ಯವಹಾರದ ಗುಟ್ಟುಗಳನ್ನು ಅರ್ಥಮಾಡಿಕೊಳ್ಳಬೇಕು. ಈ ತಂತ್ರಗಳನ್ನು ಅರ್ಥ ಮಾಡಿಕೊಂಡವರೆಲ್ಲ ಕೋಟ್ಯಧಿಪತಿಗಳಾಗುತ್ತಾರೆ ಎನ್ನಲು ಸಾಧ್ಯವೇ ಇಲ್ಲ. ಕಾರಣ, ಯಶಸ್ಸು ಎಂಬುದೊಂದು ಮಾಯಾ ಜಿಂಕೆ. ಅದು ಯಾವಾಗ, ಯಾರಿಗೆ, ಹೇಗೆ ಒಲಿಯುತ್ತದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ. ಇಂಥ ಕಟುವಾಸ್ತವದ ಮಧ್ಯೆಯೇ, ಪವಾಡದಂತೆ ನಡೆದು ಹೋಗಿರುವ ಕೆಲವು ಘಟನೆಗಳನ್ನು ನಾವು ನಂಬಬೇಕಾಗುತ್ತದೆ. ಲೂಧಿಯಾನದ ಮಲ್ಕಿತ್ ಚಾಂದ್ ಎಂಬಾತನ ಯಶೋಗಾಥೆ ಕೂಡ ಅವುಗಳಲ್ಲಿ ಒಂದು. ಕೇವಲ 30 ವರ್ಷಗಳ ಹಿಂದೆ, ಟಿ -ಶರ್ಟ್‌ನ ಅಳತೆಗೆ ತಕ್ಕಂತೆ ಬಟ್ಟೆ ಕತ್ತರಿಸುವ ಕೆಲಸ ಮಾಡುತ್ತಿದ್ದ ಚಾಂದ್, ಈಗ ಅದೇ ಟಿ-ಶರ್ಟ್ ಮಾರಾಟದ ಬಿಜಿನೆಸ್‌ನಿಂದಲೇ ನೂರು ಕೋಟಿ ರೂಪಾಯಿ ದುಡಿದಿದ್ದಾರೆ. ಒಂದಲ್ಲ, ಎರಡು ಟಿ-ಶರ್ಟ್ ತಯಾರಿಕಾ ಫ್ಯಾಕ್ಟರಿ ಆರಂಭಿಸಿದ್ದಾರೆ. ಆ ಮೂಲಕ, ಟಿ-ಶರ್ಟ್ ಮಾರಿಕೊಂಡೂ ಕೋಟಿ ಕೋಟಿ ಸಂಪಾದಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಯಶೋಗಾಥೆಯ ವಿವರಣೆ ಹೀಗೆ ಶುರುವಾಗುತ್ತದೆ:
ಪಂಜಾಬ್‌ನ ಮುಖ್ಯ ನಗರವಾದ ಲುಧಿಯಾನಾ, ಮಲ್ಕಿತ್ ಚಾಂದ್‌ರ ಹುಟ್ಟೂರು. ಚಾಂದ್‌ರ ತಂದೆ, ಸ್ವೆಟರ್‌ಗಳ ಉತ್ಪಾದನೆಯಲ್ಲಿ ದೊಡ್ಡ ಹೆಸರು ಮಾಡಿರುವ ಓಸ್ವಾಲ್ ಕಂಪನಿಯಲ್ಲಿ ನೌಕರಿಗಿದ್ದರು. ಸ್ವೆಟರ್‌ಗಳ ಡಿಸೈನ್ ಮಾಡುವುದು ಅವರ ಕೆಲಸವಾಗಿತ್ತು. ಚರಕದ ಮೂಲಕ ಬಟ್ಟೆ ತಯಾರಿಸುವುದು, ನಂತರ ಅದನ್ನು ಪರಿಚಯದವರಿಗೆ ಉಚಿತವಾಗಿ ಕೊಟ್ಟು ಬಿಡುವುದು ಚಾಂದ್‌ರ ತಾಯಿಯ ಕೆಲಸವಾಗಿತ್ತು. ಅದೊಂದು ಬಾರಿ ಹೊಸ ಬಟ್ಟೆ ತಯಾರಿಸಿದ ಆಕೆ, ಅದನ್ನು ಚಾಂದ್‌ನ ಕೈಗೆ ಕೊಟ್ಟು, ಇದನ್ನು ನಿನ್ನ ಚಿಕ್ಕಮ್ಮನಿಗೆ ತಲುಪಿಸು ಎಂದರಂತೆ. ಆ ಬಟ್ಟೆಯನ್ನು ಉಡುಗೊರೆಯಾಗಿ ಪಡೆದ ಚಿಕ್ಕಮ್ಮ, ಅದಕ್ಕೆ ಪ್ರತಿಯಾಗಿ ಒಂದು ರುಪಾಯಿನ ನೋಟು ನೀಡಿ (ಈ ಘಟನೆ ನಡೆದದ್ದು 1970ರ ದಶಕದಲ್ಲಿ. ಆಗ ಒಂದು ರುಪಾಯಿ ಕರೆನ್ಸಿ ನೋಟು ಚಾಲ್ತಿಯಲ್ಲಿತ್ತು.) ಇದನ್ನು ಅಮ್ಮನಿಗೆ ತಲುಪಿಸು ಎಂದಿದ್ದಾರೆ. ಬಾಲಕ ಮಲ್ಕಿತ್ ಚಾಂದ್, ಚಿಕ್ಕಮ್ಮನ ಆಜ್ಞೆಯನ್ನು ಪಾಲಿಸಿದ್ದಾರೆ. ತಂಗಿಯ ಕಡೆಯಿಂದ ಹಣ ಬಂದದ್ದನ್ನು ಗಮನಿಸಿದ ಚಾಂದ್‌ರ ತಾಯಿ- ಆ ಬಟ್ಟೆಯನ್ನು ನಾನು ಉಡುಗೊರೆಯಾಗಿ ಕೊಟ್ಟೆ ಕಣೋ. ಅದಕ್ಕೆಲ್ಲಾ ದುಡ್ಡು ತಗೋಬಾರದು. ಈ ಹಣವನ್ನು ಚಿಕ್ಕಮ್ಮನಿಗೆ ವಾಪಸ್ ಕೊಟ್ಟು ಬಾ ಅಂದಿದ್ದಾರೆ. ಚಾಂದ್, ಮತ್ತೆ ಚಿಕ್ಕಮ್ಮನ ಮನೆಗೆ ದೌಡಾಯಿಸಿದರೆ ಆಕೆ, ಈ ದುಡ್ಡು ಅಮ್ಮನಿಗೆ ಸೇರಬೇಕು ಮಗನೇ. ಆಕೆಗೇ ಕೊಟ್ಟು ಬಿಡು ಅಂದಿದ್ದಾರೆ! ಹೀಗೆ, ಒಂದು ರುಪಾಯಿಯನ್ನು ಹಿಡಿದುಕೊಂಡು ಅಮ್ಮ ಮತ್ತು ಚಿಕ್ಕಮ್ಮನ ಮನೆಗೆ 15ಕ್ಕೂ ಹೆಚ್ಚು ಬಾರಿ ಹೋಗಿ ಬಂದರೂ ಆ ಹಣವನ್ನು ಅಕ್ಕ-ತಂಗಿಯರಿಬ್ಬರೂ ಮುಟ್ಟಲೇ ಇಲ್ಲ.
ಆಗ ತಲೆ ಓಡಿಸಿದ ಚಾಂದ್, ಒಂದು ರುಪಾಯಿ ನೋಟನ್ನು ಸಣ್ಣ ಚೂರುಗಳನ್ನಾಗಿ ಹರಿದು, ಮನೆಗೆ ಹತ್ತಿರದಲ್ಲಿಯೇ ಒಂದು ಗುಂಡಿ ತೋಡಿ ಅದರಲ್ಲಿ ಹೂತು ಹಾಕಿದನಂತೆ. ಒಂದು ರುಪಾಯಿನ ನೋಟನ್ನು ಚೂರುಚೂರಾಗಿ ಹರಿದು ಹಾಕಿ ಬಿತ್ತನೆ ಮಾಡಿದರೆ, ಮುಂದೆ ಅದರಿಂದ ಸಾವಿರಾರು ರುಪಾಯಿಗಳನ್ನು ಕೊಡುವ ಮರವನ್ನೇ ಬೆಳೆಯಬಹುದು. ಆ ಮರದಲ್ಲಿ ಸಿಗುವ ಹಣವನ್ನು ಸಮಪಾಲು ಮಾಡಿ ಅಮ್ಮ ಮತ್ತು ಚಿಕ್ಕಮ್ಮನಿಗೆ ಹಂಚುವ ಪ್ಲಾನ್ ಹೊಂದಿದ್ದನಂತೆ. ರುಪಾಯಿಯ ಮರ ಬೇಗ ಬೆಳೆಯಲಿ ಎಂಬ ಉದ್ದೇಶದಿಂದ ನೋಟಿನ ಚೂರುಗಳನ್ನು ಹೂತಿದ್ದ ಜಾಗಕ್ಕೆ 15 ದಿನಗಳ ಕಾಲ ನೀರು ಹಾಕಿದ್ದನಂತೆ. ಮಗನ ಈ ಕೆಲಸವನ್ನು ಗಮನಿಸಿದ ತಾಯಿ, ಅವನ ಮಂದಬುದ್ಧಿಗೆ ಮರುಕಪಟ್ಟು ಸುಮ್ಮನಾದರು.
ಹೆಚ್ಚಿನ ದುಡಿಮೆಯಾಗಲಿ, ನೌಕರಿಯ ಭದ್ರತೆಯಾಗಲಿ ಇಲ್ಲದ ಗಾರ್ಮೆಂಟ್ಸ್ ಕ್ಷೇತ್ರಕ್ಕೆ ಮಕ್ಕಳು ಯಾವುದೇ ಕಾರಣಕ್ಕೂ ಬರಬಾರದು. ಅವರನ್ನೆಲ್ಲಾ ಚೆನ್ನಾಗಿ ಓದಿಸಿ ಸರ್ಕಾರಿ ನೌಕರಿಗೆ ಸೇರಿಸಬೇಕು. ಎಂಬುದು ಹೆತ್ತವರ ಆಸೆಯಾಗಿತ್ತು. ಓದಿನಲ್ಲಿ ತುಂಬಾ ಚುರುಕಾಗಿದ್ದ ಚಾಂದ್, ಸೆಕೆಂಡ್ ಪಿಯುಸಿಯಲ್ಲಿ ಶೇ. 95 ಫಲಿತಾಂಶದೊಂದಿಗೆ ಪಾಸ್ ಆದ ಕಾರಣ, ಸುಲಭವಾಗಿ ಮೆಡಿಕಲ್ ಸೀಟು ಸಿಕ್ಕಿತು. ಆನಂತರದಲ್ಲಿ ಏನೇನಾಯಿತು ಎಂಬುದನ್ನು ಅವರು ವಿವರಿಸುವುದು ಹೀಗೆ:
ಮೆಡಿಕಲ್ ಸೇರಿಕೊಂಡೆನಲ್ಲ; ಆ ಸಂದರ್ಭದಲ್ಲಿ ತಂದೆಯವರ ಸಂಬಳ 10 ಸಾವಿರ ಇತ್ತು. ಬೇರೆಯವರ ಫ್ಯಾಕ್ಟರಿಯಲ್ಲಿ ದುಡಿದು 10000 ರು. ಸಂಪಾದಿಸುವ ಬದಲು ನಾವೇ ಸ್ವಂತ ಉದ್ಯಮ ಆರಂಭಿಸಿದರೆ, ಹೆಚ್ಚು ಹಣ ಸಂಪಾದಿಸಬಹುದು ಅನ್ನಿಸಿತು. ತಂದೆಗೆ ಸಹಾಯಕನಾಗಬೇಕು. ಅವರ ಶ್ರಮವನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಮನೆಯಲ್ಲಿ ಯಾರಿಗೂ ತಿಳಿಸದೆ, ಸ್ವೆಟರ್ ತಯಾರಿಕಾ ಫ್ಯಾಕ್ಟರಿಗೆ ಸೇರಿಕೊಂಡೆ. ಕೆಲವೇ ದಿನಗಳಲ್ಲಿ ಸ್ವೆಟರ್ ತಯಾರಿಕೆಯ ಹಿಂದಿರುವ ಎಲ್ಲ ಗುಟ್ಟುಗಳನ್ನೂ ಅರ್ಥಮಾಡಿಕೊಂಡೆ. ಅದೇ ಸಂದರ್ಭಕ್ಕೆ, ನಾನು ಮೆಡಿಕಲ್ ತರಗತಿಗೆ ಹೋಗುತ್ತಿಲ್ಲ ಎಂಬ ಸಂಗತಿ ಮನೆಯವರಿಗೆ ಗೊತ್ತಾಯಿತು. ತಕ್ಷಣವೇ ತಂದೆಯವರ ಮುಂದೆ ನಿಂತು, ನನ್ನ ಐಡಿಯಾಗಳನ್ನೆಲ್ಲ ಹೇಳಿದೆ. 'ಬೇರೆಯವರ ಬಳಿ ಕೆಲಸಗಾರ ಆಗಿರುವ ಬದಲು ನಾವೇ ಮಾಲೀಕರಾಗುವುದು ಹೆಚ್ಚು ಲಾಭದಾಯಕ...' ಎಂದೆ. ನಂತರ ಆಪತ್ಕಾಲಕ್ಕೆಂದು ಕೂಡಿಟ್ಟಿದ್ದ ಹಣ, ಅಮ್ಮನ ಬಳಿಯಿದ್ದ ಒಡವೆಯನ್ನೆಲ್ಲ ಮಾರಿ, 1980ರಲ್ಲಿ ಸ್ವೆಟರ್ ಉತ್ಪಾದನಾ ಫ್ಯಾಕ್ಟರಿಯನ್ನು ಆರಂಭಿಸಿಯೇ ಬಿಟ್ಟೆವು. ಆದರೆ ಮಾರುಕಟ್ಟೆಯ ರೀತಿ-ನೀತಿಯ ಪರಿಚಯವಿಲ್ಲದ ಕಾರಣದಿಂದ ವ್ಯಾಪಾರದಲ್ಲಿ ಲಾಸ್ ಆಯಿತು. ಹಾಗೂ ಹೀಗೂ ಎರಡು ವರ್ಷ ನಡೆದ ಫ್ಯಾಕ್ಟರಿಯನ್ನು 1982ರಲ್ಲಿ ಮುಚ್ಚಬೇಕಾಗಿ ಬಂತು. ಒಂದು ಕಡೆಯಲ್ಲಿ ಕುಟುಂಬ ನಿರ್ವಹಣೆಯ ಜವಾಬ್ದಾರಿ, ಮತ್ತೊಂದು ಕಡೆಯಲ್ಲಿ ಹೊಸದಾಗಿ ಹೆಗಲೇರಿದ್ದ ಸಾಲ ತೀರಿಸಲು ಮತ್ತೆ ಬೇರೊಂದು ಫ್ಯಾಕ್ಟರಿಯಲ್ಲಿ ಕೆಲಸಗಾರ ಆಗಬೇಕಾಯ್ತು. ಹೀಗೆ ನಡೆದು ಬಂದದ್ದೇ ಜೋಗಿಂದರ್‌ಸಿಂಗ್ ಜೈನ್ ಅನ್ನುವವರ ಟಿ-ಶರ್ಟ್ ಉತ್ಪಾದಿಸುವ ಫ್ಯಾಕ್ಟರಿಗೆ. ಅಲ್ಲಿ ಒಂದು ಟಿ-ಶರ್ಟ್‌ಗೆ ಅಗತ್ಯವಿದ್ದ ಬಟ್ಟೆಯನ್ನು ಕಟ್ ಮಾಡಿಕೊಟ್ಟರೆ, 1 ರುಪಾಯಿ ಕೊಡುತ್ತಿದ್ದರು. ಒಂದು ದಿನಕ್ಕೆ 300 ಟಿ-ಶರ್ಟ್‌ಗೆ ಆಗುವಷ್ಟು ಬಟ್ಟೆಯನ್ನು ಕಟ್ ಮಾಡುತ್ತಿದ್ದೆ.
ಜೈನ್ ಅವರ ಟಿ-ಶರ್ಟ್ ಉತ್ಪಾದನಾ ಫ್ಯಾಕ್ಟರಿಯಲ್ಲಿದ್ದಾಗಲೇ ಎಲ್ಲ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು. ನನ್ನದೇ ಹೊಸ ಕಂಪನಿ ಆರಂಭಿಸಬಾರದೇಕೆ ಎಂಬ ಯೋಚನೆ ಮತ್ತೆ ಜೊತೆಯಾಯಿತು. ಇದು 1987ರ ಮಾತು. ಸುನಿಲ್ ಗವಾಸ್ಕರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್‌ಗಳ ಗುರಿ ಮುಟ್ಟಿ-ವಿಶ್ವದಾಖಲೆ ಬರೆದ ಸಂದರ್ಭ ಅದು. ಆಗ ಕಾಮೆಂಟರಿ ಹೇಳುತ್ತಿದ್ದ ವ್ಯಕ್ತಿ ಪದೇ ಪದೆ ಲಿಟ್ಲ್ ಮಾಸ್ಟರ್, ಲಿಟ್ಲ್ ಮಾಸ್ಟರ್ ಎನ್ನುತ್ತಿದ್ದ. ಗವಾಸ್ಕರ್ ವಿಶ್ವದಾಖಲೆ ಮಾಡಿದ್ರು ಎಂಬ ಸುದ್ದಿ ಕೇಳಿ ನನಗೂ ಏನಾದರೂ ಹೊಸ ಕೆಲಸ ಮಾಡಬೇಕು ಎಂಬ ಉತ್ಸಾಹ ಬಂತು. ಮರುದಿನ, 666 ಟಿ-ಶರ್ಟ್‌ಗಳಿಗೆ ಬಟ್ಟೆಯನ್ನು ಕಟ್ ಮಾಡಿಕೊಟ್ಟೆ. ಅವತ್ತೇ ಸಂಜೆ, ಲಿಟ್ಲ್ ಮಾಸ್ಟರ್ ನಿಟ್ ವೇರ್ ಹೆಸರನ್ನು ರಿಜಿಸ್ಟರ್ ಮಾಡಿಸಿದೆ. ನನ್ನ ಮಾಲೀಕ ಜೋಗಿಂದರ್‌ಜೈನ್, ಎಲ್ಲ ರೀತಿಯ ಸ್ವಾತಂತ್ರ್ಯ ಕೊಟ್ಟಿದ್ದರು. ಅವರಿಗೆ ಮುಂಚಿತವಾಗಿ ತಿಳಿಸದೇ ಕೆಲಸ ಬಿಡಲು ಮನಸ್ಸು ಒಪ್ಪಲಿಲ್ಲ. ಕಡೆಗೊಮ್ಮೆ -'ಮುಂದಿನ ವರ್ಷದಿಂದ ಸ್ವಂತ ಫ್ಯಾಕ್ಟರಿ ಆರಂಭಿಸುತ್ತಿದ್ದೇನೆ. ಹಾಗಾಗಿ, ಮುಂದಿನ ವರ್ಷದಿಂದ ನಾನು ಕೆಲಸ ಬಿಡುತ್ತಿದ್ದೇನೆ' ಎಂದು ಪತ್ರದ ಮೂಲಕ ತಿಳಿಸಿದೆ. ಅದನ್ನು ಕಂಡ ಜೈನ್ ಅವರು -'ವರ್ಷದವರೆಗೂ ಯಾಕೆ ಟೈಂ ವೇಸ್ಟ್ ಮಾಡೋದು? ಮುಂದಿನ ತಿಂಗಳಿನಿಂದಲೇ ಶುರು ಮಾಡು' ಅಂದರು.
ಹೀಗೆ ಶುರುವಾದದ್ದೇ ಲಿಟ್ಲ್ ಮಾಸ್ಟರ್ ನಿಟ್ ವೇರ್. ಫ್ಯಾಕ್ಟರಿ ಆರಂಭಿಸಿದ ವರ್ಷವೇ ತಂಗಿಯರ ಮದುವೆಗಳೂ ಫಿಕ್ಸ್ ಆದವು. ಪರಿಣಾಮ, ಫ್ಯಾಕ್ಟರಿಗೆಂದು ಕೂಡಿಟ್ಟಿದ್ದ ಹಣದ ಹೆಚ್ಚು ಪಾಲು ಮದುವೆಗೆ ಖರ್ಚಾಯಿತು. ಹಣವಿಲ್ಲದಿದ್ದರಿಂದ ದೊಡ್ಡ ಬಿಲ್ಡಿಂಗ್‌ನಲ್ಲಿ ನಡೆಯ ಬೇಕಿದ್ದ ಫ್ಯಾಕ್ಟರಿಯನ್ನು ಒಂದು ಗ್ಯಾರೇಜ್‌ನಲ್ಲಿ ನಡೆಸಿದ್ದಾಯಿತು. ಈ ಸಂದರ್ಭದಲ್ಲಿ ಟಿ -ಶರ್ಟ್ ಮಾರುತ್ತಲೇ ಗೆಲ್ಲಬೇಕಾದ ಅನಿವಾರ್ಯತೆ ನನ್ನದಾಗಿತ್ತು. ಆಗಲೆ, ಟಿ-ಶರ್ಟ್‌ನ ವಿನ್ಯಾಸದಲ್ಲಿ ಹೊಸತನ ತರಲು ಪ್ರಯತ್ನಿಸಿದೆ. ಕಾಲರ್‌ಗೆ ಬೇರೊಂದು ಬಣ್ಣದ ಬಟ್ಟೆ ಬಳಸುವುದು, ಜೇಬಿನ ಎರಡೂ ಬದಿಯಲ್ಲಿ ಮತ್ತೊಂದು ಆಕರ್ಷಕ ಬಣ್ಣದ ಬಟ್ಟೆಯನ್ನು ಹಾಕುವುದು... ಇಂಥವೇ ಪ್ರಯೋಗಗಳನ್ನು ಮಾಡಿದೆ. ಇದೆಲ್ಲಾ 1995ರ ಮಾತು. ಆಗ ಒಂದು ಟಿ-ಶರ್ಟ್‌ಗೆ ಮಾರುಕಟ್ಟೆಯಲ್ಲಿ ಕಡಿಮೆಯೆಂದರೆ 150 ರು. ಬೆಲೆ ಇತ್ತು. ಮಾರುಕಟ್ಟೆಯಲ್ಲಿ ಗೆಲ್ಲಬೇಕೆಂದರೆ ಟಿ-ಶರ್ಟ್‌ನ ಗುಣಮಟ್ಟ ಕಾಪಾಡಿಕೊಂಡು, ಕಡಿಮೆ ಬೆಲೆಗೆ ಮಾರಾಟ ಮಾಡಬೇಕು ಎಂದು ನಿರ್ಧರಿಸಿದೆ. ಬೇರೆ ಫ್ಯಾಕ್ಟರಿಯವರು 150 ರು.ಗೆ ಮಾರುತ್ತಿದ್ದ ಟಿ-ಶರ್ಟ್‌ಗಳನ್ನೇ ನಾನು 125 ರು.ಗೆ ಮಾರಲು ಶುರು ಮಾಡಿದೆ. ಇದರಿಂದ ಲಾಭ ಕಡಿಮೆಯಾಗುತ್ತಿತ್ತು. ಆದರೆ, ಲಾಸ್ ಆಗುತ್ತಿರಲಿಲ್ಲ. ಕಡಿಮೆ ಬೆಲೆಯ ಕಾರಣದಿಂದ ನಮ್ಮ ಕಂಪನಿಯ ಟಿ-ಶರ್ಟ್‌ಗಳಿಗೆ ಭಾರೀ ಡಿಮ್ಯಾಂಡ್ ಬಂತು. ಇದನ್ನು ಸಹಿಸದ ಕೆಲವರು-ಚಾಂದ್ ದಲಿತರ ಕುಟುಂಬದಿಂದ ಬಂದವನು. ಆತ ತಯಾರಿಸುವ ಬಟ್ಟೆಗಳನ್ನು ಖರೀದಿಸಬೇಡಿ ಎಂದು ಪ್ರಚಾರ ಮಾಡಿದರು. ದಲಿತರ ಕಡೆಯವನೊಬ್ಬ ಉದ್ಯಮಿಯಾಗುತ್ತಿದ್ದಾನಲ್ಲ ಎಂಬ ಅಸೂಯೆಯಿಂದ ಕೆಲವರು ಟಿ-ಶರ್ಟ್ ತಯಾರಿಗೆ ಅಗತ್ಯವಿದ್ದ ಕಚ್ಚಾ ವಸ್ತುವಿಗೆ ಹೆಚ್ಚು ಬೆಲೆ ನಿಗದಿಪಡಿಸಿದರು. ಇರಲಿ, ಇವೆಲ್ಲಾ ನನ್ನ ಪಾಲಿಗೆ ಅಗ್ನಿಪರೀಕ್ಷೆಗಳೇ ಅಂದುಕೊಂಡೆ. ಉತ್ಪಾದನೆಯ ಖರ್ಚು ಹೆಚ್ಚಿದರೂ, ಟಿ-ಶರ್ಟ್‌ಗಳ ಬೆಲೆ ಹೆಚ್ಚಿಸಲಿಲ್ಲ. ಗುಣಮಟ್ಟದಲ್ಲೂ ರಾಜಿ ಮಾಡಿಕೊಳ್ಳಲಿಲ್ಲ.
ಪರಿಣಾಮ ಏನಾಯಿತೆಂದರೆ-ನಮಗೆ ಬರುತ್ತಿದ್ದ ಆರ್ಡರ್‌ನ ಸಂಖ್ಯೆ ಲಕ್ಷದ ಗಡಿ ದಾಟಿತು. ವಿದೇಶಗಳಿಂದಲೂ ಬೇಡಿಕೆ ಶುರುವಾಯಿತು. ಜಾನಗಲ್ ಎಕ್ಸ್‌ಪೋಟ್ಸ್ ಹೆಸರಿನ ಮತ್ತೊಂದು ಫ್ಯಾಕ್ಟರಿಯೂ ಶುರುವಾಯಿತು. ಈಗ ನಮ್ಮಲ್ಲಿ ದಿನಕ್ಕೆ 5000 ಟಿ-ಶರ್ಟ್‌ಗಳು ತಯಾರಾಗುತ್ತಿವೆ. ದೇಶದಲ್ಲಿ ಮಾರಾಟವಾಗುವ ಟಿ-ಶರ್ಟ್‌ಗಳ ಪೈಕಿ ಶೇ. 50ರಷ್ಟು ಟಿ-ಶರ್ಟ್‌ಗಳು ನಮ್ಮ ಫ್ಯಾಕ್ಟರಿಯಿಂದಲೇ ತಯಾರಾದವು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ, ಖುಷಿ. ಕೇವಲ 30 ವರ್ಷಗಳ ಹಿಂದೆ ದಿನಕ್ಕೆ 300 ರೂ. ದುಡಿಯುತ್ತಿದ್ದ ನಾನು, ಇವತ್ತು ದಿನಕ್ಕೆ 3 ಲಕ್ಷ ದುಡಿಯುತ್ತಿದ್ದೇನೆ. ನನ್ನ ಒಟ್ಟು ಆಸ್ತಿಯ ಮೌಲ್ಯ 200 ಕೋಟಿಗಳನ್ನು ದಾಟಿದೆ. ಕಠಿಣ ಪರಿಶ್ರಮ, ಗೆಲ್ಲಲೇಬೇಕೆಂಬ ಹಠ ಮತ್ತು ಸೋಲುಗಳಿಂದ ಕಲಿತ ಪಾಠಗಳೇ ನನ್ನ ಯಶಸ್ಸಿನ ಹಿಂದಿರುವ ಗುಟ್ಟು ಎನ್ನುತ್ತಾ ತಮ್ಮ ಯಶೋಗಾಥೆಗೆ ಫುಲ್‌ಸ್ಟಾಪ್ ಹಾಕಿದರು ಮಲ್ಕಿತ್ ಚಾಂದ್.
ಕೋಟಿ ದುಡಿಯಬೇಕಾದರೆ ಡಾಕ್ಟರೋ, ಇಂಜಿನಿಯರೋ ಆಗಬೇಕಿಲ್ಲ. ಟಿ-ಶರ್ಟ್ ಮಾರುತ್ತಲೇ ಕೋಟಿಯಲ್ಲ, ನೂರು ಕೋಟಿಯನ್ನೂ ದುಡಿಯಬಹುದು ಎಂದು ತೋರಿಸಿಕೊಟ್ಟಿರುವ ಮಲ್ಕಿತ್ ಚಾಂದ್‌ರ ಸಾಧನೆಗೆ -ನಮೋ...
-ಎ.ಆರ್. ಮಣಿಕಾಂತ್
armanikanth@gmail.com