ಅಂಕಣಗಳು

ಬಹುಭಾಷೆಯ ಭಾರತದಲ್ಲಿ, ಹಿಂದಿಯೊಂದೇ ಹಿಗ್ಗಬೇಕೆ?

ತಮ್ಮ ಸರ್ಕಾರಕ್ಕೆ ನೂರು ಗಂಟೆಗಳ ಹನಿಮೂನ್ ಅವಧಿಯೂ ಸಿಗಲಿಲ್ಲ...

ತಮ್ಮ ಸರ್ಕಾರಕ್ಕೆ ನೂರು ಗಂಟೆಗಳ ಹನಿಮೂನ್ ಅವಧಿಯೂ ಸಿಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ದೂರುತ್ತಾರೆ. ಆದರೆ ಜಾಗರೂಕತೆಯಿಂದ, ಲೆಕ್ಕಾಚಾರ ಮಾಡಿ ಹೆಜ್ಜೆಯಿಡುವ ರಾಜಕೀಯ ನಾಯಕನಾಗಿದ್ದರೂ ಈ ಚಿಕ್ಕ ಅವಧಿಯಲ್ಲೇ ಅನೇಕ ಬಿಕ್ಕಟ್ಟುಗಳು ಹುಟ್ಟಿಕೊಳ್ಳಲು ಅವರು ಏಕೆ ಅವಕಾಶ ಮಾಡಿಕೊಟ್ಟರು? ರೇಲ್ವೆ ವ್ಯವಸ್ಥೆಯಲ್ಲಿನ ಸುರಕ್ಷತೆ ಅಥವಾ ಆಹಾರ ನೈರ್ಮಲ್ಯವನ್ನು ಗಟ್ಟಿಗೊಳಿಸುವುದರ ಬಗ್ಗೆ ಯೋಚಿಸುವುದಕ್ಕೂ ಮುನ್ನವೇ ನ್ಯಾಯಸಮ್ಮತವಲ್ಲದ ರೈಲ್ವೆ ದರ ಏರಿಕೆ ಮಾಡಿರುವುದು ಇದಕ್ಕೊಂದು ಉದಾಹರಣೆ. ಇನ್ನು ಸಾರ್ವಜನಿಕರ ಪ್ರತಿಭಟನೆ ಹೆಚ್ಚುತ್ತಿದ್ದಂತೆಯೇ, ಅನಿಲ ಮತ್ತು ಸೀಮೆ ಎಣ್ಣೆಯ ದರವನ್ನು ಏರಿಸಬೇಕು ಎಂಬ ತನ್ನ ಯೋಚನೆಯನ್ನು ಈ ಸರ್ಕಾರ ತಟ್ಟನೆ ತಡೆಹಿಡಿದಿದೆ. ಆಮ್ ಆದ್ಮಿಗಳ ಮೇಲಾಗುತ್ತಿರುವ ಈ ದಾಳಿಗಿಂತ ಹೆಚ್ಚು ಚಿಂತೆಗೆ ದೂಡುತ್ತಿರುವುದು ದೇಶದ ಹಲವು ಭಾಗಗಳಲ್ಲಿ ಶುರುವಾಗಿರುವ ಕೋಮುವಾದಿ ಅಪರಾಧಗಳು. ಇವುಗಳ ಹಿಂದೆ ಯಾವುದೋ ಅಜೆಂಡಾ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಸರ್ಕಾರದ ಬೆಂಬಲವಿಲ್ಲದೇ ಇರಬಹುದು, ಆದರೆ ನಿರಾಕರಣೆಯಂತೂ ಇರಲಿಕ್ಕಿಲ್ಲ. ಇಷ್ಟೊಂದು ಅವಸರದಿಂದ ತೊಂದರೆ ಹುಟ್ಟಿಸುವ ನೀತಿಗಳನ್ನು ಹೇರಲು ಹೊರಟಿರುವುದನ್ನು ನೋಡಿದರೆ, ಈ ಅಜೆಂಡಾಗಳ ಹಿಂದೆ ಕೆಲಸ ಮಾಡುತ್ತಿರುವ ಶಕ್ತಿಗಳು ಮುಂದೆ ಎದುರಾಗಬಹುದಾಗ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ಅರ್ಥವಾಗುತ್ತದೆ.
ಒಂದು ವೇಳೆ ಮೋದಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಿಂದಿಯನ್ನೇ ಸಂವಹನ ಭಾಷೆಯನ್ನಾಗಿ ಬಳಸುತ್ತಾರೆಂದಾದರೆ, ಅದು ಸ್ವಾಗತಾರ್ಹ ನಡೆಯೇ. ಜಪಾನಿಯರು, ರಷ್ಯನ್ನರು, ಚೀನಿಯರು, ಕ್ಯೂಬನ್ನರು ಮತ್ತು ಬ್ರೆಜಿಲಿಯನ್ನರು ಶೃಂಗಸಭೆಗಳಲ್ಲಿ ತಮ್ಮ ತಮ್ಮ ಭಾಷೆಯಲ್ಲೇ ಮಾತನಾಡುತ್ತಾರೆಂದರೆ, ಭಾರತೀಯರೂ ಕೂಡ ಹಾಗೆ ಮಾಡಬಹುದು. ಮೋದಿ ಬೇಕಿದ್ದರೆ ಕ್ಸಿ ಜಿನ್‌ಪಿಂಗ್‌ರೊಂದಿಗೆ ಹಿಂದಿಯಲ್ಲೇ ಮಾತನಾಡಲಿ, ಏಕೆಂದರೆ ಜಿನ್‌ಪಿಂಗ್ ಮ್ಯಾಂಡರಿನ್ ಭಾಷೆಯಲ್ಲೇ ಮಾತನಾಡುತ್ತಾರೆ. ಆದಾಗ್ಯೂ ಈ ಇಬ್ಬರಿಗೂ ಇಂಗ್ಲಿಷ್ ಮೇಲೆ ತುಸು ಹಿಡಿತವವಿದ್ದರೂ, ತಮ್ಮ ಸ್ಥಳೀಯ ಭಾಷೆಯಲ್ಲಿ ಮಾತನಾಡಿದಾಗಲೇ ಇವರ ಯೋಚನೆಗಳು ಸರಾಗವಾಗಿ ಹರಿಯುತ್ತವೆ.
ಆದರೆ ಭಾರತದ ಅನ್ಯ ಭಾಷಿಕರಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯ ಹಿಂದಿ ಭಾಷಿಕರಿಗೆ ಸಿಗುವುದು ಮಾತ್ರ ಸರಿಯಲ್ಲ. ಅದನ್ನು ನಿಸ್ಸಂಶಯವಾಗಿಯೂ ಪಕ್ಷಪಾತವೆಂದೇ ಕರೆಯಬೇಕಾಗುತ್ತದೆ. ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದಿಯನ್ನೇ ಬಳಸಬೇಕು, ಸಚಿವರೊಂದಿಗೆ ಹಿಂದಿಯಲ್ಲೇ ವ್ಯವಹರಿಸಬೇಕು, ಕರಡನ್ನು ಹಿಂದಿಯಲ್ಲೇ ಬರೆಯಬೇಕು ಎನ್ನುವ ಮೂಲಕ ಗೃಹ ಸಚಿವಾಲಯ ಪಕ್ಷಪಾತವನ್ನು ಸಾಂಸ್ಥೀಕರಣಗೊಳಿಸಲು ಹೊರಟಂತಿದೆ. ನಿಸ್ಸಂದೇಹವಾಗಿಯೂ ಇದರಿಂದಾಗಿ ಹಿಂದಿ ಭಾಷಿಕರಿಗೆ ಇತರರಿಗಿಂತ ಹೆಚ್ಚು ಅನುಕೂಲವಾಗುತ್ತದೆ. ಹಿಂದಿಯಲ್ಲಿ ತುಸು ಜ್ಞಾನವಿರುವ ಸರ್ಕಾರದ ಹಿರಿಯ ಕಾರ್ಯದರ್ಶಿಗಿಂತ, ಹಿಂದಿ ಮಾತೃಭಾಷೆಯುಳ್ಳ ಆತನ ಕಿರಿಯ ಸಹೋದ್ಯೋಗಿ ಮೇಲುಗೈ ಸಾಧಿಸುತ್ತಾನೆ. ಉದ್ಯೋಗ ಮತ್ತು ಪ್ರೊಮೇಷನ್ ಅವಕಾಶಗಳು ಹಿಂದಿ ಮಂದಿಗೆ ಹೆಚ್ಚಾಗುತ್ತವೆ, ಇತರ ಭಾಷಿಕರಿಗೆ ಕಡಿಮೆಯಾಗುತ್ತವೆ. ಸರಳವಾಗಿ ಹೇಳಬೇಕೆಂದರೆ, ಸರ್ಕಾರದ ಹಿಂದಿ ಕುರಿತಾದ ನಡೆ, ಒಡಕುಂಟುಮಾಡುವಂಥದ್ದು.
ಭಾಷೆಯೆನ್ನುವುದು ಜನರನ್ನು ಒಂದಾಗಿಸುವ ಬದಲು ಒಡೆಯುತ್ತಿರುವ ಏಕೈಕ ಬಹುಭಾಷೀಯ ಪ್ರಜಾಪ್ರಭುತ್ವವೆಂದರೆ ಭಾರತವೊಂದೇ. ಬಹುಸಂಸ್ಕೃತಿ ಮತ್ತು ಬಹುಭಾಷೆಯ ಲಾಭವನ್ನು ಅರಿತುಕೊಳ್ಳಲಾಗದ ಸಂಕುಚಿತ ಮನಸ್ಥಿತಿಗಳಿಂದ ಉಂಟಾಗಿರುವ ಪರಿಣಾಮವಿದು. ಇಲ್ಲದಿದ್ದರೆ, ಅನ್ಯ ರಾಷ್ಟ್ರಗಳು ಈ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಿವೆ ಎನ್ನುವುದನ್ನು ನಮ್ಮ ರಾಜಕೀಯ ವರ್ಗ ಕಣ್ಣು ತೆರೆದು ನೋಡುತ್ತಿತ್ತು. ಕೇವಲ 7 ಮಿಲಿಯನ್ ಜನಸಂಖ್ಯೆ ಹೊಂದಿರುವ ಸ್ವಿಜರ್‌ಲ್ಯಾಂಡ್ (ಬೆಂಗಳೂರಿನ ಜನಸಂಖ್ಯೆಯೇ 10 ಮಿಲಿಯನ್‌ಗಿಂತ ಅಧಿಕವಿದೆ) ಜರ್ಮನ್, ಇಟಾಲಿಯನ್, ಫ್ರೆಂಚ್ ಮತ್ತು ರುಮಾಂಟ್ಶ್ ಭಾಷೆಗಳಿಗೆ ಅಧಿಕೃತ ಸ್ಥಾನಕೊಟ್ಟಿರುವುದರಿಂದ, ಈ ಎಲ್ಲಾ ಭಾಷೆಗಳೂ ಅಲ್ಲಿ ಸಾಂವಿಧಾನಿಕ ಸ್ವಾತಂತ್ರ್ಯ ಅನುಭವಿಸುತ್ತಿವೆ. ಈ ಕಾರಣಕ್ಕಾಗೇ ಯಾವ ದುರಭಿಮಾನಿ ಭಾಷಿಕನೂ ಇನ್ನೊಂದು ಭಾಷೆಗಿಂತ ಮೇಲುಗೈ ಸಾಧಿಸಲು ಪ್ರಯತ್ನಿಸುವುದಿಲ್ಲ. ಸತ್ಯವೇನೆಂದರೆ ಸ್ವಿಜರ್‌ಲ್ಯಾಂಡ್ ಒಗ್ಗೂಡಿಸುವ ಬಹುಭಾಷೀಯ ಪಾಲಿಸಿಯಿಂದಾಗಿಯೇ ತನ್ನ ರಾಷ್ಟ್ರೀಯ ಗುರುತನ್ನು ಗಟ್ಟಿಯಾಗಿ ಕಾಪಾಡಿಕೊಂಡು ಬಂದಿದೆ. ಕೆನಡಾದಲ್ಲಿ 1960ರ ವರೆಗೂ ಆಂಗ್ಲ ಭಾಷೆಯ ಪ್ರಾಬಲ್ಯವಿತ್ತಾದರೂ, ಆ ನಂತರ 20 ಪ್ರತಿಶತದಷ್ಟಿದ್ದ ಫ್ರೆಂಚ್ ಭಾಷಿಕ ಕೆನೆಡಿಯನ್ನರ ಭಾಷಾ ಹಕ್ಕನ್ನು ಎತ್ತಿಹಿಡಿಯಲಾಯಿತು. ಇಂದು ಅಲ್ಲಿನ ಈ ದ್ವಿಭಾಷಾ ಸಂಸ್ಕೃತಿಯಿಂದಾಗಿ, ಅನೇಕಾನೇಕ ಕೆನಡಿಯನ್ನರು ಫ್ರೆಂಚ್ ಅನ್ನು ಕಲಿತು, ಅದನ್ನು ಜಗತ್ತನ್ನು ತಲುಪುವ ಎರಡನೇ ಬಾಗಿಲಿನಂತೆ ಭಾವಿಸುತ್ತಿದ್ದಾರೆ.
ಭಾರತದ ಭಾಷಾಭಿಮಾನಿಗಳು ಉಳಿದ ಏಷಿಯನ್ ರಾಷ್ಟ್ರಗಳಿಂದ ಕಲಿಯುವುದು ಬಹಳಷ್ಟಿದೆ. ಪುಟ್ಟ ಸಿಂಗಾಪುರವೇ ನಾಲ್ಕು ಅಧಿಕೃತ ಭಾಷೆಗಳನ್ನು ಹೊಂದಿದ್ದು, ತಮಿಳು ಮತ್ತು ಇಂಗ್ಲಿಷ್‌ಗೂ ಕೂಡ ಚೈನೀಸ್‌ನಷ್ಟೇ ಪ್ರಾಮುಖ್ಯ ಸಿಗುತ್ತಿದೆ. ದೊಡ್ಡ ಚೀನಾದಲ್ಲಿ ಒಂದು ಡಜನ್‌ಗೂ ಹೆಚ್ಚು ಅಧಿಕೃತ ಭಾಷೆಗಳಿವೆ (ಇವುಗಳನ್ನು ಉಪಭಾಷೆ ಎನ್ನಲಾಗುತ್ತದಾದರೂ, ಪರಸ್ಪರ ಬಹಳ ಭಿನ್ನವಾಗಿವೆ). ಆದರೆ ಒಂದೇ ಲಿಪಿಯಿಂದಾಗಿ ಆ ಭಾಷೆಗಳೆಲ್ಲ ಒಂದಾಗಿವೆ. ಅಧಿಕೃತ ಭಾಷೆ ಮ್ಯಾಂಡರಿನ್ ಅನ್ನು ಎಲ್ಲಾ ಪ್ರದೇಶಗಳಿಗೂ ಅನುಕೂಲವಾಗಲೆಂದು ಪುಟಾನ್‌ಗ್ಹುವಾಗೆ ಸ್ಟ್ಯಾಂಡರ್ಡೈಜ್ ಮಾಡಲಾಗಿದೆ.
ಎಲ್ಲದಕ್ಕಿಂತಲೂ ಎದ್ದು ಕಾಣಿಸುವ ಉದಾಹರಣೆಯೆಂದರೆ ಇಂಡೋನೇಷ್ಯಾ ರಾಷ್ಟ್ರದ ಭಾಷಾನೀತಿ. ದ್ವೀಪಗಳ ಸಮೂಹವಾದ ಇಂಡೋನೇಷ್ಯಾದಲ್ಲಿ ಸುಮಾರು 706 "ಜೀವಂತ" ಭಾಷೆಗಳಿದ್ದು, ಅದರಲ್ಲಿ 347 ಭಾಷೆಗಳು ಬಳಕೆಯಲ್ಲಿವೆ ಮತ್ತು ಬೆಳೆಯುತ್ತಿವೆ. ಅಲ್ಲಿನ ಅತಿದೊಡ್ಡ ಜನನಿಬಿಡ ದ್ವೀಪ ಜಾವಾ. ಅರೆಬಿಕ್ ಲಿಪಿಯನ್ನು ಹೊಂದಿದ್ದ ಜಾವನೀಸ್ ಭಾಷೆ ಶತಮಾನಗಳಿಂದ ಪ್ರಾಬಲ್ಯ ಸಾಧಿಸುತ್ತಾ ಬಂದಿತ್ತು. ಸರಳವಾದ, ನೈಜವಾದ ಆ ಭಾಷೆಯನ್ನು ಹೊಸ ಇಂಡೋನೇಷ್ಯಾ ಗಣರಾಜ್ಯದ ಅಧಿಕೃತ ಭಾಷೆಯನ್ನಾಗಿಸುವುದು ಸುಲಭದ ಕೆಲಸವಾಗಿತ್ತು. ಆದರೆ ಅಲ್ಲಿನ ನಾಯಕರು ಆ ತಪ್ಪನ್ನು ಮಾಡಲಿಲ್ಲ. ಹೊಸ ರಾಷ್ಟ್ರದಲ್ಲಿ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶ ದೊರೆಯಬೇಕು ಎನ್ನುವ ಕಾರಣಕ್ಕೆ ಅವರು, ಮಲಯ್ ಆಧಾರಿತ ಬಹಾಸಾ ಇಂಡೋನೇಷಿಯಾ ಭಾಷೆಯನ್ನು ಸಾರ್ವತ್ರಿಕಗೊಳಿಸಿದರು. ಆನಂತರ ಅವರು ಜಾವನೀಸ್ ಲಿಪಿಯನ್ನು ತ್ಯಜಿಸಿ, ರೋಮನ್ ಲಿಪಿಯನ್ನು ಅಳವಡಿಸಿದರು. ಅಸ್ತವ್ಯಸ್ಥವಾಗಿದ್ದ ಇಂಡೋನೇಷ್ಯಾದ ದ್ವೀಪಗಳನ್ನು ಒಂದುಗೂಡಿಸುವಲ್ಲಿ ಭಾಷೆ ಬಹುದೊಡ್ಡ ಪಾತ್ರ ವಹಿಸಿತು.
ನಾವು ನಮ್ಮ ನಾಗರಿಕತೆಯ ಬಗ್ಗೆ ಬಡಾಯಿಕೊಚ್ಚಿಕೊಳ್ಳುತ್ತೇವೆ, ಆದರೆ ನಾಗರಿಕ ದಾರಿಯಲ್ಲಿ ಮಾತ್ರ ನಡೆಯುವುದಿಲ್ಲ.

ಟಿ.ಜೆ.ಎಸ್ ಜಾರ್ಜ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT