ಕಳೆದ ವಾರ ಜೈವಿಕ ಇಂಧನದ ಉತ್ಪಾದನೆ ರೈತರಿಗೆ ಹೇಗೆ ಉಪಯುಕ್ತ ಎಂಬುದರ ಬಗ್ಗೆ ನಿಮಗೆ ಹೇಳುತ್ತಿದ್ದೆ. ಜೈವಿಕ ಇಂಧನಕ್ಕೆ ನಾನೇಕೆ ಇಷ್ಟೊಂದು ಮನಸೋತಿದ್ದೇನೆಂದರೆ ಅದು ಪೆಟ್ರೋಲ್‌ಗಿಂತ ಒಳ್ಳೆಯ ಇಂಧನ. ಅದೇಕೆಂದು ಈಗ ನಿಮಗೆ ಹೇಳುತ್ತೇನೆ.
ಹಲವು ಸಂಶೋಧನೆಗಳಿಂದ ಜೈವಿಕ ಇಂಧನ ಪೆಟ್ರೋಲಿಯಂ ಇಂಧನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇಂಗಾಲಾಮ್ಲವನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಕಂಡು ಬಂದಿದೆ. ಪೆಟ್ರೋಲಿಯಂ ಇಂಧನ ವಾತಾವರಣಕ್ಕೆ ಇಂಗಾಲಾಮ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಆದರೆ, ಜೈವಿಕ ಇಂಧನ ಸಸ್ಯಗಳು ವಾತಾವರಣದಲ್ಲಿನ ಇಂಗಾಲಾಮ್ಲದ ಕೆಲವು ಭಾಗಗಳನ್ನು ತಾವೇ ಪುನಃ ಬಳಸಿಕೊಳ್ಳುತ್ತವೆ.
-ಜೈವಿಕ ಇಂಧನವು ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ.
-ಇಂಜಿನ್ ಮಾರ್ಪಾಟಿನ ಅಗತ್ಯವಿಲ್ಲ.
-ಜೈವಿಕ ಇಂಧನದಲ್ಲಿ ಗಂಧಕದ ಪ್ರಮಾಣ ಅತ್ಯಂತ ಕಡಿಮೆ.
-ಇಂಧನದ ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಾಣಿಕೆ ಸುರಕ್ಷಿತ.
-ಜೈವಿಕ ಇಂಧನವು ಇಂಜಿನ್‌ನ ಕಾರ್ಯಕ್ಷಮತೆಯನ್ನು, ಬಾಳಿಕೆಯನ್ನು ಹೆಚ್ಚಿಸುತ್ತದೆ.
-ಜೈವಿಕ ಇಂಧನದಲ್ಲಿ ಹೈಡ್ರೋಕಾರ್ಬನ್, ಸುಡದ ಇಂಗಾಲದ ಕಣಗಳ ಉಗುಳುವಿಕೆಯಲ್ಲಿ ಇಳಿಮುಖವನ್ನು ಗಮನಿಸಲಾಗಿದೆ.
-ಈ ಮರಗಳನ್ನು ಬೆಳೆಯುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶವನ್ನು ಕಾಪಾಡುವುದರೊಂದಿಗೆ ಆ ಪ್ರದೇಶವನ್ನು ಹಸಿರಾಗಿಸಬಹುದು.
ಇಷ್ಟೆಲ್ಲಾ ಉಪಯುಕ್ತವಾಗಿರುವ ಜೈವಿಕ ಇಂಧನವನ್ನು ರೈತರಿಗೆ ಪರಿಚಯಿಸಿ ಪ್ರೋತ್ಸಾಹಿಸುವುದು ಆದ್ಯ ಕರ್ತವ್ಯವೆಂದು ನನಗನ್ನಿಸಿದ್ದರಿಂದಲೇ ಈ ಮೊದಲೇ ಹೇಳಿದಂತೆ ಜೈವಿಕ ಇಂಧನ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯ ಬಗ್ಗೆ ಆಲೋಚನೆ ಮಾಡಿ, ಗುಲ್ಬರ್ಗಾ ವಿಶ್ವವಿದ್ಯಾಲಯ, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಕೇಂದ್ರವು ಬಂಜರು ಭೂಮಿಯಲ್ಲಿ ಜೈವಿಕ ಸಸಿಗಳನ್ನು ಬೆಳೆಯಲು ಪ್ರಾಯೋಗಿಕವಾಗಿ ರೈತರಿಗೆ ಪ್ರೋತ್ಸಾಹ ನೀಡಲು ಪ್ರಾರಂಭಿಸಿದ್ದು. ಈ ಎಲ್ಲಾ ಚಟುವಟಿಕೆಗಳಿಗೆ ಕರ್ನಾಟಕ ಸರ್ಕಾರದ ಜೈವಿಕ ಇಂಧನ ಕಾರ್ಯಪಡೆ, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಅರಣ್ಯ ಇಲಾಖೆ ಗುಲ್ಬರ್ಗಾ ಸಹಾಯ ಮಾಡುತ್ತಿದೆ ಎಂಬುದರ ಬಗ್ಗೆಯೂ ನಿಮಗೆ ತಿಳಿಸಿದ್ದೆ.
ಗುಲ್ಬರ್ಗಾ ವಿಶ್ವವಿದ್ಯಾಲಯವು ಜೈವಿಕ ಇಂಧನದ ವಿಭಾಗವನ್ನು ಪ್ರಾರಂಭಿಸಿತು. ಇದನ್ನು ಪ್ರಾರಂಭ ಮಾಡಲು ವಿ.ವಿ.ಯ ಆವರಣದಲ್ಲಿ ಒಂದು ನೂರು ಎಕರೆ ಜಮೀನಿನಲ್ಲಿ ಎಲ್ಲಾ ಬಗೆಯ ಜೈವಿಕ ಬೆಳೆಗಳನ್ನು ಜೈವಿಕ ಇಂಧನ ತಂತ್ರಜ್ಞಾನ ಪಾರ್ಕ್‌ನಲ್ಲಿ ತೆಗೆದುಕೊಳ್ಳಲಾಗಿತ್ತು. ಆ ಪಾರ್ಕ್‌ನ ಉದ್ದೇಶ ಹೀಗಿತ್ತು:
-ಗುಲ್ಬರ್ಗಾ ವಿಶ್ವ ವಿದ್ಯಾಲಯದ ಆವರಣದಲ್ಲಿ ವಿವಿಧ ಜೈವಿಕ ಇಂಧನದ ಬೆಳೆಗಳನ್ನು ನೆಡುವುದು.
-ಬೆಳೆಗಳ ಬೆಳವಣಿಗೆಯ ಅಧ್ಯಯನ ಹಾಗೂ ಗುಲ್ಬರ್ಗಾ ಭಾಗದಲ್ಲಿ ಹೆಚ್ಚಿಸುವ ಜವಾಬ್ದಾರಿ.
-ಗುಲ್ಬರ್ಗಾ ಜಿಲ್ಲೆಯ ಗ್ರಾಮೀಣ ಭಾಗಗಳ ನಿರುದ್ಯೋಗಿ ಪುರುಷ ಮತ್ತು ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು.
-ಜೈವಿಕ ಇಂಧನ ಬೆಳೆಗಳ ಜಲನಿರ್ವಹಣೆ ತಂತ್ರಜ್ಞಾನ, ಕಟಾವು ಹಾಗೂ ನಂತರದ ತಂತ್ರಜ್ಞಾನದ ಕುರಿತು ಪ್ರಾತ್ಯಕ್ಷಿತೆಯನ್ನು ಮಾಡುವುದು ಮತ್ತು ಹಸಿರು ಹೆಚ್ಚಿಸುವುದು.
ಪ್ರಾರಂಭಿಕ ನೆಡುತೋಪುಗಳು ಬೆಳೆಯುವ ಉದ್ದೇಶಕ್ಕಾಗಿ ರೈತರೊಂದಿಗೆ ಸಂಪರ್ಕಿಸಿ ಅವರಿಗೆ ತಿಳಿವಳಿಕೆ ನೀಡಿ
ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಲಾಯಿತು. ಒಟ್ಟಾಗಿ ಕೆಲಸಗಳನ್ನು ಆಚರಣೆಗೆ ತಂದು ಸಮಯಕ್ಕೆ ಸರಿಯಾಗಿ ಬೆಳೆಗಳ ನಿರ್ವಹಣೆ ಮಾಡಬೇಕೆಂದು ನಿರ್ಧರಿಸಲಾಯಿತು. ಇದಕ್ಕಾಗಿ ಹೈದ್ರಾಬಾದ್ ಕರ್ನಾಟಕ ಭಾಗದ ರೈತರಿಗೆ, ಅಧಿಕಾರಿಗಳಿಗೆ, ಅಧಿಕಾರೇತರರಿಗೆ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಜೈವಿಕ ಇಂಧನದ ಮಹತ್ವವನ್ನು ತಿಳಿಸಲು ನುರಿತ ತಂತ್ರಜ್ಞರನ್ನು ಹಾಗೂ ಸರ್ಕಾರದ ಅಧಿಕಾರಿಗಳನ್ನು ಕರೆಸಿ, ವಿಶೇಷ ಮಾಹಿತಿಯನ್ನು ನೀಡಲಾಯಿತು. ಎಲ್ಲಾ ತರಬೇತಿದಾರರಿಗೆ ಸರಿಯಾದ ಹಾಗೂ ಅಧಿಕೃತ ತರಬೇತಿ ನೀಡಲಾಗಿತ್ತು. ಜೈವಿಕ ಇಂಧನದ ಬೆಳೆಗಳ ಎಲ್ಲಾ ಮಾಹಿತಿಯೂ ಪರಿಣಾಮಕಾರಿಯಾಗಿತ್ತು.
ವಿಶೇಷವಾಗಿ ಸರ್ಕಾರೇತರ ಸಂಸ್ಥೆಗಳಿಗೆ ಹಸಿರು ಹೊನ್ನು ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಸುಮಾರು ಒಂದು ನೂರು ಸದಸ್ಯರು ತರಬೇತಿ ಪಡೆದರು. ಸರ್ಕಾರೇತರ ಸಂಸ್ಥೆಗಳ ಸಹಾಯದಿಂದ ಗಿಡ ನೆಡುವುದಕ್ಕಾಗಿ ರೈತರ ಸಂಪರ್ಕ ಹಾಗೂ ಸಹಕಾರ ಸಾಧ್ಯವಾಗುತ್ತದೆ. ಸರ್ಕಾರೇತರ ಸಂಸ್ಥೆಗಳಿಗೆ ಜೈವಿಕ ಇಂಧನ ಬೆಳೆಗಳ, ನೆಡುತೋಪುಗಳ, ಬೀಜಸಂಗ್ರಹಣೆ, ಕಟಾವು ತಂತ್ರಜ್ಞಾನ ಹಾಗೂ ಗ್ರಾಮೀಣ ನಿರುದ್ಯೋಗ ಜನರಿಗೆ ಉದ್ಯೋಗ ಅವಕಾಶ ನೀಡುವ ಕುರಿತು ತರಬೇತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಡಿಯೋ ಮೂಲಕ ಪ್ಲಾಂಟೇಷನ್ ಕುರಿತು ಪ್ರಾತ್ಯಕ್ಷಿತೆಯನ್ನು ನೀಡಿ, ಉತ್ತಮ ಬೆಳೆ ಬೆಳೆಯುವ ವಿವಿಧ ನಮೂನೆಯ ಜೈವಿಕ ಬೆಳೆಗಳನ್ನು ಆರಿಸಿ ಹಾಗೂ ಸಣ್ಣ, ಮಾದ್ಯಮದ ಜೈವಿಕ ಉತ್ಪಾದನೆಗೆ ಸಹಕಾರ ನೀಡಿ ಕೈಗಾರಿಕಾದಾರರಿಗೆ ಈ ಭಾಗದಲ್ಲಿ ಈ ಉದ್ಯಮ ಮಾಡಲು ತಿಳಿಸಲಾಯಿತು.
ಎಲ್ಲಕ್ಕಿಂತ ಹೆಚ್ಚಾಗಿ ಮಾರುಕಟ್ಟೆಯ ವ್ಯವಸ್ಥೆ ಅಚ್ಚುಕಟ್ಟಾಗಿ ಆಗಬೇಕು. ಜೈವಿಕ ಇಂಧನ ಮರದ ಬೀಜಗಳಿಗೆ ಪ್ರಸ್ತುತ ನಿಗದಿತ ಬೆಲೆ ಇಲ್ಲ. ಮಾರುಕಟ್ಟೆಯಲ್ಲಿ ಬೀಜಗಳ ಬೆಲೆಯನ್ನು ಪೂರೈಕೆ ಹಾಗೂ ಬೇಡಿಕೆಯ ಆಧಾರದ ಮೇಲೆ ನಿಗದಿಪಡಿಸಲಾಗುವುದು. ಆದರೆ, ಮುಂದಿನ ದಿನಗಳಲ್ಲಿ ಎಣ್ಣೆ ಬೀಜಗಳಿಗೆ, ಜೈವಿಕ ಇಂಧನ ಮತ್ತು ಜೈವಿಕ ಇಂಧನ ಉಪ-ಉತ್ಪನ್ನಗಳಿಗೆ ನಿಶ್ಚಿತವಾದ ಮಾರುಕಟ್ಟೆ ನಿರ್ಮಾಣವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಆದ್ದರಿಂದ ಈ ನಿಟ್ಟಿನಲ್ಲಿ ಸಂಘಟಿತವಾದ ಬೀಜಸಂಗ್ರಹಣಾ ಜಾಲ ಹಳ್ಳಿಗಳಲ್ಲಿ ಪ್ರಾರಂಭವಾಗಬೇಕಾಗಿದೆ. ಈ ಸಂಗ್ರಹಣಾ ಜಾಲವು ಈಗ ಪ್ರಚಲಿತದಲ್ಲಿರುವ ಹಾಲು ಒಕ್ಕೂಟದ ಮಾದರಿಯಲ್ಲಿ ಕೆಲಸ ಮಾಡಬಹುದು. ಹೀಗೆ ಸಂಗ್ರಹಿಸಿದ ಜೈವಿಕ ಇಂಧನದ ಬೀಜಗಳನ್ನು ಹೋಬಳಿ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಎಣ್ಣೆ ತೆಗೆಯುವ ಯಂತ್ರವನ್ನು ಸ್ಥಾಪಿಸಿ, ತೆಗೆದಂಥ ಎಣ್ಣೆಯನ್ನು ಮತ್ತು ಹಿಂಡಿಯನ್ನು ಪುನಃ ಇದೇ ಸಹಕಾರ ಸಂಘದ ಸದಸ್ಯರುಗಳಿಗೆ ಮೊದಲು ಕೊಡುವ ವ್ಯವಸ್ಥೆ ಮಾಡಬಹುದು. ಈ ಎಣ್ಣೆಯನ್ನು ರೈತರು ಡೀಸಲ್ ಜೊತೆ ಶೇಕಡಾ ಹತ್ತರಿಂದ ಇಪ್ಪತ್ತರವರೆಗೆ ಮಿಶ್ರಣ ಮಾಡಿ ಟ್ರ್ಯಾಕ್ಟರ್, ಟಿಲ್ಲರ್ ಮತ್ತು ಪಂಪ್‌ಸೆಟ್‌ಗಳಿಗೆ ಬಳಸಬಹುದು. ನಂತರ ಉಳಿದ ಎಣ್ಣೆಯನ್ನು ಜೈವಿಕ ಡೀಸೆಲ್ ಉತ್ಪಾದಿಸಲು ಕಾರ್ಖಾನೆಗಳಿಗೆ ಕಳುಹಿಸಬಹುದು. ಸಹಕಾರ ಸಂಘದ ಮಾದರಿಯಲ್ಲಿ ಜೈವಿಕ ಇಂಧನ ಮರಗಳ ಬೀಜಗಳನ್ನು ಸಂಗ್ರಹಿಸುವುದರಿಂದ ಮಧ್ಯವರ್ತಿಗಳನ್ನು ದೂರ ಮಾಡಬಹುದು. ಹಾಗೂ ಸಣ್ಣ ಉತ್ಪಾದಿಸುವ ಯಂತ್ರಗಳನ್ನು ಕೃಷಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಪಡಿಸಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಜನೆ ಹಾಗೂ ಆದಾಯ ತರಬಲ್ಲ ಚಟುವಟಿಕೆಗಳನ್ನು ಕೈಗೊಳ್ಳಬಹುದು.
ಗೃಹಮಟ್ಟದಲ್ಲಿ ಬೀಜಗಳಿಂದ ಎಣ್ಣೆಯನ್ನು ಹೊರತೆಗೆಯುವ ಯಂತ್ರಗಳ ಬಳಕೆ, ಗ್ರಾಮ, ಹೋಬಳಿ ಹಾಗೂ ತಾಲೂಕು ಮಟ್ಟದ ಎಣ್ಣೆ ಗಾಣಗಳ ಸ್ಥಾಪನೆ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜೈವಿಕ ಇಂಧನವನ್ನು ಉತ್ಪತ್ತಿ ಮಾಡುವ ಘಟಕಗಳನ್ನು ನಿರ್ಮಾಣ ಮಾಡುವುದರಿಂದ ಉತ್ಪಾದನೆ ಮಾಡಬಹುದಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ದಕ್ಷಿಣ ರೈಲು ಸಂಸ್ಥೆ, ಭಾರತೀಯ ತೈಲ ನಿಗಮ, ಕೃಷಿ ವಿಜ್ಞಾನ ಕೇಂದ್ರಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು, ಈ ಸಂಸ್ಥೆಗಳು ಜೈವಿಕ ಇಂಧನವನ್ನು ಖರೀದಿ ಮಾಡುತ್ತವೆ.
ಹೈದ್ರಾಬಾದ್ ಕರ್ನಾಟಕ ಭಾಗದ ಸುತ್ತಮುತ್ತ ಜೈವಿಕ ಇಂಧನ ಬೀಜಗಳ ಸಂಗ್ರಹಣೆಗಾಗಿ ಮಾರುಕಟ್ಟೆ ಕೇಂದ್ರವನ್ನು ಸ್ಥಾಪಿಸಲಾಯಿತು. ಇದರಿಂದ ಸ್ಥಳಿಯರಿಗೆ ಮಾರುಕಟ್ಟೆ ಸಮಸ್ಯೆ ಇರುವುದಿಲ್ಲ. ಮಾರುಕಟ್ಟೆ ಕೇಂದ್ರದಿಂದ ಸುಮಾರು ಮೂರು ಟನ್ ಬೀಜಗಳನ್ನು ವಿವಿಧ ಕೃಷಿ ಕೇಂದ್ರಗಳಿಂದ ಖರೀದಿಸಲಾಯಿತು. ಫಲಾನುಭವಿಗಳು ಹತ್ತರಿಂದ ಹದಿನೈದು ರು.ಗಳನ್ನು ಬೀಜಕ್ಕೆ ಪಾವತಿಸುವುದೆಂದು ನಿಗದಿ ಪಡಿಸಲಾಯಿತು. ಮಾರುಕಟ್ಟೆ ಕೇಂದ್ರದಿಂದ ಎಣ್ಣೆ ಅಂಶವುಳ್ಳ ಬೀಜಗಳು, ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯಲು ಅನುಕೂಲವಾಯಿತು.
ಅಲ್ಲದೆ ವಿವಿಧ ಸಂಸ್ಥೆ ಹಾಗೂ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ನಂದನ್ ಬೈಯೋವುಟ್ರಿಕ್. ಪ್ರೈ. ಲಿ. ಹೈದ್ರಾಬಾದ್ ಹಾಗೂ ಬಯೋಡೀಸೆಲ್ ಸೊಸೈಟಿ ಇಂಡಿಯಾ, ಬೆಂಗಳೂರು ಇವರೊಂದಿಗೆ ಸಹಯೋಗ ಹಾಗೂ ಚಟುವಟಿಕೆಗಳಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು.
ದೇಶದಲ್ಲಿರುವ ಒಣ ಹಾಗೂ ಅನುತ್ಪಾದಿತ ಭೂಮಿಗಳನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯ, ರಾಷ್ಟ್ರೀಯ ಬಂಜರು ಭೂಮಿ ಅಭಿವೃದ್ಧಿ ಮಂಡಳಿ, ಪರಿಸರ ಹಾಗೂ ಅರಣ್ಯ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಇಸ್ರೋದ ಪರಿಣಿತ ಸಂಪನ್ಮೂಲ ಹಾಗೂ ಪರಿಣಿತ ತಂತ್ರಜ್ಞರಿಂದ ಅಭಿವೃದ್ಧಿಪಡಿಸಬಹುದು. ರಾಜ್ಯ ಸರ್ಕಾರದ ಸಹಾಯದಿಂದ ಸರ್ಕಾರದ ಬಂಜರು ಭೂಮಿಗಳನ್ನು ಲೀಸ್ ಆಧಾರದ ಮೇಲೆ ಪಡೆದು ಹೆಚ್ಚಿನ ಜೈವಿಕ ಇಂಧನ ಉತ್ಪಾದನೆಯನ್ನು ಮಾಡಬಹುದಾಗಿದೆ. ಆದರೆ ಪ್ರಸ್ತುತ ನಿಯಮಗಳನ್ನು ಬದಲಾಯಿಸಲು ಅವಶ್ಯಕ ಇದೆ.
ನಿರಂತರವಾಗಿ ಸಂಶೋಧನೆಗಳು ನಡೆಯುತ್ತಲೇ ಇರಬೇಕು. ಈ ಸಂಶೋಧನೆಗಳಿಂದ ಸಾಧ್ಯವಾದಷ್ಟೂ ನಮ್ಮ ಪರಿಸರವನ್ನು ಹಾಳು ಮಾಡದೆ ನಮ್ಮ ರೈತ ಬಾಂಧವರ ಬದುಕು ಹಸುನಾಗಬೇಕು. ಅಧುನಿಕ ತಂತ್ರಜ್ಞಾನ ಪಾರಂಪರಿಕ ಪದ್ಧತಿಗಳನ್ನು ಹಾಳುಗೆಡವದೆ ಅದರೊಟ್ಟಿಗೆ ಒಂದಾದಾಗ ಸುಖೀ ರೈತರನ್ನು ನಾವು ಕಾಣಬಹುದಾಗಿದೆ. ಅದೇ ನಮ್ಮೆಲ್ಲರ ಮನೋಭಿಲಾಷೆ ಅಲ್ಲವೇ?
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com