ಅಂಕಣಗಳು

ಗಿಲ್ಲಿ ದಾಂಡಿನ ಪಾಂಡಾ, ಸಹಸ್ರ ಮಂದಿಯ ದಿಲ್‌ಗೆದ್ದ ಕಥೆಯು...

ನಮ್ಮ ಕಥಾನಾಯಕನ ಹೆಸರು ರಮಾಕಾಂತ ಪಾಂಡಾ. ಈತ, ಮಧ್ಯಮ ವರ್ಗದ...

ನಮ್ಮ ಕಥಾನಾಯಕನ ಹೆಸರು ರಮಾಕಾಂತ ಪಾಂಡಾ. ಈತ, ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನು. ಪಾಂಡಾನ ತಾತ ಸ್ವಾತಂತ್ರ್ಯ ಹೋರಾಟಗಾರರು. ಪಾಂಡಾ ಬೆಳೆದಿದ್ದೆಲ್ಲಾ ತಾತನ ಕಣ್ಗಾವಲಿನಲ್ಲೇ. ಅವರ ನಿಧನಾನಂತರ ಈ ಹುಡುಗ ಅಮ್ಮನ ಮಡಿಲು ಸೇರಿಕೊಂಡ. ರಮಾಕಾಂತ ಪಾಂಡಾ, ಚಿಕ್ಕಂದಿನಿಂದಲೂ ಬಹಳ ಚೂಟಿಯಿದ್ದ. ವರ್ಷ ವರ್ಷವೂ ಅವನಿಗೇ ಮೊದಲ ರ್ಯಾಂಕ್. ಹೀಗಿರುವಾಗಲೇ ಕೆಲವು ಪುಂಡರ ಪರಿಚಯವಾಯಿತು. ಪರಿಣಾಮವಾಗಿ ಶಾಲೆಗೆ ಚಕ್ಕರ್ ಹೊಡೆದು ಗೋಲಿ ಹಾಗೂ ಚಿಣ್ಣಿ-ದಾಂಡ್ ಆಟವಾಡಲು ಹೋಗುವುದು ಅಭ್ಯಾಸವಾಯಿತು. ಮಗ ದಾರಿ ತಪ್ಪುತ್ತಿದ್ದಾನೆ ಎಂಬುದು ಗೊತ್ತಾದ ತಕ್ಷಣ, ಪಾಂಡಾನ ತಾಯಿ ಎಚ್ಚೆತ್ತರು. ಮುದ್ದಿನ ಮಗನಿಗೆ ಕಠಿಣ ಶಿಕ್ಷೆ ವಿಧಿಸಿದರು. ನೀನು ತುಳಿಯಬೇಕಾದ ದಾರಿ ಇದಲ್ಲ ಮಗನೇ ಎಂದು ಬುದ್ಧಿ ಹೇಳಿದರು.
ಈಗ ಏನಾಗಿದೆ ಗೊತ್ತೆ? ಒಂದು ಕಾಲದಲ್ಲಿ ಶಾಲೆಗೆ ಚಕ್ಕರ್ ಹೊಡೆದು ಗೋಲಿ, ಚಿಣ್ಣಿ-ದಾಂಡ್ ಆಡಲು ಹೋಗುತ್ತಿದ್ದ ರಮಾಕಾಂತ ಪಾಂಡಾ, ಇವತ್ತು ದೇಶದ ನಂಬರ್ ಒನ್ ಹೃದ್ರೋಗ ತಜ್ಞ ಅನ್ನಿಸಿಕೊಂಡಿದ್ದಾರೆ. ವಿಶ್ವದ ಅತ್ಯುತ್ತಮ ದರ್ಜೆಯ ಹೃದ್ರೋಗ ಚಿಕಿತ್ಸಾ ಕೇಂದ್ರಗಳಲ್ಲೊಂದು ಎಂಬ ಹೆಗ್ಗಳಿಕೆಯ ಏಶಿಯನ್ ಹಾರ್ಟ್ ಇನ್‌ಸ್ಟಿಟ್ಯೂಟನ್ನು ಮುಂಬಯಿಯಲ್ಲಿ ಕಟ್ಟಿಸಿದ್ದಾರೆ. ಒಂದೆರಡಲ್ಲ, 18000ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿ ಮುಗಿಸಿದ್ದಾರೆ. ದೊಡ್ಡ ಸಂತೋಷವೆಂದರೆ, ಪಾಂಡಾ ಅವರಿಂದ ಆಪರೇಷನ್ ಮಾಡಿಸಿಕೊಂಡವರ ಪೈಕಿ ಶೇಕಡಾ 98 ಮಂದಿ ಈಗಲೂ ಸಂಭ್ರಮದಿಂದ ಬದುಕುತ್ತಿದ್ದಾರೆ. ಇಸವಿ 2009ರಲ್ಲಿ, ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಹೃದಯದ ತೊಂದರೆ ಕಾಣಿಸಿಕೊಂಡು ಅದಕ್ಕೆ ಆಪರೇಷನ್ ನಡೆಯಿತಲ್ಲ; ಆ ಚಿಕಿತ್ಸೆಯ ನೇತೃತ್ವ ವಹಿಸಿಕೊಂಡಿದ್ದವರು ಇದೇ ರಮಾಕಾಂತ ಪಾಂಡಾ. ವೈದ್ಯಕೀಯ ಕ್ಷೇತ್ರದಲ್ಲಿ ಕೌಟುಂಬಿಕ ಹಿನ್ನೆಲೆ ಹಾಗೂ ಗಾಡ್‌ಫಾದರ್‌ಗಳ ಬೆಂಬಲ ಇಲ್ಲದಿದ್ದರೂ ಪ್ರಪಂಚದ ಶ್ರೇಷ್ಠ ಹೃದ್ರೋಗ ತಜ್ಞರಲ್ಲಿ ಒಬ್ಬರು ಎಂಬಂಥ ಲೆವೆಲ್‌ಗೆ ರಮಾಕಾಂತ ಪಾಂಡಾ ಬೆಳೆದರಲ್ಲ; ಅದು ಎಲ್ಲರಿಗೂ ಸ್ಫೂರ್ತಿದಾಯಕ ಅನ್ನುವಂಥ ಉದಾಹರಣೆ. ಬದುಕಲ್ಲಿ ಗೆಲ್ಲಬೇಕು, ಮಹತ್ಸಾಧನೆ ಮಾಡಬೇಕು ಎಂದು ಕನಸು ಕಾಣುವ ಎಲ್ಲರಿಗೂ ಮಾದರಿಯಾಗಿರುವ ರಮಾಕಾಂತ ಪಾಂಡಾ ಅವರ ಯಶೋಗಾಥೆಯನ್ನು ದೇಶದ ಎಲ್ಲ ಆಂಗ್ಲ ಪತ್ರಿಕೆಗಳೂ ಪೈಪೋಟಿಗೆ ಬಿದ್ದು ಪ್ರಕಟಿಸಿವೆ. ಆ ಬರಹಗಳ ಭಾವಾನುವಾದವನ್ನು ರಮಾಕಾಂತ ಪಾಂಡಾ ಅವರ ಮಾತುಗಳಲ್ಲೇ ವಿವರಿಸಲಾಗಿದೆ, ಓದಿಕೊಳ್ಳಿ.
----------
'ನಾನು ಹುಟ್ಟಿದ್ದು ಒರಿಸ್ಸಾದ ಒಂದು ಕುಗ್ರಾಮದಲ್ಲಿ. ನನ್ನ ತಾತ ಸ್ವಾತಂತ್ರ್ಯ ಹೋರಾಟಗಾರರು. ಅವರು ಒಂದು ಶಾಲೆಯ ಹೆಡ್‌ಮಾಸ್ಟರ್ ಕೂಡ ಆಗಿದ್ದರು. ಇದೆಲ್ಲಾ 60ರ ದಶಕದ ಮಾತು. ಆ ದಿನಗಳಲ್ಲಿ ನಮ್ಮ ಊರಿನಲ್ಲಿ ಶಾಲೆಯಿರಲಿಲ್ಲ. ಎರಡು ಮೈಲು ದೂರವಿದ್ದ ಶಾಲೆಗೆ ಮಕ್ಕಳನ್ನು ಕಳಿಸಲು ಹೆಚ್ಚಿನ ಜನರಿಗೆ ಆಸಕ್ತಿಯಿರಲಿಲ್ಲ. ಆದರೆ ನಮ್ಮ ಅಜ್ಜ, ವಿಪರೀತ ಶಿಸ್ತಿನ ಮನುಷ್ಯ. ಮಕ್ಕಳು ಬೆಳಗ್ಗೆ ಬೇಗನೆ ಎದ್ದೇಳಬೇಕು. ಪ್ರಾರ್ಥನೆಗೆ ಕೂರಬೇಕು. ಓದು-ಬರಹ ಕಲಿಯಬೇಕು ಎಂಬುದು ಅವರ ಖಡಕ್ ನಿಲುವು. ಶಾಲೆ ದೂರವಿದ್ದರೇನಂತೆ? ನಡೆದುಕೊಂಡು ಹೋಗಿ ಎಂದು ಅವರು ಆರ್ಡರ್ ಮಾಡಿದ್ದರು. ಅಜ್ಜನ ಕಣ್ಗಾವಲಿನಲ್ಲೇ ಏಳನೇ ತರಗತಿ ಮುಗಿಯಿತು. ನಾನು ಹೈಸ್ಕೂಲಿಗೆ ಕಾಲಿಡುವ ಮೊದಲೇ ಅಜ್ಜ ತೀರಿ ಹೋದರು. ನಂತರದಲ್ಲಿ ನನ್ನ ಶಿಕ್ಷಣದ ಜವಾಬ್ದಾರಿ ಅಮ್ಮನ ಹೆಗಲಿಗೆ ಬಿತ್ತು. ಅಜ್ಜನಿಗಿಂತ ಒಂದು ಕೈ ಹೆಚ್ಚು ಅನ್ನುವಂಥ ಶಿಸ್ತಿನ ಹೆಂಗಸು ನನ್ನ ತಾಯಿ.
     ಚಿಕ್ಕಂದಿನಿಂದಲೂ ತರಗತಿಗೆ ನಾನೇ ಲೀಡರ್. ಪ್ರತಿ ವರ್ಷವೂ ಕ್ಲಾಸ್‌ಗೆ ಫಸ್ಟ್ ಬರುತ್ತಿದ್ದವ ಕೂಡ ನಾನೇ. ಹೀಗಿದ್ದಾಗಲೇ ಕೆಲವು ಪುಂಡರ ಸಹವಾಸವಾಯಿತು. ಗಲ್ಲಿಗಳಲ್ಲಿ ಚಿಣ್ಣಿ-ದಾಂಡು ಆಡುವುದು ನನ್ನ ಕಸುಬಾಯಿತು. ಪುಂಡರ ಸಹವಾಸದಿಂದ, ಒಂದೆರಡಲ್ಲ, ಭರ್ತಿ ಐದು ದಿನ ಶಾಲೆಗೆ ಚಕ್ಕರ್ ಹೊಡೆದೆ. ಆರನೇ ದಿನ, ಅಮ್ಮನಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದೆ. ಮಗ ಹಾದಿ ತಪ್ಪುತ್ತಿದ್ದಾನೆ ಎಂದು ತಿಳಿದು ಅಮ್ಮ ಕಿಡಿಕಿಡಿಯಾದಳು. ಮನೆ ತಲುಪುತ್ತಿದ್ದಂತೆಯೇ- 'ಪುಂಡರ ಜತೆ ಸೇರ್ತೀಯಾ? ಸ್ಕೂಲ್‌ಗೆ ಚಕ್ಕರ್ ಹೊಡೀತೀಯ?' ಎಂದು ಪ್ರಶ್ನಿಸುತ್ತಾ ಬಾಸುಂಡೆ ಬರುವಂತೆ ಹೊಡೆದಳು. ನಂತರ, ಒಂದು ರೂಂನಲ್ಲಿ ಕೂಡಿ ಹಾಕಿ, ಎಂಟು ಗಂಟೆಯ ಕಾಲ ಇಲ್ಲಿಯೇ ಇರು. ನೀನು ಮಾಡಿರುವ ತಪ್ಪಿಗೆ ಇದೇ ಸರಿಯಾದ ಶಿಕ್ಷೆ ಅಂದಳು. ಅಷ್ಟೇ ಅಲ್ಲ, ಎಂಟು ಗಂಟೆಯ ಕಾಲ ನನಗೆ ಆಹಾರದ ಮಾತಿರಲಿ, ಕುಡಿಯಲು ನೀರನ್ನೂ ಕೊಡಲಿಲ್ಲ. ಜೀವನದಲ್ಲಿ ಮತ್ತೆಂದೂ ತಪ್ಪು ಮಾಡಬಾರದು ಎಂದು ನನಗೆ ನಾನೇ ಹೇಳಿಕೊಂಡದ್ದೇ ಆಗ.
ಮುಂದೆ 10ನೇ ತರಗತಿಯಲ್ಲಿದ್ದಾಗ ಮತ್ತೊಂದು ತಪ್ಪು ಮಾಡಿದೆ. ಬೋರ್ಡ್ ಎಕ್ಸಾಂ ಎಂಬ ಕಾರಣದಿಂದ ನನ್ನನ್ನು ಹಾಸ್ಟೆಲ್‌ಗೆ ಸೇರಿಸಿದ್ದರು. ನಮ್ಮ ಹಾಸ್ಟೆಲ್‌ನಿಂದ 18 ಕಿ.ಮೀ. ದೂರವಿದ್ದ ಸಿಟಿಯಲ್ಲಿ ಸಿನಿಮಾ ಪ್ರದರ್ಶನವಿತ್ತು. ಮೇಸ್ಟ್ರಿಗೆ ಗೊತ್ತಾಗದ ಹಾಗೆ ಸೈಕಲ್‌ನಲ್ಲಿ ಸೆಕೆಂಡ್ ಶೋಗೆ ಹೋಗಿ ಬರುವುದೆಂದು ನಾವು ಗೆಳೆಯರು ಮಾತಾಡಿಕೊಂಡೆವು. ನಾವೆಲ್ಲರೂ ಫಸ್ಟ್ ಕ್ಲಾಸ್ ವಿದ್ಯಾರ್ಥಿಗಳೇ ಆಗಿದ್ದುದರಿಂದ, ಬೈ ಛಾನ್ಸ್ ಸಿಕ್ಕಿಬಿದ್ದರೂ ಮೇಸ್ಟ್ರು ಶಿಕ್ಷಿಸುವುದಿಲ್ಲ ಎಂಬ ಭಂಡ ಧೈರ್ಯ ನಮ್ಮದಿತ್ತು. ಅಂದುಕೊಂಡ ದಿನ, ಮೇಸ್ಟ್ರ ಕಣ್ತಪ್ಪಿಸಿ ಎಲ್ಲರೂ ಸಿನಿಮಾಕ್ಕೆ ಹೋದೆವು. 12 ಗಂಟೆಯ ರಾತ್ರಿಯಲ್ಲಿ 18 ಕಿ.ಮಿ. ಸೈಕಲ್ ತುಳಿದು ವಾಪಸ್ ಬಂದೆವು. ಆಗಲೂ ನಮ್ಮನ್ನು ಯಾರೂ ಕೇಳಲಿಲ್ಲ. ಸದ್ಯ, ಬಚಾವ್ ಆದೆವು ಎಂದುಕೊಂಡು ಆರಾಮಾಗಿ ನಿದ್ರೆ ಹೋದೆವು. ಆದರೆ ಬೆಳಗ್ಗೆ ಶಾಲಾ ಆವರಣದಲ್ಲಿ ಹೆಡ್ ಮಾಸ್ಟರ್ ಎಲ್ಲರ ಮುಂದೆಯೂ ನಮಗೆ ಛೀಮಾರಿ ಹಾಕಿದರು. ಅಪರಾತ್ರಿಯಲ್ಲಿ ಕದ್ದು ಸಿನಿಮಾ ನೋಡಲು ಹೋಗಿದ್ದಕ್ಕೆ 3 ಗಂಟೆಗಳ ಕಾಲ ಉರಿಬಿಸಿಲಿನಲ್ಲಿ, ಒಂಟಿ ಕಾಲಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದರು. ಕ್ಲಾಸ್ ಲೀಡರ್, ರ್ಯಾಂಕ್ ಸ್ಟೂಡೆಂಟ್ ಎಂಬ ಕಾರಣಕ್ಕೆ ನನಗೆ ಯಾವುದೇ ರಿಯಾಯಿತಿ ಸಿಗಲಿಲ್ಲ. ಸಹಪಾಠಿಗಳ ಮುಂದೆ ಆದ ಅವಮಾನದಿಂದ ನಾನು ತತ್ತರಿಸಿ ಹೋದೆ. ಮುಂದೆ ಯಾವತ್ತೂ ತಪ್ಪು ಮಾಡಬಾರದು ಎಂದು ಎರಡನೇ ಬಾರಿಗೆ ಹೇಳಿಕೊಂಡೆ. ನಾನು ಮಾನಸಿಕವಾಗಿ ಪ್ರಬುದ್ಧನಾದದ್ದು ಈ ಅವಮಾನದ ನಂತರವೇ.
ಚಿಕ್ಕಂದಿನಿಂದಲೂ ಅಷ್ಟೆ: ಮುಂದೆ ಹೀಗೇ ಆಗಬೇಕು ಎಂದು ನಾನು ಕನಸು ಕಂಡವನಲ್ಲ. ನಾನು ಡಾಕ್ಟರಾಗಲು ಬಯಸಿದ್ದೂ ಆಕಸ್ಮಿಕವೇ. ಹೇಗೆಂದರೆ-ನನ್ನ ಬಂಧುಗಳೊಬ್ಬರು ಡಾಕ್ಟರ್ ಆಗಿದ್ದರು. ಕುಟುಂಬದಲ್ಲಿ ಅವರಿಗೆ ವಿಶೇಷ ಮರ್ಯಾದೆ ಸಿಗುತ್ತಿತ್ತು. ಮುಂದೆ ನಾನೂ ಒಬ್ಬ ಡಾಕ್ಟರ್ ಆಗಬೇಕು ಎಂದು ಕನಸು ಕಾಣಲು ಈ ಬಂಧುವೇ ಮೊದಲ ಪ್ರೇರಣೆ. 1967ರಲ್ಲಿ, ಅಂದರೆ ನಾನು 10ನೇ ತರಗತಿಯಲ್ಲಿದ್ದಾಗ, ಅಂದಿನ ಪ್ರತಿಷ್ಠಿತ ಪತ್ರಿಕೆಯಾದ ಲೈಫ್ ಮ್ಯಾಗಝಿನ್‌ನಲ್ಲಿ ಡಾ. ಡೆಂಟನ್ ಕಾಲಿ ಎಂಬುವರ ಸಂದರ್ಶನ ಪ್ರಕಟವಾಗಿತ್ತು. ಡಾ. ಕಾಲಿ, ಮೊಟ್ಟ ಮೊದಲ ಬಾರಿಗೆ ಹೃದಯದ ಕಸಿ ಮಾಡಿದ ಮಹಾನುಭಾವ. ಈ ಸಂದರ್ಶನವನ್ನು ನನ್ನ ಮುಂದಿಟ್ಟ ಬಂಧುಗಳು -ಮುಂದೆ ನೀನೂ ಇದೇ ಥರಾ ಹೆಸರು ಮಾಡಬೇಕು ಎಂದಿದ್ದರು. ಅವತ್ತೇ ರಾತ್ರಿ ನೋಟ್‌ಬುಕ್‌ನಲ್ಲಿ ಬರೆದುಕೊಂಡೆ; 'ಭವಿಷ್ಯದಲ್ಲಿ ನಾನೂ ಡಾಕ್ಟರ್ ಆಗಬೇಕು...
ಅವತ್ತಿನ ಸಂದರ್ಭದಲ್ಲಿ ನನಗೆ ಗೈಡ್ ಮಾಡುವವರೇ ಇರಲಿಲ್ಲ. ಆದರೂ ಡಾಕ್ಟರ್ ಆಗಬೇಕೆಂಬ ಸಂಕಲ್ಪದೊಂದಿಗೆ ಮುನ್ನುಗ್ಗಿದೆ. ಎಂಬಿಬಿಎಸ್ ಮುಗಿಸುವ ವೇಳೆಗೆ ನಡೆಯಬೇಕಿರುವ ಹಾದಿಯ ಬಗ್ಗೆ ಸ್ಪಷ್ಟತೆಯಿತ್ತು. ಆಗ, ವಿಶ್ವದ ನಂಬರ್ ಒನ್ ಹೃದಯ ಚಿಕಿತ್ಸಾ ಕೇಂದ್ರ ಎಂದು ಹೆಸರಾಗಿದ್ದ ಅಮೆರಿಕದ ಕ್ಲೀವ್ ಲ್ಯಾಂಡ್ ಕ್ಲಿನಿಕ್‌ನಲ್ಲಿ ತರಬೇತಿಗೆ ಹೋದವನು, ನಂತರದ ಎಂಟು ವರ್ಷ ಕಾಲ ಅದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ತಜ್ಞನಾಗಿ ಕೆಲಸ ಮಾಡಿದೆ. ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸಣ್ಣ ಮಕ್ಕಳೂ ಹೃದಯದ ಕಾಯಿಲೆಯಿಂದ ಬಳಲುತ್ತಿವೆ ಎಂಬುದನ್ನು ಓದಿದಾಗೆಲ್ಲ ಸಂಕಟವಾಗುತ್ತಿತ್ತು. 'ಅಮೆರಿಕದಲ್ಲಿ ಇರುವಂಥ ಸುಸಜ್ಜಿತ ಆಸ್ಪತ್ರೆಯನ್ನು ಭಾರತದಲ್ಲೂ ಕಟ್ಟಬೇಕು. ತಜ್ಞ ವೈದ್ಯರ ತಂಡದೊಂದಿಗೆ ವರ್ಷವಿಡೀ ಬ್ಯುಸಿಯಾಗಿರಬೇಕು. ಮುಖ್ಯವಾಗಿ ಮಕ್ಕಳಿಗೆ ಹಾಗೂ ಕಡುಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು...' ಇಂಥವೇ ಕನಸುಗಳನ್ನು ಎದೆಯಲ್ಲಿ ತುಂಬಿಕೊಂಡೇ ರಜೆಯ ನೆಪದಲ್ಲಿ ಭಾರತಕ್ಕೆ ಬರುತ್ತಿದ್ದೆ. ಆ ಸಂದರ್ಭದಲ್ಲಿ ಭಾರತದ ವಿವಿಧ ನಗರಗಳಲ್ಲಿರುವ ಹೃದ್ರೋಗ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೆ. ಅಲ್ಲಿನ ಹೆಸರಾಂತ ವೈದ್ಯರು ಹಾಗೂ ಟೆಕ್ನೀಶಿಯನ್‌ಗಳನ್ನು ಸಂಪರ್ಕಿಸುತ್ತಿದ್ದೆ. ನನ್ನ ಕನಸುಗಳನ್ನು ಹಂಚಿಕೊಳ್ಳುತ್ತಿದ್ದೆ. ಮುಂದೆ ನಾನೇ ಒಂದು ಆಸ್ಪತ್ರೆ ಕಟ್ಟಿಸಬೇಕು ಅಂತಿದ್ದೀನಿ. ನೀವೆಲ್ಲ ನನ್ನೊಂದಿಗೆ ಕೆಲಸ ಮಾಡಲು ಬರ್ತೀರಾ ಎಂದು ಪ್ರಶ್ನಿಸುತ್ತಿದ್ದೆ. ಹೀಗೇ ಎಂಟು ವರ್ಷಗಳ ಕಾಲ ಕನಸು ಕಂಡಿದ್ದರ ಪರಿಣಾಮವೇ ಮುಂಬಯಿಯಲ್ಲಿರುವ ಏಷಿಯನ್ ಹಾರ್ಟ್ ಇನ್ಸ್‌ಟಿಟ್ಯೂಟ್‌ನ ನಿರ್ಮಾಣ.
ನಿಜ ಹೇಳಬೇಕೆಂದರೆ, ಮುಂಬಯಿಯಲ್ಲಿ ಆಸ್ಪತ್ರೆ ಕಟ್ಟಿಸಬೇಕು ಎಂಬ ಯೋಚನೆಯೇ ನನಗಿರಲಿಲ್ಲ. ದೆಹಲಿ ಅಥವಾ ಬೆಂಗಳೂರು ನನ್ನ ಆಯ್ಕೆಯಾಗಿದ್ದವು. ಆದರೆ, ಈ ಎರಡೂ ನಗರಗಳಲ್ಲಿ ನಾನು ಬಯಸಿದ ಕೆಲವು ಮೂಲಭೂತ ಸೌಲಭ್ಯಗಳು ಸಿಗಲಿಲ್ಲ. ಹಾಗಾಗಿ, ಮುಂಬಯಿಗೆ ಎದ್ದು ಬಂದೆ. ಈಗ ನನ್ನ ಕನಸು ನನಸಾಗಿದೆ. ಏಷಿಯನ್ ಹಾರ್ಟ್ ಇನ್ಸ್‌ಟಿಟ್ಯೂಟ್ ಆರಂಭವಾದದ್ದು 2001ರಲ್ಲಿ. ಅಂದಿನಿಂದ ಇಂದಿನರೆಗೆ 18000ಕ್ಕೂ ಹೆಚ್ಚು ಮಂದಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆದಿದೆ. ಪ್ರಪಂಚದ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ನಮ್ಮ ಚಿಕಿತ್ಸಾ ಕೇಂದ್ರದ ಪಾಲಾಗಿದೆ. ನಮ್ಮಲ್ಲಿ ಚಿಕಿತ್ಸೆ ಪಡೆದವರ ಪೈಕಿ ಶೇ. 98 ಮಂದಿ ಬದುಕಿದ್ದಾರೆ. ಒಂದು ಆಪರೇಷನ್ ಯಶಸ್ವಿಯಾದ ಸಂದರ್ಭದಲ್ಲೆಲ್ಲಾ, ಒಂದಿಡೀ ಕುಟುಂಬದ ಸಂತೋಷ ಹೆಚ್ಚಿಸಿದ ಹೆಮ್ಮೆ ನನ್ನನ್ನು ಆವರಿಸಿಕೊಂಡಿದೆ. ಮಕ್ಕಳಿಗೆ, ಬಡವರಿಗೆ ಹಾಗೂ ವೃದ್ಧರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕೆಂಬ ಆಸೆಯೂ ಕೈಗೂಡಿದೆ. ನಮ್ಮಲ್ಲಿ ಚಿಕಿತ್ಸೆ ಪಡೆದ ಹಲವರು, ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ-'ಡಾಕ್ಟ್ರೇ, ಈ ಹಣವನ್ನು ಮಕ್ಕಳ ಚಿಕಿತ್ಸೆಗೆ ಬಳಸಿ ಎಂದಿದ್ದಾರೆ. ನನ್ನ ಯಶಸ್ಸು ಕಂಡು ಖುಷಿಯಾಗಿರುವ ನಮ್ಮ ತಂದೆ, ಹಣ-ಹೆಸರು ಎರಡನ್ನೂ ಸಂಪಾದಿಸಿದ್ದೀಯ. ಸತ್ತ ಮೇಲೆ ಯಾರೂ ಏನನ್ನೂ ಕೊಂಡೊಯ್ಯಲು ಸಾಧ್ಯವಿಲ್ಲ ತಾನೆ? ಹಾಗಾಗಿ ಮುಂಬಯಿಯಲ್ಲಿ ಕಟ್ಟಿಸಿರುವಂಥ ಆಸ್ಪತ್ರೆಯನ್ನು ಒರಿಸ್ಸಾದಲ್ಲೂ ಕಟ್ಟಿಸು. ಆ ಮೂಲಕ ಹುಟ್ಟೂರಿನ ಋಣ ತೀರಿಸು ಅಂದಿದ್ದಾರೆ. ಅದಕ್ಕೂ ಒಪ್ಪಿಕೊಂಡಿದ್ದೇನೆ. ಅಂದಹಾಗೆ, ಈ ಯಶಸ್ಸು ಹಾಗೂ ಹೆಸರು ಸುಮ್ಮನೆ ಬರಲಿಲ್ಲ. ಒಂದೊಂದು ಸಂದರ್ಭದಲ್ಲಿ ದಿನಕ್ಕೆ 22 ಗಂಟೆ ಕಾಲ ದುಡಿದದ್ದೂ ಇದೆ. ಒಂದೊಂದು ಆಪರೇಷನ್ ಮಾಡುವಾಗಲೂ ಆ ಆಪರೇಷನ್ ಸಕ್ಸಸ್ ಆದ ನಂತರ ಪೇಶೆಂಟ್ ತೀರಿ ಹೋದ್ರೆ ಎಂಬ ಆತಂಕ ಕೈ ಜಗ್ಗಿದ್ದಿದೆ. ಅಂಥ ಸಂಧರ್ಭದಲೆಲ್ಲ ಭಂಡ ಧೈರ್ಯ ಹಾಗೂ ಪ್ರಚಂಡ ವಿಶ್ವಾಸದೊಂದಿಗೇ ಕೆಲಸ ಮುಗಿಸಿದ್ದೇನೆ. ಪ್ರತಿ ಬಾರಿಯೂ ಗೆಲುವು ಸಾಧಿಸಿದ್ದೇನೆ ಎಂದು ಹೇಳಲು ನನಗೆ ಹೆಮ್ಮೆ ಮತ್ತು ಖುಷಿ. ಈಗಿನ ಯಶಸ್ಸಿಗೆ ಅಮ್ಮ ಹಾಗೂ ಹೈಸ್ಕೂಲಿನ ಮೇಸ್ಟ್ರು ಕಲಿಸಿದ ಶಿಸ್ತು ಹಾಗೂ ಸೇವೆಯ ಪಾಠವೇ ಕಾರಣ' ಎಂಬ ಮಾತಿನೊಂದಿಗೆ ಪಾಂಡಾ ಅವರ ಯಶೋಗಾಥೆಯ ವಿವರ ಮುಗಿಯುತ್ತದೆ.
ಇಲ್ಲಿ, ರಮಾಕಾಂತ ಪಾಂಡಾ ಅವರ ಚಿಕಿತ್ಸೆಯ ವೈಶಿಷ್ಟ್ಯದ ಬಗ್ಗೆ ನಾಲ್ಕು ಮಾತುಗಳನ್ನು ಹೇಳಲೇಬೇಕು. ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಆಫ್ ಪಂಪ್ ಬೈಪಾಸ್ ಸರ್ಜರಿಯನ್ನು ಆರಂಭಿಸಿದವರೇ ಡಾ. ಪಾಂಡಾ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಬೀಟಿಂಗ್ ಹಾರ್ಟ್ ಸರ್ಜರಿ ಎಂದೂ ಕರೆಯುತ್ತಾರೆ. ಅಂದರೆ ಹೃದಯದ ಬಡಿತ ನಡೆವ ಸಂದರ್ಭದಲ್ಲಿಯೇ ಆಪರೇಷನ್ ಮಾಡುವುದು. ಇದರಿಂದ ರೋಗಿಗೆ ಆಗುವ ಗಾಯದ ಪ್ರಮಾಣ ಕಡಿಮೆ. ಚಿಕಿತ್ಸಾ ವೆಚ್ಚವೂ ಕಡಿಮೆ. ಇದರ ಜೊತೆಗೆ, ರೋಗಿಗಳು ಐಸಿಯುನಲ್ಲಿ ಇಂಥ ಸಂದರ್ಭದಲ್ಲೂ ಅವರೊಂದಿಗೆ ಬಂಧುಗಳೆಲ್ಲಾ ಫೋನ್ ಮೂಲಕ ಮಾತಾಡುವಂಥ ಅಪರೂಪದ ಸೌಲಭ್ಯವೂ ಪಾಂಡಾ ಅವರ ಏಷಿಯನ್ ಹಾರ್ಟ್ ಕ್ಲಿನಿಕ್‌ನಲ್ಲಿದೆ. ಪಾಂಡಾರ ಆಸ್ಪತ್ರೆಗೆ ಹೋದ ರೋಗಿಗಳು ಸಾವನ್ನು ಗೆದ್ದು ಬರುವುದು ಮಾಮೂಲು ಎಂಬ ಮಾತು ಮುಂಬಯಿಯಲ್ಲಿ ಎಲ್ಲರ ಮಾತಾಗಿದೆ.ಈಗಲೂ,  ಚಿಕಿತ್ಸೆಯ ನೆಪದಲ್ಲಿ ನೂರಾರು ಮಂದಿ ಪಾಂಡಾರ ಮುಂದೆ ನಿಲ್ಲುತ್ತಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಾ ಆಸ್ಪತ್ರೆ ಹೊಕ್ಕವರು, ಬೆಳದಿಂಗಳ ನಗೆಯೊಂದಿಗೆ ಊರಿಗೆ ಮರಳುತ್ತಿದ್ದಾರೆ. ಪರಿಣಾಮವಾಗಿ, 18000ಕ್ಕೂ ಹೆಚ್ಚು ಆಪರೇಷನ್ ಮಾಡಿ ಯಶಸ್ವಿಯಾದ ವೈದ್ಯ ಎಂಬ ಹೆಮ್ಮೆಯ ಗರಿ, ಪಾಂಡಾ ಅವರ ಮುಡಿಗೇರಿದೆ.
ಇಷ್ಟಾದರೂ ಡಾ. ಪಾಂಡಾ ಬದಲಾಗಿಲ್ಲ. ಈಗಲೂ ಅವರು ಮಧ್ಯಮ ವರ್ಗದವರಂತೆಯೇ ಬದುಕುತ್ತಿದ್ದಾರೆ. ಚಿಕಿತ್ಸೆ ನೀಡುವುದು ನನ್ನ ಕರ್ತವ್ಯ. ಅದು ನನ್ನ ಧರ್ಮ. ಚಿಕಿತ್ಸೆಗೆ ಬರುವವರೆಲ್ಲಾ ನನ್ನ ಅಂತರಂಗದ ಬಂಧುಗಳು. ಅವರಿಗೆ ಚಿಕಿತ್ಸೆ ನೀಡಿದ್ದಕ್ಕೆ ನಾನಾದರೂ ಏಕೆ ಬೀಗಬೇಕು ಎಂದು ಮರುಪ್ರಶ್ನೆ ಹಾಕುತ್ತಾರೆ.
ಸೇವೆಯೇ ಜೀವನ ಎಂದು ನಂಬಿರುವ ರಮಾಕಾಂತ ಪಾಂಡಾ ಅವರಂಥ ವೈದ್ಯರು ಇರುವ ಕಾಲದಲ್ಲಿಯೇ ನಾವೂ ಇದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡೋಣ. ಪಾಂಡಾ ಅವರಂಥ ವೈದ್ಯರ ಸಂಖ್ಯೆ ಸಾವಿರವಾಗಲಿ ಎಂದು ಪ್ರಾರ್ಥಿಸೋಣ.


- ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಟ್ಟುಹೋದ ಲಾರಿಯಂತಿರುವ ಸರ್ಕಾರ ನಡೆಸಲು ಆಗದೆ ಸಿದ್ದರಾಮಯ್ಯ ಸೈಲೆಂಟ್ ಆಗಿ ರಾಜೀನಾಮೆ ಕೊಟ್ಟಿದ್ದಾರೆ!

ನಾನೂ ಮಂತ್ರಿಯಾಗುತ್ತೇನೆ, ರಾಹುಲ್ ಗಾಂಧಿ ಮಾತು ಕೊಟ್ಟಿದ್ದಾರೆ: ಯತೀಂದ್ರ ಸಿದ್ದರಾಮಯ್ಯ

IPL 2026: 2ನೇ ಬಾರಿ ಚಾಂಪಿಯನ್ ಆದ ಬೆನ್ನಲ್ಲೇ RCBಗೆ ಬಿಗ್ ಶಾಕ್; ಸ್ಫೋಟಕ ಬ್ಯಾಟರ್​​ಗೆ ನಿಷೇಧದ ಶಿಕ್ಷೆ!

ಜೂನ್ 6ರಂದು ಭಾರತಕ್ಕೆ CJP ಸಂಸ್ಥಾಪಕ ದೀಪ್ಕೆ: ಶಿಕ್ಷಣ ಸಚಿವರ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಯೋಜನೆ!

ಬಿಜೆಪಿ ತೊರೆಯುತ್ತಾರೆ ಎಂಬ ವರದಿಗಳ ಬೆನ್ನಲ್ಲೇ ದೆಹಲಿಗೆ ಹಾರಿದ ಅಣ್ಣಾಮಲೈ; ಕುತೂಹಲ ಮೂಡಿಸಿದ ಸಿಂಗಂ ನಡೆ

SCROLL FOR NEXT