ಕ್ಯಾನ್ಸರ್ ಅಥವಾ ಅರ್ಬುದ ರೋಗ ಎಂಬುದು ಒಬ್ಬರಿಂದೊಬ್ಬರಿಗೆ ಹರಡುವಂತಹದ್ದಲ್ಲ. ನಮ್ಮ ಹಿರಿಯರ ಬಳುವಳಿಯಾಗಿ ಜೀನ್ ಗಳ ಮುಖಾಂತರ ಬರುತ್ತದೆ ಎಂದು ಒಮ್ಮೊಮ್ಮೆ ಕೆಲ ವಿಜ್ಞಾನಿಗಳಿಗೆ ಅನಿಸಿದೆಯಾದರೂ ಅಖೈರಾಗಿ ಇದು ಇನ್ನೂ ಸಾಬೀತಾಗಿಲ್ಲ. ಇತ್ತೀಚಿನ ವೈದ್ಯಕೀಯ ರಂಗದ ಬೆಳವಣಿಗೆಯಿಂದಾಗಿ ಮೊದಲ ಹಂತದಲ್ಲಿ ಪತ್ತೆಯಾದ ಕ್ಯಾನ್ಸರ್ ಅನ್ನು ಗುಣಪಡಿಸಿರುವ ಸಾಕಷ್ಟು ಉದಾಹರಣೆಗಳಿವೆ. ಮೊದಲ ಹಂತ ಮತ್ತು ಅದಕ್ಕಿಂತ ಮುಂಚೆ ಕ್ಯಾನ್ಸರ್ ಅನ್ನು ಪತ್ತೆ ಮಾಡುವುದು ರೋಗಿಯ ಪ್ರಾಣ ಉಳಿಸಲು ಅತ್ಯಂತ ಅವಶ್ಯಕ!
ನಮ್ಮ ದೇಹದ ಚರ್ಯೆಯನ್ನು, ಚಹರೆಯನ್ನು, ಹಿರಿಯರಿಂದ ಬರುವ ರೂಪಲಕ್ಷಣಗಳನ್ನು ಕಾಪಿಡುವುದು ಮತ್ತು ಮುಂದಿನ ಪೀಳಿಗೆಗೆ ಒದಗಿಸುವುದು ಡಿ.ಎನ್.ಎ ಎಂಬುದು ಎಲ್ಲರಿಗೂ ಗೊತ್ತು! ನಮ್ಮ ದೇಹದ ಎಲ್ಲ ಗುಣಲಕ್ಷಣಗಳು ನಮ್ಮ ದೇಹದ ಡಿ ಎನ್ ಎ ಮೇಲೆಯೇ ಅವಲಂಬಿತವಾಗಿರುತ್ತವೆ. ನಮ್ಮ ದೇಹದಲ್ಲಿ ಡಿ ಎನ್ ಎ ಅಲ್ಲದೇ ಆರ್.ಎನ್.ಎ ಎಂಬ ಇನ್ನೊಂದು ಘಟಕವಿರುತ್ತದೆ. ಇದು ಡಿ.ಎನ್.ಎ ನ ಒಂದು ಅಂಶ. ಶಿವನ ಅಂಶದಿಂದ ಉದ್ಭವಿಸಿದ ವೀರಭದ್ರನ ಹಾಗೆ! ಆರ್ ಎನ್ ಎ ಎಂಬುದು ಡಿ ಎನ್ ಎ ನ ಸಂದೇಶವಾಹಕ. ಡಿ.ಎನ.ಎ ಗೆ ತಕ್ಕ ಹಾಗೆ ದೇಹದಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯಬೇಕು, ಹೇಗೆ ನಡೆಯಬೇಕು, ಯಾವ ಅಂಗದ ಬೆಳವಣಿಗೆಗೆ ಎಷ್ಟು ಮಹತ್ವ ಕೊಡಬೇಕು. ಎಷ್ಟು ರಕ್ತ ಉತ್ಪಾದನೆ ಮಾಡಬೇಕು,ಬೆಳವಣಿಗೆಯ ಸಮಯದಲ್ಲಿ ಮೂಳೆಯ ಬೆಳವಣಿಗೆ ಹೇಗಿರಬೇಕು, ತಲೆಬುರುಡೆಯ ಶೇಪ್ ಹೇಗಿರಬೇಕು ಇತ್ಯಾದಿಗಳ ನಿಗಾವಹಿಸುವುದು ಆರ್.ಎನ್.ಎ ನ ಕೆಲಸ. ಈ ಆರ್.ಎನ್.ಎ ನ ಭಾಗ ಮೈಕ್ರೋ ಆರ್.ಎನ್.ಎ! ಮೈಕ್ರೋ ಆರ್.ಎನ್.ಎ ಮಾಂಸಖಂಡಗಳ ಬೆಳವಣಿಗೆ, ಅಂಗ ಮತ್ತು ಅಂಗಾಂಶಗಳ ಬೆಳವಣಿಗೆಯ ಕಡೆಗೆ ಗಮನ ಕೊಡುತ್ತದೆ. (ಇದಕ್ಕೆ ಇನ್ನು ಮುಂದೆ mRNA ಎಂದು ಕರೆಯೋಣ)
ಕ್ಯಾನ್ಸರ್ ಎಂದರೆ ನಮ್ಮ ದೇಹದ ಅಂಗಾಂಶಗಳಲ್ಲಿ ಜೀವಕೋಶಗಳ ಅಸಹಜವಾದ ಬೆಳವಣಿಗೆ. ಈ ಜೀವಕೋಶಗಳು ಹಾನಿಕಾರಕವಾಗಿದ್ದು ಬೇರೆ ಅಂಗಗಳಿಗೂ ವ್ಯಾಪಿಸುವ ಸಾಧ್ಯತೆಗಳಿರುತ್ತವೆ. ಅಂಗಾಂಶದ ಬೆಳವಣಿಗೆಯ ಜವಾಬ್ದಾರಿ ಮೈಕ್ರೋ mRNA ಯದ್ದು ಎಂದು ಈಗಾಗಲೇ ಹೇಳಿದ್ದೇನೆ. ಈ mRNA ಅಂಗಗಳ ಸಹಜ ಬೆಳವಣಿಗೆಯ ಸಮಯದಲ್ಲಿ ಸಹಜವಾಗಿ ವರ್ತಿಸುತ್ತದೆ. ಅಕಸ್ಮಾತ್ ಈ mRNA ನ ವರ್ತನೆಯಲ್ಲಿ ಏನಾದರೂ ಅಸಹಜವಾದುದು ಅಥವಾ ಅನುಮಾನಾಸ್ಪದವಾದುದು ಕಂಡುಬಂದರೆ ಅದು ಕ್ಯಾನ್ಸರ್ ಆಗಿರುವ ಸಾಧ್ಯತೆಯೇ ಹೆಚ್ಚು!
ಈ mRNA ಗಳ ಅಸಹಜ ವರ್ತನೆಯನ್ನು ಕಂಡುಹಿಡಿಯಲು ಇಂಡಿಯಾನ ವಿವಿಯ ಭಾರತೀಯ ಸಂಜಾತ ವಿಜ್ಞಾನಿ ರಾಜೇಶ್ ಸರದಾರ್ ಒಂದು ಸೆನ್ಸರ್ ಅನ್ನು ಅವಿಷ್ಕರಿಸಿದ್ದಾರೆ. ನ್ಯಾನೋಟೆಕ್ನಾಲಜಿಯ ಸಹಾಯದಿಂದ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಬಂಗಾರ ಮತ್ತು ಕಾರ್ಬನ್ ನ್ಯಾನೋಟಟ್ಯೂಬ್ ನ ಬೆರಕೆಯ ಈ ಸೆನ್ಸರ್ ನಮ್ಮ ರಕ್ತದ ಕಣಗಳ ನಡುವೆ ನುಸುಳಿಹೊಗಬಲ್ಲಷ್ಟು ಸಣ್ಣದು! ವಜ್ರದ ಆಕಾರದ ಈ ಸೂಕ್ಷ್ಮ ಸೆನ್ಸರ್ ರಕ್ತನಾಳಗಳ ಹೆದ್ದಾರಿಯಲ್ಲಿ ರಕ್ತದ ಟ್ರಾಫಿಕನ್ ಗುಂಟ ಸಾಗಿ ತಾನು ಪರಿಶೀಲಿಸಬೇಕಾದ ಅಂಗವನ್ನು ತಲುಪುತ್ತದೆ. ಆ ಅಂಗದ ನಡುವೆ mRNA ಅನ್ನು ಹುಡುಕಿ ಅದರ ಚಟುವಟಿಕೆಗಳನ್ನು ದಾಖಲು ಮಾಡಿಕೊಳ್ಳುತ್ತದೆ. ಹೊರಬಂದ ನಂತರ ಸೆನ್ಸರ್ ದಾಖಲು ಮಾಡಿಕೊಂಡ ಚಟುವಟಿಕೆಗಳನ್ನು ಅಭ್ಯಾಸ ಮಾಡಿ ಕ್ಯಾನ್ಸರ್ ಸಂಬಂಧಿತ ಚಟುವಟಿಕೆಗಳ ಬಗ್ಗೆ ಪತ್ತೆ ಹಚ್ಚಲಾಗುತ್ತದೆ.
ಇಷ್ಟು ದಿನ ಕ್ಯಾನ್ಸರ್ ಆಕ್ರಮಿಸಿ ಮೊದಲ ಹಂತ ತಲುಪಿದ ಮೇಲೆ ರೋಗದ ಪತ್ತೆಯಾಗುತ್ತಿತ್ತು. ಈಗ ಈ ಸೆನ್ಸರ್ ನ ಸಹಾಯದಿಂದ ಆಕ್ರಮಿಸಿಕೊಳ್ಳುವ ಮೊದಲೇ ಕಂಡುಹಿಡಿಯಬಹುದಾಗಿದೆ. ಕ್ಯಾನ್ಸರ್ ಸಂಶೋಧನೆಯಲ್ಲಿ ಈ ಅವಿಷ್ಕಾರವು ಒಂದು ಹೊಸ ಮೈಲಿಗಲ್ಲು ಎಂದು ವಿಜ್ಞಾನಿಗಳನೇಕರು ಪ್ರಶಂಸಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos