ಅಂಕಣಗಳು

ಮನೆಯಲ್ಲೊಂದು ಟಿವಿ ಇರಲಿ- ಮಿತವಾದ ಬಳಕೆ ಇರಲಿ..

Sindhu
ಇತ್ತೀಚೆಗೆ ಒಂದು ಮಸ್ಸಂಜೆ ಹೀಗೇ ಪರಿಚಯದವರೊಬ್ಬರ ಮನೆಗೆ ಹೋಗಿದ್ದೆವು. ಆಕೆ ವಿದ್ಯಾವಂತೆ, ಎರಡು ಮುದ್ದಾದ ಮಕ್ಕಳ ತಾಯಿ. ಹರಟುತ್ತಾ ಕೂತಾಗ ಅವರ ಹಿರಿಮಗ ತನ್ನ ತಾಯಿಗೆ ಅದೇನೋ ಕಣ್ಸನ್ನೆ ಮಾಡುತ್ತಿದ್ದ. ವಿಚಾರಿಸಿದಾಗ  ಅವನು ವಿಡಿಯೋ ಗೇಮ್ ಆಡಲು ತಾಯಿಯ ಅನುಮತಿಗೆ ಅಂಗಲಾಚುತ್ತಿದ್ದ. ತಾಯಿ ಅವನಿಗೆ ಉತ್ತರಿಸದೆ ನಮ್ಮೊಡನೆ ಹರಟೆ ಮುಂದುವರೆಸಿದರು. ಅವನು ಮತ್ತೆ ಯಾರದೋ ಮನೆಗೆ ಟಿವಿ ನೋಡಲು ಹೋಗುತ್ತೇನೆ ಎಂದು ಅವಲತ್ತುಕೊಂಡ. ಕೊನೆಗೂ ಅವನಿಗೆ ವಿಡಿಯೋ ಗೇಮ್ ಆಡಲು ಅನುಮತಿ ಸಿಕ್ಕಿತು.
 ಇತ್ತ ನಮ್ಮ ಮಾತು ಮುಂದುವರಿಯಿತು. ಮಾತಲ್ಲಿ ಆಕೆ ನಾವು ನಮ್ಮ ಮನೆಗೆ ಟಿವಿ ತಗೊಂಡಿಲ್ಲ. ತಗೊಂಡರೆ ಇಡೀದಿನ ಟಿವಿ ಮುಂದೆ ಕೂತಿರ್ತವೆ. ಈಗ ಅದಿಲ್ಲದ ಕಾರಣ ವಿಡಿಯೋಗೇಮ್ ಅಂದರು! ಮನೆಯಿಂದ ನಾವೆಲ್ಲ ಊರಿಗೆ ಹೋದಾಗ ರಿಮೋಟ್ ಗಾಗಿ ತಂದೆ ಮಕ್ಕಳಲ್ಲಿ ಪೈಪೋಟಿ ಏರ್ಪಟ್ಟಿರುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಆ ಕ್ಷಣಕ್ಕೆ ನನಗೆ ವಿಚಿತ್ರ ಎನಿಸಿದರೂ ಗೋಡೆಯ ಮೇಲೆ ಬಣ್ಣ ಬಣ್ಣದ ಪೆನ್ಸಿಲ್ ನಿಂದ ಮತ್ತು ಆಕ್ರಿಲಿಕ್ ಗಳಿಂದ ಗೀಚಿರುವುದು ಮತ್ತು ಕಾಗದದ ಮೇಲೆ ಮೂಡಿಸಿದ್ದ ಚಿತ್ರಗಳನ್ನು ಫ್ರೇಮ್ ಹಾಕಿಸಿಟ್ಟಿರುವುದು ಕಂಡು ಪ್ರಸನ್ನಳಾಗಿ ನಿಮ್ಮ ಮಕ್ಕಳು ಮಾಡಿದ್ದಾ ಎಂದು ಪ್ರಶ್ನಿಸಿದೆ. ಆಗ ಅವರು ಮಕ್ಕಳು ಹಾಳೆಯ ಮೇಲೆ ಬಿಡಿಸಿದ ವಿವಿಧ ಬಣ್ಣ ಬಣ್ಣದ ಚಿತ್ರಗಳನ್ನು ತೋರಿಸಿದರು. ಮತ್ತೆ ಐನೂರು ರೂಪಾಯಿ ಮೌಲ್ಯದ ಕ್ಯಾನ್ವಾಸ್ ಅಲ್ಬಮ್ ನಲ್ಲಿ ಮಕ್ಕಳ ಬರೆದ ವಿವಿಧ ಚಿತ್ತಾರಗಳನ್ನು ತೋರಿಸಿದರು. ಟಿವಿ ಇಲ್ಲದ ಕಾರಣ ಇದೇ ಕೆಲಸವನ್ನು ಇಡೀ ದಿನ ಮಾಡುತ್ತಾರೆ ಎಂದರು. ಅವರ ಸರ್ವತೋಮುಖ ಬೆಳವಣಿಗೆಗಾಗಿ ತ್ಯಾಗ ಮಾಡಲೇಬೇಕಲ್ಲ ಎಂದರು. ಇದು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಎಬ್ಬಿಸಿತು. ಇದು ತ್ಯಾಗವೇ? ಯಾರಿಗಾಗಿ? ಯಾಕಾಗಿ? ನಾವು ಚಿಕ್ಕವರಿದ್ದಾಗ ಟಿವಿ ಇತ್ತು, ಡಿಶ್ ಇತ್ತು, ನನ್ನ ತಂದೆ ತಾಯಿಗಳು ಹೀಗೆ ಯೋಚನೆ ಮಾಡಿ "ತ್ಯಾಗ"  ಮಾಡಿದ್ದರೆ ನನ್ನ ಬೆಳವಣಿಗೆಯಲ್ಲು ಏನಾದರೂ ಗಮನಾರ್ಹ ವ್ಯತ್ಯಾಸ ಇರುತ್ತಿತ್ತಾ? ನಮ್ಮ ತಂದೆತಾಯಿಯರು ಹೇಗೆ ಯೋಚನೆ ಮಾಡಿದ್ದರೆ ನಾವು ಅತ್ಯಂತ ಕಾತರದಿಂದ ಭಾನುವಾರಕ್ಕಾಗಿ ಕಾಯುತ್ತಿದ್ದ ಅಂಕಲ್ ಸ್ಕ್ರೂಜ್ , ಬೋರ್ನ್ ವಿಟಾ ಕ್ವಿಜ್ ಕಾಂಟೆಸ್ಟ್, ಸುರಭಿಯಂತಹ ಅದೆಷ್ಟೋ  ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತಿದೆ. ಭಾರತ ಪಾಕಿಸ್ಥಾನ ಕ್ರಿಕೆಟ್ ಪಂದ್ಯವನ್ನು ಮರೆಯಲು ಹೇಗೆ ಸಾಧ್ಯ? ಮರುದಿನ ಪಂದ್ಯದ ರೋಮಾಂಚಕ ಘಟ್ಟಗಳನ್ನು ಗೆಳೆಯ ಗೆಳತಿಯರೊಡನೆ ಚರ್ಚಿಸಲು ಇನ್ನೂ ಮಜಾ! ಮತ್ತೆ ಶಾಲೆಯಿಂದ ಬಂದೊಡನೆ ಘೋಸ್ಟ್ ಬಸ್ಟರ್ಸ್, ಸ್ಮಾಲ್ ವಂಡರ್, ಬಿವಿಚ್ಡ್ ಕಾರ್ಯಕ್ರಮಗಳನ್ನು ಒಂದರ್ಧ ಘಂಟೆ ನೋಡಿ ಮತ್ತೆ ಆಟ ಪಾಠಗಳು! ತ್ಯಾಗದ ಹೆಸರಲ್ಲಿ ನನ್ನ ಬಾಲ್ಯದ ಕೊಲೆ ಮಾಡದ ನನ್ನ ತಂದೆಯವರಿಗೆ ಧನ್ಯವಾದಗಳನ್ನು ಮನದಲ್ಲೇ ಸಮರ್ಪಿಸುತ್ತೇನೆ! ನನ್ನನ್ನು ಅಸಾಮಾನ್ಯಳಾಗಿಸಲು ಯಾವುದನ್ನೂ ನನ್ನ ಮೇಲೆ ಹೇರಲಿಲ್ಲ. ನನಗೆ ಸಿಗಬೇಕಾದ ಸೌಕರ್ಯಗಳೆಲ್ಲ ಸಿಕ್ಕಿದವು. ನೆನ್ನೆ ನಡೆದ ಕ್ರಿಕೆಟ್ ಪಂದ್ಯ ಕುರಿತು ಗೆಳಯರೊಡನೆ ಚರ್ಚಿಸುವುದು ಸಾಧ್ಯವಾಯಿತು. ನಮ್ಮ ಮನೆಯಲ್ಲಿ ಟಿವಿಯಿಲ್ಲ ಎಂಬ ಕೀಳರಿಮೆ ನಮ್ಮನ್ನು ಕಾಡಲಿಲ್ಲ. ಬೇರೆಯವರ ಮನೆಗೆ ಹೋಗಿ ನೋಡುವ ಪ್ರಮೇಯ ಬರಲಿಲ್ಲ. ಅಷ್ಟೇ ಅಲ್ಲ ಡಿಸ್ಕವರಿ ನ್ಯಾಶನಲ್ ಜಿಯೋಗ್ರಫಿ ಚಾನೆಲ್ ಗಳ ಮೂಲಕ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡೆವು. ಟಿವಿ ಎಂಬುದು ನಮ್ಮ ಓದಿಗೆ ಪೂರಕವೇ ಆಯಿತು! 
 ಮನೆಯಲ್ಲಿ ಟಿವಿ ಇರಬೇಕು, ಮಕ್ಕಳಿಗೆ ಅದನ್ನು ನೋಡಲು ಬಿಡಬೇಕು. ಆದರೆ ಯಾವುದನ್ನು ನೋಡಬೇಕು ಎಂಬುದರ ವಿವೇಚನೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ವಿವೇಚನೆ ಬೆಳೆಸುವುದರಿಂದ ಮಕ್ಕಳಲ್ಲಿ ಸಂಯಮ ಬೆಳೆಯುತ್ತದೆ. ಇದೇ ಸಂಯಮ ಓದಿನಲ್ಲೂ ಬೆಳೆಯುತ್ತದೆ. ಎರಡಲಗಿನ ಕತ್ತಿಯಾದ ಟಿವಿಯನ್ನು ಜಾಣತನದಿಂ ಬಳಸಬೇಕು. ಟಿವಿಗಿಂತ ಮೊದಲೇ ಕಂಪ್ಯೂಟರ್ ಮತ್ತು ಇಂಟರ್ ನೆಟ್ ನ ಗೀಳು ಹತ್ತಿಕೊಂಡರೆ ಮಕ್ಕಳಿಗೆ ಪಾರ್ನೋಗ್ರಫಿಯ ಪರಿಚಯ ಅಗತ್ಯಕ್ಕಿಂತ ಮೊದಲೇ ಆಗುವ ಸಂಭವವೂ ಇರುತ್ತದೆ. ಹಾಗಾಗಿ ಟಿವಿ ಮತ್ತು ಟಿವಿ ನೋಡುವ ಸಂಯಮ ಎರಡೂ ಒಳ್ಳೆಯದು.
SCROLL FOR NEXT