ಸಾಂಕೇತಿಕ ಚಿತ್ರ 
ಅಂಕಣಗಳು

ಶಂಕರನ ತಲೆ ತಾಡಿಸಿದ ಗಂಗಾ ದೇವಿ

ನಾನಾಕೆಯನ್ನು ನನ್ನ ಶಿರದಲ್ಲಿ ತಡೆ ಹಿಡಿಯುವೆ. "ಹೀಗೆ ಹೇಳಿದ ರುದ್ರ, ತನ್ನೆರಡು ಕಾಲುಗಳನ್ನಗಲಿಸಿ ಭದ್ರವಾಗಿ ನಿಂತು, ಕೈಗಳಲ್ಲಿದ್ದ ತ್ರಿಶೂಲ-ಡಮರುಗಳು ಮಾಯವಾಗುತ್ತಿದ್ದಂತೆಯೇ, ಕೈಗಳನ್ನು ಸೊಂಟದ...

ಮತ್ತೆ ತಪ; ಮತ್ತೆ ಕಾತುರ; ಮತ್ತೆ ನಿರೀಕ್ಷಣೆ; ಮತ್ತೆ ಸಹನೆ. ಈ ಭಾವ ತೊರೆಗಳು ಒಂದರಮೇಲೊಂದೊಂದು. ಒಂದೆರಡು ದಿನಗಳೇ, ತಿಂಗಳುಗಳೇ? "ಏನೇ ಆಗಲಿ ಗಂಗೆಯನ್ನೊಯ್ಯಲೇ ಬೇಕು ತನ್ನ ರಾಜ್ಯಕ್ಕೆ. ಜನರ ಕಷ್ಟ ನಿವಾರಣೆಯಾಗಲೇ ಬೇಕು. ತನ್ನ ಇಡೀ ಆಯುಷ್ಯ ಇಲ್ಲೇ ಕಳೆದು ಹೋದರೂ ಚಿಂತಿಲ್ಲ! 
ತಾನು ಮುದುಕನಾಗುವುದರೊಳಗಾದರೂ ಗಂಗೆ, ಸ್ವರ್ಗದಿಂದ ಧುಮುಕಿ ಬರಲೇ ಬೇಕು. ಆಕೆ ಹರಿದು ಜನರು ಸಂತುಷ್ಟರಾಗಲೇ ಬೇಕು. "ಇದು ಸದಾ ಭಗೀರಥನ ಮನದಲ್ಲಿ ಸ್ಥಿರವಾಗಿ ಮತ್ತೆ-ಮತ್ತೆ ಬೆಳಗುತ್ತಿದ್ದ ಚಿಂತನೆ. ಇತ್ತೀಚೆಗೆ ಆತ ಹಗಲು-ರಾತ್ರಿಗಳೆನ್ನದೇ ಧ್ಯಾನ ನಿರತ. ಸದಾ ಶಿವಚಿಂತನೆ; ಸದಾ ರುದ್ರರೂಪಧಾರಣ; ಸದಾ ಶಂಕರಧ್ಯಾನ. ಭಕ್ತರನ್ನು ಬೇಗ ಉದ್ಧರಿಸುವನೆಂಬ ಪ್ರತೀತಿ ಈಶ್ವರನಿಗೆ. ಶಿವನೇ ತನಗೆ ದಾರಿ ತೋರಿಸಬೇಕು. ಹಾಗೆ ಈಶ್ವರನನ್ನೇ ಕುರಿತು ತಪ ಮಾಡುತ್ತಿರುವುದಕ್ಕೂ ಮತ್ತೊಂದು ಬಲವಾದ ಕಾರಣವಿದೆ. ಹಿಮವಂತನಿಗೆ ಇಬ್ಬರು ಮಕ್ಕಳು. ಒಬ್ಬಳು ಹೈಮವತಿ, ಅಥವ ಉಮೆ. ಮತ್ತೊಬ್ಬಳೇ ಗಂಗೆ. ಅಕ್ಕನಾದ ಗಂಗೆಯನ್ನು ಸ್ವರ್ಗಕ್ಕೆ ಕರೆದೊಯ್ದಿದ್ದರು ದೇವತೆಗಳು. ತಂಗಿಯಾದ ಉಮೆ ತಪಿಸಿ ತಪಿಸಿ ಶಿವನನ್ನು ಒಲಿಸಿದ್ದಳು. ಎಂದರೆ, ತಂಗಿಯ ಗಂಡನಾದ ಶಿವ ಒಲಿದರೆ, ಕರೆದರೆ, ಗಂಗೆ ಮೃದುವಾಗಬಹುದೆಂಬುದು ಭಗೀರಥನ ಲೆಕ್ಕಾಚಾರ. 
ಇದ್ದಕ್ಕಿದ್ದಂತೇ ಒಂದು ಶುಭ ಮುಹೂರ್ತ. ಭಗೀರಥನ ಮುಂದೆ ಭೂ-ಗಗನದೆತ್ತರಕ್ಕೆ ಹಬ್ಬಿ ನಿಂತ ತೇಜೋಮೂರ್ತಿ! ವ್ಯಾಘ್ರ ಚರ್ಮವನ್ನು ಸೊಂಟಕ್ಕೆ ಸುತ್ತಿರುವ ಶಿವಶಂಕರ!! ಬಲದ ಕೈಯ್ಯಲ್ಲಿ ತ್ರಿಶೂಲ, ಎಡದ ಕೈಯ್ಯಲ್ಲಿ ಡಮರುಗ. ಮೈತುಂಬ ತ್ರಿಪುಂಡ್ರಗಳ ಸಾಲು-ಸಾಲು. ಕಟಿ, ಕಂಠ, ಕರಗಳಲ್ಲೆಲ್ಲ ಸುತ್ತಿದ ಹಾವುಗಳು;ಸರ್ಪಗಳು;ನಾಗರಗಳು.
ಹಸನ್ಮುಖ; ಶಾಂತಮುಖ; ಗಭೀರಮುಖ; ಸುಂದರ ಮುಖ. ತಲೆಯ ಮೇಲೆ ಜಟೆ! ಅದೇ ಕಿರೀಟವಿದ್ದಂತೆ. ಬೇರೆಯ ದೇವತೆಗಳಿಗೆ ಚಿನ್ನದ ಕಿರೀಟವಿದ್ದರೆ ಈತನಿಗೆ ತಲೆಕೂದಲುಗಳೇ ಕಿರೀಟ. (ಈ ದೇವನನ್ನನುಕರಿಸಿಯೇ ಋಷಿ-ಮುನಿಗಳೂ ತಮ್ಮ ತಲೆಗೂದಲುಗಳನ್ನು ಗೋಪುರಾಕಾರದಲ್ಲಿ ಮೇಲೆ ಕಟ್ಟುವುದು!!) ಎಷ್ಟೋ ದೂರವಿದ್ದರೂ ಹತ್ತಿರವಿದ್ದಂತೆಯೇ ಕಾಣುವ ಕೌತುಕ. ಭಗೀರಥ ಬಾಯಿ ಬಿಡುವ ಮುನ್ನವೇ ಶಂಕರನೆಂದ, ಅತ್ಯಂತ ಮೃದುವಾದ ಕರುಣಾ ಧ್ವನಿಯಲ್ಲಿ; "ಭಗೀರಥ, ನಿನ್ನ ಪ್ರಜಾ ವಾತ್ಸಲ್ಯ ಪ್ರಶಂಸನೀಯ. ನಾನು ಸಂತುಷ್ಟನಾಗಿದ್ದೇನೆ. ಗಂಗೆಯನ್ನು ಭೂಮಿಗಿಳಿಸುವ ನಿನ್ನ ಪ್ರಯತ್ನ ನಿಜವಾಗಲಿ. ಹೇಳು. ನಾನೇನು ಮಾಡಬೇಕು?"
ಹಿಮಾಲಯದಲ್ಲಿದ್ದರೂ ಶಂಕರನನ್ನು ನೋಡಿ ಹೆದರಿಕೆಯಿಂದಲೋ, ಸಂತೋಷದಿಂದಲೋ ಬೆದರಿ ಹೋಗಿ ಬೆವರಿದ್ದ ಭಗೀರಥ ತೊದಲುತ್ತ ನುಡಿದ; "ಮಹಾಸ್ವಾಮಿ, ನಾನು ಕೃತಾರ್ಥನಾದೆ. ಗಂಗೆಯ ಪ್ರವಾಹದ ಹೊಡೆತವನ್ನು ಈ ಭೂಮಿ ಧರಿಸಲಾಗದೆಂದೂ ಆಕೆಯನ್ನು ಯಾರಾದರೂ ತಡೆದು, ನಿಧಾನವಾಗಿ ಭೂಮಿಗೆ ಇಳಿಸಬೇಕೆಂದೂ ಆಕೆ ಕೇಳಿದ್ದಾಳೆ. ತಾವು ದಯಮಾಡಿ ಮುಂದಿನದನ್ನು ಹೇಳಬೇಕು" .ಮುಂದೇನಾಗುವುದೋ ಎಂದು ತಿಳಿಯದ ಭಗೀರಥ ತನಗಿರುವ ಸಮಸ್ಯೆಯನ್ನು ಮುಂದಿಟ್ಟ.
ಕ್ಷಣ ಕಾಲ ಯೋಚಿಸಿದ ಈಶ್ವರ ಹೇಳಿದ, "ಕರೆ ಗಂಗೆಯನ್ನು! ನಾನಾಕೆಯನ್ನು ನನ್ನ ಶಿರದಲ್ಲಿ ತಡೆ ಹಿಡಿಯುವೆ. "ಹೀಗೆ ಹೇಳಿದ ರುದ್ರ, ತನ್ನೆರಡು ಕಾಲುಗಳನ್ನಗಲಿಸಿ ಭದ್ರವಾಗಿ ನಿಂತು, ಕೈಗಳಲ್ಲಿದ್ದ ತ್ರಿಶೂಲ-ಡಮರುಗಳು ಮಾಯವಾಗುತ್ತಿದ್ದಂತೆಯೇ, ಕೈಗಳನ್ನು ಸೊಂಟದ ಮೇಲಿಟ್ಟು, ತಲೆಯನ್ನೊಮ್ಮೆ ಕೊಡವಿದ. ಕಟ್ಟಿದ್ದ ಶಿಖೆ ಬಿಚ್ಚಿತು, ಶಿಖರ ವಿಸ್ತರಿಸಿತು, ಕೇಶಗಳು ಬೆಳೆಯತೊಡಗಿದುವು. ಸುತ್ತಲೂ ಕೂದಲುಗಳ ತಟ್ಟೆಯೊಂದು ಸಿದ್ಧವಾಯಿತು. ಸಿದ್ಧವಾದಂತೆ; ಆ ತಟ್ಟೆ ಅಗಲವಾಗುತ್ತಿರುವಂತೆ; ಬೆಳೆಯುತ್ತಿರುವಂತೆ; ದಿಕ್ಕುಗಳಿಗೆ ವ್ಯಾಪಿಸುತ್ತಿರುವಂತೆ; ಕಪ್ಪಗಿನ ಕೂದಲುಗಳ ತಟ್ಟೆಯೊಂದು ಬಾಣಲೆಯಾಗಿ ಪರಿವರ್ತಿತವಾಗುತ್ತಿದ್ದಂತೆ, ಭಗೀರಥನಿಗೆ ಅಯೋಮಯ!!!! "ಗಂಗೆ, ಬಾರಮ್ಮ! ಮಾತು ಕೊಟ್ಟಿದ್ದಂತೆ ಬಾರಮ್ಮ. ನಿನ್ನ ವೇಗ ತಡೆಯುವಲು ಶಿವನೇ ಸಿದ್ಧನಾಗಿ ನಿನ್ನ ರಭಸಕ್ಕೆ ತನ್ನ ತಲೆಯನ್ನೇ ಒಡ್ಡಿದ್ದಾನೆ ಬಾರಮ್ಮ! ಈಶ್ವರನ ಶಿರೋ ನಿಲ್ದಾಣದಲ್ಲಿಳಿದು ನಿಧಾನವಾಗಿ ಧುಮ್ಮಿಕ್ಕಮ್ಮ, ಧರಣಿಗೆ. ಬಾ ತಾಯಿ, ಬಾ!"
ಶಿವನ ತಲೆಯ ಮೇಲೆ ಬಿಳಿ-ಬಿಳಿ ಸೀರೆಯುಟ್ಟ ಗಂಗೆ; ತೇಜಸ್ವೀ ಗಂಗೆ ಪ್ರತ್ಯಕ್ಷ. "ನನ್ನ ಪೂರ್ಣ ರಭಸ ಬೇಡ, ನೂರರಲ್ಲೊಂದು ಭಾಗದ ಜಲಪಾತವನ್ನು, ಜಲ ಧಾರೆಯನ್ನು ತಡೆಯುವನೋ ಶಿವ? ತಂಗಿಯ ಕೈಹಿಡಿದು ಉಮಾಪತಿಯಾದಷ್ಟು ಸುಲಭವೆಂದುಕೊಂಡನೋ ಶಂಕರ? "ಕೊಂಚ ಜಂಭ, ಕೊಂಚ ತಿರಸ್ಕಾರ, ಕೊಂಚ ಅಸಡ್ಡೆ, ಕೊಂಚ ಕೊಂಕು, ಕೊಂಚ ಕೌತುಕಗಳು ಬೆರೆತು ಕೆಣಕುವಿಕೆಯಿಂದ ಧುಮ್ಮಿಕ್ಕಿ ತಾಡಿಸಿದಳು ಶಿವಶಿರವನ್ನು ಗಂಗೆ.
ಶಿವಶಿರ ಕೇಶ ಪಾಶ ವೃದ್ಧಿಸಿತು
ದಿಗ್ದಿಗಂತಗಳ ಅಂಚಿಗೆ ಓಡಿತು
ಕೂದಲುಗಳ ಬಹು ಬಿಗಿ ಬಲೆ ಹಬ್ಬಿತು 
ರಂಧ್ರರಹಿತ ರೋಮದ ತೆರೆಯಾಯಿತು 
ತೆಂಗಿನ ಕಾಂಡದ ದಪ್ಪ ರೋಮಗಳು
ಜಡೆಯನು ಹೆಣೆಯುತ ಜೋಡಿಸಿ ನಿಂದುವು
ಜಡೆಗಳ ಜಡೆಗಳು ಗಗನವ ತುಂಬುತ
ತಿಮಿರ ಕೃಷ್ಣ ಕರಿ ಸೀರೆಯ ನೇದಿತು 
ಕೇಶ ಪಾಶ ವಿಸ್ತರಿಸಿತು ಗಗನಕೆ 
ಕರ್ಮೋಡಗಳಂದದಿ ಹಬ್ಬಿತು ಜಟೆ
ಗ್ರಹ ತಾರೆಗಳೆಲ್ಲಾ ಮರೆಯಾದುವು 
ಸೂರ್ಯ ಕಿರಣಗಳು ಕಾಣದೆ ಹೋದುವು 
ಗಗನ ಭೂಮಿಗಳ ಮಧ್ಯದಿ ನಿಂತಿತು 
ರವಿ ಜಲ ನಡುವಂತರ್ಪಟವಾಯಿತು 
ಬೆಳಕೆಂಬುದೆ ಜಗಕಿಲ್ಲವಾಯಿತು 
ಜೀವ ಜಂತುಗಳು ದಿಗಿಲು ಬಿದ್ದುವು 
ಜಲ ಚರಗಳ ಓಡಾಟವು ನಿಂತಿತು
ಗಗನಗಾಮಿಗಳ ಗತಿ ಬಂಧಿಸಿತು 
ಜನರಿಗೆ ದಿಕ್ಕುಗಳರಿವೇ ಹೋಯಿತು
ಹಕ್ಕಿ ಪಕ್ಷಿಗಳ ಕಣ್ಣು ಕಟ್ಟಿತು 
ಗೂಬೆ ಪಿಶಾಚಗಳೆಚ್ಚರಗೊಂಡವು
ಭೂತ ಬೇತಾಳ ಕೇಕೆ ಹಾಕಿತು
ದಾನವರಿಗೆ ನಿಶೆ ಸ್ಫೂರ್ತಿ ತುಂಬಿತು
ಕುಕಾರ್ಯಗಳು ಶುರುವಾಯಿತು ಆಗಲೆ 
ಗಂಗಾ ಗರ್ವದ ಗತಿ ಬಂಧನವದು 
ಗಂಗೆಯ ಸೆರೆಮನೆ ರೋಮ ವ್ಯೂಹ ಅದು
ಗಂಗೆ ಕಾಲ ಕೂದಲ ಬೇಡಿಯೆ ಅದು
ಗಂಗೆಗಂಟಲಿಗೆ ಕೇಶಗಾಳ ಅದು 
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT