ಋಷಿ ಋಚೀಕ (ಸಾಂಕೇತಿಕ ಚಿತ್ರ) 
ಅಂಕಣಗಳು

'ನಿನ್ನ ಕನಸು ನನಸಾಗಲಿ , ನನಗೂ ನನ್ನ ಬಯಕೆಗಳು ಈಡೇರಲಿ'

ಹಿಂದೆ ನಿನ್ನಲ್ಲಿಗೆ ಬಂದಿದ್ದಾಗ ನಿನ್ನೊಡನೆ ಸಂಭಾಷಿಸುತ್ತಿದ್ದಾಗ, ಸೌಂದರ್ಯ ರಾಶಿಯೊಂದು, ಮೃದು ಮಾತಿನ ಮೋಹಿನಿಯೊಂದು, ಕಮಲ ಕಣ್ಣಿನ ಹಿಡಿ ಸೊಂಟದ ಹುಡುಗಿಯೊಬ್ಬಳು ಬಂದಳು ನನ್ನ ಪಾದಗಳು ಅವಳ ಬಿಸಿ...

"ಜಿತೇಂದ್ರಿಯತ್ವ ಬಹಳ ಕಷ್ಟ. ನಾನಂದುಕೊಂಡಿದ್ದೆ, ನಾನು ಜಿತೇಂದ್ರಿಯ’. ಉಡುಗೆ, ಆಹಾರ, ಮನರಂಜನೆ, ಎಲ್ಲದರ ಮೇಲೂ ಜಯ ಸಾಧಿಸಿದ್ದೆ. ಇಂದ್ರ ನನ್ನ ತಪಸ್ಸನ್ನು ಭಂಗಗೊಳಿಸಲು ಕಳಿಸಿದ್ದ ಅಪ್ಸರ ಸ್ತ್ರೀಯರನ್ನೂ ಅಲಕ್ಷಿಸಿಬಿಟ್ಟಿದ್ದೆ. ನನ್ನ ಚಿತ್ತವನ್ನು ಅಲ್ಲಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಗರ್ವದಲ್ಲಿದ್ದೆ. ಹಿಂದೆ ನಿನ್ನಲ್ಲಿಗೆ ಬಂದಿದ್ದಾಗ ನಿನ್ನೊಡನೆ ಸಂಭಾಷಿಸುತ್ತಿದ್ದಾಗ, ಸೌಂದರ್ಯ ರಾಶಿಯೊಂದು, ಮೃದು ಮಾತಿನ ಮೋಹಿನಿಯೊಂದು, ಕಮಲ ಕಣ್ಣಿನ ಹಿಡಿ ಸೊಂಟದ ಹುಡುಗಿಯೊಬ್ಬಳು ಬಂದಳು. ನನ್ನ ಸಂಯಮವೆಲ್ಲ ಸೋತುಹೋಯಿತು. ಅವಳು, ಆ ಚಿತ್ತಾಪಹಾರಕಿ, ಮುಂದೆ ಬಂದು ನಿನ್ನ ಸೂಚನೆಯಂತೆ ಪಾದಾಭಿವಂದನ ಮಾಡಿದಳು. 
"ಮಹರ್ಷಿಗಳೇ, ಇವಳೇ ನನ್ನ ಏಕಮಾತ್ರಸಂತಾನ. ಸತ್ಯವತಿಯೆಂದು ಕರೆಯುತ್ತೇವೆ. ಎರಡು ಮೂರು ವರ್ಷದಲ್ಲಿ ಅವಳಿಗೆ ಮದುವೆ ಮಾಡಿದರೆ ನನ್ನ ಕನ್ಯಾ ಸೆರೆ ತಪ್ಪುತ್ತದೆ. ಒಳ್ಳೆಯ ಗಂಡ ಸಿಗಲೆಂದು ಆಶೀರ್ವದಿಸಿ. "ಅಪ್ಪ ಹೇಳಿದಳೆಂದು ನನ್ನ ಕಾಲಿಗೆ ಬಿದ್ದಳು. ನನ್ನ ಪಾದಗಳು ಅವಳ ಬಿಸಿ - ಬಿಸಿ ಸ್ಪರ್ಶಕ್ಕೆ ಕರಗಿಹೋದುವು. ದಿಟ್ಟಿಸಬಾರದೆಂದುಕೊಂಡರೂ ನನ್ನ ಮನಸ್ಸು ಬುದ್ಧಿಯ ಮಾತನ್ನು ಕೇಳದೇ ಅವಳನ್ನೇ ನೋಡುತ್ತಿತ್ತು. ಹೆಚ್ಚು ಕಾಲ ಅಲ್ಲಿ ಇದ್ದರೆ, ನನ್ನ ಸಂಯಮ ಕೊಚ್ಚಿ ಹೋಗುತ್ತದೆ ಎಂದು ಆಶ್ರಮಕ್ಕೆ ವಾಪಸಾದೆ.
ಏನೇ ಮಾಡಿದರೂ ಬೇರೆಯ ಕಡೆ ಮನಸ್ಸು ಹೋಗದೆ ಅವಳ ರೂಪವನ್ನೇ ತಿನ್ನುತ್ತಿತ್ತು. ಸೋತು ಹೋದೆ. ಆಗಲೇ ಮುದಿಯನಾಗಿದ್ದ ನಾನು ಹೇಗೆ ಕೇಳಲಿ ನಿನ್ನ ಮಗಳನ್ನು ಕೊಡು ಎಂದು? ಸಾಧ್ಯವಿಲ್ಲ. ಅದರ ಬದಲು ನೀನು ಹೇಳಿಕೊಂಡಿದ್ದ, ಇನ್ನೂರು ಅಶ್ವಮೇಧಗಳನ್ನು ಮಾಡಬೇಕೆಂದು ಸಂಕಲ್ಪಿಸಿದ್ದ ನಿನಗೆ ಆ ಅನೂಹ್ಯ ಅಸಾಧಾರಣ ಅಶ್ವಗಳನ್ನಿತ್ತು ಅದಕ್ಕೆ ಪ್ರತಿಯಾಗಿ ನಿನ್ನ ಮಗಳನ್ನು ಮದುವೆಯಾಗಲು ತೀರ್ಮಾನಿಸಿದೆ. ಇದೀಗ ಕುದುರೆಗಳನ್ನು ತಂದಿದ್ದೀನಿ, ನಿನ್ನ ಕನಸು ನನಸಾಗಲಿ, ನನಗೂ ನನ್ನ ಬಯಕೆಗಳು ಈಡೇರಲಿ."
ಅಯ್ಯೋ! ಸಿಡಿಮದ್ದು ಸಿಡಿದಂತಾಗಿತ್ತು. ತನ್ನ ಲೋಕದಲ್ಲೇ ತಾವಿದ್ದ ಋಚೀಕರು ದೊಡ್ಡ ಭಾಷಣವನ್ನೇ ಮಾಡಿದ್ದರು. ಸಹಿಸಲಾಗಲಿಲ್ಲ, ಮೂರ್ಛೆ ಬಿದ್ದೆ. ಎಚ್ಚರವಾದಾಗ ಬಣ್ಣಗೆಟ್ಟ ಅಪ್ಪ ಬಂದರು. " ಮಗಳೇ, ನನಗೆ ಅರ್ಥವಾಯಿತು ನಿನ್ನ ಮನೋವೇದನೆ. ಮುದುಕನಿಗೆ, ಹಣ್ಣು - ಹಣ್ಣು ಮುದುಕನಿಗೆ, ಅದೆಷ್ಟೇ ಮಹರ್ಷಿಯಾಗಿದ್ದರೂ ಆ ವ್ಯಕ್ತಿಗೆ ನಿನ್ನನ್ನ ಕೊಡೊಲ್ಲ. ನಿಶ್ಚಿಂತಳಾಗಿರು. "ಎಂದು ತಲೆ ಸವರಿ ಹೋಗಿದ್ದರು. ಅಂದು ರಾತ್ರಿ ನನಗೆಲ್ಲಿ ನಿದ್ದೆ ಬಂತು? ಬಹು ದೀರ್ಘ ರಾತ್ರಿ. ಏನು ಮಾಡುವುದು? ಅಪ್ಪ ನನ್ನನ್ನು ಪ್ರೀತಿಸುವ ಪರಿ, ನಾನು ಬಯಸಿದ್ದನ್ನೆಲ್ಲಾ ಆಗ ಮಾಡಿಸುವ ರೀತಿ, ಆಕಡೆ ಅಂತಹ ಋಷಿಪುಂಗವ! ಆತನ ಮೇಲೆ ಜಿಗುಪ್ಸೆಯಾದರೂ, ಕ್ಷಣದಲ್ಲಿ ಬದಲಾಗಿ ಅಕಸ್ಮಾತ್ ನಾನು ಒಪ್ಪದೇ ಇದ್ದರೆ? ಅಪ್ಪ ಬೆಳಿಗ್ಗೆ ತಾನೇ ಆನಂದಿಸಿದ ವಿಧಾನ, ಕುದುರೆಗಳು ಸಿಕ್ಕವೆಂಬ ಧನ್ಯತಾಭಾವ ... ಇವುಗಳೆಲ್ಲ ಹೋಗಿಬಿಡುತ್ತವೆ. ಅಪ್ಪನ ಆಶೆಯನ್ನು ಕತ್ತರಿಸಿದಂತೇ... ಛೆ ಛೆ ! ಅಪ್ಪನ ಬಯಕೆ ಈಡೇರಲಿ. ಆ ಅಧಮ ಋಷಿಯನ್ನೇ ಮದುವೆಯಾಗಿ ಹೋಗಿಬಿಡುತ್ತೇನೆ. ನನ್ನ ಹಣೆಯಲ್ಲಿ ಬರೆದದ್ದು ಇಷ್ಟೇ. --- ಈ ಯೋಚನೆ ಬರುತ್ತ ಬರುತ್ತ ಗಟ್ಟಿಯಾಯಿತು . 
ಹೇಗೋ ಮದುವೆಯಾಯಿತು. ನಾನು ಇವರ ಆಶ್ರಮಕ್ಕೆ ಹೊರಟಾಗ ಅಪ್ಪ ಅಳುತ್ತಿದ್ದರು. ಅಮ್ಮ ಬಿಟ್ಟಿರಲಾರದೇ ಸೆರಗೆಲ್ಲ ಒದ್ದೆ ಮಾಡಿಕೊಂಡಿದ್ದರು. ಅಂತೂ ಮುಗಿಯಿತು, ಋಷಿಗಳ ಆಶ್ರಮಕ್ಕೆ ಬಂದೆ. ಈ ಋಷಿಗಳಿಗೋ ಮಹಾ ಸಂತಸ. ಬರೀ ಮೂಳೆಗಳಂತಿದ್ದ ಕೈ ಬೆರಳುಗಳ ತೋಳುಗಳಿಂದ ನನ್ನನ್ನು ಅಪ್ಪಿಕೊಂಡಾಗ ಶೀತ ಕಬ್ಬಿಣದ ಬಲೆಯೊಂದು ಬಂಧಿಸಿದಂತಾಗುತ್ತಿತ್ತು. ರಾತ್ರಿ ಪಕ್ಕದಲ್ಲಿ ಮಲಗಿದರೆ ಹುಲಿಯೊಂದು ನನ್ನನ್ನು ತಿಂದಂತೆ. ಬೇಡ - ಬೇಡ. ನರಕ ನರಕ ಅದು. 
ಆದರೆ ಕ್ರಮೇಣ ತಿರಸ್ಕಾರ ಕಡಿಮೆಯಾಯಿತು. ಅವರ ಶಿಷ್ಯರಿಗೆ ಪಾಠ ಮಾಡುತ್ತಿದ್ದ ರೀತಿ, ಅವರ ತಪೋ ತೇಜಸ್ಸು, ಬಂದವರೆಲ್ಲ ಅವರ ಕಾಲಿಗೆ ಬೀಳುತ್ತಿದ್ದ ವಿಧಾನ, ಸೈನ್ಯವನ್ನೆಲ್ಲ ಆಶ್ರಮದ ಹೊರಗಿಟ್ಟು ಬರಿಗಾಲಲ್ಲಿ ನಡೆದು ಬರುತ್ತಿದ್ದ ರಾಜರುಗಳು... ಇವುಗಳನ್ನೆಲ್ಲ ಕಂಡು - ಕಂಡು ಗೌರವ ಹೆಚ್ಚಾಯಿತು. ದೈಹಿಕ ಸುಖವಿಲ್ಲದಿದ್ದರೆ ಬೇಡ, ಈಗ ನಾನು ಒಬ್ಬ ಋಷಿಪತ್ನಿ, ಮಹರ್ಷಿಪತ್ನಿ ಎಂಬ ಗೌರವ. ಬಂದವರೆಲ್ಲ ತನಗೂ ನಮಸ್ಕರಿಸುವ ಸಂಪ್ರದಾಯ. ಇರಲಿ, ಈ ಜನ್ಮಕ್ಕೆ ಇಷ್ಟೇ ಎಂದು ತೀರ್ಮಾನವಾಗುವ ಹೊತ್ತಿಗೆ ಅಪ್ಪ ಅಮ್ಮ ಬಂದಿದ್ದರು. 
ಅಮ್ಮ ಪತಿಸೇವೆಯನ್ನು ಹೇಳಿದ್ದಳು. ತನಗದೇ ಭೂಷಣವೆಂದು, ಅದೇ ಶಕ್ತಿಯಿಂದ ತನಗೂ ಏನು ಬೇಕೆಂದರೆ ಅದನ್ನು ಮಾಡಬಹುದೆಂದೂ ಉಪದೇಶಿಸಿದ್ದಳು. ನಾನೂ ಸಿದ್ಧವಾಗಿಬಿಟ್ಟಿದ್ದೆ; ಪಾತಿವ್ರತ್ಯದ ಮಹಿಮೆಯನ್ನು ಗಳಿಸಲು!! ಅಂದಿನಿಂದ ಅವರಿಗೆ ಮಾಡುವ ಸೇವೆಯೇ ನನ್ನ ಜೀವನದ ಗುರಿಯಾಯಿತು. ಸ್ನಾನ ಮಾಡಿಸುವುದು, ಯಙ್ಞಕುಂಡ ಸಿದ್ಧಪಡಿಸುವುದು, ಹವಿಸ್ಸನ್ನು ತಯಾರಿಸುವುದು, ರಾತ್ರಿ ಆ ದುರ್ಬಲ ದೇಹವನ್ನು ಒತ್ತುವುದು, ಅವರಿಗೆ ಪ್ರಿಯವಾದ ಪಕ್ವವನ್ನು ತಯಾರಿಸುವುದು ... ಹೀಗೆ ಕಾಲ ತಳ್ಳುತ್ತಿತ್ತು. ಒಟ್ಟಿನಲ್ಲಿ ನನ್ನ ಗುರಿ ಈಗ ಇಂತಹ ಮಹರ್ಷಿಯನ್ನು ಸಂತಸದಿಂದಿರಿಸುವುದೇ ಎಂದಾಯಿತು. 
ಒಮ್ಮೆ, ಗಂಡ ಬೃಹತ್ ಯಙ್ಞ ಮಾಡಲು ಬಯಸಿದರು. ನೂರಾರು ಋಷಿಗಳು ಬಂದಿದ್ದರು. ದೊಡ್ಡ ಯಾಗವಾಟಿಕೆ. ಅಲ್ಲಿ ಆ ಯಙ್ಞಕುಂಡದ ಮುಂದೆ ಕುಳಿತಾಗ ಅವರ ಕಂಠ ಘಂಟೆಯಂತೆ ಮೊಳಗುತ್ತಿತ್ತು. ಕಾಲ-ಕಾಲಕ್ಕೆ ನಾನು ಅವರ ಯಙ್ಞದ ಅವಶ್ಯಕತೆಗಳನ್ನೆಲ್ಲ ಪೂರೈಸುತ್ತಿದ್ದೆ. ಒಮ್ಮೆ ಯಾರೋ ತರುಣ ಋಷಿ. ಚರ್ಚಿಸುತ್ತಿದ್ದವನು ವಿತಂಡಾಕ್ಕೆ ಇಳಿದಿದ್ದ. ಇವರು ಸಮಾಧಾನವಾಗಿ ಹೇಳಿದರು, ಇನ್ನೊಮ್ಮೆ ಹೇಳಿದರು, ಬಿಡಿಸಿ-ಬಿಡಿಸಿ ಹೇಳಿದರು. ಅವನದು ಮೊಂಡಿವಾದವೆಂದು ನಮಗೇ ಅರ್ಥವಾಗುತ್ತಿತ್ತು. ಯಾವುದೋ ಘಟ್ಟದಲ್ಲಿ ಯಜಮಾನರಿಗೆ ಸಿಟ್ಟು ಬಂತು. ಅದು ಬೆಳೆಯಿತು. ಕೊನೆಗೆ ತಡೆಯಲಾರದೆ, "ಅಯೋಗ್ಯ! ಎಷ್ಟು ಹೇಳಿದರೂ ಅರ್ಥವಾಗುತ್ತಿಲ್ಲ! ಅಥವಾ ಬೇಕಾಗಿ ಹೀಗೆ ಮಾಡುತ್ತಿರುವೆಯೋ?! ಸಾಕು, ನಡಿ. ನನ್ನ ಆಶ್ರಮಕ್ಕೆ ಮತ್ತೆ ಬರಬೇಡ. "ಗರ್ಜಿಸಿದರೂ ಅವನು ಹಿಂಜರಿಯಲಿಲ್ಲ. ಓಹ್ ! ನಿರೀಕ್ಷೆ ಮಾಡಿರದ ಘಟನೆಯೊಂದು ನಡೆದುಹೋಯಿತು. ಆ ಹುಡುಗ ಇದ್ದಕ್ಕಿದ್ದಂತೆಯೇ ಎದ್ದ. ಅವನ ರೂಪವೇ ಬದಲಾಯಿತು. ಘೋರಾಕಾರದ ರಾಕ್ಷಸನಾಗಿಬಿಟ್ಟ. ಕೋರೆ ದಾಡೆಗಳ, ಕೆಂಪು ಕಣ್ಣುಗಳ, ಭಾರೀ ದೇಹದ ಎರಡಾಳೆತ್ತರದ ಭಾರೀ ರಕ್ಕಸ! ಯಜಮಾನರ ಕಡೆಗೆ ಬರುತ್ತಿದ್ದಾನೆ!! ನಾನು ನಡುಗಿಬಿಟ್ಟೆ! ಮುಂದೇನಾಗುತ್ತದೋ ಎಂದು ಹೆದರಿಬಿಟ್ಟೆ! ಎಷ್ಟೇ ವಿರೋಧಿಸಿರಲಿ, ಈಗ ಗಂಡ, ದೊಡ್ಡ ಮಹರ್ಷಿ ! ಅವರನ್ನೇನು ಮಾಡುತ್ತಾನೋ!! 
ಆದರೆಈ ಕಡೆಯಿಂದ ಮತ್ತೊಂದು ಅನೀರೀಕ್ಷಿತ ಪವಾಡ!!  ಯಜಮಾನರು; ಮುದಿದೇಹವಲ್ಲ, ದೃಢಕಾಯನಂತೆ ಎದ್ದು ಅವನ ಹತ್ತಿರ ಹೋಗಿ ಕುತ್ತಿಗೆಗೆ ಕೈ ಹಾಕಿ ಎತ್ತಿ ಗಾಳಿಯಲ್ಲಿ ನೂಕಿಬಿಟ್ಟರು. ಅಬ್ಬ! ಅವನು ಆಶ್ರಮದ ಹೊರಹೋಗಿ ಬಿದ್ದ. ಏನಾಯಿತೋ, ಏನು ಮುರಿಯಿತೋ ಗೊತ್ತಿಲ್ಲ. ಕಿರುಚಿಕೊಳ್ಳುತ್ತಿದ್ದ. ಬಹು ಕಾಲ ಆದಮೇಲೆ ಎದ್ದು ಹೋದ. ಉಳಿದ ಋಷಿಗಳೆಲ್ಲ ಸ್ತಂಭಿತರಾಗಿದ್ದರು. ಇವರನ್ನು ನೋಡಿ ನನಗೆ ಅಚ್ಚರಿ. ಒಂದು ತರಹ ಖುಶಿ. ಇಪ್ಪತ್ತೈದರ ತರುಣನನ್ನು, ಅಲ್ಲಲ್ಲ ಆ ಘೋರ ಅಸುರನನ್ನು ಈ ವೃದ್ಧ ಎತ್ತಿ ಎಸೆಯುವುದೆಂದರೇನು? ಎಲ್ಲಿತ್ತು ಈ ಶಕ್ತಿ? ಅದೆಂತು ಆ ಕ್ಷಣದಲ್ಲಿ ಗಂಡನ ದೇಹ ಅಷ್ಟು ಗಡುಸಾಗಿ ಕಂಡಿತು? ಪ್ರಶ್ನೆಗಳ ಮೇಲೆ ಪ್ರಶ್ನೆಗಳು. 
ನಾಲ್ಕು ದಿನಗಳ ನಂತರ ಪೂರ್ಣಾಹುತಿ. ತುಂಬ ಸಂತಸದಲ್ಲಿದ್ದರು, ತನಗೂ ಧನ್ಯತೆ ಎನಿಸಿತು, ಆದರೂ ತುಂಬ ಶ್ರಮೆ ವಹಿಸಿದ್ದರಿಂದ ದೇಹ ಸುಸ್ತಾಗಿತ್ತು. ಇವರು ಬಂದರು, ಬಿಗಿಯಾಗಿ ಅಪ್ಪಿಕೊಂಡು ಹೇಳಿದರು, " ನನಗೆ ತುಂಬ ಸಂತೋಷವಾಗಿದೆ. ಈ ಯಙ್ಞ ಮಾಡುವುದಕ್ಕಾಗಿ ನಾನು ಹಲ ಕಾಲದಿಂದ ಕಾದಿದ್ದೆ. ಈಗಿದು ನಿನ್ನ ಸಹಕಾರದಿಂದ ಪೂರ್ಣವಾಯಿತು. ನಿನ್ನಂತಹ ರಾಜಕನ್ಯೆ, ಅಪ್ರತಿಮ ಸುಂದರಿ, ಸುಖವಾಗಿ ಬೆಳೆದವಳು ಇಂಥದ್ದೊಂದು ಯಙ್ಞದ ಆತಿಥ್ಯದ ಜವಾಬ್ದಾರಿ ನಿರ್ವಹಿಸಿಬಿಟ್ಟೆ. ಅತ್ಯಂತ ಉತ್ತಮವಾಗಿ ನಿರ್ವಹಿಸಿಬಿಟ್ಟೆ. ಎಲ್ಲರೂ ಮೆಚ್ಚುವಂತೆ ನಿರ್ವಹಿಸಿಬಿಟ್ಟೆ. ಹೇಳು, ಏನು ವರ ಕೇಳುವೆಯೋ ಕೇಳಿಕೊ. ಎಂಥದ್ದಾದ್ದರೂ ಚಿಂತೆಯಿಲ್ಲ, ನಿನಗೇನಾದರೂ ಬಯಕೆಯಿದ್ದರೆ ಹೇಳು. (ಮುಂದುವರೆಯಲಿದೆ...)
- ಡಾ. ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT