ವಿವಾಹವಾಗಿ ಇಷ್ಟು ದಿನಗಳಿಗೆ ಮೊದಲಬಾರಿಗೆ ನಾಚಿಕೆಯಾಗಿಬಿಟ್ಟಿತು ತನಗೆ! ಹೌದು ಅದೂ ಮೊದಲ ಬಾರಿ ಗಂಡನ ತಕ್ಕೆಯಲ್ಲಿ ಏನೋ ಅನಿರ್ವಚನೀಯ ಸುಖ ಕಂಡಿತು. "ಆಮೇಲೆ ಕೇಳುತ್ತೇನೆ" ಎಂದು ಕೊಸರಿಕೊಂಡು ಒಳಕ್ಕೆ ಓಡಿ ಹೋಗಿದ್ದೆ.
ಅಂದು ಸಾಯಂ ಸಂಧ್ಯಾವಂದನೆ ಆದಮೇಲೆ ಕೇಳಿದರು; "ಏನು ಯೋಚನೆ ಮಾಡ್ತಾ ಇದ್ದೀಯ? ಇನ್ನೂ ಕೇಳೇ ಇಲ್ಲ? "ಅವರ ಕಣ್ಣುಗಳನ್ನು ನೋಡದೇ ತಲೆ ತಗ್ಗಿಸಿ, ಅದೇನೋ ಮಹಾ ಸಂಭ್ರಮ, ಮಹಾ ನಾಚಿಕೆಯಿಂದ ಹೇಳಿಯೇ ಬಿಟ್ಟೆ. "ಸ್ವಾಮಿ , ತಪ್ಪು ತಿಳ್ಕೋಬೇಡಿ, ಆ ರಾಕ್ಷಸನನ್ನ ಎತ್ತಿ ಎಸೆದಾಗ ನಿಮ್ಮ ದೇಹ ಎಷ್ಟು ಗಟ್ಟಿಯಾಗಿತ್ತು! ಎಷ್ಟು ದೃಢವಾಗಿತ್ತು! ಹೊಳೀತಾ ಇತ್ತು. ಅಂದರೆ ನೀವು ಬಯಸಿದರೆ ಏನೂ ಮಾಡಬಲ್ಲರಿ ಅಂತ ಗೊತಾಗ್ಹೋಯ್ತು. ದಯವಿಟ್ಟು ಕ್ಷಮಿಸಿ, ನಿಮ್ಮಲ್ಲಿ ಆ ಗಡಸು ದೇಹದ ಯುವಕನನ್ನು ನೋಡೋ ಆಸೆ. "ಅಬ್ಬ! ಬಹಳ ಕಷ್ಟ ಪಟ್ಟು ಹೇಳಿದ್ದೆ. ಕ್ಷಣ ಬಿಟ್ಟು ಕೇಳಿದೆ, "ನಾನು ತಪ್ಪು ಮಾತಾಡಿದ್ನಾ? ಕೇಳ್ಬಾರದ್ದು ಕೇಳಿದ್ನಾ? ಅಪಚಾರ ಮಾಡಿದ್ನಾ?"
ಗಂಡ ಎದ್ದ. ನಾನೂ ಎದ್ದೆ. ಹತ್ತಿರ ಬಂದರು. ಸನಿಹ. ಏನೋ ಖುಶಿ. ಅಪ್ಪಿಕೊಂಡರು. ಕಿವಿಯ ಬಳಿ ಬಾಯಿಟ್ಟು ಹೇಳಿದರು, "ನೀನು ಹೀಗೆ ಹೇಳಿದ್ ಸರಿ ಹೋಯಿತು. ನಿನ್ನ ಬಯಕೆಯನ್ನು ಯಾಕೆ ತಪ್ಪು ಅಂದ್ಕೊಳ್ತೀಯ? ನಾನೇನೂ ಮಾಡಬಲ್ಲೆ, ಏನನ್ನೂ ಸಾಧಿಸ ಬಲ್ಲೆ. ಆದರೆ ಸ್ವಂತಕ್ಕಾಗಿ ಯಾವ ದೇವತೇನೂ ಕೇಳೋದಿಲ್ಲ. ಈಗ ನೀನು ಕೇಳಿದೆ ಅನ್ನೋದು ಕಾರಣ. ಆದರದೇನೂ ಪೂರ್ಣ ನಿಜ ಅಲ್ಲ. ಈ ಮುದಿ ಶರೀರದಿಂದ ನನಗೂ ತುಂಬಾ ತೊಂದರೆಯಾಗ್ತಾಯಿದೆ. ನಿನ್ನ ಬಯಕೆಯ ನೆಪದಲ್ಲಿ ನಾನೂ ಈ ಒಣಗಿದ ಶರೀರಾನ ಬಿಟ್ಟಬಿಡುತೀನಿ. ನಾಳೆ ಒಂದು ನೂತನ ಕಾಮ್ಯ ಮಾಡತೀನಿ. ಹೊರಗಡೆಯಿಂದ ಯಾರನ್ನೂ ಕರಿಯೋದು ಬೇಡ. ನಮ್ಮ ಶಿಷ್ಯರೇ ಇದಾರೆ, ಸಾಕು. ನಲವತ್ತೆಂಟು ದಿವಸಗಳ ಹೋಮ. ನಿನ್ನ ಆಶೆ ನೆರವೇರುತ್ತೆ. "ಅಬ್ಬಬ್ಬಾ! ಆ ಮಾತುಗಳನ್ನು ಕೇಳತಾ ಇದ್ದರೆ ದೇಹ ಎಲ್ಲ ಬೆವರೊಡೆದುಹೋಯಿತು. ಓಹ್! ಇವರು ಹೇಳುತಿರೋದು ನಿಜನಾ? ಅವರು ಯುವಕರಾಗುತಾರ? ಅಲ್ಲ, ಅದು ಹೇಗೆ ಹೇಳಿಬಿಟ್ಟೆ ನಾನು; "ನೀವು ಬಲವಾದ ಯುವಕರಾಗಬೇಕು ಅಂತ? "ಅಬ್ಬಬ್ಬ! ಈಗ, ಈಗ ಈಗ್ ತುಂಬಾ ನಾಚಿಕೆ ಆಗಬಿಡ್ತು. ಅವರೆದುರು ನಿಂತು ಮುಖ ತೋರಿಸುವುದಕ್ಕೂ ಆಗ್ತಾ ಇಲ್ಲ. ಅವರ ಆಲಿಂಗನವನ್ನು ಸಡಿಲಿಸಿ ಒಳಕ್ಕೆ ಜಾರಿದ್ದೆ..
ಪಕ್ಕ-ಪಕ್ಕದಲ್ಲಿ ಎರಡು ಸಮ ಪ್ರಮಾಣದ ಯಙ್ಞ ಕುಂಡಗಳು. ಎರಡಕ್ಕೂ ರಂಗು ರಂಗಿನ ಅಲಂಕಾರಗಳು. ದೊಡ್ಡ ರಾಶಿ ಬಿದ್ದಿರುವ ಮರದ ತುಂಡುಗಳು. ಸಮಿತ್ತುಗಳು ನೂರಾರು ದೊಡ್ಡ-ದೊಡ್ಡ ಬುಟ್ಟಿಗಳಲ್ಲಿ ಕೊಬ್ಬರಿ ಗಿಟುಕುಗಳು. ಅರಳು, ಸುಗಂಧ ಮೂಲಿಕೆಗಳು, ಅಶ್ವಗಂಧಿ, ತೇಜಸ್ವಿನಿ, ಇತ್ಯಾದಿ ಪರ್ಣಗಳು ತುಂಬಿರುವ ಬಿದಿರು ಗುಡಾಣಗಳು. ತುಪ್ಪ ಹನಿಯುತ್ತಿರುವ ಜರತಾರಿ ವಸ್ತ್ರಗಳನ್ನು ಮಡಿಸಿಟ್ಟಿರುವ ದೊಡ್ಡ ದೊಡ್ಡ ಮೊರಗಳು. ಬೆಳಿಗ್ಗೆ ಗೋ ಪೂಜೆ ಮುಗಿಸಿ ಬರುವ ಹೊತ್ತಿಗೆ ಯಾಗವಾಟಿಕೆಯಲ್ಲಿ ಎಲ್ಲ ಸಿದ್ಧವಾಗಿಬಿಟ್ಟಿದೆ! ಈ ಪ್ರಮಾಣದ ಸಂಭ್ರಮ ಹಿಂದೆಂದೂ ಕಂಡಿರಲಿಲ್ಲ. ಅಷ್ಟು ಹೊತ್ತಿಗೆ ಕೆನೆಯುತ್ತಿರುವ ಬಿಳುಪು-ಬಿಳುಪು ಸುಂದರ ಅಶ್ವ ದ್ವಯವನ್ನು ಯಾರೋ ರಾಜಪುರುಷರು ತಂದು ಒಪ್ಪಿಸಿದರು. ಅಬ್ಬ! ಯಜಮಾನರ ಶಕ್ತಿ ಎಷ್ಟು! ರಾತ್ರಿ ಕಳೆದು ಬೆಳಗಾಗುವದರೊಳಗೆ ಎಷ್ಟು ಭಾರಿ ಸಿದ್ಧತೆ ಮಾಡಿಬಿಟ್ಟಿದ್ದಾರೆ!
ಬಂದ ಋಷಿಗಳು ಕುದುರೆಗಳ ಲಗಾಮು, ಕಣ್ಣಪಟ್ಟಿ, ಬೆನ್ನಮೇಲಿದ್ದ ಜೀನುಗಳನ್ನು ತೆಗೆದು ಮೈಯ್ಯೆಲ್ಲ ನೇವರಿಸಿ, ಹಣೆಗೆ ಕುಂಕುಮ, ಅರಿಶಿನ, ಅಕ್ಷತೆಗಳನ್ನಿಟ್ಟು, ಬಾಯಿಗೆ ಬೆಲ್ಲ ಕೊಟ್ಟು, ಯಙ್ಞಕುಂಡದ ಮುಂದೆ ಬರಲು ಪ್ರಾರ್ಥಿಸಿದರು. ಸಾಕಿದ ಪ್ರಾಣಿಯಂತೆ ಅವು ಬಂದು ಅಗ್ನಿಯ ಮುಂದೆ ನಿಲ್ಲುವುದೇ?
"ಭೋ ಅಶ್ವಿನಿ ಕುಮಾರರೇ, ನಿಮ್ಮ ಜನ್ಮವೇ ಅಸಾಧಾರಣ. ನಿಮ್ಮ ತಂದೆ ಸೂರ್ಯ ದೇವನ ಬಿಸಿ ತಾಳಲಾರದೇ, ನಿಮ್ಮ ತಾಯಿ ಸೌಙ್ಞಾ ದೇವಿ ಉತ್ತರ ಕುರುವಿನಲ್ಲಿ ಕುದುರೆಯ ವೇಷದಲ್ಲಿದ್ದಾಗ, ನಿಮ್ಮ ತಂದೆಯೂ ಅಶ್ವವಾಗಿ ಬಂದು ಹೆಂಡತಿಯನ್ನು ಕೂಡಿದ್ದರಿಂದ ಜನಿಸಿದ ವಿಶೇಷ ದೇವತೆಗಳು ನೀವು. ನಿಮಗೆ ಸ್ವಾಗತ. "
"ಜವ್ವನಿಗ ಸೂರ್ಯ ಪುತ್ರರೇ , ಶರ್ಯಾತಿ ಮಹಾರಾಜನ ಮಗಳು ಅಙ್ಞಾನದಿಂದ ಹುತ್ತದಲ್ಲಿ ಹೊಳೆಯುವ ಮಣಿಗಳಿಗೆ ಕಡ್ಡಿ ಚುಚ್ಚಿದ್ದರಿಂದ ಒಳಗಿದ್ದ ಚ್ಯವನ ಮಹರ್ಷಿ ಕುರುಡಾಗಿ ಆತನ ಶಾಪದಿಂದ ಸೈನ್ಯಕ್ಕೆಲ್ಲ ಕಡು - ಕಷ್ಟ ಉಂಟಾದಾಗ , ಬಾಧೆ ತಪ್ಪಿಸಲು ಅಪ್ಪ ಮಗಳಾದ ಸುಕನ್ಯೆಯನ್ನು ಮುದುಕ ಚವನನಿಗೇ ಕೊಟ್ಟು ಮದುವೆ ಮಾಡಿದಾಗ, ಸುಕನ್ಯೆಯ ಪ್ರಾರ್ಥನೆಯಂತೆ ಚ್ಯವನರಿಗೆ ಯೌವ್ವನವಿತ್ತ ದೇವ ವೈದ್ಯರೇ, ಆ ಚ್ಯವನ ಮಹರ್ಷಿಗಳ ಮೊಮ್ಮಗನಾದ ನಾನು ಆಹ್ವಾನಿಸುತ್ತಿದ್ದೇನೆ ಈ ಯಙ್ಞಕ್ಕೆ. ನಿಮಗೆ ಸ್ವಾಗತ. "
"ಹಂಸ ಕಟ್ಟಿದ ಸ್ವರ್ಣ ರಥದಲ್ಲಿ ಸಂಚರಿಸುವ ಯುಗಳ ದೇವತೆಗಳೇ, ನಿಮ್ಮ ಪ್ರಿಯ ರಾಜ ಮೋದು, ಯುದ್ಧದಲ್ಲಿ ಸೋತಾಗ ನೂರು ದಿವ್ಯಾಶ್ವಗಳನ್ನಿತ್ತು ಅವನ ಜಯಕ್ಕೆ ಕಾರಣರಾದ ಅತಿ ಕಿರಿ ವಯಸ್ಸಿನ ಜೋಡಿ ದೇವತೆಗಳೇ, ಈ ಯಾಗಶಾಲೆಗೆ ಸ್ವಾಗತ."
"ಸುರದೇವತೆಗಳಾದರೂ ಆಗಾಗ ಭೂಮಿಯಲ್ಲಿ ನೇಗಿಲಿನಿಂದ ಉಳುವ ಕೃಷಿ ಅಭಿಮಾನಿ ದೇವತಾ ಯುಗ್ಮವೇ, ರೇಭನ ಕೈಕಾಲುಗಳನ್ನು ಕಡಿದು ಹಾಳು ಬಾವಿಯಲ್ಲಿ ರಾಕ್ಷಸರು ಎಸೆದಾಗ, ಅವನ ಕೈಕಾಲುಗಳ ಶಸ್ತ್ರಚಿಕಿತ್ಸೆ ಮಾಡಿ ಜೋಡಿಸಿದ ಮಹಾನ್ ವೈದ್ಯರಿಗೆ ನಾನು ಔರ್ವ ಪುತ್ರ ಋಚೀಕ ಸ್ವಾಗತ ಗೀತೆ ಹಾಡುತ್ತಿರುವೆ. "
ಮರುಕ್ಷಣವೇ ನಲವತ್ತೆಂಟು ಋಗ್ವೇದೀ ಹೋತೃ ಶಿಷ್ಯರು, ಅಶ್ವಿನ್ಯಾತ್ಮಕ ಋಚೆಗಳನ್ನು ಸುಶ್ರಾವ್ಯವಾಗಿ ಪಠಿಸಿದರು. ಅದು ಮುಗಿಯುತ್ತಿದ್ದಂತೆಯೇ ಇಬ್ಬರು ತೇಜಸ್ವೀ ಉದ್ಗಾತೃ ವಿದ್ಯಾರ್ಥಿಗಳು ಸಾಮಗಾನ ಹಾಡಿದರು. ಋಚೀಕರು ಸ್ವರ್ಣ ಪುಷ್ಪಗಳನ್ನು ಅರ್ಪಿಸುತ್ತಿದ್ದಂತೆಯೇ ತೇಜಿಗಳಲ್ಲಿ ಏನೋ ಬದಲಾವಣೆ. ಏನೋ ಒಂದು ಕಾಂತಿ ಅವುಗಳಿಗೆ ಬಂದು ಸೇರಿದಂತೆ.
ಆವಾಹಿತರಾದ ಅಶ್ವಿನಿ ದೇವತೆಗಳು, " ಭೋ ಋಚೀಕ! ನಿನಗೂ ಅಶ್ವಪ್ರಪಂಚಕ್ಕೂ ಏನೋ ವಿಶಿಷ್ಟವಾದ ನಂಟು! ತುಂಬುರನ ಅನುಗ್ರಹವೆಂದರೇನು!! ಅಶ್ವಲೋಕದಿಂದ ಅಶ್ವಸಂಪತ್ತನ್ನು ಗಳಿಸಿದ್ದೆಂತು!!! ಇದೀಗ ನಮ್ಮನ್ನು ಆಹ್ವಾನಿಸಿರುವುದೇನು!!? ಈ ತೇಜಿಗಳಲ್ಲಿ ಇದ್ದು ನಿನ್ನ ಈ ನಲವತ್ತೆಂಟು ದಿನಗಳ ಯಙ್ಞವನ್ನು ವೀಕ್ಷಿಸುತ್ತೇವೆ. ರಕ್ತಚಂದನ, ಮತ್ತಿ, ಅರ್ಕ, ಹಾಗೂ ಸಂಜೀವಿನಿ ಪುಷ್ಪಗಳನ್ನು ಯಾಗ ಮಾಡು. ನಿನ್ನ ಅಪೇಕ್ಷೆಯಂತೆ ಚಂದನದಿಂದ ದಿವ್ಯ ರಕ್ತ, ಮತ್ತಿಯಿಂದ ಮೂಳೆಗಳ ಬಲ, ಅರ್ಕದಿಂದ ತೇಜಸ್ಸು, ಸಂಜೀವಿನಿಯಿಂದ ಚೈತನ್ಯ ಸಿಕ್ಕುತ್ತದೆ. ಶುಭಮಸ್ತು." "ಏನು? ಕುದುರೆಗಳು ಮಾತನಾಡುವುದೆಂದರೇನು? ಅಸ್ಖಲಿತ ವಾಣಿಯಿಂದ ಜೋಡಿ ಸ್ವರ ಆದೇಶಿಸುವುದೆಂದರೇನು? "ನಾನೂ ಹಾಗೂ ಆಶ್ರಮದ ವಟುಗಳು ಅವಾಕ್ಕಾಗಿ ನಿಂತುಬಿಟ್ಟೆವು.
-ಡಾ. ಪಾವಗಡ ಪ್ರಕಾಶ್ ರಾವ್
pavagadaprakashrao@gmail.com