ಅಂಕಣಗಳು

'ಕ್ಷಮಿಸಿ, ಕ್ಷಮಿಸಿ. ಅಮ್ಮ ಹೇಳಿದ್ದು ಕೇಳಿ ಇಂತಹ ತಪ್ಪು ಮಾಡಿಬಿಟ್ಟೆ ಪೊರಪಾಟಾಗಿಹೋಯಿತು'

Dr. Pavagada Prakash Rao
ಏನು ಆತುರ! ಏನು ಸಿದ್ಧತೆ! ದಿನಬೆಳಗಾದರೆ ಸಂಪೂರ್ಣ ಕೆಲಸದಲ್ಲಿ ಲೀನ. ಕೆಲಸ, ಕೆಲಸ, ಕೆಲಸ. ದಿನನಿತ್ಯ ಮಾಧ್ಯಾನಿಃಕೆಯಾಗಬೇಕು; ಅಭಿಜಿನ್ ಮುಹೂರ್ತಕ್ಕೆ ಸರಿಯಾಗಿ ಪೂರ್ಣಾಹುತಿ. ನಂತರ ಶ್ವೇತಾಶ್ವಗಳಿಗೆ ವಿಶೇಷ ಭಕ್ಷ್ಯಗಳ ಅರ್ಪಣೆ. ಅವುಗಳಿಂದ ಸ್ವೀಕಾರ. ನಂತರ ಹುರುಳಿ, ನೀರು, ಇತ್ಯಾದಿ. ದಿನ ಕಳೆದಂತೆ ಯಜಮಾನರಲ್ಲಿ ಉತ್ಸಾಹ, ಪ್ರಕಾಶ ಇಡೀ ದೇಹದಲ್ಲಿ! ಹಾಗೂ, ಹೀಗೂ ನಲವತ್ತೆಂಟು ದಿನಗಳು ಮುಗಿದೇ ಹೋದುವು. ಅಂದಿನದು ಮಹಾ ಪೂರ್ಣಾಹುತಿ. ತಪ್ಪಲೆ ತುಂಬಿದ್ದ ತುಪ್ಪವೆಲ್ಲ ಕರಗಿ ಸುರಿಯಿತು ಯಙ್ಞಕುಂಡಕ್ಕೆ. ಧೂಮ ರಹಿತ ಅಗ್ನಿ ಜ್ವಾಲೆಗಳು. ಎರಡಾಳುದ್ದ ಎದ್ದು ನರ್ತಿಸತೊಡಗಿದವು. ಎರಡೂ ಕುಂಡಗಳಲ್ಲಿ ಜ್ವಾಲೆಗಳೆಲ್ಲ ಒತ್ತರಿಸಿ ಈರ್ವರು ರಾಜಕುಮಾರರಂತೆ ಕಿರೀಟ, ಭುಜಕಿರೀಟ, ಆಕೃತಿಯ ಮೇಲೆ ಹೊದ್ದ ಶಲ್ಯೆ, ಉಟ್ಟ ಕಚ್ಚೆ.... ಈ ಎರಡೂ ಯಾರೋ ಬೆಂಕಿ ಮನುಷ್ಯರು, ಅಲ್ಲಲ್ಲ, ಅಗ್ನಿದೇವತೆಗಳಿಬ್ಬರ ಚಹರೆಯಂತೆ ನಿಮಿಷ ಕಾಲ ತಟಸ್ಥವಾಗಿ ಅಗ್ನಿ ಮಧ್ಯೆ ಕಂಡೇ ಬಿಟ್ಟರು. ಎಲ್ಲರಿಗೂ ದಿಗ್ಭ್ರಮೆ, ಎಲ್ಲರಿಗೂ ಧನ್ಯತೆ, ಎಲ್ಲರಿಂದ ಆ ಆಕೃತಿಗಳಿಗೆ ಸಾಷ್ಟಾಂಗ ನಮಸ್ಕಾರ. 
"ಋಚೀಕ", ಅಶ್ವದಿಂದ ಗಡುಸು, ಗಭೀರ, ಸ್ಪಷ್ಟ ಕರೆ. "ಋಚೀಕ, ಬಾ! ನಮ್ಮ ಮಧ್ಯ ಬಂದು ನಿಲ್ಲು. "ಯಜಮಾನರು ಲಗುಬಗೆಯಿಂದ ತೇಜಿಗಳ ಮಧ್ಯ ಹೋಗಿ ನಿಂತರು. ಅಶ್ವಗಳು ಒತ್ತಿ ನಿಲ್ಲುತ್ತಿದ್ದಂತೆಯೇ ಮೂವರೂ ಮಾಯ. ಓಹ್! ಕಾಣದಾಗಿ ಬಿಟ್ಟರು. ಎಲ್ಲರಿಗೂ ಅಯೋಮಯ. ಮುಂದೇನೆಂದು ಗೊತ್ತಿಲ್ಲ. ಹಾಗೆ ಏನು ಮಾಡಬೇಕೆಂದೂ ಗೊತ್ತಿಲ್ಲ. ಯಙ್ಞ ಮುಕ್ತಾಯವಾಯಿತೋ? ಇನ್ನೂ ಇದೆಯೋ? ಮಾಯವಾದದ್ದು ಮತ್ತೆ ಬರುವದೋ? ಇಲ್ಲವೋ? ಒಂದು ಘಂಟೆಯಾದರೂ ಏನೂ ಕಾಣದಾದಾಗ ಎಲ್ಲರಿಗೂ ಆತಂಕ. ಋಚೀಕರ ಸ್ನೇಹೀತರಾಗಲೀ, ಬೇರೆಯ ಪರಿಚಿತ ಋಷಿಗಳಾಗಲಿ, ಯಾರೂ ಇಲ್ಲ. ಯಾರನ್ನು ಕೇಳಬೇಕೆಂದು ಗೊತ್ತಾಗುತ್ತಿಲ್ಲ. ನನ್ನೆಡೆಗೆ ಎಲ್ಲರೂ ನೋಡಿದರು, ಅವರಿಗಿನ್ನ ಹೆಚ್ಚು ನನಗೇ ಗೊತ್ತಿರಲಿಲ್ಲ. ಏನೂ ಅರಿಯದೇ, ಎಲ್ಲರಿಗೂ ಊಟಕ್ಕೆ ಬಡಿಸುವುದೋ ಎಂಬುದೂ ಗೊತ್ತಾಗದೇ, ಸಂದಿಗ್ಧದಲ್ಲಿಯೇ ಇದ್ದಾಗ ಇದ್ದಕ್ಕಿದ್ದಂತೆಯೇ ಫಕ್ಕನೆ ಆಶ್ರಮ ಬೆಳಗಿತು. ಮಾಯವಾಗಿದ್ದ ಅಶ್ವ ದ್ವಯ ಮಧ್ಯದಲ್ಲಿ ತರುಣ ತೇಜಸ್ವಿ ಹುಡುಗ-ವಟು! ಮುಖ ಬಿಟ್ಟರೆ ದೇಹದಿಂದ ಅವನನ್ನು ಋಚಿಕನೆಂದು ಗುರ್ತಿಸಲು ಸಾಧ್ಯವೇ ಇಲ್ಲ. ಕಣಕಾಲ ಖಂಡಗಳು ಉಬ್ಬಿವೆ. ಸಣ್ಣ ಸೊಂಟದ ಮೇಲೆ ವಿಶಾಲವಾದ ಎದೆ. ಪುಷ್ಟ ಕೈಗಳು. ವಜ್ರ ಶರೀರ. ಇಡೀ ಶರೀರದ ಖಚಿತ ಕೆತ್ತನೆ. ಆ ದೃಢ ವಿಗ್ರಹ ಕಂಡು ನನಗೆ ನಾಚಿಕೆಯೋ ನಾಚಿಕೆ. 
ಎಲ್ಲರಿಗೂ ಊಟ ನೀಡಿದ್ದು, ಉಪಚರಿಸಿದ್ದು, ಕೊನೆಗೆ ಗಂಡನಿಗೂ ಊಟಕ್ಕೆ ಬಡಿಸಿದ್ದು, ಅನಂತರ ತಾನು ಉಂಡದ್ದು, ಕಾಲ ಸರಿದದ್ದು, ಸಂಜೆಯ ಅಗ್ನಿ ಹೋತ್ರ ಮುಗಿದು ಶಿಷ್ಯರೆಲ್ಲ ವ್ಯಾಯಾಮಕ್ಕೆ ಹೊರಟಿದ್ದು, ಆಗ ಇವರು ಹತ್ತಿರ ಬಂದಿದ್ದು, ಎಲ್ಲ ಎಲ್ಲ ತನಗೆ ಅಯೋಮಯ. ಕೈ ಹಿಡಿದ ಗಂಡ ಬಾಗಿ ಗಲ್ಲ ಎತ್ತಿ ಕೇಳಿದ, "ತೃಪ್ತಿಯೋ? "ಏನು ಹೇಳಲಿ, ಏನು ಹೇಳಲಿ? ಬಾಯಿಗೆ ಬರುತ್ತಿಲ್ಲ. ಹೌದು-ಹೌದು-ಸಂತೋಷ-ಖುಶಿ-ಸುಖ-ಸಾಕು-ಸಾಕು, ಮಾರನೇಯ ಬೆಳಗಾಗುವ ಹೊತ್ತಿಗೆ ಎಷ್ಟು ಬಾರಿ ಅಪ್ರಯತ್ನವಾಗಿ ಈ ಪದಗಳೆಲ್ಲ ಹೊರಬರುತ್ತಿತ್ತೋ ಲೆಕ್ಕವಿಟ್ಟವರಾರು?
ತನ್ನ ಬದುಕೇ ಈಗ ಬದಲಾಯಿತು. ಯುವ ಗಂಡ. ಪ್ರೀತಿಸುವ ಪತಿ. ಬೇಕೆಂದದ್ದನ್ನು ಕ್ಷಣ ಮಾತ್ರದಲ್ಲಿ ಪೂರೈಸುತ್ತಿರುವ ಪುರುಷ. ಮದುವೆಯಾದಂದಿನಿಂದ ಕಳೆದುಕೊಂಡಿದ್ದೆನೆಂದು ಕೊಂಡಿದ್ದ, ಸುಖ ಅದರ ಎರಡು ಪಟ್ಟು-ಮೂರು ಪಟ್ಟು ಅಲ್ಲ, ಇಪ್ಪತ್ತು-ಮೂವತ್ತು ಪಟ್ಟು ಕೊಡುತ್ತಲೇ ಇರುವ ವಲ್ಲಭ...... ಗಾಳಿಯಲ್ಲಿ ತೇಲುತ್ತಿದ್ದವಳನ್ನು ನೆಲಕ್ಕೆ ಇಳಿಸಿದ್ದು ಅಮ್ಮನ ವೇದನೆ, ಅಮ್ಮನ ಹತಾಶೆ, ಅಮ್ಮನ ಸಲಹೆ. 
" ಸತ್ಯ, ನೀನು ಹೋದಂದಿನಿಂದ ಅರಮನೆ ಬಿಕೋ ಎನ್ನಿಸುತ್ತಿದೆ. ಎಲ್ಲ ಖಾಲಿ-ಖಾಲಿ. ಯಾವುದರಲ್ಲಿಯೂ ಆಸಕ್ತಿಯಿಲ್ಲ. ಯಾವಾಗಲೂ ನಿನ್ನದೇ ರೂಪ, ನಿನ್ನದೇ ಓಡಾಟ, ನಿನ್ನದೇ ಮಾತು. ನಾವಿಬ್ಬರೇ ಅರಮನೆಯಲ್ಲಿ. ನೂರಾರು ದಾಸ- ದಾಸಿಯರಿದ್ದರೂ ಒಂಟಿತನ ಬಾಧಿಸುತ್ತಿದೆ. ನೀನು ಬಯಸಿದ್ದ ಗಂಡನನ್ನು ನೀನು ಪಡೆದು ಸುಖದಲ್ಲಿ ಇರುವುದು ಸಂತೋಷವೇ. ಅದು ಇನ್ನೂ ಹೆಚ್ಚುವಂತೆ, ನಮಗೂ ಬದುಕಿನಲ್ಲಿ ಆಸಕ್ತಿ ಮೂಡುವಂತೆ, ನಿನ್ನ ಯಜಮಾನರು ಏನಾದರೂ ಮಂತ್ರ ಹಾಕಿ, ನಿನಗೂ, ನನಗೂ ಇಬ್ಬರಿಗೂ ಸಂತಾನವಾಗುವಂತೆ; ಗಂಡು ಮಕ್ಕಳಾಗುವಂತೆ ಪವಾಡ ಮಾಡಬಾರದೆ?"
ಅಮ್ಮನ ಬಯಕೆಯನ್ನು ಇವರಲ್ಲಿ ಅರುಹಿದಾಗ, "ಮಂತ್ರಕ್ಕೆ ಶಕ್ತಿಯಿದೆಯೆಂದೂ, ಅದನ್ನು ಬಳಸುವ ವಿಧಾನ ನನಗೆ ಗೊತ್ತೆಂದೂ, ಕಂಡ ಕಂಡದ್ದಕ್ಕೆಲ್ಲ ಮಂತ್ರ ಹಾಕುವುದು ಸರಿಯಲ್ಲ. ನಮ್ಮ ಪ್ರಯತ್ನಗಳು ಯಾವುದೂ ಕೆಲಸ ಮಾಡದಾಗ, ದೈವವನ್ನು ಪ್ರಾರ್ಥಿಸಬೇಕೇ ವಿನಃ, ಎಲ್ಲದಕ್ಕೂ ದೇವರ ಮುಂದೆ ಕೈಯೊಡ್ಡುವುದು ನನ್ನ ಮತವಲ್ಲ. ಮಕ್ಕಳು ಬೇಕಿದ್ದರೆ ಒಂದು, ಗಂಡ - ಹೆಂಡತಿ ಅದಕ್ಕಾಗಿ ಯತ್ನಿಸಬೇಕು, ಎರಡು ಅವಶ್ಯವೆನಿಸಿದರೆ ಬಲವರ್ಧನೆಗೆ, ವೀರ್ಯವರ್ಧನೆಗೆ ಔಷಧವನ್ನು ಸೇವಿಸಬೇಕು, ಮೂರು ಅದಕ್ಕಾಗಿ ಚರುವನ್ನು ಸಿದ್ಧ ಪಡಿಸಬೇಕು, ನಾಲಕ್ಕು ಹಾಗೆ ತಯಾರಿಸುವಾಗ ಯಾರಿಗೆ, ಯಾವ ಹಿನ್ನೆಲೆಗೆ, ಯಾವ ವಿನಿಯೋಗಕ್ಕೆ ಯೋಗ್ಯವೋ, ಅಂತಹ ದೈವವನ್ನು ಜಪಿಸಬೇಕು. ಈ ದಿವ್ಯ ಚರುವನ್ನು ಸೇವಿಸಿದರೆ ಗಂಡ ಸ್ಥಾಪಿಸಿದ ಮೂಲ ಜೀವ ಕಣಕ್ಕೆ ಹೆಂಡತಿ ಸೇವಿಸಿದ ಚರು ಪ್ರಭಾವದಿಂದ ಚರ್ಮ, ರಕ್ತ, ಮೂಳೆ, ಮಜ್ಜೆ, ಇಂದ್ರಿಯಗಳೆಲ್ಲ ಒಪ್ಪವಾಗಿ ರೂಪಿಸಿ ಶಿಶುವಿನ ಉತ್ಪತ್ತಿಯಾಗುತ್ತದೆ. ಇದನ್ನೇ ಸಾಂಕೇತಿಕವಾಗಿ "ಪ್ರಕೃತಿ-ಪುರುಷ ಮಿಲನ" ಎನ್ನುತ್ತಾರೆ. ಮೇಲಿನಿಂದ, ಎಂದರೆ ತಲೆ ಬುರುಡೆಯ ಮಧ್ಯದ ಬ್ರಹ್ಮ ರಂಧ್ರದಿಂದ ಪ್ರಾಣಜ್ಯೋತಿಯೊಂದು ಪ್ರವಹಿಸಿ ಪುರುಷನ ಜೀವ ಕಣಕ್ಕೆ ಜೀವಾತ್ಮ ಸೇರ್ಪಡೆಯಾಗಿ ಹೆಂಡತಿಯಿಂದ ಸಹಜವಾಗಿ ಬಂದ ಕಾಂತಿಯೂ ಸೇರಿ ಮಗುವಿನ ಮೊದಲ ಜೀವ ಕೋಶ ಹುಟ್ಟಿಬಿಡುತ್ತದೆ. ಇದೆಲ್ಲ ಎಲ್ಲ ಕಾಲದಲ್ಲೂ,  ಎಲ್ಲ ಜೀವ ಕೋಟಿಯಲ್ಲೂ ನಡೆಯುವ ಅವ್ಯಾಹತ ಕ್ರಿಯೆ . ಇದಕ್ಕೆ ನಾನು ವೇಗ ವರ್ಧಕವೆಂಬಂತೆ ಚರುವನ್ನು , ಎಂದರೆ ಬಲವರ್ಧಕ ಔಷಧವನ್ನೂ ಕೊಡುತ್ತೇನೆ . ಅದನ್ನು ನೀನು , ಹಾಗು ಅತ್ತೆಯವರು ಸ್ವೀಕರಿಸಿ."
ಬಹು ದೊಡ್ಡ ಭಾಷಣವನ್ನೇ ಮಾಡಿ ಅಂದು ಸಂಜೆ ಎರಡು ದೊನ್ನೆಗಳಲ್ಲಿ ಯಾವುದೋ ಹಸುರು ದ್ರವ ತುಂಬಿ ನನಗಿತ್ತು ಹೇಳಿದರು; " ತಗೊ. ಬಲಗೈಲಿ ಇರುವುದನ್ನು ನೀನು ಕುಡಿ, ಎಡಗೈಲಿರುವುದು ನಿಮ್ಮ ಅಮ್ಮನಿಗೆ ಕೊಡು. "
ಅಂದು ರಾತ್ರಿ ಅವರ ಹತ್ತಿರ ಬಂದಾಗ ಕೊಂಚ ಸಂಕೋಚವಿತ್ತು; ಭಯವೂ ಇತ್ತು. ಆದರೂ ಏನೂ ಆಗಿಲ್ಲವೆಂಬಂತೆ ನಟಿಸುತ್ತ ಪಕ್ಕದಲ್ಲಿ ಮಲಗಿದೆ. ಯಜಮಾನರು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಪಕ್ಕಕ್ಕೆ ಹೊರಳಿದರು. "ಅಂತೂ ಹೆಣ್ಣು ಬುದ್ಧಿ ತೋರಿಸಿಬಿಟ್ಟೆ. ನನ್ನ ಮಾತನ್ನು ಮೀರಿಬಿಟ್ಟೆ. "ಸಿಟ್ಟಿಲ್ಲ, ಆದರೆ ಬೇಸರದ ಮಾತು. "ಒಂದು ಮಾತನ್ನು ನನಗೆ ಕೇಳಬಾರದಿತ್ತೆ? ಏಕೆ ಹೀಗೆ ಮಾಡಿದೆ? "ಏನು ಹೇಳಲಿ? ಅಮ್ಮ ಹಾಗೆ ಹೇಳಿದಾಗ ಮೊದಲು ನನಗೆ ಇಷ್ಟವಾಗಲಿಲ್ಲ. ಆದರೂ ಅಮ್ಮ.. " ಎರಡೂ ಔಷಧಗಳೇ ತಾನೆ? ಆದರೂ ತನ್ನ ಹೆಂಡತಿಗೆ ಅತ್ತೆಗಿನ್ನ ಹೆಚ್ಚು ಪ್ರಭಾವಿಯಾದ ಔಷದಿ ಕೊಟ್ಟಿರುತ್ತಾರೆ. ಈಗ ನಿನ್ನದು ನನಗೆ ಕೊಟ್ಟು ನನ್ನದು ನೀನು ತೆಗೆದುಕೊ. ಏನಾಗುತ್ತದೆ? ಮಗು ಹುಟ್ಟಿಯೇ ಹುಟ್ಟುತ್ತದೆ. ಹುಟ್ಟಿದ ಮೇಲೆ ಅಕಸ್ಮಾತ್ ನನ್ನ ಮಗನಿಗಿನ್ನ ನಿನ್ನ ಕುಮಾರ ಯಾವುದೋ ಅಶಕ್ತಿಯ ಅಂಗವನ್ನು ಹೊಂದಿದ್ದರೆ, ಅದನ್ನು ನಿನ್ನ ಗಂಡ ಸರಿಪಡಿಸಿಬಿಡುತ್ತಾನೆ, ಅಲ್ಲವೇ? "ಅಮ್ಮನ ಮಾತು ಆಗ ಏಕೆ ಸರಿ ಅನಿಸಿತೋ ಗೊತ್ತಿಲ್ಲ, ಹಾಗೇ ಮಾಡಿಬಿಟ್ಟಳು. ಗಂಡನಿಗಿರುವ ಅದ್ಭುತ ಅಸಾಧಾರಣ ಶಕ್ತಿಗಳ ಪರಿಚಯವಿದ್ದ ನನಗೆ ನಾವು ಮಾಡಿದ ಅದಲು-ಬದಲು ಗೊತ್ತಾಗುವುದಿಲ್ಲವೆಂದು ಏಕೆ ಅಂದುಕೊಂಡೆನೋ! ತಾನೆಷ್ಟು ಮೂರ್ಖಳು ಎಂದು ಈಗ ಯಜಮಾನರ ಮಾತು ಕೇಳಿದಾಗ ಅನಿಸುತ್ತಿದೆ. "ಕ್ಷಮಿಸಿ, ಕ್ಷಮಿಸಿ! ಅಮ್ಮ ಹೇಳಿದ್ದು ಕೇಳಿ ಇಂತಹ ತಪ್ಪು ಮಾಡಿಬಿಟ್ಟೆ. ಪೊರಪಾಟಾಗಿಹೋಯಿತು."... (ಮುಂದುವರೆಯುತ್ತದೆ...)
-ಡಾ. ಪಾವಗಡ ಪ್ರಕಾಶ್ ರಾವ್
pavagadaprakashrao@gmail.com
SCROLL FOR NEXT