ಮುಂದಿನ ದಶಕಗಳಲ್ಲಿ ಹೂಡಿಕೆಗೆ ಯಾವ ದೇಶ ಬೆಸ್ಟ್ ?
ಹಿಂದೊಂದು ಕಾಲವಿತ್ತು ಒಬ್ಬ ವ್ಯಕ್ತಿ ಒಂದು ಸಂಸ್ಥೆಗೆ ಕೆಲಸಕ್ಕೆ 22 ಅಥವಾ 25 ರ ಹರಯದಲ್ಲಿ ಸೇರಿದರೆ ಮುಗಿಯಿತು ಆತ ಆ ಕಂಪನಿಯಿಂದ ನಿವೃತ್ತನಾಗಿ ಹೊರಬರುತ್ತಿದ್ದ. ಸಂಸ್ಥೆ ಖಾಸಗಿಯಾಗಿದ್ದರೂ ಈ ರೀತಿಯೇ ನೆಡೆಯುತಿತ್ತು.
ಕೆಲಸ ಬದಲಾಯಿಸುವುದು ಅಪರಾಧ ಎನ್ನುವಂತೆ ಕಾಣಲಾಗುತ್ತಿತ್ತು. ಕೆಲಸ ಕಳೆದುಕೊಂಡರೆ ಅದು ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಕಳಂಕ ಎನ್ನುವಂತೆ ಬಿಂಬಿಸಲಾಗುತಿತ್ತು. ಆ ದಿನಗಳು ಸದ್ದಿಲ್ಲದೇ ನೇಪಥ್ಯಕ್ಕೆ ಸರಿದಿವೆ. ಬದಲಾವಣೆಯ ವೇಗ ಎಷ್ಟಿದೆಯೆಂದರೆ ಇನ್ನೊಬ್ಬರಿಗೆ ಕೆಲಸವಿದೆಯೇ ಇಲ್ಲವೇ ಎನ್ನುವ ಮಾತನಾಡಲು ಕೂಡ ಜನರ ಬಳಿ ವೇಳೆಯಿಲ್ಲ. ಇವು ಆ ಪಕ್ಕಕ್ಕಿರಲಿ ಎಲ್ಲಕ್ಕೂ ಮಿಗಿಲಾಗಿ ಬದುಕಿನಲ್ಲಿ ಬದಲಾದ ವಿತ್ತ ಪ್ರಪಂಚದ ವ್ಯಾಖ್ಯೆ ಮಾತ್ರ ಆಶ್ಚರ್ಯ ಹುಟ್ಟಿಸುವಂತದ್ದು!. ಸಾಮಾನ್ಯ ಮನುಷ್ಯ ಜೀವನದ ಸಂಧ್ಯಾಕಾಲದಲ್ಲಿ ಮನೆ ಕಟ್ಟುವುದು ಮಕ್ಕಳ ಮದುವೆ ಮಾಡುವುದು ಆತ ಜೀವನದಲ್ಲಿ ಮಾಡುತಿದ್ದ ಅತಿ ದೊಡ್ಡ ಖರ್ಚುಗಳು. ಅದಕ್ಕೆ ಬೇಕಾದ ಹಣವನ್ನ ಬ್ಯಾಂಕಿನಲ್ಲಿ ಉಳಿಸಿ, ರಕ್ಷಿಸಿ ಇಟ್ಟರೆ ಅಲ್ಲಿಗೆ ಮುಗಿಯಿತು ಎನ್ನುವಂತಿತ್ತು. ಇದೀಗ ಎಲ್ಲಾ ಉಲ್ಟಾ! ನಾಳಿನ ಬದುಕಿನ ಭರವಸೆ ಏನಿಲ್ಲ. ಹೀಗಾಗಿ ಬೇಕೋ ಬೇಡವೋ ಜನ ಸಾಮಾನ್ಯ ಕೂಡ ಉತ್ತಮ ಹೂಡಿಕೆಯ ಬಗ್ಗೆ ಸದಾ ಗಮನ ಹರಿಸಲೇಬೇಕು. ಕೇವಲ ಭಾರತದಲ್ಲಿ ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದಷ್ಟೆ ಅಲ್ಲ ಜಗತ್ತಿನ ವಿತ್ತ ಪ್ರಪಂಚದ ಆಗು ಹೋಗು ಎಲ್ಲಾ ತಿಳಿದಿರಬೇಕಾದ ಅವಶ್ಯಕೆತೆಯಿದೆ. ಇವತ್ತು ಜಗತ್ತಿನ ದೇಶಗಳ ನಡುವಿನ ಅವಲಂಬನೆ ಇದಕ್ಕೆ ಬಹು ದೊಡ್ಡ ಕಾರಣ.
ಇಂದಿನ ಹಣಕ್ಲಾಸು ಮುಂಬರುವ ದಶಕಗಳಲ್ಲಿ ವಿತ್ತ ಪ್ರಪಂಚದಲ್ಲಾಗುವ ಬದಲಾವಣೆಗಳ ಪಟ್ಟಿ ಮಾಡುವ ಪ್ರಯತ್ನದಲ್ಲಿದೆ. ಇವತ್ತಿಗೆ ದಿಗ್ಗಜ ಎನಿಸಿಕೊಂಡ ದೇಶಗಳ ಸ್ಥಿತಿ ಜೊತೆಗೆ ಇಂದಿಗೆ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವ ದೇಶಗಳ ಭವಿಷ್ಯ ಕುರಿತು ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ ಆ ಮೂಲಕ ಎಲ್ಲಿ ಹೂಡಿಕೆ ಮಾಡುವುದು ಸೂಕ್ತ ಎನ್ನುವುದು ಕೂಡ ತಿಳಿದುಕೊಂಡ ಹಾಗೆ ಆಗುತ್ತದೆ.
- ಜಗತ್ತಿನ ವ್ಯಾಪಾರ ವಹಿವಾಟು ಅಥವಾ ವರ್ಲ್ಡ್ ಎಕಾನಮಿ ಸಂಖ್ಯೆಯಲ್ಲಿ 2049 ನೇ ಇಸವಿಯ ವೇಳೆಗೆ ದ್ವಿಗುಣವಾಗಲಿದೆ. ಅಂದರೆ ಇಂದಿನ ನಮ್ಮ ಒಟ್ಟು ಎಕಾನಾಮಿಯ ಮೊತ್ತ ನೂರು ರೂಪಾಯಿ ಎಂದು ಕೊಂಡರೆ ಅದು ಇನ್ನೂರು ಆಗಲಿದೆ.
- ಚೀನಾ ದೇಶ ಕೊಳ್ಳುವಿಕೆಯನ್ನ ಮಾನದಂಡ ಮಾಡಿ ದೇಶದ ಎಕಾನಮಿ ಅಳೆದರೆ ಅಮೇರಿಕಾ ದೇಶವನ್ನ ಆಗಲೇ ಹಿಂದಿಕ್ಕಿಯಾಗಿದೆ. 2030 ರ ವೇಳೆಗೆ ಯಾವ ಮಾನದಂಡದಿಂದ ಅಳೆದರೂ ಚೀನಾ ಜಗತ್ತಿನ ಪ್ರಥಮ ದೇಶವಾಗಿ ಹೊರಹೊಮ್ಮಲಿದೆ.
- 2050ರ ವೇಳೆಗೆ ಭಾರತ ಕೂಡ ಅಮೇರಿಕಾ ದೇಶವನ್ನ ಹಿಂದಿಕ್ಕಿ ಎರಡನೇ ಸ್ಥಾನ ಅಲಂಕರಿಸಲಿದೆ. ಟ್ರಂಪ್ ಭಾರತದತ್ತ ಅಷ್ಟೊಂದು ಒಲವು ತೋರಿಸುತ್ತಿರುವುದು ಭಾರತೀಯರ ಮೇಲಿನ ಪ್ರೀತಿಯಿಂದಲ್ಲ, ವೇಗವಾಗಿ ಪ್ರಗತಿ ಕಾಣುತ್ತಿರುವ ಭಾರತದ ಎಕಾನಮಿ ಆತನನ್ನ ಇತ್ತ ಸೆಳೆಯುತ್ತಿದೆ.
- ಇಂಡೋನೇಶಿಯಾ ದೇಶ, ಚೀನಾ, ಭಾರತ, ಅಮೇರಿಕಾ ನಂತರದ ಸ್ಥಾನ ಪಡೆಯಲಿದೆ. ಜಪಾನ್, ಜರ್ಮನಿ, ಫ್ರಾನ್ಸ್ ಗಳು ನೇಪಥ್ಯಕ್ಕೆ ಸೇರಲಿವೆ. ಮೊದಲ ಆರು ಸ್ಥಾನಗಳು ಅಮೇರಿಕಾ ಹೊರತು ಪಡಿಸಿದರೆ ಏಷ್ಯಾಗೆ ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
- ಅಮೇರಿಕಾ ಜೊತೆ ನಿರಂತರವಾಗಿ ಸೆಣಸಿ ವಿಶ್ವ ಮಾನ್ಯತೆ ಪಡೆದ ಪುಟ್ಟ ದೇಶ ವಿಯೆಟ್ನಾಮ್ 2050 ರ ವೇಳೆಗೆ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎನ್ನುವ ಹೆಗ್ಗಳಿಕೆ ಗಳಿಸಲಿದೆ ಜೊತೆಗೆ ಪ್ರಥಮ ಇಪ್ಪತ್ತು ರಾಷ್ಟ್ರಗಳ ಸಾಲಿನಲ್ಲಿ ತನ್ನ ಹೆಸರನ್ನ ದಾಖಲಿಸಲಿದೆ.
- ಜಗತ್ತಿನ ಒಟ್ಟು ಜಿಡಿಪಿಯಲ್ಲಿನ ಅನುದಾನದ ಪ್ರಮಾಣದಲ್ಲಿ ಯುರೋ ಜೋನ್ ಅನುದಾನ ತೀವ್ರ ಕುಸಿತ ಕಂಡು ಹತ್ತು ಪ್ರತಿಶತಕ್ಕೆ ಇಳಿಯಲಿದೆ. ಇಂದಿಗೆ ಪ್ರಸ್ತುತವಾಗಿದ್ದ ಹಲವು ದೇಶಗಳು ಹಿಂದಿನ ಸಿಟಿಗೆ ವರ್ಗಾವಣೆಗೊಂಡು ಪೋಲೆಂಡ್ ನಂತಹ ಹೆಚ್ಚು ಹೆಸರುವಾಸಿಯಲ್ಲದ ದೇಶಗಳು ಮುಂಚೂಣಿಗೆ ಬರಲಿವೆ.
- ಟರ್ಕಿ ಯಂತಹ ರಾಜಕೀಯ ಅಸ್ಥಿರತೆ (ಸದ್ಯಕ್ಕೆ) ಹೊಂದಿರವ ದೇಶ ಕೂಡ 2030 ರ ವೇಳೆಗೆ ಇಟಲಿಯಂತಹ ಎಕಾನಾಮಿಯನ್ನ ಹಿಂದಿಕ್ಕಲಿದೆ. ಟರ್ಕಿ ತನ್ನ ಸಮಾಜದಲ್ಲಿ ಇನ್ನಷ್ಟು ಸುಧಾರಣೆ ತಂದರೆ ಅದು ಇನ್ನೂ ಹೆಚ್ಚಿನ ಮೇಲ್ಮಟ್ಟಕ್ಕೆ ಹೋಗುವ ಅವಕಾಶವಿದೆ.
- ಆಫ್ರಿಕಾ ಹೂಡಿಕೆದಾರರ ಹೊಸ ಕಣ್ಮಣಿಯಾಗುವ ಎಲ್ಲಾ ಸಂಭವವಿದೆ. ಅದರಲ್ಲೂ ನೈಜೀರಿಯಾ ದೇಶ ಆರ್ಥಿಕವಾಗಿ ಹೆಚ್ಚು ಬಲಶಾಲಿಯಾಗಿ ಜಗತ್ತಿನ ಜಿಡಿಪಿಗೆ ತನ್ನ ಅನುದಾನ ನೀಡುವ ಸಾಧ್ಯತೆಯಿದೆ.
- ಲ್ಯಾಟಿನ್ ಅಮೇರಿಕಾದಲ್ಲಿ ಕೊಲಂಬಿಯಾ ದೇಶ ವೇಗವಾಗಿ ಬೆಳವಣಿಗೆ ಕಾಣಲಿದೆ.
ಹೂಡಿಕೆಗೆ ಏಷ್ಯಾದಲ್ಲಿ ಚೀನಾ, ಭಾರತ ಮತ್ತು ಇಂಡೋನೇಶಿಯಾ ಜೊತೆಗೆ ವಿಯೆಟ್ನಾಮ್ ಉತ್ತಮವಾಗಿವೆ. ಇಲ್ಲಿ ಹೂಡಿಕೆ ಮಾಡಿದ ಹಣ ವೃದ್ಧಿ ಕಾಣಲಿದೆ. ಯೂರೋಪಿನಲ್ಲಿ ಪೋಲೆಂಡ್ ದೇಶದಲ್ಲಿ ಹೂಡಿಕೆಗೆ ಒಳ್ಳೆಯ ಅವಕಾಶವಿದೆ. ಬ್ರಿಟನ್ ದೇಶ ಬ್ರೆಕ್ಸಿಟ್ ನಂತರ ತೆಗೆದು ಕೊಳ್ಳುವ ನಿರ್ಧಾರಗಳು ಆ ದೇಶದ ಭವಿಷ್ಯವನ್ನ ನಿರ್ಧರಿಸಲಿವೆ. ಅಮೇರಿಕಾ, ಜರ್ಮನಿ, ಫ್ರಾನ್ಸ್, ಸ್ವೀಡೆನ್, ನಾರ್ವೆ, ಸ್ವಿಸ್ ಒಳಗೊಂಡ ದೇಶಗಳು ಹೆಚ್ಚು ಕಡಿಮೆ ತಮ್ಮ ಇಂದಿನ ಜೀವನ ನೆಡೆಸಿಕೊಂಡು ಹೋಗಲಿದೆ. ಆದರೆ ಹೂಡಿಕೆಯ ದೃಷ್ಟಿಯಿಂದ ಹೆಚ್ಚು ಲಾಭದಾಯಕ ದೇಶಗಳಲ್ಲ.
ಗಳಿಸುವುದು ಒಂದು ಹಂತ ಜೀವನ ನೆಡೆಸಲು ಗಳಿಸುವುದು ಅವಶ್ಯಕ. ಉಳಿಸುವುದು ಗಳಿಕೆಗಿಂತ ಮುಖ್ಯ ನಾಳಿನ ಬದುಕಿಗೆ ಉಳಿಕೆ ಅತಿ ಮುಖ್ಯ ಆದರೆ ಗಳಿಕೆ-ಉಳಿಕೆಗಿಂತ ಹೂಡಿಕೆ ಅತ್ಯಂತ ಮುಖ್ಯ. ನಮ್ಮ ಹಣವನ್ನ ಸರಿಯಾಗಿ ಹೂಡಿಕೆ ಮಾಡಿದರೆ ಒಂದು ನೂರಾಗುವ ಸಾಧ್ಯತೆ ಇರುತ್ತದೆ. ಸರಿಯಾಗಿ ಹೂಡಿಕೆ ಮಾಡದೆ ಹೋದರೆ ಹೂಡಿಕೆ ಹಣವೂ ಗೋತಾ ಆಗುವ ಸಂಭವಗಳು ಉಂಟು. ಗಳಿಕೆ-ಉಳಿಕೆ ಜೊತೆಗೆ ಹೂಡಿಕೆಯ ಮೇಲೂ ಕಣ್ಣಿರಲಿ.