"ಏನು ರಾಜರೇ, ಕದ್ದ ಹಸುವಿನ ಮಾಂಸವನ್ನು ಸಂಸ್ಕರಿಸದೇ ದೈವಾರ್ಪಣ ಮಾಡದೇ ತಿಂದಿರಲ್ಲ, ಅದೀಗ ಪಾಪವಾಗಿದೆ. ನಾವು ಏನೇ ತಿಂದರೂ ಅದನ್ನು ಮೊದಲು ದೇವರಿಗೆ ನಿವೇದಿಸಬೇಕು. ಅನ್ನವೋ, ಹುಳಿಯೋ, ಸಿಹಿಯೋ, ಖಾರವೋ .... ಏನೇ ಇರಲಿ, ಅವೆಲ್ಲ ಮೊದಲು ಆಹಾರ. ಅದನ್ನು ದೇವರಿಗೆ ನೈವೇದ್ಯ ಮಾಡುತ್ತಿದ್ದಂತೆಯೇ ಅದು ಪ್ರಸಾದ. ದೈವ ನೇತ್ರ ಸ್ಪರ್ಶದಿಂದ ಪುನೀತವಾಗಿ ಅನ್ನದೋಷವನ್ನು ಕಳೆದುಕೊಳ್ಳುತ್ತದೆ; ಪ್ರಸಾದವಾಗುತ್ತದೆ; ಪವಿತ್ರವಾಗುತ್ತದೆ.
ನಾವು ಸ್ವೀಕರಿಸಬೇಕಾದದ್ದು ಪ್ರಸಾದವನ್ನೇ ವಿನಹ ಆಹಾರವನ್ನಲ್ಲ. ನೋಡಿ ಎಂತಹ ತಪ್ಪು ಮಾಡಿದ್ದೀರಿ! ಅದೊಂದು ದಿನ ನೀವು ಅಸಂಸ್ಕೃತ ಆಹಾರವನ್ನು ಸ್ವೀಕರಿಸಿ ಇದೀಗ ನಿಮ್ಮ ದಾರಿಗೆ ನೀವೇ ಅಡ್ಡಗಲ್ಲು ಹಾಕಿಕೊಂಡಿದ್ದೀರಿ. "ತ್ರಿಶಂಕು ಇಳಿದೇ ಹೋದ. ಕನಸೆಲ್ಲ ಛಿದ್ರವಾಯಿತು. ಕಣ್ಣಿಗೆ ಮಂಪರು. ಇನ್ನೇನು ಎಲ್ಲ ಮುಗಿಯಿತೆನ್ನುವಾಗ ಇದ್ದಲ್ಲೇ ಇರುವ ಸ್ಥಿತಿ. ಕೇವಲ ಶೂನ್ಯ ಸಂಪಾದನೆ. ವಿಶ್ವಮಿತ್ರರು ನಿರ್ಣಯಿಸಿದಾಗ ಲೋಪವಾಗಿದ್ದು ಇಲ್ಲೇ. ಅವರಿಗೆ ಇಂತಹದೊಂದು ಕಂದರ ಸೃಷ್ಠಿಯಾಗಬಹುದೆಂಬ ಕಲ್ಪನೆಯೇ ಇರಲಿಲ್ಲ. ವಿಶ್ವಮಿತ್ರರ ಕ್ಷಾತ್ರ ಜಾಗೃತವಾಯಿತು. " ತ್ರಿಶಂಕು ಮಹಾರಾಜರೆ, ಚಿಂತಿಸಬೇಡಿ. ನಾನು ತಲೆಯಡಿಯಾಗಿ ನಿಂತ ತಪಃ ಫಲವನ್ನು ಧಾರೆ ಎರೆಯುತ್ತಿದ್ದೇನೆ. ಈ ಶಾಪತ್ರಯದ ಪ್ರಭಾವ ಒಂದು ದಿನದ ಮಟ್ಟಿಗೆ ಇರುವುದಿಲ್ಲ. ಅಷ್ಟರಲ್ಲಿ ನೀವು ಸ್ವರ್ಗದ ಕದ ತಟ್ಟಿರುತ್ತೀರಿ. " ಸಾಯುತ್ತಿದ್ದವನಿಗೆ ಸಂಜೀವಿನಿಯಾಯಿತು ಋಷಿಮಾತು.
ವಿಶ್ವಮಿತ್ರರು ತಮ್ಮ ಕೈ ಜಲವನ್ನು ತ್ರಿಶಂಕುವಿನ ಕೈಗೆ ಧಾರೆಯೆರೆದ ತಕ್ಷಣವೇ ತ್ರಿಶಂಕುವನ್ನು ಹಿಡಿದಿದ್ದ ಅದೃಶ್ಯ ಬಂಧನ ಕಳಚಿ ಬಿದ್ದಂತೆ; ಅವ ಹಗುರಾದಂತೆ. ಈ ಬದಲಾವಣೆ ಕಂಡ ಋಷಿಗಳು ಬೆರಗಾದರು. ಎಂತಹ ಪವಾಡ ನಡೆದು ಹೋಯಿತು ! ಮೂರು ಶೂಲಗಳೂ ಮಾಯ. ನವೋತ್ಸಾಹದಿಂದ ಉಚ್ಛಸ್ವರದಲ್ಲಿ ವೇದ ತರಂಗಗಳು ತ್ರಿಶಂಕುವನ್ನು ಆವರಿಸಿದವು. ಎದ್ದೇ ಬಿಟ್ಟ , ಅಚಾನಕ್ಕಾಗಿ ಭೂಮಿಯಿಂದ ಮೇಲೇರುತ್ತಿದ್ದಾನೆ. ಕೆಳಗುಳಿದರು ಮುನಿಗಳು. ವಿಶ್ವಮಿತ್ರರು ತುಂಬ ಸಂತಸದಲ್ಲಿದ್ದಾರೆ. ತನ್ನ ಶಕ್ತಿಯನ್ನು ತ್ಯಾಗ ಮಾಡಿದ ಆನಂದ. ತ್ಯಾಗದಲ್ಲಿನ ಸುಖ ಬಲ್ಲವನೇ ಬಲ್ಲ. ಸಂತುಷ್ಟ ವಿಶ್ವಮಿತ್ರರಿಗೆ ಮೇಲಿಂದಲೇ ಕೈಮುಗಿಯುತ್ತಿದ್ದಾನೆ ತ್ರಿಶಂಕು.
" ತಾನು ಮಾಡಿದ್ದು ಅತ್ಯಲ್ಪ. ಗುರುಗಳ ಗೈರುಹಾಜರಿಯಲ್ಲಿ ಕೆಲ ತಿಂಗಳು ಅವರ ಮನೆಯವರಿಗೆ ಆಸರೆಯಾಗಿದ್ದೆ ಅಷ್ಟೇ. ಆ ನಂತರ ಅವರೇ ನನ್ನನ್ನು ಕೆಲ ವರ್ಷ ಪೋಷಿಸಿದರು. ಇದೀಗ ಯಾರೂ ಮಾಡಲಾಗದ ಮಹೋಪಕಾರವನ್ನು ತನಗೆ ಮಾಡುತ್ತಿದ್ದಾರೆ. ಅವರ ಈ ಅನುಪಮ ನೆರೆವಿಗೆ ತಾನೇನು ಪ್ರತ್ಯುಪಕಾರ ಮಾಡಬಲ್ಲೆ? ಓಹ್! ಯೋಚನೆಯಲ್ಲಿದ್ದಾಗ ಎಷ್ಟು ಮೇಲೆ ಬಂದುಬಿಟ್ಟೆ?! ಕೆಳಗೆ ಋಷಿ, ಯಙ್ಞ ವಾಟಿಕೆ, ಯಙ್ಞವೇದಿ, ಯಾವುದೂ ಸ್ಪಷ್ಟವಿಲ್ಲ; ಋಷಿಗಳೋ ಗೀಟಿನಂತೆ ಕಾಣುತ್ತಿದ್ದಾರೆ. ಎಷ್ಟು ರಭಸವಾಗಿ ಏರುತ್ತಿರುವೆ! ಆದರೆ ತನ್ನ ಸುತ್ತ ಗಾಳಿಯ ಆರ್ಭಟವಾಗಲಿ, ಸೂರ್ಯನ ತಾಪವಾಗಲಿ ಏನೂ ಇಲ್ಲ. ಏನೋ ಒಂದು ದೃಶ್ಯಾದೃಶ್ಯ ವರ್ತುಲ ನನ್ನನ್ನು ಆವರಿಸಿದೆ. ಇಷ್ಟು ಹೊತ್ತೂ ಮೋಡಗಳ ಮಧ್ಯದಲ್ಲಿ ಹಾರಿ ಬರುತ್ತಿದ್ದ ತಾನು ಈಗ ನಿರ್ಮಲ ಗಗನ , ಕೇವಲ ನೀಲ ನಭದ ಅಡಿಯಲ್ಲಿ ; ಏನೂ ಇಲ್ಲ , ಕೇವಲ ಪ್ರಕಾಶ , ಏನೋ , ಏನೋ ತನಗೇನೂ ಕಾಣುತ್ತಿಲ್ಲ, ಕೇವಲ ಬೆಳಕು. ಏನಿದೆಯೋ ತನ್ನ ಸುತ್ತ ಮುತ್ತ. ಎಷ್ಟು ಹೊತ್ತು ಏರುತ್ತಿರುವೆನೋ. ತುಂಬ ಕಾಲವಾದಂತೆ.
ಇದ್ದಕ್ಕಿದ್ದಂತೆಯೇ ತಂಪೆನಿಸಿತು; ಮಂದಾನಿಲ ಬೀಸಿದಂತೆ. ಕಣ್ಣ ಮುಂದೆ ಸ್ವರ್ಣ ಭವನಗಳು ದೇದೀಪ್ಯ. ಹೊರಗೆ ಓಡಾಡುತ್ತಿರುವ ತೇಜಸ್ವಿಗಳು; ಅವರ ಕಾಲುಗಳು ಏನ್ನನ್ನೂ ಮುಟ್ಟುತ್ತಿಲ್ಲ, ಅಜಾನುಬಾಹುಗಳು, ಕಿರೀಟಧಾರಿಗಳು. ಪ್ರಜ್ವಲಿಸುತ್ತಿರುವ ಕುಂಡಲ, ಹಾರ ಭೂಷಿತರು. ಇದೀಗ ತಾನೊಂದು ಭವ್ಯ ಅರಮನೆಯ ಬಾಗಿಲ ಮುಂದೆ ನಿಂತಿದ್ದಾನೆ. ಅವರ್ಣನೀಯ ಕೆತ್ತನೆಗಳ, ಸುಗಂಧ ಸೂಸುವ, ವೀಣಾ ಕ್ವಣಿತದ, ಮಂತ್ರ ನಿನದದದೊಟ್ಟಿಗೇ, ಆ ಬಾಗಿಲುಗಳನ್ನು ಅತ್ತಿತ್ತ ಇದ್ದ ದ್ವಾರಪಾಲಕರು ತೆರೆದರು. ಒಳಗೆ ಕಣ್ಣು ಕೋರೈಸುವಷ್ಟು ಪ್ರಕಾಶ ಪೂರ್ಣ ದೇವತೆಗಳು ನಿಂತಿದ್ದಾರೆ. ಮಧ್ಯದಲ್ಲಿ ಪ್ರತ್ಯಕ್ಷನಾದ ದೇವೇಂದ್ರ! ಓಹ್ ! ಎಷ್ಟು ಭವ್ಯವಾಗಿದ್ದಾನೆ! ಕೈಯಲ್ಲಿ ಮೂಳೆಗಳ ಆಯುಧ! ಓ , ಇದೇ ಇರಬೇಕು ದಧೀಚಿ ಮುನಿಗಳ ಬೆನ್ನೆಲುವಿನ ವಜ್ರಾಯುಧ. ಆದರೆ, ಆದರೆ.... ಅವನ ಮುಖ ಕೆಂಪಾಗಿದೆ. ಕಣ್ಣಲ್ಲಿ ಕಿಡಿಗಳು ಕಾರುತ್ತಿವೆ. " ಚಂಡಾಲ ! ನಿನಗೆ ಸ್ವರ್ಗ ಬೇರೇ ಕೇಡು. ನಿನ್ನ ಗುರುಗಳು ವಿಶ್ವಮಿತ್ರರು ದೊಡ್ಡವರಿರಬಹುದು; ಅವರು ನೇರವಾಗಿ ಸ್ವರ್ಗಕ್ಕೂ ಬರಬಹುದು, ಕೈಲಾಸಕ್ಕೂ ಹೋಗಬಹುದು. ಆದರೆ ನಿನಗೆ ಯಾವ ಯೋಗ್ಯತೆ ಇದೆ? ನೀನಾವ ತಪಸ್ಸು ಮಾಡಿದ್ದೀಯೆ? ಋಷಿಗಳು ಮಾಡಿದ ಯಙ್ಞಪ್ರಭಾವದಿಂದ ಇಲ್ಲಿವರೆಗೆ ಬಂದಿದ್ದಾಯಿತು, ಅಷ್ಟೆ. ಒಳಗೆ ಬರಲು ನನ್ನ ಅಪ್ಪಣೆ ಬೇಕು. ವಂಶ ಪರಂಪರಾಗತ ಗುರುಗಳನ್ನು ಬಿಟ್ಟ ನಿನ್ನಂತಹ ಗುರು ದ್ರೋಹಿಗೆ ಸ್ವರ್ಗಪ್ರವೇಶ ಅಸಾಧ್ಯ ! ನನಗೆ ಬಂದ ಶಾಪವನ್ನು "ರಥಂತರ ಸಾಮ" ಸೃಷ್ಟಿಸಿ ಕಳೆದವರು ವಶಿಷ್ಠರು , ಅಂತಹ ಮಹಾನುಭಾವರನ್ನು ನೋಯಿಸಿ , ಅವರಿತ್ತ ಶಾಪದಿಂದ ಪತಿತನಾದ ನಿನಗೆ ಇಲ್ಲಿ ಸ್ವಾಗತವಿಲ್ಲ . ನೂಕಿ ಈ ಗುರುದ್ರೋಹಿಯನ್ನು ! "
(ತ್ರಿಶಂಕೋ ಗಛ್ಛ ಭೂಯಸ್ತ್ವಂ ನಾಸ್ತಿ ಸ್ವರ್ಗಕೃತಾಲಯಃ
ಗುರು ಶಾಪ ಹತೋ ಮೂಢಃ ಪತ ಭೂಮಿಮ ವಾಕ್ಷಿರಾಃ )
ಧಡಾರನೆ ಸ್ವರ್ಗ ಲೋಕದ ಬಾಗಿಲು ಬಡಿಯಿತು . ಕ್ಷಣದಲ್ಲಿ ಇಲ್ಲಿವರೆಗೆ ಕಾಣುತ್ತಿದ್ದ ಸ್ವರ್ಣ ಪ್ರಾಕಾರ ಸುಂದರ ಹಳದಿ ಸ್ವರ್ಗ ಮಾಯವಾಯಿತು . ಬಯಲಿನಲ್ಲಿ ನಿಂತಿದ್ದ ತನ್ನನ್ನು ಯಾರೋ ನೂಕಿದರು . ತಾನು ಕೆಳಗಾಗಿ ಬಿದ್ದ , ರಭಸವಾಗಿ , ಜೋರಾಗಿ ಬೀಳುತ್ತಿದ್ದೇನೆ . ಮುಖಕ್ಕೆ ಗಾಳಿಯ ಏಟು . ಗಗನದಲ್ಲಿರುವುದೇನೇನೋ ತನ್ನನ್ನು ತಡೆಯುತ್ತಿದೆ . " ಗುರುಗಳೇ , ಬೀಳುತ್ತಿದ್ದೇನೆ , ರಕ್ಷಿಸಿ ! ಎಂದು ತ್ರಿಶಂಕು ಒರಲಲಾರಂಭಿಸಿದ. (ಮುಗಿದಿಲ್ಲ...)
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos