"ಆಯಿತು ಮಹಾಸ್ವಾಮಿ, ತಮ್ಮ ಆದೇಶಕ್ಕೆ ನಾನು ಮಣಿದೆ. ಆದರೆ ಈ ದೇವತೆಗಳಿಗೆ ಇದು ಒಪ್ಪಿಗೆಯೇ? ಇವರೇ ತಾನೆ ಅವನನ್ನು ಬಹಿಷ್ಕರಿಸಿದ್ದು? ನನ್ನ ಮಾತು ಇಷ್ಟೇ ಮಹಾಪ್ರಭು. ನಾನು ಸೃಷ್ಟಿಸಿದ ಈ ಸ್ವರ್ಗ, ಅದರಲ್ಲಿನ ದೇವತೆಗಳು, ಅಪ್ಸರೆಯರು, ದಿಕ್ಪಾಲಕರು, ಅವರೊಟ್ಟಿಗಿರುವ ಎಲ್ಲ ಭೋಗಗಳು ಶಾಶ್ವತವಾಗಿರಬೇಕು. ಈ ತ್ರಿಶಂಕು ಮಹಾರಾಜ, ಅವನಿಗೆ ನಾನಿತ್ತ ಮಾತು ಸತ್ಯವಾಗಬೇಕು. ಅಷ್ಟೇ ಅಲ್ಲ, ಈ ಸ್ವರ್ಗದ ಸುತ್ತಲೂ ನಕ್ಷತ್ರ ಪುಂಜ ಬೇಡವೇ? ಅದೂ ಶಾಶ್ವತವಾಗಿರಬೇಕು. "
(ಸ್ವರ್ಗಃ ಅಸ್ತು ಸಶರೀರಸ್ಯ ತ್ರಿಶಂಕೋರಸ್ಯ ಶಾಶ್ವತಃ
ನಕ್ಷತ್ರಾಣಿ ಚ ಸರ್ವಾಣಿ ಮಾಮಕಾನಿ ಧ್ರುವಾಣ್ಯಥ)
ವಿಶ್ವಮಿತ್ರರ ಇಂಗಿತ ಅರ್ಥವಾಯಿತು ದೇವತೆಗಳಿಗೆ. " ಮಹರ್ಷಿಗಳೇ, ತಮ್ಮ ಬಗ್ಗೆ; ತಮ್ಮ ಶಕ್ತಿಯ ಬಗ್ಗೆ ನಮಗೆ ಕಿಂಚಿತ್ತೂ ಸಂದೇಹವಿಲ್ಲ. ನಮಗೆಲ್ಲ ತಮ್ಮ ತಪಸ್ಸು, ತಾವು ಗಳಿಸಿರುವ ಪುಣ್ಯ ಇವುಗಳೆಲ್ಲಾ ನಿಮಲ್ಲಿ ಗೌರವವನ್ನು ಹೆಚ್ಚಿಸಿವೆ. " ವಿಶ್ವಮಿತ್ರರ ದುಗುಡ ಕಡಿಮೆಯಾಯಿತು. ದೇವ ಪ್ರಮುಖ ಮುಂದುವರಿಸಿದ; " ನೀವು ಹೇಳಿದಂತೆಯೇ ಆಗಲಿ. ನಿಮ್ಮ ಸೃಷ್ಟಿಯೆಲ್ಲವೂ ಶಾಶ್ವತವಾಗಿಯೇ ಇರಲಿ. ಈ ಜ್ಯೋತಿಶ್ಚಕ್ರ ಎಲ್ಲಿವರೆಗೆ ಇರುವುದೋ, ಅಲ್ಲಿವರೆಗೆ ಎಲ್ಲವೂ ನಿತ್ಯವೇ, ನೂತನವೇ. ನೀವು ಹುಟ್ಟಿಸಿದ ಗ್ರಹಗಳೂ, ನಕ್ಷತ್ರಗಳೂ, ಧೂಮಕೇತುಗಳೂ, ಆಕಾಶಕಾಯಗಳೂ, ಎಲ್ಲವೂ ತ್ರಿಶಂಕು ಸ್ವರ್ಗದ ಸುತ್ತ ಇರುತ್ತವೆ. ಒಂದೇ ಒಂದು ಬೇಡಿಕೆ, ತ್ರಿಶಂಕು ತಲೆಕೆಳಗಾಗಿಯೇ ಇರಲಿ. ಅದರಿಂದ ಅವನಿಗೇನೂ ತೊಂದರೆಯಾಗುವುದಿಲ್ಲ . ಅಲ್ಲಿನೆಲ್ಲ ನಿಮ್ಮ ದೇವತೆಗಳೂ ತಲೆಕೆಳಗಾಗಲಿ. ಹೇಗಿದ್ದರೂ ಅವರು ಯಾವುದನ್ನೂ ಸ್ಪರ್ಶಿಸುವುದೂ ಇಲ್ಲವಲ್ಲ? "
(ಏವಂ ಭವಂತು ಭದ್ರಂತೇ ತಿಷ್ಟಂತೇ ತ್ವಾನಿ ಸರ್ವಶಃ
ಗಗನೇ ತಾನಿ ಅನೇಕಾನಿ ವೈಶ್ವಾನರ ಪಥಾನ್ ಬಹಿಃ
ನಕ್ಷತ್ರಾಣಿ ಮುನಿಶ್ರೇಷ್ಠ ತೇಷು ಜ್ಯೋತಿಷು ಜಾಜ್ವಲಾನ್ )
ಈ ತ್ರಿಶಂಕು ಮಹಾರಾಜನ ಮಗನೇ ಹರಿಶ್ಚಂದ್ರ. ಈತ ಸತ್ಯಹರಿಶ್ಚಂದ್ರನಾದದ್ದೇ ಒಂದು ಕುತೂಹಲ ಬೆಟ್ಟ ಏರುವ ಪಯಣ. (ಎಷ್ಟೋ ಬಾರಿ ನಮ್ಮ ಜೀವನದ ಬೆಳವಣಿಗೆಗೆ ನಾವೆಷ್ಟು ಕಾರಣ? ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಅರಿವಿಲ್ಲದೇ ತಾಯ ಗರ್ಭಕ್ಕೆ ಬರುತ್ತೇವೆ, ಒಂಬತ್ತು ತಿಂಗಳುಗಳು ಇರುತ್ತೇವೆ. ನಮ್ಮ ಊಟ, ಉಸುರು, ಚಲನೆ, ಎಲ್ಲ ಆ ಕತ್ತಲ ಕೋಣೆಯಲ್ಲಿಯೇ; ತಾಯ ಕರುಳ ಬಳ್ಳಿಯ ಮೂಲಕವೇ. ಇದರ ನೆನಪಿನ ಗೆರೆಯೂ ಉಳಿಯದೇ ಹೊರದಬ್ಬಲ್ಪಡುತ್ತೇವೆ. ಗಾಢಾಂಧಕಾರದಿಂದ ಪ್ರಜ್ವಲ ಪ್ರಕಾಶ. ಏನೂ ಅರಿಯದ ಅಯೋಮಯ ಸ್ಥಿತಿ. ಎಲ್ಲಿದ್ದೇವೋ, ಯಾರ ಮಧ್ಯ ಇದ್ದೇವೋ, ಏನಾಗುತ್ತಿದೆಯೋ ಗೊತ್ತಿಲ್ಲ. ಯಾವುದೋ ಮೃದು ಸ್ಪರ್ಶ; ಯಾವುದೋ ಅಮೃತ ಕಲಶ; ಅದರಿಂದ ಧಾರೆ ಧಾರೆ ಸುಧೆ; ಅದನ್ನು ಚಪ್ಪರಿಸುತ್ತಾ, ಹೀರುತ್ತಾ, ನಿದ್ದೆ ಮಾಡುತ್ತಾ, ಕೈಕಾಲು ಆಡಿಸುತ್ತಾ... ಎಷ್ಟೋ ತಿಂಗಳುಗಳು.... ಏನೋ ಅಸ್ಪಷ್ಟ ಚಿತ್ರಗಳು. ಏನೋ ಹೇಳಹೋಗುತ್ತೇವೆ, ಒಂದೇ ಧ್ವನಿ ನಮ್ಮಿಂದ- ಅಳು, ಅಳು, ಅಳು, ಅಳು ಅಷ್ಟೇ... ಯಾವುದೋ ಒಂದು ಆಕಾರ ಸದಾ ತನ್ನ ಮಡಿಲ ತೊಟ್ಟಿಲಲ್ಲೇ ಮಲಗಿಸಿಕೊಂಡಿರುತ್ತದೆ. ಅದೇ ಅಮ್ಮನೆಂದು ಅಭ್ಯಾಸ. ಆ ತಾಯಿ ತೋರಿಸುತ್ತಾಳೆ ಅಪ್ಪನನ್ನು. ಅಂತೆಯೇ ಇತರ ಎಲ್ಲರನ್ನೂ, ಎಲ್ಲವನ್ನೂ. ಆ ಮಾತೆ; ಮೊದಲ ಪರಿಚಿತೆ; ಪ್ರಥಮ ಪ್ರಸಾದ ದಾತೆ ; ಪ್ರಾರಂಭದ ರಕ್ಷಕಿ; ಅಷ್ಟೇಕೆ, ಈ ಪ್ರಪಂಚಕ್ಕೆ ನಮ್ಮನ್ನಿತ್ತು, ಆಹಾರ, ಆರೋಗ್ಯ, ಆರೈಕೆಗಳನ್ನೆಲ್ಲ ಮಾಡುವ ಆ ಮಾತೃ ದೇವಿ ಬದುಕಿರುವವರೆಗೂ ನಮಗೇನೋ ಒಂದು ಆತ್ಮ ರಕ್ಷಣೆ, ಆತ್ಮ ಬಲ. ಎಲ್ಲಿಯೂ ಸಲ್ಲದಾಗಲೂ, ಎಲ್ಲರೂ ತಿರಸ್ಕರಿಸಿದಾಗಲೂ, ಹತಾಶರಾದಾಗಲೂ, ಸ್ಥಿರ ಶಾಶ್ವತ ಸ್ವಾಗತ ರಕ್ಷೆ ಆಕೆಯಿಂದಿರುತ್ತದೆ.
ಆನಂತರ ಅಪ್ಪ, ಆನಂತರ ಅಕ್ಕ, ತಂಗಿ, ಅಣ್ಣ, ತಮ್ಮ, ಗೆಳೆಯರು, ಹೀಗೇ ಶಾಲೆ. ಓಹ್ ! ಅದೊಂದು ಭಯಂಕರ ಭವನ. ಯಾವುದೋ ದೊಡ್ಡ ದೇಹ, ದಪ್ಪ ಗಂಟಲು, ಕೆಂಪು ಕಣ್ಣು. ಅದೇ ಮೇಷ್ಟ್ರು. ಯಾವ ಹುಡುಗ / ಹುಡುಗಿಯೂ ಅಳದೇ ಮೊದಲ ದಿನ ಪ್ರವೇಶಿಸಿದ್ದೇ ಇಲ್ಲ. ಏನೇನೋ ಪಾಠಗಳು, ಏನೇನೋ ವಿಷಯಗಳು, ತುರುಕಿದ್ದೂ ತುರುಕಿದ್ದೇ ನಮ್ಮ ತಲೆಯಲ್ಲಿ. ನಮಗೆ ಬೇಕೋ, ಬೇಡವೋ. ಕೊನೆಗೊಮ್ಮೆ ಪರೀಕ್ಷೆಯಂತೆ. ಅಯ್ಯೋ ಅದೊಂದು ಕೆಟ್ಟ ಸ್ಥಿತಿ. ಅರ್ಥವಾಗದ್ದು , ಅರ್ಥವಿರದ್ದು, ಬೇಡಾದದ್ದು, ಬೇಕಾಗಬಹುದಾದದ್ದು, ಎಲ್ಲವನ್ನೂ ನೆನಪಿಟ್ಟಕೊಳ್ಳಬೇಕಂತೆ. ವರ್ಷವೆಲ್ಲ ಓದುವುದು ಬಿಟ್ಟು ಆಟವಾಡುತ್ತಿರುವವರಿಗೆ ಕೊನೆಯ ತಿಂಗಳುಗಳು ಬಿಡುವಿರದ ತಪಸ್ಸು. ಅರೆ ! ಎಂತಹ ಶಬ್ದ ಬಂದುಬಿಟ್ಟಿತು ! ತಪಸ್ಸು ! ಇಲ್ಲಿಂದ ಆರಂಭ, ಮುಂದೆ ಎಲ್ಲವೂ ತಪಸ್ಸೇ. ಉತ್ತೀರ್ಣತೆ, ಅಧಿಕಾರ, ಅಂಗನೆ, ಸಂಸಾರ, ಮಕ್ಕಳು, ಆಸ್ತಿ, ಮುದಿತನ, ಎಲ್ಲ .... ಎಲ್ಲ ! ಕೊನೆಗೆ ನಮಗೆ ಗೊತ್ತೇ ಆಗದೇ, ಗೊತ್ತಿಲ್ಲದೂರಿಗೆ ಪ್ರಯಾಣ. ಮುಂದೇನೋ ಗೊತ್ತಿಲ್ಲ. ಹೋಗಿ ಅನುಭವಿಸಿ ಬಂದು ಹೀಗೆ, ಹೀಗೆ, ಹೀಗೆ ಎಂದು ಹೇಳುವವರು ಯಾರೂ ಇಲ್ಲ. ಆ ಮುಂದಿನೂರಿನ ಬಗ್ಗೆ ಬರೆದಿರುವುದೆಲ್ಲ ಬಹುಪಾಲು ಅಂದಾಜು, ಊಹೆ, ಕಲ್ಪನೆ... ಅಥವ.... ತಪಸ್ಸಿನಿಂದ ದರ್ಶಿಸಿದರಂತೆ.... ಏನೋ ಗೊತ್ತಿಲ್ಲ.
ಒಂದೇ ಪ್ರಶ್ನೆ, ಈ ಇಡೀ ಬದುಕಿನಲ್ಲಿ ನಾವು ಬಯಸಿದ್ದೆಷ್ಟು, ಗಳಿಸಿದ್ದೆಷ್ಟು ? ಯೋಜಿಸಿದ್ದೆಷ್ಟು, ಜಯಿಸಿದ್ದೆಷ್ಟು ? ಯಾವುದೋ ಸೆಳೆತಕ್ಕೆ, ಯಾವುದೋ ( ಯಾರದೋ ?! ) ಯೋಜನೆಗೆ ಅನುಗುಣವಾಗಿ ನಡೆಯುತ್ತಿರುತ್ತೇವೆ. ಪಾಪ, ಹರಿಶ್ಚಂದ್ರನ ಕಥೆ ನೋಡಿ. ಅವನ ಗೈರುಹಾಜರಿಯಲ್ಲಿ ಅವನ ಚರ್ಚೆ. ಅವನಿಗೆ ಅಗ್ನಿಪರೀಕ್ಷೆ. ಆತನಿಗೆ ಕಷ್ಟಪರಂಪರೆ.