ಎಲ್ಲೋ ಒಂದೆಡೆ ಪಾಪ , ಹರಿಶ್ಚಂದ್ರನೂ ತನ್ನ ಶಿಷ್ಯನೇ . ಅವನ ಅಪ್ಪನನ್ನೇ ಅಷ್ಟೆತ್ತರಕ್ಕೇರಿಸಿದ ತನಗೆ ಏಕೆ ಈ ವೈಷಮ್ಯ ? ಅಥವ ಇದೂ ಒಂದು ರೀತಿಯಲ್ಲಿ ಮಗನ ಉತ್ಕರ್ಷಕ್ಕೆ ನಾಂದಿಯೋ ? ಚಿಂತಿಸುತ್ತಿದ್ದ ವಿಮರ್ಶೆಯನ್ನು ಸೀಳಿಕೊಂಡು ತೀವ್ರ ಭಾವ ಮಾತಾಗಿಬಿಟ್ಟಿತು ; ನುಡಿಯೊಂದು ಬಾಯಿಂದ ಹೊರಬಿದ್ದಿತು . ಇದೀಗ ಅವರ ಮಾತಿನ ಮೇಲೆ ವಿಶ್ವಮಿತ್ರರಿಗೇ ಹಿಡಿತವಿಲ್ಲ . " ಸತ್ಯಲೇಶವೂ ಅವನಲ್ಲಿಲ್ಲ ; ಅವನ ಮನೆಯಲ್ಲಿಲ್ಲ ; ಅವನ ದೇಶದಲ್ಲಿ ಇಲ್ಲ . " ("ಸತ್ಯಲೇಶವಂತು ಅವನು ಆಳ್ವ ದೇಶದೊಳು ಕೇಳ್ದರಿಯೆನು ")
ಸಾಮಾನ್ಯವಾಗಿ ಸಿಟ್ಟೇ ಅರಿಯದ ವಸಿಷ್ಠರೂ ಚಲಿಸಿಬಿಟ್ಟರು; ವಿಶ್ವಮಿತ್ರರ ಈ ಕಠೋರ ವಾಣಿಗೆ. ಎಂದೂ ದೊಡ್ಡದಾಗದ ಬ್ರಮ್ಹರ್ಷಿಗಳ ಬಾಯಿ ತುಸು ಹಿರಿದೇ ಆಯಿತೇನೋ. " ಸುರಲೋಕದಿಂದ ವಾಪಸಾದಮೇಲೆ ಹೋಗುವುದೆಲ್ಲಿಗೆ, ಮರಳಿ ಭೂಮಿಗೆ ತಾನೆ? ಆ ಧರಣಿ , ಕೆಳಕ್ಕೆ ಇಳಿದು ಹೋದರೂ ಹೋಗಬಹುದು, ಚಂದ್ರ ತನ್ನ ಸ್ವಭಾವದ ಶೈತ್ಯವನ್ನು ಬಿಡಲೂ ಬಹುದು, ಮೇರು ಪರ್ವತಕ್ಕೇ ಛಳಿಯಾಗಬಹುದು, ಸೂರ್ಯ ಮೊಂಕಾಗಲೂ ಬಹುದು, ಸಮುದ್ರ ಇಂಗಿಹೋಗಲೂ ಬಹುದು ಅಗ್ನಿ ದೇವ ಮಂಜು ಶಲ್ಯೆಯನ್ನು ಹೊದೆದು ಹಿಮ ಪಂಚೆಯನ್ನು ಉಡಲೂ ಬಹುದು, ಆದರೆ ಸತ್ಯಗಣಿ ಹರಿಶ್ಚಂದ್ರನ ಮಾತಿನಲ್ಲಿ ಸುಳ್ಳು ಮಾತ್ರ ಮೊಳಕೆಯೊಡೆಯದು. "
(ಇಳೆತಳಕ್ಕಿಳಿದು ಶಶಿ ಬಿಸಿಯಾಗಿ ಮೇರು ಗಿರಿ
ಚಳಿಸಿ ರವಿ ಕಂದಿ ಜಲನಿಧಿ ಬತ್ತಿ ಶಿಖಿ ಹಿಮಂ
ತಳೆದ ದಿನದೊಳು ಸತ್ಯನಿಧಿ ಹರಿಶ್ಚಂದ್ರ
ರಾಯನ ವಾಕ್ಯದೊಳು ಹುಸಿಗಳು ಮೊಳೆಯವು)
ಈಗ ವಿಶ್ವಮಿತ್ರರಿಗೂ ಸುಮ್ಮನಿರಲು ಸಾಧ್ಯವಾಗಲಿಲ್ಲ. ಎದ್ದೇ ಬಿಟ್ಟರು. " ದೇವೇಂದ್ರ, ಸಭಾಸದರೆ, ಕೇಳಿ. ನಾನೊಂದು ಕಥೆ ಹೇಳುವೆ. ನಿಜ ಕಥೆ ಹೇಳುವೆ. ನಾನೂ ಪಾತ್ರಧಾರಿಯಾಗಿರುವ ಕಥೆ ಹೇಳುವೆ. ಇದು ನಡೆದು ಆಗಲೇ ಕೆಲ ವರ್ಷಗಳೇ ಆಗಿವೆ. ಅಂದು ನಾನು ಹೋಗುತ್ತಿದ್ದೆ ದಾರಿಯಲ್ಲಿ. ಒಬ್ಬ ಹುಡುಗ ನದಿ ದಡದಲ್ಲಿ ಬಿಕ್ಕಿಸಿ ಬಿಕ್ಕಿಸಿ ಅಳುತ್ತಿದ್ದ. ಪಕ್ಕದಲ್ಲಿ ರಾಜಭಟರು. ಏನೆಂದು ವಿಚಾರಿಸಿದೆ. ಅವರಿಂದ ಮಾಹಿತಿ ಸರಿಯಾಗಿ ಸಿಗದೇ ಹೋದಾಗ ಅವನನ್ನೇ ಕೇಳಿದೆ. ದೀರ್ಘದಂಡ ನಮಸ್ಕಾರ ಮಾಡಿದ; ಪ್ರವರ ಹೇಳಿಕೊಂಡು. ಹುಡುಗ, ತೇಜಸ್ವಿ. ಅಳುತ್ತಿದ್ದರೂ ಕ್ರಮ ತಪ್ಪಲಿಲ್ಲ. ಪ್ರತಿಭೆ ಸೂಸುವ ಕಣ್ಣುಗಳು. ವಿಚಾರಿಸಿದೆ. ಅವನೆಂದ
" ಸ್ವಾಮಿ , ನನ್ನ ಹೆಸರು ಶುನಶ್ಶೇಪ. ಸಹೋದರರು ಮೂರು ಮಂದಿ ನಾವು. ಮಧ್ಯದವನು ನಾನೇ. ಅಪ್ಪನಿಗೆ ಹಿರಿಯ ಮಗ ಬೇಕು. ಕಿರಿಯ ಮಗ ಅಮ್ಮನಿಗೆ ಪ್ರಿಯ. ನಮ್ಮದೋ ಕಡು ಬಡತನದ ಮನೆ. ಒಮ್ಮೆ ಡಂಗೂರ ಸಾರುತ್ತಿದ್ದರು, " ಹತ್ತು ಸಾವಿರ ವರಹ ಕೊಡ್ತಾರೆ ಮಹಾರಾಜರು, ಯಾರಾದ್ರೂ ತಮ್ಮ ಮಗನ್ನ ಕೊಡೋದಾದ್ರೆ. " ಒಂದಾರು ತಿಂಗಳು ಹಾಯಾಗಿ ಊಟ ಮಾಡಬಹುದು. ಆದರೆ ಯಾರನ್ನ ಕೊಡೋದು ? ಅಪ್ಪ ಅಮ್ಮನ ಆಯ್ಕೆ ನಂಗಾಗ್ಲೇ ಗೊತ್ತಾಗಿತ್ತಲ್ಲ ; ನಾನೇ ತೀರ್ಮಾನ ಮಾಡ್ದೆ. ರಾಜಭವನಕ್ಕೆ ಹೋದರೆ ಸುಖವಾಗಿರುತ್ತೆ, ಎಷ್ಟೇ ಆಗಲೀ ಅರಮನೆ ಅಲ್ಲವೇ. ಅಲ್ಹೋದ್ಮೇಲೆ ಗೊತ್ತಾಯ್ತು . ರಾಜರು ನನ್ನನ್ನ ಕೊಂಡ್ಕೊಂಡಿದ್ದು ಬದುಕಿಸೋಕ್ಕಲ್ಲ, ಸೇವೆ ಮಾಡಿಸ್ಕೊಳ್ಳೋಕೂ ಅಲ್ಲ, ನನ್ನ ಬಲಿ ಕೊಡೋಕ್ಕೇ ಅಂತ.
ಕೊರಳಿಗೆ ಚೆಂಡು ಹೂವಿನ ಹಾರ ಹಾಕಿದ ಮೇಲೆ ಗೊತ್ತಯಿತು; ನನ್ನನ್ನ ಅಗ್ನಿಗೆ ಬಲಿ ಕೊಡತ್ತಾರಂತೆ. ಅಂದರೆ, ಕುರಿಯಂತೆ ಕೊರಳು ಕತ್ತರಿಸ್ತಾರಂತೆ, ಅಯ್ಯೊಪ್ಪ ! ನಂಗೆ ದಿಗ್ಭ್ರಮೆ ! ಹೆದರಿಕೆ ! ಮುಂದೇನ್ ಮಾಡಬೇಕು ಅಂತಾನೇ ಗೊತ್ತಾಗ್ಲಿಲ್ಲ. ಸಾವು ಅಂದ್ರೇನಂತಾನೇ ಗೊತ್ತಿಲ್ಲ, ಯಾರಾದರೂ ಸತ್ತರೆ, ಅಲ್ಲಾಡದೇ ಮಲಗಿರ್ತಾರೆ. ಎಲ್ಲರೂ ಅಳತಾ ಇರ್ತಾರೆ, ಆಮೇಲೆ ಹಾಗೆ ಮಲಗಿದ್ದವರನ್ನ ನಾಲಕ್ಕು ಮಂದಿ ಎತ್ತ್ಕೊಂಡು ಹೋಗೋದು ನೋಡಿದ್ದೇನೆ. ಅನಂತರ ಅವರನ್ನು ಸುಡುತಾರಂತೆ... ಅಯ್ಯಪ್ಪ ! ಸುಡೋದು ಅಂದರೆ ಕಷ್ಟ ಆಗಲ್ವಾ ಅಂತ ಕೇಳ್ದೆ ಸ್ನೇಹಿತರನ್ನ, ಅವರು ಹೇಳಿದ್ರು ಹೆಣಕ್ಕೇನೂ ಗೊತ್ತಾಗೋದಿಲ್ಲ ಅಂತ. ಆದ್ರೂ ಆವತ್ನಿಂದ ನನಗೆ ಸಾವೂ ಅಂದ್ರೆ ಹೆದರಿಕೆ. ಈಗ ಕೊರಳು ಕತ್ತರಸ್ತಾರಂದ್ರೆ ಪ್ರಾಣಾನೇ ಹೋದ ಹಾಗಾಯ್ತು. ಅಯ್ಯೊಯ್ಯೊಪ್ಪ ! ಕತ್ತರಿಸಿದ್ರೆ ನೋವಾಗೋದಿಲ್ವ ? ರಕ್ತ ಚಿಮ್ಮೋದಿಲ್ವ? ಅನಂತರ ನಾನು ಸಥೋಗ್ತೀನಂತೆ. ನನ್ನನ್ನ ಅಗ್ನಿಕುಂಡಕ್ಕೆ ಹಾಕ್ತಾರಂತೆ. ಯೊಪ್ಪಾ, ಕೇಳ್ದಾಗ್ಲಿಂದಲೂ ತುಂಬಾ ಭಯ. ತುಂಬಾ ಹೆದರಿಕೆ. ಯಾಕೋ ಗೊತ್ತಿಲ್ಲ. ದೇಹ ಎಲ್ಲ ನಡುಗುತ್ತೆ, ಬಾಯೆಲ್ಲ ಒಣಗುತ್ತೆ. ಏನು ಬೇಕಾದ್ರೂ ತಿನ್ನೋಕೆ ಹೇಳಿದ್ರು. ಏನೇನೋ ತಿಂಡಿಗಳು, ನೋಡೇ ಇರಲಿಲ್ಲ, ಕೇಳೂ ಇರಲಿಲ್ಲ, ಎಲ್ಲಾ ತಿನ್ನೋಣ ಅಂತ ಕೈ ಹಾಕಿದೆ, ಗಬಗಬ ತಿಂತಾಯಿದ್ದೆ, ಯಾರೋ ಹೇಳಿದ್ರು, " ಪಾಪ, ಇವನ ಕೊನೇ ಊಟ, ಸಾಯ್ತಾನೆ ಅಂತ ಗೊತ್ತಿಲ್ದೇ ಊಟ ಮಾಡ್ತಾ ಇದ್ದಾನೆ." ತಕ್ಷಣ ನನಗೆ ನೆನಪಾಯಿತು ನನ್ನನ್ ಕತ್ತರಿಸ್ತಾರೆ ಅಂತ. ಊಟಾನೇ ಸೇರ್ಲಿಲ್ಲ. ಭಯ, ಭಯ ! ಏನೂ ಗೊತ್ತಾಗ್ಲಿಲ್ಲ. ಅಮ್ಮ ಹಿಂದೊಂದು ಸಲ ಹೇಳಿದ್ರು, ಭಯವಾದಾಗ ಧ್ಯಾನ ಮಾಡು, ದೇವರು ಸಹಾಯ ಮಾಡ್ತಾನೆ ಅಂತ, ಅದನ್ನೇ ಮಾಡೋಣ ಅಂದ್ರೆ ಯಾವ ಮಂತ್ರಾನೂ ನೆನಪೇ ಆಗ್ತಾಯಿಲ್ಲ, ಬರಿ ಅಳು ಬರ್ತಾಯಿದೆ. ಧ್ಯಾನ ಮಾಡೋಕೇ ಆಗಲಿಲ್ಲ, ಆದರೆ ನೀವು ಬಂದೇ ಬಿಟ್ಟರಿ. ನೀವೇನು ದೇವ್ರಾ? ಸಹಾಯ ಮಾಡೋಕೆ ಬಂದ್ರಾ?"
ಹುಡುಗ ಬುದ್ಧಿವಂತನೇ. ಅಳುತ್ತಳುತ್ತಲೇ ತನ್ನ ಕಥೆಯನ್ನೆಲ್ಲ ಹೇಳಿದ. ನನ್ನ ಕರುಳು ಚುರ್ರೆಂದಿತು. ಬದುಕಿ ಬಾಳಬೇಕಾದ ಮಗು, ಮೃತ್ಯುವೆಚಿದರೇನೆಂದೇ ಅರಿಯ, ಛೆ ಛೆ ! ಎಂತಹ ಕಟುಕ ಈ ರಾಜ! ಇವನೋ ರಕ್ಷಿಸೋದಿಕ್ಕೆ ದೇವರೇ ಬಂದಿದಾನೆ ಅಂತ ನಂಬಿ ಬಿಟ್ಟಿದ್ದಾನೆ. ಹುಡುಗನಿಗೆ ಭರವಸೆ ಕೊಟ್ಟೆ. ಅವನನ್ನ ಕರೆದುಕೊಂಡು ರಾಜನ ಹತ್ತಿರ ಹೋದರೆ, ಅವನೇ ಹರಿಶ್ಚಂದ್ರ! ಉಪಚಾರ ಎಲ್ಲ ಆದಮೇಲೆ ಹೇಳಿದ. " ಮಹಾಸ್ವಾಮಿ, ನಾನೇನೂ ಇವನನ್ನ ಸಾಯಿಸಬೇಕು ಅಂತ ಇಲ್ಲ. ಆದರೆ ವರುಣ ಶಾಪ ಕೊಟ್ಟಿದ್ದ. ಜಲೋದರ ರೋಗ ಬರಲಿ ಅಂತ. ಅದರ ನಿವಾರಣೆಯಾಗಬೇಕಿದ್ದರೆ ಇವನ ಬಲಿ ಕೊಡಬೇಕು" " ವರುಣನೇಕೆ ಶಾಪ ಕೊಟ್ಟ ? " ವಿಶ್ವಮಿತ್ರನ ಪ್ರಶ್ನೆಗೆ ಹರಿಶ್ಚಂದ್ರ ತಲೆ ಕೆಳಗೆ ಹಾಕಿದ. ಅಪರಾಧೀ ಭಾವದಲ್ಲಿ ಒದ್ದಾಡುತ್ತಲೇ ಚುಟುಕಾಗಿ ಹೇಳಿದ, " ವರುಣನಿಗೆ ಮಾತು ಕೊಟ್ಟು ತಪ್ಪಿದೆ. ಮತ್ತೆ ಮತ್ತೆ ಸುಳ್ಳು ಹೇಳಿದೆ, ಅದಕ್ಕೆ ಸಿಟ್ಟಾಗಿ ಅವನು ಶಾಪ ಕೊಟ್ಟ.”
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos