ಮಹರ್ಷಿ ವಿಶ್ವಾಮಿತ್ರ-ಸತ್ಯಹರಿಶ್ಚಂದ್ರ (ಸಾಂಕೇತಿಕ ಚಿತ್ರ)
ಶುಕ್ಲ ಪಕ್ಷದ ಸಪ್ತಮಿ ಭಾನುವಾರ. ಅಂದು ವಿಜಯಾ ಸಪ್ತಮಿ. ತಮ್ಮ ವಂಶದ ಮೂಲ ಪುರುಷನಿಗೆ ಪ್ರಿಯವಾದ ಸಪ್ತಮಿ ಕಲ್ಪ. ಚತುರ್ಥಿಯಿಂದಲೇ ವ್ರತಾರಂಭ ಮಾಡಿದ್ದಾನೆ ಹರಿಶ್ಚಂದ್ರ. ಅಂದು ಹಗಲು ಆಹಾರ ಸ್ವೀಕರಿಸಿದ ಮೇಲೆ ಪಂಚಮಿ ರಾತ್ರಿಯೇ ಊಟ ಮಾಡಿದ್ದು. ಷಷ್ಠಿ ಪೂರ್ಣ, ಸೂರ್ಯ ಸಾನ್ನಿಧ್ಯದ ಉಪವಾಸ ಮಾಡಿ ಸಪ್ತಮಿ ಸೂರ್ಯೋದಯಕ್ಕೆ ಮುನ್ನ ಶುದ್ಧನಾಗಿ ಅರಮನೆಯ ಸಿಂಹದ್ವಾರದಲಿ ನಿಂತಿದ್ದಾನೆ. ಹಂಡೆ, ತಪ್ಪಲೆ, ಗುಡಾಣ, ಬಾಣಲೆ, ಚೀಲ, ಇವುಗಳಲ್ಲೆಲ್ಲ ನಾಣ್ಯ, ಬೆಳ್ಳಿ, ಬಂಗಾರ, ರತ್ನಗಳು ತುಂಬಿ ಕಾಯುತ್ತಿವೆ. ನಾಲ್ಕು ದಿನಗಳಿಂದ ಸಾರಿರುವ ಕಾರಣ ಸಾವಿರಾರು ಮಂದಿ ಸರತಿಯಲ್ಲಿ ಕಾಯುತ್ತಿದ್ದಾರೆ, ದಾನ ಬೇಡಲು. ನಿತ್ಯ ಭಿಕ್ಷುಕರಲ್ಲದೇ ಆ ದಿನದ ಮಟ್ಟಿಗೆ ಕೈಯ್ಯೊಡ್ಡಲು ನಿಂತಿದ್ದಾರೆ ಬಡವರು, ಸಂಸಾರಸ್ಥರು, ವಿದ್ಯಾರ್ಥಿಗಳು, ರೈತರು, ವರ್ತಕರು.... ಒಬ್ಬಿಬ್ಬರೇ? ಹರಿಶ್ಚಂದ್ರ ಧಾರೆ ಎರೆಯುತ್ತಿದ್ದಾನೆ ಬೇಡಿರುವ ಕೈಗಳಲ್ಲಿ. ದಾನ ಮಂತ್ರೋಚ್ಛಾರಣೆ ಮಾಡುತ್ತಿದ್ದಾರೆ ವಸಿಷ್ಠರು. ಅವ್ಯಾಹತವಾಗಿ ಮಧ್ಯಾಹ್ನದವರೆಗೆ ನೆಡೆದಿದೆ ದಾನಕಾರ್ಯ. ಅಭಿಜಿನ್ಮುಹೂರ್ತ ಸಮೀಪಿಸುತ್ತಿದ್ದಂತೆಯೇ ವಸಿಷ್ಠರು ಹೇಳಿದರು, " ನಾನೀಗ ಹೋಗಿ ಮಾಧ್ಯಾಹ್ನಿಕೆ ಮುಗಿಸಿ ಬರುತ್ತೇನೆ. ಅಲ್ಲಿಯ ವರೆಗೆ ಶಿಷ್ಯ ಯಙ್ಞವ್ರತ ದಾನಮಂತ್ರ ಪಠಿಸುತ್ತಾನೆ." ಅವರತ್ತ ಹೋಗುತ್ತಿದ್ದಂತೆಯೇ ಇತ್ತ ಪ್ರತ್ಯಕ್ಷರಾದರು ವಿಶ್ವಮಿತ್ರರು.
(ಬಂದ ಸುಜನ ಮೃಗ ಧೀವರಂ ಕಪಟ ಪಟು ಕೌಶಿಕಂ ವಾಸಿಷ್ಠ ಮುನಿ ಹೋದ ಹೊತ್ತನರಿದು)
ಓಹ್ ! ತನ್ನ ತಂದೆಗಾಗಿಯೇ ಸ್ವರ್ಗ ಸೃಷ್ಟಿಸಿದವರು. ತನಗೆ ಪೂಜ್ಯರು. ಋಷಿ ಶ್ರೇಷ್ಠರು. ತನ್ನ ಕುಲಗುರುಗಳನ್ನೇ ಎದುರು ಹಾಕಿಕೊಂಡಂತಹ ಮಹಾ ಶಕ್ತರು. ಮಹಾ ಮಹಾ ತಪಸ್ವಿಗಳು. ದೇವತೆಗಳನ್ನೇ ನಡುಗಿಸಿಬಲ್ಲ ತಪೋನಿಷ್ಠರು. ಅವರು ಬರುವುದೇ ಒಂದು ಪುಣ್ಯ. ತನಗೇನೋ ಶುಭ ಕಾದಿದೆ. ತನಗೇನೋ ಒಳ್ಳೆಯದೇ ಆಗಲಿದೆ, ತನಗೇನೋ ವರ ಸಿಗಲಿದೆ. ಆದರೆ.... ಅವರು ಈ ದಾನ ಸಮಾರಂಭಕ್ಕೆ ಏಕೆ ಬರಬೇಕು ? ನನ್ನಿಂದ ಅವರಿಗೆ ಏನಾಗಬೇಕಾಗಿದೆ? ಅವರು ಬಯಸಿದರೆ ಕುಬೇರನೇ ಓಡೋಡಿ ಬರುತ್ತಾನೆ. ಇರಲಿ, ಅವರು ಏಕಾದರೂ ಬರಲಿ. ಬಹುಶಃ ನನ್ನನ್ನೇನ್ನಾದರೂ ಪರೀಕ್ಷಿಸಲು ಬರುತ್ತಿದ್ದಾರೋ ?
ಲಗುಬಗೆಯಿಂದ ಹೋಗಿ ಅವರ ಕೈ ಹಿಡಿದು ಕರೆತಂದು ಸುವರ್ಣಾಸನದಲ್ಲಿ ಕೂಡಿಸಿ ಪಾದ ತೊಳೆದು ಅರ್ಘ್ಯವಿತ್ತು ಕೇಳಿದ ಹರಿಶ್ಚಂದ್ರ, ಆಙ್ಞೆ ಏನೆಂದು.
ವಿಶ್ವಮಿತ್ರರು: ರಾಜ, ನೀನು ಬಹುಸುವರ್ಣಯಾಗ ಮಾಡುವ ವಿಷಯ ಕೇಳಿ ಬಂದೆ. ನಾನು ಒಂದು ದೊಡ್ಡ ಯಙ್ಞ ಮಾಡಬೇಕೆಂದಿದ್ದೇನೆ. ಅದಕ್ಕೆ ಅಪಾರ ಹಣ ಬೇಕು. ನಿನ್ನನ್ನು ಕೇಳಬೇಕೆಂದೆನ್ನಿಸಿತು....
ಹರಿಶ್ಚಂದ್ರ: ಏನು ಸ್ವಾಮಿ ಹಾಗೆಂದರೆ ? ತಾವು ಕೇಳಬೇಡಿ , ಆದೇಶ ನೀಡಿ ! ಬಯಸಿದ್ದ ಮರುಕ್ಷಣದಲ್ಲಿ ನಿಮ್ಮ ಮುಂದೆ ಇರುತ್ತದೆ.
ವಿಶ್ವಮಿತ್ರರು: ಹಾಗಾದರೆ ರಾಜ, ನಿನ್ನ ಪಟ್ಟದಾನೆಯನ್ನು ತರಿಸು. ಅದನ್ನು ನಿನ್ನ ಸೇನಾಧಿಪತಿ ಹತ್ತಲಿ , ತನ್ನ ದೃಢ ಬಾಹುವಿನಿಂದ ಒಂದು ವರಹವನ್ನು ಚಿಮ್ಮಲಿ ಮೇಲಕ್ಕೆ . ಅದು ಎಷ್ಟು ಎತ್ತರಕ್ಕೆ ಹೋಗುವುದೋ ಅಲ್ಲಿಯೇ ಅದನ್ನು ನಿಲ್ಲಿಸುವೆ . ಅಷ್ಟೆತ್ತರಕ್ಕೆ ಪೇರಿಸಿದ ಚಿನ್ನದ ಇಟ್ಟಿಗೆಗಳು ಬೇಕು. ಕೊಡುವೆಯಾ?
(ಪಿರಿಯ ಕರಿಯಂ ಮೆಟ್ಟಿ ಕವಡೆಯಂ ಮಿಡಿದೊಡೆ ಎನಿತು ಉದ್ದಮುಂ ಪೋಪುದೋ ಅದರ
ಸರಿಯೆನಿಸಿ ಸುರಿದ ಹೊಸ ಹೊನ್ನ ರಾಶಿಯನು ಈವುದು ಅರಸ)
ಮುನಿಗಳ ಮಾತು ಮುಗಿಯುವುದೂ ತಡವಿಲ್ಲ; ಆನೆ ಬಂದದ್ದೂ ತಡವಿಲ್ಲ; ನಾಣ್ಯ ಚಿಮ್ಮಿದ್ದೂ ತಡವಿಲ್ಲ; ಅದು ಗಗನದಲ್ಲಿ ನಿಂತದ್ದೂ ತಡವಿಲ್ಲ; ಚಿನ್ನದ ಗಟ್ಟಿಗಳನ್ನು ಪೇರಿಸಿದ್ದೂ ತಡವಿಲ್ಲ; ಯಙ್ಞ ವ್ರತ ದಾನಮಂತ್ರ ಹೇಳಿದ್ದೂ ತಡವಿಲ್ಲ; ದಾನಜಲ ವಿಶ್ವಮಿತ್ರರ ಕೈ ಮುಟ್ಟಿದ್ದೂ ತಡವಿಲ್ಲ. ತೃಪ್ತರಾಗಿ ಎದ್ದ ಮುನಿಗಳು, " ರಾಜ, ಎಚ್ಚರದಿಂದ ಕೇಳಿಸಿಕೊ. ಈ ಚಿನ್ನ ನನ್ನದು. ಈಗ ಇದನ್ನು ನಾನು ಒಯ್ಯುವುದಿಲ್ಲ. ನಿನ್ನ ಭಂಡಾರದ ಈಶಾನ್ಯ ದಿಕ್ಕಿನಲ್ಲಿ ಇದನ್ನು ಇರಿಸು. ಇದು ನಿನ್ನಲ್ಲಿ ನ್ಯಾಸವಾಗಿಯೇ ಇರಲಿ. ನಾನು ಬೇಕೆಂದಾಗ ಕೊಡುವೆಯಂತೆ.
(ನಿನ್ನ ಮೇಲಿರಲಿ ಬೇಹಾಗ ತರಿಸಿಕೊಂಡಪೆ)
ವಿಶ್ವಮಿತ್ರರನ್ನು ಪುರ ದ್ವಾರದಲ್ಲಿ ಬಿಟ್ಟು ಬರುವ ಹೊತ್ತಿಗೆ ವಸಿಷ್ಠರು ಮಾಧ್ಯಾಹ್ನಿಕೆ ಮುಗಿಸಿ ಬಂದಿದ್ದರು. ಗುಡ್ಡದಂತೆ ಬಿದ್ದಿದ್ದ ಚಿನ್ನ ಕಂಡು ವಿಸ್ಮಿತರಾದ ವಸಿಷ್ಠರಿಗೆ, ಶಿಷ್ಯ ನಡೆದುದನ್ನು ಹೇಳಿದ. ಕಣ್ಮುಚ್ಚಿದ ಋಷಿಗಳಿಗೆ ಏನು ಕಾಣಿಸಿತೋ.... ಕೊಂಚ ಖಿನ್ನರಾದರು. ಮತ್ತೆ ಕಣ್ಮುಚ್ಚಿದರು, ಮತ್ತೆ ಒದ್ದಾಡಿದರು. ಮತ್ತೊಮ್ಮೆ ಕಣ್ಮುಚ್ಚಿ ತೆಗೆದಾಗ ಮುಖದಲ್ಲಿ ಮಂದಹಾಸವಿತ್ತು.
************
ಇದೀಗ ಎರಡನೆಯ ಹಂತ. ಹಿಂದೊಮ್ಮೆ ತ್ರಿಶಂಕು ಸಂದರ್ಭದಲ್ಲಿ ಸೃಷ್ಟಿಸಿದ್ದ ವನ್ಯಮೃಗಗಳನ್ನು ಈಗ ಮತ್ತೊಮ್ಮೆ ಸೃಷ್ಟಿಸುತ್ತಿದ್ದಾರೆ. ಕಮಂಡಲದ ಜಲ ಅವರ ಅಂಗೈಯಲ್ಲಿ ಹೊಳೆಯುತ್ತಿದೆ. ಮತ್ತೆ ಮತ್ತೆ ಅಂಗೈ ತುಂಬಿ ನಾಲ್ಕು ದಿಕ್ಕುಗಳಿಗೂ ಮಂತ್ರಿಸಿ ಎರೆಚಿದರು. ಕ್ಷಣಮಾತ್ರದಲ್ಲಿ ಜಲಬಿಂದುಗಳ ಸ್ಪರ್ಶವಾಗುತ್ತಿದ್ದ ಮರುಕ್ಷಣವೇ ಎಲೆಯ ಚೂರೋ, ಕಟ್ಟಿಗೆಯ ತುಂಡೋ, ಧೂಳಿನ ಕಣವೋ.... ಸ್ಪರ್ಶಕ್ಕೆ ಬರುತ್ತಿದ್ದಂತೆಯೇ ಯಾವುದೋ ಪ್ರಾಣಿಯ ಆಕಾರ ಪಡೆದು ನಿಲ್ಲುತ್ತಿದೆ. ಸಾವಿರಾರು ಪ್ರಾಣಿ - ಪಕ್ಷಿ - ಮೃಗಗಳಿಂದ ಅವರ ಆಶ್ರಮ ಕಿಕ್ಕಿರಿಯಿತು. ಆಙ್ಞಾಪಿಸಿದರು ಋಷಿಗಳು, " ಖಗ, ಮೃಗ, ಪಕ್ಷಿ, ಹುಳು, ಹುಪ್ಪಟೆಗಳೇ, ಹೋಗಿ ಅಯೋಧ್ಯೆಯನ್ನು ಮುತ್ತಿ; ಸುತ್ತಲ ಗದ್ದೆ, ತೋಟಗಳನ್ನು ಧ್ವಂಸ ಮಾಡಿ! "