ಕೆಲವೇ ನಿಮಿಷಗಳಲ್ಲಿ ದಿಗಿಲು ಬಿದ್ದು ಎದ್ದ ಗಂಡನನ್ನು ಕೇಳಿದಳು, "ಏಕೆ? ಏನಾಯಿತು? ಕೆಟ್ಟ ಕನಸು ಕಂಡಿರಾ? ಏಕೆ ಬೆವರುತ್ತಿದ್ದೀರಿ? "ಮುಖ ಒರೆಸಿಕೊಳ್ಳುತ್ತ ಹರಿಶ್ಚಂದ್ರ ದುಗುಡದಿಂದ ಹೇಳಿದ; " ಓಹ್! ಬಹಳ ಕೆಟ್ಟ ಕನಸು. ಆಸ್ಥಾನದಲ್ಲಿದ್ದಾಗ ಯಾರೋ ಮುನಿ ಬಂದು ನನ್ನನ್ನು ನೂಕಿದ ನೆಲದ ಮೇಲೆ. ಸಿಂಹಾಸನವನ್ನು ಎತ್ತು ಒಯ್ದ. ಮುಂದೊಂದು ಕಾಡು. ಅಲ್ಲೊಂದು ಗುಡ್ಡ. ಕಷ್ಟ ಪಟ್ಟು ಹತ್ತಿದೆ. ಅಲ್ಲಿ ನೀನು ಇದ್ದು ಕೈ ಹಿಡಿದು ಎಳೆದುಕೊಂಡೆ ನನ್ನ. ಅಲ್ಲೊಂದು ಅರಮನೆ. ಏನೋ ಗೊತ್ತಾಗುತ್ತಾಯಿಲ್ಲ. ಎದೆ ಹೊಡಕೊಳ್ಳುತ್ತಿದೆ ಏಕೋ.
"ಚಂದ್ರಮತಿ ಮಹಾ ಸೂಕ್ಷ್ಮಮತಿ. ಮಾತಾಡಿದರೆ ಅದರ ಮರ್ಮ ಅರಿಯಬಲ್ಲ ಚತುರೆ. ಎಷ್ಟೇ ಆಗಲಿ ಚಂದ್ರ ಮನಸ್ಸಿಗೆ ಯಜಮಾನ. ಈಕೆಯ ಮತಿಯೇ ಚಂದ್ರ. ಒಡನೆ ಹೇಳಿದಳು; " ಇದರಲ್ಲಿ ಯೋಚಿಸುವುದೇನೂ ಇಲ್ಲ. ನಾವು ಗುರುಗಳ ಮಾತನ್ನು ಮೀರಿದೆವು. ಅವರು ವಿಶ್ವಮಿತ್ರರ ಆಶ್ರಮಕ್ಕೆ ಹೋಗ ಕೂಡದು ಎಂದು ಹೇಳಿದರು. ಈಗ ಎಲ್ಲಿದ್ದೇವೆ ನೋಡಿದಿರ? ಮೈದಾನ ಆರಂಭವಾಗುತ್ತಿದ್ದಂತೆಯೇ ಅವರ ಆಶ್ರಮ ಶುರುವಾಯಿತು. ನೀವು ಹಂದಿಯನ್ನು ಗಮನಿಸುತ್ತಿದ್ದಿರಿ. ನಾನಲ್ಲಿದ್ದ ಫಲಕದಲ್ಲಿ " ವಿಶ್ವಮಿತ್ರರ ತಪೋವನ" ಎಂಬ ಬರಹ ಓದಿದೆ. ಈ ಕನಸು ಗುರುಗಳ ಆಙ್ಞೆಯನ್ನು ಮೀರಿದ್ದರ ಕೆಡುಕಿನ ಸೂಚನೆ. ಬಹುಶಃ ವಿಶ್ವಮಿತ್ರರು ನಮ್ಮನ್ನು ಶಪಿಸಬಹುದು. ಕಷ್ಟಪರಂಪರೆ ಉಂಟಾಗಬಹುದು. "ಹರಿಶ್ಚಂದ್ರನ ವದನ ಮ್ಲಾನವಾಯಿತು.
ಅಧೀರನಾಗುತ್ತಿದ್ದ ಗಂಡನ ಕೈ ಹಿಡಿದು ಬೇಡಿದಳು ರಾಣಿ, " ಸ್ವಾಮಿ, ನಿಮ್ಮದು ಸತ್ಯವ್ರತ. ವರುಣ ಪ್ರಕರಣದ ನಂತರ ನೀವು ಅಗ್ನಿ ಸಾಕ್ಷಿಕವಾಗಿ ಪ್ರಮಾಣ ಮಾಡಿದ್ದೀರಿ; ಯಾವುದೇ ಕಾರಣದಿಂದ ಸುಳ್ಳು ಹೇಳುವುದಿಲ್ಲ ಎಂದು. ಈಗ ಮುಂದೇನಾಗುವುದೋ, ಯಾರಿಗೇನು ಕೇಡಾಗುವುದೋ, ಮಂತ್ರಿಗೋ, ಮಗನಿಗೋ, ರಾಜ್ಯಕ್ಕೋ, ಸ್ವತಃ ನಿಮಗೋ ತೊಂದರೆಯಾಗಬಹುದೇನೋ. ದಯವಿಟ್ಟು ಯಾವುದೇ ಕಾರಣವಿದ್ದರೂ ಮಾತಿಗೆ ಮಾತ್ರ ತಪ್ಪಬೇಡಿ. ಎರಡು ಮಾತು ನಿಮ್ಮಿಂದ ಬರದಿರಲಿ. ಈ ವರ ನೀಡಿ ನನಗೆ"
(ಬಗೆವೊಡೆ ಈ ಕನಸು ಗುರುವಾಙ್ಞೆಯಂ ಮೀರಿತ ಕ್ಕೆ ಒಗೆದ ಕೇಡಿಂಗೆ ಸೂಚನೆ
ಮುನಿಯಬೇಡ ಮಂತ್ರಿಗೆ ಮಗಂಗೆ ಎನಗೆ ರಾಜ್ಯಕ್ಕೆ ಚತುರಂಗ ಸೇನೆಗೆ ಸಕಲ ಭಂಡಾರಕೆ
ನಗರಕ್ಕೆ ಸರ್ವ ಪರಿವಾರಕ್ಕೆ ತೇಜದ ಏಳ್ಗೆಗೆ ನಿನ್ನ ಹರಣಕ್ಕೆ ಕೇಡು ಬಂದೊಡೆ ಬರಲಿ
ಮಿಗೆ ಸತ್ಯಮಂ ಬಿಟ್ಟು ಕೆಡದಿರು ಅವನೀಶ ಬೇಡಿದೆನು ಎಂದಳು)
(ನಮಗೀಗಾಗಲೇ ವಿಶ್ವಮಿತ್ರರ ಪರೀಕ್ಷೆಯಲ್ಲಿ ಗೆಲ್ಲುವ ಹರಿಶ್ಚಂದ್ರನ ಬಗ್ಗೆ ಗೊತ್ತಿದೆ. ಆದರೆ ಅವನ ಆ ಶಿಖರಾರೋಹಣಕ್ಕೆ ಚಂದ್ರಮತಿಯ ಬೆಂಬಲ, ಒತ್ತಾಸೆ , ಸ್ಥೈರ್ಯಗಳನ್ನು ನಾವೀಗ ಕ್ರಮ ಕ್ರಮವಾಗಿ ನೋಡಲಿದ್ದೇವೆ. ಅಷ್ಟೇ ಅಲ್ಲ, ಅಕಸ್ಮಾತ್ ಚಂದ್ರಮತಿಯ ಪಾತ್ರ ಸಕ್ರಿಯವಾಗಿರದೇ ಇದ್ದಿದ್ದರೆ, ಹರಿಶ್ಚಂದ್ರ ಪರೀಕ್ಷೆಯಲ್ಲಿ ಗೆಲ್ಲುತ್ತಿದ್ದನೋ ಎಂಬ ಸಂದೇಹವೂ ಉಂಟಾಗುತ್ತದೆ. -ಲೇ)
ತನ್ನ ಹಂದಿಗಾದ ಅವಸ್ಥೆಯನ್ನು ಕಂಡ ವಿಶ್ವಮಿತ್ರರಿಗೆ ಒಳಗೆ ಸಂತೋಷವೇ. ಆದರೂ ಬಹಿರಂಗದಲ್ಲಿ ಕೋಪಗೊಂಡವರಂತೆ ನಟಿಸುತ್ತಾ ಗರ್ಜಿಸುತ್ತಾರೆ. " ತಪ್ಪಿಸಿಕೊಳ್ಳುತ್ತಿದ್ದೆಯೋ! ಇದೀಗ ಸಿಕ್ಕಿಕೊಂಡೆ ನನ್ನ ಮಷ್ಠಿಯಲ್ಲಿ ನೀನು. ನಿನ್ನನ್ನು ಕೆಡಿಸದೆ ಬಿಡೆ! " ಎಂದು ಅಬ್ಬರಿಸಿದರೆ, ಅವರ ಮೂಗಿನ ಎರಡು ಹೊಳ್ಳೆಗಳಿಂದ ಹೊರಬಂದರು ಇಬ್ಬರು ಚಲುವೆಯರು.
(ಸಿಕ್ಕಿದನಲಾಭೂಪ ಇಂದು ನಾನಾಯಿತು ತಾನಾಯಿತು ಕೆಡಿಸದೆ ಮಾಣೆ
ನ್! ಎಂದು ಗರ್ಜಿಸುವ ಕೌಶಿಕನ ಹೂಂಕಾರದಿಂದ ಒಗೆದರು ಇಬ್ಬರು ಸತಿಯರು)
ಊಹೆಗೆ ಮೀರಿದ ಘಟನೆಗಳು ಒಂದರ ಹಿಂದೆ ಒಂದರಂತೆ ನೆಡೆದು ಬಿಟ್ಟಿತು. ವಿಚಲಿತ ಹರಿಶ್ಚಂದ್ರನಲ್ಲಿ ಬಂದು ತಮ್ಮ ಹಾಡಿನಿಂದಲೋ, ರೂಪದಿಂದಲೋ, ನಯ ಮಾತಿನಿಂದಲೋ, ನರ್ತನದಿಂದಲೋ ರಂಜಿಸಿದರು ಕೌಶಿಕ ಪುತ್ರಿಯರು. ಸಂತಸಗೊಂಡ ಹರಿಶ್ಚಂದ್ರ ಉಡುಗೊರೆಯಾಗಿ ನೀಡಿದ ಮಣಿಹಾರವನ್ನು ಅವರು ತಿರಸ್ಕರಿಸಿ, ಬಿಸಿಲ ಬೇಗೆಯಿಂದ ಬಸವಳಿದಿರುವ ತಮಗೆ ಈಗ ಬೇಕಾದದ್ದು ನೆರಳು; ಅದನ್ನೀವ ಕೊಡೆ; ಬೆಳ್ಗೊಡೆಯನ್ನು ಕೊಡಲು ಕೇಳಿದರು. ಚಕ್ರವರ್ತಿಯ ಮೇಲಿರಬೇಕಾದ ಶ್ವೇತ ಛತ್ರವನ್ನು ಹಾಗೆ ಕೊಡಲಾಗದೆಂದಾಗ ತಮ್ಮನ್ನೇ ಮದುವೆಯಾಗಲು ಕೇಳಿಕೆ. ತನ್ನ ಹೆಂಡತಿಯನ್ನು ಬಿಟ್ಟು ಅನ್ಯ ಹೆಣ್ಣಲ್ಲಿ ಮನವಿಡದ ಹರಿಶ್ಚಂದ್ರ ಒತ್ತಾಯ, ಗಲಾಟೆ, ಗೋಳುಗಳು ಹೆಚ್ಚಾದಾಗ ಅವರನ್ನು ಒತ್ತಾಯಪೂರ್ವಕವಾಗಿ ಕಳಿಸಬೇಕಾಯಿತು. ಅವಮಾನಿತರಾಗಿ ಬಂದ ಮಕ್ಕಳನ್ನು ಕಂಡು ಆರ್ಭಟಿಸಿ ಬಂದರು ವಿಶ್ವಮಿತ್ರರು. ಕಾಲಿಗೆ ಬಿದ್ದ ಹರಿಶ್ಚಂದ್ರನನ್ನೊದ್ದು ತನ್ನ ಮಕ್ಕಳನ್ನು ಮದುವೆಯಾಗಲು ಮತ್ತೆ ಮತ್ತೆ ಹಿಂಸಿಸ ತೊಡಗಿದರು.