ಅಂಕಣಗಳು

ಬಲೆಗೆ ಬಿದ್ದ ಮೃಗರಾಜ

Dr. Pavagada Prakash Rao
ತನ್ನದು ಏಕಪತ್ನಿವ್ರತ. ಇದೇಕೆ ಋಷಿಗಳಿಗೆ ಅರ್ಥವಾಗುತ್ತಿಲ್ಲ. ಹೆಣ್ಣು ತನ್ನ ಗಂಡನನ್ನು ಬಿಟ್ಟು ಅನ್ಯ ಗಂಡನ್ನು ಕಣ್ಣೆತ್ತಿಯೂ ನೋಡಕೂಡದೆಂದು ಬಯಸುತ್ತದೆ ಗಂಡು ಪ್ರಾಬಲ್ಯದ ಸಮಾಜ. ಅಂತಹ ಹೆಣ್ಣನ್ನು ಮಾನ ಸಮ್ಮಾನಗಳಿಂದ ಮರ್ಯಾದಿಸಿ ಆಕೆಯನ್ನು ಪತಿವ್ರತೆಯೆಂದು ಕೊಂಡಾಡುತ್ತದೆ. 
ಅದೇ ಗಂಡು ಬಹುವಲ್ಲಭೆಯರ ಪತಿ. ಅವನು ರಸಿಕ. ಅವನಿಗೆ ಈ ಯಾವ ನಿಯಮವೂ ಇಲ್ಲ. ಎಲ್ಲಾ ಪುರುಷರ ದಬ್ಬಾಳಿಕೆ. ತಾನು ಹಾಗಾಗಬೇಕಿಲ್ಲ. ತಾನು ಹೆಣ್ಣಿಗೆ ಗೌರವ ನೀಡಬೇಕು. ಆಕೆಗೆ ಸಮಾನ ಸ್ಥಾನ, ಮರ್ಯಾದೆ ನೀಡಬೇಕು. 
ಹೀಗಾಗಿ ತಾನು ಏಕಪತ್ನೀವ್ರತಸ್ಥನಾಗಿರಬೇಕು. ಈ ತರ್ಕವನ್ನೇಕೆ ಋಷಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ? ಪೀಡಿಸುತ್ತಿರುವ ವಿಶ್ವಮಿತ್ರರನ್ನು ಕಂಡು ಹೇಳಿದ ರೋಸಿ ಹೋದ ಹರಿಶ್ಚಂದ್ರ; "ಮತ್ತೆ ಮತ್ತೆ ಕಾಡುತ್ತಿದ್ದೀರಿ. ನಿಮ್ಮ ಮಕ್ಕಳನ್ನು ಮದುವೆಯಾಗುವುದು ಕೆಟ್ಟ ಕೀರ್ತಿ. ಅದು ಹೊಗೆ ಮುಚ್ಚಿದ ಜ್ವಾಲೆ. ದುಷ್ಟ ತೇಜಸ್ಸು. ಅದರೊಡನೆ ರಾಜಿಯಾಗುವುದರ ಬದಲು ನನ್ನ ರಾಜ್ಯವನ್ನೇ ಕೊಡಬಹುದು ಅಷ್ಟೇ.
(ಎಡೆವಿಡದೆ ಕಾಡುವಿರಾದೊಡೆ ಇನ್ನು ಕೇಳಿ ಕಡೆಗೆ ಎನ್ನ ರಾಜ್ಯವನಾದೊಡಂ ನಿಮಗೆ
ಕೊಡಹಡೆವೆನೈ ಸಲ್ಲದೀಯೊಂದು ತೇಜಮಂ ಕೊಡೆನು)
ಕಾಯುತ್ತಿದ್ದ ಕೌಶಿಕರು ಕೇಳಿದರು; " ಹಾಗಾದರೆ ಈ ಕ್ಷಣಕ್ಕೇ ರಾಜ್ಯವನ್ನು ಕೊಡು. " ಹರಿಶ್ಚಂದ್ರನ ಬಾಯಿಂದ ಮಾತು ಬಂದಾಗಿತ್ತು. ರಾಜ್ಯವನ್ನಾಕ್ಷಣಕ್ಕೆ ಬಿಡಲೂ ಅವನಿಗೆ ಯಾವುದೇ ತಕರಾರೂ ಇಲ್ಲ, ಅಷ್ಟು ನಿರ್ಲಿಪ್ತನಾತ. ಆದರೂ ಮನಸ್ಸು ಹಿಂಜರಿಯುತ್ತಿದೆ. ಕಾರಣ, ಇದ್ದಕ್ಕಿದ್ದಂತೆಯೇ ಹೀಗೆ ಎಲ್ಲ ಭೋಗ ಭಾಗ್ಯಗಳನ್ನೂ ಬಿಟ್ಟುಬಿಟ್ಟರೆ ತನ್ನ ಪತ್ನಿ ಏನೆನ್ನುವಳೋ? ಆದರೆ ಚಂದ್ರಮತಿ ಗಂಡನನ್ನು ಮೀರಿದ ದೃಢ ಚಿತ್ತೆ. 
"ಅದೃಶ್ಯ ಈಶ್ವರನ ದೃಶ್ಯ ರೂಪವೇ ವಿಶ್ವಮಿತ್ರರು. ಅವರೇ ರಾಜ್ಯವನ್ನು ಕೇಳುತ್ತಿರುವಾಗ ಯೋಚಿಸುವರೇ? ಸಂತಸದಿಂದ ಕೊಡಬಾರದೇ?"
(ಸರಸಿಜಾನನೆ ಚಂದ್ರಮತಿ ರಾಣಿಯರ ದೇವಿ ಹರನೇಕ ಭಾವವೆನಿಸುವ ಕೌಶಿಕಂ ಬೇಡುತಿರಲು ಮಂತ್ರವಮಾಳ್ಪರೇ? ಹರುಷದಿಂ ಸರ್ವ ರಾಜ್ಯವನು ಈವುದು)
ತನಗಿದ್ದ ಒಂದೇ ಶಂಖೆ ಬಗೆಹರಿಯುತ್ತಿದ್ದಂತೆಯೇ ನಿರ್ಮಮಕಾರದಿಂದ ಧಾರೆ ಎರೆದೇ ಬಿಟ್ಟ ಹರಿಶ್ಚಂದ್ರ ವಿಶ್ವಮಿತ್ರರಿಗೆ. ವಿಶ್ವಮಿತ್ರರ ಒಡ್ಡಿದ ಕೈಗೆ ಹರಿಶ್ಚಂದ್ರನ ಕರದಿಂದ ದಾನ ಜಲ ಬೀಳುತ್ತಿದೆ; ಚಂದ್ರಮತಿ ನೀರನ್ನು ಎರೆಯುತ್ತಿದ್ದಾಳೆ.
ಅಯೋಮಯ ಸ್ಥಿತಿ ಹರಿಶ್ಚಂದ್ರನದು. ರಾಜಾಧಿರಾಜನಾಗಿದ್ದ ತನ್ನದೀಗ ಬರಿಗೈ. ಪ್ರಾಣಿಗಳ ಉಪಟಳ, ಪರಿಹಾರಕ್ಕೆ ಬೇಟೆ, ಯಾವುದೋ ಕಾಡು ಹಂದಿ, ಬಳಲಿಕೆ, ದುಸ್ವಪ್ನ, ಕಾಡಿನ ಮಧ್ಯೆ ಪ್ರತ್ಯಕ್ಷವಾದ ಗಾಯಕಿಯರು, ಮದುವೆಯಾಗಲು ಒತ್ತಾಯ, ತನ್ನ ಶಿಸ್ತು... ಏನಿದೆಲ್ಲ... ಯೋಚಿಸುತ್ತಿದ್ದಾಗ ವಿಶ್ವಮಿತ್ರರು ಕೇಳುತ್ತಿದ್ದಾರೆ, " ಏನೇನನ್ನೆರೆದೆ?." ಹರಿಶ್ಚಂದ್ರ ಹೇಳಿದ, " ಚತುರಂಗ ಸೇನೆ, ಸಕಲ ಭಂಡಾರ, ನಿಜರಾಜಧಾನಿ, ಜಗದಾಣೆ ಘೋಷಣೆ, ಏಳು ದ್ವೀಪಗಳನ್ನೂ ಆನಂದದಿಂದ ಇತ್ತೆನು. " 
ನಿಂತ ನಿಲುವಿನಲ್ಲಿ ಹಿಂದೆ ಮುಂದೆ ಯೋಚಿಸದಂತೆ ಒತ್ತಡದ ಮಧ್ಯೆ ಹರಿಶ್ಚಂದ್ರ ಗೊಂದಲದ ತಲೆಯಾಗಿ ಎಚ್ಚರತಪ್ಪಿದ್ದ. ಅದೇ ಅವನ ಮುಂದಿನ ಕಷ್ಟಗಳ ಆದಿಯಾಯಿತು. ರಾಜ್ಯಕ್ಕೆ ಬಂದು ಎಲ್ಲವನ್ನೂ ವಿಶ್ವಮಿತ್ರರಿಗೊಪ್ಪಿಸಿಕೊಟ್ಟು ಹೊರಟು ನಿಂತಾಗ ವಿಶ್ವಮಿತ್ರರು ಶಂಕೆಯೊಂದನ್ನೆತ್ತಿದರು.
ವಿಶ್ವಮಿತ್ರರು: ಹರಿಶ್ಚಂದ್ರ, ನನ್ನ ಸಾಲ ಕೊಡದೆ ಹೋಗುವಿಯೇನಯ್ಯ ?
ಹರಿಶ್ಚಂದ್ರ: ಸಾಲ? ಯಾವ ಸಾಲ ಸ್ವಾಮಿ? 
ವಿಶ್ವಮಿತ್ರರು: ಬಹುಸುವರ್ಣ ಯಾಗ ಮಾಡಿದಾಗ ಕೊಟ್ಟಿದ್ದೆಯಲ್ಲಪ್ಪಾ, ನಿನ್ನ ಹತ್ತಿರವೇ ಇಟ್ಟುಕೊಂಡಿರು, ನಾನು ಕೇಳಿದಾಗ ಕೊಡುವೆಯಂತೆ ಅಂತ ಹೇಳಿದ್ದೆನಲ್ಲ? 
ಹರಿಶ್ಚಂದ್ರ: ಅದು ಭಂಡಾರದಲ್ಲೇ ಇದೆಯಲ್ಲ ಸ್ವಾಮಿ! 
ವಿಶ್ವಮಿತ್ರ: ಹಾಗಂತ ಎಲ್ಲಪ್ಪ ಹೇಳಿದೆ ಧಾರೆ ಎರೆದಾಗ? ಏನೇನು ಧಾರೆ ಎರೆದೆ ಅಂದಾಗೆಲ್ಲ ನೀನೇನು ಹೇಳಿದೆ? " ಸಕಲ ಭಂಡಾರ,  ಸಕಲ ಭಂಡಾರ", ಅಂತ ಅಂದೆ. ಆ ಭಂಡಾರದಲ್ಲಿ ನನ್ನದು ಅಲ್ಲದೇ ಇರೋ, ವಿಶ್ವಮಿತ್ರರ ದುಡ್ಡು ಇದೇ ಎಂದು ಹೇಳಿದೆಯೇನಯ್ಯ 
ಹರಿಶ್ಚಂದ್ರ: ಅಂದರೆ?
ವಿಶ್ವಮಿತ್ರ: ಅಂದರೆ ಈಗ ಕೊಟ್ಟಿರೋದೆಲ್ಲಾ ದಾನ. ನಾನು ನಿನ್ನ ಹತ್ತಿರ ಇಟ್ಟುಕೋ ಅಂತ ಹೇಳಿದ್ದೆನಲ್ಲ, ಅದನ್ನ ಕೊಡಬೇಕಲ್ಲಪ್ಪ .
ಹರಿಶ್ಚಂದ್ರ: ಬರಿಗೈಯಾಗಿ ಹೋಗೋ ನಾನೆಲ್ಲಿ ಕೊಡಲಿ ಸ್ವಾಮಿ ? 
ವಿಶ್ವಮಿತ್ರ: ಸಂಪಾದನೆ ಮಾಡಿ ಕೊಡು. 
ಅಂತೂ ಅಷ್ಟೂ ಹಣ ಕೊಡಲು ಹರಿಶ್ಚಂದ್ರ ಒಪ್ಪಿದ. ನಲವತ್ತೆಂಟು ದಿನ ಅವಧಿಯನ್ನೂ ಗಳಿಸಿದ, ಆ ಹಣವನ್ನು ಕೊಂಡೊಯ್ಯಲು ನಕ್ಷತ್ರಿಕನೂ ಒಡನೆ ಬಂದ.
SCROLL FOR NEXT