ಅಂಕಣಗಳು

ಹೆಂಡತಿಯನ್ನೇ ಹರೆಯನ್ನು ಹಾಕಿದ ಹರಿಶ್ಚಂದ್ರ

ಯಾರೂ ಚಂದ್ರಮತಿಯನ್ನೂ ಕೊಳ್ಳದ್ದು , ಕೊನೆಗೆ ಚಂಡಕೌಶಿಕನೆಂಬ ಬ್ರಾಹ್ಮಣ ಬಂದು ಕೊಂಡದ್ದು, ಜೋತೆಗೆ ಲೋಹಿತಾಶ್ವ ಅಮ್ಮನನ್ನು ಹಿಂಬಾಲಿಸಿದ್ದು, ಇದೆಲ್ಲಾ ನಡೆಯಿತು ನಿಧಾನವಾಗಿ.

ಹರಿಶ್ಚಂದ್ರನ ಮುಂದೆ ಮುಶ್ಕರ ಹೂಡಿಯೇ ಬಿಟ್ಟ ನಕ್ಷತ್ರಿಕ. "ನಿಮ್ಮ ಹಿಂದೆ ಬಂದು ಇಂದಿಗೆ 48 ದಿನಗಳಾದವು. ಎಲ್ಲಿ ಹಣ? ಇನ್ನು ಸೂರ್ಯ ಮುಗಿಯುವದರ ವರಗೆ ನೀವು ಯಾಗ ಧನ ಕೊಡದೆ ಇದ್ದರೆ ಬರಿಗೈನಲ್ಲಿ ಗುರುಗಳ ಹತ್ತಿರ ಹೋಗುತ್ತೇನೆ. ನೀವು ಸುಳ್ಳುಗಾರರಾಗುತ್ತೇರೆ?. 
"ಹಿಂದೆ ಮುಂದೆ ಅರಿವಾಗದೆ ಪೆಕರು-ಪೆಕರಾಗಿ ಕೇಳಿದ ಹರಿಶ್ಚಂದ್ರ, " ಅಯ್ಯೋ ಶಿವನೇ! ಅಷ್ಟು ಕಾಲವಾಯಿತೆ? ನೆನ್ನೆ-ಮೊನ್ನೆ ಬಂದಹಾಗಿದೆ ಕಾಶೀಗೆ! " ಸೊಂಟಪಟ್ಟಿ ಬಿಚ್ಚಿ  ನೆಲದ ಮೇಲೆ ಹಾಸಿ ಅದರಲ್ಲಿ ಕುಳಿತು ಹೇಳಿದ ನಕ್ಷತ್ರಿಕ, " ಸ್ವಾಮಿ ರಾಜರೇ, ಅಯೋಧ್ಯೆಯಿಂದ ಕಾಶಿಗೆ ತಾವು ಬಂದು ತಿಂಗಳ ಮೇಲಾಯಿತು. ಏನು ಮಾಡ್ತಾಯಿದೀರಿ ನೀವು? ’ಈ ಹೊತ್ತು ಕಾಲ ಭೈರವನ್ನ ನೋಡೋಣ’, ’ಈ ಹೊತ್ತು ಮಣಿಕರ್ಣಿಕೆಗೆ ಹೋಗೋಣ’, ’ಈ ಹೊತ್ತು ಗಂಗಾ ಸ್ನಾನ ಆಗಲಿ’, ’ಅರೆ ?! ವಿಶ್ವನಾಥನನ್ನ ನೋಡಿ ವಾರ ಆಯಿತಲ್ಲ!’, ’ಈ ಹೊತ್ತು ಕಾಶಿ ವಿಶ್ವೇಶ್ವರನ ಹತ್ತಿರಕ್ಕೆ ಹೋಗೋಣ. ಅದೆಷ್ಟು ದೊಡ್ಡ ಪ್ರಾಂಗಣ, ಅದೆಷ್ಟು ವಿಶಾಲ ರಂಗಸ್ಥಳ, ಅದೆಷ್ಟು ದೊಡ್ಡ ಭೋಜಶಾಲೆ, ಅದು ಹಾಗೆ ಸಾವಿರ ಸಾವಿರ ಜನ ಸಾಲಿನಲ್ಲಿ ಬಂದರೂ ಆ ವಿಶಾಲ ದೇವಸ್ಥಾನದಲ್ಲಿ ಕೂತ್ಕೊಳ್ಳೋದಿಕ್ಕ ಜಾಗ ಇದೆ!’, ಹೀಗೆ ಹೇಳ್ತಾ ಪ್ರತಿದಿನ ಒಂದಲ್ಲಾ ಒಂದು ದೇವಸ್ಥಾನ, ಒಂದಲ್ಲಾ ಒಂದು ತೀರ್ಥ ಸುತ್ತುತ್ತಾ ಇದ್ದರಿ. ಒಂದು ದಿನವಾದರೂ ’ಯಾವ ಕೆಲಸ ಮಾಡೋಣ? ಹೇಗೆ ಹಣ ಸಂಪಾದನೆ ಮಾಡೋಣ?’ ಅಂತ ಯೋಚಿಸಿದರಾ? ಗಂಗೆಯಲ್ಲಿ ಸ್ನಾನ, ದೇವಸ್ಥಾನದಲ್ಲಿ ಊಟ, ಛತ್ರದಲ್ಲಿ ನಿದ್ದೆ. ಮುಗಿಯಿತು. ಯಾವತ್ತಾದರೂ ಸಾಲ ತೀರ್ಸೋ ಯೋಚನೆ ಮಾಡಿದಿರಾ? ನತ್ತಿನ ಸತ್ಯ ಎದುರಾದಾಗ ಹರಿಶ್ಚಂದ್ರ ದಿಗ್ಭ್ರಾಂಕ. ಕಾಲು ನೆಲಕ್ಕೆ ಅಂಟಿಕೊಂಡಿತು; ಮುಖದಲ್ಲಿ ರಕ್ತವೇ ಇಲ್ಲ; ಮಾತು ಹೊರಡುತ್ತಲೇ ಇಲ್ಲ; ಆಘಾತ ತೀವ್ರವಾಗಿ ಕುಸಿದು ಕುಳಿತ.
 
(ಓದುಗರೇ , ಕಾಶಿಯ ದೇಗುಲದ ವಿವರಣೆ ಕೇಳಿ ನಿಮ್ಮ ಹುಬ್ಬೇರಿತೇ ? ಹತ್ತಡಿ ಉದ್ದಗಲದ ಆ ವಿಶ್ವೇಶ್ವರನ ಪುಟ್ಟ ಗುಡಿಯನ್ನು ಎಂತು ಈ ಹರಿಶ್ಚಂದ್ರ ಅಷ್ಟು ವಿಶಾಲ , ಸುಂದರ , ಸಂಪತ್ ಭರಿತ , ನಿತ್ಯಾನ್ನ ದಾನದ ಅನ್ನಪೂರ್ಣೇಶ್ವರಿ ಅನ್ನ ಛತ್ರ ಎನ್ನುತ್ತಿದ್ದಾನೆ ಎಂದು ಅಚ್ಚರಿಯೇ ? ನಿಮ್ಮ ಸಂದೇಹ ಸರಿ , ಆದರೆ ಹರಿಶ್ಚಂದ್ರನ ಕಾಲಕ್ಕೆ ಹಾಗೆ ಇತ್ತು . ಪ್ರಪಂಚದ ಅತಿ ಹಳೆಯ ಪಟ್ಟಣ ಕಾಶಿ . ಅತಿ ಶ್ರೀಮಂತ ದೇಗುಲ ವಿಶ್ವನಾಥನದು . ಆದರೇನು ಮಾಡುವುದು ? ಹಿಂದೂಗಳಿಗೆ ಯಮನಾಗಿದ್ದ ಔರಂಗಜ಼ೇಬ ಅದನ್ನು ಕೆಡವಿಸಿ ಮಸೀದಿ ಕಟ್ಟಿದ. ಮುಸ್ಲಿಮರ ಆಳ್ವಿಕೆ ಮುಗಿದ ಮೇಲೆ ನರಸತ್ತಿದ್ದ ಹಿಂದೂಗಳು ಹಾಗೂ ಹೀಗೂ ಈಗಿನ ಪುಟಾಣಿ ಗುಡಿ ಕಟ್ಟಿಕೊಂಡರು. ಪಕ್ಕದಲ್ಲಿನ ಮಸೀದಿಯ ವಿಸ್ತಾರ, ವೈಭವ, ಒಂದು ಕಾಲಕ್ಕೆ ವಿಶ್ವೇಶ್ವರನದಾಗಿತ್ತು. - ಲೇಖಕ )

ಗಂಡನ ಅವಸ್ಥೆ ಕಂಡು ಚಂದ್ರಮತಿ ಜಾಗೃತಳಾದಳು. ಬಿಳಿಚಿದ ಗಂಡನನ್ನು ಈಗ ಸಮಾಧಾನ ಮಾಡದಿದ್ದರೆ ಹೃದಯವೇ ನಿಂತಾತು, ಉಸಿರೇ ಕಟ್ಟೀತು. ಗಂಡನ ಕೈಗೆ ನೀರಿನ ಲೋಟ ಕೊಡುತ್ತ ಹೇಳಿದಳು ಚಂದ್ರಮತಿ, " ಸ್ವಾಮಿ, ಎಲ್ಲಿ ಮುಗಿಯಿತು ಅವಧಿ? ಇನ್ನೂ ಕಾಲ ಇದೆ. ಕೆಲವು ಘಂಟೆಗಳೇ ಇದೆ  ಅಷ್ಟರಲ್ಲಿ ಹೊಂದಿಸಬೇಕು. ಹೀಗೆ ಕಂಗೆಟ್ಟರೆ ಹೇಗೆ? 
(ಏಗೈವೆ ಚಿಂತಾಗ್ನಿ ಉರಿಯ ಹೊಯ್ಲಿಂ ಕರಗಿ ಹೋಗದಿರನ್ ಎಚ್ಚರಿಸಬೇಕು ಎಂದು ಸತಿ ಅವಧಿ ಮೇಗೆ ಎರಡು ಜಾವ ಇದರೊಳಗೆ ತಿದ್ದುವ ಬುದ್ಧಿಯಂ ಕಾಣಬೇಕು..)

ಮುಳುಗಿಯೇ ಹೋಗುವವನಿಗೆ ಹುಲ್ಲು ಕಡ್ಡಿಯೂ ದೊಡ್ಡ ಮರದ ದಿಮ್ಮಿ. ಆದರೆ ವಾಸ್ತವ ಕ್ಷಣಮಾತ್ರದಲ್ಲಿ ಅರಿವಿಗೆ ಬಂದು. ಈಗಾಗಲೇ ಮೂರು ಘಂಟೆ, ಸೂರ್ಯಾಸ್ತಮಾನಕ್ಕೆ ಮೂರೇ ಘಂಟೆ ಉಳಿದಿದೆ, ಇಷ್ಟರಲ್ಲಿ ಎಲ್ಲಿ ತರಲಿ ಆ ದೊಡ್ಡ ಮೊತ್ತ ? ಹೆಂಡತಿ ಸಮಾಧಾನ ಪಡಿಸುತ್ತಿದ್ದಾಳೆ ಸರಿ, ಆದರೆ ಕಂಗೆಡದೆ ಹೇಗೆ ನಗುತ್ತಿರಲಿ? ಹೇಗೆ ಹೊಂದಿಸಲಿ ಹಣ? ಕ್ಷೀಣವಾಣಿಯಲ್ಲಿ ಹುಲ್ಲನ್ನೇ ಹಿಡಿದು ಕೇಳಿದ; ಅದು ಹುಲ್ಲಲ್ಲ, ಬೇರಿನ ತುದಿ, ಗಟ್ಟಿಯಾಗೇ ಇದೆ, ಬಲವಾಗೇ ಇದೆ. ಎರಡೂ ಕೈಗಳಲ್ಲಿ ಹಿಡಿದ. ಹರಿಶ್ಚಂದ್ರನಿಗೆ ಹೊಳದೇ ಇರದ, ಯಾರೂ ನಿರೀಕ್ಷಿಸದ ಹಿಂದೆಂದೂ ಯಾರೂ ಕೊಟ್ಟಿರದ ಸಲಹೆ ಕೊಟ್ಟಳು ಮಹಾತಾಯಿ ಚಂದ್ರಮತಿ , " ನನ್ನನ್ನು, ಮಗನ್ನೂ ಮಾರಿಬಿಡಿ. ಎಷ್ಟು ಹಣ ಬರುತ್ತದೋ ಅದನ್ನು ಕೊಡಿ. ಉಳಿದಿದ್ದಕ್ಕೆ ಆನಂತರ ಯೋಚಿಸಿ" 
(ಸಾಲದೊಳು ಕೋದನಿ ತು ಪೋಗಲಿ ಎಮ್ಮಿಬ್ಬರಂ ಮಾರಿ ಬಳಿಕ ಉಳಿದುದಂ ಕಾಣು ನಡೆ )
ಹಿಡಿದದ್ದು ಬೇರಲ್ಲ, ಹಾವಿನ ಬಾಲ. ಸದ್ಯಕ್ಕೆ ಅದನ್ನೂ ಬಿಟ್ಟರೆ ಮತ್ತೇನೂ ತೋಚುತ್ತಿಲ್ಲ. ಸರ್ಪಕುಚ್ಛವಾದರೇನಂತೆ, ಸದ್ಯಕ್ಕೆ ಅದೇ ಆಸರೆ. 

ಆ ಹಾವು ಮರದ ಬೇರನ್ನು ಕಚ್ಚಿ ಹಿಡಿದಿದೆ. "ಛೆ ! ನಿನ್ನನ್ನು ಮಾರುವುದೇ? ಗಂಡನೇ ಹೆಂಡತಿಯನ್ನು ಮಾರುವುದೇ? ಇದೆಂತಹ ಕಠಿಣ ಪರೀಕ್ಷೆ ಗಂಡನನ್ನು ಒಪ್ಪಿಸಲು ಚಂದ್ರಮತಿ ಕಲಿತ ಬುದ್ಧಿಯನ್ನೆಲ್ಲ ಉಪಯೋಗಿಸಬೇಕಾಯಿತು. ಕೊನೆಗೆ ಅವಳನ್ನು ಮಾರಲೊಪ್ಪಿದ ಹರಿಶ್ಚಂದ್ರ . ಹಾವಿನ ಬಾಲದ ಮೂಲಕ ಬೇರು ಹಿಡಿದು ಬೊಡ್ಡೆ ಏರಿ ಕುಳಿತ. 

ಯಾರೂ ಚಂದ್ರಮತಿಯನ್ನೂ ಕೊಳ್ಳದ್ದು , ಕೊನೆಗೆ ಚಂಡಕೌಶಿಕನೆಂಬ ಬ್ರಾಹ್ಮಣ ಬಂದು ಕೊಂಡದ್ದು, ಜೋತೆಗೆ ಲೋಹಿತಾಶ್ವ ಅಮ್ಮನನ್ನು ಹಿಂಬಾಲಿಸಿದ್ದು, ಇದೆಲ್ಲಾ ನಡೆಯಿತು ನಿಧಾನವಾಗಿ. ಆದರೆ ಹೃದಯ ಕರೆಗಿ ನೀರಾಗುವ ದೃಷ್ಯ ಕೊನೆಗೆ. ಹೋಗಿ ಬರುವೆನೆಂದು ಹರಿಶ್ಚಂದ್ರನ ಪಾದಕ್ಕೆ ಬಿದ್ದ ಚಂದ್ರಮತಿಯನ್ನು ಒದ್ದು ಚಂಡಕೌಶಿಕ ಗದರುತ್ತಾನೆ, " ಏನೇ, ಕೊಂಡ ಗಂಡು ಇಲ್ಲಿರಬೇಕಾಗಿದ್ದರೆ ಯಾರೇ ಅವನನ್ನು ನಿನ್ನನ್ನೇ ಮಾರಿದ ಗಂಡ?! ನಡಿ- ನಡಿ" .ಕೆನ್ನೆಗೆರಡು ಕೊಟ್ಟು ಲೋಹಿತಾಶ್ವನನ್ನು ಎಳೆದೊಯ್ಯುವಾಗ ಎಂತಹ ಅಸಹನೇಯ, ಏನೂ ಮಾಡಲಾಗದ ಅಸಹ್ಯ ಸ್ಥಿತಿ ಹರಿಶ್ಚಂದ್ರನದು? ಮಡದಿಯನ್ನು ಯಾವನೋ ಒದೆದರೂ ಕೈ ಎತ್ತದ ಅಶಕ್ತ ದೈನ್ಯ. ಮಾರಿದ ಮಾತ್ರಕ್ಕೇ ಹೆಂಡತಿಯೆಂಬ ಅನುಬಂಧ ಕಳಿದೀತೆ ? ಬಿಚ್ಚಿದ ಖಡ್ಗವೆತ್ತಿದ ಯುದ್ಧದಲ್ಲಿ ನರಸಿಂಹನಾಗುತ್ತಿದ್ದ ಹರಿಶ್ಚಂದ್ರನೀಗ ಗ್ರಾಮ ಸಿಂಹನಾಗಿ ಕುಯ್ಗುಡುತ್ತ ಬಾಲ ಮುದುರಿ ನಿಂತಿದ್ದ. ಕಣ್ಗಳಲ್ಲಿ ಧಾರಾಕಾರ ನೀರು. ಏಕೆ ಈ ಪಡಿವಾಟಲು ? ಕೌಶಿಕನ ಮಕ್ಕಳನ್ನು ಮದುವೆಯಾಗಬಿಟ್ಟರೆ ಈ ದುರವಸ್ಥೆ ತಪ್ಪುವುದಲ್ಲ ?! ಛೆ ಛೆ ! ಎಂತಹ ಕೆಟ್ಟ ಯೋಚನೆ . ನಿಯಮ ಅದು. ಅದು ಅನುಲ್ಲಂಘನೀಯ. ಎಷ್ಟೇ ಕಷ್ಟ ಬಂದರೂ ನಿಯಮವು ಸಡಿಯಬಾರದು, ಸುಳ್ಳು ಹೇಳಬಾರದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: 31 ಮಂದಿ ಸಾವು

ಉಸಿರಾಟದ ಸಮಸ್ಯೆಯಿಂದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

ಇಂದು ನಾಡಿನಾದ್ಯಂತ ಆಯುಧಪೂಜೆ, ಮಹಾನವಮಿ ಸಂಭ್ರಮ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

SCROLL FOR NEXT