ಆದರೆ ಇಷ್ಟೆಲ್ಲ ದಾರುಣದ ಅಂತ್ಯಕ್ಕೆ ಕುಲ ಕೆಟ್ಟರೆ ಛಲವಾದರೂ ದಕ್ಕಿತೇ? ನಕ್ಷತ್ರಿಕ ಹೇಳಿಬಿಟ್ಟ; " ಹರಿಶ್ಚಂದ್ರ, ಅವರನ್ನು ಮಾರಿ ಕೊಟ್ಟ ಹಣ ನನ್ನ ಮಜೂರಿ. ಅದು ಒಂದರ್ಥದ ಬಡ್ಡಿ ಅಷ್ಟೇ. ಮೂಲ ಹಣ ಎಲ್ಲಿ? " ಹೆಂಡತಿಯೂ ಹೋಗಿ ಸಾಲವೂ ತೀರಲಿಲ್ಲವೇ? "ಸ್ವಾಮಿ, ಅಷ್ಟು ಹಣ ನಿಮ್ಮ ಶುಲ್ಕವೇ? ಇದೆಂತಹ ನ್ಯಾಯ?! ". ದಾರಿ ಹೋಕರು ನ್ಯಾಯ ನಿರ್ಣಯವನ್ನೂ ಹೇಳಿದರು. " ಕರಿ ಏರಿ ಎಸೆದಷ್ಟು ಎತ್ತರಕ್ಕೆ, ಆ ಎತ್ತರದ ಚಿನ್ನಕ್ಕೆ, ಈ ದೊಡ್ಡ ದುಡ್ಡು ಒಯ್ಯಲು ಬಂದವರ ಸಂಭಾವನೆ ಅಷ್ಟಾಗುವುದು ಸರಿ". "ಪರ ಊರಿನಲ್ಲಿ ತನ್ನ ಮಾತೆಲ್ಲಿ ನೆಡೆದಾತು?" ಏನನ್ನು ಯೋಚಿಸುತ್ತಿದ್ದಿ, ಇನ್ನೊಂದು ಘಂಟೆ ಉಳಿದಿದೆ. ಮೂಲ ಹಣ ಕೊಡುವೆಯಾ, ಮಾತಿಗೆ ತಪ್ಪುವೆಯ?" ನಕ್ಷತ್ರಿಕನ ಮಾತು ಹರಿಶ್ಚಂದ್ರನ ಯೋಚನೆಯನ್ನು ಕತ್ತರಿಸಿತು. ನಿಮಿಷಗಳ ಹಿಂದೆ ಹೋದ ಹೆಂಡತಿಯನ್ನು ನೆನೆದು, ಪುಟ್ಟ ಲೋಹಿತಾಶ್ವ ಅನಾಥನಾದ ಸಂಕಟವನ್ನು ನೆನೆದು ಗೋಳಾಡಲೂ ತನಗೆ ಸ್ವಾತಂತ್ರ್ಯವಿಲ್ಲ.
(ಆತ್ಮೀಯರೆ, ಒಂದು ಕ್ಷಣ ಯೋಚಿಸಿ, ಅಕಸ್ಮಾತ್ ಚಂದ್ರಮತಿ ಒತ್ತಾಯಿಸದೇ ಹರಿಶ್ಚಂದ್ರನೇ ಆಕೆಯನ್ನು ಮಾರಿದ್ದರೆ, ಸ್ತ್ರೀ ವಿಮೋಚನಾ ವಾದಿಗಳು ಹರಿಶ್ಚಂದ್ರನನ್ನು ಬಾಣಲೆಯಲ್ಲಿ ಹುರಿಯುತ್ತಿದ್ದರು. ಅದು ಬಿಡಿ, ಅದು ಈಗಿನ ಚಿಂತನೆ. ಆದರೆ ಅಂದು ಹರಿಶ್ಚಂದ್ರನು ಹೇಗೆತಾನೇ ತಾನೇ ಹೆಂಡತಿಯನ್ನು ಮಾರಲು ಮನಸ್ಸು ಮಾಡುತ್ತಿದ್ದ? ಚಂದ್ರಮತಿ ತನ್ನ ಪಾಲಿನ ಜವಾಬ್ದಾರಿಯನ್ನು ನೀಗಿಕೊಂಡು ನಿಜವಾದ ಪತಿವ್ರತೆಯಾಗಿಬಿಟ್ಟಳು ಗಂಡನಿಂದ ದೂರಾಗಿ! ಆಕೆ ಅದನ್ನು ಪ್ರಸ್ತಾವಿಸದೆಯೇ ಇದ್ದಿದ್ದರೆ, ಆಗಲೇ ಕೆಲ ಘಂಟೆಗಳಲ್ಲೇ ಹರಿಶ್ಚಂದ್ರ ಮಾತಿಗೆ ತಪ್ಪುತ್ತಿದ್ದ. ಚಂದ್ರಮತಿ, ನೀನು ಹರಿಶ್ಚಂದ್ರನ ಮಾನ ಉಳಿಸಿದೆ. ಹರಿಶ್ಚಂದ್ರನೇನೋ ಸತ್ಯ ಹರಿಶ್ಚಂದ್ರನಾಗಿ ಮೆರೆದ, ಒಳ್ಳೆಯದೇ. ಅದು ನಿನ್ನಿಂದ, ನಿನ್ನ ಬೆಂಬಲದಿಂದಾಗಿ. ಆತ ಸತ್ಯ ಹರಿಶ್ಚಂದ್ರನಾದರೆ, ಚಂದ್ರಮತಿ, ನೀನು ಋತಮತಿ! - ಲೇ )
ಮಂತ್ರಿ ಇತ್ತ ಸಲಹೆಯಂತೆ ತನ್ನನ್ನೇ ಮಾರಿಕೊಳ್ಳಲು ಮಾರುಕಟ್ಟೆಯಲ್ಲಿ ನಿಂತ ಹರಿಶ್ಚಂದ್ರನನ್ನು ಮೂಸುವವರೂ ಇಲ್ಲ. ಕೊನೆಗೆ ಬಂದ, ಆ ಊರ ಸ್ಮಶಾನದ ಯಜಮಾನ ವೀರಬಾಹುಕ. ಕೇಳಿದ ಹಣ ಕೊಟ್ಟು ಕೊಂಡುಕೊಂಡು ಹರಿಶ್ಚಂದ್ರನನ್ನು ಸ್ಮಶಾನ ಕಾಯಲು ಅಟ್ಟಿದ. ಹೊರಡುವ ಮುನ್ನ ನಕ್ಷತ್ರಿಕನಿಗೆ ವಿನಯದಿಂದ ನುಡಿದ ಹರಿಶ್ಚಂದ್ರ, " ಸ್ವಾಮಿ , ತುಂಬ ಕಾಯಿಸಿದೆ. ತೊಂದರೆ ಕೊಟ್ಟೆ. ಕ್ಷಮಿಸಿ. ನನ್ನಿಂದಾದ ಅಪರಾಧಗಳನ್ನು ಮನ್ನಿಸಿ ನಿಮ್ಮ ಒಡೆಯರ ವಡವೆಯನ್ನು ಸ್ವೀಕರಿಸಿ. ಅವಧಿ ಮುಗಿಯುವ ಮುನ್ನ ನಿಮ್ಮ ಹಣ ತಲುಪಿದೆ ಎಂದು ಹೇಳಿಬಿಟ್ಟರೆ ನನಗೆ ಸಮಾಧಾನ. "
ನಕ್ಷತ್ರಿಕ ಕುಗ್ಗಿಹೋದ. ವಿಶ್ವಮಿತ್ರರ ಮೇಲೆ ಅವನಿಗೆ ಒಳಗೊಳಗೇ ಸಿಟ್ಟು. ಯಾರು ಹೀಗೆ ಜಾರಿ ಬಂದ ಮಾತಿಗಾಗಿ ರಾಜ್ಯ ತೊರೆದಾರು? ರಾಜ್ಯ ಕೋಶ ಕೊಟ್ಟದ್ದಲ್ಲದೇ ಭಂಡಾರದಲ್ಲಿರುವ ಕೌಶಿಕರ ಹಣವನ್ನೇ ಮತ್ತೊಮ್ಮೆ ಕೊಡುವೆನೆಂದು ಒಪ್ಪಿಯಾರು ಯಾರು? ಅನ್ಯಾಯಕ್ಕೂ ಒಂದು ಮಿತಿ ಬೇಡವೆ? ಹೆಂಡತಿ ಮಕ್ಕಳನ್ನೂ ಕಳೆದು ಕೊಳ್ಳುವ ಈ ಹರಿಶ್ಚಂದ್ರನ ಗಟ್ಟಿ ನಿಲುವು ಏನು! ತನ್ನನ್ನೇ, ಸೂರ್ಯವಂಶದ ರಾಜನನ್ನೇ ಮಾರಿಕೊಂಡನಲ್ಲ, ಈಗ ಸ್ಮಶಾನದ ಆಳಾಗಿದ್ದಾನಲ್ಲ, ಇದು ಯಾವ ತಪ್ಪಿಗೆ? ಕೇವಲ... ಕೇವಲ ಸುಳ್ಳಾಡಬಾರದೆಂಬ ವ್ರತಕ್ಕೆ ಇಷ್ಟು ತ್ಯಾಗವೇ, ಇಷ್ಟೊಂದು ಬೆಲೆಯೇ?!
ಪ್ರಶಸ್ತಿ ಪ್ರಮಾಣ ಬಂತು ನಕ್ಷತ್ರಿಕನ ಬಾಯಿಂದ. " ಏಕೆ ಮಾತನಾಡಿ ನನ್ನನ್ನು ಚುಚ್ಚುವೆಯಪ್ಪ? ವಿಶ್ವಮಿತ್ರರ ಪ್ರತಿನಿಧಿಯಾದರೂ ನಾನೇ ತಪ್ಪಿದಂತೆ ನಾಚಿ ತಲೆ ತಗ್ಗಿಸಿದ್ದೇನೆ. ನಿನ್ನಂತಹ ಉತ್ತಮರು ಯಾರಿದ್ದಾರೆ ? ಸತ್ಯ ಶೀಲ ನೀನಲ್ಲದೆ ಇನ್ನಾರು? ನೀನೇ ಧೀರ. ಶೀವಾರ್ಚಕನೆಂದರೆ ನೀನೇ. ನೀನು ಬಯಸಿರುವುದೆಲ್ಲ ನಿನಗೆ ಲಭಿಸಲಿ.
(ಇನ್ನೇಕೆ ನುಡಿದು ನನ್ನ ನಾಚಿಸುವೆ ಭೂಪಾಲ?
ನಿನ್ನಂತೆ ಸತ್ಯರು ಉತ್ತಮರು ಧೀವಶಿಗಳು
ಉನ್ನತಶಿವೈಕ್ಯರು ಇಳೆಯೊಳಗೆ ಇಲ್ಲ . ನಿನ್ನ ಇಷ್ಟ ಸಿದ್ಧಿ ಕೈ ಸಾರಲಿ)
ಬೆಳೆದ ಪೊದೆಗೂದಲ ತಲೆ, ಮುಖತುಂಬಿದ ಮೀಸೆ ಗಡ್ಡ, ಕಂಬಳಿ ಹೊದ್ದ ದೇಹ, ತುಂಡು ಬಟ್ಟೆ ಕಟ್ಟಿದ ಸೊಂಟ, ಕೈಲೊಂದು ಚಿತೆ ಕೆದಕುವ ಉದ್ದ ಕೋಲು. (ರೇಶಿಮೆಯಲ್ಲಿ ಹುದುಗಿ, ಕಿರೀಟ ತೊಟ್ಟು, ಕತ್ತಿ ಹಿಡಿದ ಧೀರ ಹರಿಶ್ಚಂದ್ರನೆಲ್ಲಿ, ಈ ಅನಾಥ ಸ್ಮಶಾನದ ಆಳೆಲ್ಲಿ?) ಆಳೆತ್ತರ ಬೊಂಬುಗಳ ಮೇಲಿನ ಗುಡಿಸಿಲಲ್ಲಿ ಯೋಚಿಸುತ್ತಿದ್ದ ಹರಿಶ್ಚಂದ್ರ. ’ ಹೆಂಡತಿ ಎಲ್ಲೋ, ಮಗ ಹೇಗೋ, ಅವನ ಪಾಡೇನೋ, ಅಪ್ಪ ಇದ್ದೂ ಅವನೀಗ ಅನ್ಯರ ಜೀತದಾಳು. ಯಾರ ಮನೆಯಲ್ಲಿ ಏನು ಕೆಲಸ ಮಾಡುತ್ತಿದ್ದಾನೋ. ಕೈಗೊಬ್ಬ, ಕಾಲಿಗೊಬ್ಬ ಆಳಿದ್ದ ಮಹಾರಾಣಿ ಚಂದ್ರಮತಿ ಎಲ್ಲಿ ನೆಲ ಸಾರಿಸುತ್ತಾಳೋ, ಯಾರ ಪಾದ ತೊಳೆಯುತ್ತಾಳೋ, ಎಷ್ಟು ನೀರು ಸೇದಬೇಕಿದೆಯೋ.. ಛೇ ..ಛೇ ಆ ಹುಡುಗ ಇನ್ನೂ ಬಾಲಕ. ಅವನನ್ನು ಮನೆಯವರು ಗದರುತ್ತಾರೋ, ಬಡಿಯುತ್ತಾರೋ; ತನ್ನೆದುರೇ ಕೆನ್ನೆಗೆ ಕೊಟ್ಟು ಎಳೆದಿದ್ದ, ಅವನನ್ನು ಕೊಂಡಾತ. ನೆನೆದರೆ ಹೊಟ್ಟೆ ಉರಿಯುತ್ತದೆ. ಏನೂ ಮಾಡಲಾರದೆ ಕೇವಲ ಅಳುವುದಷ್ಟೇ ತನಗೆ.’ ಎಷ್ಟನೇ ಬಾರಿಯೋ ಹರಿಶ್ಚಂದ್ರನ ಈ ಸ್ವಗತ! ಮುಂದೇನೆಂದೂ ಗೊತ್ತಿಲ್ಲದ, ಬಹುಶಃ ತನ್ನ ಜೀವನ ಮುಗಿಯಿತೆಂಬ ಭಾವ. ಬದುಕಿರುವ ತನಕ, ಅಷ್ಟು ಹಣ ಕೊಟ್ಟು ಕೊಂಡ ಯಜಮಾನನಿಗೆ, ತನ್ನಿಂದ ಕೆಲಸದಲ್ಲಿ ಯಾವುದೇ ವಿಧವಾದ ತಪ್ಪಾಗುವುದೂ ಬೇಡ. ತನ್ನಿಂದ ಕರ್ತವ್ಯ ಲೋಪವಾಗದಂತೆ ನೋಡಿಕೊಳ್ಳಬೇಕು.
ಎಲ್ಲೋ ಏನೋ ಅಳುತ್ತಿರುವ ಸದ್ದು. ಹೇಗೆ ಸಾಧ್ಯ ?! ’ಈಗ ತಾನೇ ಸ್ಮಶಾನ ಸುತ್ತು ಬಳಸಿ ಬಂದಿರುವೆ! ಯಾವ ಹೊಸ ಹೆಣವೂ ಬಂದಿಲ್ಲ. ಈಗ ಯಾರೋ ಈ ನಡು ರಾತ್ರಿಯಲ್ಲಿ, ಹೆಣ ಸುಡುವ ಶುಲ್ಕ ತಪ್ಪಿಸಲು ಕದ್ದು ಬಂದರೋ? ಅಯ್ಯಯ್ಯೋ , ಅದು ದಣಿಯ ಹಣ. ಹೆಣಕ್ಕೆ ಇಷ್ಟೆಂದು ನಿರ್ಣಯಿಸಿರುವ ಸ್ಮಶಾನ ಶುಲ್ಕ. ಅದು ಯಾವ ಕಾರಣದಿಂದಲೂ ತಪ್ಪಬಾರದು. ಹಾಗಾದರೆ ಅದು ಕರ್ತವ್ಯಲೋಪ. ಎಗರಿ ಓಡಿಬಂದ. ಯಾವುದೋ ದರಿದ್ರ ಹೆಣ್ಣು. ಒಂಟಿ ಹೆಣ್ಣು, ಯಾರೂ ಜೊತೆಗಿಲ್ಲ. ಛೆ ಛೆ ! ಅವಳ ಕಷ್ಟ ಎಂಥದೋ, ಕೈಲಿ ಉರಿವ ಕಟ್ಟಿಗೆ ಹಿಡಿದು ಬಿಕ್ಕುತ್ತಿದ್ದಾಳೆ. ಓಹ್ ! ಚಿತೆಯಲ್ಲಿ ಯಾವುದೋ ಹುಡುಗನ ಹೆಣ. ಯಾಕಾದರೂ ಜನ ಸಾಯುತ್ತಾರೋ; ಅದೂ ಈ ಪುಟ್ಟ ವಯಸ್ಸಿನಲ್ಲಿ? ಬದುಕಬೇಕಾದ ಕಾಲದಲ್ಲಿ ಸತ್ತರೆ, ಯಾರೇ ಸಾಯಲಿ ಅದು ತುಂಬ ದಾರುಣ. ಓಹ್ ! ಇವೆಲ್ಲ ಯೋಚಿಸುವ ಕಾಲವೇ ಇದು? ಕರ್ತವ್ಯ ನಿರ್ವಹಣೆ ಮೊದಲು!
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos