ಕಾಶಿ ರಾಜನ ಆಸ್ಥಾನದಲ್ಲಿ ಹೆಡೆಮುರಿ ಕಟ್ಟಿದ ಹೆಣ್ಣನ್ನು ನಿಲ್ಲಿಸಿದ್ದಾರೆ. ಸೀರೆ ತುಂಬ ರಕ್ತ. ಮುಂದೆ ಕಾಶಿ ರಾಜಕುಮಾರನ ಶವವನ್ನು ಮಲಗಿಸಿದ್ದಾರೆ. ಅವನ ಎದೆಯನ್ನು ಚೂರಿ ಇರಿದಿದೆ." ನ್ಯಾಯದೇವತೆಯೆ, ಈ ರಕ್ಕಸಿ ರಾಜಕುಮಾರನನ್ನು ಸಾಯಿಸಿದ್ದಾಳೆ; ಒಡವೆಗಳ ಆಸೆಗೆ. ಆಭರಣಗಳೂ ಅವಳ ಬಳಿಯೇ ಇದೆ. ಕದ್ದ ಮಾಲು ಮತ್ತು ಶವದೊಂದಿಗೆ ಸಿಕ್ಕಿರುವ್ಯದರಿಂದ, ಸಂದೇಹ ಮೀರಿ ಎಲ್ಲವೂ ಪ್ರತ್ಯಕ್ಷವಾಗಿರುವುದಿಂದ ಈಕೆಗೆ ಮರಣದಂಡನೆ ವಿಧಿಸಬೇಕು. "ಸ್ವಯಂ ರಾಜನೇ ನ್ಯಾಯಾಧೀಶನಾಗಿ ಕುಳಿತಿದ್ದು, ಅವನಲ್ಲಿ ಸರಕಾರೀ ವಕೀಲರು ತಮ್ಮ ವಾದ ಮಂಡಿಸಿದರು. "ಆರೋಪಿಯ ಪರ ನ್ಯಾಯವಾದಿಗಳಿದ್ದಾರೋ?", ರಾಜ ಕೇಳಿದ. ಯಾರೂ ಏಳಲಿಲ್ಲ. ಕೊಲೆಯಾಗಿರುವವನು ತನ್ನ ಮಗನೇ. ಆ ನೋವು ಎದೆ ಸುಡುತ್ತಿದ್ದರೂ, ರಾಜ ನಿರ್ವಿಕಾರನಾಗಿ ವಿಚಾರಿಸಿದ; "ಹೇಳಮ್ಮ, ಹೆದರಿಕೊಳ್ಳದೇ ಹೇಳು. ನಿಜವಾಗಿಯೂ ನೀನು ಈ ಕೊಲೆ ಮಾಡಿದ್ದೀಯೋ? ಅಥವ ರಕ್ಷಣಾ ಇಲಾಖೆಯವರು ನಿನ್ನ ಮೇಲೆ ವೃಥಾ ಅಪವಾದವನ್ನು ಹೊರಿಸುತ್ತಿದ್ದಾರೋ? ಸರಕಾರದ ವತಿಯಿಂದ ನಿನ್ನ ಪರ ವಾದ ಮಾಡಲು ವಕೀಲರನ್ನು ನೇಮಿಸಲಾಗುತ್ತದೆ. ನಿನ್ನನ್ನು ರಕ್ಷಿಸಲು ತಕ್ಕ ಏರ್ಪಾಟು ಮಾಡುತ್ತೇವೆ.
(ಹೆದರದಿರು ತೆಕ್ಕದಿರು ಅಂಜದಿರು ಲೋಗರು ಇಟ್ಟುದೋ ನಿನ್ನ ಕೃತಕವೋ ಹೇಳು ಧರ್ಮದ ಅಧಿಕರ ಣದವರಂ ಕರೆಸುವೆಂ ನುಡಿಸುವೆಂ ಕಾವೆಂ....)
(ಅಂದಿನ ನ್ಯಾಯಾಲಯದ ಪದ್ಧತಿಯೇ ಇಂದಿಗೂ ಇರುವುದೊಂದು ಅಚ್ಚರಿ. ಕೊಲೆ ಮೊಕದ್ದಮೆಯಲ್ಲಿಯೂ ಅವಶ್ಯಕವಿದ್ದರೆ ಆರೋಪಿಗೆ ನ್ಯಾಯವಾದಿಗಳನ್ನು ನ್ಯಾಯಾಲಯವೇ ಏರ್ಪಾಟು ಮಾಡುವುದರಲ್ಲಿಯೂ ಅಂದಿನ ನಿಯಮಾವಳಿಗಳೇ ಇಂದೂ ಇವೆ. - ಲೇ)
ತಾನು ಸ್ಮಶಾನ ಬಿಟ್ಟು ಹೊರ ಬರುವಾಗ ಮಗು ಒಂದು ಅತ್ತಂತೆ. ತನಗೋ ಮೊಂಕು. ಲೋಹಿತಾಶ್ವನೇ ಅತ್ತನೇನೋ ಎಂಬ ಭ್ರಾಂತಿ. ಹೋಗಿ ಮಗುವನ್ನೆತ್ತಿದರೆ, ಮೈತುಂಬ ರಕ್ತ. ಎದೆಯಲ್ಲಿ ಚಾಕು. ಏನಾಯಿತೆಂದು ಯೋಚಿಸುವುದರ ಒಳಗೇ, ಭಟರು ಬಂದು ತನ್ನನ್ನು ಎಳೆದು ತಂದು ನಿಲ್ಲಿಸಿದ್ದಾರೆ ಇಲ್ಲಿ. ಈಗ ರಾಜ ಕೇಳುತ್ತಿದ್ದಾನೆ. ಏನು ಹೇಳಲಿ? ಮಗ ಸತ್ತ. ಗಂಡ ಜೀತದಾಳು. ತಾನು ಬದುಕಿ ಉಳಿದು ಮಾಡುವುದೇನು? ಸಾಯುವುದಕ್ಕೆ ಇದು ಒಳ್ಳೆಯ ಸಂದರ್ಭ. ದೃಢವಾಗಿ ಹೇಳಿದಳು, " ಸ್ವಾಮಿ, ನಾನೇ ಒಡವೆಗಾಗಿ ನಿಮ್ಮ ಮಗನನ್ನು ಕೊಂದೆ." ************
ಧಣಿಯ ದನಿ ಹೊತ್ತುಮೂಡುವ ಮುನ್ನವೇ. ಹೊರಬಂದು ವೀರಬಾಹುಕನಿಗೆ ನಮಿಸಿ ಕೇಳಿದ; " ಏನಪ್ಪಣೆ ಧಣಿ ?". ಅವನ ಮುಂದೆ ಹೆಣ್ಣನ್ನು ನೂಕಿ ಹೇಳಿದ ವೀರಬಾಹುಕ; " ಕಿರಾತಕಿ ಇವಳು. ರಾಜಕುಮಾರನನ್ನು ಸಾಯಿಸಿದ್ದಾಳೆ. ರಾಜರು ಮರಣದಂಡನೆ ವಿಧಿಸಿದ್ದಾರೆ. ಇವಳ ತಲೆ ಕಡಿ. " ಹರಿಶ್ಚಂದ್ರ ಅವಳ ಮುಡಿ ಹಿಡಿದು, ಎಳೆದು ಮೊಣಕಾಲ ಮೇಲೆ ನೂಕಿ ಕತ್ತಿ ಎತ್ತಿ ಹೇಳಿದ. " ಏನಾದರೂ ಕೊನೆ ಪ್ರಾರ್ಥನೆ ಇದ್ದರೆ ಮಾಡು. ನಂತರ ನಿನ್ನ ತಲೆ ತಗೆಯುವೆ.
ಚಂದ್ರಮತಿ ಪದ್ಮಾಸನ ಹಾಕಿದಳು. ಚಂದ್ರೋದಯವಾಗುತ್ತಿದೆ. ನಕ್ಷತ್ರ, ಚಂದ್ರ, ಆಗಮಿಸುತ್ತಿರುವ ಅರುಣವರ್ಣ... ಇವೆಲ್ಲ ತನ್ನ ಕೊನೆಯ ನೋಟ. ಇನ್ನು ತಾನು ಸಾಯುವೆ. ಗುರು ವಸಿಷ್ಠರನ್ನು ನೆನೆದಳು, ಮೃಡನನ್ನು ಮನದಲ್ಲಿ ನಿಲ್ಲಿಸಿ ನಮಿಸಿದಳು, ಹರಕೆಯನ್ನು ಜೋರಾಗಿಯೇ ಹೇಳಿದಳು; " ಕಲಿ ಹರಿಶ್ಚಂದ್ರ ಸತ್ಯ ಹರಿಶ್ಚಂದ್ರನಾಗಿ ಬಹುಕಾಲ ಬಾಳಲಿ. ಹೇಗೂ ಸತ್ತ ಮಗನನ್ನು ಸುಡಲಾಗಲಿಲ್ಲ; ಅವನಿಗೆ ಮುಕ್ತಿ ಸಿಗಲಿ. ಅನುಸರಿಸಿದ ಮಂತ್ರಿಗೆ ಒಳಿತಾಗಲಿ. ಹಾಗೂ ತಮ್ಮ ದೇಶ ಅಯೋಧ್ಯೆಯನ್ನು ಆಳುತ್ತಿರುವ ವಿಶ್ವಮಿತ್ರರು ಶಾಶ್ವತವಾಗಿರಲಿ.
(ಬಲಿದ ಪದ್ಮಾಸನಂ ಮುಗಿದಕ್ಷಿ ಮುಚ್ಚಿದ ಅಂಜಲಿ ಬೆರೆಸಿ ಗುರು ವಸಿಷ್ಠಂಗೆ ಎರಗಿ ಶಿವನ ನಿರ್ಮಲ ರೂಪವ ನೆನೆದು ಮೇಲಂ ತಿರುಗಿ ನೋಡಿ ಭೂ ಚಂದ್ರ ಅರ್ಕ ತಾರೆ ಅಂಬರಂ
ಕಲಿ ಹರಿಶ್ಚಂದ್ರ ರಾಯಂ ಸತ್ಯವೆರೆಸಿ ಬಾಳಲಿ ಮಗಂ ಮುಕ್ತನಾಗಲಿ ಮಂತ್ರಿ ನೆನೆದುದು ಆಗಲಿ ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ)
( ಅಮ್ಮಾ ಚಂದ್ರಮತಿ , ನೀನೆಂಥ ಶುದ್ಧೆಯಮ್ಮ ! ಇಷ್ಟೆಲ್ಲ ಕಷ್ಟ , ನಷ್ಟ , ಸಾವು , ನೋವು , ಗೋಳು ಎಲ್ಲ ಎಲ್ಲ ವಿಶ್ವಮಿತ್ರರಿಂದ . ಅವರಿಗೂ ಒಳಿತಾಗಲಿ ಎನ್ನುತ್ತಿದ್ದೀಯಲ್ಲ ತಾಯಿ , ನೀನೆಂತಹ ಶುಚಿ ! - ಲೇ )
ಹರಿಶ್ಚಂದ್ರನ ಕೈ ಕೆಳಗಿಳಿಯಿತು. 'ಓಹ್ ! ಇದು ವಿಶ್ವಾಮಿತ್ರರು ತನಗೆ ಮಾಡಿದ ಮತ್ತೊಂದು ಕೃತ್ಯ ! ನಾನೇ ನನ್ನ ಕೈಯಿಂದಲೇ ಹೆಂಡತಿಯ ತಲೆ ಕಡಿಯಬೇಕೇ ? ಏಕೆ ?! ಅವರಿಗೇಕೆ ನನ್ನ ಮೇಲೆ ಇಷ್ಟು ಹಗೆ ? ಅದೇನೇ ಇರಲಿ’, ಪತಿಯಾಙ್ಞೆಯನ್ನು ಮೀರೆ. ನಿರ್ಧರಿಸಿದ ಹರಿಶ್ಚಂದ್ರ. ಕೈ ಎತ್ತಿದ ಹೊಡೆಯಲು." ನಿಲ್ಲು! " ,ಗಗನದಿಂದ ಬಂದ ಸದ್ದು . ತಲೆ ಎತ್ತಿದರೆ ವಿಶ್ವಮಿತ್ರರು ನಿಂತಿದ್ದಾರೆ ಮಕ್ಕಳೊಡನೆ ಗಗನದಲ್ಲಿ. " ಹರಿಶ್ಚಂದ್ರ , ನಿನಗೆ ಕೊನೆಯ ಅವಕಾಶ. ನನ್ನ ಮಕ್ಕಳನ್ನು ಮದುವೆಯಾದರೆ , ನಿನಗೆ ರಕ್ಷಣೆ ಕೊಡುವೆ . ಹೆಂಡತಿಯನ್ನು ಕೊಲ್ಲದಂತೆ ನೋಡಿಕೊಳ್ಳುವೆ. ಸತ್ತಿರುವ ಮಗನನ್ನು ಬದುಕಿಸುವೆ. ರಾಜ್ಯವನ್ನು ವಾಪಸ್ಸು ಕೊಡುವೆ. ಮರಳೀ ರಾಜನನ್ನಾಗಿ ಮಾಡುವೆ. " ಒಂದೇ ಕ್ಷಣ ; ತಾನು 'ಹೂಂ' ಎಂದರೆ ಸಾಕು ,ಈ ದಾರುಣವೆಲ್ಲ ಮುಕ್ತಾಯ. ಇಲ್ಲ ಇಲ್ಲ ! ಕ್ಷಣವೂ ಯೋಚಿಸಲಿಲ್ಲ ಹರಿಶ್ಚಂದ್ರ , ಬಿಚ್ಚುಗತ್ತಿ ಗಾಳಿಯಲ್ಲಿ ತೇಲಿ ಬಂದು ಚಂದ್ರಮತಿಯ ಕುತ್ತಿಗೆಗೆ ತಗುಲಿತು.