ಅಷ್ಟು ಹೊತ್ತಿಗಾಗಲೇ ಅವರಿಗೆ ತಿಳಿದಿತ್ತು ಅದು ತಮ್ಮ ಮಗುವೆಂದು. ಕಾಲಿಗೆ ನಮಸ್ಕರಿಸಿ ದೇವಲೋಕಕ್ಕೆ ಹೊರಡಲು ಅನುಮತಿ ಕೇಳಿದ ಅಪ್ಸರೆಗೆ ಹೇಳಿದರು, "ದೇವಿ, ಈ ಆಶ್ರಮದಲ್ಲಿ ನಾನು ಒಂಟಿ. ಹೆಣ್ಣಿನ ಹೆಸರೇ ಇಲ್ಲಿಲ್ಲ. ನೀನು ಹೋಗಿಬಿಟ್ಟರೆ ಮಗು ಬದುಕುವುದು ಹೇಗೆ? ಮಗು ದ್ರವಾಹಾರ ತೆಗೆದುಕೊಳ್ಳುವವರೆಗಾದರೂ ಇದನ್ನು ಪೋಷಿಸಿ ಅನಂತರ ಹೋಗು."
ವರ್ಷ ತುಂಬುವ ಹೊತ್ತಿಗೆ ತಂದಳು ಗಂಧರ್ವೆ ಮುದ್ದು ಮುಖದ ಕೂಸನ್ನು. ತಮ್ಮನ್ನೇ ಹೋಲುತ್ತಿದೆ. ತಲೆಯ ಮಧ್ಯದಲ್ಲೇನೋ ಗುಬುಟು. ತಲೆ ಎತ್ತಿದಾಗ ಆಕೆ ಹೇಳಿದಳು, " ನನ್ನ ಅವತಾರ ಹರಿಣಿಯಾಗಿತ್ತಲ್ಲ, ಅದರ ಪ್ರಭಾವ. ಮುಂದೆ ಅದು ಜಿಂಕೆಯ ಕೊಂಬು ಆದಾತು! " ತಕ್ಷಣವೇ ಬ್ರಹ್ಮರ್ಷಿಗಳು ನಿರ್ಣಯಿಸಿದರು; " ಅದೆಂತೇ ಇರಲಿ, ಆತ ಋಷಿ. ಋಷಿಗಳಲ್ಲಿ ಶ್ರೇಷ್ಠ. ತಾಯ ಕಡೆ ಹೆಸರು ಶೃಂಗದೊಡನೆ ಸೇರಿ ಋಷ್ಯಶೃಂಗನಾಗುತ್ತಾನೆ. ಭೂದೇವಿ ಸ್ತ್ರೀ, ನೀನೂ ಸ್ತ್ರೀ, ಸ್ತ್ರೀಮೂಲದಿಂದ ಶೃಂಗ, ಈ ಭೂಕ್ಷೇತ್ರಕ್ಕೆ ಶೃಂಗಗಿರಿಯೆಂದೇ ಹೆಸರಾಗಲಿ. ಅದು ಶೃಂಗೇರಿಯೆಂದು ಪ್ರಸಿದ್ಧವಾಗಲಿ".
" ಸರಿ ಸರಿ", ಕಥೆ ಕೇಳುತ್ತಿದ್ದ ದಶರಥ ಹೇಳಿದ, "ಆಯಿತು, ಋಷ್ಯಶೃಂಗ ಯಾರೆಂದು ಗೊತ್ತಾಯಿತು. ಆದರೆ ಆತನೇಕೆ ರೋಮಪಾದನ ಆಸ್ಥಾನದಲ್ಲಿದ್ದಾನೆ? ಸುಮಂತ್ರ ಮುಂದುವರಿಸಿದ, " ಆತ ಆಸ್ಥಾನಕ್ಕಾಗಿ ಬರಲಿಲ್ಲ, ಬಂದದ್ದು ಅಂತಃಪುರಕ್ಕೆ, ಅರಮನೆಗೆ. ಅದು ಅರಮನೆಯೆಂದು ಗೊತ್ತಿಲ್ಲದೇ ಬಂದುಬಿಟ್ಟ, ಅದೊಂದು ಸ್ವಾರಸ್ಯಕರ ಸಂಗತಿ".
ಅಂಗರಾಜ್ಯ. ಅದು ಹಚ್ಚ ಹಸುರಿನ ಧಾನ್ಯ ಸಮೃದ್ಧ ರಾಷ್ಟ್ರ. ಚಿನ್ನ ಬೆಳ್ಳಿಗಳ ಗಣಿಗಳು ಹೆಚ್ಚೇ ಈ ರಾಜ್ಯದಲ್ಲಿ. ಹೀಗಾಗಿ ಶ್ರೀಮಂತ ರಾಷ್ಟ್ರವೂ ಹೌದು. ರಾಜ ರೋಮಪಾದ. ಆಸ್ಥಾನದಲ್ಲಿ ಪಂಡಿತ ಮಂಡಳಿ. ಯೋಧರೋ, ಮಹಾ ಶೂರರು. ಚತುರಂಗ ಸೇನೆ ಮಹಾ ಪ್ರಸಿದ್ಧಿ. ಶ್ರೀಮಂತಿಕೆ, ಸುಭಿಕ್ಷ, ಙ್ಞಾನ, ಸೌಂದರ್ಯ..... ಎಲ್ಲ ಮಿಳಿತವಾದ ರಾಜ್ಯವನ್ನು ನೋಡಿ ಯಾರೇನು, ದೇವೇಂದ್ರನೂ ಕರುಬಬೇಕು. ಆಶ್ಚರ್ಯವೆಂದರೆ ಆದದ್ದು ಹಾಗೇ. ಇಂದ್ರ ಮಹಾ ಅಸೂಯಾಪರ. ತನ್ನ ಸಿಂಹಾಸನಕ್ಕೆ ಯಾರೂ ಬರಬಾರದೆಂದು ಎಲ್ಲರಿಗೂ ಅಡ್ಡಗಾಲು ಹಾಕುವಾತ. ಹೋಗಲಿ ಎಂದರೆ ಇದೀಗ ಈ ಅಂಗರಾಜ್ಯವನ್ನು ಕಂಡು ಹೊಟ್ಟೆ ಕಿಚ್ಚು. ತನ್ನ ಅಧೀನದ ಮೋಡಗಳಿಗೆ ಆಙ್ಞಾಪಿಸಿದ; " ಅಂಗರಾಜ್ಯದ ಮೇಲೆ ಸುಳಿಯಬೇಡಿ. "
ಬೇಸಗೆಯಲ್ಲಿ ನೆಲ ಬಿರುಕಾಗಿ, ಎಲೆಗಳೆಲ್ಲ ಉದುರಿ, ಬಾವಿಗಳೆಲ್ಲ ಆಳಕ್ಕಿಳಿದು, ಕೊಳಗಳೆಲ್ಲ ಒಣಗುತ್ತ, ನದಿಗಳು ಬತ್ತುತ್ತ... ಇನ್ನೇನು ಒಂದೆರಡು ತಿಂಗಳುಗಳು ಕಳೆದರೆ ಕುಡಿಯಲೂ ನೀರಿಲ್ಲದೇ ಸಾಯಬೇಕು. ಸುರರಾಜನಿಗೆ ವಿಘ್ನ ಸಂತೋಷ. ರಾಜ ಸಭೆ ಮತ್ತೆ ಮತ್ತೆ ಸೇರಿ ಚಿಂತಿಸಿದರು. ಮಳೆ ತರುವುದೆಂತೆಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿಯಿತು. ಒಂದು ದಿನ ಅರಮನೆಯ ಮುಂದೆ ಸುಳಿದ ಸನ್ಯಾಸಿಯನ್ನು ಸತ್ಕರಿಸಿ ಕೇಳಿದ ರಾಜ; " ಸ್ವಾಮಿ, ಈ ಕ್ಷಾಮದಿಂದ ಸುಟ್ಟುಹೋಗುತ್ತಿದೆ ರಾಜ್ಯ. ಹೀಗೇ ಆಗಿಬಿಟ್ಟರೆ ಕೆಲ ತಿಂಗಳುಗಳಲ್ಲೇ ಹಾಳು ಬೀಳುತ್ತದೆ. ನನ್ನ ಬಲಿಯಾದರೂ ಚಿಂತಿಲ್ಲ; ನನ್ನ ನಗರ ಉಳಿಯಬೇಕು. ದಾರಿ ತೋರಿ. " ಕಣ್ಮುಚ್ಚಿ ಕುಳಿತ ಋಷಿ ಕಣ್ಬಿಟ್ಟು ಹೇಳಿದ " ,ತಿಂಗಳೊಳಗೆ ಮಳೆ ಬೀಳುತ್ತದೆ. ಹಾಗೆ ಮಳೆ ಬರಬೇಕಾದರೆ ಶುದ್ಧ ಬ್ರಹ್ಮಚಾರಿಯ ಆಗಮನ ಆಗಬೇಕು. ಭೋಗಿ ಇಂದ್ರನ ದರ್ಪ ಅಳಿಯಬೇಕಾದರೆ, ಭೋಗದ ಅರ್ಥವೇ ಗೊತ್ತಿಲ್ಲದ ಯೋಗಿ ಬರಬೇಕು. ಆತ ಹೆಜ್ಜೆ ಇಡುತ್ತಿದ್ದಂತೆಯೇ ಇಂದ್ರನ ಮಾತಿಗೆ ಕಟ್ಟು ಬಿದ್ದ ಮೋಡಗಳ ಬಿಡುಗಡೆಯಾಗಿ ವರ್ಷ ಸುರಿಯುತ್ತದೆ. ಅಂತಹ ಮಹಾತ್ಮ, ಅಂತಹ ಹುಟ್ಟಾ ಬ್ರಹ್ಮಚಾರಿ ಇಲ್ಲಿಗೆ ಬರಬೇಕು. "ಯಾರಾತ? ". ರಾಜನ ಪ್ರಶ್ನೆಗೆ ಮತ್ತೆ ಕಣ್ಮುಚ್ಚಿ ಕುಳಿತು ಕೊಂಚ ಹೊತ್ತಾದಮೇಲೆ ಬಾಯಿ ಬಿಟ್ಟ, "ಋಷ್ಯಶೃಂಗ".
ವ್ಯಕ್ತಿ ಗೊತ್ತಾಯಿತು, ವಿಳಾಸವೂ ಗೊತ್ತಾಯಿತು. ಆದರೆ ಆತನನ್ನು ಕರೆತರುವುದು ಹೇಗೆ? ಮಂತ್ರಿಗಳು ಕೈ ಚೆಲ್ಲಿ ಕುಳಿತರು. ಕಾರಣ ವಿಭಾಂಡಕ. ಮಗನ ಬಳಿ ಯಾರು ಸುಳಿಯುವುದನ್ನೂ ನಿಷೇಧಿಸಿದ್ದನಾತ. ಶುದ್ಧ ಬ್ರಹ್ಮಚರ್ಯೆ, ಶುದ್ಧ ಅಧ್ಯಯನ, ಶುದ್ಧ ತಪಸ್ಸು.... ಇಷ್ಟೇ.... ತನ್ನಂತೇ ಮಗ ಙ್ಞಾನಿಯಾಗಬೇಕು. ದುರ್ಬಲ ಕ್ಷಣದಲ್ಲಿ ತನ್ನ ತೇಜಸ್ಸು ಜಾರಿತು. ಮಗನಿಗೆ ಹಾಗೂ ಆಗಬಾರದು(?). ಅದಕ್ಕಾಗಿ ಕಟ್ಟೆಚ್ಚರ. ಅದರಿಂದಲೇ ಸಚಿವರಿಗೆ ಸಮಸ್ಯೆ. ಯಾರೂ ಆಶ್ರಮದ ಬಳಿ ಹೋಗುವಂತಿಲ್ಲ. ವಿಭಾಂಡಕರನ್ನು ಭೇಟಿಯಾಗುವಂತಿದ್ದರೆ ಅವರು ಹೊರಗೆ ಎಲ್ಲಾದರೂ ಯಙ್ಞ ಋತ್ವಿಜರಾಗಿದ್ದಾಗ ಮಾತ್ರ. ಇದು ಪ್ರಸಿದ್ಧಿ. ಪರ್ಣ ಶಾಲೆಯ ಬಳಿಗೆ ಬಂದರೆ ಸುಡುವುದೊಂದೇ ಬಾಕಿ! ಯಾವ ಧೈರ್ಯದ ಮೇಲೆ ಹೋದಾರು? ಹೋಗಿ "ನಿಮ್ಮ ಮಗನನ್ನು ಕಳಿಸಿ" ಎಂದಾರು?
ಚತುರಕನೆಂಬ ಮಂತ್ರಿ ಕೊಂಚ ಹಿಂದು-ಮುಂದು ನೋಡುತ್ತ ಒಂದು ಸಲಹೆಯಿತ್ತ. " ಸ್ವಾಮಿ, ಇದು ನಮ್ಮಿಂದ ಆಗದ ಕಾರ್ಯ. ಆದರೆ ಇದಕ್ಕೆ ಒಂದೇ ಒಂದು ಉಪಾಯವಿದೆ. ಅಪಾಯವಿಲ್ಲ ಅದರಲ್ಲಿ. ಕೊಂಚ ಯುಕ್ತಿ, ಚಾತುರ್ಯ ಬೇಕು ಅಷ್ಟೇ..... ಋಷ್ಯಶೃಂಗ ಕೇವಲ ಅಧ್ಯಯನಶೀಲ. ಅಪ್ಪನನ್ನು ಬಿಟ್ಟು ಮತ್ತೇನನ್ನೂ ಕಾಣ. ಬೇರೆಯವರು ಬೇಡ; ಹೆಣ್ಣು, ಭೋಗ, ಎಂದರೇನೆಂದೂ ಗೊತ್ತಿಲ್ಲ.
(ಋಷ್ಯಶೃಂಗೋ ವನಚರಃ ತಪಃ ಸ್ವಾಧ್ಯಾಯ ತತ್ಪರಃ
ಅನಭಿಙ್ಞಃ ಸ ನಾರೀಣಾಂ ವಿಷಯಾಣಾಂ ಸುಖಸ್ಯಚ)
ರೋಮಪಾದ ಚಕಿತನಾಗಿ ಮುಂದೇನು ಹೇಳುತ್ತಾನೆಂದು ಕುತೂಹಲದಿಂದ ಕೇಳುತ್ತ ಕುಳಿತ. ಮಂತ್ರಿ ಮುಂದುವರಿಸಿದ, " ಅರಮನೆಯಲ್ಲಿರುವ ಗಣಿಕೆಯರಲ್ಲಿ ಅತಿ ಸುಂದರಿಯರನ್ನು ಆಯ್ಕೆ ಮಾಡೋಣ; ಎಷ್ಟೇ ಆಗಲಿ ಋಷ್ಯಶೃಂಗ ಯುವಕ; ಬಾಹ್ಯ ಬಂಧನವಿದ್ದರೂ ಗುಪ್ತವಾಗಿರುವ ಕಾಮ ಈ ಚೆಲುವೆಯರನ್ನು ಕಂಡೊಡನೆ ಖಂಡಿತ ಜಾಗೃತವಾಗುತ್ತದೆ. " ರಾಜನ ಆಸಕ್ತಿಯನ್ನು ಕಂಡು ಮಂತ್ರಿ ಮುಂದುವರಿಸಿದ, "ತಮ್ಮ ರೂಪ ಯೌವ್ವನಗಳಿಂದ, ಅಲಂಕಾರ ಸುಗಂಧಗಳಿಂದ ವೇಶ್ಯೆಯರು ಅವನಲ್ಲಿಗೆ ಹೋಗಲಿ, ಮುಂದಿನದು ಅವರ ಬುದ್ಧಿವಂತಿ. ಅವನನ್ನು ಉದ್ದೀಪಿಸಿ, ಸತ್ಕರಿಸಿ, ಇಲ್ಲಿಗೆ ಕರೆತರುವ ಜವಾಬ್ದಾರಿ ಅವರದು.
(ಗಣಿಕಾಃ ತತ್ರ ಗಚ್ಛಂತು ರೂಪವತ್ಯಃ ಸ್ವಲಂಕೃತಾಃ
ಪ್ರಲೋಭ್ಯ ವಿವಿಧೋಪಾಯೈಃ ಆನೇಶ್ಯಂತಿ ಇಹ ಸತ್ಕೃತಾಃ)
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos