ಸತ್ಯವ್ರತನ ಕಥನ ಕೇಳಿ ವಿಶ್ವಮಿತ್ರರಿಗೆ ತುಂಬ ನೋವೂ ಆಯಿತು; ಶಾಪವೂ ತೀವ್ರವೆನಿಸಿತು. ಈ ರಾಜ ತನ್ನ ಹೆಸರನ್ನು ಬೇರೆ ಸೇರಿಸಿದ್ದಾನೆ. ಅದಕ್ಕೇ ಈ ಶಾಪ ಎಂಬರ್ಥದಲ್ಲಿಯೂ ಮಾತು ಬಂದಿದೆ. ತನಗೇನೂ ಅವನ ಕೋರಿಕೆ ಅಂತಹ ಕೆಟ್ಟದ್ದು ಎಂದೆನ್ನಿಸುತ್ತಿಲ್ಲ. ಈಗ ಏನೋ ಬೆಳಕು ಕಾಣಬಹುದು ಎಂದು ನಂಬಿ ಬಂದಿದ್ದಾನೆ ಬೇರೆ. ತಮಗೂ ಇವನ ಋಣ ಇದೆಯಲ್ಲ ? ತನ್ನ ಗೈರುಹಾಜರಿಯಲ್ಲಿ ತನ್ನ ಸಂಸಾರವನ್ನೂ ಸಂರಕ್ಷಿಸಿದ್ದ; ತಾನು ಬಂದಮೇಲೂ, ಅಪ್ಪನ ಆದೇಶ ಮುಗಿಯುವವರೆವಿಗೂ, ತನ್ನಲ್ಲಿಯೇ ತನ್ನ ಸಹಾಯಕನಾಗಿಯೂ ಇದ್ದ. ಅನಂತರ ತಾನೇ ಅಯೋಧ್ಯೆಗೆ ಅವನನ್ನೊಯ್ದರೆ, ಅದು ಅನಾಥವಾಗಿದೆ. ಪೃಥು ಸ್ವರ್ಗಸ್ಥನಾಗಿದ್ದ. ವಸಿಷ್ಠರು ವಾರಸುದಾರನ ಬಗ್ಗೆ ನಿರ್ಧರಿಸದೇ ಇದ್ದಾಗ, ತಾನು ಕರೆದೊಯ್ದದ್ದು ಒಳಿತೇ ಆಯಿತು. ಪಟ್ಟಾಭಿಷೇಕವೂ ವಿಜೃಂಭಣೆಯಿಂದ ನಡೆಯಿತು. ಇನ್ನೇನು ಇವನ ಅರಣ್ಯವಾಸ ಮುಗಿಯಿತು ಎನ್ನುವಾಗ ಈಗ ಮತ್ತೊಂದು ಶಾಪವಾಸ ! " ಮಹಾರಾಜರೆ , ನೀವಿಂದು ವಿಶ್ರಾಂತಿ ಪಡೆಯಿರಿ . ಏನು ಮಾಡಬಹುದೆಂದು ಯೋಚಿಸಿ ನಾಳೆ ಹೇಳುತ್ತೇವೆ. "
ತಲೆಯ ಹೊರೆಯನ್ನು ವಿಶ್ವಮಿತ್ರರಿಗೆ ಅಂಟಿಸಿದ್ದಾಗಿದೆ. ಇನ್ನವರು ನೋಡಿಕೊಳ್ಳುತ್ತಾರೆ. ತನಗೆ ಏನೋ ಒಂದು ಅನುಕೂಲವಾಗುತ್ತದೆ, ಬಿಡುಗಡೆ ಸಿಗುತ್ತದೆ.... ಸಧ್ಯ ! ಈ ಚಾಂಡಾಲ್ಯದಿಂದ ಹೊರಬಂದರೆ ಸಾಕು. ಸ್ವರ್ಗಕ್ಕೇ ಹೋಗುವೆನೋ, ಸ್ವರ್ಗಸುಖವನ್ನೇ ಸಖ್ಯಕ್ಕೆ ತರುವರೋ ಅದು ಅವರಿಗೆ ಬಿಟ್ಟದ್ದು. ಸತ್ಯವ್ರತ ಹಗುರಾಗಿದ್ದ, ರಾತ್ರಿ ನಿದ್ರೆಯೂ ಆವರಿಸಿತು.
ನಿದ್ದೆ ಬಾರದೆ ಇದ್ದದ್ದು ಋಷಿಗಳಿಗೆ. ಎದ್ದರು , ಕುಳಿತರು, ಓಡಾಡಿದರು, ಮಂದವಾಗಿದ್ದ ಯಙ್ಞ ವೇದಿಕೆಗೆ ಒಂದೆರಡು ಸೌದೆ ತುಂಡುಗಳನ್ನು ಹಾಕಿದರು. ತುಪ್ಪ ಸುರಿದು ಪ್ರಜ್ವಲಿಸಿದರು; ಹೊರಗೆ ಅಡ್ಡಾಡಿ ಬಂದರು; ಪದ್ಮಾಸನದಲ್ಲಿ ಕುಳಿತರು; ಏಕಾಗ್ರಕ್ಕಾಗಿ ಕಣ್ಣು ಮುಚ್ಚಿದರು; ಏನು ಮಾಡಿದರೂ ಮನಸ್ಸಿಗೆ ಸಮಾಧಾನವೇ ಇಲ್ಲ. ಸತ್ಯವ್ರತನ ಚಿತ್ರವೇ ; ಅವನ ದಾರುಣ ಕಥೆಯೇ ; ಅವನ ಭೀಕರ ರೂಪವೇ ... ಇಷ್ಟೇ ಅವರ ಕಣ್ಣ ಮುಂದೆ ! ಎಷ್ಟೇ ಯೋಚಿಸಿದರೂ ಆತನಲ್ಲಿ ಅವರಿಗೆ ತಪ್ಪೇ ಕಾಣುತ್ತಿಲ್ಲ.
ನಾನೂ ಇದೇ ಸ್ಥಿತಿಯಲ್ಲಿ ಇದ್ದೆನಲ್ಲ ಒಮ್ಮೆ? ತಾನು ಮಹೋದಯದ ಮಹಾರಾಜನಾಗಿದ್ದೆ. ಹೆಂಡತಿ, ಮಕ್ಕಳು, ರಾಜ್ಯ, ಮೆಚ್ಚುವ ಜನರು, ಭೀತ ವೈರಿಗಳು, ಅವರನ್ನೆಲ್ಲ ತುಳಿದು ಹದ್ದು ಬಸ್ತಿನಲ್ಲಿಟ್ಟಿದ್ದೆ. ಹಾಗೇ ಒಮ್ಮೆ ದಿಗ್ವಿಜಯದಿಂದ ಹಿಂದಿರುಗುವಾಗ ಇದೇ ವಸಿಷ್ಠರ ಆಶ್ರಮ ಎದುರಾಯಿತು. ಗುರುಗಳನ್ನು ನೋಡೋಣವೆಂದು ಆಶ್ರಮದೊಳಹೊಕ್ಕೆ, ಕುಲಪತಿಗಳವರು ತನ್ನಂತಹ ಹಲವು ರಾಜರಿಗೆ ರಾಜಗುರುಗಳಾಗಿದ್ದವರು. ಹತ್ತು ಸಾವಿರಕ್ಕೂ ಅಧಿಕ ಶಿಷ್ಯರಿಗೆ ಅನ್ನ, ವಸತಿ, ವಿದ್ಯೆಗಳನ್ನಿತ್ತು ಸಾಕುತ್ತಿದ್ದ ವೈದಿಕ ಗುರುಗಳು. ನನಗೊಂದು ಪ್ರಶ್ನೆ ಮೊದಲಿನಿಂದಲೂ ಕಾಡುತ್ತಿತ್ತು. ಈ ಬಡ ಬ್ರಾಹ್ಮಣ, ವನದಲ್ಲಿರುವ ವಿಪ್ರ, ಧನರಹಿತ ದ್ವಿಜ, ಅದು ಹೇಗೆ ಕುಲಪತಿಯಾಗಿದ್ದಾನೆ ? ತಾನಾಗಲೀ, ತನ್ನ ಸಹ ಅರಸರುಗಳಾಗಲಿ ಎಷ್ಟು ಕೊಡುತ್ತಿದ್ದೇವೆಂದು ಗೊತ್ತು. ಅದರಿಂದ ಈ ಬೃಹತ್ ಸಂಖ್ಯೆಯನ್ನು ಸಾಕಲು ಸಾಧ್ಯವೇ ? ಹತ್ತು ಸಾವಿರ ವಿದ್ಯಾರ್ಥಿಗಳಿದ್ದರೆ ತಾನೆ ಕುಲಪತಿ ಪದವಿ ? ಅಂದು ಆ ಪ್ರಶ್ನೆಗೆ ಉತ್ತರ ಸಿಕ್ಕಿತು. ತನ್ನೊಡನಿದ್ದ ಸಾವಿರ ಸಾವಿರ ಸೈನಿಕರಿಗೂ ಊಟಕ್ಕೆ ಆಮಂತ್ರಣವಿತ್ತರು. ತನಗೆ ಅಚ್ಚರಿ. ಅದೆಂತು ಇದ್ದಕ್ಕಿದ್ದಂತೆಯೇ ಎಂಟು ಹತ್ತು ಸಾವಿರ ಸೈನಿಕರಿಗೆ ಊಟಕ್ಕೆ ಕೊಡಬಲ್ಲ ಈ ಹಾರುವ ? ಕೊಟ್ಟೇ ಬಿಟ್ಟನಲ್ಲ ! ಯಾರು ಯಾರಿಗೆ ಏನೇನು ಬೇಕೋ ಅವೆಲ್ಲ ಸಿದ್ಧವಾಗುತ್ತಿತ್ತು. ಒಂದೇ ಅಡುಗೆಯಲ್ಲ, ಬಯಸಿದವರ ಬಯಕೆಯ ಭಕ್ಷ್ಯಗಳು ಬರುತ್ತಿದ್ದವು. ಬೇಕಾದ ಭೋಜನ ಸಿದ್ಧವಾಗಿತ್ತು. ಕೊನೆಗೆ ಗೊತ್ತಾಯಿತು; ಅದರ ರಹಸ್ಯ. ಶಬಲೆ, ಕಾಮಧೇನುವಿನ ಮಗಳು ಅವರಲ್ಲಿದ್ದಳು. ಯಾರು ಏನೇ ಕೇಳಿದರೂ ಅದನ್ನು ಅನುಗ್ರಹಿಸುತ್ತಿದ್ದಳು. ತನಗಾ ಹಸುವನ್ನು ಪಡೆಯುವ ತೀವ್ರ ಬಯಕೆ. ವಸಿಷ್ಠರಲ್ಲಿ ಬಿನ್ನವಿಸಿದೆ. ಸಾಧ್ಯವಿಲ್ಲ ಎಂದರು. " ಆಕೆ ನನ್ನದಲ್ಲ , ನಾನು ದೇವೇಂದ್ರನಿಗೆ ಮಾಡಿದ್ದ ಉಪಕಾರಕ್ಕೆ ಪ್ರತಿಯಾಗಿ ಆತ ಶಬಲೆಯನ್ನು ಬಹುಮಾನಿಸಿದ. ನನ್ನ ಆಶ್ರಮವಾಸಿಗಳಿಗೆ ಆಹಾರ ಕೊಡುವ, ನನ್ನ ಯಙ್ಞ ಯಾಗಾದಿಗಳಿಗೆ ಹಾಲು, ಮೊಸರು, ತುಪ್ಪ ನೀಡುವ ಕರ್ತವ್ಯ ಅದರದು. ಅದು ಕಾರಣ ಅದನ್ನು ನಿನಗೆ ಕೊಡಲಾರೆ. "ಮುಖದ ಮೇಲೆ ಹೊಡೆದಂತೆ ಹೇಳಿದರು. ಅದು ಸಜ್ಜನರ ಲಕ್ಷಣ. ಒಳಗೊಂದು, ಹೊರಗೊಂದು ಇಲ್ಲ. ಎಲ್ಲ ನೇರ ನೇರ !! ಆದರೆ ಅಂದು ಅದನ್ನು ತಾನು ಅರ್ಥ ಮಾಡಿಕೊಳ್ಳಲಿಲ್ಲ.
ಹೇಗಾದರೂ ಪಡೆಯಬೇಕೆಂದುಕೊಂಡೆ. ಬಲಾತ್ಕಾರ ಮಾಡ ಹೊರಟೆ . ಸೋತೆ . ಆದರೆ ಆಸೆ , ಹಠ ಕಡಿಮೆಯಾಗಲಿಲ್ಲ . ಇದೆ ! ಈಗಲೂ ಇದೆ . ಆದರೆ ಗುರಿಯೇ ಬದಲಾಗಿದೆ !!!
ಈ ರಾಜನಿಗಿರುವ ಅದಮ್ಯ ಆಶೆಯೇ ತನ್ನದಾಗಿತ್ತು. ಇವನಿಗೆ ಸುರಪುರದ ಆಸೆ. ನನಗೆ ಸುರಧೇನುವಿನ ಬಯಕೆ. ಅದಕ್ಕಾಗಿ ತಾನೆಷ್ಟು ಬಿಡಬೇಕಾಗಿತ್ತು! ಏನೆಲ್ಲ ಕಷ್ಟಗಳನ್ನು ಅನುಭವಿಸಬೇಕಾಗಿತ್ತು! ಅದೇ ಒಂದು ದೊಡ್ಡ ಕಥೆ. ಅದೊಂದು ಕಡು ಕಷ್ಟ ಪಯಣ. ಅದೇ ಒಂದು ಸಾಹಸ ಯಙ್ಞ. ಅದೇ ಅಲ್ಲವೆ ಪ್ರಗತಿಯ ಲಕ್ಷಣ? ಹೌದು, ಪ್ರಗತಿಯೆಂದರೇನು ? ಇದ್ದಲ್ಲಿಯೇ ಇರುವುದೇ ? ತಟಸ್ಥವಾಗಿರುವುದೇ ? ಅ ಆ ಇ ಈ ಕಲಿತು ಕೂಡುವುದೋ, ಪ್ರಬಂಧ ಕಾವ್ಯಗಳವರೆವಿಗೆ ಬೆಳೆಯುವುದೋ? ಒಂದು ಎರಡು ಸಾಕೋ, ಗಣಿತ ಶಾಸ್ತ್ರದಲ್ಲಿ ಪಂಡಿತನಾಗಬೇಕೋ? ಗೆಜ್ಜೆ ಮುಟ್ಟಿದರೆ ಸಾಕೋ, ಕಟ್ಟಿ ಭರತನಾಟ್ಯ ಪ್ರವೀಣೆಯಾಗಬೇಕೋ ? ಗುಹೆಯಲ್ಲೋ, ಪೊಟರೆಗಳಲ್ಲೋ ಮಲಗಬೇಕಿತ್ತೋ, ಅಥವ ವಾಸ್ತು ವೈಭವದಲ್ಲಿ ವಿಹರಿಸುತ್ತಿರುವುದು ಸರಿಯೋ ? ಎಲೆಯಲ್ಲಿ ಮಾನಧಾರಣೆ ಸಾಕೋ, ವಸ್ತ್ರವೈವಿಧ್ಯ ನಾಗರಿಕವೋ ? ಬಾಗಿಲು-ಕಿಟಕಿಗಳನ್ನು ಕೆತ್ತಿದರೆ ಸಾಕೋ , ರುದ್ರ ಮನೋಹರ ನೃತ್ಯದ ನಟರಾಜ ವಿಗ್ರಹವನ್ನು ಅರಳಿಸಬೇಕೋ ? ಹಳ್ಳಿಗಳಲ್ಲಿ ಮಂದವಾಗಿ ಉಳಿದಿರಬೇಕಿತ್ತೋ , ಸಕಲ ಸವಲತ್ತುಗಳ ನಗರ ಬೇಕೋ ? ಹೀಗೆ.. .. ಮುಗಿಯದ ಪ್ರಶ್ನೆಗಳಿವು. ಉತ್ತರ ಹುಡುಕಬೇಕಿಲ್ಲ! ಫಲಿತ ನಮ್ಮ ಕಣ್ಣ ಮುಂದಿದೆ !! ಆ ಅವಸ್ಥೆಗಳನ್ನೆಲ್ಲ ತ್ಯಜಿಸಿ ನಾವಿಂದು ಹೀಗಾಗಿದ್ದೇವೆ. ( ಮುಗಿದಿಲ್ಲ )