ಪಾಯಸ ವಿತರಣೆ !! 
ಅಂಕಣಗಳು

ಪಾಯಸ ವಿತರಣೆ !!

ಸುಗಂಧ ಪೂರ್ಣ ಪಾಯಸವನ್ನು ಮುಂದಿಟ್ಟುಕೊಂಡ ಸುಪ್ರೀತ ದಶರಥ ಅರ್ಧದಷ್ಟು ಪಾಯಸವನ್ನು ಬಗ್ಗಿಸಿ ಪಟ್ಟ ಮಹಿಷಿ ಕೌಸಲ್ಯೆಗೆ ನೀಡಿದ.

ಸುಗಂಧ ಪೂರ್ಣ ಪಾಯಸವನ್ನು ಮುಂದಿಟ್ಟುಕೊಂಡ ಸುಪ್ರೀತ ದಶರಥ ಅರ್ಧದಷ್ಟು ಪಾಯಸವನ್ನು ಬಗ್ಗಿಸಿ ಪಟ್ಟ ಮಹಿಷಿ ಕೌಸಲ್ಯೆಗೆ ನೀಡಿದ. 
(ಕೌಸಲ್ಯಾಯೈ ನರಪತಿಃ ಪಾಯಸಾರ್ಧಂ ದದೌ ತದ)
ಅರ್ಧ ಭಾಗ ಉಳಿದಿತ್ತು. ಅದರಲ್ಲಿ ಅರ್ಧ ಭಾಗ ಸುಮಿತ್ರೆಗೆ ಇತ್ತ. 
(ಅರ್ಧಾದರ್ಧಂ ದದೌ ಚ ಅಪಿ ಸುಮಿತ್ರಾಯೈ ನರಾಧಿಪಃ)
ಕಾಲು ಭಾಗ ಉಳಿದಿತ್ತು. ಅದನ್ನು ಕೈಕೆಗೇ ಕೊಡಬೇಕಿತ್ತು ! ಏಕೋ ಕೊಂಚ ತಡೆದು ಅದನ್ನೂ ಅರ್ಧ ಮಾಡಿದ . ನಾಲ್ಕನೇ ಒಂದು ಭಾಗದಲ್ಲಿ ಅರ್ಧವನ್ನು ಕೈಕೆಗೆ ಕೊಟ್ಟ.
(ಕೈಕೇಯೈಚ ಅವಶಿಷ್ಠ ಅರ್ಧಂ ದದೌ ಪುತ್ರಾರ್ಥ ಕಾರಣಾತ್)
ಬಟ್ಟಲಲ್ಲಿ ಇನ್ನೂ ಎಂಟನೆಯ ಒಂದು ಭಾಗದಷ್ಟು ಪಾಯಸ. ದಶರಥ ಯೋಚಿಸುತ್ತಿದ್ದಾನೆ;  ’ಮೊದಲ ಮಡದಿ ಕೌಸಲ್ಯೆಗೆ ಪಟ್ಟರಾಣಿಯೆಂಬ ಮಹತ್ವ. ಕೈಕೆ ಕಿರಿಯ ರಾಣಿಯೆಂದು ಅಚ್ಚು ಮೆಚ್ಚು. ಕೌಸಲ್ಯೆ ಸಿಂಹಾಸನದ ಅರ್ಧವನ್ನು ಆಕ್ರಮಿಸಿದರೆ , ಕೈಕೆ ಪಲ್ಲಂಗ ಪೂರ್ಣ ವಿಜೃಂಭಿಸಿದ್ದಾಳೆ. ಪಾಪ, ಸುಮಿತ್ರೆಗೆ ಯಾವುದೂ ಇಲ್ಲ. ಅವಳಿಗೆ ಈಗ ಪುತ್ರ ಪ್ರಾಪ್ತಿಯ ಸಂದರ್ಭದಲ್ಲಿಯಾದರೂ ನ್ಯಾಯ ದೊರೆಯಲಿ! ’ ಪತ್ನಿಯರು ತಮಗಿತ್ತ ಪಾಯಸವನ್ನು ಸಂತುಷ್ಟರಾಗಿ ಕುಡಿದಿದ್ದಾರೆ. ಏಳಲಿದ್ದ ಅವರನ್ನು ತಡೆದು, ಸುಮಿತ್ರೆಯ ಕಡೆ ನೋಡಿ "ಯೋಚಿಸಿದ ದಶರಥ, ಅಮೃತಸಮವಾದ ಪಾಯಸವನ್ನು, ಅಂದರೆ ಉಳಿದ ಎಂಟನೆಯ ಒಂದು ಭಾಗದ ಪಾಯಸವನ್ನು ಸುಮಿತ್ರೆಗೇ ಕೊಟ್ಟುಬಿಟ್ಟ."
(ಪ್ರದದೌ ಚ ಅವಶಿಷ್ಟ ಅರ್ಧಂ ಪಾಯಸಸ್ಯ ಅಮೃತೋಪಮಂ
ಅನುಚಿಂತ್ಯ ಸುಮಿತ್ರಾಯೈ ಪುನರೇವ ಮಹೀಪತಿಃ )
(ಈ ಪಾಯಸ ವಿತರಣೆಯ ಬಗ್ಗೆ ನಮ್ಮಲ್ಲಿ ನಡೆದಿರುವ ಚರ್ಚೆ ಸಾಕಷ್ಟು. ಅತ್ಯಂತ ಕಡಿಮೆ ಕೈಕೆಗೆ ದಕ್ಕಿತೆಂದು ಆಕೆಯ ಪರ ವಕಾಲತ್ತು ನಡೆಸಿರುವವರು ಹಲವರು! ಬಟ್ಟಲಿಗೆ ಅಂಟಿದ ಪಾಯಸವೇ-ಅಂಜನೆ ಸ್ವೀಕರಿಸಿದ್ದರಿಂದ-ಆಂಜನೇಯನ ಹುಟ್ಟಿಗೆ ಕಾರಣ ಎಂದು ಕೆಲವರು!!  ಇತ್ತೀಚಿಗೆ ಮಹಾನ್ ವಿದ್ವಾಂಸರೊಬ್ಬರು, ಪಾಯಸದಿಂದ ಹುಟ್ಟಿದ್ದರಿಂದ ಅವರು ದಶರಥನ ಪುತ್ರರೇ ಅಲ್ಲ ಎಂಬ ತಮ್ಮ ಅಮೂಲ್ಯ ತೀರ್ಪನ್ನು ಬೇರೇ ಕೊಟ್ಟಿದ್ದಾರೆ!!!
ಈ ಯಾವುದಕ್ಕೂ ಶ್ರೀಮದ್ ರಾಮಾಯಣದಲ್ಲಿ ಆಧಾರ ಸಿಗದು. ಪಾಪ ! ಮುಗ್ಧರು ಆ ಮಹಾನ್ ವಿದ್ವನ್ಮಣಿಯ ವಾದ ಕೇಳಿ, ಶ್ರೀರಾಮಾದಿಗಳು ಪಾಯಸ ಪುತ್ರರೇನೋ, ಎಂದರೆ ಯಙ್ಞಪುರುಷನ ಮಕ್ಕಳೇನೋ ಎಂದು ಶಂಕಿಸಿರುವುದೂ ಉಂಟು. ಆತ್ಮೀಯ ಓದುಗರೆ, ಈ ಬಗ್ಗೆ ಎರಡು ಮಾತು ಹೇಳುತ್ತೇನೆ.
  • ಪಾಯಸ ವಿತರಣೆ ದಶರಥನ ಸಂಸಾರದ ವಿಷಯ. ಆತ ತೀರ್ಮಾನಿಸಿದ; ಯಾರು ಯಾರಿಗೆ ಎಷ್ಟೆಷ್ಟು ಕೊಡಬೇಕೆಂದು. ಇಷ್ಟೇ ಅಲ್ಲದೆ, ಈ ಹಂಚಿಕೆಯನ್ನು ವಿರೋಧಿಸುವ ಏಕೈಕ ಅವಕಾಶ ಇರುವುದು ಆ ಪತ್ನಿಯರಿಗೆ. ಅವರೇನಾದರೂ ತಕರಾರು ತೆಗೆದರೋ? ವಾಲ್ಮೀಕಿಗಳು ಬರೆಯುತ್ತಾರೆ; " ತಮ್ಮ ಅರ್ಹತೆಗೆ ಅನುಗುಣವಾಗಿಯೇ ತಮಗೆ ದಕ್ಕಿದೆಯೆಂದು ಮೂವರೂ ಸಂತುಷ್ಟರಾಗಿದ್ದಾರೆ. " ( ಸಮ್ಮಾನಂ ಮೇನಿರೇ ಸರ್ವಾಃ ಪ್ರಹರ್ಷ ಉದಿತ ಚೇತಸಃ )
  • ಗಂಡ ಹೆಂಡತಿಯರು ತಮ್ಮ ಪಾಡಿಗೆ ತಾವು ಸುಖವಾಗಿದ್ದಾಗ, ಅನ್ಯರಿಗೆ ಯಾವ ಅಧಿಕಾರವಿದೆ ಮೂಗು ತೂರಿಸಲಿಕ್ಕೆ? 
  • ವಿವಾಹವಾಗಿ ವರ್ಷಗಳು ಸಂದರೂ ಮಕ್ಕಳಾಗದಾಗ ವೈದ್ಯರನ್ನು ಭೇಟಿ ಮಾಡುತ್ತಾರೆ. ಅವರೇನೋ ಔಷಧ ನೀಡುತ್ತಾರೆನ್ನಿ. ಔಷಧ ಪರಿಣಾಮವಾಗಿ ಮಗು ಹುಟ್ಟಿದರೆ ಆ ಮಗು ವೈದ್ಯನ ಮಗನೇ? ನನ್ನ ತಿಳುವಳಿಕೆಯಂತೆ, ದಾಸರ ಹಳ್ಳಿಯ ಉಮಾ ಮಹೇಶ್ ಎಂಬ ಯೋಗಿ, ವೈದ್ಯರೆಲ್ಲ ಕೈಬಿಟ್ಟಿದ್ದ, 25 ವರ್ಷಗಳ ದಾಂಪತ್ಯದಂತ್ಯಕ್ಕೆ ಕೇವಲ ಋತುಚಕ್ರ ನೇರ್ಪಡೆ, ಹಾಗೂ ಯೋಗಾಂಗಾಸನಗಳ ಸೇರ್ಪಡೆಯಿಂದ ಸಂತಾನ ಪ್ರಾಪ್ತಿಯಾಗುವಂತೆ ಮಾಡಿರುವುದನ್ನೂ, ಆಸ್ಪತ್ರೆಯಲ್ಲೇ ದಾದಿಯಾಗಿದ್ದು, ತಙ್ಞರಿಂದ ಪರೀಕ್ಷೆಗೊಳಗಾಗಿ, "ಗರ್ಭಾಶಯದ ಅಪೂರ್ಣ ಬೆಳವಣಿಗೆಯಿಂದ, ಈ ಜನ್ಮದಲ್ಲಿ ಮಗು ಹುಟ್ಟುವುದೇ ಇಲ್ಲ" ಎಂಬ ಪ್ರಮಾಣ ಪತ್ರ ಪಡೆದಾಕೆ, ಇಂದು ತನ್ನ ಮಡಿಲ ಮಗುವನ್ನು ಮುದ್ದಾಡುವುದನ್ನೂ ಕಂಡಿರುವೆ. ಸಾಮಾನ್ಯ ಬುದ್ಧಿಯವರಿಗೂ ಇದು ಯೋಗ ಫಲವೆಂಬ ಅರಿವಿರುತ್ತದೆ.
ಕನಿಷ್ಟ ಇಲ್ಲಿಯಾದರೂ ದೈಹಿಕ ಯೋಗಾಭ್ಯಾಸವಿರುತ್ತದೆ. ಇನ್ನೂ ವಿಶೇಷವೆಂದರೆ ಹಲವು ದೇಗುಲಗಳಲ್ಲಿ ಸಂತಾನಕ್ಕಾಗಿ ಹರಕೆ ಹೊರುವ ಪದ್ಧತಿ ಇದೆ. ಇತ್ತೀಚಿಗೆ ಭೇಟಿ ನೀಡಿದ್ದು ಯಲ್ಲಾಪುರ ಸಮೀಪದ ಘಂಟೆ ಗಣಪತಿ ಗುಡಿ. ಅಲ್ಲಿ ದೇಗುಲದ ತುಂಬೆಲ್ಲ ಘಂಟೆಗಳ ತೋರಣ. ಕಟ್ಟಲು ಜಾಗವಿಲ್ಲದೇ ಉಗ್ರಾಣ ತುಂಬಿದ ಘಂಟಾ ಗಣಗಣ. ಸಂತಾನ ಕೇಳಿದ ಭಕ್ತರಿಗೆ ಮಗು ಹುಟ್ಟಿದರೆ ಗಣಪತಿಗೊಂದು ಘಂಟೆಯ ಉಡುಗೊರೆ!! ಹಾಗೆಂದು ಹುಟ್ಟಿದ ಕೂಸಿಗೆ ಗಣಪನನ್ನೇ ಅಪ್ಪನೆನ್ನೋಣವೆ? 
ಅಪ್ಪಾ ಬುದ್ಧಿವಂತರೇ, ದಯವಿಟ್ಟು ಮನುಷ್ಯನ ಮಿತಿ ಮೀರಿದ ಶಕ್ತಿಯೊಂದರ ಅಸ್ತಿತ್ವವನ್ನು ಒಪ್ಪಿಕೊಳ್ಳಿ. ತಾವೇ ಸಾರ್ವಭೌಮರೆಂದು, ತಾವೇ ಶಾಶ್ವತವೆಂದು ಹೇಳಿಕೊಂಡ ಚಕ್ರವರ್ತಿಗಳೆಲ್ಲ ಮರೆಯಾಗಿ ಹೋಗಿದ್ದಾರೆ. ಸಾಮ್ರಾಜ್ಯಗಳು ಉರುಳಿ ಹೋಗಿವೆ. ತನ್ನ ಮಿತಿ ಮೀರಿದಾಗ, ತಾನು ದುರ್ಬಲನೆಂದು ಅರಿವಾದಾಗ ಮನುಷ್ಯನ ಸಹಜ ಕ್ರಿಯೆ, ಕಾಣದ ದೈವಕ್ಕೆ ಮೊರೆಯಿಡುವುದು. ಅದನ್ನೇ ದಶರಥ ಮಾಡಿದ್ದು. - ಲೇ )

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT