(ಈ ಆಂಜನೇಯನ ಹುಟ್ಟಿನ ಬಗ್ಗೆ ಜನ ಜನಿತವಾದ ಮತ್ತೆರಡು ಕಥೆಗಳು.
- ನಿಕ್ಷಿಪ್ತವಾಗಿದ್ದ ತನ್ನ ವೀರ್ಯಾಂಶವನ್ನು ಪಾರ್ವತಿಯ ಹೊಕ್ಕಳಿನಿಂದ ತೆಗೆದು ವಾಯುವಿನ ಮೂಲಕ ಅಂಜನೆಗೆ ಕಳಿಸಿದ ಶಿವ. ಗೌತಮ ಮುನಿಯ ಮಗಳಾಗಿದ್ದ ಆಕೆ , ಪುತ್ರನಿಗಾಗಿ ತಪಸ್ಸು ಮಾಡುತ್ತಿದ್ದಳು. ವಾಯುವಿತ್ತ ಶಿವ ತೇಜಸ್ಸನ್ನು ಭಕ್ಷಿಸಿದ್ದರಿಂದ ಹುಟ್ಟಿದವನೇ ಈ ವಾಯುಪುತ್ರ.
- ಶ್ರೀಮದ್ ರಾಮಾಯಣದಲ್ಲಿ ಇದಕ್ಕೆ ಆಧಾರವಿಲ್ಲ . ಅಲ್ಲದೇ ಶಂಕರ ತನ್ನ ಮಡದಿಯೊಡನೆ ರಮಿಸುತ್ತಿರುವಾಗ ಮಧ್ಯ ಪ್ರವೇಶಿಸಿದ ದೇವತೆಗಳು , ಪಾರ್ವತಿಯಲ್ಲಿ ಹರವೀರ್ಯ ಸ್ಥಾಪನೆ ಮಾಡಕೂಡದೆಂದು ಪ್ರಾರ್ಥಿಸುತ್ತಾರೆ . ಇದನ್ನು ಮುಂದೊಮ್ಮೆ ನಾನು ವಿವರವಾಗಿ ಚರ್ಚಿಸುವೆ . ಪ್ರಸ್ತುತ ಗಮನಿಸಬೇಕಾದದ್ದು , ಪತ್ನಿಯಲ್ಲೇ ತನ್ನ ತೇಜಸ್ಸನ್ನು ಇಡದಿದ್ದ ಮೇಲೆ ಅದರ ಅಂಶವನ್ನು ತೆಗೆಯುವುದೆಂತು ? ಕಳಿಸುವುದೆಂತು ?
- ವನವಿಹಾರಿಯಾಗಿದ್ದ ಅಂಜನೆಯ ಉಡುಪು ಗಾಳಿಗೆ ಹಾರಿದಾಗ ಅವಳಿಂದ ಆಕರ್ಷಿತನಾಗಿ ಅಂಗ ಸಂಗ ಮಾಡಿದಾತ ವಾಯು . ತನ್ಮೂಲಕ ವಾಯುಪುತ್ರನ ಉದಯ . ಈ ಉಲ್ಲೇಖವೂ ರಾಮಾಯಣದಲ್ಲಿಲ್ಲ . ಅಲ್ಲದೇ ಈ ವಿವರ ನೈತಿಕತೆಯ ನೆಲೆಯನ್ನೇ ಪ್ರಶ್ನಿಸುತ್ತದೆ. (ಹೀಗಾಗಿ ಮೊದಲ ಹೇಳಿಕೆಯಿಂದ ಹೊರಡುವ ರುದ್ರ ವೀರ್ಯ ಸಮುದ್ಭವಂ ಎಂಬುವುದನ್ನೂ ಬೆಂಬಲಿಸುವುದಿಲ್ಲ ; ಹಾಗೂ ಎರಡನೆಯ ಪುರಾಣ ಪಠಣವೂ ಸಂಮಾನ್ಯವಲ್ಲ - ಲೇ )
ಆಂಜನೇಯ ಬೆಳೆಯುತ್ತಿದ್ದಾನೆ, ಪುಟ್ಟ ಬಾಲಕ. ಅಪ್ಪನ ಅರಮನೆಯಲ್ಲಿಯೂ ಇರುತ್ತಿದ್ದ, ಅಮ್ಮನ ಆಶ್ರಮದಲ್ಲೂ. ಅಪ್ಪ ಕೇಸರಿ ವಾನರಾಧ್ಯಕ್ಷ. ಮೇರು ಪರ್ವತದಲ್ಲಿನ ಎಲ್ಲ ಕಪಿ ಮುಖ್ಯಸ್ಥ. ಮಹಾ ಸಮರ್ಥ. ಅವನನ್ನು ಅಲುಗಿಸುವ ಗಂಡೇ ಇರಲಿಲ್ಲ ಅಂದು. ದಿನಬೆಳಗಾದರೆ ರಾಜಕಾರಣದ ಬಿಸಿ. ಇದು ಮೊದಲಿನಿಂದಲೂ ಅಂಜನೆಗೆ ಅಪ್ರಿಯ. ಮಗು ಒಂದೆರಡು ವರ್ಷಗಳು ಆಗುವವರೆಗೂ ಅರಮನೆಯಲ್ಲಿದ್ದ ಆಕೆ, ಗಂಡನ ಒಪ್ಪಿಗೆ ಪಡೆದು ರಾಜ್ಯದ ಮೇರೆಯಲ್ಲಿ ಒಂದು ಆಶ್ರಮ ನಿರ್ಮಿಸಿಕೊಂಡು ಅಲ್ಲಿ ಉಳಿದಳು. ಮಗ ಮೊದಲಿನಿಂದಲೂ ಈ ಲೌಕಿಕ ಪ್ರಪಂಚದಲ್ಲಿ ಅನಾಸಕ್ತ. ಅಮ್ಮನಿಗೆ ಅಂಟಿಕೊಂಡಿದ್ದ ಅವನನ್ನು ಸಹಜವಾಗಿಯೇ ತನ್ನೊಡನೆ ಕರೆತಂದಳು. ಆಕೆಯ ಒಂಟಿ ಆಶ್ರಮದ ಸುತ್ತ ಕೆಲ ಕಾಲದಲ್ಲೇ ಅನೇಕ ಋಷಿಗಳು ತಮ್ಮ ಎಲೆಮನೆಗಳನ್ನು ಕಟ್ಟಿಕೊಂಡರು; ರಾಣಿಯೊಡನಿರುವುದು ಅನುಕೂಲವೆಂದು!!
ಬಾಲಾಂಜನೇಯ ಯಾವಾಗಲೂ ಕುಳಿತೆಡೆಯೇ ಕಣ್ಣು ಮುಚ್ಚಿರುತ್ತಿದ್ದ. ಏನನ್ನೋ ಧ್ಯಾನಿಸುತ್ತಿದ್ದ. ಕಣ್ಣ ಮುಂದೆ ಯಾವುದೋ ಅಸ್ಪಷ್ಟ ರೂಪ. ಯಾರೆಂದು ಗೊತ್ತಿಲ್ಲ. ಆದರೆ ಒಂದು ಮಾತ್ರ ಸ್ಪಷ್ಟವಾಗಿ ಕಾಣುತ್ತಿತ್ತು. ಅದೇ ಕಾಂತಿ, ಕಾರುಣ್ಯ, ಮಾರ್ದವತೆಯ ಕಣ್ಣುಗಳು. ತೇಜಃಪೂರ್ಣ ನಯನಗಳು. ಒಮ್ಮೊಮ್ಮೆ ಕಣ್ಣುಗಳ ಹಿಂದಿನ ಮುಖವೂ ಕಾಣುತಿತ್ತು. ಹಸನ್ಮುಖ. ತುಂಬು ಮೃದು ಕೆನ್ನೆಗಳು. ವಿಶಾಲ ಹಣೆ. ಹಣೆಯಲ್ಲಿ ಗಂಧ! ಮೇಲೆ ಜಟೆ!!! ’ ಓಹ್ ! ಯಾರೋ ಮುನಿ ಇರಬೇಕು. ’ ಒಮ್ಮೊಮ್ಮೆ ಆ ಮುಖದ ಅಕ್ಕ ಪಕ್ಕದಲ್ಲಿ ಬಿಲ್ಲು-ಬಾಣಗಳು. ’ ಇದೇನಿದು? ತಾನು ಯಾರೋ ಋಷಿಯೆಂದುಕೊಂಡರೆ ಈ ಆಯುಧಗಳೇಕೆ?ಯಾರೀ ತೇಜಸ್ವೀ ಪುರುಷ????? ’
ಜೀವನದಲ್ಲಿ ಆಕಸ್ಮಿಕಗಳಾಗುವುದು ಹೀಗೇ ಎಂದು ಕಾಣುತ್ತದೆ. ಏನೋ ಮಾಡಲು ಹೋಗುತ್ತೇವೆ. ಇನ್ನೇನೋ ಆಗಿಬಿಡುತ್ತದೆ. ಕೆಲ ಸಂದರ್ಭಗಳಲ್ಲಿ ಅನಿಷ್ಟ ಫಲ. ಮತ್ತೆ ಕೆಲ ಬಾರಿ ಅನಿರೀಕ್ಷಿತ, ಅಪ್ರಾರ್ಥಿತ, ಆದರೆ ಪ್ರಿಯ ಫಲಿತಾಂಶ. ಮತ್ತೆ ಕೆಲವು ಬಾರಿ ಸಿಕ್ಕ ಫಲವಷ್ಟೂ ಎಷ್ಟು ಘೋರವೆಂದರೆ ಅಂಗಾಂಗ ಭಂಗ! ಯಾಕಾದರೂ ಈ ಕಾರ್ಯಕ್ಕೆ ಕೈ ಹಾಕಿದೆವೋ ಎಂದು ಜುಗುಪ್ಸೆ ಆದರೆ.... ಆದರೆ ಅಷ್ಟರಲ್ಲಿ ಅನಿಷ್ಟವಿದ್ದದ್ದು ಆಪ್ಯಾಯಮಾನವಾಗುತ್ತದೆ. ತಿರಸ್ಕೃತವಾದದ್ದು ಪುರಸ್ಕೃತವಾಗುತ್ತದೆ. ಮೋಘವಾದದ್ದು ಅಮೋಘವಾಗುತ್ತದೆ. ಹೀಗೇ ಆಯಿತು ಒಮ್ಮೆ ಈ ಕೇಸರಿ ಕುವರನಿಗೂ.
ಅದೊಂದು ದಿನ ಬಾಲಾಂಜನೇಯನಿಗೆ ಹಶಿವೋ ಹಶಿವು. ತಾಯಿ ಯಾವುದೋ ಗುಡಿಗೆ ಹೋಗಿದ್ದಾಳೆ. ಮನೆಯಲ್ಲಿ ತಿನ್ನುವುದಕ್ಕೆ ಏನೂ ಕಾಣಲಿಲ್ಲ. ಹೊರಬಂದ. ಪಕ್ಕದ ಆಶ್ರಮದಲ್ಲಿ ಹೋಮ ಒಂದು ನಡೆಯುತ್ತಿದೆ, ಅಲ್ಲಿ ಹೊಕ್ಕ. ಹಣ್ಣುಗಳ ರಾಶಿಯೇ ಇದೆ, ಒಂದನ್ನೆತ್ತಿ ಸಿಪ್ಪೆ ಸುಲಿದ. ಬಾಯಿಗೆ ಹಾಕಿಕೊಳ್ಳಬೇಕು. " ಏಯ್ ! ಈ ಹಣ್ಣನ್ನು ನೈವೇದ್ಯ ಮಾಡದೇ ತಿನ್ನೋ ಹಾಗೆ ಇಲ್ಲ. ಇಡು ಅಲ್ಲಿ !". ಪಾಪ, ಕೊಂಚ ಬೆದರಿದ ವಾಯು ಪುತ್ರ ಆ ದೊಡ್ಡ ಹೊಟ್ಟೆ, ಕೆಂಪು ಕಂಗಳ ಋಷಿಯನ್ನು ಕೇಳಿದ, " ನನಗೆ ಹಶಿವಾಗ್ತಾಯಿದೆ, ಏನಾದ್ರೂ ತಿನ್ನೋದಿಕ್ಕೆ ಕೊಡಿ. " .ಋಷಿ ನಗುತ್ತ ಹೇಳಿದ; "ನಿನಗೇನಯ್ಯ ನಾವು ಕೊಡೋಕಾಗತ್ತೆ, ನೀನು ರಾಜನ ಮಗ. ಅಲ್ಲದೇ ವಾಯುವಿನ ವರಪುತ್ರನಂತೆ! ನಾವು ಸಾಧಾರಣ ಮಂದಿ. ಒಂದು ಉಪಾಯ ಹೇಳಲಾ?" ಕುತೂಹಲದಿಂದ ಕೇಳಿದ ಕೇಸರಿ ಕುಮಾರ. " ಹೀಗೇ ಮೇಲೆ ಹತ್ತು. ಅಲ್ಲಿ ನಿನಗೆ ಹಣ್ಣೂ ಸಿಗುತ್ತೆ. ನೀರೂ ಸಿಗುತ್ತೆ .ಅಷ್ಟು ತಿಂದು ವಾಪಸಾಗು. ಇನ್ನೂ ಮೇಲೆ ಹತ್ತ ಬೇಡ. ಹತ್ತುವುದಕ್ಕೂ ಆಗೊಲ್ಲ. ತುಂಬಾ ಕಡಿದು. ದಾರೀ ತುಂಬಾ ಹಾವುಗಳೂ, ಕಾಡು ಪ್ರಾಣಿಗಳೂ, ಕಲ್ಲು-ಮುಳ್ಳುಗಳೂ. ಕಷ್ಟ. ಯಾರೂ ಹತ್ತೊಲ್ಲ. ಹತ್ತಿದರೂ ಪರ್ವತದ ಮೇಲಕ್ಕೆ ಹೋಗೊಲ್ಲ; ಹೋದರೂ ಒದೆ ತಿಂದು ಬರಬೇಕು. " ಮೊದಲೇ ಹುಡುಗ. ಸಾಹಸ ಪ್ರಿಯ. " ಯಾಕೆ?" ಗಂಭೀರನಾದ ಋಷಿ " ಪರ್ವತದ ತುದಿಯಲ್ಲಿ ಸೂರ್ಯದೇವರ ಗುಡಿಯಿದೆ. ಅದರ ಆವರಣದಲ್ಲಿ ಎಂದಿಗೂ ಒಣಗದೇ ಇರೋ ಹಣ್ಣುಗಳಿಂದ ತುಂಬಿರೋ ಒಂದು ತೋಟ ಇದೆ. ಅದು ದೇವೇಂದ್ರನ ತೋಟ. ಅಲ್ಲಿಗೆ ಯಾರೂ ಹೋಗೋಕೂ ಆಗೊಲ್ಲ; ಹಣ್ಣು ಕೀಳೋದೂ ಇಲ್ಲ. ಅದನ್ನು ರಕ್ಷಿಸೋದಿಕ್ಕೆ ದೇವ ರಕ್ಷಕರನ್ನ ಅಲ್ಲಿ ಇಂದ್ರ ಇಟ್ಟಿದಾನಂತೆ. "
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos