ಮೇನಕಾ ಸಂಗ-ವಿಶ್ವಾಮಿತ್ರರ ತಪೋ ಭಂಗ!
ಕರಗಿಹೋದ ಕಮಲಾಸನ. ಕೊಂಚ ನಿರಾಶೆ. ಇಷ್ಟು ವರ್ಷಗಳ ಈ ಕಠೋರ ತಪಕ್ಕೆ ಕೇವಲ ಋಷಿ ಪದವೇ? ಓಹ್ ! ಇನ್ನು ಬ್ರಹ್ಮರ್ಷಿಯಾಗುವುದು ಯಾವಾಗ?? ಮನಸ್ಸು ತನ್ನ ಸ್ಥಿಮಿತತೆಯನ್ನು ಕಳೆದುಕೊಂಡಿತು.
ಪುಷ್ಕರದಲ್ಲಿ ಏನೋ ಸದ್ದು. ಪಾರದರ್ಶಕ ಬಿಳಿಸೀರೆಯುಟ್ಟ ಸುಂದರಿ. ಅಪ್ರತಿಮ ಸುಂದರಿ, ಸುಪುಷ್ಟಾಂಗೋಪಾಂಗಗಳ ಅಂದವೇ ಮೈವೆತ್ತ ಮೋಹಿನಿ. ’ ಇಷ್ಟು ನಿರ್ಭಯವಾಗಿ ನಾಚಿಕೆಯ ಪೊರೆ ಕಳಚಿ ಅರೆನಗ್ನಳಾಗಿ ಈಜುತ್ತಿದ್ದಾಳೆಂದರೆ ಇವಳು ಯಾರೋ ದೇವಕನ್ಯೆಯೋ, ಯಕ್ಷಿಯೋ ಇರಬೇಕು. ಇವಳನ್ನು ನೋಡುತ್ತಿದ್ದರೆ ಮನಸ್ಸು ಅವಳಲ್ಲಿ ಅನುರಕ್ತವಾಗಿದೆ. ಅವಳ ಸಂಗ ಬೇಕೆನಿಸುತ್ತಿದೆ.’ " ನನ್ನ ಆಶ್ರಮದ ಬಳಿ ಬಂದು ಅದಕ್ಕೊಂದು ಚೆಲುವು ಕೊಟ್ಟ ಕನ್ಯೆ, ನೀನು ಯಾರು? ನಾನು ವಿಶ್ವಮಿತ್ರನೆಂಬ ಋಷಿ. " . ಮಾತು ಮುಗಿಯುತ್ತಿದ್ದಂತೆಯೇ ನೀರು ಬಿಟ್ಟೆದ್ದು ಬಂದಳು. ಬಿಳಿ ಬಣ್ಣದ ಮಿಂಚಿನ ದೇಹ. ಖಚಿತವಾಗಿ ತಿದ್ದಿದ ಉಬ್ಬು ತಗ್ಗುಗಳು. ಏರಿಳಿಯುತ್ತಿರುವ ವಕ್ಷ ಸ್ಥಲ. ಹಿಡಿನಡು. ಮುಂದೆ ಬಂದು ಬಗ್ಗಿ ನಮಸ್ಕರಿಸಿದಳು. ಆ ಭಂಗಿ, ಆ ಸಾಮಿಪ್ಯ, ಆ ದರ್ಶನ, ಆ ಸನ್ನಿವೇಶ, ಋಷಿ ಪದದಿಂದಾದ ನಿರಾಶೆಯ ಮಧ್ಯೆ ಈ ಅಪೂರ್ವ ಲಾವಣ್ಯವತಿಯಿಂದ ಉಂಟಾದ ಏನೋ ಒಂದು ಭಾವ ತೀವ್ರತೆ. ಅನಂಗ ಅಂಕೆಗೆ ಸಿಕ್ಕುಬಿಟ್ಟರು ಮುನಿಗಳು!! (ದೃಷ್ಟ್ವಾ ಕಂದರ್ಪ ವಶಗೋ ಮುನಿಃ)
"ವರ್ಷಗಳಿಂದ ಕಠಿಣ ತಪಶ್ಚರ್ಯದಲ್ಲಿ ದಂಡಿಸಿದ್ದೀರಿ ದೇಹವನ್ನು. ಅದಕ್ಕಷ್ಟು ಸುಖ ನೀಡಲು ದೇವೇಂದ್ರ ಕಳಿಸಿದ್ದಾನೆ ನನ್ನನ್ನು." ತನ್ನ ಬಯಕೆಗಳಿಗೆ ಭಾಷ್ಯ ಬರೆಯುತ್ತಿದ್ದಾಳೆ ಭುವನಮೋಹಿನಿ.. ಅಲ್ಲ, ಸ್ವರ್ಗಭಾಮಿನಿ. " ಇಂದ್ರ ಕಳಿಸಿರುವುದು ಬೇರೆ. ಅವನು ತಪಸ್ಸು ಕೆಡಿಸಲು ಕಳಿಸುತ್ತಾನೆ. ನನ್ನ ತಪಸ್ಸು ಮುಗಿದಿದೆ. ಹೀಗಾಗಿ ಕೆಡಿಸುವುದಿಕ್ಕೆ ಏನೂ ಉಳಿದಿಲ್ಲ. ನೀನು ಬಂದಿರುವೆ. ನಿನ್ನ ಸೌಂದರ್ಯಕ್ಕೆ ನಾನು ವಶವಾಗಿದ್ದೀನಿ. ಹಾಗೆಂದು ನನ್ನ ಕಡೆಯಿಂದ ಏನೂ ಒತ್ತಾಯವಿಲ್ಲ. ನಿನಗೆ ನನ್ನಲ್ಲಿ ಆಸಕ್ತಿಯುಂಟೋ? " ಲಜ್ಜೆಗೆದ್ದವಳು ನಾಚಿಕೊಂಡಳು. ನೆಲ ನೋಡಿ ನುಡಿದಳು. " ದೇವತೆಗಳನ್ನೇ ನಡುಗಿಸುವ ನೀವು ನನ್ನನ್ನು ಬಯಸಿದ್ದು ನನ್ನ ಅದೃಷ್ಟ. " ಮರುಕ್ಷಣದಲ್ಲಿ, ಏನಾಯಿತೆಂದುಕೊಳ್ಳುವಷ್ಟರಲ್ಲಿಯೇ ಮೇನಕೆ ವಿಶ್ವಮಿತ್ರರ ತೋಳ್ಬಂದಿಯಾದಳು. ಅವರ ಬೆನ್ನ ಸುತ್ತ ನಳಿದೊಳ್ಗಳನ್ನು ಬಳಸಿ, ಭುಜಕ್ಕೆ ತನ್ನ ಮೊಗವಾನಿಸಿ ಸುಖಕ್ಕೆ ತನ್ನ ಅರೆಗಣ್ಣು ಮುಚ್ಚಿದಳು. " ಹಾಲಿನ ಕೆನೆಯನ್ನು ತೊಟ್ಟ ಅಪ್ಸರಸಿ, ನನ್ನನ್ನು ಸುಖಿಯನ್ನಾಗಿ ಮಾಡಲು ಆಗಮಿಸಿದ ನಿನಗೆ ಸ್ವಾಗತ. ನನ್ನ ಪರ್ಣಕುಟಿಯಲ್ಲೇ ಇರಬಹುದಲ್ಲ? "
( ಅಪ್ಸರಃ ಸ್ವಾಗತಂ ತೇ ಅಸ್ತು . ವಚಸ ಇಹ ಮಮ ಆಶ್ರಮೇ )
ಮೇಲ್ನೋಟಕ್ಕೆ ಪರ್ಣಕುಟಿ. ಒಳಗದು ಅರಮನೆ. ರಾಜರರಮನೆಯನ್ನೂ ನಾಚಿಸುವ ಶಯ್ಯಾಗೃಹ. ಯಾವ ದಾಸ ದಾಸಿಯರೂ ಇಲ್ಲ! ಆದರೇನು? ಬೇಕು ಬೇಕಾದ್ದು ಬಯಸುತ್ತಿದ್ದಂತೆಯೇ ಪ್ರತ್ಯಕ್ಷ. ಸುಖ ಸಾಗರದಲ್ಲಿ ಮುಳುಗಿಬಿಟ್ಟರು ಮುನಿಗಳು... ಕ್ಷಣ ಕಾಲ ಕಳೆದು ಹೋಯಿತಲ್ಲ? ತಾನು ಮನ್ಮಥ ವಶನಾದೆನಲ್ಲ? ತನ್ನ ತಪಸ್ಸು ಜಾರಿತಲ್ಲ? ತಪಸ್ಸಿನ ಖಾತೆಯನ್ನು ನೋಡಿದರೆ ಅದೀಗ ಬರಿದು! ಕಳೆದದ್ದು ಕ್ಷಣವಲ್ಲ, ನಿಮಿಷಗಳಲ್ಲ, ದಿನಗಳಲ್ಲ, ಹತ್ತು; ಪೂರ್ತಿ ಹತ್ತು ವರ್ಷಗಳು!!
ಖಿನ್ನರಾಗಿಬಿಟ್ಟರು ವಿಶ್ವಮಿತ್ರರು. ಮೇನಕೆ ನಡುಗುತ್ತಿದ್ದಾಳೆ; ’ತನ್ನನ್ನೆಲ್ಲಿ ಶಪಿಸುವೆರೋ’ ಎಂದು. " ಛೆ ಛೆ ! ತಪ್ಪು ನಿನ್ನದಲ್ಲ. ನೀನು ನನ್ನ ಬದುಕಿನಲ್ಲಿ ನವ್ಯ ರಸಾಧ್ಯಾಯವನ್ನು ಬರೆದೆ. ಹತ್ತು ವರ್ಷಗಳನ್ನು ನಿಮಿಷಗಳನ್ನಾಗಿಸಿದೆ. ನಾನು ದೂರ ಮಾಡಿದ್ದ, ನನಗೆ ಸಿಗದಿದ್ದ ಮನ್ಮಥ ಸುಖವನ್ನು ಸಂಪೂರ್ಣವಾಗಿ ಕೊಟ್ಟೆ. ಸ್ವರ್ಗದ ರಂಭೆ ಬಂದರೂ ಬೇಡೆಂಬಷ್ಟು ಕಂಠಪೂರ್ತ ಶೃಂಗಾರ ರಸ ಕುಡಿಸಿಬಿಟ್ಟೆ. ನಮ್ಮ ಸಂಯೋಗ ಫಲವಾಗಿ ಹುಟ್ಟಿದ ಈ ಮಗುವೇ ಶಕುಂತಲೆಯೆಂದಾಗಲಿ. ಇವಳನ್ನು ಸಾಕಿ ಸಲಹು. ಇವಳ ಮಗನ ಹೆಸರೇ ಈ ದೇಶಕ್ಕೆ ಮುಂದೆ ಬರಲಿ. ಅದು ಭಾರತ ವರ್ಷವಾಗಲಿ. ಭರತನ ಅಜ್ಜ-ಅಜ್ಜಿ ಯರಾಗಿ ನಮ್ಮ ಮಿಲನ ಎಂದೆಂದಿಗೂ ಭಾರತೀಯರಿಗೆ ನೆನಪಿರಲಿ" . ಕೊನೆಯ ಬಾರಿಗೆ ಅವಳನ್ನಪ್ಪಿ ಗಾಢ ಚುಂಬನವಿತ್ತು ತಮ್ಮ ಪ್ರಿಯ ವಾಕ್ಯಗಳಿಂದ ಅವಳನ್ನು ಸಂತೈಸಿ ವಿಶ್ವಮಿತ್ರರು ಆಕೆಯನ್ನು ಬೀಳ್ಕೊಟ್ಟರು.
(ಮೇನಕಾಂ ಮಧುರೈರ್ ವಾಕ್ಯೈಃ ವಿಸೃಜ್ಯ ಕುಶಿಕ ಆತ್ಮಜಃ )
’ಛೆ ಛೆ! ಎಂತಹ ಕೆಲಸವಾಯಿತು? ನಚಿಕೇತರು ಹೇಳಿದುದೇನು? ತಾನು ಮಾಡಿದುದೇನು? ಇಂದ್ರಿಯ ಜಯವೇ ಪ್ರಧಾನವೆಂದರು. ತಾನೂ ಅದನ್ನೇ ನಿಗ್ರಹಿಸಲು ಪಣ ತೊಟ್ಟೆ. ಆದರೆ ಏನಾಯಿತು?.... ಈ ಮೇನಕಾ ಸಂಗ. ಅವಳು ತಪೋ ಮಧ್ಯದಲ್ಲಿ ಬಂದಿದ್ದರೆ ತಾನು ವಿಚಲಿತಗೊಳ್ಳುತ್ತಿರಲಿಲ್ಲ. ತಪಸ್ಸು ಮುಗಿದು, ಬ್ರಹ್ಮಾಗಮನವಾಗಿ ಅಸಂಪೂರ್ಣ ವರವಿತ್ತು ತನಗೆ ನಿರಾಶೆಯಾಗಿದ್ದಾಗ ಬಂದಳು. ಅದಾವು ದುರ್ಬಲ ಕ್ಷಣವೋ, ಜಾರಿಬಿಟ್ಟೆ. ಆದರೆ ಮೇನಕೆಯದೇನೂ ತಪ್ಪಿಲ್ಲ. ಅವಳನ್ನು ತಾನೇ ತಾನೇ ಸ್ವಾಗತಿಸಿದ್ದು? ಇಂದ್ರ ಕಳಿಸಿದನೆಂದು ಅವಳು ನಿಜವೇ ಹೇಳಿದ್ದಳು. ತಪಸ್ಸು ಮುಗಿದಿದೆಯಲ್ಲ, ಎಂದುಕೊಂಡೆ. ಆದರೆ ಎಲ್ಲಿ ಮುಗಿದಿತ್ತು?.....’
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos