'ವಿವಾಹದ ಏಕೈಕ ವಿಧಿಯಾದ ಸೀತಾ ಪಾಣಿಗ್ರಹಣ ಶ್ರೀರಾಮರಿಂದ'
"ನಮ್ಮ ಸನಾತನ ಧರ್ಮ ಪೂರ್ವಜನ್ಮ-ಪುನರ್ಜನ್ಮಗಳಲ್ಲಿ ವಿಶ್ವಾಸವಿಟ್ಟಿದೆ. ನಮ್ಮಲ್ಲಿರುವ ಪ್ರಾಣಕ್ಕೆ, ಅಥವ ಆತ್ಮಕ್ಕೆ ಸಾವೇ ಇಲ್ಲ ಎಂದು ನಂಬಿದೆ. ಹೀಗಾಗಿ ದೇಹ ಬಿದ್ದು "ಸತ್ತ" ಎಂದು ಹೇಳುವುದು ದೇಹಕ್ಕೆ ವಿನಹ ಆತ್ಮಕ್ಕಲ್ಲ ಎಂಬುದೂ ನಮಗೆ ಗೊತ್ತಿದೆ. "ದೇಹ ಉರುಳಿದ ಮೇಲೆ ಈ ಆತ್ಮ ಹೋಗುತ್ತದೆಲ್ಲಿಗೆ?" ಎಂಬುದಕ್ಕೆ ಉತ್ತರವಾಗಿ ಅದು ಪಿತೃಗಳ ಲೋಕಕ್ಕೆ ಹೋಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ದೇವಲೋಕದಲ್ಲಿ ಈ ಪಿತೃ ಲೋಕಕ್ಕೆ ಒಂದು ಪ್ರತ್ಯೇಕ ಮರ್ಯಾದೆ. ಈ ಪಿತೃ ಲೋಕದಲ್ಲಿ ಪಿತೃಗಳು ದೇವತೆಗಳಾಗಿ, ಪಿತೃ ದೇವತೆಗಳೆಂಬ ಅಭಿದಾನದಿಂದ ವಾಸಿಸುತ್ತಾರೆ.
ಈ ಪಿತೃ ದೇವತೆಗಳಲ್ಲಿ ನಮ್ಮ ವಂಶಕ್ಕೆ ಸಂಬಂಧಿಸಿದ ದೇವತೆಗಳಿರುತ್ತಾರಲ್ಲ, ಅವರು ಯಾವಾಗಲೂ ನಮ್ಮ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಅಂತಹ ಪಿತೃ ದೇವತೆಗಳ ಆಶೀರ್ವಾದ ಬೇಡುವುದು ಎಲ್ಲ ಸಭ್ಯ ಗೃಹಸ್ಥರ ಕರ್ತವ್ಯ. ಇದು ನಾವು ನಮ್ಮ ಹಿರಿಯರಿಗೆ ತೋರುವ ಆದ್ಯ ಗೌರವ. ಅವರನ್ನಾಹ್ವಾನಿಸಿ ಅವರಿಗಾಗಿ ಇಲ್ಲಿ ದಾನ ಮಾಡಬೇಕೆಂಬುದು ಎಲ್ಲ ಭಾರತೀಯರ ಭಾವನೆ. ಹೀಗೆ ಪಿತೃದೇವತೆಗಳನ್ನಾಹ್ವಾನಿಸಿ ಅವರನ್ನು ತೃಪ್ತಿ ಪಡಿಸುವುದು ನಮ್ಮ ಅವಶ್ಯ ಅನಿವಾರ್ಯ ಕ್ರಿಯೆ. ಅದನ್ನೇ ನಾವು ಪ್ರತಿ ವರ್ಷವೂ ವಾರ್ಷಿಕ ಶ್ರಾದ್ಧವೆಂಬ ಹೆಸರಿನಲ್ಲಿ, ತಿಥಿಯನ್ನು ಮಾಡುತ್ತೇವೆ. ಅಂತೇ ಈ ರೀತಿಯ ಯಾವುದೇ ವಿಶೇಷ ಶುಭ ಸಂದರ್ಭ ಸಮಾರಂಭ ನಡೆದರೂ ಮೊದಲು ಅವಶ್ಯವಾಗಿ ಮಾಡಲೇಬೇಕಾದ ಕರ್ಮವೆಂದರೆ ಅದು ಶ್ರಾದ್ಧ. ಕೆಲವರಿಗೆ ಈ ಶ್ರಾದ್ಧ ಎಂಬುದು ಎಲ್ಲೋ ಕಹಿಯಾಗಿ, ನಾಂದೀ ಶ್ರಾದ್ಧ ಎಂದು ಮರುನಾಮಕರಣ ಮಾಡಿದರು. ಕೊನೆಗದು ಶ್ರಾದ್ಧ ಪದವನ್ನು ಬಿಟ್ಟು ನಾಂದಿ ಎನ್ನುವುದಕ್ಕಷ್ಟೇ ಸೀಮಿತವಾಯಿತು. ಇದನ್ನು ನಾವು, ಗಂಡಿನ ಕಡೆಯವರು ಮಾಡಬೇಕಾದ ಪ್ರಧಾನ ಅಂಗ. " .ಶ್ರೀರಾಮರು ವಿಷಯವನ್ನು ಮಂಡಿಸುವ ರೀತಿ, ಆಧರಿಸಿದ ತರ್ಕ....
ಎಲ್ಲವೂ ಶತಾನಂದರಿಗೆ ಅತ್ಯಂತ ಪ್ರಭಾವಿಯಾಗಿ ಕಂಡಿತು.
"ರಾಜರ ಬಳಿ ಇರುವ ಸಂಪತ್ತು ಜನರದು. ಇಂತಹ ಸಂದರ್ಭಗಳನ್ನು ನೆಪ ಮಾಡಿಕೊಂಡು ರಾಜನಾದಾತ ಯೋಗ್ಯ ಅರ್ಹ ಪ್ರಜೆಗಳನ್ನು ಹುಡುಕಿ ದಾನ ಮಾಡಬೇಕು. ರಾಜ್ಯ ವಿಸ್ತಾರಕ್ಕೆ ಅನುಗುಣವಾಗಿ ಈ ದಾನದ ಮೊತ್ತ ಇರುತ್ತದೆ. ನಮ್ಮದು ದೊಡ್ಡ ರಾಜ್ಯವಾದ್ದರಿಂದ ಒಂದೊಂದು ದಿಕ್ಕಿನ ಅರ್ಹರಿಗೆ ಒಂದೊಂದು ಲಕ್ಷ ಗೋವುಗಳನ್ನು ದಾನ ಮಾಡುತ್ತೇವೆ. ಕೊಡುವುದರಲ್ಲೇ ಸಂತೋಷ ಕಾಣಬೇಕೆಂಬ ಸಂದೇಶವೂ ಇದರಲ್ಲಿದೆ. ನಮ್ಮಲ್ಲಿರುವುದರಲ್ಲಿ ಸಮಾಜಕ್ಕೆ ಒಂದಷ್ಟು ವಾಪಸಾಗಬೇಕಲ್ಲ? ಹೀಗಾಗಿ ವಿವಾಹದಲ್ಲಿ ಗೋದಾನ ಕಡ್ಡಾಯವಾಗಿದೆ. ಸಾಮಾನ್ಯ ಪ್ರಜೆ ಒಂದು ಹಸುವನ್ನಾದರೂ ದಾನ ಮಾಡುತ್ತಾನೆ. "ಗಮನ ಇಟ್ಟು ಕೇಳುತ್ತಿದ್ದ ಶತಾನಂದರು, "ನಮ್ಮ ಕಡೆಯಿಂದ ಯಾವ ಸಿದ್ಧತೆಯಾಗಬೇಕು? "ಎಂದರು. "ಮುಖ್ಯ ಕಾರ್ಯವೇ ವಿವಾಹ, ಅದನ್ನು ನೆರವೇರಿಸಬೇಕಾದದ್ದು ನೀವೇ ಅಲ್ಲವೆ? ನಿಮ್ಮ ಕನ್ಯೆಯನ್ನು ವರನಿಗೆ ಹಸ್ತಾಂತರಿಸಬೇಕು. ಹಾಗೆ ತನ್ನ ಮಗಳ ಜವಾಬ್ದಾರಿಯನ್ನು ಅಳಿಯನಿಗೆ ಎಲ್ಲರ ಮುಂದೆ ವಹಿಸುವ ಕಾರ್ಯಕ್ರಮವೇ ಪ್ರಧಾನ. ತನ್ನ ಮಗಳನ್ನು, ಅವಳ ಹೊಣೆಯನ್ನು ಧರಿಸುವುದನ್ನು, ಎಂದರೆ "ವಾಹ" ತನ್ನ ಮೇಲೆ ಹೊರಿಸಿಕೊಳ್ಳುವ ವಿಶೇಷ ಜವಾಬ್ದಾರಿಯೇ ವಿವಾಹ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ವಿಶೇಷ ಜವಾಬ್ದಾರಿಯ ಸ್ವೀಕಾರದ ಪ್ರಕಟಿತ ದೃಷ್ಯವೇ ಪಾಣಿ ಗ್ರಹಣ. ಇದೇ ವಿವಾಹದ ಪ್ರಮುಖ ಅಂಗ. ಇದನ್ನು ಕನ್ಯಾ ಪಿತೃ ನೆರವೇರಿಸಿಕೊಡಬೇಕು. ದಯವಿಟ್ಟು ಇದನ್ನು ಕನ್ಯಾದಾನವೆಂದು ತಪ್ಪು ತಿಳಿಯಬಾರದು. ದಾನದಲ್ಲಿ ಹೇಳುವ "ನ ಮಮ" ಎನ್ನುವುದನ್ನು ಇಲ್ಲಿ ಹೇಳುವುದಿಲ್ಲ. ಹಾಗೊಮ್ಮೆ ನೀವು ಕನ್ಯಾದಾನಕ್ಕೆ ಪಟ್ಟು ಹಿಡಿದರೆ ಯಾವುದೇ ಕಾರಣದಿಂದ ಮಗಳು ತೌರು ಮನೆಗೆ ಬರುವ ಅವಕಾಶವೇ ಇರುವುದಿಲ್ಲ. ಆದ್ದರಿಂದ ಇದು ಕನ್ಯಾದಾನವಲ್ಲ, ಪಾಣಿ ಗ್ರಹಣ. ಕನ್ಯಾ ಪಿತೃ ವರನನ್ನು ತನ್ನ ಮಗಳ ಕೈ ಹಿಡಿಯ ಬೇಕೆಂದು ಹೇಳಿ, ಅವಳ ಕೈಯನ್ನು ಅಳಿಯನ ಕೈಯಲ್ಲಿಟ್ಟು ಧಾರೆ ಎರೆಯುತ್ತಾನೆ. ಅಲ್ಲಿಗೆ ವಿವಾಹ ಮುಕ್ತಾಯವಾಯಿತು."
ಇದ್ದಕ್ಕಿದ್ದಂತೆಯೇ ರಾಮರು ಸುಮ್ಮನಾಗಿದ್ದನ್ನು ಕಂಡು.. " ಅಷ್ಟೇನೇ? ಮುಗಿದೇ ಹೋಯಿತೆ? "ಎಂದರು ಶತಾನಂದರು. "ನನಗೆ ತಿಳಿದಷ್ಟು ಮತ್ತು ನನ್ನ ಅಪೇಕ್ಷೆಯೆಂದರೆ ಇಷ್ಟೇ. ಅಗ್ನಿಯನ್ನೂ ಸಾಕ್ಷಿಯಾಗಿಟ್ಟುಕೊಳ್ಳುವುದರಿಂದ ಯಙ್ಞಕುಂಡಕ್ಕೆ ಪ್ರದಕ್ಷಿಣೆ ಬಂದು, ಆ ಹವ್ಯವಾಹನನಿಗೆ ನಮಸ್ಕರಿಸಿದರೆ ಅಲ್ಲಿಗೆ ಮುಗಿದೇ ಹೋಯಿತು. ".ಶ್ರೀರಾಮರು "ಓಂ ಸ್ವಸ್ತಿ!" ಎಂದು ಎದ್ದರು.
***************
ಇತ್ತ ಶ್ರೀರಾಮರೊಡನೆ ಶತಾನಂದರು ಮಾತನಾಡುತ್ತಿದ್ದಂತೆಯೇ ಅತ್ತ ಜನಕ - ದಶರಥರ ನಡುವೆ ವಿವಾಹದ ವಿಷಯವೇ ಮಾತುಕತೆಯಾಗುತ್ತಿತ್ತು. ಆದರೆ ಅದು ವಿವಾಹ ಕ್ರಮದಬಗ್ಗೆ ಅಲ್ಲ! ಭರತ, ಲಕ್ಷ್ಮಣ, ಶತ್ರುಘ್ಞರ ಮದುವೆಗೆ ಸಂಬಂಧಿಸಿದ್ದು. ಜನಕರ ಮತ್ತೊಬ್ಬ ಮಗಳು ಊರ್ಮಿಳೆಯನ್ನು ಲಕ್ಷ್ಮಣನಿಗೂ, ಜನಕನ ತಮ್ಮ ಕುಶಧ್ವಜನ ಮಕ್ಕಳು ಮಾಂಡವೀ- ಶೃತಕೀರ್ತಿಯರನ್ನು ಭರತ-ಶತ್ರುಘ್ನರಿಗೂ ಮದುವೆ ಮಾಡಿಕೊಡಬೇಕೆಂದು ವಿಶ್ವಮಿತ್ರರು ಮುಂದಿಟ್ಟ ಪ್ರಸ್ತಾವಕ್ಕೆ ಸರ್ವಾನುಮತದ ಬೆಂಬಲ ಸಿಕ್ಕಿತು.
****************
ಮಾರನೆಯ ದಿನವೇ ಲಗ್ನ. ನಿರೀಕ್ಷಿಸಿದ್ದಂತೆಯೇ ನಾಲ್ಕು ವೇದಿಕೆಗಳನ್ನು ನಿರ್ಮಿಸಿದ್ದಾರೆ. ಹೋಮ ಕುಂಡಗಳು, ರಂಧ್ರ ಸಹಿತ ಕಲಶಗಳು, ಬಣ್ಣದ ಮಡಕೆಗಳು, ಮಾವಿನ ತೋರಣ, ಬಾಳೆ ಗಿಡಗಳು, ಇತ್ಯಾದಿಗಳಿಂದ ಕಲ್ಯಾಣ ಮಂಟಪ ಸಿದ್ಧವಾಗಿತ್ತು. ಹಿಂದಿನ ದಿನವೇ ಶ್ರಾದ್ಧ ಮಾಡಿ ಗೋದಾನ ಮಾಡಿ ಸಿದ್ಧವಾಗಿದ್ದಾನೆ ದಶರಥ.
( ಶ್ರಾದ್ಧಂ ಕೃತ್ವಾ ವಿಧಾನತಃ ಚಕ್ರೇ ಗೋದಾನಂ ಉತ್ತಮಂ )
ಜನಕ ಮಹಾರಾಜ ತನ್ನ ಮಕ್ಕಳನ್ನು ವೇದಿಕೆಗೆ ಕರತಂದ. ಆಗಲೇ ಸೀತಾದರ್ಶನ ರಾಮರಿಗೆ! ಗಾಂಭೀರ್ಯವೇ ನೆಡೆದುಬಂದಂತೆ; ಸೌಂದರ್ಯವೇ ರೂಪುವೆತ್ತಂತೆ; ಸಾತ್ವಿಕತೆಯೇ ಸೀತೆಯಾದಂತೆ; ಕೋಮಲತೆಯೇ ಕದಲಿ ಬಂದಂತೆ, ಮಾರ್ದವತೆಯೇ ಮೈದೋರಿದಂತೆ. ಕಂಗಳಲ್ಲಿ ಹೊಳಪು, ನಡಿಗೆಯಲ್ಲಿ ಮಂದಗಮನ, ತುಸು ನಾಚಿದ ಮುಖ, ತನ್ನನ್ನು ಗೆದ್ದ ವೀರನ ಬಗ್ಗೆ ಕೇಳಿ - ಕೇಳಿ ಕುತೂಹಲವೇ ಕಣ್ಣಾಗಿ ಕಂಡಳು ಶ್ರೀರಾಮರನ್ನು! ಎಂತಹ ತೇಜಸ್ಸು! ಎಂತಹ ದೃಢ ಶರೀರ! ಎಂತಹ ಸೌಂದರ್ಯ! ಎಂತಹ ನೆಟ್ಟ ಧೀರ ನಿಲುವು! ಓಹ್ ! ಬೆವರಿಬಿಟ್ಟಳು ಜಾನಕಿ!! ತನ್ನ ಕಣ್ಣ ಮುಂದೆ ಆಗಾಗ್ಗೆ ಮಿಂಚುತ್ತಿದ್ದ ಮೋಹನಾಂಗಿ ಮೈಥಿಲಿಯನ್ನು ಕಂಡು ಶ್ರೀರಾಮರಿಗೆ ಮೈ ಬಿಸಿ ! ನಡೆದು ಬಂದ ನಳಿನಾಕ್ಷಿ ಯಙ್ಞ ಕುಂಡದ ಮುಂದೆ ನಿಂತಳು. ಆಕೆಯಲ್ಲಿ ಮಗ್ನರಾದ ರಾಮರನ್ನು ಎಚ್ಚರಿಸಿತು ಜನಕ ಕಂಠ, " ರಾಮ, ಈಕೆ ನನ್ನ ಮಗಳು ಸೀತೆ. ಇದೀಗ ನಿನ್ನ ಧರ್ಮಾಚರಣೆಯಲ್ಲಿ ಭಾಗಸ್ವಾಮಿಯಾಗುತ್ತಾಳೆ. ಬಾ , ಇವಳನ್ನೊಪ್ಪಿಸಿಕೊ. ನಿನಗೆ ಒಳ್ಳೆಯದಾಗಲಿ, ಇವಳ ಪಾಣಿಗ್ರಹಣ ಮಾಡು.
(ಇಯಂ ಸೀತಾ ಮಮ ಸುತಾ ಸಹ ಧರ್ಮ ಚರೀ ತವಾ
ಪ್ರತೀಚ್ಚ ಚೈನಾಂ ಭದ್ರಂತೇ ಪಾಣಿಂ ಗೃಹ್ಣೀಷ್ವ ಪಾಣಿನಾ)
" ಈಕೆ ನಿನ್ನನ್ನು ನಿನ್ನ ನೆರಳಿನಂತೆ ಸದಾ ಅನುಸರಿಸುತ್ತಾಳೆ . ಈಕೆ ಮಹಾ ಪತಿವ್ರತೆ , ಹಾಗೂ ನಿನ್ನ ಕೈ ಹಿಡಿದಿದ್ದರಿಂದ ಮಹಾ ಭಾಗ್ಯಶಾಲಿನಿ"
( ಪತಿವ್ರತಾ ಮಹಾಭಾಗಾ ಭಾರ್ಯೇವ ಅನುಗತಾ ಸದಾ )
---೦೦೦---
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos