ದಕ್ಷ ಪ್ರಜಾಪತಿ; ಪ್ರಜೆಗಳಿಗೆ ಅಧಿಪತಿ. ಪ್ರಜೆಗಳ ಸೃಷ್ಟಿಗೆ ಆತನೇ ಕಾರಣ. ಅವನಿಗೊಬ್ಬ ಮಗಳು, ದಾಕ್ಷಾಯಣಿ. ದಾಕ್ಷಾಯಣಿ ಒಬ್ಬಳೇ ಮಗಳಲ್ಲ, ಹಲವು ಮಂದಿ. ಎಲ್ಲರಿಗೂ ಮದುವೆಯಾಗಿದೆ, ದಾಕ್ಷಾಯಣಿಯನ್ನು ಕೈಹಿಡಿದಾತ ಈಶ್ವರ. ಕೈಲಾಸದೊಡೆಯ.
ಒಮ್ಮೆ ದಕ್ಷ ಪ್ರಜಾಪತಿ ದೇವತೆಗಳ ಸಮಾರಂಭಕ್ಕೆ ಹೋದ. ಕಾರ್ಯಕರ್ತರು ಆತನನ್ನು ಮುಂದು-ಮುಂದಕ್ಕೆ ಕರೆದೊಯ್ದರು. ಎಲ್ಲರೂ ಆತ ಬರುತ್ತಿದ್ದಂತೆಯೇ ಎದ್ದು ನಿಂತರು. ಆದರೆ ಶಂಕರ ಎದ್ದು ನಿಲ್ಲಲಿಲ್ಲ. ನಿಲ್ಲ ಬೇಕಿತ್ತು; ಮಾವನನ್ನು ಮಾತನಾಡಿಸಬಹುದಿತ್ತು; ಕುಶಲೋಪರಿ ಕೇಳಬೇಕಿತ್ತು. ಇಲ್ಲ. ಕಾರಣ ಗೊತ್ತಿಲ್ಲ. ಅಂತೂ, ಅಳಿಯ-ಮಾವನ ಮಧ್ಯೆ ಮಾತಾಗಲಿಲ್ಲ. ಅಭಿಮುಖವೂ ಇಲ್ಲ; ಸುಮುಖವೂ ಆಗಲಿಲ್ಲ.
ಯಙ್ಞದಿಂದ ವಾಪಸಾದ ಮೇಲೆ ದಕ್ಷನ ತಲೆ ಕೆಟ್ಟು ಹೋಯಿತು. ಅಳಿಯ ಮಾಡಿದ ಅವಮಾನ ಸಹಿಸಲಾಗಲಿಲ್ಲ. ತನಗಿನ್ನ ಚಿಕ್ಕವ, ಅಳಿಯ, ಮಗಳ ಕೈ ಹಿಡಿದಾತ, ಮಾವನಿಗೆ ಬೆಲೆ ಕೊಡುವುದಿಲ್ಲ ಎಂದರೆ ಏನರ್ಥ? ಕೋಪದ ಕೈಗೆ ಬುದ್ದಿ ಕೊಡಬಾರದು. ಒಮ್ಮೆ ಕೋಪದಲ್ಲಿ ತೀರ್ಮಾನ ತೆಗೆದುಕೊಂಡರೆ ಆಯಿತು.
ಅನಂತ ಪರಂಪರೆಯೇ. ದಕ್ಷ ತೀರ್ಮಾನಿಸಿದ, ತಾನು ಹೇಗಾದರೂ ಈಶ್ವರನಿಗೆ ಅವಮಾನ ಮಾಡಬೇಕು!!! ಸನ್ಮಾನ ಮಾಡುವುದರಲ್ಲಾದರೂ ಒಂದು ಅರ್ಥವಿದೆ. ಆದರೆ ಅವಮಾನ? ಕೆಡುಕು ಮಾಡಬೇಕೆಂದು ಯಾರೇ ನಿರ್ಣಯಿಸಲಿ, ಅದರ ತತ್ಕ್ಷಣದ ಫಲ ಏನೇ ಆಗಿರಲಿ, ಕೊನೆಗೂ ಯಾರು ಕೆಟ್ಟದ್ದನ್ನು ಮಾಡುವರೋ, ಯಾರು ಯಾರನ್ನಾದರೂ ನೋಯಿಸುವರೋ, ಅವರಿಗೆ ಆ ಕೆಡಕು, ನೋವು ಖಂಡಿತ ವಾಪಸಾಗುತ್ತದೆ; ಬಡ್ಡಿ ಸಹಿತ. ಇದನ್ನು ಹಿರಿಯರು ಎಷ್ಟೇ ಹೇಳಿದರೂ ನಾವು ಕೇಳುವುದಿಲ್ಲ. ಕೊನೆಗೆ ಅನುಭವಿಸುತ್ತೇವೆ. ಹಿರಿಯರಿಗೇ ಹಿರಿಯರಾದ ಪ್ರಜಾಪತಿ. ಪ್ರಜೆಗಳಿಗೇ ಪತಿ. ಈತನೇ ಹೀಗೆ ಈಶ್ವರನಿಗೆ ಅವಮಾನ ಮಾಡಬೇಕು ಎಂದು ತೀರ್ಮಾನಿಸಿದರೇನು ಮಾಡೋಣ?
ಪ್ರಜಾಪತಿಯ ಯೋಜನೆ ಬಹಳ ಸರಳ. ತಾನೊಂದು ಯಙ್ಞ ಮಾಡುವುದು, ಅದಕ್ಕೆ ಎಲ್ಲ ದೇವತೆಗಳನ್ನೂ ಕರೆಯುವುದು, ಈಶ್ವರನನ್ನು ಮಾತ್ರ ಕರೆಯದೇ ಇರುವುದು. ಅಷ್ಟು ಸಾಕು, ಅವನಿಗೆ ಅವಮಾನವಾಗಲು. ಯಙ್ಞ ಸಿದ್ಧತೆಯೂ ಆಯಿತು, ರಾಯಸದವರು ಆಹ್ವಾನವನ್ನು ದೇವತೆಗಳೆಲ್ಲರಿಗೂ ಒಯ್ದದ್ದೂ ಆಯಿತು, ಆದರೆ ಕೈಲಾಸಕ್ಕೆ ಮಾತ್ರ ಓಲೆ ಹೋಗಲಿಲ್ಲ.
ಇನ್ನೇನು ನಾಳೆ ಯಙ್ಞ; ಕೈಲಾಸದಲ್ಲಿ ಕುಳಿತ ದಾಕ್ಷಾಯಣಿಗೆ ತಳಮಳ. ಅಪ್ಪ-ಅಳಿಯನ ಗುದ್ದಾಟದಲ್ಲಿ ಬಡವಾದವಳು ತಾನು. ತನಗೋ ತೌರು ಮನೆಗೆ ಹೋಗುವ ತೀವ್ರ ಬಯಕೆ. ತನ್ನ ತಂಗಿಯರೆಲ್ಲ ಈಗಾಗಲೇ ಹೋಗಿದ್ದಾರೆ. ತನಗೆ ಒದ್ದಾಟ, ಎಷ್ಟೇ ಸಮಾಧಾನ ಮಾಡಿಕೊಂಡರೂ ಸಮಾಧಾನವಾಗುತ್ತಿಲ್ಲ. ಗಂಡನಲ್ಲಿ ಕೇಳಿದ್ದಾಯಿತು, ಆತ ಮೌನಿಯಾಗಿದ್ದಾನೆ. ಮತ್ತೊಮ್ಮೆ, ಕೊನೆಯ ಬಾರಿ ಪ್ರಯತ್ನಿಸೋಣ.
ದಾಕ್ಷಾಯಣಿ: ನಿಮಗೇನು, ಏನೂ ಆಗದಂತೆ ಸುಮ್ಮನಿದ್ದೀರಿ, ತಂಗಿಯರೆಲ್ಲ ಸೇರಿದ್ದಾರೆ, ಅಮ್ಮನನ್ನು ಕಂಡು ಬಹಳ ಕಾಲ ಆಯಿತು. ಊರಿಗೆ ಹೋಗಿ ಎಷ್ಟು ಕಾಲವಾಯಿತು. ಎಷ್ಟೋ ಕಾಲವಾದಮೇಲೆ ಮನೆಯಲ್ಲಿ ಒಂದು ಒಳ್ಳೆಯ ಕಾರ್ಯ. ಹೋಗದಿದ್ದರೆ ಹೇಗೆ?
ಶಿವ: ಆಗಬೇಕಾದ್ದು ಆಗಿಲ್ಲವೆಂದೇ ಸುಮ್ಮನಿದ್ದೇನೆ. ಆಗಬೇಕಿತ್ತು; ಕರೆಯಬೇಕಿತ್ತು; ಆಹ್ವಾನಿಸಬೇಕಿತ್ತು. ಕರೆಯದ ಕಡೆ ಹೇಗೆ ಹೋಗುವುದು? ನನಗೆ ಸಾಧ್ಯವೇ ಇಲ್ಲ ಅಲ್ಲಿಗೆ ಬರಲು.
ದಾಕ್ಷಾಯಣಿ: ಆಯಿತು, ನೀವು ಬರದಿದ್ದರೆ ಬೇಡ. ನಿಮಗೆ ಮಾನ-ಮರ್ಯಾದೆ ಎಲ್ಲ ಬೇಕು. ಮಗಳಿಗೇನು ಅಡ್ಡಿ ಇದೆ ಅಪ್ಪನ ಮನೆಗೆ ಹೋಗಲು? ನಾನೇ ಹೋಗಿ ಬರುತ್ತೇನೆ. ಒಪ್ಪಿಗೆ ಕೊಡಿ.
ಶಿವ: ಆಯಿತು ಹೋಗಿ ಬಾ. ನಿನ್ನಿಷ್ಟ. ಆದರೆ ಒಂದು ನೆನಪಿನಲ್ಲಿ ಇಟ್ಟುಕೊ. ಮದುವೆಯಾದ ಮೇಲೆ ಗಂಡನೊಡನೆ ತೌರಿಗೆ ಹೋದರೇ ಅದಕ್ಕೆ ಬೆಲೆ, ಭೂಷಣ. ನೀನೊಬ್ಬಳೇ ಹೋದರೆ ಅದಕ್ಕೆ ಬರುವ ಅರ್ಥವೇ ಬೇರೆ. ನನ್ನ ಮಾತು ನಿನಗೆ ರುಚಿಸುತ್ತಿಲ್ಲ, ಭಾವುಕಳಾಗಿರುವಾಗ-ನಿಜ-ರುಚಿಸುವುದು ಕಷ್ಟ. ಆಯಿತು ಹೋಗಿ ಬಾ. ಜೊತೆಗೆ ನಂದಿ, ಭೃಂಗಿಗಳನ್ನೂ ಕರೆದುಕೊಂಡು ಹೋಗು.
ದಾಕ್ಷಾಯಣಿ ಹೋಗಿದ್ದೂ ಆಯಿತು, ಯಾರೂ ಆಕೆಯನ್ನು ಮಾತನಾಡಿಸದ್ದೂ ಆಯಿತು. ತಾಯಿ ಕೂಡ ತಂದೆಯ ಕಣ್ಸನ್ನೆಯಲ್ಲಿ ತಪ್ಪಗಿದ್ದಾಳೆ. ತಂಗಿಯರಾರೂ ಅಕ್ಕನನ್ನು ವಿಚಾರಿಸಲಿಲ್ಲ. ದುಃಖ. ಬಹು ದೊಡ್ಡ ಅವಮಾನ. ಗಂಡನ ಮಾತನು ತಾನು ಕೇಳದ್ದಕ್ಕೆ, ಕೇಳದೇ ಬಂದದ್ದಕ್ಕೆ ಫಲ. ತಾನು ಈ ಸೋತ ಮುಖ ಹೊತ್ತು ಹೋಗುವುದೆಂತು ಗಂಡನ ಮನೆಗೆ? ಅದೊಂದು ದುರ್ಮುಹೂರ್ತ; ಕೆಟ್ಟ ನಿರ್ಧಾರ. ದಾಕ್ಷಾಯಣಿಯೂ ಅವಮಾನದ ಕೈಗೆ ಬುದ್ಧಿ ಕೊಟ್ಟಳು. ಕ್ಷಣದಲ್ಲಿ ನಿರ್ಧರಿಸಿದಳು, "ತಾನಿನ್ನು ಬದುಕಿರಬಾರದು". ನೆಗೆದೇ ಬಿಟ್ಟಳು ಯಙ್ಞ ಕುಂಡಕ್ಕೆ! ಸುಟ್ಟೇ ಹೋದಳು !!!!! ಎಲ್ಲರೂ ದಿಗ್ಭ್ರಾಂತರಾಗಿ ಕಣ್ಣು ಬಿಟ್ಟು ನೋಡುತ್ತಲೇ ಇದ್ದರು.
ಸುದ್ದಿ ತಿಳಿದ ಶಿವ ರುದ್ರನಾದ. ತಾಂಡವವಾಡಿದ. ಅರ್ಧಾಂಗಿಯ ದಹನ, ಪತ್ನಿಯ ಸಾವು, ವಿರಹದ ಕಿಚ್ಚು. ಒಂದೇ ಎರಡೇ? ತಾನೇ ವೀರಭದ್ರನಾಗಿ ಯಾಗ ಶಾಲೆಗೆ ಹೋದ. ತಲೆಯ ಕೂದಲು ತೆಗೆದು ಹೊಡೆದದ್ದಕ್ಕೆ ವೀರ ಭದ್ರ ಹುಟ್ಟಿದ್ದ. ಹುಟ್ಟಲಿಲ್ಲ, ತನ್ನಂಶವೇ, ತಾನೇ ವೀರಭದ್ರ. ದಕ್ಷಯಾಗಕ್ಕೆ ಹೋದ. ದೇವತೆಗಳೆಲ್ಲ ಧಿಗ್ಗನೆದ್ದರು, ಬಿಲ್ಲಿನಿಂದ ಬಂತೊಂದು ಬಾಣ, ನುಗ್ಗಿ ಕುತ್ತಿಗೆಯನ್ನು ತರಿಯಿತು, ಹಾರಿ ಬಿತ್ತು ದಕ್ಷನ ತಲೆ ಯಙ್ಞಕುಂಡಕ್ಕೆ. ದೇಹ ಓಡಾಡಿ ಸ್ತಬ್ಧವಾಯಿತು. ಋಷಿ - ಮುನಿಗಳೆಲ್ಲ ಪ್ರಾರ್ಥಿಸಿದರು. ರೋಷ ತುಂಬಿದ ದನಿ. ಕೆಂಪು ಕಣ್ಣು. ಬಿಲ್ಲಿನ ಹೆದೆಯನ್ನೆಳೆದ. ಅದರ ನಾದಕ್ಕೆ ಎಲ್ಲರೂ ಅದುರಿ ಬಿದ್ದರು. ಸಿಡಿಲ ಧ್ವನಿಯಲ್ಲಿ ಹೇಳಿದ, "ನನ್ನನ್ನು ಬಿಟ್ಟು ಮಾಡಿದ ಯಙ್ಞಕ್ಕೆ ನೀವು; ದೇವತೆಗಳೆಲ್ಲ ಬಂದಿರುವಿರೋ? ಹವಿಸ್ಸು ತಿಂದು ಸೆಟೆದಿರುವಿರೋ? "ನಡುಗುತ್ತಿದ್ದ ದೇವತೆಗಳನ್ನು ಕಂಡು ಮುಂದುವರಿಸಿದ; " ನನಗೆ ಹವಿಸ್ಸಿನಲ್ಲಿ ಪಾಲು ಕೊಡಲಿಲ್ಲ. ನಿಮ್ಮೆಲ್ಲರ ತಲೆಗಳನ್ನೂ ಈ ಬಾಣದಿಂದ ಕತ್ತರಿಸಿಬಿಡುವೆ . "
(ಯಸ್ಮಾತ್ ಭಾಗಾರ್ಥಿನೋ ಭಾಗಂ ನಾ ಕಲ್ಪಯತ ಮೇ ಸುರಾಃ
ವರಾಂಗಾಣಿ ಮಹಾರ್ಹಾಣಿ ಧನುಷಾ ಶಾತಯಾಮಿ ವಃ)
ನಡುಗಿ ದಿಂಡುರುಳಿದರು ದೇವತೆಗಳು. ಕ್ಷಮಿಸಲು ಯಾಚಿಸಿದರು. ಸ್ತುತಿಸಿದರು. ಈಶ್ವರನನ್ನು ಕೊಂಡಾಡಿದರು. ಪ್ರಾರ್ಥಿಸಿದರು. ರುದ್ರ ಶಿವನಾದ. ಶಂಕರನಾದ. ಮೌನವಾಂತ, ಎತ್ತಿದ್ದ ಬಿಲನ್ನಿಳಿಸಿದ. ಪಕ್ಕದಲ್ಲಿ ಪಠಿಸುತ್ತಿದ್ದ ದೇವರಾತ. ಅವನ ಕೈಗೆ ಆ ಬಿಲ್ಲಿತ್ತು ಅದೃಶ್ಯನಾದ.
(ದೇವರಾತ ಇತಿ ಖ್ಯಾತೋ ನಿಮೇಃ ಷಷ್ಟೋ ಮಹಾಪತಿಃ
ನ್ಯಾಸೋಯಂ ತಸ್ಯ ಭಗವನ್ ಹಸ್ತೇ ದತ್ತೋ ಮಹಾತ್ಮನಃ)
ಆ ದೇವರಾತರೇ ನಮ್ಮ ವಂಶದ ಆರನೆಯ ತಲೆ. ಅಂದಿನಿಂದ ಈ ಶಿವ ಧನುಸ್ಸು ನಮ್ಮ ಮನೆಯಲ್ಲಿ ಪೂಜೆಗೊಳ್ಳುತ್ತಿದೆ ".ಜನಕ ಕಥೆ ಹೇಳಿ ಮುಗಿಸುವ ಹೊತ್ತಿಗೆ, ಶಿವ ಧನುಸ್ಸನ್ನು ಗಾಡಿಯಲ್ಲಿ ಎಳೆದು ತಂದರು....
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos