ರಾಮ-ಪರಶುರಾಮ 
ಅಂಕಣಗಳು

'ಅದೆಷ್ಟೋ ವರ್ಷಗಳ ಮೇಲೆ ಮನೆಗೆ ಹೋದರೆ ನಮ್ಮ ಅಪ್ಪ - ಅಮ್ಮ - ಅಣ್ಣಂದಿರೆಲ್ಲ ನಗುನಗುತ್ತ ಮಾತಾಡುತ್ತಿದ್ದಾರೆ...'!

ನನ್ನಲ್ಲೂ ವಿಷ್ಣುವಿನ ಅಂಶ ಇದೆ ಎನ್ನುತ್ತಾರೆ! ಆದರೆ ನೀನು ಸಾಕ್ಷಾತ್ ನಾರಾಯಣನೇ ಆಗಿರುವೆ! ನೀನು ಅಂದು, ಹಿಂದೆ, ಬಹು ಹಿಂದೆ ಮಧು-ಕೈಟಭರನ್ನು ಕೊಂದ ಮಧುಸೂದನನೇ ಹೌದು...!

ಅಲ್ಲಿಗೆ ಮುಗಿಯಿತು! ಪರಶುರಾಮರಿಗೆ ಫಕ್ಕನೆ ನೆನಪಿಗೆ ಬಂದಿತು ಗುರು ದತ್ತಾತ್ರೇಯರ ಭವಿಷ್ಯ ನುಡಿ. "ರಾಮ; ಪರಶುರಾಮ, ಇಂದು ನೀನು ತುಂಬ ವಿಚಲಿತನಾಗಿದ್ದೀ. ಇಷ್ಟೊಂದು ಭಾರೀ ಪ್ರಮಾಣದ ಕೊಲೆಗಳನ್ನು ಮಾಡಕೂಡದಾಗಿತ್ತೆಂದು ಒದ್ದಾಡುತ್ತಿದ್ದೀ! ಹೌದು!! ನಿನ್ನ ತಂದೆಯನ್ನು ಕೊಂದ ಕಾರ್ತವೀರ್ಯನ ಮಕ್ಕಳನ್ನೋ, ಅವರ ಬಂಧುಗಳನ್ನೋ ನೀನು ಕೊಂದದ್ದು ಸರಿ ಎನ್ನೋಣ! ಬ್ರಾಹ್ಮಣನಿಗೆ ಅದು ಖಂಡಿತಾ ಸರಿಯಲ್ಲ! ಆದರೆ ನಿನ್ನ ತಂದೆಯ ಜನ್ಮದ ಹಿನ್ನೆಲೆಯಲ್ಲಿ ನೋಡಿದರೆ, ಆಯ್ತು ಒಪ್ಪೋಣ. 
ಆದರೆ ಅಲ್ಲಿಂದ ಮುಂದೆ ನೀನು ಅಷ್ಟು ಬಾರಿ ಮಾಡಿದ ಮರಣ ಯಾತ್ರೆ, ಸಾಲು ಸಾಲು ಕೊಲೆ.... ಖಂಡಿತ ನ್ಯಾಯವಲ್ಲ! ಈಗೇನು ಮಾಡೋಣವೆಂದು ಪಶ್ಚಾತ್ತಾಪದಿಂದ ಒದ್ದಾಡುತ್ತಿದ್ದೀ! ಬಿಡು. ಇನ್ನು ಈ ಪರಶುವನ್ನು ರಾಜ ಕೊಲೆಗೆ ಎತ್ತುವುದಿಲ್ಲವೆಂದು ಭಾಷೆ ಕೊಡು! ಹಾಗೂ ರಾಜರನ್ನು ಗೆದ್ದು ಗಳಿಸಿದ ಈ ಭೂಮಿಯನ್ನು ಯಾರಿಗಾದರೂ ದಾನ ಮಾಡಿಬಿಡು. ಇದೆಲ್ಲಕ್ಕಿನ್ನ ಮುಖ್ಯವಾಗಿ ನೀನು ಯಾವ ಕಾರಣದಿಂದ ಹುಟ್ಟಿದೆಯೋ, ನೀನೇನು ಸಾಧಿಸಬೇಕಿತ್ತೋ ಆ ಕಾರ್ಯ ಮುಗಿದಿದೆ. ಎಂದು ನಿನ್ನ ಕೈನಿಂದ ಯಾವ ಪುರುಷೋತ್ತಮ, ವೈಷ್ಣವ ಧನುವನ್ನು ಸೆಳೆಯುತ್ತಾನೋ, ಅಂದಿಗೆ ನಿನ್ನ ಅವತಾರ ಕಾರ್ಯ ಮುಗಿದಂತೆ! ಅಂದಿನಿಂದ ತ್ರೇತಾಯುಗದಲ್ಲಿ ಕಾಣಿಸಿಕೊಳ್ಳಬೇಡ."
ಹೌದು! ಗುರುಗಳು ಹೇಳಿದಂತೆ ಈ ಯುವಕ, ತನಗಿನ್ನ ಅತ್ಯಂತ ಚಿಕ್ಕವ ಅಷ್ಟು ಲೀಲಾಜಾಲವಾಗಿ ಸೆಳೆದುಬಿಟ್ಟ! ತಾನು ಇವನನ್ನು ತಪ್ಪು ತಿಳಿದಿದ್ದೆ! ಇವನಿಗಿರುವ ಶಕ್ತಿಯನ್ನು ನನಗೆ ಅಂದಾಜಿಸಲಾಗಲಿಲ್ಲ. ಚಿಂತೆಯಿಲ್ಲ! ಇದೇನೂ ನನ್ನ ಸೋಲಲ್ಲ! ಗುರುಗಳೇ ಹೇಳಿದ್ದಾರೆ; ಇವನು ಪುರುಷೋತ್ತಮನಂತೆ! ಕಣ್ಮುಚ್ಚಿ ಧ್ಯಾನದ ಆಳಕ್ಕಿಳಿದು ನೋಡಿದರು; ಈ ಶ್ರೀರಾಮ ಯಾರೆಂದು!! ಓಹ್! ತಾನು ಕಾಣುತ್ತಿರುವ ದೃಶ್ಯವನ್ನು ನಂಬಲೇ ಆಗುತ್ತಿಲ್ಲ! ದಶರಥನ ಯಾಗ ಮಂಟಪದ ಮೇಲಿದ್ದ ವಿಷ್ಣು. ಅವನನ್ನು ಬ್ರಹ್ಮ ಪ್ರಾರ್ಥಿಸಿದ್ದು, ವಿಷ್ಣು ತಾನು ದಶರಥನಿಗೆ ಮಗನಾಗಿ ಹುಟ್ಟುವೆನೆಂದು ಹೇಳಿದ್ದು, ಆನಂತರ ತನ್ನನ್ನು ನಾಲ್ಕು ಭಾಗ ಮಾಡಿಕೊಂಡು ರಾಮ, ಭರತ, ಲಕ್ಷ್ಮಣ, ಶತ್ರುಘ್ನರಾಗಿ ಹುಟ್ಟಿದ್ದು... ಎಲ್ಲವೂ ಕಾಣಿಸತೊಡಗಿತು! ದಿಗ್ಭ್ರಮಿತರಾಗಿ ಕೈಜೋಡಿಸಿದರು. " ಹೇ ರಾಮ! ನೀನಾರೆಂದು ನನಗೆ ಈಗ; ಇದೀಗ, ಈ ಬಿಲ್ಲನ್ನು ಸೆಳೆದಾಗ ಅರ್ಥವಾಯಿತು! (ನನ್ನಲ್ಲೂ ವಿಷ್ಣುವಿನ ಅಂಶ ಇದೆ ಎನ್ನುತ್ತಾರೆ!) ಆದರೆ ನೀನು ಸಾಕ್ಷಾತ್ ನಾರಾಯಣನೇ ಆಗಿರುವೆ! ನೀನು ಅಂದು, ಹಿಂದೆ, ಬಹು ಹಿಂದೆ ಮಧು-ಕೈಟಭರನ್ನು ಕೊಂದ ಮಧುಸೂದನನೇ ಹೌದು! ಹುಟ್ಟು- ಸಾವಿರದ ಸಚ್ಚಿದಾನಂದ ನೀನು. ನೀನೇ ದೇವತೆಗಳಲ್ಲೆಲ್ಲ ಉತ್ತಮ; ಅಗ್ರ! ನಿನಗೆ ಒಳ್ಳೆಯದಾಗಲಿ! ನೀನು ನಿನ್ನ ವಿರೋಧಿಗಳನ್ನು ನಿರ್ನಾಮ ಮಾಡಿ ಧರ್ಮ ಸ್ಥಾಪನೆ ಮಾಡು!! " 
(ಅಕ್ಷಯಂ ಮಧುಹಂತಾರಂ ಜಾನಾಮಿ ತ್ವಾಂ ಸುರೋತ್ತಮಮ್
ಧನುಷೋ ಅಸ್ಯ ಪರಾಮರ್ಶಾತ್ ಸ್ವಸ್ತಿ ತೇ ಅಸ್ತು ಪರಂತಪ)
ಶ್ರೀರಾಮರು ಒದ್ದಾಡಿಬಿಟ್ಟರು! ಅಷ್ಟು ದೊಡ್ಡ ಆಳು, ಎಷ್ಟೆಷ್ಟೋ ಯುದ್ಧಗಳನ್ನು ಮಾಡಿ ಅದೆಷ್ಟೋ ಲೆಕ್ಕವಿಲ್ಲದಷ್ಟು ಕ್ಷತ್ರಿಯರನ್ನು ಕೊಚ್ಚಿ ಹಾಕಿದ್ದ ಪರಶುರಾಮರು ಇದೀಗ ಪುಟ್ಟ ಬಾಲಕನಂತೆ ಕೈಕೈ ಹಿಸುಕಿಕೊಳ್ಳುತ್ತ ಪೇಚಾಡುತ್ತಿದ್ದಾರೆ. ಏನು ಮಾಡುವುದು? ಅವರಿಗೆ ಹೇಗೆ ಸಮಾಧಾನ ಮಾಡುವುದು? ಮುಂದುವರಿದ ಪರಶುರಾಮರು ಹೇಳಿದರು; "ನನ್ನ ಸಂಹಾರ ಕಾರ್ಯಕ್ಕೆ ಮತ್ತೂ ಒಂದು ಕಾರಣವಿತ್ತು. ರಾಜರುಗಳಲ್ಲಿ ಹಲವು ಮಂದಿ ವಿಷ್ಣು ದ್ವೇಷವನ್ನೋ, ಶಿವ ದ್ವೇಷವನ್ನೋ ಮಾಡುತ್ತಿದ್ದರು. ನಿಜ ಹೇಳಬೇಕೆಂದರೆ ಈ ಎರಡೂ ಪಂಗಡದವರು ಈಶ್ವರನನ್ನೂ ಕಾಣರು, ವಿಷ್ಣುವನ್ನೂ ನೋಡಿಲ್ಲ! ಆದರೂ ಅದೇಕೋ ಮತ್ತೊಬ್ಬರಮೇಲೆ ದ್ವೇಷ! ಸಂಪ್ರದಾಯ ಎಷ್ಟು ಅನಿಷ್ಟವಾಗಿತ್ತೆಂದರೆ, ತಾವು ಕಂಡೇ ಇರದ ಯಾವುದೋ ಶಕ್ತಿಯನ್ನು ಬಯ್ಯುವುದೂ, ಆ ದ್ವೇಷವನ್ನು ಹಬ್ಬಿಸುವುದೂ ಹುಚ್ಚುಚ್ಚಾಗಿ ಮಾಡುತ್ತಿದ್ದರು. ಆ ಎರಡೂ ಶಕ್ತಿಗಳೂ ಒಂದೇ. ಸಾಂದರ್ಭಿಕವಾಗಿ ಯಾವುದೋ ಒಂದು ವಿಜೃಂಭಿಸುತ್ತದೆ, ಅದನ್ನು ಮತ್ತೊಂದು ಪ್ರಶಂಸಿಸುತ್ತದೆ; ಪೂಜಿಸುತ್ತದೆ ಎಂಬ ಸರಳ ಸತ್ಯವನ್ನು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಇಂತಹ ಮಂದಮತಿಗಳಿಗೆ, ಮೂಢಮತಿಗಳಿಗೆ ಬಾಣವೊಂದೇ ಉತ್ತರವಾಗುತ್ತಿತ್ತು! ನೀನು ಶಿವಧನುವನ್ನು ಮುರಿದೆಯೆಂದು ಕೇಳಿ ನೀನೂ ಈಶ್ವರ ದ್ವೇಷಿಯೇನೋ ಎಂದು ನಾನು ಸಿಟ್ಟುಗೊಂಡಿದ್ದೆ. ಹೀಗಾಗಿ ನಿನ್ನನ್ನು ದಂಡಿಸಬಂದೆ. ಆದರೆ ನಿನ್ನನ್ನು ನಾನು ಕೊಲ್ಲುತ್ತಿರಲಿಲ್ಲ!" 
ರಾಮರು ಹೆದೆ ಏರಿಸಿಬಿಟ್ಟಿದ್ದಾರೆ. ಎಡಗೈಲಿ ಬಿಲ್ಲು ಹಿಡಿದಿದ್ದಾರೆ! ಏನು ಮಾಡಲೂ ತೋಚುತ್ತಿಲ್ಲ! "ಪೂಜ್ಯರೆ , ನಿಮ್ಮ ಈ ಮೃದು ಮಾತುಗಳಿಂದ ನನ್ನನ್ನು ಸೋಲಿಸುತ್ತಿದ್ದೀರಿ. ನನ್ನ ಮೇಲೆ ಸಿಟ್ಟಾಗಿದ್ದಕ್ಕೆ ನೀವು ಕೊಟ್ಟ ಕಾರಣ ನ್ಯಾಯವಾಗಿದೆ. ನೀವು ತಪ್ಪು ತಿಳಿದಿದ್ದಿರಿ. ಖಂಡಿತ ನನಗೆ ಶಿವ ವಿರೋಧವಿಲ್ಲ! ನಾವು ಹರಿಹರರನ್ನು ಸಮಾನವಾಗಿ ಪೂಜಿಸುವವರು. ನಮ್ಮ ವಂಶದಲ್ಲಿ ಒಂದು ಪದ್ಧತಿಯೇ ಇದೆ. ಯಾವುದೇ ಪ್ರಧಾನ ಘಟ್ಟವಾದರೂ, ಎಂದರೆ ವಿವಾಹವೋ, ವಿಜಯವೋ ಏನೇ ಆದರೂ ಅದರ ಕೊನೆಯಲ್ಲಿ ಅತಿರುದ್ರವನ್ನು ಮಾಡಿ ಒಂದು ಶಿವ ದೇವಾಲಯವನ್ನು ಕಟ್ಟುವುದು! ಊರಿಗೆ ಹೋಗುತ್ತಿದ್ದಂತೆಯೇ ಅದೇ ಕೆಲಸವನ್ನು ಮಾಡುವವರಿದ್ದೇವೆ. ನಾನು ಹುಟ್ಟಿದ್ದು ನಾರಾಯಣನ ವರದಿಂದ ಎಂದು ಹೇಳುತ್ತಾರೆ. ಹೀಗಾಗಿ ನಾನು ನಾರಾಯಣ-ಶಂಕರರೀರ್ವರನ್ನೂ ಸಮಾನವಾಗಿ ಆರಾಧಿಸುತ್ತೇನೆ."
ಪರಶುರಾಮರು ಈಗ ನಿಜವಾಗಿಯೂ ಕರಗಿ ಹೋಗಿಬಿಟ್ಟರು. ತಾನೇಕೆ ಈ ರಾಮನ ಬಗ್ಗೆ ಪೂರ್ಣ ತಿಳಿಯದೇ ದುಡುಕಿಬಿಟ್ಟೆ? "ರಾಮ! ನಾನು ಹಲವು ಬಾರಿ ದೇಶ ಸುತ್ತಿ ಅನೇಕ ರಾಜರುಗಳನ್ನು ತುಂಡರಿಸಿ ನನ್ನ ತಂದೆಯ ಆತ್ಮಕ್ಕೆ ಶಾಂತಿಯನ್ನು ಕೊಟ್ಟೆನೆಂದೂ, ನನ್ನ ತಾಯಿಗೆ ಸಮಾಧಾನ ಮಾಡೋಣವೆಂದೂ ಅದೆಷ್ಟೋ ವರ್ಷಗಳ ಮೇಲೆ ನಮ್ಮ ಮನೆಗೆ ಹೋದರೆ ನಮ್ಮ ಅಪ್ಪ-ಅಮ್ಮ-ಅಣ್ಣಂದಿರೆಲ್ಲ ನಗುನಗುತ್ತಾ ಮಾತಾಡುತ್ತಿದ್ದಾರೆ! ನನ್ನನ್ನು ನೋಡುತ್ತಿದ್ದಂತೆಯೇ ಅಮ್ಮ ಓಡಿ ಬಂದು "ಏನೋ ರಾಮ ಇದು? ಎಲ್ಲಿ ಹೋಗಿದ್ದೇ! ಏನೆಲ್ಲ ಮಾಡಿದೆ. ನಿನ್ನ ಬಗ್ಗೆ ಏನೇನೋ ಕಥೆಗಳನ್ನು ಕೇಳುತ್ತಿದ್ದೆವು. ಒಮ್ಮೆಯೂ ಮನೆ ಕಡೆ ಬರಲೇ ಇಲ್ಲ! ಶೈವ ಸಾಧುವೊಬ್ಬ ಬಂದು ನೀನು ಮಾಡಿದ ಪ್ರತಿಙ್ಞೆಯನ್ನು ಹೇಳಿದ್ದ. ಅಂದೇ, ಅವರು ಬರುವ ಮುನ್ನವೇ ನಿನ್ನ ತಂದೆ ಬದುಕಿಬಿಟ್ಟಿದ್ದರು"ಎಂದು ಹೇಳಿದಾಗ, ’ಹಾಗಾದರೆ ನಾನು ಇಷ್ಟು ದಾರುಣ ಮಾಡಿದ್ದೂ ಎಂತಹ ಪ್ರಮಾದವಾಯಿತು! ಸೇಡು, ಸೇಡು ಎಂದುಕೊಳ್ಳುತ್ತಿದ್ದ ನನಗೆ ಈಗ ಆಧಾರವೇ ಇಲ್ಲದೇ ಹೋಯಿತು! ಅಲ್ಲಿವರೆಗೆ "ಮರಣದಂಡನೆ" ಎಂದುಕೊಂಡದ್ದು ಹುಚ್ಚನೊಬ್ಬ ಕೊಡಲಿ ಬೀಸಿ ಸಾಯಿಸಿದ ಅಪರಾಧವಾಯಿತು. ’ಎಂದೆಲ್ಲ ಕುಗ್ಗಿಹೋದೆ. "ಪರಶುರಾಮರು ಯಾವುದೋ ಕಾಲದಲ್ಲಿ ಮುಳುಗಿಹೋಗಿ ಬಡಬಡಿಸುತ್ತಿದ್ದಾರೆ. 
---೦೦೦---
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT