ಪೆಟ್ರೋಲ್ ದರ ಏರಿಕೆ (ಸಂಗ್ರಹ ಚಿತ್ರ) 
ಅಂಕಣಗಳು

ಪೆಟ್ರೋಲ್ ಬೆಲೆ ಏರಿಕೆ -ಇಳಿಕೆಯ ಜಾಗತಿಕ ಆಟದ ಗುಟ್ಟೇನು ಗೊತ್ತೇ?

ಈಗ ಮತ್ತೆ ತೈಲದ ಬೆಲೆ ಹೆಚ್ಚಗಾತೊಡಗಿದೆ. ಜನ ಸಾಮಾನ್ಯನಲ್ಲಿ ಈ ತೈಲಬೆಲೆ ಏಕೆ ಈ ರೀತಿ ಹೆಚ್ಚು ಕಡಿಮೆಯಾಗುತ್ತದೆ ಎನ್ನುವ ಪ್ರಶ್ನೆ ಸಹಜವಾಗೇ ಮೂಡುತ್ತದೆ.

ಇವತ್ತು ಅತ್ಯಂತ ಹೆಚ್ಚಿನ ಚರ್ಚೆಯಲ್ಲಿರುವ ವಿಷಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವುದು. 2014 ರಲ್ಲಿ ಕೇಂದ್ರದಲ್ಲಿ ಮೋದಿ ಸರಕಾರ ಬಂದ ದಿನದಿಂದ ತೈಲ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದಿಗಿಂತ ಕುಸಿತ ಕಂಡು ಆ ನಂತರ ಸ್ಥಿರವಾಗಿತ್ತು. ಈಗ ಮತ್ತೆ ತೈಲದ ಬೆಲೆ ಹೆಚ್ಚಗಾತೊಡಗಿದೆ. ಜನ ಸಾಮಾನ್ಯನಲ್ಲಿ ಈ ತೈಲಬೆಲೆ ಏಕೆ ಈ ರೀತಿ ಹೆಚ್ಚು ಕಡಿಮೆಯಾಗುತ್ತದೆ ಎನ್ನುವ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಇಂದಿನ ಈ ಬರಹದ ಉದ್ದೇಶ ಯಾವ ವರ್ಷದಲ್ಲಿ ತೈಲ ಬೆಲೆ ಎಷ್ಟಿತ್ತು? ಆಗಿನ ಸರಕಾರಯಾವುದಿತ್ತು? ಎಂದು ಹುಡುಕುವುದಲ್ಲ.! ಬದಲಿಗೆ ಈ ರೀತಿಯ ದರ ಏರಿಕೆ-ಇಳಿಕೆಯ ನಿಜವಾದ ಕಾರಣ ಏನು? ಇದರ ಹಿಂದಿನ ಸತ್ಯವನ್ನ ನಿಮ್ಮ ಮುಂದಿಡುವುದು. ಇದನ್ನ ಅರ್ಥ ಮಾಡಿಕೊಳ್ಳಲು ಒಂದು ಅತ್ಯಂತ ಸರಳವಾದ ಉದಾಹರಣೆಯನ್ನ ನೋಡೋಣ. 
ನಿಮ್ಮ ತಾತ, ಮುತ್ತಾತ ರಿಂದ ಹಿಡಿದು ನಿಮ್ಮ ಪೂರ್ವಜರೆಲ್ಲ ರೈತರು ಎಂದುಕೊಳ್ಳಿ. ತರಕಾರಿ ಮಾತ್ರ ನಿಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಿರಿ ಎಂದುಕೊಳ್ಳಿ. ಅಕಸ್ಮಾತ್ ಯಾವುದೋ ಕಾರಣಕ್ಕೆ ತರಕಾರಿಗೆ ಏನಾದರೂ ಮಾರುಕಟ್ಟೆಯಲ್ಲಿ ಕೆ.ಜಿಗೆ ಒಂದು ಸಾವಿರ ರೂಪಾಯಿ ಬೆಲೆ ಬಂದರೆ, ಬರೇ ಹಣವಷ್ಟೆ ಇದ್ದು ತಮ್ಮಲ್ಲಿ ಚದರ ಅಡಿಯಷ್ಟು  ಭೂಮಿಯಿಲ್ಲದವರೂ ಬಾಡಿಗೆ ಜಮೀನಿನಲ್ಲಿ, ಅಧಿಕ ಕೂಲಿ ನೀಡಿ ತರಕಾರಿ  ಬೆಳೆಯಲು ತೊಡಗಿಬಿಡುತ್ತಾರೆ. ಖರ್ಚಿಗಿಂತ ಲಾಭವೇ ಅಧಿಕಪಟ್ಟು ಹೆಚ್ಚಾಗಿದ್ದರಿಂದ ಮತ್ತಷ್ಟು ಬಾಡಿಗೆ  ಬೆಳೆಗಾರರು ಹುಟ್ಟಿಕೊಂಡುಬಿಡುತ್ತಾರೆ. ಬಾಡಿಗೆ ಬೆಳೆಗಾರರಿಂದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಸ್ಪರ್ಧೆಯುಂಟಾದಾಗ ಸಂಕಷ್ಟಕ್ಕೊಳಗಾದ ಪರಂಪರಾಗತ ರೈತ ಏನು ಮಾಡಬೇಕು? ಅವನಿಗೆ ಇಂತಹ ಆಟವನ್ನ ನಿಯಂತ್ರಿಸಲು ಉಳಿದ ಮಾರ್ಗವೊಂದೇ! ಹೆಚ್ಚೆಚ್ಚು ತರಕಾರಿ ಬೆಳೆದು ತನ್ನ ಬೆಳೆಯ ಬೆಲೆಯನ್ನ ಕಡಿಮೆ ಮಾಡುವುದು.  ಇಂತಹ ನಿರ್ಧಾರ ಕಾರ್ಯಗತವಾದ ನಂತರ ತರಕಾರಿ ಬೆಲೆಯಲ್ಲಿ ಇಳಿಕೆ ಕಾಣಲಾರಂಭಿಸಿತು. ಈಗೇನಾಗುತ್ತೆ ನೋಡಿ ಜಮೀನೇ ಇಲ್ಲದ ನಕಲಿ ರೈತರು ಲಾಭಕ್ಕಿಂತ ನಷ್ಟ ಎಂದೊಡನೆ ಮಾರುಕಟ್ಟೆಯಿಂದ ಓಡಿ ಹೋಗುತ್ತಾರೆ. 
ಮೇಲಿನ ಉದಾಹರಣೆಯಲ್ಲಿ ಮೂಲ ರೈತರು ಎನ್ನುವ ಕಡೆಯಲ್ಲಿ ಸೌದಿ ಅರೇಬಿಯಾ, ಒಪೆಕ್ ದೇಶಗಳು ರಷ್ಯಾ ಎಂದು ಓದಿಕೊಳ್ಳಿ. ಯೂರೋಪು, ಮತ್ತು ಅಮೇರಿಕಾದಲ್ಲಿ ಕೂತ ಹೂಡಿಕೆದಾರರು ಎಲ್ಲಿ ತೈಲ ಸಿಗುತ್ತದೋ ಅಲ್ಲೆಲ್ಲ ಜಾಗವನ್ನ ಬಾಡಿಗೆಗೆ ಪಡೆದು ತೈಲ ಉತ್ಪಾದನೆ ಶುರು ಮಾಡಿಕೊಂಡಿದ್ದಾರೆ. ಇವರು ಮೇಲಿನ ಉದಾಹರಣೆಯ ನಕಲಿ ರೈತರು.  
ಈಗ ಮೇಲಿನ ಉದಾಹರಣೆಯ ಇನ್ನಷ್ಟು ಬಿಡಿಸಿ ನೋಡೋಣ. ಕಳೆದ ನಾಲ್ಕು ವರ್ಷದಿಂದ ಅಮೇರಿಕಾ ಮತ್ತು ಯೂರೋಪಿನ ಬಂಡವಾಳಗಾರರ ಉಪಟಳ ಎಷ್ಟು ಹೆಚ್ಚಾಗಿತ್ತು ಎಂದರೆ ಒಪೆಕ್ ದೇಶಗಳ ಆರ್ಥಿಕ ಸ್ಥಿತಿ ಕುಸಿಯುವಷ್ಟು. ಇದರಿಂದ ರೊಚ್ಚಿಗೆದ್ದ ಈ ದೇಶಗಳು ಸೌದಿ ಅರೇಬಿಯಾ ದೇಶವನ್ನ ಕೂಡ ಕಡಿಮೆ ತೈಲ ಉತ್ಪಾದಿಸಲು ಒಪ್ಪಿಸಿದವು. ರಷ್ಯಾ ಒಪೆಕ್ ಸದಸ್ಯ ದೇಶವಲ್ಲ. ಹೀಗಿದ್ದೂ ಅಂತಾರಾಷ್ಟ್ರೀಯ ಬೆಳಣಿಗೆಯಿಂದ ಬೇಸತ್ತು ರಷ್ಯಾ ಕೂಡ ತೈಲದ ಉತ್ಪಾದನೆ ಕಡಿಮೆ ಮಾಡಲು ಸಮ್ಮತಿಸುತ್ತದೆ. ನಿಧಾನವಾಗಿ ಮೂಲ ತೈಲ ಉತ್ಪಾದಕರು ಯಾವಾಗ ಇಂತಹ ಒಂದು ಪ್ರಕ್ರಿಯೆ ಶುರು ಮಾಡಿಕೊಂಡರೋ ಆಗ ತೈಲದ ಬೆಲೆ ಏರಿಕೆ ಕಾಣತೊಡಗಿತು. ಕಳೆದ ನಾಲ್ಕು ವರ್ಷದಿಂದ ಏರಿಕೆ ಕಾಣದ ತೈಲ ಬೆಲೆ ಇದೀಗ ಏರಿಕೆಯಾಗುತ್ತಿರುವುದು ಏಕೆ? ಎನ್ನುವ ಅರಿವು ನಿಮ್ಮದಾಯಿತು ಎಂದುಕೊಳ್ಳುತ್ತೇನೆ. 
ಇನ್ನೊಂದು ಸಣ್ಣ ಉದಾಹರಣೆ ನೋಡಿ ಇದರೊಂದಿಗೆ ತೈಲ ಬೆಲೆಯ ಏರಿಳಿತದ ಆಟ ಪೂರ್ಣವಾಗಿ ಅರ್ಥವಾಗುತ್ತದೆ. ವಸ್ತು ಯಾವುದೇ ಇರಲಿ ಅದು ತೈಲವಿರಬಹದು ಅಥವಾ ತರಕಾರಿಯಿರಬಹದು ಬೇಡಿಕೆ ಮತ್ತು ಪೂರೈಕೆ (ಡಿಮಾಂಡ್ ಅಂಡ್ ಸಪ್ಲೈ) ವಸ್ತುವಿನ ಬೆಲೆಯನ್ನ ನಿರ್ಧರಿಸುತ್ತೆ. ವಸ್ತುವಿನ ಮೇಲಿನ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆಯಿದ್ದರೆ ವಸ್ತುವಿನ ಬೆಲೆಯೇರುತ್ತದೆ. ವಸ್ತುವಿನ ಮೇಲಿನ ಬೇಡಿಕೆ ಕಡಿಮೆ ಇದ್ದು ಪೂರೈಕೆ ಜಾಸ್ತಿಯಾದಾಗ ವಸ್ತುವಿನ ಬೆಲೆ ಕಡಿಮೆಯಾಗುತ್ತದೆ. 
ನಕಲಿ ತೈಲ ಉತ್ಪಾದಕರನ್ನ ಮಾರುಕಟ್ಟೆಯಿಂದ ಓಡಿಸಲು ಒಪೆಕ್ ದೇಶಗಳು ಮತ್ತು ರಷ್ಯಾ ಹೆಚ್ಚೆಚ್ಚು ತೈಲ ಉತ್ಪಾದಿಸಿ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನ ಕುಸಿಯುವಂತೆ ಮಾಡಿದ್ದವು ಈ ಕಾರಣದಿಂದ ಕಳೆದ ನಾಲ್ಕು ವರ್ಷ ತೈಲ ಬೆಲೆ ಕಡಿಮೆಯಿತ್ತು. ಅಂತಾರಾಷ್ಟ್ರೀಯ ಮಟ್ಟದ ಈ ರಾಜಕೀಯ ಚದುರಂಗದಾಟದಲ್ಲಿ ಈ ಸನ್ನಿವೇಶದ ಪೂರ್ಣ ಲಾಭ ಪಡೆದದ್ದು ಭಾರತ ಮತ್ತು ಚೀನಾ ಎನ್ನುವುದು ಬುದ್ದಿವಂತ ಓದುಗನಿಗೆ ತಿಳಿದಿರುತ್ತದೆ. ಈಗ ರಷ್ಯಾ ಮತ್ತು ಒಪೆಕ್ ದೇಶಗಳು ತಮ್ಮ ತೈಲ ಉತ್ಪಾದನೆಯನ್ನ ಕಡಿತಗೊಳಿಸಿವೆ ಹೀಗಾಗಿ ಬೆಲೆಯಲ್ಲಿ ಏರಿಕೆ ಕಾಣ ತೊಡಗಿದೆ. ನರೇಂದ್ರ ಮೋದಿಯವರು ಕಳೆದವಾರ ರಷ್ಯಾ ದೇಶಕ್ಕೆ ಭೇಟಿ ನೀಡಿ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತುಕತೆ ನೆಡೆಸಿ ಬಂದಿದ್ದಾರೆ. ಮೋದಿಯ ವಿದೇಶ ಪ್ರವಾಸವನ್ನ ಟೀಕಿಸುವವರು ಪ್ರವಾಸದ ಹಿಂದಿನ ಉದ್ದೇಶ ತಿಳಿದುಕೊಳ್ಳುವುದು ನಂತರದ ದಿನದಲ್ಲಿ ಅದರಿಂದ ಅದ ಲಾಭವನ್ನ ನೋಡುವುದು ಒಳಿತು. 
ಇದೆಲ್ಲಾ ಸರಿ ಸದ್ಯದಲ್ಲಿ ತೈಲ ಬೆಲೆ ಕಡಿಮೆ ಮಾಡಲು ಕೇಂದ್ರ ಸರಕಾರ ಏನು ಮಾಡಬಹದು? 
ಇದಕ್ಕೆ ಉತ್ತರ ಹೇಳುವುದಕ್ಕೆ ಮುಂಚೆ ನಮ್ಮ ಪೆಟ್ರೋಲ್ ಮೇಲೆ ಬೀಳುತ್ತಿರುವ ತೆರಿಗೆ ಏನೇನು ಅಂತ ತಿಳಿದುಕೊಳ್ಳೋಣ. ನಮ್ಮ ತೈಲದ ಮೇಲೆ ವ್ಯಾಟ್, ಅಬಕಾರಿ ತೆರಿಗೆ ಮತ್ತು ಡೀಲರ್ ಕಮಿಷನ್ ಸೇರಿಕೊಳ್ಳುತ್ತದೆ. ಎರಡು ದಿನಗಳ ಹಿಂದೆ ಕರ್ನಾಟಕದ ಸದ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಲು ಬೊಕ್ಕಸದಲ್ಲಿ ಹಣವಿಲ್ಲ, ಪೆಟ್ರೋಲ್ ಮೇಲಿನ ತೆರಿಗೆ ಹೆಚ್ಚು ಮಾಡಿ ಹೆಚ್ಚು ಹಣ ಸಂಗ್ರಹಿಸುವ ಮಾತನ್ನ ಆಡಿದ್ದರು. ಆದರೇನು ಮೋದಿ ಸರಕಾರ ಕಳೆದ ಹದಿನೈದು ದಿನದಿಂದ ತೈಲವನ್ನ ಕೂಡ ಜಿಎಸ್ಟಿ ಪರಿಧಿಗೆ ತರಲು ಯೋಚನೆ ಮಾಡುತ್ತಿದೆ. ಹೀಗೆ ತೈಲವನ್ನ ಕೂಡ ಜಿಎಸ್ಟಿ ವ್ಯಾಪ್ತಿಗೆ ತರುವುದರಿಂದ ಮೇಲೆ ಹೇಳಿದ ವ್ಯಾಟ್, ಅಬಕಾರಿ ಸುಂಕ ಮತ್ತು ಡೀಲರ್ ಕಮಿಷನ್ ಎಲ್ಲಾ ಹೋಗಿ ನಿಗದಿತ ಜಿಎಸ್ಟಿ ಸುಂಕ ಮಾತ್ರ ಉಳಿದುಕೊಳ್ಳುತ್ತದೆ. ಈ ರೀತಿ ಮಾಡುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಐದರಿಂದ ಹತ್ತು ರೂಪಾಯಿ ಕುಸಿತವಾಗುತ್ತದೆ. ಆದರೆ ರಾಜ್ಯ ಸರಕಾರಗಳಿಗೆ ಸಿಗುತ್ತಿದ್ದ ತೆರಿಗೆ ಹಣ ನಿಂತು ಹೋಗುತ್ತದೆ. ಇದರಿಂದ ರಾಜ್ಯ ಸರಕಾರಗಳು ಕೇಂದ್ರದ ಈ ನಿಲುವನ್ನ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ. 
ಎರಡನೆಯ ಆಯ್ಕೆ ತೈಲದ ಮೇಲೆ ಸಬ್ಸಿಡಿ ಕೊಡುವುದು. ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷದಿಂದ ತೈಲದ ಮೇಲೆ ಯಾವುದೇ ಸಬ್ಸಿಡಿ ನೀಡಿಲ್ಲ. ಕಳೆದ ನಾಲ್ಕು ವರ್ಷ ತೈಲ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆಯಿದ್ದೂ ನಮ್ಮಲ್ಲಿ ಮಾತ್ರ ಏಕೆ ಕಡಿಮೆ ಆಗಿರಲಿಲ್ಲವೆಂದರೆ ಆ ಹೆಚ್ಚುವರಿ ಹಣ ಎಲ್ಲಿ ಹೋಯಿತು ಅನ್ನುವರಿಗೆ ಸರಳ ಲೆಕ್ಕವೆಂದರೆ ಸಬ್ಸಿಡಿ  ತೆಗೆದು ಹಾಕಿದ್ದು ಮತ್ತು ಹಿಂದಿನ ಸರಕಾರ ಇರಾನ್ ದೇಶಕ್ಕೆ ಬಾಕಿ ಉಳಿಸಿಕೊಂಡಿದ್ದ ಮಿಲಿಯನ್ ಗಟ್ಟಲೆ ಸಾಲವನ್ನ ಕಡೆಯ ರೂಪಾಯಿ ಕೂಡ ಬಿಡದೆ ತೀರಿಸಲು ಊಪಯೋಗಿಸಿಕೊಂಡಿದೆ. ಈಗ ಕೇಂದ್ರ ಸರಕಾರ ಸಬ್ಸಿಡಿ ಜಾರಿ ಮಾಡಿ ತೈಲ ಬೆಲೆ ಕಡಿಮೆ ಮಾಡಿ, ಜೊತೆಗೆ ಜೊತೆಗೆ ಇತರ ವಸ್ತುಗಳ ಬೆಲೆಯನ್ನು ಕೂಡ ನಿಯಂತ್ರಣದಲ್ಲಿರಿಸಬಹದು. ಯಾವ ಆಯ್ಕೆ ಕೇಂದ್ರ ಸರಕಾರ ಆಯ್ದುಕೊಳ್ಳುತ್ತದೆ ಎನ್ನುವುದು ಕಾದು ನೋಡಬೇಕು. ಎಲ್ಲ ರೀತಿಯಲ್ಲೂ ಐದನೇ ವರ್ಷ ಕೇಂದ್ರದ ಪಾಲಿಗೆ ಅತ್ಯಂತ ಸವಾಲಿನ ಮತ್ತು ಕಠಿಣ ವರ್ಷವಾಗಲಿದೆ .  
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT