ಕೀಲುನೋವು 
ಅಂಕಣಗಳು

ಕೀಲುನೋವು ಮಹಿಳೆಯರಲ್ಲೇ ಹೆಚ್ಚು ಏಕೆ? (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಕೀಲುನೋವು ಕೇವಲ ಮಹಿಳೆಯರ ಸಮಸ್ಯೆ ಎಂದು ಭಾವಿಸದಿರಿ. ಆದರೆ ಕೀಲುನೋವಿನ ಸಮಸ್ಯೆಯಿಂದ ನರಳುವವರಲ್ಲಿ ಮಹಿಳೆಯರು ಹೆಚ್ಚು ಎಂದು ವೈದ್ಯಕೀಯ ವಲಯ ನಂಬುತ್ತದೆ. 

ಕೀಲುನೋವು ಕೇವಲ ಮಹಿಳೆಯರ ಸಮಸ್ಯೆ ಎಂದು ಭಾವಿಸದಿರಿ. ಆದರೆ ಕೀಲುನೋವಿನ ಸಮಸ್ಯೆಯಿಂದ ನರಳುವವರಲ್ಲಿ ಮಹಿಳೆಯರು ಹೆಚ್ಚು ಎಂದು ವೈದ್ಯಕೀಯ ವಲಯ ನಂಬುತ್ತದೆ. 

ಕೀಲುನೋವಿನಲ್ಲೂ ಅನ್ಯಪ್ರಕಾರಗಳಿವೆ. ಹಲವಾರು ಕಾರಣಗಳಿವೆ. ಶಿಶುವಿನಿಂದ ಹಿಡಿದು ಹಿರಿಯ ವಯಸ್ಕರನ್ನು ಸಹ ಈ ಸಮಸ್ಯೆ ಬಾಧಿಸುತ್ತದೆ. ಸಂಕಷ್ಟಕ್ಕೀಡು ಮಾಡುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಅನೇಕರು ಇದಕ್ಕೆ ಚಿಕಿತ್ಸೆ ಬಯಸುವುದಕ್ಕಿಂತಲೂ ಹೆಚ್ಚಾಗಿ ಅದರ ತೀವ್ರತೆಯನ್ನು ಸಹನೀಯ ಮಟ್ಟಕ್ಕೆ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. 

ಕೀಲುನೋವು ಹೆಚ್ಚು ಕಿರಿಕಿರಿ ಏಕೆ?

ಕೀಲುನೋವು ಬೇರೆ ಎಲ್ಲ ಸಮಸ್ಯೆಗಳಿಗಿಂತಲೂ ಹೆಚ್ಚು ತೊಂದರೆದಾಯಕ. ಏಕೆಂದರೆ ಇದು ನಮ್ಮ ಚಲನಶೀಲತೆಯಿಂದ ಕೂಡಿದ ಬಯಕೆಗೆ ಕಡಿವಾಣ ಹಾಕುತ್ತದೆ. ಸಮಾಜ ಜೀವಿಯಾದ ಮನುಜನನ್ನು ನೋವೆಂಬ ಆರೋಗ್ಯ ಸಮಸ್ಯೆ ಸಮಾಜದಿಂದ ದೂರವುಳಿಸುವುದರಿಂದ ಆತ ಖಿನ್ನತೆಗೊಳಗಾಗುತ್ತಾನೆ. ಕೀಲುನೋವು ಮಾರಣಾಂತಿಕವಲ್ಲದಿದ್ದರೂ ರೋಗಿಯನ್ನು ಸಜೀವವಾಗಿ ಕೊಲ್ಲುತ್ತದೆ ಎಂದು ಹೇಳುತ್ತಾರೆ. 

ಶಾರೀರಿಕ ನೋವನ್ನು ನಾವೆಲ್ಲ ಅನುಭವಿಸಿರುತ್ತೇವೆ. ಪುರುಷರು ಹಾಗೂ ಮಹಿಳೆಯರು ಕೀಲುನೋವಿಗೆ ಸ್ಪಂದಿಸುವ ರೀತಿ, ಅನುಭವದಲ್ಲೂ ವ್ಯತ್ಯಾಸಗಳಿವೆಯೆಂದು ವೈಜ್ಞಾನಿಕ ವಲಯ ವರದಿ ಮಾಡಿದೆ. ಅದಕ್ಕೆ ಕೆಲ ಕಾರಣಗಳನ್ನು ಗುರುತಿಸಿದೆ. ಬಡಕುಟುಂಬದ ಮಹಿಳೆಯರು ಕೀಲುನೋವಿನಿಂದ ನರಳುತ್ತಾರೆ. ವೈದ್ಯರನ್ನು ಕಾಣದೇ ಕಾಲ ಕಳೆಯುತ್ತಾರೆ. ಅದಕ್ಕೆ ಸಾಮಾಜಿಕ ಕಾರಣಗಳು ಹಲವು. ಕೆಲವೊಮ್ಮೆ ದುಡಿಯುವ ಕೂಲಿಕಾರ್ಮಿಕರಿಗೆ ಅವರ ಕುಟುಂಬದವರು ಹಣ ಖರ್ಚಾಗುವುದೆಂದು ಸೂಕ್ತ ಚಿಕಿತ್ಸೆ ಒದಗಿಸಲು ಅಂಜುತ್ತಾರೆ. ಕೆಲ ತಾಯಂದಿರು ತಮ್ಮ ಮಕ್ಕಳನ್ನು ನೆನೆದು ನೋವು ನುಂಗುತ್ತಾ ನಿರಂತರವಾಗಿ ದುಡಿಯುತ್ತಾರೆ.

ಕೀಲುನೋವು ಪತ್ತೆಹಚ್ಚುವುದು ಹೇಗೆ?

ನೋವು ಎಂದು ವೈದ್ಯರನ್ನು ಕಂಡಾಗ ಸಾಮಾನ್ಯವಾಗಿ ಅವರು ಒಂದಿಷ್ಟು ನೋವು ನಿವಾರಕ ಮಾತ್ರೆ, ಒಂದು ಮುಲಾಮು ಬರೆದುಕೊಡುತ್ತಾರೆ. ನೋವಿನ ಕಾರಣವನ್ನು ನಾವು ಕೇಳುವುದಿಲ್ಲ. ಅವರು ಸಹ ಹೇಳಲು ಬಯಸೋದಿಲ್ಲ. ಹೀಗೇಕೆ? ನೋವಿನ ಕಾರಣದ ಶೋಧನೆ ಸಾಮಾನ್ಯವಾಗಿ ಬಹುವೆಚ್ಚದಾಯಕ. 

ಜನರಿಗೆ ನೋವಿನಿಂದ ಕ್ಷಣಿಕ ಮುಕ್ತಿ ಬೇಕು ಅಷ್ಟೆ. ಹಾಗಾಗಿ ನೋವಿನ ಕಾರಣ ಕೆಲವರಲ್ಲಷ್ಟೆ ಪತ್ತೆ ಹಚ್ಚಲಾಗುತ್ತದೆ. ಕೀಲುನೋವಿಗೆ ವಯಸ್ಸು, ಸೋಂಕು, ಉರಿಯೂತ, ಆಘಾತ-ಹೀಗೆ ನೂರಾರು ಕಾರಣಗಳಿರಬಹುದು. ಕೀಲು ನೋವಿನ ಪ್ರಮುಖ ಕಾರಣಗಳಲ್ಲಿ ರೂಮೆಟಾಯ್ಡ್ ಅರ್ಥೈಟಿಸ್ (Rheumatoed) ಒಂದಾಗಿದೆ. ಇವುಗಳೊಡನೆ ಲ್ಯೂಪಸ್, ಸ್ಕೆರೋಡರ್ಮಾ, ಫೈಬ್ರೋಮಯಾಲ್ಜಿಯಾ ಇತ್ಯಾದಿಗಳೂ ಶಾರೀರಿಕ ಮತ್ತು ಕೀಲುನೋವಿಗೆ ಕಾರಣವಾಗಿರಬಲ್ಲವು. ಆದರೆ ರೋಗಿ ನಿರಂತರವಾಗಿ ವೈದ್ಯರ ಸಂಪರ್ಕ (Follow up)ದಲ್ಲಿರದಿದ್ದರೆ ಇವುಗಳನ್ನು ಪತ್ತೆ ಹಚ್ಚುವುದು ಕಷ್ಟ. ಕೆಲ ರೋಗ ಪತ್ತೆ ಹಚ್ಚಲು ದುಬಾರಿ ಲ್ಯಾಬೋರೇಟರಿ ಟೆಸ್ಟ್‍ ಗಳನ್ನು ಮಾಡಬೇಕಾಗಬಹುದು.

ಹಿಂದೆಲ್ಲ ಕೀಲುನೋವು ವಯಸ್ಸಾದವರ ಸಮಸ್ಯೆ ಎಂದು ಭಾವಿಸಲಾಗಿತ್ತು. ಕೀಲುನೋವು ಆರಂಭವಾದರೆ ಜೀವನ ಪರ್ಯಂತವೆಂದು ಕಲ್ಪಿಸಿಕೊಳ್ಳಲಾಗುತ್ತಿತ್ತು. ಆದರೆ ಇಂದು ಇವುಗಳ ಚಿಕಿತ್ಸೆಯಲ್ಲಿ ನಾವು ಹಲವು ಮೈಲಿಗಲ್ಲನ್ನು ಸಾಧಿಸುತ್ತಿದ್ದು, ಕನಿಷ್ಠ ಆಕ್ರಮಣಶೀಲ (Minimally invasive) ಅರ್‍ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಕೀಲುಗಳ ಭಾಗಶಃ ಮತ್ತು ಸಂಪೂರ್ಣ ಬದಲಾವಣೆ ಮಾಡುವಲ್ಲಿ ಸಫಲರಾಗಿದ್ದೇವೆ. ಈ ಮೂಲಕ ಸಂಧಿವಾತದಿಂದ ಉಂಟಾಗುತ್ತಿದ್ದ ಅಂಗವೈಕಲ್ಯವನ್ನು ತಡೆಗಟ್ಟುವಲ್ಲಿ ಯಶಸ್ಸು ಸಾಧಿಸಿದ್ದೇವೆ. 

ಚಿಕಿತ್ಸೆ ಸ್ವಲ್ಪ ದುಬಾರಿಯೆನಿಸಿದರೂ ಜನರಲ್ಲಿ ನೋವಿನಿಂದ ಮುಕ್ತಿ ಪಡೆಯಲು ರೋಗಿ ಕೆಲವೊಮ್ಮೆ ಜೀವನದಲ್ಲಿ ವೈಯಕ್ತಿಕ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಪುರುಷರಿಗಿಂತಲೂ ಮಹಿಳೆಯರಿಗೆ ಇದೊಂದು ಸವಾಲೇ ಸರಿ. ಮಹಿಳೆಯರ ಶಾರೀರಿಕ ರಚನೆ ಹಾಗೂ ಕಾರ್ಯಚಟುವಟಿಕೆಯನ್ನು ನೋವು ಸಹಿಸಿಕೊಳ್ಳುವ ಶಕ್ತಿ ಆಧರಿತವಾಗಿದೆ.

ಮಹಿಳೆಯರಲ್ಲಿ ಕೀಲುನೋವು

ಮಹಿಳೆಯರಲ್ಲಿ ‘ಈಸ್ಟ್ರೋಜನ್’ ಎಂಬ ಹಾರ್ಮೋನು ಮೂಳೆ-ಕೀಲುಗಳನ್ನು ಉರಿಯೂತ, ಸವೆತದಿಂದ ರಕ್ಷಿಸುತ್ತದೆ. ಈಸ್ಟ್ರೋಜನ್‍ನ ಪ್ರಮಾಣ ಋತುಸ್ರಾವದ ಸಮಯದಲ್ಲಿ ಕುಂಠಿತಗೊಳ್ಳುತ್ತದೆ. ಹಾಗಾಗಿ ಮಹಿಳೆಯರಲ್ಲಿ ಮುಟ್ಟಿನ ಸಂದರ್ಭದಲ್ಲಿ ಮೈ-ಕೈ ನೋವು, ಕೀಲುನೋವು ಉಲ್ಬಣಗೊಳ್ಳುತ್ತದೆ. ಅವುಗಳ ತೀವ್ರತೆ ಹೆಚ್ಚುತ್ತದೆ. 

ಮಹಿಳೆಯರಲ್ಲಿ ಋತುಬಂಧದ (Menopause) ನಂತರ ಕೀಲು ಸಂಬಂಧಿ ಸಮಸ್ಯೆ ಹೆಚ್ಚಲು ಈಸ್ಟ್ರೋಜನ್‍ನ ಪ್ರಮಾಣದ ಕೊರತೆ ಬಹುಮುಖ್ಯ ಕಾರಣ. ಮಹಿಳೆಯರು ದೈಹಿಕ ನೋವಿಗೆ ಹೆಚ್ಚು ಸೂಕ್ಷ್ಮತೆಯನ್ನು ಪ್ರಕಟಿಸಲು ಎಂಡೋರ್ಫಿನ್‍ಗಳು ಹಾಗೂ ಇತರೆ ಮೆದುಳು ಸ್ರವಿಸುವ ಡೋಪಮೈನ್‍ನಂತಹ ರಾಸಾಯನಿಕಗಳ ಕೊರತೆಯು ಕಾರಣ ಎಂಬ ವರದಿಗಳು ಇವೆ. ಆಯುರ್ವೇದ ಪದ್ಧತಿಯಲ್ಲಿ ಮಹಿಳೆಯರ ಈ ಸಮಸ್ಯೆಯನ್ನು ಪರಿಹರಿಸಲು ಉತ್ತಮ ಚಿಕಿತ್ಸೆ ಇದೆ. ಫಿಸಿಯೋಥೆರಪಿ ನೋವು ನಿಯಂತ್ರಣ ಶಮನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದು ಬಹುಮಂದಿಯ ಅನುಭವವಾಗಿದೆ. ವಿಶ್ರಾಂತಿ, ಸೂಕ್ತ ಆಹಾರ, ವ್ಯಾಯಾಮಗಳು ಮೂಳೆ ಸಂಬಂಧಿ ಅನೇಕ ತೊಂದರೆಗಳಿಂದ ದೂರವಿರಲು ಹಾಗೂ ಉಲ್ಬಣಗೊಳ್ಳದಂತೆ ನಿಯಂತ್ರಿಸುವುದು ಅಗತ್ಯ. ಆಯುರ್ವೇದದಲ್ಲಿ ಪಂಚಕರ್ಮ ಮತ್ತು ಔಷಧಿ ಉತ್ತಮವಾದ ಪರಿಹಾರ ನೀಡಬಲ್ಲದು.

ತೂಕ ಅತಿಯಾದಾಗಲೂ ಕೀಲು ಸಂಬಂಧಿ ಅದರಲ್ಲೂ ಮುಖ್ಯವಾಗಿ ಮಂಡಿನೋವಿನ ಸಮಸ್ಯೆ ಹೆಚ್ಚುತ್ತದೆ. ವಿಶ್ರಾಂತಿಯಿಲ್ಲದ ನಿರಂತರ ಶಾರೀರಿಕ ಶ್ರಮವೂ ಶಾರೀರಿಕ ಹಾಗೂ ಕೀಲುನೋವಿಗೆ ಕಾರಣವಾಗಬಲ್ಲದು. ಬಗ್ಗಿ ನೆಲ ಒರೆಸುವುದು, ನಿಂತುಕೊಂಡೇ ಅಡುಗೆ ಮಾಡುವುದು ಹೆಂಗಸರ ದಿನನಿತ್ಯದ ಕೆಲಸವಾಗಿರುವುದರಿಂದಲೂ ಅವರಲ್ಲಿ ಸೊಂಟ-ಮಂಡಿನೋವಿನ ಸಮಸ್ಯೆ ಹೆಚ್ಚು. ಜೀರ್ಣಕ್ರಿಯೆಯಲ್ಲಿನ ಏರು-ಪೇರುಗಳು ಕೂಡ, ಯೂರಿಕ್ ಆಂಟಾಸಿಡ್‍ನಂತಹ ರಾಸಾಯನಿಕಗಳು ದೇಹದಲ್ಲಿ ಶೇಖರಣೆಗೊಳ್ಳಲು ಕಾರಣವಾಗುತ್ತದೆ. 

ಇವುಗಳ ನಿಯಂತ್ರಣ ಅಗತ್ಯ. ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಾಗಲೂ ಮೂಳೆ-ಕೀಲುನೋವಿನ ತೊಂದರೆ ತಲೆದೋರಬಹುದು ಸೂಕ್ತವಾದ ಆಹಾರ ಸೇವಿಸದಿದ್ದಲ್ಲಿ ಪೌಷ್ಟಿಕಾಂಶಗಳ ಕೊರತೆಯಿದ್ದಾಗಲೂ ಮೂಳೆ-ಕೀಲುಗಳು ದುರ್ಬಲಗೊಂಡು ವ್ಯಕ್ತಿ ನರಳುವಂತಾಗುತ್ತದೆ. ಮೂಳೆ-ಕೀಲುವಾತದಿಂದ ನರಳುವ ಮಹಿಳೆಯರು ಶಿಸ್ತುಬದ್ಧ, ಪೌಷ್ಟಿಕಾಂಶಯುಕ್ತ ಆಹಾರಕ್ರಮ ವ್ಯಾಯಮ, ಸೂಕ್ತ ವಿಶ್ರಾಂತಿಯಿಂದ ಕೂಡಿದ ದಿನಚರಿಯನ್ನು ಪಾಲಿಸಲು ಯತ್ನಿಸಬೇಕು. ಉರಿಯೂತ-ಸೋಂಕು ಸಂಬಂಧಿ ನೋವನ್ನು ನೋವು ನಿವಾರಕ ಮಾತ್ರೆಯಿಂದ ಶಮನಗೊಳಿಸಬಹುದು.

ಕೆಲವೊಮ್ಮೆ ಕೀಲು-ಸಂಧಿವಾತ ಬಹು ಹಿಂದೆ ಉಂಟಾದ ಗಾಯ-ಹಳೆ ನೋವಿಗೂ ಸಂಬಂಧಿಸಿರಬಹುದು. ಹಾಗಾಗಿ ಕೀಲುಗಳಿಗೆ ಬಲವಾದ ಏಟು ಬಿದ್ದಿದ್ದಲ್ಲಿ ಆ ಮಾಹಿತಿಯನ್ನು ವೈದ್ಯರಿಗೆ ತಿಳಿಸಿ. ವಯಸ್ಕರಲ್ಲಿ ಜಾರಿ ಬೀಳುವ ಸಮಸ್ಯೆ ಹೆಚ್ಚಾಗಿದ್ದು. ಆಘಾತ ಸಂಬಂಧಿ ನೋವು-ಮೂಳೆ ಮುರಿತದ ಕುರಿತು ನಾವು ಜಾಗೃತೆ ವಹಿಸಬೇಕು. ಕೆಲ ಮಹಿಳೆಯರಲ್ಲಿ ಮುಂಗೈ ಸಣ್ಣ ಗಂಟಿನ ನೋವು ಮುಂಜಾನೆ ವೇಳೆಯಲ್ಲಿ ತಂಪಾದ ವಾತಾವರಣದಲ್ಲಿ ಹೆಚ್ಚಾಗಿರಬಹುದು. ಕೆಲ ಚರ್ಮರೋಗಗಳಲ್ಲೂ ಕೀಲುನೋವು ಉಲ್ಬಣಗೊಳ್ಳುತ್ತದೆ. ಅಂಗಾಂಗಗಳ-ಮೂಳೆಗಳ ವಿಕೃತಿಗೂ-ಊನತೆಗೂ ಕೆಲ ರೋಗಗಳು ಕಾರಣವಾಗಬಹುದು. ಹಾಗಾಗಿ ಈ ರೋಗ ಗುಣ-ಲಕ್ಷಣಗಳನ್ನು ನಿರ್ಲಕ್ಷಿಸದೇ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು. ಕೆಲ ಹೃದ್ರೋಗಗಳಿಗೂ-ಮೂಳೆ ಸಂಬಂಧಿ ಕಾಯಿಲೆಗಳಿಗೂ ಸಂಬಂಧವಿರಬಹುದು. ಮಕ್ಕಳಲ್ಲೂ ಹುಟ್ಟಿನಿಂದಲೂ ಕೆಲ ಬಗೆಯ ಕೀಲುನೋವು ತಲೆದೋರಬಹುದು. 

ಮೂಳೆ-ಕೀಲುನೋವಿನ ಸಮಸ್ಯೆಗೆ ಔಷಧ-ಶಸ್ತ್ರಕ್ರಿಯೆ-ಆಯುರ್ವೇದ ನೈಸರ್ಗಿಕ ಚಿಕಿತ್ಸೆಗಳು ಲಭ್ಯವಿವೆ. ಹಾಗಾಗಿ ಈ ಸಮಸ್ಯೆಯಿಂದ ನರಳುತ್ತಿರುವವರು ರೋಗದ ತೀವ್ರತೆ ಇತ್ಯಾದಿಗಳನ್ನಾಧರಿಸಿ ಚಿಕಿತ್ಸಾಕ್ರಮವನ್ನು ಆಯ್ದುಕೊಳ್ಳಬೇಕು. ಕೆಲವರು ಮೌನವಾಗಿ ಸಹಿಸಿಕೊಳ್ಳುತ್ತಾರೆ. ಆದರೆ ಮೌನ, ಸಹನೆ, ರೋಗ ನಿರ್ಲಕ್ಷ್ಯ ರೋಗವನ್ನು ಇನ್ನಷ್ಟು ಗಂಭೀರವಾಗಿಸಬಲ್ಲದು ಎಂಬುದನ್ನು ನಾವು ಮರೆಯ ಕೂಡದು.

ಡಾ. ವಸುಂಧರಾ ಭೂಪತಿ
bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT