ಅಂಕಣಗಳು

ಎಲೆಕ್ಟ್ರೋಲ್ ಬಾಂಡ್: ಇದು ಹೂಡಿಕೆಯ ಬಾಂಡ್ ಅಲ್ಲ, ದೇಣಿಗೆಯ ಬಾಂಡ್! (ಹಣಕ್ಲಾಸು)

ರಂಗಸ್ವಾಮಿ ಮೂಕನಹಳ್ಳಿ

ಇರುವುದೊಂದು ಭೂಮಿ ಆದರೆ ಅದರಲ್ಲಿ 196 ದೇಶಗಳಿವೆ. ನಮ್ಮ ಒಟ್ಟು ಸಂಖ್ಯೆ 750 ಕೋಟಿಗೂ ಮೀರಿದೆ. ಇಷ್ಟೊಂದು ಜನರಿರುವ ಭೂಮಿಯನ್ನ ವ್ಯವಸ್ಥಿತವಾಗಿ ನೆಡೆಸಿಕೊಂಡು ಹೋಗಲು ಆಡಳಿತ ಮಂಡಳಿ ಅವಶ್ಯಕೆತೆ ಇದೆಯಲ್ಲವೇ? ನಮಗೆಲ್ಲಾ ಗೊತ್ತಿರುವಂತೆ ದೇಶ, ರಾಜ್ಯ, ಜಿಲ್ಲೆಯಿಂದ ನಿಂದ ಹಳ್ಳಿಯ ಪಂಚಾಯತಿವರೆಗೆ ಇಂತಹ ಆಡಳಿತ ಮಂಡಳಿಗಳು ಇವೆ. ಹೀಗೆ ಆಡಳಿತ ನಡೆಸುವರು ಯಾರು? ಜನರಿಂದ ಚುನಾಯಿತರಾದ ಪ್ರತಿನಿಧಿಗಳು. ಇವೆಲ್ಲ ಅತ್ಯಂತ ಸಾಮಾನ್ಯ ವಿಷಯ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹೀಗೆ ಜನರಿಂದ ಆಯ್ಕೆಯಾಗಲು ಬಯಸುವ ಜನ ಯಾವುದಾದರೊಂದು ರಾಜಕೀಯ ಪಕ್ಷದ ಸದಸ್ಯರಾಗಿರುತ್ತಾರೆ. ಇಂತಹ ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಸರಕಾರದ ಖಜಾನೆಯಿಂದ ನಯಾಪೈಸಾ ಕೂಡ ತೆಗೆದುಕೊಳ್ಳುವ ಹಾಗಿಲ್ಲ. ಏಕೆಂದರೆ ಅದು ಜನರ ದುಡ್ಡು. ವಸ್ತು ಸ್ಥಿತಿ ಹೀಗಿರುವಾಗ ಇಂತಹ ರಾಜಕೀಯ ಪಕ್ಷಗಳು ತಮ್ಮ ಉಳಿವಿಗಾಗಿ ಹಣವನ್ನ ವ್ಯಯಿಸಲೇಬೇಕು ಅಲ್ಲವೇ? ಹೀಗೆ ಪಕ್ಷ ನಡೆಸಲು ಹಣ ಎಲ್ಲಿಂದ ಬರುತ್ತದೆ?

ಸಾಮಾನ್ಯ ದಿನದಲ್ಲಿ ಹೆಚ್ಚಿನ ಹಣದ ಅವಶ್ಯಕೆತೆಯಿಲ್ಲ ಎನ್ನುವ ಮಾತನ್ನ ಹೇಳಿ ಮುಗಿಸಬಹುದು ಆದರೆ ಚುನಾವಣೆ ವೇಳೆ ಪ್ರಚಾರ ಮತ್ತಿರರ ಖರ್ಚುಗಳಿಗೆ ಈ ರಾಜಕೀಯ ಪಕ್ಷಗಳಿಗೆ ಹಣದ ಅವಶ್ಯಕೆತೆ ಇದ್ದೆ ಇರುತ್ತದೆ. ಈ ಮಾತನ್ನ ಯಾರು ಇಲ್ಲವೆನ್ನಲಾಗದು. ಹಾಗಾದರೆ ರಾಜಕೀಯ ಪಕ್ಷ ಯಾವುದೇ ಇರಲಿ ಇವರಿಗೆ ಅಷ್ಟೊಂದು ಪ್ರಮಾಣದ ಹಣದ ಹರಿವು ಬರುವುದಾದರೂ ಎಲ್ಲಿಂದ? ಭಾರತದಲ್ಲಿ ಇಂದು 7 ರಾಷ್ಟ್ರೀಯ ಪಕ್ಷಗಳಿವೆ, 24 ರಾಜ್ಯಕ್ಕೆ ಸೀಮಿತವಾದ ಪಕ್ಷಗಳಿವೆ ಇವನ್ನ ಬಿಟ್ಟು ಅಷ್ಟೊಂದು ಹೆಸರಿಲ್ಲದ ಆದರೆ ನೊಂದಾಯಿತ 2044 ರಾಜಕೀಯ ಪಕ್ಷಗಳಿವೆ ಎನ್ನುತ್ತದೆ ಅಂಕಿ-ಅಂಶ. ಇಲ್ಲಿಯವರೆಗೆ ಏನಾಗುತ್ತಿತ್ತು ಎಂದರೆ ಹೀಗೆ ಹೆಚ್ಚು ಹೆಸರುವಾಸಿಯಲ್ಲದ ರಾಜಕೀಯ ಪಕ್ಷದ ಹೆಸರನ್ನ ಕಪ್ಪು ಹಣವನ್ನ ಬಿಳಿ ಮಾಡಲು ಅಥವಾ ಅದನ್ನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಬಹಳವಿತ್ತು. ಅಲ್ಲದೆ ಎಲ್ಲಾ ತರಹದ ರಾಜಕೀಯ ಪಕ್ಷಗಳಿಗೆ ಹಣ ನಗದು ರೂಪದಲ್ಲಿ ಸಂದಾಯವಾಗುತ್ತಿತ್ತು. ಹೀಗಾಗಿ ಇದೊಂದು ಕಟ್ಟು-ಕಟ್ಟಳೆ ಇಲ್ಲದ ವ್ಯಾಪಾರವಾಗಿ ಹೋಗಿತ್ತು.  ಗಮನಿಸಿ ನಮ್ಮ ದೇಶದಲ್ಲಿ ಮಾತ್ರ ಇಂತಹ ಅವ್ಯವಸ್ಥೆ ಎನ್ನುವಂತಿಲ್ಲ, ಜಗತ್ತಿನಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ನಗದು ರೂಪದಲ್ಲಿ ಇರುತ್ತದೆ. ಇದನ್ನ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತರುವ ಯಾವುದೇ ಪ್ರಯತ್ನ ಜಗತ್ತಿನಲ್ಲಿ ನೆಡೆದಿಲ್ಲ. 2017ರ ಕೇಂದ್ರ ಸರಕಾರದ ಬಜೆಟ್ ನಲ್ಲಿ ಇದಕ್ಕೊಂದು ರೂಪುರೇಷೆ ನೀಡುವ ಸಲುವಾಗಿ 'ಎಲೆಕ್ಟ್ರೋಲ್ ಬಾಂಡ್' ಅನ್ನು ಪರಿಚಯಿಸಲಾಗಿದೆ. ಮಾರ್ಚ್ 1, 2018ರ ಪ್ರಥಮ ಎಲೆಕ್ಟ್ರೋಲ್ ಬಾಂಡ್ ವಿತರಣೆಯಾಗಿದೆ. ಹೀಗಾಗಿ ರಾಜಕೀಯ ಪಕ್ಷಗಳಿಗೆ ನೀಡುವ ಡೊನೇಶನ್ ನ್ನು ಕೂಡ ಬ್ಯಾಂಕಿಂಗ್ ಮಿತಿಯಲ್ಲಿ ತಂಡ ಪ್ರಥಮ ಜಗತ್ತಿನ ಪ್ರಥಮ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಏನಿದು ಎಲೆಕ್ಟ್ರೋಲ್ ಬಾಂಡ್?

ಇದು ನಮ್ಮ ರೂಪಾಯಿ ನೋಟಿದೆಯಲ್ಲ ಅದೇ ರೀತಿ ಒಂದು ಪ್ರಾಮಿಸರಿ ನೋಟು. ಅಂದರೆ ಈ ಬಾಂಡ್ ಹಣವಿದ್ದಂತೆ ಇದರಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಆದರೆ ಈ ಬಾಂಡ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಮಾತ್ರ ಖರೀದಿಸಬಹುದು. ಭಾರತೀಯ ನಾಗರಿಕರು, ಸಂಸ್ಥೆಗಳು ಇಂತಹ ಬಾಂಡ್ ಅನ್ನು ಖರೀದಿಸಬಹುದು. ಇಂತಹ ಬಾಂಡ್ ವಿತರಣೆ ಮಾಡುವ ಉದ್ದೇಶವೇನು ಗೊತ್ತೇ? ಅನಾಮಧೇಯ ಜನರಿಂದ ಕಪ್ಪು ಹಣವನ್ನ ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡುವುದಕ್ಕೆ ಕಡಿವಾಣ ಹಾಕುವುದು. ಈಗ ಚಾಲ್ತಿ ಇರುವ ಕಾನೂನಿನ ಪ್ರಕಾರ 2 ಸಾವಿರ ರುಪಾಯಿಗೆ ಮೀರಿದ ದೇಣಿಗೆ ಹಣವನ್ನ ನಗದು ರೂಪದಲ್ಲಿ ನೀಡುವಂತಿಲ್ಲ.

ಈ ಎಲೆಕ್ಟ್ರೋಲ್ ಬಾಂಡ್ ಸಾವಿರ, ಹತ್ತು ಸಾವಿರ, ಲಕ್ಷ, ಹತ್ತು ಲಕ್ಷ ಮತ್ತು ಕೋಟಿ ರೂಪಾಯಿ ಮೌಲ್ಯದಲ್ಲಿ ಲಭ್ಯವಿದೆ. ಅಂದರೆ ಯಾರಾದರು 5 ಸಾವಿರ ರೂಪಾಯಿ ದೇಣಿಗೆ ನೀಡಲು ಬಯಸಿದರೆ ಸಾವಿರ ರುಪಾಯಿಯ ಐದು ಬಾಂಡ್ ಖರಿಸಿಡಬೇಕಾಗುತ್ತದೆ. ಈ ಬಾಂಡ್ ಅನ್ನು ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ಮಾತ್ರ ಅದೂ ಪ್ರಥಮ ಹತ್ತು ದಿನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಲವು ನಿಗದಿತ ಮುಖ್ಯ ಕಚೇರಿಗಳಲ್ಲಿ ಮಾತ್ರ ಕೊಳ್ಳಬಹುದು. ಸದ್ಯಕ್ಕೆ ಎಸ್ಬಿಐ ನ ಚನ್ನೈ, ಕಲ್ಕತ್ತಾ, ಮುಂಬೈ ಮತ್ತು  ದೆಹಲಿಯ ಶಾಖೆಯಲ್ಲಿ ಮಾತ್ರ ಕೊಳ್ಳಬಹುದುದಾಗಿದೆ. ಅಂದರೆ ಗಮನಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡ ಬಯಸುವರು ಇಂತಹ ಬಾಂಡ್ ಅನ್ನು ನಿಗದಿತ ತಿಂಗಳ ಪ್ರಥಮ ಹತ್ತು ದಿನದಲ್ಲಿ ಮಾತ್ರ ಖರೀದಿಸಬಹುದು ಆನಂತರ ಇದರ ಖರೀದಿ ಸಾಧ್ಯವಿಲ್ಲ. ಉದಾಹರಣೆ ನೋಡಿ ಏಪ್ರಿಲ್ ತಿಂಗಳ ಪ್ರಥಮ ಹತ್ತು ದಿನದಲ್ಲಿ ಖರೀದಿಸಲು ಸಾಧ್ಯವಾಗದೆ ಹೋದರೆ ಮತ್ತೆ ಜುಲೈ ತಿಂಗಳ ತನಕ ಕಾಯಬೇಕು. ಜುಲೈ ಹತ್ತರ ಒಳಗೆ ಮಾತ್ರ ಖರೀದಿಸಬಹುದು.

ಇಂತಹ ಬಾಂಡ್ಗಳ ಮೇಲೆ ಯಾವುದೇ ತರಹದ ಬಡ್ಡಿಯನ್ನ ನೀಡಲಾಗುವುದಿಲ್ಲ. ಇಂತಹ ಬಾಂಡ್ ವಿತರಣೆಯಾದ ಹದಿನೈದು ದಿನಗಳಲ್ಲಿ ಇದನ್ನ ಯಾವುದಾದರೂ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಬಹುದು. ಅಂದರೆ ಹದಿನೈದು ದಿನದ ಒಳಗೆ ಇದನ್ನ ಖಾತೆಗೆ ಹಾಕಿಸಿಕೊಳ್ಳಬೇಕು ಇಲ್ಲದಿದ್ದರೆ ಈ ಬಾಂಡ್ ಅನೂರ್ಜಿತವಾಗುತ್ತದೆ. ಈ ಬಾಂಡ್ ಕೊಂಡವರಿಗೆ ನಂತರ ಮರಳಿ ಹಣವನ್ನ ಕೊಡಲು ಬರುವುದಿಲ್ಲ. ಈ ಹಣ ಸರಕಾರದ ಖಾತೆಗೆ ಜಮವಾಗುತ್ತದೆ. ಉದಾಹರಣೆ ನೋಡಿ ಒಬ್ಬ ವ್ಯಕ್ತಿ ಇಂತಹ ಬಾಂಡ್ ಅನ್ನು ಏಪ್ರಿಲ್ 10 ರಂದು ಕೊಂಡನೆಂದುಕೊಳ್ಳಿ ಅದು 25 ಏಪ್ರಿಲ್ ಒಳಗೆ ಯಾವುದಾದರೂ ರಾಜಕೀಯ ಪಕ್ಷದ ಖಾತೆಯಲ್ಲಿ ಜಮಾ ಆಗಬೇಕು. 26ಕ್ಕೆ ಈ ಬಾಂಡ್ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಹಣ ರಾಜಕೀಯ ಪಕ್ಷ ಅಥವಾ ಕೊಂಡ ವ್ಯಕ್ತಿ ಇಬ್ಬರಿಗೂ ಸಿಗುವುದಿಲ್ಲ.

ಯಾವುದಾದರೂ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಬಹುದೇ?

ಯಾವುದೇ ನೋಂದಾಯಿತ ರಾಜಕೀಯ ಪಕ್ಷ ಕಳೆದ ಚುನಾವಣೆಯಲ್ಲಿ ಭಾಗವಹಿಸಿ 1 ಪ್ರತಿಶತಕ್ಕಿಂತ ಹೆಚ್ಚಿನ ಮತವನ್ನ ಗಳಿಸಿದ್ದಲ್ಲಿ ಅಂತಹ ರಾಜಕೀಯ ಪಕ್ಷಕ್ಕೆ ದೇಣಿಗೆಯನ್ನ ನೀಡಬಹುದು.

ಇಂತಹ ಬಾಂಡ್ ವಿತರಣೆಯ ಪ್ರಯೋಜನವೇನು?

  1. ಎಲ್ಲಕ್ಕೂ ಮೊದಲು ದೇಣಿಗೆ ಎಷ್ಟಾದರೂ ಸರಿ ಒಂದು ವ್ಯವಸ್ಥೆಯ ಅಡಿಯಲ್ಲಿ ಬರುತ್ತದೆ. ಇಲ್ಲಿಯವರೆಗೆ ಸಾವಿರಾರು ಕೋಟಿ ಯಾರು ಯಾರಿಗೆ ಕೊಟ್ಟರು ಎನ್ನುವ ಲೆಕ್ಕಾಚಾರ ಇಲ್ಲ.
  2. ಇಲ್ಲಿಯವರೆಗೆ ರಾಜಕೀಯ ಪಕ್ಷಗಳಿಗೆ ಕೊಡುವ ದೇಣಿಗೆ ನಗದು ರೂಪದಲ್ಲಿ ಇರುತ್ತಿತ್ತು. ಇದೀಗ ಅದನ್ನ ಕೂಡ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಯಲ್ಲಿ ತರಲಾಗಿದೆ.
  3. ಕಟ್ಟುಕಟ್ಟಳೆ ಗಳಿಲ್ಲದ ರಾಜಕೀಯ ಪಕ್ಷಗಳಿಗೆ ಮೂಗುದಾರ ತೊಡಿಸುವ ಪ್ರಯತ್ನವಾಗುತ್ತಿದೆ.
  4. ದುರ್ಬಳಕೆಗಾಗಿ ನೋಂದಾಯಿತವಾಗಿ ಆದರೆ ಜನರ ಹಿತಕ್ಕಾಗಿ ಯಾವ ಕೆಲಸ ಮಾಡದೆ ಇದ್ದ ರಾಜಕೀಯ ಪಕ್ಷಗಳು ತಾವಾಗೆ ಮುಚ್ಚಿ ಹೋಗುತ್ತವೆ .
  5. ಹೀಗೆ ಹಣವನ್ನ ದೇಣಿಗೆ ನೀಡಿದ ವ್ಯಕ್ತಿ ಅಥವಾ ಸಂಸ್ಥೆ ರಾಜಾರೋಷವಾಗಿ ಆದಾಯ ತೆರಿಗೆಯಲ್ಲಿ ಇದನ್ನ ನಮೂದಿಸಿ ತೆರಿಗೆ ವಿನಾಯ್ತಿ ಪಡೆಯಬಹುದು.
  6. ಅಕಸ್ಮಾತ್ ಈ ಬಾಂಡ್ ಕಳುವಾದರೆ ಇದನ್ನ ಯಾರೂ ಉಪಯೋಗಿಸಲು ಬರುವುದಿಲ್ಲ. ಅಂದರೆ ಇದನ್ನ ಯಾರೂ ತಮ್ಮ ಖಾತೆಗೆ ಹಾಕಿಕೊಳ್ಳಲು ಸಾಧ್ಯವಿಲ್ಲ . ಇದನ್ನ ರಾಜಕೀಯ ಪಕ್ಷದ ಖಾತೆಗೆ ಮಾತ್ರ ಡೆಪಾಸಿಟ್ ಮಾಡಬಹುದು .

ಪ್ರಯೋಜನವೇನೂ ಭರ್ಜರಿ ಎನ್ನಿಸುವಂತಿವೆ ಇದರಿಂದ ಆಗುವ ಅನಾನುಕೂಲ ಏನಾದರು ಇದೆಯೆ?

ಗಮನಿಸಿ ಇಂತಹ ಬಾಂಡ್ ಅನ್ನು ಮೊದಲೇ ಹೇಳಿದಂತೆ ಭಾರತೀಯ ನಾಗರೀಕ ಅಥವಾ ಸಂಸ್ಥೆ ಅಥವಾ ಇನ್ಕಮ್ ಟ್ಯಾಕ್ಸ್ ಹೇಳಿಕೆ 'ಪರ್ಸನ್' ಅಡಿಯಲ್ಲಿ ಬರುವ ಯಾರಾದರೂ ಕೊಳ್ಳಬಹುದು. ಬ್ಯಾಂಕ್ ಇಂತಹ ಖರೀದಿಗಾರದಿಂದ ಬ್ಯಾಂಕ್ ಖಾತೆ ತೆಗೆಯಲು ಬೇಕಾಗುವ ಎಲ್ಲಾ ಡಾಕ್ಯುಮೆಂಟ್ ಗಳನ್ನ ಕೇಳುತ್ತದೆ. ಅಂದರೆ ವ್ಯಕ್ತಿಯ ಗುರುತಿನ ಚೀಟಿ, ವೋಟರ್ ಕಾರ್ಡ್ ಅಥವಾ ಪಾಸ್ ಪೋರ್ಟ್, ಪಾನ್ ಕಾರ್ಡ್ ಇತ್ಯಾದಿ. ಬಾಂಡ್ ಮೇಲೆ ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡುತ್ತಿದ್ದೇನೆ ಎನ್ನುವುದನ್ನ ನಮೂದಿಸಿರುವುದಿಲ್ಲ ಮತ್ತು ಯಾರು ದೇಣಿಗೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಇರುವುದಿಲ್ಲ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾರು ಬಾಂಡ್ ಕೊಂಡರು? ಎಷ್ಟಕ್ಕೆ ಕೊಂಡರು?ಯಾವ ಪಕ್ಷಕ್ಕೆ ದೇಣಿಗೆ ನೀಡಿದರು? ಮುಂತಾದ ಮಾಹಿತಿ ಇರುತ್ತದೆ. ಅಧಿಕಾರದಲ್ಲಿ ಇರುವ ಯಾವುದೇ ಪಕ್ಷಕ್ಕೆ ಇದರ ದುರುಪಯೋಗ ಮಾಡಿಕೊಳ್ಳುವುದು ದೊಡ್ಡ ವಿಷಯವೇನಲ್ಲ. ತನ್ನ ವಿರೋಧಿ ಪಕ್ಷಕ್ಕೆ ದೇಣಿಗೆ ನೀಡಿದ ವ್ಯಕ್ತಿ ಅಥವಾ ಸಂಸ್ಥೆಯ ಮಾಹಿತಿ ಪಡೆದು ಅವರಿಗೆ ತೊಂದರೆ ಕೊಡುವುದು ಸುಲಭವಾಗುತ್ತದೆ. ನಗದು ರೂಪದಲ್ಲಿ ನೀಡಿದಾಗ ಯಾರು ಯಾರಿಗೆ ಎಷ್ಟು ಕೊಟ್ಟರು ಎನ್ನುವುದರ ಮಾಹಿತಿ ಸಿಕ್ಕುವುದೇ ಇಲ್ಲ.

ಕೊನೆಮಾತು: ಒಂದು ನಾಣ್ಯಕ್ಕೆ ಎರಡು ಮುಖ ಇದ್ದೆ ಇರುತ್ತದೆ ಅಲ್ಲವೇ? ಹಾಗೆಯೆ ವಸ್ತು ಅಥವಾ ವಿಷಯ ಯಾವುದೇ ಇರಲಿ ಅದರಲ್ಲಿ ಒಂದು ಪ್ಲಸ್ ಒಂದು ಮೈನಸ್ ಇದ್ದೆ ಇರುತ್ತದೆ. ಇದೆ ಸರಿ ಎಂದು ಹೇಳಲು ಬಾರದು. ಪಕ್ಷ ಯಾವುದೇ ಇರಲಿ ದ್ವೇಷದ ರಾಜಕಾರಣ ಮಾಡದೆ ಮಾಹಿತಿಯ ದುರುಪಯೋಗ ಮಾಡಿಕೊಳ್ಳದೆ ಇದ್ದರೆ. ಎಲೆಕ್ಟ್ರೋಲ್ ಬಾಂಡ್ ವಿತರಣೆಗೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಅದು ಇನ್ನೊಂದು ರೀತಿಯ ಕೋಲಾಹಲ, ಅಶಾಂತಿಯ ಸೃಷ್ಟಿಸುತ್ತದೆ. ಹಾಗೆ ನೋಡಲು ಹೋದರೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷದ ಹೆಸರು ಮಾತ್ರ ಬೇರೆ ಅಲ್ಲಿರುವ ವ್ಯಕ್ತಿಗಳೆಲ್ಲ ಒಂದೇ! ಅವರಲ್ಲಿ ಒಗ್ಗಟ್ಟಿದೆ. ಎಲ್ಲರ ಗುದ್ದಿಗೆ ಸುಲಭವಾಗಿ ಸಿಗುವುದು ಜನ ಸಾಮಾನ್ಯನ ಬೆನ್ನು ಎನ್ನುವುದು ಮಾತ್ರ ಸತ್ಯ. 

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

SCROLL FOR NEXT