
ಸಂಗ್ರಹ ಚಿತ್ರ
ಈ ಹಣಕಾಸು ವರ್ಷ ಅಂದರೆ ೨೦೨೨-೨೩ ರಲ್ಲಿ ಭಾರತ ಸರಕಾರ ಮಾರುಕಟ್ಟೆಯಿಂದ ೧೬ ಸಾವಿರ ಕೋಟಿ ರೂಪಾಯಿ ಹಣವನ್ನ ಪಡೆದುಕೊಳ್ಳಲು ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದೆ. ಈ ರೀತಿಯ ಹಣ ಮಾರುಕಟ್ಟೆಯಿಂದ ಎತ್ತಲು ಸರಕಾರ 'ಗ್ರೀನ್ ಬಾಂಡ್ಸ್' ವಿತರಣೆ ಮಾಡಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಬೇಕಾದ ಫ್ರೇಮ್ ವರ್ಕ್ ಮುಗಿದಿದೆ , ಇದಕ್ಕೆ ಬೇಕಾದ ಅನುಮೋದನೆ ಕೂಡ ಅತಿ ಶೀಘ್ರದಲ್ಲಿ ಸಿಗಲಿದೆ ಎನ್ನುವ ಮಾತುಗಳನ್ನ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಆಡಿದ್ದಾರೆ.
ಈ ಹಣಕಾಸು ವರ್ಷ ಮುಕ್ತಾಯವಾಗುವುದಕ್ಕೆ ಇನ್ನೂ ಐದು ತಿಂಗಳು ಬಾಕಿಯಿದೆ ಅಷ್ಟರಲ್ಲಿ ಈ ಹಣವನ್ನ ಮಾರುಕಟ್ಟೆಯಿಂದ ಎತ್ತುವ ಯೋಜನೆ ಸರಕಾರ ಹಾಕಿಕೊಂಡಿದೆ. ಹೀಗಾಗಿ ಇದು ಜಾಗತಿಕ ಗುಣಮಟಕ್ಕೆ ಅನುಗುಣವಾಗಿ ಹೊರಬರಲಿದೆ. ಸಹಜವಾಗೇ ಇದು ದೀರ್ಘಾವಧಿ ಬಾಂಡ್ ಆಗಿರಲಿದೆ. ಹೆಸರೇ ಸೂಚಿಸುವಂತೆ ಈ ಹಣವನ್ನ ಪರಿಸರ ಸಂಬಂಧಿ ಯೋಜನೆಗಳಿಗೆ ಖರ್ಚು ಮಾಡುವ ಉದ್ದೇಶ ಇರುವುದರಿಂದ ಮತ್ತು ಇವುಗಳ ಫಲಿತಾಂಶ ದೀರ್ಘ ಕಾಲ ಬೇಡುವುದರಿಂದ , ಬಾಂಡ್ ಕೂಡ ದೀರ್ಘಾವಧಿಗೆ ಇರಲಿದೆ. ಇದನ್ನ ಸಾವೆರಿನ್ ಗ್ರೀನ್ ಬಾಂಡ್ಸ್ ಎಂದು ಹೆಸರಿಸಲಾಗಿದೆ. ಹಸಿರು ಮೂಲ ಸೌಕರ್ಯ ವೃದ್ಧಿಸುವುದು , ಭೂಮಿಯ ಮೇಲಿನ ಕಾರ್ಬನ್ ಅಂಶವನ್ನ ಕಡಿಮೆ ಮಾಡುವುದಕ್ಕಾಗಿ ಈ ಹಣವನ್ನ ಬಳಸಿಕೊಳ್ಳಲಾಗುವುದು.
ಇದನ್ನೂ ಓದಿ: ದಾರ್ಶನಿಕ ಅರ್ಥಶಾಸ್ತ್ರಜ್ಞ ಅಂಬೇಡ್ಕರ್ ಅವರ ಆರ್ಥಿಕ ನೀತಿಗಳು
ಏನಿದು ಗ್ರೀನ್ ಬಾಂಡ್ಸ್ ?
ಗ್ರೀನ್ ಬಾಂಡ್ ಎನ್ನುವುದು ಒಂದು ಡೆಟ್ ಇನ್ಸ್ಟ್ರುಮೆಂಟ್ ಅಥವಾ ಸಾಲಪತ್ರ . ಇದನ್ನ ಭಾರತ ಸರಕಾರ ಹೊರಡಿಸಲು ಸಿದ್ಧವಾಗಿದೆ. ಇದು ಭಾರತ ಸರಕಾರ ಜನರಿಂದ ಸಾಲ ಪಡೆದುಕೊಂಡು ಆ ಹಣವನ್ನ ಪರಿಸರ ಬದಲಾವಣೆ , ರಕ್ಷಣೆ ಜೊತೆಗೆ ಕ್ಲೈಮೇಟ್ ಚೇಂಜ್ ಜೊತೆಗಿನ ಗುದ್ದಾಟ , ಕಾರ್ಬನ್ ಕಡಿಮೆ ಮಾಡುವ ಕೆಲಸಗಳಿಗೆ ವಿನಿಯೋಗಿಸಲಿದೆ. ಹೀಗೆ ಜನರಿಂದ ಪಡೆದುಕೊಂಡ ಸಾಲಕ್ಕೆ ಪ್ರತಿಯಾಗಿ ಸರಕಾರ ಬರೆದುಕೊಡುವ ಮುಚ್ಚಳಿಕೆ ಪತ್ರಕ್ಕೆ ಮತ್ತು ಇದು ಪರಿಸರ ಸಂಬಂಧಿತ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಕಾರಣ ಇದಕ್ಕೆ ಗ್ರೀನ್ ಬಾಂಡ್ಸ್ ಎಂದಿದ್ದಾರೆ. ಇಲ್ಲಿ ೯ ರಿಂದ ೧೨ ಪ್ರತಿಶತ ಹೂಡಿಕೆಯ ಮೇಲೆ ಬಡ್ಡಿ ನೀಡುವ ಸಾಧ್ಯತೆಗಳು ಕೂಡ ಹೆಚ್ಚಾಗಿದೆ. ನಿಖರ ಬಡ್ಡಿ ದರವನ್ನ ಸರಕಾರ ಬಾಂಡ್ ವಿತರಣೆಗೆ ಮುನ್ನ ನಿರ್ಧಾರ ಮಾಡುತ್ತದೆ. ಇದರಲ್ಲಿ ಬಡ್ಡಿಯ ದರ ಅಥವಾ ಕೋಪನ್ ರೇಟ್ ಏನಿದೆ ಅದು ಸಾಲ ಪತ್ರದ ಪೂರ್ಣ ಕಾಲಾವಧಿಯ ವರೆಗೆ ನಿಗದಿಯಾಗಿರುತ್ತದೆ. ಅಂದರೆ ಮಾರುಕಟ್ಟೆಯಲ್ಲಿ ನಾಳೆ ಬಡ್ಡಿ ದರ ಕಡಿಮೆಯಾದರೂ , ಹೆಚ್ಚಾದರೂ ಇಲ್ಲಿ ಮಾತ್ರ ಯಾವುದೇ ಬದಲಾವಣೆ ಆಗುವುದಿಲ್ಲ. ಡೆಟ್ ಬಾಂಡ್ ಕಾಲಾವಧಿ ಪೂರ್ಣವಾಗುವವರೆಗೆ ನಿಗದಿತ ಬಡ್ಡಿ ಬಾಂಡ್ ಖರೀದಿದಾರರಿಗೆ ಸಿಗುತ್ತಿರುತ್ತದೆ.
ಗ್ರೀನ್ ಬಾಂಡ್ ಇತಿಹಾಸ
ಗ್ರೀನ್ ಬಾಂಡ್ ಅಥವಾ ಗ್ರೀನ್ ಬಾಂಡ್ಸ್ ಪ್ರಥಮವಾಗಿ ೨೦೦೭ ರಲ್ಲಿ ಯೂರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ವಿತರಣೆ ಮಾಡಿತ್ತು. ಮೇಲೆ ವಿವರಿಸುವ ಕಾರಣವನ್ನ ನೀಡಿ ಅದು ಈ ರೀತಿಯ ಬಾಂಡ್ ವಿತರಣೆಗೆ ಮುಂದಾಗಿತ್ತು. ೨೦೦೮ ರಲ್ಲಿ ವರ್ಲ್ಡ್ ಬ್ಯಾಂಕ್ ಕೂಡ ಈ ರೀತಿಯ ಬಾಂಡ್ ವಿತರಣೆ ಮಾಡಿತ್ತು. ಇದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಕಾರಣ ಇಂತಹ ಬಾಂಡ್ ವಿತರಣೆಗೆ ಒಂದು ಫ್ರೇಮ್ ವರ್ಕ್ ಮತ್ತು ಗ್ರೀನ್ ಬಾಂಡ್ ಪ್ರಿಸಿಪಲ್ಸ್ ಕೂಡ ಜಾರಿಗೆ ಬಂದಿತು. ಇಂಟರ್ನ್ಯಾಷನಲ್ ಕ್ಯಾಪಿಟಲ್ ಮಾರ್ಕೆಟ್ ಅಸೋಸಿಯೇಷನ್ ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪಾರದರ್ಶಕತೆ , ಬಹಿರಂಗವಾಗಿ ಸಮಗ್ರತೆಯನ್ನ ಕಾಪಾಡುವ ,ತನ್ಮೂಲಕ ಗ್ರೀನ್ ಬಾಂಡ್ ಮಾರುಕಟ್ಟೆಯಲ್ಲಿ ಹೆಚ್ಚಿನ ನಂಬಿಕೆ , ವಿಶ್ವಾಸ ಬೆಳಸುವ ಮೂಲಕ ಬಾಂಡ್ ಮಾರ್ಕೆಟ್ ವೃದ್ಧಿಗೂ ಕಾರಣವಾಗಿದೆ.
ಇದನ್ನೂ ಓದಿ: ರಿಷಿ ಸುನಾಕ್ ಮುಂದಿನ ಸವಾಲುಗಳೇನು? ಇಲ್ಲಿದೆ ಪಕ್ಷಿನೋಟ..
ಭಾರತದಲ್ಲಿ ಯಸ್ ಬ್ಯಾಂಕ್ ೨೦೧೫ ರಲ್ಲಿ ೫೦೦ ಕೋಟಿ ರೂಪಾಯಿ ಹಣವನ್ನ ಮಾರುಕಟ್ಟೆಯಿಂದ ಪಡೆದುಕೊಂಡಿತ್ತು . ಸೆಬಿ - ಸೆಕ್ಯುರಿಟೀಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ತೀರಾ ಇತ್ತೀಚಿಗೆ ಇದರ ಡೆಫಿನಿಷನ್ ನಲ್ಲಿ ಅಲ್ಪಸ್ವಲ್ಪ ಬದಲಾವಣೆ ತರುವುದರ ಮೂಲಕ ಲೀಗಲ್ ಖರ್ಚುಗಳು ಅಂದರೆ compliance ಕಾಸ್ಟ್ ಕಡಿಮೆ ಮಾಡುವಲ್ಲಿ ಸಫಲವಾಗಿದೆ. ಹೀಗಾಗಿ ಇದನ್ನ ವಿತರಣೆ ಮಾಡುವ ಸಂಸ್ಥೆಗೆ ಹೆಚ್ಚಿನ ಖರ್ಚು ಇರುವುದಿಲ್ಲ.
ಗ್ರೀನ್ ಬಾಂಡ್ ಕೂಡ ಇತರೆ ಬಾಂಡ್ ಗಳಂತೆ ಒಂದು ಸಾಲಪತ್ರವಾಗಿರುವ ಕಾರಣ ಇಲ್ಲಿನ ಹೂಡಿಕೆಯಿಂದ ಕೆಳಕಂಡ ಲಾಭಗಳಿವೆ :
೧) ಡೆಟ್ ಬಾಂಡ್ಗಳು ಸಾಮಾನ್ಯವಾಗಿ ಸುರಕ್ಷಿತ ಮತ್ತು ಬಡ್ಡಿಯ ಭದ್ರತೆಯನ್ನ ಒದಗಿಸುತ್ತದೆ.
೨) ಡೆಟ್ ಬಾಂಡ್ಗಳ ಮೇಲಿನ ಹೂಡಿಕೆ ಲೀಗಲ್ ಹೀಗಾಗಿ ಮೂಲಧನ ಕರಗಿ ಹೋಗುವ ಅಥವಾ ಮೂಲಧನಕ್ಕೆ ಮೋಸವಾಗುವ ಸಂಭಾವ್ಯತೆ ಇಲ್ಲ ಎನ್ನುವಷ್ಟು ಗೌಣ.ಅಲ್ಲದೆ ಗ್ರೀನ್ ಬಾಂಡ್ ವಿತರಿಸುವುದು ಸರಕಾರ ಅಥವಾ ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಹೀಗಾಗಿ ಇಲ್ಲಿ ಅಪಾಯ ಇಲ್ಲ , ಸುರಕ್ಷತೆ ಹೆಚ್ಚು.
೩) ಸಾಮಾನ್ಯವಾಗಿ ಬೇರೆ ರೀತಿಯ ಹೂಡಿಕೆಗಳಲ್ಲಿ ಸ್ಥಿರತೆ ಅಂದರೆ ಗಳಿಕೆಯಲ್ಲಿ ಸ್ಥಿರತೆಯನ್ನ ಬಯಸಲು ಸಾಧ್ಯವಿಲ್ಲ. ಹೀಗಾಗಿ ಪೋರ್ಟ್ಫೋಲಿಯೋ ವನ್ನ ಬ್ಯಾಲೆನ್ಸ್ ಮಾಡಲು ಕೂಡ ಇದೊಂದು ಒಳ್ಳೆಯ ಪರ್ಯಾಯ ಮಾರ್ಗ . ಅಂದರೆ ನೂರು ರೂಪಾಯಿಯಲ್ಲಿ ಮೂವತ್ತು ರೂಪಾಯಿ ಹಣವನ್ನ ಬಾಂಡ್ಗಳ ಮೇಲೆ ಹೂಡಿಕೆ ಮಾಡಿದರೆ ಅಷ್ಟರ ಮಟ್ಟಿಗೆ ಸ್ಥಿರತೆ ಸಿಕ್ಕಂತೆ , ಉಳಿದ ಹಣದಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಬಹುದು. ಹೀಗಾಗಿ ಇದು ರಿಸ್ಕ್ ಬ್ಯಾಲೆನ್ಸ್ ಮಾಡಲು ಕೂಡ ಉತ್ತಮ ಹೂಡಿಕೆಯಾಗಿದೆ.
ಇದನ್ನೂ ಓದಿ: ಜಾಗತಿಕ ಆರ್ಥಿಕ ಕುಸಿತಕ್ಕೆ ಮೊದಲ ಬಲಿ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್!
ನಷ್ಟ:
೧) ಹಣದುಬ್ಬರಕ್ಕೆ ಸಮವಾಗಿ ನಿಲ್ಲದ ಕಾರಣ ಇದರಲ್ಲಿನ ಹೂಡಿಕೆ ಮೇಲ್ನೋಟಕ್ಕೆ ಲಾಭದಾಯಕ ಎನ್ನಿಸಿದರೂ ಮಾರುಕಟ್ಟೆಯಲ್ಲಿನ ವೇಗದ ಬದಲಾವಣೆ ಮತ್ತು ಹಣದುಬ್ಬರದ ಲೆಕ್ಕಾಚಾರದಲ್ಲಿ ಇದು ಸೋಲುತ್ತದೆ .
೨) ಸಾಮನ್ಯವಾಗಿ ಇಲ್ಲಿನ ಹೂಡಿಕೆಯನ್ನ ಮೂರು ರಿಂದ ಐದು, ಹತ್ತು ಮತ್ತು ಕೆಲವೊಮ್ಮೆ ಇನ್ನಷ್ಟು ದೀರ್ಘಾವಧಿವರೆಗೆ ಮುಟ್ಟುವಂತಿರುವುದಿಲ್ಲ , ಹೀಗಾಗಿ ಹಣ ಒಂದೆಡೆ ಬ್ಲಾಕ್ ಆಗಿಬಿಡುತ್ತದೆ. ಇನ್ನೊಂದು ಇದಕ್ಕಿಂತ ಉತ್ತಮ ಅವಕಾಶ ಮಾರುಕಟ್ಟೆಯಲ್ಲಿ ಬಂದಾಗ ಅದರಲ್ಲಿ ಹೂಡಿಕೆ ಮಾಡಲಾಗದೆ ವಂಚಿತರಾಗುವ ಸಾಧ್ಯತೆ ಕೂಡ ಇರುತ್ತದೆ.
೩) ಇದರಲ್ಲಿ ಸ್ಥಿರತೆಯಿದೆ ಆದರೆ ಆದಾಯ ಕಡಿಮೆ ಎನ್ನುವುದು ಸರ್ವವೇದ್ಯ .
ಎಲ್ಲಾ ಹೂಡಿಕೆಗಳಲ್ಲಿ ಇರುವಂತೆ ಇಲ್ಲಿ ಕೂಡ ಲಾಭ ಮತ್ತು ನಷ್ಟ ಇದ್ದೆ ಇದೆ, ಆದರೆ ಇದರಲ್ಲಿ ಹೂಡಿಕೆ ಮಾಡುವುದು ಬೇಡ ಎನ್ನುವಂತಿಲ್ಲ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವ ಮುನ್ನ ಕೆಳಕಂಡ ಅಂಶಗಳನ್ನ ಗಮನಿಸಬೇಕಾಗುತ್ತದೆ .
೧) ರಿಸ್ಕ್ ಫ್ಯಾಕ್ಟರ್ ಅಥವಾ ಅಪಾಯದ ಮಿತಿ: ಬಾಂಡ್ ಗಳಲ್ಲಿ ಕೂಡ ಹೆಚ್ಚು ಅಪಾಯ , ಮಧ್ಯಮ ಮಟ್ಟದ ಅಪಾಯ ಮತ್ತು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವ ರೀತಿಯ ಬಾಂಡ್ಗಳಿವೆ. ಹೆಸರಿಗೆ ತಕ್ಕಂತೆ ಹೆಚ್ಚು ಅಪಾಯದ ಬಾಂಡ್ಗಳು ಹೆಚ್ಚು ಬಡ್ಡಿಯನ್ನ , ಆದಾಯವನ್ನ ತಂದು ಕೊಡುತ್ತವೆ. ಕಡಿಮೆ ಅಪಾಯದ ಬಾಂಡ್ಗಳು ಕಡಿಮೆ ಆದಾಯವನ್ನ ನೀಡುತ್ತವೆ. ಹೀಗಾಗಿ ಎಷ್ಟು ಆದಾಯ ಬೇಕು , ಎಷ್ಟು ಅಪಾಯ ತೆಗೆದುಕೊಳ್ಳುವ ಶಕ್ತಿಯಿದೆ ಎನ್ನುವುದರ ಆಧಾರದ ಮೇಲೆ ಯಾವ ರೀತಿಯ ಬಾಂಡ್ ಮೇಲೆ ಹೂಡಿಕೆ ಮಾಡಬೇಕು ಎನ್ನುವುದನ್ನ ನಿರ್ಧರಿಸಬೇಕು. ಪ್ರಸ್ತುತ ಗ್ರೀನ್ ಬಾಂಡ್ ನಲ್ಲಿ ಅಪಾಯ ಬಹಳ ಕಡಿಮೆ. ಆದರೆ ದೀರ್ಘಾವಧಿ ಬೇಡುತ್ತದೆ.
ಇದನ್ನೂ ಓದಿ: ಕವಲು ದಾರಿಯಲ್ಲಿ ಚೀನಾದ ಸಾಫ್ಟ್ ಟಾರ್ಗೆಟ್ ಮಲೇಶಿಯಾ!
೨) ಇನ್ವೆಸ್ಟ್ಮೆಂಟ್ ಮಾಡುವ ಮೂಲ ಉದ್ದೇಶದ ಆಧಾರ ಮೇಲೆ ಹೂಡಿಕೆ ಮಾಡಬೇಕು: ಅಂದರೆ ಸಾಮಾನ್ಯವಾಗಿ ಬಾಂಡ್ಗಳು ದೀರ್ಘಾವದಿಯನ್ನ ಬೇಡುತ್ತವೆ. ಹೀಗಾಗಿ ನಮ್ಮ ಹೂಡಿಕೆ ದೀರ್ಘಾವಧಿಗೆ ಸಂಬಂಧಿಸಿದ್ದೇ ಅಥವಾ ಇಲ್ಲವೇ ? ಎಷ್ಟು ಭದ್ರತೆ ಬೇಕು ಹೀಗೆ ನಮ್ಮ ಬೇಕು ಬೇಡಗಳ ಆಧಾರದ ಮೇಲೆ ಹೂಡಿಕೆ ಮಾಡಬೇಕು .
೩) ಬಾಂಡ್ ಅವಧಿ ಮತ್ತಿತರ ನಿಬಂಧನೆಗಳು: ಹಲವಾರು ಬಾಂಡ್ಗಳಲ್ಲಿ ನಿಗದಿತ ಸಮಯದ ವರೆಗೆ ಅದನ್ನ ಮುಟ್ಟವಂತೆ ಇರುವುದಿಲ್ಲ, ಇತ್ತೀಚಿಗೆ ಇವುಗಳಲ್ಲಿ ಕೂಡ ಹಲವು ರೀತಿಯ ಬಾಂಡ್ಗಳಿವೆ, ಮೊದಲ ಐದು ವರ್ಷ ಲಾಕ್ ಇನ್ ಪಿರಿಯಡ್ , ಅಂದರೆ ಅದನ್ನ ಮುಟ್ಟವಂತಿಲ್ಲ ಆನಂತರ ಬೇಕಾದರೆ ಐವತ್ತು ಪ್ರತಿಶತ ತೆಗೆದುಕೊಳ್ಳುವ ಅವಕಾಶವಿರುತ್ತದೆ, ಕೆಲವೊಮ್ಮೆ ಹಿರಿಯ ನಾಗರೀಕರಾಗಿದ್ದರೆ ಬೇರೆಯ ತರಹದ ನಿಬಂಧನೆಗಳು ಇರುತ್ತದೆ. ಹೀಗೆ ನಿಬಂಧನೆಗಳು ನಮ್ಮ ಹೂಡಿಕೆಗೆ ಒಗ್ಗುತ್ತದೆಯೇ ಎನ್ನುವುದನ್ನ ಕೂಡ ಗಣನೆಗೆ ತೆಗೆದುಕೊಳ್ಳಬೇಕು.
ಇದನ್ನೂ ಓದಿ: ಸಾಲ ಮತ್ತು ಬಡ್ಡಿ ಉಗಮಕ್ಕೆ ಮುಂಚೆ ಸಾಲ ಮತ್ತು ಬಡ್ಡಿ ಇರಲಿಲ್ಲವೇ?!
ಕೊನೆಮಾತು: ಸರಕಾರ ಹೊರಡಿಸುವ ಬಾಂಡ್ಗಳ ಮೇಲಿನ ಹೂಡಿಕೆ ಬಹಳ ಸುರಕ್ಷಿತ, ಹಾಗೆಯೇ ಬಹಳಷ್ಟು ಪ್ರಸಿದ್ಧ ಕಾರ್ಪೊರೇಟ್ ಸಂಸ್ಥೆಗಳು ಹೊರಡಿಸುವ ಬಾಂಡ್ಗಳು ಕೂಡ ಸುರಕ್ಷಿತ. ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಸಿಗುವ ಬಡ್ಡಿ ದರಕ್ಕಿಂತ ಒಂದಷ್ಟು ಹೆಚ್ಚಿನ ಆದಾಯವನ್ನ ಕೂಡ ಇವುಗಳು ನೀಡುತ್ತವೆ. ಹೀಗಾಗಿ ಸುರಕ್ಷತೆ, ಭದ್ರತೆ ಮತ್ತು ನಿಯಮಿತವಾಗಿ ಆದಾಯವನ್ನ ಬಯಸುವ ಹೂಡಿಕೆದಾರ ನೀವಾಗಿದ್ದರೆ ಖಂಡಿತ ಇಲ್ಲಿನ ಹೂಡಿಕೆ ನಿಮಗಾಗಿಯೇ ಇದೆ ಎಂದು ಹೇಳಬಹುದು. ನೀವು ಹೆಚ್ಚು ಹಣವನ್ನ ಬಯಸುವ, ವೇಗ ಬಯಸುವ, ರಿಸ್ಕ್ ತೆಗೆದುಕೊಳ್ಳುವ ಗುಣದ ಹೂಡಿಕೆದಾರರಾಗಿದ್ದರೆ ಮತ್ತು ಹಣವನ್ನ ದೀರ್ಘಾವಧಿಗೆ ಒಂದೆಡೆ ಕುಳಿತುಕೊಳ್ಳಲು ಬಿಡದೆ ಇರುವರಾಗಿದ್ದರೆ, ಈ ಹೂಡಿಕೆ ನಿಮಗಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com