ವಿಶ್ವ ಆರೋಗ್ಯ ದಿನ 2023: ಎಲ್ಲರಿಗಾಗಿ ಆರೋಗ್ಯ 
ಅಂಕಣಗಳು

ವಿಶ್ವ ಆರೋಗ್ಯ ದಿನ 2023: ಎಲ್ಲರಿಗಾಗಿ ಆರೋಗ್ಯ (ಕುಶಲವೇ ಕ್ಷೇಮವೇ)

1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲು 61 ದೇಶಗಳು ಈ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಸಹಿ ಹಾಕಿದವು.

ಪ್ರತಿ ವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು (ವರ್ಲ್ಡ್ ಹೆಲ್ತ್ ಡೇ) ಆಚರಿಸಲಾಗುತ್ತಿದೆ. ಈ ವರ್ಷದ ವಿಶ್ವ ಆರೋಗ್ಯ ದಿನದ ಧ್ಯೇಯವಾಕ್ಯ “ಎಲ್ಲರಿಗಾಗಿ ಆರೋಗ್ಯ”. ಪ್ರತಿಯೊಬ್ಬರೂ ಚೆನ್ನಾಗಿ ಬದುಕಲು ಆರೋಗ್ಯ ಬಹಳ ಮುಖ್ಯ ಮತ್ತು ಆರೋಗ್ಯವಾಗಿರಲು ನಮ್ಮ ಜೀವನಶೈಲಿ ಹೇಗಿರಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ವಿಶ್ವಾದ್ಯಂತ ವಿಶ್ವದೆಲ್ಲೆಡೆ ಹಮ್ಮಿಕೊಳ್ಳಲಾಗಿದೆ. 

ವಿಶ್ವ ಆರೋಗ್ಯ ಸಂಸ್ಥೆ
1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲು 61 ದೇಶಗಳು ಈ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಸಹಿ ಹಾಕಿದವು. ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನಾಗಿ 1949ರಲ್ಲಿ ಜುಲೈ 22ರಂದು ಆಚರಣೆ ಮಾಡಲಾಯಿತು. ನಂತರ 1950ರಿಂದ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7ರಂದು ಆಚರಣೆ ಮಾಡಲಾಗುತ್ತಿದೆ. ಈ ವರ್ಷಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾಗಿ 75 ವರ್ಷಗಳಾಗಿದೆ. ಆದ್ದರಿಂದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಚರಿಸಲಾಗುತ್ತಿರುವ ಈ ವಿಶ್ವ ಆರೋಗ್ಯ ದಿನ ವಿಶೇಷವಾಗಿದೆ. 

ಕಳೆದ 75 ವರ್ಷಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಸದಸ್ಯ ರಾಷ್ಟ್ರಗಳಲ್ಲಿ ಸಿಡುಬು ರೋಗ, ಪೋಲಿಯೋ, ಎಬೋಲಾ, ಕೋವಿಡ್ ಏಯ್ಡ್ಸ್ ಮತ್ತಿತರ ರೋಗಗಳ ನಿಯಂತ್ರಣ, ನಿರ್ಮೂಲನೆ, ಎಲ್ಲರಲ್ಲಿ ರೋಗನಿರೋಧಕತೆ ಹೆಚ್ಚಿಸುವುದು, ತಾಯಿ ಮತ್ತು ನವಜಾತ ಶಿಶು ಮತ್ತು ಹಿರಿಯರ ಆರೋಗ್ಯ ರಕ್ಷಣೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದೆ. ಒಟ್ಟಾರೆ ಮನುಕುಲದ ಆರೋಗ್ಯ ರಕ್ಷಣೆಗೆ ಈ ಸಂಸ್ಥೆಯು ಕಂಕಣಬದ್ಧವಾಗಿದೆ. 

ಆರೋಗ್ಯ ಎಂದರೇನು?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯ ಎಂದರೆ ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸುಸ್ಥಿರವಾಗಿರುವ ಸ್ಥಿತಿ. ಯಾವುದೇ ರೋಗಗಳು ಇಲ್ಲ ಎಂದ ಮಾತ್ರಕ್ಕೆ ಅವನು ಆರೋಗ್ಯವಾಗಿದ್ದಾನೆ ಎಂದು ಅರ್ಥವಲ್ಲ. ಜಪಾನ್ 1990ರಲ್ಲಿ ಒಬ್ಬ ವ್ಯಕ್ತಿಯು ಆಧ್ಯಾತ್ಮಿಕವಾಗಿಯೂ ಸುಸ್ಥಿರನಾಗಿದ್ದರೆ ಆರೋಗ್ಯವಾಗಿರುತ್ತಾನೆ. ಆದ್ದರಿಂದ ಆಧ್ಯಾತ್ಮಿಕತೆಯನ್ನು ಆರೋಗ್ಯದ ವ್ಯಾಖ್ಯೆಗೆ ಸೇರಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆಯನ್ನು ಒತ್ತಾಯಿಸಿತು. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೂ ಆರೋಗ್ಯದ ವಿಷಯ ಬಂದಾಗ ಮಾನವ ಈ ನಾಲ್ಕೂ ಆಯಾಮಗಳಲ್ಲಿ ಸುಸ್ಥಿರವಾಗಿದ್ದಾನೆಯೇ ಎಂಬುದನ್ನು ಇಂದು ಗಮನಕ್ಕೆ ತೆಗೆದುಕೊಳ್ಳಲಾಗಿದೆ. 

ಇಂದು ಬದಲಾಗುತ್ತಿರುವ ಸಮಾಜದಲ್ಲಿ ಹೆಚ್ಚಾಗುತ್ತಿರುವ ರೋಗಗಳು ಅದರಲ್ಲಿಯೂ ದೈಹಿಕವಾಗಿ ಡಯಾಬಿಟಿಸ್, ಬಿಪಿ, ಹೃದ್ರೋಗಗಳು, ಮೆದುಳಿನ ರೋಗಗಳು, ಕ್ಯಾನ್ಸರ್, ಅನಾರೋಗ್ಯಕರ ಜೀವನಶೈಲಿ, ಅಲರ್ಜಿ, ಅಪಘಾತಗಳು, ಸ್ಥೂಲಕಾಯ, ಅತಿ ಆಹಾರ ಸೇವನೆ, ದೈಹಿಕ ಚಟುವಟಿಕೆಗಳು-ವ್ಯಾಯಾಮಗಳ ಕೊರತೆ, ಐಷಾರಾಮದ ದುರಭ್ಯಾಸಗಳು, ಅಪೌಷ್ಟಿಕತೆ, ರೋಗನಿರೋಧಕತೆ ಕಡಿಮೆಯಾಗಿರುವುದು, ಪರಿಸರದಲ್ಲಿ ಮತ್ತು ಮನೆಯಲ್ಲಿ ಸ್ವಚ್ಛತೆಯ ಕೊರತೆ, ಶೌಚಾಲಯಗಳು ಇಲ್ಲದಿರುವುದು, ಒತ್ತಡ, ಆತಂಕ, ಯೋಚನೆ, ಕಿರಿಕಿರಿ ಮತ್ತು ಖಿನ್ನತೆಗಳಂತಹ ಮಾನಸಿಕ ಸಮಸ್ಯೆಗಳಿಂದಾಗಿ ಅರೋಗ್ಯ ಹಲವರಿಗೆ ಮರೀಚಿಕೆಯಾಗಿಯೇ ಉಳಿದಿದೆ ಎನ್ನುವುದು ವಿಪರ್ಯಾಸ. ಅದರಲ್ಲಿಯೂ ಕೊರೊನೋತ್ತರ ಕಾಲದಲ್ಲಿ ಆರೋಗ್ಯ ಅತ್ಯಂತ ಕಾಳಜಿಯ ವಿಷಯವಾಗಿದೆ. ಇಂದು ವಿಶ್ವದ ಅರ್ಧದಷ್ಟು ಜನಸಂಖ್ಯೆಯು ಅವರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಪಡೆಯುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ. ಆದ್ದರಿಂದ ಮಕ್ಕಳ, ಯುವಜನರ, ವಯಸ್ಕರ, ಗರ್ಭಿಣಿಯರ ಮತ್ತು ಹಿರಿಯರ ಆರೋಗ್ಯದ ಮೇಲೆ ಎಲ್ಲರೂ ಗಮನ ಹರಿಸುವುದು ಬಹುಮುಖ್ಯವಾಗಿದೆ. 

ಪರಿಸರದ ಹಾಗೂ ವೈಯಕ್ತಿಕ ಶುಚಿತ್ವ ಪಾಲನೆ, ಪೌಷ್ಟಿಕ ಆಹಾರ, ಸದೃಢವಾಗಿರಲು ದಿನನಿತ್ಯ ವಾಕಿಂಗ್, ಜಾಗಿಂಗ್ ಅಥವಾ ವ್ಯಾಯಾಮಗಳನ್ನು ಮಾಡುವುದು ಮತ್ತು ಸಾಕಷ್ಟು ನಿದ್ರೆ ಆರೋಗ್ಯಕರ ಜೀವನಕ್ಕೆ ಸುಭದ್ರ ಅಡಿಪಾಯವಾಗಿವೆ. ಪ್ರತಿದಿನ ತಾಜಾ ಹಸಿರು, ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು, ನಾಲ್ಕು ಲೀಟರ್ ನೀರು ಕುಡಿಯುವುದು, ಅತಿಸಿಹಿ, ಖಾರ, ಉಪ್ಪು, ಮಸಾಲೆಯುಕ್ತ, ಕರಿದ, ಹುರಿದ ಪದಾರ್ಥಗಳನ್ನು ಸೇವಿಸದಿರುವುದು ಉತ್ತಮ. 

ಅತಿಯಾದ ಒತ್ತಡವು ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಮಾನಸಿಕ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿದ ನಂತರ ಇದು ನಿಮ್ಮ ದೈಹಿಕ ಆರೋಗ್ಯಕ್ಕೂ ಗಂಭೀರ ನಷ್ಟವನ್ನುಂಟುಮಾಡುತ್ತದೆ. ಆತಂಕವನ್ನು ಹೇಗೆ ಶಾಂತಗೊಳಿಸಬೇಕು ಮತ್ತು ಖಿನ್ನತೆಗೆ ಒಳಗಾದಾಗ ಮನಸ್ಥಿತಿಯನ್ನು ಹೇಗೆ ಸುಧಾರಿಸಿಕೊಳ್ಳಬೇಕೆಂಬುದನ್ನು ಕಲಿಯಬೇಕು. ಪ್ರತಿದಿನ ರಾತ್ರಿ ಸರಿಯಾದ ಸಮಯಕ್ಕೆ ಮಲಗಿ ಬೆಳಗ್ಗೆ ಬೇಗ ಏಳುವುದು ಬಹಳ ಮುಖ್ಯ. ನಿದ್ದೆ ಸರಿಯಾಗಿ ಮಾಡಿದರೆ ನಮ್ಮ ಜೀವನ ಚೆನ್ನಾಗಿರುತ್ತದೆ. 

ಒಟ್ಟಾರೆ ಹೇಳುವುದಾದರೆ ಜೀವನದಲ್ಲಿ ಆರೋಗ್ಯ ಇಲ್ಲದೇ ಹೋದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಆರೋಗ್ಯವೇ ನಿಜವಾದ ಭಾಗ್ಯ. ಆಸ್ತಿ, ಅಂತಸ್ತು ಮತ್ತು ಸಂಪತ್ತಿಗಿಂತ ಆರೋಗ್ಯ ತುಂಬ ಬೆಲೆಬಾಳುವಂತದ್ದು ಎಂದು ಎಲ್ಲರೂ ಅರ್ಥಮಾಡಿಕೊಂಡು ಆರೋಗ್ಯವಂತರಾಗಿ ಬದುಕೋಣ. ಏನಂತೀರಿ?

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್, ಫ್ಲೈಓವರ್'ಗಳು ಬಂದ್

ಮೇ ತಿಂಗಳ ಭಾರತ-ಪಾಕಿಸ್ತಾನ ಸಂಘರ್ಷ ವೇಳೆ ಮಧ್ಯಸ್ಥಿಕೆ ವಹಿಸಿದ್ದು ನಾವೇ: ಚೀನಾ

ಭಾರತೀಯ ರೈಲ್ವೆ ಇತಿಹಾಸದಲ್ಲಿ ಮಹತ್ತರ ಸಾಧನೆ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ; ವಿಡಿಯೋ ಹಂಚಿಕೊಂಡ ಅಶ್ವಿನಿ ವೈಷ್ಣವ್

New Year ಗೆ ಆನ್ ಲೈನ್ ಫುಡ್ ಆರ್ಡರ್ ಗೆ ಸಮಸ್ಯೆ: ಒಕ್ಕೂಟಗಳಿಂದ ಇಂದು ಮೆಗಾ ಪ್ರತಿಭಟನೆ, 1.5 ಲಕ್ಷ ಕಾರ್ಮಿಕರು ಭಾಗಿ

ಮಠಾಧೀಶರ ತೀವ್ರ ಆಕ್ಷೇಪ: ಮಥುರಾದಲ್ಲಿ ಆಯೋಜಿಸಿದ್ದ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು!

SCROLL FOR NEXT